ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವನ ಓದಿಸಿಕೊಳ್ಳುವ ರೀತಿ

ಕೆ.ಜನಾರ್ದನ ತುಂಗ
ಇತ್ತೀಚಿನ ಬರಹಗಳು: ಕೆ.ಜನಾರ್ದನ ತುಂಗ (ಎಲ್ಲವನ್ನು ಓದಿ)

ನನಗೆ ಕವನ ಬರೆಯುವುದು ಗೊತ್ತಿಲ್ಲ. ಆದರೆ ನನಗೆ ಯಾವುದು ಇಷ್ಟವಾಗುತ್ತದೆ, ಏಕೆ ಇಷ್ಟವಾಗುತ್ತದೆ ಎಂದು ಹೇಳಬಲ್ಲೆ.

ನಮ್ಮಲ್ಲಿ ಅನೇಕರು ತಮ್ಮ ನವಿರು ಭಾವನೆಗಳನ್ನು ನೇರವಾಗಿ ವಾಕ್ಯಗಳಾಗಿ ಬರೆದು ನಂತರ ತುಂಡರಿಸಿ ಜೋಡಿಸಿದರೆ ಅದು ಕವನ ಎಂದು ಭಾವಿಸುತ್ತಾರೆ. ಕಾವ್ಯ ರಚನೆ ಎಂಬುದು ಒಂದು ಧ್ಯಾನ. ಧ್ಯಾನದಲ್ಲಿ ಒಂದು ಕ್ಷಣ ಹೊಳೆದು ಮಿಂಚಿ ಮರೆಯಾದ ಆಧ್ಯಾತ್ಮ ಕಾವ್ಯದ ವಸ್ತು. ಇಂತಹ ಕವನ ಓದುಗನಲ್ಲಿಯೂ ಅಂತಹದೇ ಧ್ಯಾನವನ್ನು ಉಂಟುಮಾಡಿ ಅರ್ಥವನ್ನು ಹೊಳೆಯಿಸಿದರೆ ಆಗ ಅದು ಓದುಗನದೂ ಆಗಿ ಉಳಿಯುತ್ತದೆ. ಓದುಗ ತನ್ನದಾಗಿಸಿಕೊಳ್ಳದ ಕಾವ್ಯ ಉಳಿಯುವುದಿಲ್ಲ.

ಉದಾಹರಣೆಗೆ ಚಿಂತಾಮಣಿ ಕೊಡ್ಲೆಕೆರೆಯವರ ಈ ಕವನ ನೋಡಿ:

ಅಲ್ಲಿ ಯಾರೂ ಇಲ್ಲ…

ಭಟ್ಟರ ಅಂಗಡಿ ಈಗ ಇಲ್ಲವೆ?
ಕಟ್ಟಡ ಪಾಳು ಬಿದ್ದಿದೆ
ರಾಷ್ಟ್ರರಾಜಕೀಯದ ಮಾತು
ಈ ಕಟ್ಟೆಯ ಮೇಲೇ ನಡೆಯುತ್ತಿತ್ತು
ಅವರ ಸೈಕಲ್ ಗಿತ್ತು
ಚಕ್ರಾಕಾರದ ಹ್ಯಾಂಡಲ್
ಅದೇ ಇದು.

“ಭಟ್ಟರು ಹೊರಗೆ ಹೋಗಿರುವರೆ?”
ಕೇಳುವನು ಹುಡುಗ
ದಿಗ್ಭ್ರಮೆಗೊಂಡು

“ಇಲ್ಲ ಮಗೂ ಇಲ್ಲ
ಭಟ್ಟರೀಗ ಇಲ್ಲ
ಸೈಕಲ್ ಇಲ್ಲೇ ಇಟ್ಟರು
ಅವರು ಹೋಗಿಬಿಟ್ಟರು”

ಹುಡುಗ ನೋಡುವನು ಸುತ್ತಲೂ-
ಗಾಬರಿಯಿಂದ

ಅಲ್ಲಿ ಯಾರೂ ಇಲ್ಲ!

ಕೇಳುವನು
“ಹೇಳಿದ್ಯಾರು?”

ನಕ್ಕಂತೆ ಕೇಳುವುದು ಪ್ರತ್ಯುತ್ತರ:
“ಮಗೂ, ನೀನು ಕೇಳಿದ್ಯಾರಿಗೆ?”

  • ಚಿಂತಾಮಣಿ ಕೊಡ್ಲೆಕೆರೆ

ಶಬ್ದಾಡಂಬರಗಳಿಲ್ಲದ ಅತ್ಯಂತ ಸರಳವೆನ್ನಿಸುವ ಕವನ.

ಊರು ಬಿಟ್ಟವನೊಬ್ಬ ಹಲವು ವರ್ಷಗಳ ನಂತರ ಮರಳಿರುವ ಸೂಚನೆ ಮೊದಲ ಏಳು ಸಾಲುಗಳಲ್ಲಿ ದೊರೆಯುತ್ತದೆ. ಭಟ್ಟರ ಅಂಗಡಿ ಭೂತಕಾಲಕ್ಕೆ ಸೇರಿಹೋದರೂ ಅದರ ನೆನಪು ಚಕ್ರಾಕಾರವಾಗಿ ಗಿರಕಿ ಹೊಡೆಯುತ್ತಲೇ ಇದೆ. ಪ್ರಾರಂಭಕ್ಕೇ ಮರಳಿ ಬರುವ ಅರ್ಥವಿರದ ಕೆಲಸಕ್ಕೆ ಬಾರದ ಚರ್ಚೆಗಳು ನಡೆಯುತ್ತಿದ್ದ ತಾಣವದು ಎಂದು ನೆನಪಿಗೆ ಬರುತ್ತದೆ. ಕವಿಯು ಊರು ಬಿಡಲು ಅದೂ ಒಂದು ಕಾರಣವಿರಬಹುದೆ?

“ಕೇಳುವನು ಹುಡುಗ” – ಕವಿಯೊಳಗಿನ ಹುಡುಗ ಕೇಳುವ ಪ್ರಶ್ನೆಯಿದು. ತಾನು ನೋಡುತ್ತಿರುವ ಪರಿವರ್ತನೆಯ ವೇಗಕ್ಕೆ ಆತ ದಿಗ್ಭ್ರಮೆಗೊಂಡಿರುತ್ತಾನೆ. ಆದರೆ ಭಟ್ಟರು ಸೈಕಲ್ ಇಲ್ಲೇ ಬಿಟ್ಟು ಹೋಗಿಬಿಟ್ಟರು. ಐಹಿಕದ ಜೀವನದ ಪರಿಕರಗಳನ್ನೆಲ್ಲ ಹಿಂದೆಯೇ ಬಿಟ್ಟು ಹೋಗಿದ್ದಾರೆ. ಕವಿಯ ನೆನಪಿನಲ್ಲಿ ಉಳಿದುಕೊಂಡಿದ್ದಾರೆ.

ಹುಡುಗ ಸುತ್ತಲೂ ನೋಡುವನು ಗಾಬರಿಯಿಂದ – ಕವಿಯೊಳಗಣ ಹುಡುಗ ಗಾಬರಿಯಾದದ್ದು ಶಬ್ದಗಳಾಗಿ ಮೂಡಿವೆ. ಆದರೆ ಪ್ರೌಢನಾದ ಕವಿ, ಅಲ್ಲಿ ಯಾರೂ ಇಲ್ಲ! ಎಂದು ಅಚ್ಚರಿ ಪಡುತ್ತಾನೆ. ನಿಜವಾದ ಜ್ಞಾನವು ಭಯ ಹುಟ್ಟಿಸುವುದಿಲ್ಲ, ಅಚ್ಚರಿಯನ್ನು ಉಂಟುಮಾಡುತ್ತದೆ.

ಕವಿಯೊಳಗಣ ಹುಡುಗ ಹೇಳಿದ್ಯಾರು ಎಂದು ಮುಗ್ಧತೆಯಿಂದ ಕೇಳಿದರೆ ಕವಿಯೊಳಗಣ ಪ್ರೌಢ ನೀನು ಕೇಳಿದ್ಯಾರಿಗೆ? ಎಂದುಕೊಳ್ಳುತ್ತ ಅಂತರಂಗವನ್ನೇ ಶೋಧಿಸತೊಡಗುತ್ತಾನೆ. ಎಲ್ಲವೂ ಕವಿಯ ಮನಸ್ಸಿನ ವ್ಯಾಪಾರಗಳೇ!

ಒಂದು ಸರಳ ಘಟನೆಯನ್ನು ಕೆಲವೇ ಕೆಲವು ಸಾಲುಗಳಲ್ಲಿ ವಿವರಿಸಿ ಮಹತ್ ಸಂದೇಶವನ್ನು ರವಾನಿಸುವ ಕವಿಯ ಧ್ಯಾನದ ಫಲ ಓದುಗನಿಗೂ ದೊರೆಯುತ್ತದೆ.

  • ಕೆ. ಜನಾರ್ದನ ತುಂಗ.