- ಮೈಖೇಲ್ ಜಾಕ್ಸನ್ ಎಂಬ ಲೋಕ ಕಂಡ ಮಾಂತ್ರಿಕ - ಡಿಸಂಬರ್ 21, 2021
- ಪ್ರೀತಿ ಹಂಚುತ ಸಾಗು - ನವೆಂಬರ್ 24, 2021
- ನನ್ನ ಕವಿತೆಗಳಿಗೊಂದಷ್ಟು ಜಾಗ ನೀಡಿ - ನವೆಂಬರ್ 3, 2021
ರವಿ ಕಾಣದನ್ನು ಕವಿ ಕಾಣುತ್ತಾನೆ. ತಾನು ಕಂಡಿದ್ದನ್ನು ಲೋಕದ ಕಣ್ಣಿಗೂ ಕಾಣಿಸುತ್ತಾನೆ. ಸತ್ಯವಲ್ಲದ ಸತ್ಯವನ್ನು ಸಹ ಎತ್ತಿ ಹಿಡಿಯುತ್ತಾನೆ. ಸಾವನ್ನು ಸಹ ಸುಂದರವಾಗಿ ವರ್ಣಿಸುತ್ತಾನೆ. ಸಮಷ್ಠಿಯೇ ಶೂನ್ಯದಲ್ಲಿ ಅಡಗಿದೆ ಎಂಬುದನ್ನು ಗ್ರಹಿಸುತ್ತಾನೆ. ಒಡಲಾಳದ ನೋವನು ಸಹ ನಲಿವಿನ ಗೀತೆಯಂತೆ ರಚಿಸುತ್ತಾನೆ. ಕವಿ, ತಾನು ಕಂಡದ್ದನ್ನು ಇತರರಿಗೂ ಕಾಣಿಸುವಂತೆ…. ಗ್ರಹಿಸಿದ್ದನ್ನೇ ಪಡವಾಗಿಸುತ್ತಾನೆ. ಅನುಭವಿಸಿದ್ದನ್ನೇ ಅನುವಾದಿಸುತ್ತಾನೆ. ಪ್ರೀತಿಸಿದ್ದನ್ನೇ ಪೋಷಿಸುತ್ತಾನೆ. ಸಿದ್ಧಿಸಿದನ್ನೇ ಹಂಚುತ್ತಾನೆ. ಸುಖಿಸಿದ್ದನ್ನೇ ಸ್ಖಲಿಸುತ್ತಾನೆ. ಒಳ್ಳೆಯದನ್ನೇ ಬೆಳೆಸುತ್ತಾನೆ. ಅನಿಸಿದ್ದನ್ನೇ ವ್ಯಕ್ತಪಡಿಸುತ್ತಾನೆ. ಗುರುತಿಸಿದನ್ನೇ ಪರಿಚಯಿಸುತ್ತಾನೆ. ಸರಿ ಅನಿಸಿದ್ದನ್ನೇ ಪ್ರಮಾಣಿಕರಿಸುತ್ತಾನೆ. ಬದುಕಿಗೆ ಹತ್ತಿರವಾದುದನ್ನೇ ದಾಖಲಿಸುತ್ತಾನೆ. ಮೋಹಿಸಿದ್ದನ್ನೇ ಪರವಶಗೊಳಿಸುತ್ತಾನೆ. ದ್ವೇಷವನ್ನೇ ದೂಷಿಸುತ್ತಾನೆ. ಮರೆತದನ್ನು ನೆನಪಿಸುತ್ತಾನೆ. ಗತಿಸಿದ್ದನ್ನು ಭವಿಷ್ಯತ್ತಿಕರಿಸುತ್ತಾನೆ. ಸಂಪಾಡಿಸಿದನ್ನೇ ವ್ಯಯಿಸುತ್ತಾನೆ. ಪ್ರಚೋದಿಸಿದ್ದನ್ನೇ ವಿವರಿಸುತ್ತಾನೆ. ಮನಸಿದ್ದನ್ನೇ ಮಾಡುತ್ತಾನೆ. ಕಣಸಿದ್ದನ್ನೇ ಕವಿತೆಯಾಗಿಸುತ್ತಾನೆ. ನಿಂತಲ್ಲೆ ಚಲಿಸುತ್ತಾನೆ. ಅನುಗ್ರಹಿಸಿದ್ದನ್ನೇ ಆರಾಧಿಸುತ್ತಾನೆ. ಮುಟ್ಟಿದರೆ ಸುಡುತ್ತಾನೆ. ಮೆಟ್ಟಿದರೆ ಎದ್ದು ನಿಲ್ಲುತ್ತಾನೆ. —- ಮಿತಿಮೀರೂವುದೇ ಕವಿಯ ಗುಣ. ಪರಿಮಿತಿಗಲಿಲ್ಲದ ಅಪರಿಮಿತಿಯ ಸ್ವತಂತ್ರ ಬದುಕು ಕವಿಯದು.
ಯಾವ ಬರಹಗಾರನೆ ಇರಲಿ, ತಾನು ಏನನ್ನೂ ತೀವ್ರವಾಗಿ ಅನುಭವಿಸದೆ, ತಲ್ಲಣಗಳಿಗೆ ಒಳಗಾಗದೆ ಒಂದು ವಾಕ್ಯವನ್ನು ಸಹ ಪ್ರಾಮಾಣಿಕವಾಗಿ ಬರೆಯಲಾರ; ತೀವ್ರ ತುಡಿತಕ್ಕೊಳಗಾಗದೆ ಏನನ್ನೂ ಕಂಡುಕೊಳ್ಳಲಾರ!!
ಹಾಗಾಗಿಯೇ ಸಾಹಿತ್ಯ ಲೋಕದಲ್ಲಿಯೇ ಕವಿಗೆ ಉತ್ಕೃಷ್ಟ ಸ್ಥಾನವಿದೆ. “ಕವಿಯಿಂದ ಕವಿತೆ ಹುಟ್ಟುವುದಿಲ್ಲ, ಬದಲಿಗೆ ತಾನು ರಚಿಸುವ ಕಾವ್ಯದಿಂದ ಕವಿ ಜನ್ಮಿಸುತ್ತಾನೆ”
ಹಾಗಾದರೆ, ಕವಿತೆ ಎಂದರೇನು?
ಕವಿತೆಯನ್ನು ಹೇಗೆ ಬರೆಯಬೇಕು ಅಥವಾ ಹೇಗೆ ಬರೆಯಬಾರದು? ಕಾವ್ಯ ಹೀಗೆ ರಚನೆಯಾಗಬೇಕು ಅಥವಾ ಹೇಗೆ ಬರೆಯಲ್ಪಡಬೇಕು? ಎಂಬುದರ ಕುರಿತಾಗಿ ಯಾವ ಅಡೆತಡೆಗಳು ಇಲ್ಲ. ಯಾರು ಹೇಳಲೂ ಇಲ್ಲ(ಹೀಗೆ ಬರೆದರೆ ಚಂದ ಅಂದಿರಬಹುದಷ್ಟೇ). ಅದು ಕಾವ್ಯ ಭಾವಕ್ಕೆ ಬಿಟ್ಟದ್ದು! ಹಾಗಾಗಿ ಕವಿತೆ ಸರ್ವ ಸ್ವಾತಂತ ಹಾಗೂ ಮುಕ್ತ.
ಕಾವ್ಯ ಎಂಬುದು, ಒಟ್ಟು ಸಾಹಿತ್ಯ ಪ್ರಾಕಾರಗಳಲ್ಲೇ ಮಹೋನ್ನತವಾದುದಾಗಿದೆ. ಹಲವಾರು ಪುಟಗಳ ಮುಖಾಂತರ ಒಂದು ಕಾದಂಬರಿಯಲ್ಲಿ ಹೇಳಲಾಗದನ್ನು ಸಹ ಒಬ್ಬ ಅನುಭವಿ/ಆನುಭಾವಿ ಕವಿ ಕೆಲವೆ ಪದಗಳಲ್ಲಿ ಕವಿತೆಯ ಮೂಲಕ ಸಶಕ್ತವಾಗಿ, ಅರ್ಥಪೂರ್ಣವಾಗಿ ಹೇಳಬಲ್ಲ!! ಅದು ಒಬ್ಬ ಕವಿಗೆ ಹಾಗೂ ಅವನ ಕಲಂಗಿರುವ ತಾಕತ್ತು ಎಂದರೆ ಬಹುಶಃ ಅತಿಶಯೋಕ್ತಿ ಆಗಲಾರದು.
ಇಂದಿನ ದಿನಗಳಲ್ಲಿ ಕವಿತೆ ಓದುವವರ ಸಂಖ್ಯೆಗಿಂತಲು, ಬರೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಒಂದು ರೀತಿಯಲ್ಲಿ ಆರೋಗ್ಯಕಾರಿಯಲ್ಲದ ಬೆಳವಣಿಗೆ ಎನ್ನಬಹುದು. ಹಾಗಾದರೆ ಇದಕ್ಕೆ ಪರಿಹಾರೂಪಾಯಗಳೇನು?
ಪ್ರಾಯಶಃ ನಾವೆಲ್ಲಾ ಸತ್ವಯುತವಾದ, ಸಶಕ್ತವಾದ ಕಾವ್ಯವನ್ನು ಕಟ್ಟುವಲ್ಲಿ ಸೋಲುತ್ತಿದ್ದೇವೆ ಅನಿಸುತ್ತಿದೆ. ಕಾವ್ಯವೆಂದರೆ ಕೇವಲ ಪ್ರೀತಿ, ವಿರಹ, ಪ್ರಣಾಯವಷ್ಟೆ ಅಲ್ಲವಲ್ಲ; ನಾವು ರಚಿಸುವ ಕಾವ್ಯ ನಮ್ಮ ಅಂತರಂಗವನ್ನು ಪರಿಚಯಿಸುವಂತಿರಬೇಕು. ಇತರರ ಅಂಥಕರಣವನ್ನು ಬೆಳಗುವಂತಿರಬೇಕು. ಸಮಾಜದ ಓರೆ-ಕೋರೆಗಳನ್ನು ಜಗದರಿವಿನ ಕಣ್ಣಿಗೆ ಕಾಣಿಸಿ ತಿದ್ದುವಂತಿರಬೇಕು. ಪ್ರಕೃತಿಯ ನಿಗೂಢತೆಯನ್ನೂ ಪ್ರದರ್ಶಿಸುವಂತಿರಬೇಕು. ಕೆಂಡ ಮುಚ್ಚಿದ ಸತ್ಯವನ್ನು ಅನಾವರಣಗೊಳಿಸುವಂತಿರಬೇಕು, ಸರಿಯನ್ನು ಸರಿ ಎಂದು, ತಪ್ಪನ್ನು ತಪ್ಪೆಂದು ಬೊಬ್ಬಿಡುವ ಧ್ವನಿಯಾಗಬೇಕು. ಒಳಿತು ಕೆಡುಕುಗಳ ನಡುವಿನ ವ್ಯಾತ್ಯಾಸಗಳನ್ನು ಗುರುತಿಸುವಂತಿರಬೇಕು. ಕಾವ್ಯಕೃಷಿಯಲ್ಲಿ ತೊಡಗಿಸಿಕೊಂಡಂತೆಲ್ಲಾ , ತನ್ನನ್ನು ತಾನು ಕಂಡುಕೊಳ್ಳುತ್ತಿರಬೇಕು. ಇತ್ಯಾದಿ…
” ಮಗುವ ಮುಷ್ಠಿಯೊಳಗಿನ ತಾಯ ಸೆರಗಿನ ನೂಲು ಕವಿತೆ “ ಅನ್ನುತ್ತಾರೆ ನಮ್ಮ ಬೇಂದ್ರೆ ಮಾಸ್ತರು. ಹಾಗೆ….
” ಚಿಟ್ಟೆ ರೆಕ್ಕೆಯ ಧೂಳು ಅಂಟಿದ ಹಾಗೆ ಕೈಗೆ ಕವಿತೆ “ ಅನ್ನುತ್ತಾರೆ ಕೆ ವಿ ತಿರುಮಲೇಶ ರು.
ಹಾಗಾದರೆ, ಇಂದಿನ ಕವಿಗಳಿಗೆ *ಕವಿತೆ ಎಂದರೆ ಏನು? ಎಂಬುದನ್ನು ಅಸ್ಮಿತೆಗಳನ್ನು ದಾಟಿ, ನವ ಕಾಣ್ಕೆ, ಹೊಸ ಹೊಳಹುಗಳನ್ನು ಸೃಷ್ಟಿಸಲು…. ವಿಭಿನ್ನ ವಿಚಾರಧಾರೆ, ಗಹನವಾದ ಗ್ರಹಿಕೆ, ಅತೀತವಾದ ರಸಾನುಭವ, ಅನನ್ಯವಾದ ಭಾವಭಿವ್ಯಕ್ತಿಯ ಮೂಲಕ ” ಕವಿತೆ ಎಂದರೆ ಏನು? “ ಎಂಬುದನ್ನು , ಕವಿತೆಯನ್ನು ಕಟ್ಟುವ ಮುಖಾಂತರವೆ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ.
ಹೆಚ್ಚಿನ ಬರಹಗಳಿಗಾಗಿ
ಅವಳು ಬಂದಿದ್ದಳು
ಬಿ.ಆರ್.ಲಕ್ಷ್ಮಣರಾವ್
ನವೋನ್ಮೇಷ ಪುಸ್ತಕ ಲೋಕಾರ್ಪಣೆ