- ಎಡಿನ್ ಬರೋನಲ್ಲಿ ಒದ್ದೆ ಬಟ್ಟೆ ಒಣಗಿಸಿದ್ದು - ಆಗಸ್ಟ್ 8, 2021
- ಕುಮಾರವ್ಯಾಸ ಭಕ್ತಿರಸ ಚಿತ್ರಣ - ಆಗಸ್ಟ್ 14, 2020
ಕುಮಾರವ್ಯಾಸ ಭಕ್ತಿರಸ ಚಿತ್ರಣ ಸಾಧಾರಣವಾಗಿ ಲೋಕದಲ್ಲಿ ಭಯ-ಭಕ್ತಿ ಈ ಎರಡೂ ಶಬ್ದಗಳೂ ಜೊತೆಜೊತೆಯಾಗಿ ಚಲಾವಣೆಯಲ್ಲಿರುವುದನ್ನು ನಾವು ಕಾಣುತ್ತೇವೆ. ಭಯದಿಂಧಲೇ ಭಕ್ತಿಹುಟ್ಟುವುದು ಎಂಬ ಅಭಿಪ್ರಾಯವನ್ನು ಈ ಪ್ರಯೋಗ ಮೂಡಿಸುತ್ತದೆ. ಭಯವನ್ನು ಭಕ್ತಿಯ ಜೊತೆಗೆ ತಳುಕು ಹಾಕಿರುವುದು ಬಹುಶಃ ವ್ಯಕ್ತಿಯಲ್ಲಿ ಆಚಾರ, ನಡವಳಿಕೆ, ವ್ಯವಹಾರಗಳು ಶುದ್ಧವಾಗಿರಲಿ. ಸಮಾಜಕ್ಕೆ ಒಳಿತಾಗಲಿ ಎಂಬ ಮುಂದಾಲೋಚನಾ ದೃಷ್ಟಿಯಿಂದ ಇರಬೇಕು. ಸರ್ವರಿಗೆ ಅಭಯವನ್ನು ಕೊಡುವ ಭಗವದ್ಭಕ್ತಿಯಲ್ಲಿ ಭಯಕ್ಕೆ ಸ್ಥಾನವಿಲ್ಲ. ಬದಲಿಗೆ ಭಕ್ತಿ ತುಂಬಾ ಸಿಹಿಯಾದ, ಸುಲಭವಾದ, ಆಪ್ಯಾಯಮಾನವಾದ ಹೃದಯದ ಭಾವ. ಭಗವಂತನನ್ನು ಅರಿಯಲು, ಹೊಂದಲು ಇರುವ ಅತಿ ಸುಲಭವಾದ ಮಾರ್ಗ ಈ ಭಕ್ತಿ ಎನ್ನುವುದು. ಇದನ್ನೇ ತಿಮ್ಮಗುರು ಕಗ್ಗದಲ್ಲಿ “ಭಕ್ತಿನಂಬುಗೆ ಸುಲಭ ಭಜನೆ ವಂದನೆ ಸುಲಭ “ ಎಂದದ್ದು. ಜ್ಞಾನಕ್ಕೆ ಹೆಚ್ಚು ಒತ್ತುಕೊಡುವ ಭಗವದ್ಗೀತೆಯಲ್ಲಿ ಕೃಷ್ಣಪರಮಾತ್ಮ ಭಕ್ತಿಮಾರ್ಗ ಶ್ರೇಷ್ಠತೆಯನ್ನೂ ಎತ್ತಿಹಿಡಿದಿದ್ದಾನೆ. ಭಗವಂತನನ್ನು ಅರಸುವ ಸುಲಭವಾದ ಉಪಾಯವೆಂದರೆ ಭಕ್ತಿಯೇ. ಭಗವಂತನ ಗುಣಗಾನವನ್ನು ಮಾಡುವ ಭಾಗವತವಂತೂ ಭಕ್ತಿಯ ರಸಪಾಕ. ಭಾಗವತವನ್ನು ರಾಮಕೃಷ್ಣ ಪರಮಹಂಸರು “ ಜ್ಞಾನ ಎಂಬ ತುಪ್ಪದಲ್ಲಿ ಕರಿದು ಭಕ್ತಿಎಂಬ ಸಕ್ಕರೆಯ ಪಾಕದಲ್ಲಿ ಅದ್ದಿದ ಸಿಹಿ ತಿನಿಸು” ಎಂದಿದ್ದಾರೆ. ಇಂಥಹ ಭಕ್ತಿಯ ಹುಟ್ಟು ಭಾರತದ ದಕ್ಷಿಣ ದೇಶದಲ್ಲಿ ಅಂದರೆ ದ್ರಾವಿಡದೇಶದಲ್ಲಿ ಆದದ್ದು ಎಂದೂ ಶ್ರೀಮದ್ಭಾಗವತದ ದಶಮಸ್ಕಂಧಲ್ಲಿ ಹೇಳಿದೆ. ಭಕ್ತಿ ಈ ಶಬ್ದಕ್ಕೆಸಂಸ್ಕೃತ ಕೋಶಗಳು ವಿಭಾಗ, ಸೇವಾ, ಅನುರಾಗವಿಶೇಷ, ಭಗವಂತನಲ್ಲಿ ಪರಾನುರಕ್ತಿ, ಉಪಾಸನೆ ಹೀಗೆ ಅನೇಕ ಅರ್ಥಗಳನ್ನು ಕೊಟ್ಟಿವೆ. ವಿಷ್ಣುಪುರಾಣದ ರೀತ್ಯಾ ಭಕ್ತಿ ಎಂದರೆ ಪ್ರೀತಿಗೆ ಅಧೀನವಾದ ಬುದ್ಧಿಪೂರ್ವಕವಾದ ಒಂದು ಚಿತ್ತವೃತ್ತಿಯಾಗಿದೆ. ಅಂದರೆ ಭಕ್ತಿ ಎಂಬುದು ಭಗವಂತನನ್ನು ಪ್ರೀತಿಯಿಂದ ಉಪಾಸನೆ ಮಾಡುವ ಒಂದು ಚಿತ್ತವೃತ್ತಿ ಎಂದಾಗುತ್ತದೆ. ಪುಷ್ಟಿಮಾರ್ಗದ ಪ್ರವರ್ತಕರಾದ ಶ್ರೀ ವಲ್ಲಭಾಚಾರ್ಯರು ಜೀವರುಗಳು ಭಕ್ತಿಯ ಮೂಲಕ ವೈದಿಕ ಕರ್ಮ, ಅನುಷ್ಠಾನಗಳ ಸಹಾಯವಿಲ್ಲದೆಯೇ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದೆಂದೂ, ಭಾವ, ಪ್ರೇಮ, ಪ್ರಣಯ, ಸ್ನೇಹ, ರಾಗ, ಅನುರಾಗ ಮತ್ತು ವ್ಯಸನ ಎಂಬ ಏಳು ಹಂತಗಳಲ್ಲಿ ಕೃಷ್ಣಭಕ್ತಿಯನ್ನು ಸಾಧಿಸ ಬಹುದೆಂದು ಹೇಳಿದ್ದಾರೆ. ಕೃಷ್ಣ ಎಂದರೆ ಭಗವಂತ. ಭಗವಂತನೆಂದರೆ ಭಗವುಳ್ಳವನು ಎಂದರ್ಥ.
ಜೀವಿಗಳ ಉತ್ಪತ್ತಿ ಮತ್ತು ವಿನಾಶ, ಗತಿ ಮತ್ತು ಅಗತಿ, ವಿದ್ಯಾ ಮತ್ತು ಅವಿದ್ಯಾ ಈ ಆರನ್ನೂ ಭಗ ಎಂದು ಕರೆಯುತ್ತಾರೆ. ಅಲ್ಲಿಗೆ ಈ ಭಗವನ್ನು ಸಂಪೂರ್ಣವಾಗಿ ತಿಳಿದವನು ಭಗವಂತ. ಭಗವದ್ಭಕ್ತಿಯನ್ನು ಮೇಲೆ ತಿಳಿಸಿದ ಏಳು ಹಂತಗಳಲ್ಲಿ ಸಾಧಿಸ ಬಹುದು ಎಂಬುದು ವಲ್ಲಭಾಚಾರ್ಯರ ಅಭಿಪ್ರಾಯವಾಗಿದೆ. ಈ ಏಳ ಹಂತಗಳನ್ನು ಭಗವಂತನ , ಭಕ್ತ ತನ್ನ ಇಷ್ಟದೈವದ ಬಳಿಗೆ ಹೋಗಲು ಇರುವ ಏಳು ಮೆಟ್ಟಿಲುಗಳು ಎನ್ನಬಹುದು. ಭಕ್ತಿಯಲ್ಲಿ ಶಾಂತ, ದಾಸ್ಯ, ಸಖ್ಯ, ಮಧುರ ಮತ್ತು ವಾತ್ಸಲ್ಯ ಐದು ಪ್ರಭೇದಗಳನ್ನು ಗುರುತಿಸಿ ಪುಷ್ಟಿಮಾರ್ಗದ ರೂಪಗೋಸ್ವಾಮಿ, ಜೀವಗೋಸ್ವಾಮಿ ಮೊದಲಾದ ಅನೇಕ ಸಂತರು ಶಾಸ್ತ್ರೀಯವಾಗಿ ಪ್ರತಿಪಾದಿಸಿದ್ದಾರೆ . ಹೀಗೆ ಚಿತ್ತವೃತ್ತಿ, ಒಂದು ಭಾವವಾಗಿದ್ದ ಭಕ್ತಿಯನ್ನು ಕಾಲಾಂತರದಲ್ಲಿ “ಭಕ್ತಿರಸ” ಎಂಬ ಒಂದು ಪ್ರತ್ಯೇಕರಸವೆಂದು ಪರಿಗಣಿಸಿದ್ದಾರೆ. ಭಕ್ತಿಯನ್ನು ಅನೇಕ ಶಾಸ್ತ್ರೀಯ ಕಾರಣಗಳಿಗಾಗಿ ಪ್ರತ್ಯೇಕರಸ ಎಂದು ಆಲಂಕಾರಿಕರು ಒಪ್ಪುವುದಿಲ್ಲ. ಅದು ಬೇರೆ ವಿಷಯ. ಅದರ ಚರ್ಚೆಗೆ ಇಲ್ಲಿ ಅವಕಾಶವಿಲ್ಲ. ಆದರೆ ಜ್ ಸಗುಣರೂಪದ ಉಪಾಸಕರಾದ ಭಕ್ತಿಪಂಥದ ಭಾಗವತರೆಲ್ಲರೂ ಭಕ್ತಿಯನ್ನು ಪ್ರತ್ಯೇಕ ರಸವೆಂದೇ ಭಾವಿಸಿ , ತಮ್ಮ ಆರಾಧ್ಯ ಮೂರ್ತಿಯ ಶ್ರವಣ, ಕೀರ್ತನೆ, ಅರ್ಚನೆಯೇ ಮೊದಲಾದ ನವವಿಧವಾದ ಭಕ್ತಿಯ ಹಂತಗಳಲ್ಲಿ ಆಸ್ವಾದಿಸಿ ಆನಂದ ತುಂದಿಲರಾಗಿದ್ದಾರೆ. ಹಾಡಿ ಕುಣಿದಿದದ್ದಾರೆ.
ಈ ಭಕ್ತಿಪಂಥದ ಪ್ರಭಾವ ನಮ್ಮ ಭಾರತದೇಶದ ಸಂಗೀತ, ಸಾಹಿತ್ಯ, ನೃತ್ಯ, ಶಿಲ್ಪಕಲೆ, ಚಿತ್ರಕಲೆ, ದೇವಾಲಯಗಳ ನಿರ್ಮಿತಿ ಹೀಗೆ ಆನೇಕ ಕಲಾಪ್ರಕಾರಗಳ ಮೇಲೆ ದಟ್ಟವಾಗಿ ಇರುವುದನ್ನು ನಾವು ಗಮನಿಸಬಹುದು. ನಮ್ಮ ದೇಶದ ಮಧ್ಯಯುಗದ ಸಾಹಿತ್ಯವೆಲ್ಲವೂ ಭಕ್ತಿಭಾವದಿಂದ ಪ್ರೇರಿತವಾಗಿದ್ದು, ಆಗ ನಮ್ಮ ದೇಶದ ಮೇಲೆ ನಡೆಯುತ್ತಿದ್ದ ಅನ್ಯಮತೀಯರ ಆಕ್ರಮಣ, ನಮ್ಮ ಶ್ರದ್ಧಾಕೇಂದ್ರಗಳಾದ ಗುಡಿ-ಗೋಪುರಗಳ ವಿನಾಶವೇ ಮೊದಲಾದ ಘಟನೆಗಳಿಂದ , ತಮ್ಮ ಸ್ವಂತದ ಶಕ್ತಿ ಸಾಮರ್ಥ್ಯಗಳಲ್ಲಿ, ನಂಬಿಕೆ ಕಳೆದುಕೊಂಡಿದ್ದ ರಾಜರುಗಳಿಗೂ, ನಮ್ಮ ದೇವತಾ ತತ್ತ್ವದ ದುಷ್ಟಸಂಹಾರ ಶಕ್ತಿ ಎಲ್ಲಿ ಹೋಯಿತು ಎಂದು ಪರಿತಪಿಸುತ್ತಿದ್ದ ಜನಸಾಮಾನ್ಯರಲ್ಲೂ , ಭರವಸೆಯ ಬೆಳಕನ್ನು ತೋರಿದ್ದು ಈ ಭಕ್ತಿಸಾಹಿತ್ಯವೇ ಎನ್ನಬಹುದು. ಇದಕ್ಕೆ ದೊಡ್ಡ ಉದಾಹರಣೆಯಾಗಿ ನಿಲ್ಲುವುದು ಅವಧಿ ಭಾಷೆಯಲ್ಲಿ ರಚಿತವಾಗಿರುವ ಸಂತ ತುಲಸೀ ದಾಸರ “ಶ್ರೀ ರಾಮಚರಿತ ಮಾನಸ “ . ಕನ್ನಡಸಾಹಿತ್ಯ ಲೋಕವನ್ನು ಈ ಹಿನ್ನೆಲೆಯಲ್ಲಿ ಕಂಡಾಗ ೧೧-೧೨ನೇ ಶತಮಾನದ ವೀರಶೈವಕವಿಗಳಿಂದ ರಚಿತವಾದ ಸಾಹಿತ್ಯವೆಲ್ಲವೂ ಭಕ್ತಿಭಾವದಿಂದ ಓತಪ್ರೋತವಾಗಿರವುದು ಕಂಡು ಬರುತ್ತದೆ. ನಂತರದ ಹರಿದಾಸ ಸಾಹಿತ್ಯವಂತೂ ರಾಮ-ಕೃಷ್ಣರ ಸಗುಣ ರೂಪದ ಭಾವಪೂರಿತವಾದ ಉಪಾಸನೆಯ ಸುಂದರ ಅಭಿವ್ಯಕ್ತಿಯೇ ಆಗಿದೆ. ಇಂದಿಗೂ ಇವು ಕನ್ನಡನಾಡಿನ ಜನಮಾನಸದಲ್ಲಿ ನೆಲೆನಿಂತು, ಅವರ ನಾಲಿಗೆಯ ಮೇಲೆ ನಲಿದು ನರ್ತಿಸುತ್ತಾ ಬಂದಿದೆ. ಕನ್ನಡದ ಮಹಾಕವಿ ಕುಮಾರವ್ಯಾಸನ “ಕರ್ಣಾಟ ಭಾರತ ಕಥಾಮಂಜರಿ “ ಅಥವಾ “ ಗದುಗಿನ ಭಾರತ” ವು ತನ್ನ ಕಾವ್ಯಗುಣಗಳಿಂದ , ಸಾಹಿತ್ಯಮೀಮಾಂಸೆಯ ಒರೆಗಲ್ಲಲ್ಲಿ ಅಪ್ಪಟ ೨೪ ಕ್ಯಾರಟ್ ಚಿನ್ನವಾಗಿ ಹೊಳೆಯುತ್ತದೆಯಾದರೂ, ಅದು ಕವಿಯ ಮಾತಿನಂತೆ “ ಕೃಷ್ಣಕಥೆ” . ಅದು ಭಕ್ತಿಕಾವ್ಯವೂ ಹೌದು.
ದಾಸಸಾಹಿತ್ಯದಂತೆಯೋ, ಅಥವಾ ವೀರಶೈವಯುಗದ ಸಾಹಿತ್ಯದಂತೆಯೋ ಕಾವ್ಯದ ಆದ್ಯಂತವೂ ಭಕ್ತಿಯ ಉಕ್ಕಂದವನ್ನು ಇದರಲ್ಲಿ ಕಾಣಲಾಗುವುದಿಲ್ಲ. ಆದರೆ ಆನೇಕ ಸಂದರ್ಭಗಳಲ್ಲಿ ಕಾವ್ಯದಲ್ಲಿ ಬರುವ ಅನೇಕ ಪಾತ್ರಗಳ ಕೃಷ್ಣ ಭಕ್ತಿಯು ಸ್ಪಷ್ಟವಾಗಿ ಗೋಚರವಾಗುತ್ತದೆ. ಅಂತಹ ಪಾತ್ರಗಳಲ್ಲಿ ಭೀಷ್ಮ, ವಿದುರ, ದ್ರೌಪದಿ ಪ್ರಮುಖರಾಗಿ ನಿಲ್ಲುತ್ತಾರೆ. ಅದರಲ್ಲೂ ವಿದುರನ ಕೃಷ್ಣಭಕ್ತಿಯನ್ನು ಕವಿ ಕಂಡರಿಸಿರುವ ಬಗೆ ಅನನ್ಯವಾಗಿದೆ. ಭಗವಂತನ ಸಾಕ್ಷಾತ್ಕಾರವಾದಾಗ ಭಕ್ತನೊಬ್ಬನ ನಡವಳಿಕೆ, ಮನೋಭಾವ ಹೇಗಿರುತ್ತದೆ ಎಂಬುದನ್ನು ವಿದುರನ ಪಾತ್ರದ ಮೂಲಕ ಕವಿ ತುಂಬಾ ಗಾಢವಾಗಿ ಚಿತ್ರಿಸಿದ್ದಾನೆ.
ವಲ್ಲಭಾಚಾರ್ಯರು ಹೇಳಿದ ಭಾವ, ಪ್ರೇಮ, ಪ್ರಣಯ, ಸ್ನೇಹ, ರಾಗ, ಅನುರಾಗ ಮತ್ತು ವ್ಯಸನ ಈ ಏಳೂ ಹಂತಗಳಲ್ಲಿ ವಿದುರನ ಭಕ್ತಿಯಲ್ಲಿ ಭಾವ, ಪ್ರೇಮ ಮತ್ತು ಸ್ನೇಹದ, ರಾಗ, ಅನುರಾಗ ಈ ಹಂತಗಳನ್ನು ಗುರುತಿಸಬಹುದು. ಅಲ್ಲದೆ ಶ್ರದ್ಧೆ ಭಕ್ತಿ ಮತ್ತು ಪ್ರೀತಿ ಈ ಮೂರೂ ಒಂದೇ ಭಾವವು ಸಂದರ್ಭಾನುಸಾರಿಯಾಗಿ ರೂಪಾಂತರ ಗೊಳ್ಳುವಾಗ ಪಡೆಯುವ ಬೇರೆ ಬೇರೆ ಹೆಸರುಗಳು ಎನ್ನಬಹುದು. ವಿದುರನಲ್ಲಿ ಕೃಷ್ಣನಲ್ಲಿ ಪ್ರೀತಿ ಇತ್ತು, ಕೃಷ್ಣನ ಲೋಕೋತ್ತರವಾದ, ಲೋಕೋಪಕಾರಕವಾದ ಮಾತು ಮತ್ತು ಕಾರ್ಯಗಳಲ್ಲಿ ಅಚಲವಾದ ಶ್ರದ್ಧೆಯೂ ಇತ್ತು. ವಿದುರನಲ್ಲಿ ಈ ಶ್ರದ್ಧೆ ಮತ್ತು ಪ್ರೀತಿ ಎರಡೂ ಸೇರಿ ಆರಾಧನೆಯ ಹಂತ ತಲುಪಿ ಕೃಷ್ಣಭಕ್ತಿಯಾಯ್ತು. ಹೇಳಬೇಕೆಂದರೆ ವಿದುರನದು ಸಖ್ಯ ಭಕ್ತಿಯ ಪರಾಕಾಷ್ಠೆಯೇ ಆಗಿ ಕುಮಾರವ್ಯಾಸನಲ್ಲಿ ಮೈದಳೆದು ನಿಂತಿದೆ ಎನ್ನಬಹುದು.
ವೈಷ್ಣವಭಕ್ತಿಯ ಉಕ್ಕಂದದ ರಸವನ್ನು ೧೪- ೧೫ನೇ ಶತಮಾನದ ಕನ್ನಡ ಕಾವ್ಯಗಳಲ್ಲಿ ಕಂಡುಬರುತ್ತದೆ. ವಿದುರನ ಸಖ್ಯಭಕ್ತಿಯ ಉಕ್ಕಂದವನ್ನು ರಸಮಯವಾಗಿ ಕುಮಾರವ್ಯಾಸ ನಿರೂಪಿಸಿರುವ ಸಂದರ್ಭವನ್ನು ಗಮನಿಸೋಣ. ಕೃಷ್ಣ ಪಾಂಡವರ ದೂತನಾಗಿ, ಕೌರವ-ಪಾಂಡವರಿಬ್ಬರಿಗೂ, ಜೊನ್ತೆಗೆ ಲೋಕಕ್ಕೂ ಹಿತವಾಗುವ ಶಾಂತಿಮಾರ್ಗವನ್ನು, ಸಂಧಿಯನ್ನು ಕೈಗೊಳ್ಳಲು ಹಸ್ತಿನಾಪುರಕ್ಕೆ ಬಂದ ಸಂದರ್ಭ. ಭಕ್ತನಾದ ಭೀಷ್ಮ, ಕೃಷ್ಣನ ಹಿರಿತನವನ್ನು ಅರಿತಿದ್ದ ದ್ರೋಣ, ಕೃಪ ಮೊದಲಾದವರಿಗೆ ಕೃಷ್ಣನ ಬರವು ಅಪಾರ ಸಂತಸವನ್ನು ತಂದರೆ, ಕೃಷ್ಣನು ಪಾಂಡವ ಪಕ್ಷಪಾತಿ ಎಂಬ ಗುಮಾನಿ, ಕೋಪ ದುರ್ಯೋಧನನಿಗೆ. ಅವನಿಗೆ ವಿಶೇಷ ಮರ್ಯಾದೆಯ ಅಗತ್ಯವಿಲ್ಲ ಎಂಬ ನಿಲುವು ಅವನದು. ಧೃತರಾಷ್ಟ್ರನದು ಇತ್ತಲೂ ಇಲ್ಲದ ಅತ್ತಲೂ ಇಲ್ಲದ ಡೋಲಾಯಮಾನ ಮನಸ್ಸು. ಆದರೂ ಕೃಷ್ಣನಿಗೆ ಶ್ರೇಷ್ಠವಾದ ಬಿಡಾರ, ಊಟ, ಉಡುಗೊರೆಗಳನ್ನು ಸಿದ್ಧಪಡಿಸುವ ಇಚ್ಛೆ ಅವನದು. ಆದರೆ ಕೃಷ್ಣ ಬಂದು,ಉಳಿದುಕೊಂಡದ್ದು, ಉಂಡದ್ದು, ಒಡನಾಡಿದ್ದು, ತನ್ನ ಅಂತರಂಗವನ್ನು ಬಿಚ್ಚಿಟ್ಟಿದ್ದು ಧರ್ಮಾತ್ಮನಾದ ವಿದುರನ ಮನೆಯಲ್ಲಿ. ಯಾರೂ ಊಹಿಸಲಾಗದ ಕೃಷ್ಣನ ನಡೆ ಇದು. ದೂತನೊಬ್ಬನು ವಹಿಸಬೇಕಾದ ಎಚ್ಚರಿಕೆಯು ಹೇಗಿರಬೇಕು ಎಂಬುದನ್ನು ಸರ್ವಕಾಲಕ್ಕೂ ತೋರುವ ನಡೆ ಕೃಷ್ಣನದು. ಆದರೆ ಕೃಷ್ಣ ತನ್ನ ಮನೆಗೆ ಬಂದದ್ದನ್ನು ವಿದುರ ಸ್ವೀಕರಿಸಿ ಪರಿ, ,ಅವನಿಗಾದ ಸಂತಸ ಭಕ್ತನು ಭಗವಂತನನ್ನು ತನ್ನೆದುರಿಗೇ ಸಾಕ್ಷಾತ್ತಾಗಿ, ಅನಿರೀಕ್ಷಿತವಾಗಿ ಕಂಡಾಗ ಆಗುವಂಥದ್ದು. ಭಕ್ತನಾದ ವಿದುರನು, ಕನಸು ಮನಸಿಲ್ಲಿಯೂ ನಿರೀಕ್ಷಿಸದ ಭಾಗ್ಯ ಸಾಕಾರಗೊಂಡು ತಾನಾಗಿಯೇ ಮನೆ ಬಾಗಿಲಿಗೆ ಬಂದಿದೆ. ಹೇಗೆ ಯಾವ ರೂಪದಲ್ಲಿ ಬಂದಿದೆ ಎಂದರೆ-
ಸಿರಿಮೊಗದ ಕಿರುಬೆಮರ ತೇಜಿಯ ಖುರಪುಟದ ಕೆಂದೂಳಿ ಸೋಂಕಿದ ಸಿರಿಮುಡಿಯ ಕುಡಿಮೀಸೆಯಲಿ ಕೆಂಪಡರ್ದ ರೇಣುಗಳ | ಖರಮರೀಚಿಯ ಜಳಕೆ ಬಾಡಿದ ತರುಣತುಲಸಿಯ ದಂಡೆಯೊಪ್ಪುವ ಗರುವದೇವನ ಬರವ ಕಂಡನು ಬಾಗಿಲಲಿ ವಿದುರ || ೮||
ವಿರಾಟನಲ್ಲಿ ಅಜ್ಞಾತವಾಸ ಮುಗಿಸಿದ ಪಾಂಡವರ ತಾತ್ಕಾಲಿಕ ವಸತಿಯಾಗಿದ್ದ ಉಪಪ್ಲಾವ್ಯನಗರದಿಂದ ಬೆಳಗ್ಗೆಯೇ ರಥದಲ್ಲಿ ಹೊರಟ ಕೃಷ್ಣ ಅಪರಾಹ್ನದ ಹೊತ್ತಿಗೆ ಹಸ್ತಿನಾಪುರಕ್ಕೆ ಬಂದಿದ್ದಾನೆ. ಕೃಷ್ಣನ ಚೆಲುವು ಸೂಸುವ ಮೊಗದಲ್ಲಿ ಪ್ರಯಾಣದ ಆಯಾಸದಿಂದ ಕಿರು ಬೆಮರಹನಿಗಳು ಮೂಡಿವೆ. ಆದರೆ ನಸುನಗೆ ಅವನ ಲವಲವಿಕೆಯ ತಾಜಾತನಕ್ಕೇನ ಆಯಾಸವಿಲ್ಲ ಎನ್ನುತ್ತಿದೆ. ತಲೆಕೂದಲಲ್ಲಿ, ಮೀಸೆಯ ತುದಿಗಳಲ್ಲಿ ಕುದುರೆಯ ಖುರಪುಟದಿಂದ ಎದ್ದ ಕೆಂಧೂಳಿ ಅಡರಿದೆ. ಸೂರ್ಯನ ಚುರುಕಾದ ಕಿರಣಗಳ ಝಳಕೆ , ಕೃಷ್ಣನ ಕೊರಳಲ್ಲಿದ್ದ ಎಳೆಯ ತುಳಸಿಯ ಹಾರವು ಬಾಡಿದೆ. ಹೀಗಿರುವ “ ಗರುವ ದೇವನು ” ತನ್ನ ಮನೆಯ ಬಾಗಿಲಿಗೆ ಬಂದದನ್ನು ವಿದುರ ಕಾಣ್ತಾನೆ. ಈ ರೂಪದಲ್ಲಿ ಭಗವಂತ ತನ್ನ ಮನೆಯ ಬಾಗಿಲಿಗೇ ಬಂದು ನಿಂತಿದ್ದಾನೆ.
ಅದನ್ನು ಕಂಡ ವಿದುರನು “ ಪರಮ ಸುಖದಲಿ ತನುವ ಮರೆದನು ನಯನ ಜಲವೊಗಲು “ ಎನ್ನುತ್ತಾನೆ ಕವಿ. ವಿದುರನ ಇಂದ್ರಿಯಗಳ ದೋಷವೆಲ್ಲವೂ ಕಳೆದು, ಸಂತೋಷವು ಅಧಿಕರಿಸಿ, ಅವನಿಗೆ “ ಎರಡುದೋರದ ಗಾಢ ಭಕ್ತಿ- ಅಂದರೆ ತಾನು ಬೇರೆಯಲ್ಲ ಭಗವಂತ ಬೇರೆಯಲ್ಲ ಎಂಬ ಸಾಯುಜ್ಯದ , ಗಾಢಭಕ್ತಿಯ ಅನುಭವ ಉಂಟಾಗಿ ಕಣ್ಣುಗಳಿಂದ ನೀರು ಸುರಿಯತೊಡಗುತ್ತದೆ. ವಿದುರನ ಗಾಢಭಕ್ತಿಯು ಅವನ ಶರೀರವನ್ನು ಪುಳಕಿತವಾಗಿಸಿದೆ. ರೋಮಾಂಚನವಾಗಿದೆ. ಅವನಿಗೆ ಭಗವಂತ ಹೀಗೆ ತನ್ನಂತಹ ಸಾಮಾನ್ಯನ ಮನೆಯ ಬಾಗಿಲಿಗೆ ಬಂದದ್ದು ನಂಬಲಾಗದಷ್ಟು ಆಶ್ಚರ್ಯವನ್ನು ಉಂಟು ಮಾಡಿದೆ. ಮನಸ್ಸು ತನ್ನ ಸ್ವಸ್ಥತೆಯನ್ನು ಕಳೆದುಕೊಂಡಿದೆ. ಆಗ ವಿದುರನ ಮನಸ್ಸು ತನಗೆ ದೊರೆತ ಭಾಗ್ಯವನ್ನು ಹೀಗೆ ತುಲನೆ ಮಾಡಿಕೊಂಡು ಸಂತೋಷಿಸುತ್ತಿದ್ದಾನೆ-
ವೇದದರಿಕೆಗಳಡಗದುಪನಿಷ ದಾದಿ ದಿವ್ಯಸ್ತುತಿಯ ಗಡಣೆಗೆ ಹೋದ ಹೊಲಬಳವಡದ ಮುನಿಗಳ ಮಖಕೆ ಮನಗುಡದ | ವೇದಗಳ ಸ್ತುತಿಗೆ, ಪ್ರಾರ್ಥನೆಗೆ ಮನಸ್ಸು ಕರಗದ, ಉಪನಿಷತ್ತಿನ ಹುಡುಕಾಟಕ್ಕೆ ಸಿಗದ, ಯಜ್ಞಯಾಗಾದಿಗಳಿಗೆ ಒಲಿಯದ, ಅನಾದಿ ಅನಂತನಾದ ಭಗವಂತ ತನ್ನ ಮನೆಯ ಬಾಗಿಲಿಗೆ ಬಂದಿದ್ದಾನೆ. ಇದು “ ಬಕುತರ ಭಾಗ್ಯಶಾಲಿಯ ಬೆಳೆಗಳು” ಎಂದು ಕಣ್ಣೀರ್ಗರೆಯುತ್ತಾ ಕೃಷ್ಣನ ಕಾಲುಗಳಿಗೆ ನಮಸ್ಕರಿಸುತ್ತಾನೆ. ವಿದುರ ನಮಸ್ಕಾರ ಮಾಡುವುದನ್ನು ಕವಿ “ ಒಡಲನೀಡಾಡಿದನು ಹರುಷದಲಿ “ ಎಂದು ವರ್ಣಿಸುತ್ತಾನೆ. ಈಡಾಡು ಅಂದರೆ ಸಂಪೂರ್ಣ ಶರಣಾಗತಿಯ ಭಾವದಿಂದ ನಮಸ್ಕರಿಸುವುದು. ಕೇವಲ ಶಿಷ್ಟಾಚಾರದಿಂದ ಅರೆಮನಸ್ಸಿನಿಂದ ನಮಸ್ಕರಿಸುವುದಲ್ಲ. ವಿದುರನ ಭಕ್ತಿ ಈಗ ಉದ್ರೇಕದ ಮಟ್ಟವನ್ನು ಮುಟ್ಟಿದೆ. ಅವನೀಗ ವಿದುರನಾಗಿಲ್ಲ. ತನ್ನ ತನವನ್ನು ಮರೆತಿದ್ದಾನೆ. ಅಂತಹ ಭಾವೋದ್ರೇಕದ ಸ್ಥಿತಿಯಲ್ಲಿ ಅವನ ಚರ್ಯೆಗಳನ್ನು ಕವಿ ವರ್ಣಿಸುವ ಪರಿ ನೋಡಿ-
ನೋಡಿದನು ಮನದಣಿಯೆ, ಮಿಗೆ ಕೊಂಡಾಡಿದನು, ಬೀದಿಯಲಿ ಹರಿದೆಡೆ ಯಾಡಿದನು, ಭ್ರಮೆಯಾಯ್ತು ವಿದುರಂಗೆಂಬ ಗಾವಳಿಯ | ಕೂಡೆ ಕುಣಿದನು, ಮನೆಯ ಮುರಿದೀ ಡಾಡಿದನು ಮೈಮರೆದ ಹರುಷದ ಗಾಡಿಕೆಯಲಪ್ರತಿಮನೆಸೆದನು ಬಕುತಿ ಕೇಳಿಯಲಿ ||
ವಿದುರ ಕೃಷ್ಣನನ್ನು ಮನದಣಿಯೆ ನೋಡಿದನು. ಅವನ ನಾಮವನ್ನು, ಗುಣಾತಿಶಯಗಳನ್ನು ಹಾಡಿನಲಿದನು, ಬೀದಿಯ ತುಂಬಾ ಎಲ್ಲೆಂದರಲ್ಲಿ ಓಡಾಡಿದನು. ವಿದುರನಿಗೆ ಹುಚ್ಚೇ ಹಿಡಿಯಿತು ಎನ್ನುವ ಅಕ್ಕಪಕ್ಕದವರ ಜೊತೆ, ಜನ ಜಂಗುಳಿಯ ಜೊತೆ ಕುಣಿದು ಕುಪ್ಪಳಿಸಿದನು. ಭಕ್ತಿಯ ಹರ್ಷಾತಿರೇಕದಲ್ಲಿ ಅವನು ತನ್ನ ಮನೆಯ ಬಾಗಿಲು, ಜಂತಿ, ತೊಲೆ, ತೂಲ ಎಲ್ಲವನ್ನೂ ಮುರಿದು ಬೀಸಾಡಿದನು. ಹೀಗೆ ಅಪ್ರತಿಮನಾದ ಭಕ್ತ ವಿದುರ “ ಬಕುತಿ ಕೇಳಿ” ಯಲ್ಲಿ ಮೈಮರೆತಿದ್ದಾನೆ. ಭಕ್ತಿಯ ಉತ್ಕರ್ಷವಾದಾಗ, ಭಗವಂತನು ಎದುರಿಗೆ ಬಂದಾಗ ಭಕ್ತನಿಗೆ ಲೋಕದ ಲಜ್ಜೆ ಇರೋದಿಲ್ಲ. ಇದೇ ಸ್ಥಿತಿಯನ್ನೇ ಮಹಾದೇವಿಯಕ್ಕ, ಮೀರಾ ಬಾಯಿ, ರಾಮಕೃಷ್ಣಪರಮಹಂಸರು ಎಲ್ಲರೂ ಅನುಭವಿಸಿದ್ದು. ಮೀರಾಬಾಯಿಯಂತೂ
“ ಲೋಕ ಮೀರಿದೆ ನಾ ಕ್ಲೇಶ ದಾಟಿದೆ ” “ಗೆಜ್ಜೆಕಾಲಿಗೆ ತುಳಸಿ ಮಾಲೆ ಕೊರಳಿಗೆ, ಲಜ್ಜೆಬಿಟ್ಟೆನೆ ಹೆಜ್ಜೆ ಹಾಕಿಕುಣದೆನೆ “ ಗಿರಿಧರನನ್ನು ಸೇರಿದ ಬಾಳು ಎನಿತು ಸುಂದರ ಎಂದೆಲ್ಲಾ ಹಾಡಿದ್ದಾಳೆ. “ ಆತ್ಮಸಂಗಾತಕ್ಕೆ ಚೆನ್ನಮಲ್ಲಿಕಾರ್ಜುನ ” ನನ್ನು ಇಟ್ಟುಕೊಂಡು ಲೋಕದ ನಂಟನ್ನೂ, ಗಂಟನ್ನೂ, ಲಜ್ಜೆಯನ್ನೂ ತೊರೆದು ನಡೆದವಳು ಅಕ್ಕಮಹಾದೇವಿ. “ಬಕುತಿ ಕೇಳಿ” ಎಲ್ಲ ಭಕ್ತಶ್ರೇಷ್ಠರಿಗೂ ಒಂದೇ ಎಂಬುದಕ್ಕೆ ಅಲ್ಲಮಪ್ರಭುವಿನ – ಮನಮನಂಗಳು ಬೆರೆತಾಗ ತನು ಕರಗದಿದ್ದರೆ ನೆನೆದಾಗ ಪುಳಕಂಗಳು ಪೊಣ್ಮದಿದ್ದರೆ ಕಂಡಾಗ ಅಶ್ರುಜಲ ಹರಿದು ನುಡಿ ಗದ್ಗದ ಗೊಳ್ಳದಿದ್ದರೆ ಕೂಡಲ ಸಂಗನ ಭಕ್ತರಿಗೆ ಭಕ್ತಿಗೆ ಇದು ಚಿಹ್ನವೇ ಈ ವಚನವೇ ಸಾಕ್ಷಿ. ಭಗವಂತನನ್ನು ಕಂಡಾಗ ನಿಜವಾಗಿ ಅವನನ್ನು ಹೃದಯದಲ್ಲಿ ಕಂಡವರಿಗಷ್ಟೇ ಭಕ್ತಿಯ ನೆಲೆ ಬೆಲೆ ಅರಿವಾಗುವುದು. ಕಂಡಕಂಡವರಿಗೆಲ್ಲಾ ಅರಿವಾಗದು ಎಂಬ ಬೇಂದ್ರೆಯವರ ಮಾತೂ ವಿದುರ ಭಕ್ತಿಯ ವಿಷಯದಲ್ಲಿ ಸತ್ಯವೇ ಆಗಿದೆ. ವಿದುರನ ಈ ವರ್ತನೆಯ ಅತಿರೇಕವನ್ನು, ಭಾವದ ತೀವ್ರತೆಯನ್ನೂ ಕಂಡು ಕೃಷ್ಣ ತನ್ನ ಪರಮ ಭಕ್ತನನ್ನು ರೇಗಿಸಿ , ಪರೀಕ್ಷಿಸಿ ಸಂತೋಷ ಪಡುವ ಸೊಗಸೂ ಚೆನ್ನಾಗಿದೆ.
“ ಹೂವ ತರುವರ ಮನೆಗೆ ಹುಲ್ಲ ತರುವ ಗರುವವಿನಿತಿಲ್ಲದ ದೇವನ ಕೇಳಿಯನ್ನೂ ಕವಿ ಚಂದದಿಂದ ಚಿತ್ರಿಸಿದ್ದಾನೆ- ಹಸಿದು ನಾವೈತಂದರೀ ಪರಿ ಮಸಗಿ ಕುಣಿದಾಡಿದೊಡೆ ಮೇಣೀ ವಸತಿಯನು ಸುಗಿದೆತ್ತಿ ಬಿಸುಟರೆ ತನಗೆ ತಣಿವಹುದೆ | ಕೃಷ್ಣ ಪರಮಾತ್ಮ “ ನನಗೆ ಹಸಿವು. ನೀನೋ ಮನೆಯನ್ನೇ ಮುರಿದು ಕುಣಿಯುತ್ತಿದ್ದೀಯಾ ? ಹಾಗೆ ಮಾಡಿದರೆ ನನ್ನ ಹಸಿವು ತಣಿವುದೇ ? ದುರ್ಯೋಧನನ ಅರಮನೆಯಲ್ಲಿ ನನಗಾಗಿ ಭೂರಿ ಭೋಜನವನ್ನೇ ಮಾಡಿಸಿ, ಎಲ್ಲರೂ ನನಗಾಗಿ ಕಾದಿದ್ದರು. ಬಹುವಾಗಿ ಅಲ್ಲಿಯೇ ಉಣಬೇಕೆಂದು ಪ್ರಾರ್ಥಿಸಿದಾಗಲೂ, ನಾನು ನನ್ನ ಶರಣನ ಮನೆಗೆ ಬಂದಿದ್ದೇನೆ. ನನ್ನ ನಂಬಿಕೆಯನ್ನು ಹುಸಿ ಮಾಡಿ ನನ್ನನ್ನು ನಾಚಿಕೆಗೆ ಈಡು ಮಾಡದಿರು. ಇದು ಕನಸಲ್ಲ .ದಿಟ. ಬಾ ವಿದುರ, ಹೋಗೋಣ ನಿನ್ನಯ ಮನೆಗೆ ಎಂದು ಹೇಳುತ್ತಿದ್ದಾನೆ. ಆದರೂ ವಿದುರನಿಗೆ ಇತ್ತ ಕಡೆಯ ಧ್ಯಾನವಿಲ್ಲ. ಭಕ್ತಿಯ ಮೇಣ ದಲ್ಲಿ ಎರಕ ಹೊಯ್ದ ಬೊಂಬೆಯಾಗಿದ್ದಾನೆ ಎನ್ನುತ್ತಿದ್ದಾನೆ ಕವಿ ನೆರೆಯ ಕೃತ್ಯಾಕೃತ್ಯ ಭಾವವ ಮರೆದು ಕಳೆದನು ಮನ ಮುರಾರಿಯ ನಿರುಕಿಸಿಕೊಂಡುದು ಕಂಗಳೊಡೆವೆಚ್ಚವು ಪದಾಬ್ಜದಲಿ | ಅರಿವು ಮಯಣಾಮಯದ ಭಕ್ತಿಯೊ ಳೆರಗಿಸಿದ ಪುತ್ಥಳಿಯವೊಲು ಕಡು ಬೆರಗ ಕೇಣಿಯ ಕೊಂಡು ಮೌನದೊಳಿದ್ದನಾ ವಿದುರ ||
ಭಕ್ತಿಭಾವದ ಪರಾಕಾಷ್ಠೆಯ ಚಿತ್ರಣವನ್ನು ಕವಿ ಇಲ್ಲಿ ತುಂಬಾ ಅಡಕವಾಗಿ, ಮನಮುಟ್ಟುವಂತೆ ಚಿತ್ರಿಸಿದ್ದಾನೆ. ಯಾರೇ ಅತಿಥಿಗಳು ಬಂದರೂ ತತ್ ಕ್ಷಣದಲ್ಲಿ ಮಾಡಬೇಕಾದ ಗೃಹಸ್ಥನ ಕರ್ತವ್ಯ ಬಂದ ಅತಿಥಿಯನ್ನು ಯಥಾಶಕ್ತಿ ಸತ್ಕರಿಸುವುದು. ಈಗಲಾದರೋ ವಿದುರನ ಮನೆಗೆ ಜಗವೇ ಬಯಸುವ ಪರಮಾತ್ಮನೇ ಅತಿಥಿಯಾಗಿ ಬಂದಿದ್ದಾನೆ. ಆದರೆ ಭಕ್ತಿರಸಾವೇಶದಲ್ಲಿ ವಿದುರ “ ನೆರೆಯ ಕೃತ್ಯಾಕೃತ್ಯ ಭಾವವ ಮರೆದಿದ್ದಾನೆ. ಅಂದರೆ ಮಾಡಬೇಕಾದ ಕರ್ತವ್ಯವೇ ಮರೆತು ಹೋಗಿದೆ. ಮನಸ್ಸು ಭಕ್ತಿರಸದಲ್ಲಿ, ಭಕ್ತಿರಸಕ್ಕೆ ವಿಷಯವಾದ ಮುರಾರಿಯಲ್ಲಿ ಲಯವಾಗಿ ಹೋಗಿದೆ. ಕಂಗಳು ಕೃಷ್ಣನ ಪಾದಗಳಲ್ಲಿ ಬೆಸುಗೆಹಾಕಿದಂತೆ ಕೀಲಿಸಿವೆ. ವಿದುರನ ಬುದ್ಧಿ ಭಕ್ತಿಯೆಂಬ ಮೇಣದಲ್ಲಿ ಎರಕಹೊಯ್ದ ಬೊಂಬೆಯಂತೆ ಆಗಿಬಿಟ್ಟಿದೆ. ಯೋಚಿಸುವ, ನಿಶ್ಚಯಿಸುವ ಶಕ್ತಿಯನ್ನೇ ಕಳೆದುಕೊಂಡಿದೆ. ಹೀಗೆ ಇಂದ್ರಿಯಗಳು, ಮನಸ್ಸು ಬುದ್ಧಿ ಎಲ್ಲವೂ ಕೃಷ್ಣತತ್ತ್ವದಲ್ಲಿ ಲಯವಾಗಿ, ತಾನು ಎಂಬ ಭಾವವೇ ಇಲ್ಲವಾಗಿ, ಎಲ್ಲವೂ ಕೃಷ್ಣಮಯವಾದ ಆನಂದದ ಬೆರಗಿನಲ್ಲಿ, ವಿದುರನಿಗೆ ಮಾತು ಬೇಡವಾಗಿದೆ.
ಮೌನವಾಗಿ ಪರಮಾತ್ಮ ದರ್ಶನದಿಂದ ದೊರಕುತ್ತಿರುವ ನಿರವಧಿಕವಾದ ಆ ಸುಖವನ್ನು ವಿದುರ ಅನುಭವಿಸುತ್ತಿದ್ದಾನೆ. ಭಾವದಿಂದ, ಪ್ರೇಮದಿಂದ, ಸ್ನೇಹದಿಂದ, ರಾಗ- ಅನುರಾಗಗಳಿಂದ ವಿದುರನು ಸಾಧಿಸಿದ ಭಕ್ತಿಯನ್ನು, ಸ್ವತಃ ಕೃಷ್ಣಭಕ್ತ ಕವಿ ಕುಮಾರವ್ಯಾಸ ಕೇವಲ ಒಂದು ಹತ್ತು ಷಟ್ಪದಿಗಳಲ್ಲಿ ಅತ್ಯದ್ಭುತವಾಗಿ ಕಂಡರಿಸಿದ್ದಾನೆ.ಭಕ್ತಿ ರಸದ ಮಟ್ಟವನ್ನು ಮುಟ್ಟಿದಾಗಿನ ಅನಿರ್ವಚನೀಯವಾದ ಅನುಭವವನ್ನೂ ವಾಚ್ಯವಾಗಿಸಿದ ಕವಿಯ ಶಬ್ದಶಕ್ತಿ ಅಸಾಧಾರಣವಾದದ್ದು. .ಮೂಲ ವ್ಯಾಸಭಾರತದ ವಿದುರ ವಿವೇಕಿ, ವಿದ್ಯಾವಂತ, ನಂಬಿಗಸ್ಥ, ಸತ್ಯಧರ್ಮದ ಪರವಾಗಿ ನಿಂತವನು. ಸತ್ಯವನ್ನು ನಿರ್ಭಿಡೆಯಿಂದ ಅರಸೊತ್ತಿಗೆಯ ಮುಂದೆಯೋ ಆಡಬಲ್ಲ ಧೃಢತೆ ಇದ್ದವನು. ವ್ಯಾಸರ ಯುಗದ ಪ್ರಧಾನ ಧರ್ಮ ಭಕ್ತಿ ಆಗಿರಲಿಲ್ಲ. ಆದರೆ ಕುಮಾರವ್ಯಾಸನ ಕಾಲಕ್ಕೆ ಭಕ್ತಿಯ ಹೊನಲು ಇಡಿಯ ಭರತವರ್ಷದಲ್ಲಿ ಉಕ್ಕಂದವಾಗಿ, ಹಲವು ನೆರೆತೊರೆಗಳಾಗಿ ಹರಿಯುತ್ತಿತ್ತು. ತನ್ನ ಯುಗಧರ್ಮದ ಹೊಳಹುಗಳನ್ನು ಕುಮಾರವ್ಯಾಸ ಭಾರತದ ವಿದುರನ ಮನೆಗೆ ಕೃಷ್ಣ ಅತಿಥಿಯಾಗಿ ಬರುವ ಈ ಸಂದರ್ಭ ಸ್ಫುಟವಾಗಿ ತೋರಿಸಿದೆ.
ಹೆಚ್ಚಿನ ಬರಹಗಳಿಗಾಗಿ
ಶಿಕಾಗೋ ಸಂದೇಶದ ಭ್ರಾತೃತ್ವ ಕಥನ
.
ಲಕ್ಷ್ಮೀಶ ತೋಳ್ಪಾಡಿ ವಾಕ್ಝರಿ