ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೆ.ವಿ.ತಿರುಮಲೇಶ್

ಎಸ್ ದಿವಾಕರ್
ಇತ್ತೀಚಿನ ಬರಹಗಳು: ಎಸ್ ದಿವಾಕರ್ (ಎಲ್ಲವನ್ನು ಓದಿ)

ಕಳೆದ ಶತಮಾನದಲ್ಲಿ ಕನ್ನಡ ಕಾವ್ಯದ ದಿಕ್ಕು ಬದಲಿಸಿದ ಕೆಲವೇ ಕೆಲವು ಕವಿಗಳಲ್ಲಿ ತಿರುಮಲೇಶರು ಪ್ರಮುಖರು. ಗೋಪಾಲಕೃಷ್ಣ ಅಡಿಗ, ಎ.ಕೆ.ರಾಮಾನುಜನ್, ಈ ಇಬ್ಬರನ್ನು ಬಿಟ್ಟರೆ ತಿರುಮಲೇಶರೇ ನಮ್ಮ ಮೇಜರ್ ಕವಿ. 1968ರಲ್ಲಿ ಬೆಳಕು ಕಂಡ ‘ಮುಖವಾಡಗಳು’ ಸಂಕಲನದಿಂದ ಹಿಡಿದು ಕಳೆದ ವರ್ಷ ಹೊರಬಂದ ‘ಅಕ್ಷಯ ಕಾವ್ಯ’ದವರೆಗೆ ಸುಮಾರು ಒಂದೂವರೆ ಸಾವಿರ ಪುಟಗಳನ್ನು ವ್ಯಾಪಿಸಿಕೊಂಡಿರುವ ಅವರ ಕಾವ್ಯ ಭೌತಿಕ ಜಗತ್ತನ್ನು ಹೇಗೋ ಹಾಗೆ ಮಾನವ ಜಗತ್ತನ್ನು ಕೂಡ ನಾವು ಹಿಂದೆಂದೂ ನೋಡಿರದ ರೀತಿಯಲ್ಲಿ ಕಾಣಿಸುವ ಕಾವ್ಯ. ಅವರದು ದೈನಿಕದ ಸಾಮಾನ್ಯ ಸಂಗತಿಗಳಲ್ಲೂ ಕಾವ್ಯವನ್ನು ಕಾಣಿಸುವ ಪ್ರತಿಭೆ; ಗೊತ್ತಿದ್ದೂ ಮರೆತದ್ದನ್ನು ನೆನಪಿಸುವ, ಗೊತ್ತೇ ಇರದದ್ದನ್ನು ಅನುಭವವಾಗಿ ಪರಿವರ್ತಿಸುವ ಪ್ರತಿಭೆ; ವರ್ತಮಾನದ ಸುಳಿಗೆ ಸಿಕ್ಕ ಭೂತಕಾಲದ ಚಹರೆಗಳನ್ನೂ ಸ್ಥಳಗಳ, ವಸ್ತುವಿಶೇಷಗಳ, ಸಂಬಂಧಗಳ ಏಕಾಕಿತನವನ್ನೂ ಶೋಧಿಸಿ ನೋಡುವ ಮೂಲಕ ಅನುಭವವನ್ನು ಅದರೆಲ್ಲ ಸಂಕೀರ್ಣತೆಯೊಂದಿಗೆ ಪಡಿಮೂಡಿಸುವ ಪ್ರತಿಭೆ.

ತಿರುಮಲೇಶರ ದೃಷ್ಟಿಯಲ್ಲಿ ಕವಿಯಾದವನು ತನ್ನ ಪ್ರತಿಭೆಯಿಂದ, ತಾನು ತೆಗೆದುಕೊಳ್ಳುವ ಸ್ವಾತಂತ್ರ್ಯದಿಂದ, ತನ್ನ ಸತ್ಯಶೋಧನೆಯಿಂದ, ಎಲ್ಲಕ್ಕಿಂತ ಮಿಗಿಲಾಗಿ ತನ್ನ ವೈಯಕ್ತಿಕ ಪ್ರತಿಸ್ಪಂದನೆಯಿಂದ ಮನುಷ್ಯ ಜಗತ್ತನ್ನು ಬಗೆದು ನೋಡುವವನು. ಹಾಗಾಗಿ ತತ್‍ಕ್ಷಣದ ಪರಿಸ್ಥಿತಿಯೊಂದಕ್ಕೆ ಇತಿಹಾಸದ ನೆನಪೊಂದನ್ನು ಅನ್ವಯಿಸಿ ನೋಡುವ ಅವನ ಕಾವ್ಯದಲ್ಲಿ ವ್ಯಕ್ತಿಯ ವೈಯಕ್ತಿಕ ಪ್ರಶ್ನೆಗಳು ಒಟ್ಟು ಜೀವನದ ಪ್ರಶ್ನೆಗಳೇ ಆಗಿಬಿಡುತ್ತವೆ. ಅವರ ಇತ್ತೀಚಿನ ‘ಅವ್ಯಯ ಕಾವ್ಯ’ದಲ್ಲಿ ಅರ್ಥಾರ್ಥ ಸಂಬಂಧವಿಲ್ಲದಂತೆ ಕಾಣುವ ಪುರಾಣೇತಿಹಾಸ ಪ್ರಸಂಗಗಳು, ತಾತ್ವಿಕ ಚಿಂತನೆಗಳು, ಸಮಾಜ ರಾಜಕೀಯ ಕಲೆ ವಿಜ್ಞಾನ ಮೊದಲಾದ ಕ್ಷೇತ್ರಗಳ ಕಾಣ್ಕೆಗಳು ಪ್ರರಸ್ಪರ ಪ್ರಭಾವಿಸುತ್ತ, ಮನುಷ್ಯ ಪ್ರಜ್ಞೆಯ ಆಳ ಅಗಲಗಳನ್ನು ಪರಿಶೀಲಿಸುತ್ತ ಒಂದು ಅನುಭವವಿಶ್ವವನ್ನೇ ಸೃಷ್ಟಿಸಿಬಿಡುತ್ತದೆ.

ಕನ್ನಡದಲ್ಲಿ ಅವರ ಹಾಗೆ ವಿವಿಧ ಕಾವ್ಯಪ್ರಯೋಗಗಳನ್ನು ಮಾಡಿದ, ಸರ್ವೇ ಸಾಮಾನ್ಯ ಸಂಗತಿಗಳಲ್ಲೂ ಕಾವ್ಯವನ್ನು ತೋರಿಸಿಕೊಟ್ಟ ಇನ್ನೊಬ್ಬ ಕವಿಯಿಲ್ಲ. ಅವರ ಕಾವ್ಯದಲ್ಲಿ ಜಗತ್ತು ಹೊರಗಿರುವುದಿಲ್ಲ; ನಮ್ಮೊಳಗೇ ಇರುತ್ತದೆ. ಆ ಜಗತ್ತು ಕವಿತೆಯಂತೆ ಕಾಣಿಸದೆ ಕವಿತೆಯಾಗಿರುವ ಜಗತ್ತು. ಈ ಸಾಲುಗಳನ್ನು ನೋಡಿ:

ಕವಿತೆ ಸಂತೆಯಲ್ಲಿ ಮಿಂಚುವ ಬೇರೆ ಊರಿನ ಚೆಲುವೆಯ ಹಾಗೆ
ಒಮ್ಮೆ ಕಾಣಿಸಿ ಮಾಯವಾಗುತ್ತಾಳೆ.
ಅವಳ ಜಾಡು ಹಿಡಿದವರಿಗೆ ಏನೂ ತೋರದು
ಮಣಿಸರಕಿನ ಅಂಗಡಿ ಸಾಲುಗಳಲ್ಲದೆ.
ಅವಳ ಸ್ಮೃತ ಮಾತ್ರ ಕಾಡುವುದು, ಅಷ್ಟು ಸಾಲದೇ?