- ಎಲ್ಲರ ಕಣ್ಣಿಗೆ ಮಾಯಾಗನ್ನಡಿ - ಜುಲೈ 23, 2020
- ಮಾಯಾಗನ್ನಡಿ-ವಿಡಿಯೊ - ಜುಲೈ 24, 2020
- ನಂಬರ್ ಸೇವ್ ಮಾಡದೆ ವಾಟ್ಸಾಪ್ ಮಾಡುವುದು ಹೇಗೆ? - ಮೇ 26, 2020
ಮನುಷ್ಯನಾಗುಳಿಯಲು ತಂತ್ರಜ್ಞಾನದ ಸವಾಲು, ಪರಿವರ್ತನೆ ಸಾಲು, ಸಾಲು…
ಈಗಾಗಲೇ ಬಳಕೆಯಲ್ಲಿರುವ ಮತ್ತು ಮುಂದಿನ ದಿನಗಳಲ್ಲಿ ಬರಲಿರುವ ತಂತ್ರಜ್ಞಾನಗಳು ಯಾವುವು? ಮನುಷ್ಯರಾಗಿ ನಾವು ಎದುರಿಸಬೇಕಿರುವ ಸವಾಲುಗಳೇನು? ಯಾವ ತಂತ್ರಜ್ಞಾನ ಯಾವ ರೀತಿಯ ಬದಲಾವಣೆಯನ್ನು ತರಲಿದೆ? ಮುಂತಾದ ವಿಚಾರಗಳ ಚರ್ಚೆಗೆ ಈ ಸರಣಿ ಆರಂಭಿಸುತ್ತಿದ್ದೇವೆ. ಮುಂದಿನ ಕ್ರಾಂತಿಕಾರಿ ತಂತ್ರಜ್ಞಾನಗಳ ಕುರಿತ ಸರಣಿ ಲೇಖನಗಳನ್ನು ಡಾ.ರಮೇಶ್ ನಿಂಬೆಮರದಹಳ್ಳಿ ಅವರು ನಿಮ್ಮ ಮುಂದಿಡಲಿದ್ದಾರೆ. ಆ ಸರಣಿಯ ಮೊದಲ ಲೇಖನ ಇದು. ಇಲ್ಲಿನ ವಾದಗಳಿಗೆ ಪ್ರತಿಯಾಗಿ ಇಲ್ಲವೇ ಸಹಮತವಾಗಿ ನೀವೂ ಲೇಖನಗಳನ್ನು ಬರೆಯುವ ಮೂಲಕ ಈ ಸಂವಾದಲ್ಲಿ ಭಾಗವಹಿಸಬಹುದು. -ಸಂಪಾದಕ
ಮನುಷ್ಯನ ಬದುಕು ಹೊರಳು ಹಾದಿಯಲ್ಲಿದೆ. ಹಿಂದೆಂದೂ ಕಾಣದಂತಹ ಪರಿವರ್ತನೆಗಳು ಇವತ್ತು ಮನುಷ್ಯನನ್ನು ಅಪ್ಪಳಿಸುತ್ತಿವೆ. ಇಂಥ ಅಗಾಧ ಪರಿವರ್ತನೆಗಳು ಬಹುತೇಕ ವಿಜ್ಞಾನ, ತಂತ್ರಜ್ಞಾನದಿಂದ ಪ್ರೇರಿತವಾದವು ಎನ್ನವುದನ್ನು ಗಮನಿಸಬೇಕು. ವೈಜ್ಞಾನಿಕ ಕ್ರಾಂತಿ ಆರಂಭವಾದಾಗಿನಿಂಧ ಇಂದಿನವರೆಗೆ ವಿಶ್ವದಲ್ಲಿ ಹಲವು ರೀತಿಯ ಪರಿವರ್ತನೆಗಳು ಜರುಗಿವೆ. ಆದರೆ ಮುಂದಿನ ದಿನಗಳಲ್ಲಿ ಬರುವ ಹೊಸ ಆವಿಷ್ಕಾರಗಳು ಮತ್ತು ಅದರಿಂದ ಉದಯಿಸುವ ತಂತ್ರಜ್ಞಾನ ಕಲ್ಪಿಸಿಕೊಳ್ಳಲೂ ಸಾಧ್ಯವಾಗದಂತಹ ಬದಲಾವಣೆಗಳನ್ನು ತರಲಿವೆ.
ಈ ತಂತ್ರಜ್ಞಾನಗಳು ಮನುಷ್ಯನನ್ನು ಶಾಶ್ವತವಾಗಿ ಪರಿವರ್ತನೆ ಮಾಡುತ್ತವೆ; ಮನುಷ್ಯ ಯಾವ ಕಾರಣಕ್ಕೂ ಹಿಂದೆ ತಿರುಗಿಬಾರದಷ್ಟು ದೂರಕ್ಕೆ ಕರೆದೊಯ್ಯುತ್ತವೆ; ಈ ತಂತ್ರಜ್ಞಾನ ಇಡೀ ವಿಶ್ವದಲ್ಲಿ ಎಲ್ಲ ಜೀವಿಗಳಿಗಿಂತ ಮನುಷ್ಯ ಅನನ್ಯ ಎನ್ನುವ ಮಾತನ್ನು ಸುಳ್ಳಾಗಿಸುತ್ತವೆ; ಹುಟ್ಟು ನಮ್ಮ ಆಯ್ಕೆಯಲ್ಲ. ಸಾವನ್ನು ಯಾರೂ ತಡೆಯಲಾಗುವುದಿಲ್ಲ ಎನ್ನುವ ಮಾತುಗಳೂ ಸುಳ್ಳಾಗುವುದು ದಿಟ. ಎಂದರೆ, ಹುಟ್ಟನ್ನೂ ನಾವೇ ನಿರ್ಧರಿಸಬಹುದು, ಸಾವನ್ನೂ ತಡೆಯಬಹುದು ಎಂದರ್ಥ.
ಮನುಷ್ಯ ತನ್ನ ಬದುಕು ಕಟ್ಟಿಕೊಳ್ಳಲಿಕ್ಕೆ, ಸಮಾಜವನ್ನು ಸುಸ್ಥಿತಿಯಲ್ಲಿಡುವ ಉದ್ದೇಶದಿಂದ ರೂಪಿಸಿಕೊಂಡ ಎಲ್ಲ ಸಾಮಾಜಿಕ ಕಟ್ಟುಪಾಡುಗಳು, ನಿರ್ಬಂಧಗಳು, ಸಂಪ್ರದಾಯ, ಆಚರಣೆ, ನಂಬಿಕೆ ಎಲ್ಲವೂ ಬುಡಮೇಲಾಗುವುದು ಖರೆ. ಯಂತ್ರಗಳಿಗೂ ಬುದ್ಧಿವಂತಿಕೆ ತುಂಬುವ ಆ ಮೂಲಕ ಮನುಷ್ಯನಷ್ಟೇ ಬುದ್ಧಿವಂತನಲ್ಲ ಎಂದು ಸಾರಲಿರುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವ ಕೃತಕ ಬುದ್ಧಿವಂತಿಕೆ ಎಲ್ಲಕ್ಕೂ ಬುದ್ಧಿ ತುಂಬಲು ಹೊರಟಿದೆ. ಯಂತ್ರಗಳೆಂದರೆ ಕೇವಲ ರೋಬಾಟ್‌ಗಳಲ್ಲ ಬದಲಿಗೆ ನಮ್ಮ ಕಾರು, ಬೈಕು, ಲಾರಿ, ಬಸ್ಸು, ವಿಮಾನ, ಡ್ರೋನ್, ಮನೆಯಲ್ಲಿರುವ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು – ಹೀಗೆ ಯಾವುದಕ್ಕಾದರೂ ಬುದ್ಧಿವಂತಿಕೆ ತುಂಬಬಹುದು. ಇದರ ಅನುಕೂಲ, ಅಪಾಯಗಳು ಸಾಕಷ್ಟಿವೆ ಎನ್ನುವುದು ಗೊತ್ತಿದ್ದರೂ ಈ ಅನುಕೂಲ, ಅಪಾಯಗಳ ಸ್ವರೂಪ ಮತ್ತು ಆಳ ಇನ್ನೂ ನಮ್ಮ ಅಳವಿಗೆ ಬಂದಿಲ್ಲ.
ಯಾವುದೇ ವಸ್ತುವನ್ನು ಕಷ್ಟಪಟ್ಟು ತಯಾರಿಸುವುದು ಬಿಡಿ, ಅವುಗಳನ್ನು ನಾವು ಒಮ್ಮೆಗೇ ರೂಪಿಸಿಕೊಡುತ್ತೇವೆ ಎನ್ನತ್ತಿದ್ದಾರೆ 3ಡಿ ಪ್ರಿಂಟರ್ ರೂಪಿಸಿರುವ ವಿಜ್ಞಾನಿಗಳು. ಇವರು ಹೇಳುವ ಹಾಗೆ, 3ಡಿ ಪ್ರಿಂಟರ್‌ನಿಂದ ಯಾವುದೇ ವಸ್ತುವನ್ನು ಇಡಿಯಾಗಿ ಪ್ರಿಂಟ್ ಮಾಡಬಹುದು. ತುಂಬಾ ಸಂಕೀರ್ಣ ವಸ್ತುವಾದರೆ ಬಿಡಿ ಬಿಡಿ ವಸ್ತುಗಳನ್ನು ರೂಪಿಸಿ ಅವುಗಳನ್ನು ಜೋಡಿಸಬಹುದು. ಉದಾಹರಣೆಗೆ ಒಂದು ಕಂಪ್ಯೂಟರ್ ಕಲ್ಪಿಸಿಕೊಳ್ಳಿ. ಒಂದು ಮಾನೀಟರ್ ಒಳಗೆ ಅಸಂಖ್ಯ ಬಿಡಿ ಭಾಗಗಳಿರುತ್ತವೆ. ಒಂದೊಂದನ್ನೂ ಪ್ರತ್ಯೇಕವಾಗಿ ರೂಪಿಸಿ ಎಲ್ಲವನ್ನೂ ಸೂಕ್ತವಾಗಿ ಜೋಡಿಸಲಾಗಿರುತ್ತದೆ. ಆದರೆ, ಇಡೀ ಮಾನೀಟರ್ ಅನ್ನು ಒಂದೇ ಸಾರಿಗೆ ಪ್ರಿಂಟ್ ತೆಗೆದುಬಿಡಬಹುದು ಎಂದರೆ? ಹೌದು 3ಡಿ ಪ್ರಿಂಟರ್‌ನಿಂದ ಇದು ಸಾಧ್ಯ. ಹೀಗೆ ಬಿಡಿ ಬಿಡಿ ಪ್ರಯತ್ನಗಳನ್ನು ಪುಡಿಗುಟ್ಟಿ ಇಡಿಯಾಗಿ ರೂಪಿಸುವುದು ಇದರ ಗುರಿ. 3ಡಿ ಪ್ರಿಂಟರ್‌ನಿಂದ ವಸ್ತುಗಳನ್ನು ಮಾತ್ರವಲ್ಲ, ಆಹಾರವನ್ನೂ, ಕೊನೆಗೆ ಅಂಗಾಂಗಗಳನ್ನೂ ರೂಪಿಸಬಹುದು ಎನ್ನುವುದು ವಿಜ್ಞಾನಿಗಳ ವಾದ. ಆಹಾರ ತಯಾರಿಸುವ 3ಡಿ ಪ್ರಿಂಟರ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ಇನ್ನು ಅಂಗಾಂಗ ತಯಾರಿಕೆಯೂ ಲ್ಯಾಬ್ ಹಂತದಲ್ಲಿದೆ.
ಇದೇವೇಳೆ ಜಿನೆಟಿಕಲ್ ಎಂಜಿನಿಯರಿಂಗ್ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ. ನೀವು ಅಕ್ಷರಗಳನ್ನು ತಿದ್ದುವ ಹಾಗೆ ನಾವು ಜೀನ್‌ಗಳಲ್ಲಿರುವ ಅಕ್ಷರಗಳನ್ನೇ ತಿದ್ದಬಲ್ಲವೆ ಎಂದು ಜೀವ ವಿಜ್ಞಾನಿಗಳು ಹೇಳುತ್ತಿದ್ದಾರೆ. ಇದಕ್ಕಾಗಿ ಅವರು ಯಾವುದೇ ಜೀನ್ ಅನ್ನು ತಿದ್ದುವುದಕ್ಕೆ ನೆರವಾಗುವ ಕ್ರಿಸ್ಪರ್ ಆರ್ –ಕ್ಯಾಸ್9 ಎನ್ನುವ ಸಾಧನವನ್ನು ಅಭಿವೃದ್ಧಪಡಿಸಿದ್ದಾರೆ. ಮುಂದಿನ ಕೆಲ ವರ್ಷಗಳಲ್ಲಿ ಮನುಷ್ಯನ ಜೀನ್‌ಗಳನ್ನೂ ಬೇಕಾದ ರೀತಿಯಲ್ಲಿ ಮಾರ್ಪಡಿಸಲು ಸಾಧ್ಯ. ಈ ತಂತ್ರಜ್ಞಾನದ ಶಕ್ತಿ, ಗುರಿಯನ್ನು ಊಹಿಸಿಕೊಂಡರೆ ತಲೆ ತಿರುಗುವುದು ಗ್ಯಾರಂಟಿ.
ಇದಕ್ಕೆ ಪೂರಕವಾಗಿ ಸಿಂಥೆಟಿಕ್ ಬಯಾಲಜಿ ಎನ್ನುವ ಜೀವವಿಜ್ಞಾನದ ಶಾಖೆಯೊಂದು ಜೀವವನ್ನು ಹೊಸದಾಗಿ ಸೃಷ್ಟಿ ಮಾಡಲು ಪಣ ತೊಟ್ಟಿದೆ. ಅದರ ಮೊದಲ ಹೆಜ್ಜೆಯನ್ನೂ ಈಗಾಗಲೇ ಇಟ್ಟಾಗಿದೆ. ಮುಂದಿನ ದಿನಗಳಲ್ಲಿ ನಾವು ಕಂಡು, ಕೇಳರಿಯರದ ಪ್ರಾಣಿ, ಪಕ್ಷಿಗಳನ್ನು ನಾವು ನೋಡುವುದು ನಿಶ್ಚಿತ.
ಬ್ರೈನ್ ಕಂಪ್ಯೂಟರ್ ಇಂಟರ್‌ಫೇಸ್ ಎನ್ನುವ ಹೊಸ ಸಾಧ್ಯತೆಯೊಂದು ಈಗ ಕಣ್ಬಿಡುತ್ತಿದೆ. ಇದು ಮನುಷ್ಯನನ್ನು ಪೂರ್ತಿಯಾಗಿ ಬದಲಾಯಿಸುತ್ತದೆ. ಯಾವುದೇ ಎಲೆಕ್ಟ್ರಾನಿಕ್ ವಸ್ತುವಿನೊಂದಿಗೆ ಮನುಷ್ಯ ವಯರ್‌ಗಳಿಲ್ಲದೆ ಸಂಪರ್ಕಿಸುವುದು ಮತ್ತು ನಿಯಂತ್ರಿಸುವುದು ಇದರಿಂದ ಸಾಧ್ಯ. ಇದನ್ನು ಊಹಿಸಿಕೊಳ್ಳಿ: ನಿಮ್ಮ ಕಾರು, ಬೈಕ್, ಮನೆಯಲ್ಲಿರುವ ಯಾವುದೇ ವಸ್ತುವನ್ನು ನಿಮ್ಮ ಮನಸ್ಸಿನಿಂದಲೇ ನಿಯಂತ್ರಿಸಬಹುದು. ನಿಮ್ಮ ನೆನಪುಗಳನ್ನು ಹಾರ್ಡ್‌ಡಿಸ್ಕ್‌ನಲ್ಲಿ ಸ್ಟೋರ್ ಮಾಡಬಹುದು. ಹೊಸದನ್ನು ನಿಮ್ಮ ತಲೆಗೆ ತುಂಬಿಕೊಳ್ಳಬಹುದು. ರಾತ್ರಿ ಕಂಡ ಕನಸುಗಳನ್ನು ಹಗಲು ಕಂಪ್ಯೂಟರ್‌ನಲ್ಲಿ ನೋಡಬಹುದು. ಅಷ್ಟೇ ಏಕೆ ಒಬ್ಬರಿರುವ ನೀವು ಹಲವರಾಗಿ ಜೀವಿಸಬಹುದು. ಇದು ಕೇಳುವುದಕ್ಕೇ ಆಶ್ಚರ್ಯ ಎನಿಸಿದರೂ ಮುಂದೆ ನಿಜವಾಗಲಿದೆ ಎನ್ನುತ್ತಿರುವವರು ಬಿಸಿಐ ತಜ್ಞರು.
ಇವುಗಳಾಚೆಗೆ ಇಂಟರ್ನೆಟ್ ಆಫ್ ಥಿಂಗ್ಸ್ ಎನ್ನವ ತಂತ್ರಜ್ಞಾನವೊಂದು ಎಲ್ಲ ಭೌತಿಕ ವಸ್ತುಗಳನ್ನೂ ಇಂಟರ್ನೆಟ್‌ಗೆ ಸಂಪರ್ಕಿಸಬಹುದು ಎನ್ನುತ್ತಿದೆ. ಈಗಿರುವ ಸೂಪರ್ ಕಂಪ್ಯೂಟರ್‌ಗಳ ಸಾವಿರ ಪಟ್ಟು ವೇಗವಾಗಿ ಕೆಲಸ ಮಾಡಬಲ್ಲದು ಎನ್ನುವ ಕ್ಯಾಂಟಮ್ ಕಂಪ್ಯೂಟರ್ ಸಿದ್ಧವಾಗುತ್ತಿದೆ. ಕಳ್ಳತನಕ್ಕೆ ಅವಕಾಶವೇ ಇಲ್ಲದ, ಹ್ಯಾಕರ್‌ಗಳಿಗೆ ಕೆಲಸ ಇಲ್ಲದಂತೆ ಮಾಡಬಲ್ಲ ಬ್ಲಾಕ್‌ಚೈನ್ ತಂತ್ರಜ್ಞಾನ ಈಗಾಗಲೇ ಮನೆ ಬಾಗಿಲಿಗೆ ಬಂದಿದೆ. ಅಮೆಜಾನ್ ಕಾಡಿನಲ್ಲಿದ್ದರೂ, ಥಾರ್ ಮರುಭೂಮಿಯಲ್ಲಿದ್ದರೂ ವೇಗವಾಗಿ ಇಂಟರ್ನೆಟ್ ನೀಡಲು ಇಲಾನ್ ಮಸ್ಕ್ ಕಾರ್ಯಪ್ರವೃತ್ತನಾಗಿದ್ದಾನೆ. ಮಂಗಳನಲ್ಲಿ ಮನುಷ್ಯರನ್ನಿಳಿಸುವುದೂ ಈತನ ಬಹುದೊಡ್ಡ ಕನಸು. ಮತ್ತೊಂದೆಡೆ, ಮನುಷ್ಯ ದೇಹದೊಳಗೇ ಈಜಬಲ್ಲ ನ್ಯಾನೋ ಬಾಟ್‌ಗಳು ಸಿದ್ಧಗೊಳ್ಳುತ್ತಿವೆ.
ಇಂಥ ಹತ್ತು ಹಲವು ಕ್ರಾಂತಿಕಾರಿ ತಂತ್ರಜ್ಞಾನಗಳು ಮುಂಚೂಣಿಗೆ ಬರಲು ಕಾಯುತ್ತಿವೆ. ಜನರ ಬದಕುನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿವೆ. ಇನ್ನು ಕೆಲ ದಶಕಗಳು ಮಾತ್ರ ಮನುಷ್ಯನ ದಿನಗಳು. ಆಮೇಲೇನಿದ್ದರೂ ಮ್ಯಾನ್ ವರ್ಸಸ್ ಮೆಷಿನ್ ಇಲ್ಲವೆ ಮ್ಯಾನ್ ಮತ್ತು ಮೆಷಿನ್ ಎನ್ನುವ ಚರ್ಚೆ ಮಾತ್ರ ಅರ್ಥ ಪಡೆಯುತ್ತದೆ. ಉಳಿದಿದ್ದೆಲ್ಲವೂ ವ್ಯರ್ಥ.
ಹೆಚ್ಚಿನ ಬರಹಗಳಿಗಾಗಿ
ಸಿಂಪಲ್ಲಾಗಿ ಬ್ಲಾಕ್ ಚೈನ್ ತಂತ್ರಜ್ಞಾನದ ಬಗ್ಗೆ
ಮಂಗಳನ ಅಂಗಳದಲ್ಲಿ ಪರ್ಸಿವರೆನ್ಸ್!
ಮಾತೃಭಾಷೆ ಮತ್ತು ಶಿಕ್ಷಣ