ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎಲ್ಲರ ಕಣ್ಣಿಗೆ ಮಾಯಾಗನ್ನಡಿ

ಜಗತ್ತಿಗೆ ಹಲವು ಸಂಕಷ್ಟಗಳನ್ನು ತಂದೊಡ್ಡಿರುವ ಕೋವಿಡ್‌-19 ಹೊಸ ಸತ್ಯಗಳನ್ನೂ ನಮ್ಮೆದುರು ತೆರೆದಿಟ್ಟಿದೆ. ಓದು ಬರಹ ಕಲಿಯಲು ಶಾಲೆಯೊಂದೇ ತಾಣವಲ್ಲ ಎನ್ನುವುದೀಗ ಮನವರಿಕೆಯಾಗುತ್ತಿದೆ; ಕೆಲಸ ಮಾಡಲು ಕಚೇರಿಯೇನೂ ಅನಿವಾರ್ಯವಲ್ಲ ಎನ್ನುವುದೂ ಸಾಬೀತಾಗುತ್ತಿದೆ;
ಡಾ. ರಮೇಶ್‌
ಫಾಲೋ ಮಾಡಿ

ಜಗತ್ತಿಗೆ ಹಲವು ಸಂಕಷ್ಟಗಳನ್ನು ತಂದೊಡ್ಡಿರುವ ಕೋವಿಡ್‌-19 ಹೊಸ ಸತ್ಯಗಳನ್ನೂ ನಮ್ಮೆದುರು ತೆರೆದಿಟ್ಟಿದೆ. ಓದು ಬರಹ ಕಲಿಯಲು ಶಾಲೆಯೊಂದೇ ತಾಣವಲ್ಲ ಎನ್ನುವುದೀಗ ಮನವರಿಕೆಯಾಗುತ್ತಿದೆ; ಕೆಲಸ ಮಾಡಲು ಕಚೇರಿಯೇನೂ ಅನಿವಾರ್ಯವಲ್ಲ ಎನ್ನುವುದೂ ಸಾಬೀತಾಗುತ್ತಿದೆ; ದೇವರ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಲು ದೇವಸ್ಥಾನ, ಮಸೀದಿ, ಚರ್ಚುಗಳಿಗೇ ಹೋಗಬೇಕಿಲ್ಲ ಎನ್ನುವುದೂ ಜನರಿಗೆ ಅರಿವಾಗುತ್ತಿದೆ; ಅಷ್ಟೇ ಏಕೆ, ಸಭೆ-ಸಮಾರಂಭ, ದೊಡ್ಡಮಟ್ಟದ ರ‍್ಯಾಲಿಗಳನ್ನು ನಡೆಸಲು ಕೂಡ ಸಾವಿರಾರು ಇಲ್ಲವೇ ಲಕ್ಷಾಂತರ ಜನರನ್ನು ಒಂದೆಡೆ ಕಲೆಹಾಕಬೇಕಿಲ್ಲ ಎನ್ನವುದೂ ನಮಗೆ ಗೊತ್ತಾಗುತ್ತಿದೆ. ಇಂಥ ನೂರಾರು ಹೊಸ ಸಾಧ್ಯತೆ, ಸತ್ಯಗಳನ್ನು ಮನವರಿಕೆ ಮಾಡಿಕೊಟ್ಟಿದು ಕೊರೊನಾ ವೈರಸ್‌. ಆದರೆ, ಈ ಸಾಧ್ಯತೆಗಳನ್ನು ಆಗು ಮಾಡಿದ್ದು ತಂತ್ರಜ್ಞಾನ. ಇದೀಗ ಇದೇ ತಂತ್ರಜ್ಞಾನ ಈ ಎಲ್ಲ ಸಾಧ್ಯತೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಅಣಿಯಾಗಿದೆ. ಎರಡು ಆಯಾಮಗಳಲ್ಲಿರುವ ಬದುಕನ್ನು ಮೂರು ಆಯಾಮದಲ್ಲಿ ಕಣ್ಣ ಮುಂದೆ ತಂದು ನಿಲ್ಲಿಸಲಿದೆ. ಇಂಥ ಕ್ರಾಂತಿಕಾರಕ ಬದಲಾವಣೆಗಳಿಗೆ ಮುನ್ನುಡಿ ಬರೆದಿರುವುದು ಎಂ ಆರ್‌ ಅಥವಾ ‘ಮಿಕ್ಸ್‌ಡ್ ರಿಯಾಲಿಟಿ’ (ಮಿಶ್ರಿತ ವಾಸ್ತವ). ಈ ತಂತ್ರಜ್ಞಾನವನ್ನು ಮೂರ್ತೀಕರಿಸಿ ರಿಲಯನ್ಸ್‌ ಜಿಯೊ ಇದೀಗ ಸ್ಮಾರ್ಟ್‌ ಗ್ಲಾಸ್‌ ಬಿಡುಗಡೆ ಮಾಡಿದೆ.

ಮಿಕ್ಸ್‌ಡ್ ರಿಯಾಲಿಟಿ ತಂತ್ರಜ್ಞಾನದ ಸಾಧ್ಯತೆಗಳು ಅನಂತವಾಗಿರುವುದರಿಂದ ತಂತ್ರಜ್ಞಾನ ದೈತ್ಯ ಕಂಪನಿಗಳು ಇದನ್ನು ಆಗು ಮಾಡುವ ಉಪಕರಣಗಳ ಅಭಿವೃದ್ಧಿಯಲ್ಲಿ ರೇಸಿಗಿಳಿದಿವೆ. ಗೂಗಲ್‌, ಮೈಕ್ರೊಸಾಫ್ಟ್‌, ಫೇಸ್‌ಬುಕ್‌, ಅಮೆಜಾನ್‌, ಸೋನಿ, ಸ್ಯಾಮ್ಸಂಗ್‌, ಸ್ನ್ಯಾಪ್‌ಚಾಟ್‌, ಡೆಲ್‌, ಲೆನೊವೊ ಮುಂತಾದ ದೈತ್ಯ ಟೆಕ್‌ ಕಂಪನಿಗಳು ಎಂ ಆರ್‌ ಉಪಕರಣಗಳನ್ನು ಅಭಿವೃದ್ಧಿಪಡಿಸಿ, ಅವುಗಳ ಸುಧಾರಣೆಯಲ್ಲಿ ತೊಡಗಿವೆ. ಜಿಯೊ ಗ್ಲಾಸ್‌ ಭಾರತದ ಮಟ್ಟಿಗೆ ಮೊದಲ ದೇಸಿ ಸ್ಮಾರ್ಟ್‌ ಗ್ಲಾಸ್‌.

ಎಂ ಆರ್‌ ಅಂದ್ರೇನು? ಯಾಕಿದು ಅತಿ ಮುಖ್ಯ?

ಈ ದೃಶ್ಯವನ್ನು ಕಲ್ಪಿಸಿಕೊಳ್ಳಿ. ಸರಕಾರಿ ಶಾಲೆಯಲ್ಲಿರುವ ಮಕ್ಕಳು ಕಣ್ಣಿಗೆ ಕನ್ನಡಕ ಹಾಕಿಕೊಂಡು ಕುಳಿತ್ತಿದ್ದಾರೆ. ತಲೆಯನ್ನು ಅತ್ತಿಂದಿತ್ತಾ ಅಲ್ಲಾಡಿಸುತ್ತಾ, ಅವರಿಗೇ ಅರಿವಿಲ್ಲದೆ ಕೈಗಳಲ್ಲಿಏನನ್ನೋ ಹಿಡಿದವರಂತೆ, ಏನನ್ನೋ ಮುಟ್ಟಿದವರಂತೆ ವರ್ತಿಸುತ್ತಿದ್ದಾರೆ. ‘ಅಲ್ನೋಡು, ಇಲ್ನೋಡು’ ಅಂತ ಒಬ್ಬರಿಗೊಬ್ಬರು ಕಿರುಚುತ್ತಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಶಿಕ್ಷಕರು, ”ನೋಡಿದ್ರಾ ಮಕ್ಳೇ ಭೂಮಿ, ಅದರ ಗರ್ಭ, ಕವಚ, ಲಾವಾ, ವಿವಿಧ ಖಂಡಗಳು ಎಲ್ಲವನ್ನೂ ನೋಡಿದ್ರಲ್ಲ?,” ಎಂದು ಹೇಳಿ ಪಾಠ ಮುಂದುವರಿಸುತ್ತಾರೆ. ಆಗ ಮಕ್ಕಳು ರಿಯಾಲಿಟಿಗೆ ಮರಳುತ್ತಾರೆ.

ಹೀಗೆ ರಿಯಾಲಿಟಿ (ವಾಸ್ತವ) ಮತ್ತು ವರ್ಚುವಲ್‌ (ಮಿಥ್ಯೆ) ನಡುವೆ ಬೇಧವಿಲ್ಲದಂತೆ ಕಲಿಕೆಗೆ ಅವಕಾಶ ಕಲ್ಪಿಸುವುದೇ ಮಿಕ್ಸ್ ಡ್ ರಿಯಾಲಿಟಿ ಅಥವಾ ಎಂ ಆರ್‌ ತಂತ್ರಜ್ಞಾನ. ಇಲ್ಲಿವಿದ್ಯಾರ್ಥಿಗಳು ವಾಸ್ತವದಲ್ಲಿದ್ದೂ ಮಿಥ್ಯಾ ಲೋಕದಲ್ಲಿಪಯಣಿಸುತ್ತಾರೆ. ಮಿಥ್ಯಾ ಲೋಕದ ಒಳಗೂ ವಾಸ್ತವವನ್ನು ಕಾಣುತ್ತಾರೆ. ಮಿಥ್ಯಾ ಜಗತ್ತು 3ಡಿ ರೂಪದಲ್ಲಿಅವರ ಕಣ್ಣೆದುರೇ ತೆರೆದುಕೊಳ್ಳುತ್ತದೆ. ಅದೇ ಸಂದರ್ಭದಲ್ಲಿಅವರಿಗೆ ಎದುರಿಗಿರುವ ಶಿಕ್ಷಕರೂ ಕಾಣುತ್ತಾರೆ. ಅವರ ಮುಂದೆಯೇ ಶಿಕ್ಷಕರು ಹೇಳುತ್ತಿರುವ ವಿಚಾರಗಳೂ ಕೂಡ 3ಡಿ ರೂಪದಲ್ಲಿ ಹರಡಿಕೊಳ್ಳುತ್ತವೆ.

ಮಿಥ್ಯೆಯಲ್ಲಿ ಮುಳುಗಿಸುವ ವಿ.ಆರ್‌

ಮಿಕ್ಸ್‌ಡ್ ರಿಯಾಲಿಟಿ (ಎಂ ಆರ್‌) ಹೆಸರೇ ಹೇಳುವ ಹಾಗೆ ಇದು ವಾಸ್ತವ ಮತ್ತು ಮಿಥ್ಯೆಗಳ ಸಮ್ಮಿಶ್ರಿತ ಸ್ಥಿತಿ. ಎಂ ಆರ್‌ ಅನ್ನು ತಿಳಿಯುವ ಮೊದಲು ವರ್ಚುವಲ್‌ ರಿಯಾಲಿಟಿ (ಮಿಥ್ಯಾ ವಾಸ್ತವ) ಮತ್ತು ಆಗ್ಮೆಂಟೆಡ್‌ ರಿಯಾಲಿಟಿ (ವರ್ಧಿತ ವಾಸ್ತವ) ತಂತ್ರಜ್ಞಾನಗಳನ್ನು ಗ್ರಹಿಸಿದರೆ ಎಂ ಆರ್‌ ಸುಲಭವಾಗಿ ಅನುಭವೇದ್ಯವಾಗುತ್ತದೆ. ರಿಯಾಲಿಟಿ ಎಂದರೆ ಸರಳವಾಗಿ ನಮ್ಮೆದುರು ಇರುವ ಜಗತ್ತು. ಈ ವಾಸ್ತವ ನಕಲಿ ರೂಪ ತಾಳಿದರೆ ಅದು ಮಿಥ್ಯಾ ವಾಸ್ತವ. ಇದನ್ನೇ ತಂತ್ರಜ್ಞಾನ ಪರಿಭಾಷೆಯಲ್ಲಿ ವರ್ಚುವಲ್‌ ರಿಯಾಲಿಟಿ ಎಂದು ಕರೆಯಲಾಗುತ್ತದೆ.

ವಾಸ್ತವದ ಗ್ರಹಿಕೆಯನ್ನು ವೃದ್ಧಿಸುವ ಎ .ಆರ್‌

ಆಗ್ಮೆಂಟೆಡ್‌ ರಿಯಾಲಿಟಿ ಹೆಸರೇ ಹೇಳುವಂತೆ ನಮ್ಮೆದುರಿಗಿರುವ ವಾಸ್ತವ ಜಗತ್ತನ್ನು ಇನ್ನಷ್ಟು ವೃದ್ಧಿಸುವ ತಂತ್ರಜ್ಞಾನ. ನಮ್ಮ ಕಣ್ಣೋಟಕ್ಕೆ ಕಾಣದ್ದನ್ನೂ ತೋರಿಸುವ ಟೆಕ್ನಾಲಜಿ. ಸ್ಮಾರ್ಟ್‌ ಕನ್ನಡಕ ಧರಿಸಿ ನಾವು ಒಂದು ಕಟ್ಟಡ ನೋಡಿದರೆ ಅದರೆ ನಕ್ಷೆ ಪರದೆಯಲ್ಲಿ ತೆರೆಯುತ್ತದೆ. ಕೈಯ್ಯಲ್ಲಿ ಒಂದು ಹಣ್ಣು ಹಿಡಿದಿದ್ದರೆ ಅದರ ಗುಣ ಲಕ್ಷಣ, ಉಪಯೋಗಳನ್ನು ತಿಳಿಯುತ್ತದೆ. ಬೈಕ್‌ನಲ್ಲಿ ಚಲಿಸುತ್ತಿದ್ದರೆ ರಸ್ತೆಯ ರೂಟ್‌ ಮ್ಯಾಪ್‌, ಟ್ರಾಫಿಕ್‌, ಕಾಮಗಾರಿ ಮತ್ತಿತರ ಮಾಹಿತಿಯೂ ಸಿಗುತ್ತದೆ. ಜತೆಗೆ, ಪೆಟ್ರೊಲ್‌ ಬಂಕ್‌, ಹೋಟೆಲ್‌ ಮಾಹಿತಿಯೂ ದೊರೆಯಬಹುದು. ಒಟ್ಟಾರೆ ಈ ಟೆಕ್ನಾಲಜಿ ನೈಜ ದೃಶ್ಯಕ್ಕೆ ಡಿಜಿಟಲ್‌ ಎಲಿಮೆಂಟ್‌ಗಳನ್ನು ಸೇರಿಸುವ ಮೂಲಕ ವಾಸ್ತವದ ನಮ್ಮ ಗ್ರಹಿಕೆಯನ್ನು ವೃದ್ಧಿಸುತ್ತದೆ.

​ವಾಸ್ತವ, ಮಿಥ್ಯೆ ಬೆಸೆಯುವ ಎಂ. ಆರ್

ಇನ್ನು ಮಿಕ್ಸ್‌ಡ್ ರಿಯಾಲಿಟಿ, ವಾಸ್ತವಕ್ಕೆ ಮಿಥ್ಯೆಯನ್ನು ತೊಡಿಸುತ್ತದೆ. ಇಲ್ಲಿ ಬಯಲಲ್ಲೂ 3ಡಿ ಆಕಾರಗಳು ರೂಪು ತಳೆಯುತ್ತವೆ. ಯಾವುದೇ ಭೌತಿಕ ವಾತಾವರಣದಲ್ಲಿ ವರ್ಚುವಲ್‌ ಪರಿಸರ ರೂಪ ತಳೆಯುವುದೇ ಮಿಕ್ಸ್‌ಡ್ ರಿಯಾಲಿಟಿ. ಉದಾಹರಣೆಗೆ ಮನೆಯೊಳಗೇ ನದಿ ಹರಿಯುವಂತೆ, ಅಡುಗೆ ಮನೆಯಲ್ಲಿ ತರಕಾರಿ ತೋಟವೇ ಅರಳಲು ಸಾಧ್ಯ. ಎಂ ಆರ್‌ ಆಧರಿಸಿದ ಸ್ಮಾರ್ಟ್‌ ಗ್ಲಾಸ್‌ನಲ್ಲಿ ಕಂಪ್ಯೂಟರ್‌ನ ಎಲ್ಲ ಕೆಲಸಗಳನ್ನು ಮಾಡಬಹುದು. ಟಿವಿ ನೋಡಬಹುದು. 70 ಎಂ.ಎಂ ಪರದೆಯಲ್ಲಿಸಿನಿಮಾ ನೋಡಬಹುದು. ಬೇಕಾದ ಗೇಮ್‌ಗಳನ್ನು ಆಡಿ ತಳಿಯಬಹುದು. ಕಚೇರಿ ಮೀಟಿಂಗ್‌ಗಳು, ವರ್ಚುವಲ್‌ ಸಭೆ, ಸಮಾರಂಭಗಳನ್ನು ನಡೆಸಬಹುದು. ನೂರಾರು ಜನರೊಂದಿಗೆ ವಿಡಿಯೊ ಕಾನ್‌ಫರೆನ್ಸೂ ನಡೆಸಬಹುದು. ಮನೆಯಲ್ಲೂ ಕಾಡು ಪ್ರಾಣಿಗಳು ನಡೆದಾಡಬಹುದು. ಜಲಚರಗಳು ಹರಿದಾಡಬಹುದು. ಯುದ್ಧವಿಮಾನಗಳು ಮನೆಯಲ್ಲೇ ಬಾಂಬ್‌ ಸುರಿಸಿ ಹೋಗಬಹುದು. ವಿಮಾನವನ್ನೇ ಏರಿರದ ವ್ಯಕ್ತಿಯೊಬ್ಬ ಕಾಕ್‌ ಪಿಟ್‌ನಲ್ಲಿ ಕುಳಿತು ವಿಮಾನ ಹಾರಿಸಬಹುದು; ಯಾವುದೇ ಪ್ರವಾಸಿ ತಾಣವನ್ನು ಕುಳಿತಲ್ಲೇ ನೋಡಿ ಆನಂದಿಸಬಹುದು.

ಕಲಿಯುವವರ ಸೊತ್ತಾಗಲಿರುವ ಕಲಿಕೆ

ಮಿಕ್ಸ್‌ಡ್ ರಿಯಾಲಿಟಿ ತಂತ್ರಜ್ಞಾನವು ಬೋಧನೆ, ಕಲಿಕೆಯ ಕಲ್ಪನೆಯನ್ನೇ ಬುಡಮೇಲು ಮಾಡುತ್ತದೆ. ಬಿಳಿ ಗೋಡೆಯ ಮುಂದೆ ನಿಂತು ‘ನಾವು ಹೀಗಿದ್ದೇವೆ’ ಎಂದು ವಿದ್ಯಾರ್ಥಿಗಳಿಗೆ ವಿವರಿಸುವ ಈಗಿನ ಶಿಕ್ಷಣ ವ್ಯವಸ್ಥೆಗೆ ಫಳ ಫಳ ಹೊಳೆಯುವ ನಿಲುವು ಕನ್ನಡಿಯನ್ನೇ ಕೊಟ್ಟು ‘ನೋಡಿಕೊಳ್ಳಿ’ ಎಂದು ಹೇಳುವಷ್ಟು ಶಕ್ತವಾಗಿದೆ. ಇಲ್ಲಿ ಅತ್ಯಂತ ಶೀಘ್ರ ಕಲಿಕೆ ಸಾಧ್ಯವಿರುವುದರಿಂದ ವರ್ಷಗಳ ಕಲಿಕೆ ಕೆಲ ತಿಂಗಳಲ್ಲೇ ಸಾಧ್ಯ. ಮೂರು ವರ್ಷದ ಡಿಗ್ರಿ, ಎರಡು ವರ್ಷದ ಸ್ನಾತಕೋತ್ತರ ಪದವಿ ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ಗಳೆಲ್ಲ ಮರುವಿನ್ಯಾಸಕ್ಕೊಳಗಾಗಿ ಅವಧಿಯನ್ನು ತಗ್ಗಿಸಿಕೊಳ್ಳುತ್ತವೆ. ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಎಂಬೆಲ್ಲ ಕಲಿಕೆಯ ಹಂತಗಳ ವರ್ಗೀಕರಣ ಅರ್ಥ ಕಳೆದುಕೊಂಡು ಚಿಕ್ಕವರೂ ದೊಡ್ಡ ವಿಷಯವನ್ನು ಸಲೀಸಾಗಿ ಕಲಿಯುವುದು ಸಾಧ್ಯವಾಗುತ್ತದೆ. ಯಾವುದೇ ಭಾಷೆಯ ಕಲಿಕೆ ಸುಲಲಿತವಾಗುತ್ತದೆ. ಒಟ್ಟಿನಲ್ಲಿ ಶಿಕ್ಷಣ ಕಲಿಸುವವರ ಸೊತ್ತಾಗುಳಿಯದೆ ಕಲಿಯುವವರ ಸ್ವತ್ತಾಗುತ್ತದೆ.

ಇಷ್ಟೇ ಅಲ್ಲದೆ, ಕಚೇರಿ ಕೆಲಸಗಳನ್ನು ಮನೆಯಿಂದಲೇ ನಿರ್ವಹಿಸುವುದು ಅನಾಯಾಸವಾಗುತ್ತದೆ. ಎಂಥದೇ ಕ್ಲಿಷ್ಟಕರ ತರಬೇತಿಗಳನ್ನು ನೀರು ಕುಡಿದಷ್ಟು ಸಲೀಸಾಗಿ ಕಲಿಸಬಹುದು. ಇಂಥ ಅನಂತ ಸಾಧ್ಯತೆಗಳನ್ನು ಮಿಕ್ಸ್‌ಡ್ ರಿಯಾಲಿಟಿ ತೆರೆಯುತ್ತದೆ.

​​ಮೆಡಿಕಲ್‌ ಲೋಕದಲ್ಲಿ ಮಿರಾಕಲ್‌ ಸಾಧ್ಯ

ಎಂ ಆರ್‌ ತಂತ್ರಜ್ಞಾನ ವೈದ್ಯಕೀಯ ಲೋಕದಲ್ಲಿ ಪವಾಡಗಳನ್ನೇ ಮಾಡಬಹುದು. ವೈದ್ಯರಿಗೆ ಬೆವರಿಳಿಸುವ, ರೋಗಿಗಳ ಉಸಿರು ನಿಲ್ಲಿಸುವ ಶಸ್ತ್ರಚಿಕಿತ್ಸಾ ಕೊಠಡಿ ಲವಲವಿಕೆಯ ತಾಣವಾಗಿ ಉಸಿರು ತುಂಬುವ ಜಾಗವಾಗಬಹುದು. ಎಂ ಆರ್‌ ತಂತ್ರಜ್ಞಾನದ ಮೂಲಕ ಸರ್ಜನ್‌ಗಳಿಗೆ ದೊರೆಯುವ ಅಪೂರ್ವ 3ಡಿ ದೃಶ್ಯಗಳು ಮತ್ತು ರೋಗದ ನೈಜ ವಿಶ್ಲೇಷಣೆಗಳು ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನೂ ಸರಳವಾಗಿಸಿಬಿಡುತ್ತವೆ. ರೋಗಿಯ ದೇಹಕ್ಕೆ ಧರಿಸಿರುವ ವೇರೆಬಲ್‌ ಡಿವೈಸ್‌ಗಳು ನೀಡುವ ಮಾಹಿತಿ ಆಧರಿಸಿ ವೈದ್ಯರು ಮನೆಯಲ್ಲಿರುವ ರೋಗಿಯ ಪೂರ್ತಿ ರೋಗಲಕ್ಷಣ ತಿಳಿದು ಅಲ್ಲಿಂದಲೇ ಕರಾರುವಕ್ಕಾದ ಚಿಕಿತ್ಸೆಗೆ ಸಲಹೆ ನೀಡಬಹುದು. ಬೆನ್ನುಹುರಿಯಂಥ ಅತ್ಯಂತ ಸಂಕೀರ್ಣ ಜಾಗಗಳಲ್ಲಾಗಿರುವ ಸಮಸ್ಯೆಗಳನ್ನೂ ಬೆಣ್ಣೆಯಿಂದ ಕೂದಲು ತೆಗೆದಂತೆ ಪರಿಹರಿಸಲು ಮಿಕ್ಸಡ್ ರಿಯಾಲಿಟಿ ನೆರವಾಗುತ್ತದೆ.

ಬಸ್‌ ಹತ್ತದೆ ಪ್ರವಾಸ ಹೊರಡಿ

ಪ್ರವಾಸಿ ತಾಣಗಳಿಗೆ ಹೋಗಲು ಸಾಧ್ಯವಾಗದಿದ್ದವರು ಕುಳಿತಲ್ಲೇ ಬೇಕಾದ ಜಾಗವನ್ನು ಸುತ್ತಾಡಿ ಬರಬಹುದು. ತಾಜ್‌ಮಹಲ್‌ನ ಒಂದೊಂದು ಕಂಬವನ್ನೂ ಮುಟ್ಟಿ ಮಾತಾಡಿಸಬಹುದು. ಚೀನಾದ ಗೋಡೆಯ ಮೇಲೆ ಅಡ್ಡಾಡಿ ಬರಲು ಸಾಧ್ಯ. ಈಜಿಫ್ಟ್‌ನ ಪಿರಮಿಡ್ಡುಗಳ ಅಡಿಯಲ್ಲಿ ನಿಂತು ಅಬ್ಬಾ ಎಂದು ಉದ್ಘರಿಸಬಹುದು. ಅಮೆಜಾನ್‌ ಕಾಡಿನಲ್ಲೂ ಸುತ್ತಾಡಿ, ಮೌಂಟ್‌ ಎವರೆಸ್ಟ್‌ ಹತ್ತಿ ಇಳಿಯಬಹುದು. ಸಮುದ್ರದೊಳಗೂ ಸುತ್ತಾಡಿ, ಗ್ರಹ ತಾರೆ ನಕ್ಷತ್ರಗಳನ್ನೂ ಹತ್ತಿರದಿಂದ ಕಂಡು ಬರಬಹುದು. ಸೌರಮಂಡಲವನ್ನುಸುತ್ತಿ ಮಂಗಳನಅಂಗಳದಲ್ಲಿಹೆಜ್ಜೆಯೂರಿಹಿಂತಿರುಗಬಹುದು.

ಜನರೇ ಕಲೆಯದೆ ರ್ಯಾಲಿ ನಡೆಸಿ

ಕೋವಿಡ್‌-19 ಶುರುವಾದಾಗಿನಿಂದ ರಾಜಕಾರಣಿಗಳು ಕೂಡ ಸಭೆ, ಸಮಾರಂಭಗಳನ್ನು ಆನ್‌ಲೈನ್‌ ಮೂಲಕವೇ ಆಯೋಜಿಸುತ್ತಿದ್ದಾರೆ. ವಿಡಿಯೊ ಕಾನ್ಸಫರೆನ್ಸ್‌ಗಳ ಮೂಲಕ ಮೀಟಿಂಗ್‌ಗಳು ನಡೆಯುತ್ತಿವೆ. ಜನರನ್ನೇ ಸೇರಿಸದೆ ಲಕ್ಷಾಂತರ ಕಾರ್ಯಕರ್ತರನ್ನು ಮುಟ್ಟುವಂತೆ ಪದಗ್ರಹಣ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಈ ವಿಷಯದಲ್ಲಿ ಮಾದರಿಯಾಗಿದ್ದಾರೆ. ಬಿಜೆಪಿ ಆಯೋಜಿಸಿದ್ದ ಆನ್‌ಲೈನ್‌ ರ್ಯಾಲಿ ಭಾರತದಾದ್ಯಂತ ಲಕ್ಷಾಂತರ ಜನರನ್ನು ಮುಟ್ಟಿದೆ. ಇವುಗಳನ್ನು ಮೀರಿಸುವಂತೆ ಕೋಟ್ಯಂತರ ಜನ್ನರಾದರೂ ಅವರಿದ್ದಲ್ಲೇ ಮುಟ್ಟಬಲ್ಲ ತಂತ್ರಜ್ಞಾನ ಮಿಕ್ಸ್ಡ್‌ ರಿಯಾಲಿಟಿ. ಮುಂದಿನ ಲೋಕಸಭೆ ಚುನಾವಣೆ ಪ್ರಚಾರ ಕಣ್ಣಿಗೆ ಹಾಕಿದ ಕನ್ನಡಕದ ಎದುರು ಬರುವ ಎಲ್ಲಾ ಸಾಧ್ಯತೆಗಳಿವೆ. ನರೇಂದ್ರ ಮೋದಿಯವರಂತೂ ಈ ವಿಷಯದಲ್ಲಿ ಎಲ್ಲರಿಗಿಂತೂ ಮುಂದಿರುತ್ತಾರೆ ಎಂದು ಈಗಾಗಲೇ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಇಷ್ಟೆಲ್ಲ ಅನಂತ ಸಾಧ್ಯತೆಗಳನ್ನು ಮಿಕ್ಸ್ಡ್‌ ರಿಯಾಲಿಟಿ ತೆರೆದಿಡುತ್ತದೆ. ಅದಕ್ಕೆ ಜಿಯೊ ಗ್ಲಾಸ್‌ ಮುನ್ನುಡಿ ಬರೆದಿದೆ.

​ಭಾರತದ ಶಿಕ್ಷಣದ ದಿಕ್ಕು ಬದಲಿಸುವ ಜಿಯೊ ಗ್ಲಾಸ್‌

ಜಿಯೊ ಗ್ಲಾಸ್‌ ಕ್ರಾಂತಿಕಾರಿ ಮಿಕ್ಸ್‌ಡ್ ರಿಯಾಲಿಟಿ ತಂತ್ರಜ್ಞಾನವನ್ನು ಆಧರಿಸಿ ರೂಪುಗೊಂಡ ಸ್ಮಾರ್ಟ್‌ ಉಪಕರಣ. ಇದು 25 ಗ್ರಾಂ ತೂಕವಿದ್ದು, ಇದರ ಮಧ್ಯದಲ್ಲಿ ಹೈಡೆಫನಿಷನ್‌ ಕ್ಯಾಮರಾವಿರುತ್ತದೆ. ನಮ್ಮೆದುರಿನ ವಾಸ್ತವವನ್ನು ಫೋಟೊ ಇಲ್ಲವೇ ವಿಡಿಯೊ ತೆಗೆದು 3ಡಿ ರೂಪಕ್ಕೆ ಪರಿವರ್ತಿಸಲು ನೆರವಾಗುತ್ತದೆ. ಕಿವಿಯ ಸಮೀಪ ಆಡಿಯೊ ವ್ಯವಸ್ಥೆ ಇದೆ. ಜಿಯೊ ಗ್ಲಾಸ್‌ ವಾಯ್ಸ್ ಕಮಾಂಡ್‌ ಆಧರಿಸಿದ್ದು ಕಾಲ್‌ ಮಾಡುವ, ಇಂಟರ್ನೆಟ್‌ ಬ್ರೌಸ್‌ ಮಾಡುವ, ವಿಡಿಯೊ ನೋಡುವ ಮುಂತಾದ ಯಾವುದೇ ಕೆಲಸಕ್ಕೆ ಮಾತೇ ಕಮಾಂಡ್‌. ಈಗಾಗಲೇ ಈ ಸ್ಮಾರ್ಟ್‌ ಗ್ಲಾಸ್‌ನಲ್ಲಿ 25 ಅಪ್ಲಿಕೇಶನ್‌ಗಳಿದ್ದು, ಮುಂದಿನ ದಿನಗಳಲ್ಲಿಇನ್ನಷ್ಟು ಆ್ಯಪ್‌ಗಳು ಅಭಿವೃದ್ಧಿಯಾಗಲಿವೆ. ಸದ್ಯಕ್ಕೆ ಇದರ ಬೆಲೆ ಅಧಿಕೃತವಾಗಿ ಪ್ರಕಟಗೊಂಡಿಲ್ಲವಾದರೂ ತಜ್ಞರು ಅಂದಾಜಿಸಿರುವಂತೆ ಬೆಲೆ ಸುಮಾರು 14 ಸಾವಿರವಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.