ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚೊಕ್ಕಾಡಿಯರಿಗೆ ಎಂಬತ್ತಂತೆ!

ಚೊಕ್ಕಾಡಿಯರಿಗೆ-ಎಂಬತ್ತಂತೆ... ಈ ಸಂಭ್ರಮದಲ್ಲಿ ಪತ್ರಿಕಾ ರಂಗದ ಉನ್ನತ ಸಾಧಕ , ನಿರೂಪಕ ,ಮಾಹಿತಿಗಳ ಕಣಜ ಎಂದೇ ಹೆಸರಾದ ಎನ್. ಎಸ್.ಶ್ರೀಧರಮೂರ್ತಿ ಅವರು ಬರೆದ ಲೇಖನ..
ಎನ್.ಎಸ್.ಶ್ರೀಧರ ಮೂರ್ತಿ
ಇತ್ತೀಚಿನ ಬರಹಗಳು: ಎನ್.ಎಸ್.ಶ್ರೀಧರ ಮೂರ್ತಿ (ಎಲ್ಲವನ್ನು ಓದಿ)

ಚೊಕ್ಕಾಡಿಯರಿಗೆ ಎಂಬತ್ತಂತೆ!
ಅವರ ಹೆಸರನ್ನು ನಾನು ಮೊದಲಿಗೆ ಕೇಳಿದ್ದು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಮಾಡುತ್ತಿರುವ ಕಾಲದಲ್ಲಿ. ಅವರ ತಮ್ಮ ಸಂತೋಷ ನನ್ನ ಹಾಸ್ಟಲ್ ಮೇಟ್‍, ನಮ್ಮ ಹಾಸ್ಟಲ್‍ನ ನಡುರಾತ್ರಿಯ ವಾಗ್ವಾದಗಳು ಬಹಳ ಪ್ರಸಿದ್ಧವಾಗಿದ್ದವು. ಅದರಲ್ಲಿ ಸಂತೋಷ್ ಮುಖ್ಯ ಪಾತ್ರ ವಹಿಸುತ್ತಿದ್ದರು. ಆಗ ಸುಬ್ರಾಯ ಚೊಕ್ಕಾಡಿಯವರ ಕುರಿತು ಹಲವು ಬೆರಗಿನ ವಿಷಯಗಳು ಬಂದು. ನನಗೆ ಕುತೂಹಲ ಆಸಕ್ತಿ ಎರಡೂ ಮೂಡಿತ್ತು. ನಾನು ಫೈನಲ್ ಇಯರ್‍ ನಲ್ಲಿ ಇರುವಾಗ ಕನ್ನಡ ವಿಭಾಗದಲ್ಲಿ ಕವಿಗೋಷ್ಟಿ, ಅದಕ್ಕೆ ಚೊಕ್ಕಾಡಿಯವರದೇ ಅಧ್ಯಕ್ಷತೆ, ಎಚ್.ಎಸ್.ಶಿವಪ್ರಕಾಶ್ ಮುಖ್ಯ ಅತಿಥಿ, ಆಗ ಬಿಳಿಮಲೆಯವರು ಕ್ಯಾಂಪಸ್‍ನಲ್ಲಿ ನನಗೆ ಬಹು ಪ್ರಿಯರು. ನಿತ್ಯವೂ ಅವರ ಭೇಟಿ ಹೊಸ ಕಲಿಕೆ ಇದ್ದೇ ಇತ್ತು. ನಾನು ಕವಿತೆ ಬರೆಯುವುದು ಅವರಿಗೆ ಗೊತ್ತಿದ್ದರಿಂದ ನನ್ನ ಹೆಸರನ್ನು ಸೇರಿಸಿ ಬಿಟ್ಟರು. ಆದರೆ ನನ್ನ ಪರಿಸ್ಥಿತಿ ಸುಲಭವಿರಲಿಲ್ಲ. ನಾನು ಎಂ.ಎ ಮಾಡುತ್ತಿದ್ದು ಎಕನಾಮಿಕ್ಸ್ ನಲ್ಲಿ ನಮ್ಮ ಪ್ರೊಫೆಸರ್ ಎನ್.ಎಸ್.ಭಟ್ ಅವರಿಗೆ ನಾನು ಅರ್ಥಶಾಸ್ತ್ರ ಕಲಿಯಲೆಂದೇ ಹುಟ್ಟಿದವನು. ಕವಿತೆ ಬರೆದು ಹಾಳಾಗ ಬಾರದು ಎಂಬ ಕಾಳಜಿ! ಅವರನ್ನು ಕೊನೆಗೂ ಬಿಳಿಮಲೆ ಚಮತ್ಕಾರದಿಂದ ಒಪ್ಪಿಸಿ ‘ಮೊಹಿಂದರ್ ಅಮರನಾಥ್’ ಕವಿತೆ ಓದಿದ್ದಾಯಿತು. ನಾನು ಚೊಕ್ಕಾಡಿಯವರನ್ನು ನೋಡಿದ್ದು ಅದೇ ಮೊದಲು. ಈ ಮೊದಲ ಒಡನಾಟದಲ್ಲಿಯೇ ಪ್ರಿಯವಾಗಿ ಬಿಟ್ಟರು. ಹಲವು ವಿಷಯಗಳನ್ನು ಮಾತನಾಡಿದ್ದೆವು, ಮುಂದೆ ಅವರನ್ನು ನೋಡಿದ್ದು ಮೂವತ್ತು ವರ್ಷಗಳ ನಂತರ ಮೊನ್ನೆ ಮೊನ್ನೆ ಎಚ್.ಎಸ್.ವಿ ಅವರ ಮನೆಯಲ್ಲಿ. ಐವತ್ತರ ಚೊಕ್ಕಾಡಿ ಮತ್ತು ಎಂಬತ್ತರ ಚೊಕ್ಕಾಡಿಯವರ ನಡುವೆ ವ್ಯತ್ಯಾಸವಿರಲಿಲ್ಲವೆನ್ನುವುದೇ ನನಗೆ ಬೆರಗು ಮೂಡಿಸಿದ ಸಂಗತಿ.
ಈ ಮೂವತ್ತು ವರ್ಷಗಳಲ್ಲಿ ಒಂದು ಕಾಲದಲ್ಲಿ ನಿತ್ಯವೂ ಭೇಟಿಯಾಗುತ್ತಿದ್ದ ರಾಮಚಂದ್ರ ದೇವ ಅವರಿಂದ ಆಸಕ್ತಿ ಬೆಳೆಸಿ ಕೊಂಡು ಚೊಕ್ಕಾಡಿಯವರ ಕಾವ್ಯವನ್ನು ನಿರಂತರವಾಗಿ ಬೆರಗಿನಿಂದ ಕುತೂಹಲದಿಂದ ಆಸಕ್ತಿಯಿಂದ ಓದುತ್ತಾ ಬಂದಿದ್ದೇನೆ. ಅವರ ಕಾವ್ಯದ ಸಹಜತೆ ನನ್ನನ್ನು ಅಪಾರವಾಗಿ ಸೆಳೆದಿದೆ, ಹಕ್ಕಿಯ ಹಾಡಿನಂತೆ, ನದಿಯ ಕಲರವದಂತೆ, ಮುಗಿಲಿನ ಹನಿಗಳಂತೆ ಅವರದು ಸಹಜ ಕಾವ್ಯ. ಅದನ್ನು ಅಡಿಗ, ಕೆಎಸ್ಎನ್ ಹೀಗೆ ಇನ್ಯಾರಿಗೂ ಹೋಲಿಸುವುದು ಅನಗತ್ಯ ಎಂಬ ಭಾವನೆ ನನ್ನದು. ಅದಕ್ಕೆ ತನ್ನದೇ ಅನನ್ಯತೆ ಇದ್ದೇ ಇದೆ. ಬಹುಪಾಲು ನಮ್ಮ ಕವಿಗಳಿಗಾದಂತೆ ಚೊಕ್ಕಾಡಿಯವರ ಕುರಿತು ಬಂದಿದ್ದೂ ಅಭಿಮಾನದ ಮಾತುಗಳೇ! ಆದರೆ ಅದನ್ನು ಮೀರಿದ ಕಾವ್ಯಪ್ರೀತಿ ಮತ್ರತು ಸಂಯಮ ಅವರಲ್ಲಿ ಇರುವುದರಿಂದಲೇ ಇಂತಹದೊಂದು ಸಹಜತೆ ಸಿದ್ದಿಸಿದೆ. ಭಾವ ಮತ್ತು ನಾದ ಅವರ ಕಾವ್ಯದ ಇನ್ನೆರಡು ಮುಖ್ಯ ಸಂಗತಿಗಳು. ಅದು ಹಾಡುವ ಎನ್ನುವ ಅರ್ಥದಲ್ಲಿ ಅಲ್ಲ, ಅಂತರ್ಗತ ಎನ್ನುವ ನೆಲೆಯಲ್ಲಿ, ತಕ್ಷಣಕ್ಕೆ ಮುನಿಸು ತರವೇ ಯಾವುದೂ ಜನಪ್ರಿಯ ರಚನೆ ಹೇಳಿ ಬಿಡ ಬಹುದು. ಆದರೆ ಅದು ಅವರ ಕಾವ್ಯದಲ್ಲಿ ನಿರಂತರವಾಗಿದೆ ಎನ್ನುವುದನ್ನು ಗಮನಿಸಿದರೆ ನನ್ನ ಮಾತು ಸ್ಪಷ್ಟವಾದೀತು. ಇಂದಿಗೂ ಕಾವ್ಯ ಕೇಳಿ ಸೇರಿದಂತೆ ಹಲವು ವಾಟ್ಸಪ್ ಗುಂಪುಗಳಲ್ಲಿ ಎಳೆಯರನ್ನೂ ನಾಚಿಸುವಂತೆ ಸಕ್ರಿಯರಾಗಿರುವ ಚೊಕ್ಕಾಡಿಯವರಿಗೆ ವಯಸ್ಸು ಎಂಬತ್ತು ಎನ್ನುವುದು ಸುಮ್ಮನೆ ಕಾಲದ ಲೆಕ್ಕ ಅಷ್ಟೇ!
ಆಗಿರುವುದು ಬರೀ ಎಂಬತ್ತು, ಅಷ್ಟೇ ಅಲ್ಲ ಉಳಿದಿರುವುದೂ ಇನ್ನು ಕೇವಲ ಇ‍ಪ್ಪತ್ತು!
ಶತಮಾನಂ ಭವತಿ ಎಂದು ಹೇಳುವುದು ನಮ್ಮ ಸಂಸ್ಕೃತಿ, ಚೊಕ್ಕಾಡಿಯಂತಹ ಸಜ್ಜನರ ಕುರಿತು ಇದು ಹೆಮ್ಮೆ ಮತ್ತು ಅಭಿಮಾನದಿಂದ ಹೇಳಲೇ ಬೇಕಾದ ಮಾತು
ಸರ್, ಇನ್ನೇನು ಕಣ್ಣು ಮುಚ್ಚಿ ತೆಗೆಯುವುದರಲ್ಲಿ ನೂರು ಬಂದೇ ಬಿಡುತ್ತದೆ, ಆ ಸಂಭ್ರಮಕ್ಕೆ ನಾವೆಲ್ಲಾ ಕಾದಿದ್ದೇವೆ.. ನಮಸ್ಕಾರ”