- ಅರ್ಧ ವರ್ಷದಲ್ಲಿ ಶಾಲೆಗೆ ಸೇರಿದ ಹುಡುಗ - ಅಕ್ಟೋಬರ್ 30, 2024
- ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು - ಅಕ್ಟೋಬರ್ 22, 2022
- ನೈನವೆ - ಮೇ 26, 2022
ಪಾತ್ರವರ್ಗ
ಜೂಲಿಯಸ್ ಸೀಸರ್
ಒಕ್ಟೇವಿಯಸ್ ಸೀಸರ್
ಮಾರ್ಕಸ್ ಅಂಟೋನಿಯಸ್ ಸೀಸರನ ನಂತರದ ತ್ರಯಾಧಿಪತಿಗಳು
ಎಂ. ಆರ್ಮೀಲಿಯಸ್ ಲೆಪಿಡಸ್
ಸಿಸಿರೋ
ಪುಬ್ಲಿಯಸ್ ಸಂಸದರು
ಪೋಪಿಲಿಯಸ್ ಲೆನಾ
ಮಾರ್ಕಸ್ ಬ್ರೂಟಸ್
ಕೇಸಿಯಸ್
ಕಾಸ್ಕಾ
ಟ್ರೆಬೋನಿಯಸ್ ಜೂಲಿಯಸ್ ಸೀಸರನ ವಿರುದ್ಧ
ಲಿಗೇರಿಯಸ್ ಪಿತೂರಿಕೋರರು
ಡೆಸಿಯಸ್ ಬ್ರೂಟಸ್
ಮೆಟೆಲಸ್ ಸಿಂಬರ್
ಸಿನ್ನಾ
ಫ್ಲೇವಿಯಸ್ ಮತ್ತು ಮರುಲಸ್, ನ್ಯಾಯಮಂಡಳಿ
ಆರ್ಟಿಮಿಡೋರಸ್
ಒಬ್ಬ ಕಾಲಜ್ಞಾನಿ
ಕವಿ ಸಿನ್ನಾ
ಇನ್ನೊಬ್ಬ ಕವಿ
ಲೂಸಿಲಿಯಸ್
ಟಿಟಿನಿಯಸ್
ಮೆಸಲ ಬ್ರೂಟಸ್ ಮತ್ತು ಕೇಸಿಯಸ್ನ ಮಿತ್ರರು
ಯುವ ಕೇಟೋ
ವೊಲೂಮ್ನಿಯಸ್
ವಾರೋ
ಕ್ಲಿಟಸ್
ಕ್ಲಾಡಿಯಸ್
ಸ್ಟ್ರಾಟೋ ಬ್ರೂಟಸ್ನ ಸೇವಕರು
ಲೂಸಿಯಸ್
ಡಾರ್ಡೇನಿಯಸ್
ಪಿಂಡಾರಸ್, ಕೇಸಿಯಸ್ನ ಸೇವಕ
ಕಲ್ಪೂರ್ನಿಯಾ, ಸೀಸರನ ಪತ್ನಿ
ಪೋರ್ಶಿಯಾ, ಬ್ರೂಟಸ್ನ ಪತ್ನಿ
ದೃಶ್ಯ ೧
ರೋಮ್. ಒಂದು ಬೀದಿ.
ಫ್ಲೇವಿಯಸ್, ಮರುಲಸ್, ಮತ್ತು ಕೆಲ ಜನಸಾಮಾನ್ಯರು
ರಂಗದ ಮೇಲೆ ಪ್ರವೇಶ….
ಫ್ಲೇವಿಯಸ್. ತೊಲಗಿ ಇಲ್ಲಿಂದ, ಮನೆಗೆ ಹೋಗಿ, ಸೋಮಾರಿ ಪ್ರಾಣಿಗಳೆ: ಇದೇನು ರಜಾದಿನವೆ? ಏನು, ಕರ್ಮಚಾರಿಗಳಾಗಿದ್ದೂ ಗೊತ್ತಿಲ್ಲವೇ ನಿಮಗೆ, ಕೆಲಸದ ದಿನ ಅಂಡಲೆಯಬಾರದು, ನಿಮ್ಮ ಕಸುಬಿನ ಚಿಹ್ನೆ ಧರಿಸದೆ ಎನ್ನುವುದು? ಲೋ ಮಾತಾಡೋ, ನಿನ್ನ ಕಸುಬೇನು?
ಬಡಗಿ. ಯಾಕೆ ಸ್ವಾಮಿ ನಾನೊಬ್ಬ ಬಡಗಿ.
ಮರುಲಸ್. ಎಲ್ಲಿ ನಿನ್ನ ತೊಗಲುಡುಗೆ, ಎಲ್ಲಿ ಅಳತೆಗೋಲು? ಒಳ್ಳೇ ಬಟ್ಟೆಬರೆ ತೊಟ್ಟುಕೊಂಡು ಏನು ಮಾಡ್ತಾ ಇದ್ದೀ?ಅಯ್ಯಾ, ನೀನು, ನಿನ್ನ ಕಸುಬೇನು?
ಸಮಗಾರ. ನಿಜಕ್ಕೂ ಅಯ್ಯನವರೆ, ಒಬ್ಬ ಸಮರ್ಥ ಕುಶಲಕರ್ಮಿಯಾಗಿ ನಾನೊಬ್ಬ ಸಮಗಾರ ನೀವನ್ನುವಂತೆ.
ಮರುಲಸ್. ಆದರೆ ನಿನ್ನ ಕಸುಬೇನು? ನನ್ನ ಪ್ರಶ್ನೆಗೆ ನೇರ ಉತ್ತರಿಸು.
ಸಮಗಾರ. ಕಸುಬು ಅಯ್ಯಾ ಆತ್ಮಸಾಕ್ಷಿಯಾಗಿ ನಾನು ಹೇಳಬಹುದೂಂತ ಕಾಣುತ್ತೆ, ನಿಜಕ್ಕೂ ಅಯ್ಯಾ, ನಾನೊಬ್ಬ ಕೆಟ್ಟ ಪಾದಗಳನ್ನು ರಕ್ಷಿಸುವ ಮನುಷ್ಯ.
ಫ್ಲೇವಿಯಸ್. ಎಂಥಾ ಕಸುಬೋ, ಸೂಳೆಮಗನೆ? ಲೋ ಬೇವಾರ್ಸಿ ಅಧಿಕಪ್ರಸಂಗಿ, ಎಂಥಾ ಕಸುಬೋ?
ಸಮಗಾರ. ಇಲ್ಲ ನಿಮ್ಮ ದಮ್ಮಯ್ಯ ಅಯ್ಯ, ನನ್ಮೇಲೆ ಹರಿಹಾಯಬೇಡಿ: ಆದ್ರೂ ನೀವು ಹರಿದಂತೆ ನಾನು ಸರಿಪಡಿಸಬಲ್ಲೆ ನಿಮ್ಮನ್ನ.
ಮರುಲಸ್. ಅದರರ್ಥ ಏನು? ನನ್ನ ಸರಿಪಡಿಸಬಲ್ಲೆಯೇನೋ ಕಮಂಗಿ?
ಸಮಗಾರ. ಯಾಕಯ್ಯಾ, ನಿಮ್ಮನ್ನ ಹೊಲೀಬಲ್ಲೆ ಅಂತ.
ಫ್ಲೇವಿಯಸ್. ನೀನೊಬ್ಬ ಸಮಗಾರ, ಹೌದಾ?
ಸಮಗಾರ. ನಿಜಕ್ಕೂ ಅಯ್ಯಾ, ನನ್ನ ಕರ್ಮವೆಲ್ಲಾ ಚರ್ಮದಲ್ಲೇ: ನಾನು ಯಾವುದೇ ಕಸುಬುದಾರನ ವಿಷಯಗಳಲ್ಲಿ ತಲೆಹಾಕೋನಲ್ಲ; ಅಥವಾ ಕಸುಬುದಾರಳ ವಿಷಯಗಳಲ್ಲಿ ಕೂಡಾ; ಆದರೆ ಒಟ್ಟಿನಲ್ಲಿ ಅಯ್ಯಾ, ನಾನೊಬ್ಬ ಹಳೇ ಪಾದರಕ್ಷೆಗಳ ಶಸ್ತ್ರಚಿಕಿತ್ಸಕ: ಅವುಗಂಡಾಂತರದಲ್ಲಿರೋವಾಗ ನಾನವುಗಳ ರಕ್ಷೆ ಮಾಡ್ತೀನಿ.ಗುಣವಂತ ಮನುಷ್ಯರು ಮೃದು ತೊಗಲ ಮೇಲೆ ನಡೆಯುವುದಿದ್ದರೆ ಅದು ನನ್ನ ಕೈಗಾರಿಕೆಯ ಮೇಲೆ.
ಫ್ಲೇವಿಯಸ್. ಆದ್ರೆ ನೀ ಯಾಕೆ ಈವತ್ತು ನಿನ್ನ ಅಂಗಡಿಯಲ್ಲಿಲ್ಲ? ಬೀದಿಗಳಲ್ಲಿ ಈ ಜನಗಳನ್ನು ಕಟ್ಟಿಕೊಂಡು ಎಲ್ಲಿಗೆ ಹೊರಟಿದ್ದೀ?
ಸಮಗಾರ. ನಿಜಕ್ಕೂ ಅಯ್ಯಾ, ಅವರ ಪಾದರಕ್ಷೆಗಳನ್ನ ಸವೆಸೋದಕ್ಕೆ, ನನಗೆ ಇನ್ನಷ್ಟು ಕೆಲಸ ಗಿಟ್ಟಿಸೋದಕ್ಕೆ.ಆದರೆ ನಿಜವಾಗಿ ಅಯ್ಯಾ, ನಾವು ರಜೆ ಮಾಡಿದ್ದು ಸೀಸರನ ನೋಡೋದಕ್ಕೆ. ಅವನ ಜೈತ್ರಯಾತ್ರೆಯಲ್ಲಿ ಸಂತೋಷ
ಪಡೋದಕ್ಕೆ.
ಮರುಲಸ್. ಯಾಕೆ ಸಂತೋಷ ಪಡಬೇಕು? ಯಾವ ಗೆಲುವನ್ನವನು ತರುತ್ತಿದ್ದಾನೆ ಮನೆಗೆ? ಯಾವ ಕಪ್ಪ ಕಾಣಿಕೆಗಳು ಅವನನ್ನು ಹಿಂಬಾಲಿಸುತ್ತಿವೆ ರೋಮಿಗೆ, ಅವನ ರಥಚಕ್ರಗಳಿಗೆ ಕಟ್ಟಿ ಎಳೆಯುವುದಕ್ಕೆ? ಎಲೋ ದಿಮ್ಮಿಗಳೇ, ಬಂಡೆಗಳೇ, ನಿರ್ಜೀವ ವಸ್ತುಗಳಿಗಿಂತಲೂ ಹೀನರಾದವರೇ: ಎಲೋ ಕಠಿಣ ಹೃದಯಿಗಳೇ, ರೋಮಿನ ನಿಷ್ಕರುಣಿ ಮನುಷ್ಯರೇ, ನಿಮಗೆ ಪಾಂಪಿ ಗೊತ್ತಿರಲಿಲ್ಲವೇ?
ಎಷ್ಟೋ ಕಾಲ ನೀವುಗಳು ಕೋಟೆಗೋಡೆಗಳ ಮತ್ತು ಬುರುಜುಗಳ, ಗೋಪುರಗಳ ಮತ್ತು ಗವಾಕ್ಷಿಗಳ ಹತ್ತಿರಲಿಲ್ಲವೇ? ಹೌದು, ತೋಳಲ್ಲಿ ಹಸುಗೂಸುಗಳ ಇರಿಸಿಕೊಂಡು, ಮನೆಮಾಡುಗಳ ಏರಿದ್ದಿರಿ, ಹಾಗೂ ಅಲ್ಲಿ ದಿನವಿಡೀ ಕೂತಿದ್ದಿರಿ, ಸಹನಾಪೂರ್ಣ ನಿರೀಕ್ಷೆಯಿಂದ,ಧೀರ ಪಾಂಪಿ ರೋಮಿನ ಪಥಗಳಲ್ಲಿ ಸಾಗುವುದನ್ನು ನೋಡುವುದಕ್ಕೆ: ಹಾಗೂ ಅವನ ರಥ ಕಾಣಿಸಿದ್ದೇ ತಡ,
ಲೋಕ ಕೇಳಿಸುವಂತೆ ನೀವು ಕೂಗಿಲ್ಲವೇ, ಟೈಬರ್ ನದಿಯೇ ತನ್ನ ದಡಗಳ ಕೆಳಗೆ ನಡುಗಿತು ನಿಮ್ಮ ಧ್ವನಿಗಳ ಮಾರ್ದನಿಯನ್ನು
ತನ್ನ ದಂಡೆಗಳ ಗುಹೆಗಳಲ್ಲಿ ಕೇಳಿ. ಮತ್ತೆ ನೀವೀಗ ನಿಮ್ಮ ಉತ್ತಮ ಉಡುಗೆಗಳ ತೊಟ್ಟಿದ್ದೀರ? ರಜೆಯೊಂದನ್ನ ತೆಗೆದಿದ್ದೀರ?
ಪಾಂಪಿಯ ರಕ್ತದ ಮೇಲೆ ಜೈತ್ರಯಾತ್ರೆಯಲ್ಲಿ ಬರುತ್ತಿರುವಾತನ ಹಾದಿಯಲ್ಲಿ ಹೂವುಗಳ ಚೆಲ್ಲಿದ್ದೀರ? ನಡೀರಿ, ನಿಮ್ಮ ನಿಮ್ಮ
ಮನೆಗಳಿಗೆ ಓಡಿರಿ, ಮೊಣಕಾಲ ಮೇಲೆ ಬೀಳಿರಿ, ಈ ಕೃತಘ್ನತೆ ತರಲೇಬೇಕಾದ ಮಾರಿ ರೋಗವ ತಡೆವಂತೆ ದೇವರುಗಳ ಪ್ರಾರ್ಥಿಸಿ.
ಫ್ಲೇವಿಯಸ್. ನಡೆಯಿರಿ, ನಡೆಯಿರಿ, ದೇಶವಾಸಿಗಳೆ, ಈ ತಪ್ಪಿಗೆ ನಿಮ್ಮಂಥ ಬಡ ಮನುಷ್ಯರನ್ನೆಲ್ಲ ಕಲೆಹಾಕಿ; ಟೈಬರ್
ನದೀ ದಂಡೆಗೆ ಒಯ್ಯಿರಿ, ಅಲ್ಲಿ ನಿಮ್ಮ ಕಂಬನಿಗಳನ್ನು ನೀರಿಗೆ ಸುರಿಯಿರಿ, ಅತಿ ನಿಮ್ನ ಪ್ರವಾಹ ಅತ್ಯುನ್ನತ ಕಿನಾರೆಯನ್ನು ಚುಂಬಿಸುವ ವರೆಗೆ.
[ಜನ ಸಾಮಾನ್ಯರ ನಿಷ್ಕ್ರಮಣ ನೋಡಿದಿಯಾ, ಅವರುಗಳ ಹೀನಾತಿಹೀನ ಲೋಹ ಕರಗದೆ ಇರೋದೆಲ್ಲಿ, ತಮ್ಮ ತಪ್ಪಿನ ಅರಿವಿನಲ್ಲಿ ನಾಲಿಗೆ ಕಟ್ಟಿ ಮಾಯವಾಗುತ್ತಾರೆ: ನೀನು ರಾಜಭವನದ ಕಡೆ ಹೋಗು, ನಾನು ಈ ದಾರಿಯಲ್ಲಿ ತೆರಳುವೆ: ಮೂರ್ತಿಗಳನ್ನೆಲ್ಲ ವಿವಸ್ತ್ರಗೊಳಿಸು, ಅವು ಅಲಂಕರಿಸಲ್ಪಟ್ಟಿರುವುದು ನಿನ್ನ ಕಣ್ಣಿಗೆ ಬಿದ್ದರೆ.
ಮರುಲಿಸ್. ನಾವು ಹಾಗೆ ಮಾಡಬಹುದೆ? ನಿನಗೆ ಗೊತ್ತು ಇದು ಲೂಪರ್ಕಲ್ ಹಬ್ಬದ ದಿನ.
ಫ್ಲೇವಿಯಸ್. ಅದೇನೂ ಪರವಾಯಿಲ್ಲ, ಸೀಸರನ ವಿಜಯ ಸಂಕೇತದಲ್ಲಿ ಯಾವ ಮೂರ್ತಿಯನ್ನೂ ಸಮೆಸುವುದು ಬೇಡ.
ನಾನು ಸ್ವಲ್ಪ ಆಚೀಚೆ ಸರಿದು ಬೀದಿಯಿಂದ ಅಲೆಮಾರಿಗಳನ್ನು ಓಡಿಸುತ್ತೇನೆ; ಅವರ ದಟ್ಟಣೆ ಕಂಡಲ್ಲೆಲ್ಲ ನೀನೂ ಹಾಗೆ ಮಾಡು.
ಈ ಬೆಳೆಯುವ ಗರಿಗಳನ್ನು ಸೀಸರನ ಪಕ್ಕದಿಂದ ಕತ್ತರಿಸಿದರೆ ಅವನು ಹದವಾಗಿ ಹಾರುತ್ತಾನೆ, ಅಲ್ಲದಿದ್ದರೆ ಅವನು ಮನುಷ್ಯರ
ಕಣ್ಣಿಗೆ ಎಟುಕದ ಎತ್ತರದಲ್ಲಿ ಹಾರಾಡಿಯಾನು, ಮತ್ತು ನಮ್ಮನ್ನೆಲ್ಲ ಜೀತದಾಳುಗಳಂತೆ ಭಯಭೀತಿಯಲ್ಲಿ ಇರಿಸಿಯಾನು.
ದೃಶ್ಯ 2
ಒಂದು ಸಾರ್ವಜನಿಕ ಸ್ಥಳ.
ಸೀಸರ್, ಆಂಟನಿ, ಕಲ್ಪೂರ್ನಿಯಾ, ಪೋರ್ಶಿಯಾ, ಡೆಸಿಯಸ್, ಸಿಸೆರೋ,
ಬ್ರೂಟಸ್, ಕೇಸಿಯಸ್, ಕಾಸ್ಕಾ, ಒಬ್ಬ ಕಾಲಜ್ಞಾನಿ;
ಅವರ ನಂತರ ಮರುಲಸ್ ಮತ್ತು ಫ್ಲೇವಿಯಸ್ ಪ್ರವೇಶ
ಸೀಸರ್. ಕಲ್ಪೂರ್ನಿಯಾ.
ಕಾಸ್ಕಾ. ಶ್, ಸದ್ದು. ಸೀಸರ್ ಮಾತಾಡುತ್ತಾರೆ.
ಸೀಸರ್. ಕಲ್ಪೂರ್ನಿಯಾ.
ಕಲ್ಪೂರ್ನಿಯಾ. ಇಲ್ಲಿದ್ದೇನೆ, ಸ್ವಾಮಿ.
ಸೀಸರ್. ಆಂಟನಿ ತನ್ನ ಪಥ ಓಡುತ್ತಿರುವಾಗ ನೀನು ನೇರ ಅವನ ದಾರಿಯಲ್ಲಿರು. ಅಂಟೋನಿಯಸ್!
ಆಂಟನಿ. ಸೀಸರ್!
ಸೀಸರ್. ನಿನ್ನ ವೇಗದ ಮಧ್ಯೆ ಮರೀಬೇಡ ಕಲ್ಪೂರ್ನಿಯಾಳನ್ನು ಮುಟ್ಟುವುದಕ್ಕೆ: ಹಿರಿಯರು ಹೇಳುತ್ತಾರೆ, ಈ ಪವಿತ್ರ ಓಟದಲ್ಲಿ
ಸ್ಪರ್ಶಿಸುವ ಬಂಜೆಯರು ತಮ್ಮ ಬಂಜೆತನದ ಶಾಪವನ್ನು ಕಳಚಿಕೊಳ್ಳುತ್ತಾರೆ ಎಂದು.
ಆಂಟನಿ. ನಾನು ನೆನಪಿಡುವೆ, ಸೀಸರ್ ಅಂದರೆ ಸಾಕು, ಅದು ಆಯಿತು.
ಸೀಸರ್. ತಯಾರಾಗು, ಹಾಗೂ ಯಾವ ಆಚರಣೆಯನ್ನೂ ಕೈಬಿಡಬೇಡ.
ಕಾಲಜ್ಞಾನಿ. ಸೀಸರ್!
ಸೀಸರ್. ಹ? ಯಾರು ಕರೆಯುತ್ತಿರುವುದು?
ಕಾಸ್ಕಾ. ಎಲ್ಲ ಸದ್ದುಗಳೂ ನಿಲ್ಲಲಿ: ನಿಶ್ಶಬ್ದ ಇನ್ನೊಮ್ಮೆ.
ಸೀಸರ್. ಗುಂಪಿನಲ್ಲಿ ನನ್ನನ್ನು ಕರೆದವರು ಯಾರು? ಎಲ್ಲ ಸಂಗೀತಕ್ಕಿಂತ ಹರಿತದ ಸ್ವರವೊಂದು ನನಗೆ ಕೇಳಿಸುತ್ತಿದೆ ಸೀಸರ್ ಎಂದು ಕೂಗುವುದು: ಮಾತಾಡು, ಆಲಿಸುತ್ತಿದ್ದಾನೆ ಸೀಸರ್.
ಕಾಲಜ್ಞಾನಿ. ಮಾರ್ಚ್ ಹದಿನೈದು ಜಾಗ್ರತೆ.
ಸೀಸರ್. ಯಾರವನು?
ಬ್ರೂಟಸ್. ಒಬ್ಬ ಕಾಲಜ್ಞಾನಿ ನಿಮಗೆ ಮಾರ್ಚ್ ಹದಿನೈದರಂದು ಜಾಗ್ರತೆಯಿಂದಿರಲು ಹೇಳುತ್ತಿದ್ದಾನೆ.
ಸೀಸರ್. ಮುಂದಕ್ಕೆ ತನ್ನಿ ಅವನನ್ನು, ನಾನವನ ಮುಖ ನೋಡಬೇಕು.
ಕೇಸಿಯಸ್. ಗುಂಪಿನಿಂದ ಮುಂದಕ್ಕೆ ಬಾರಯ್ಯ, ಸೀಸರನ ನೋಡು.
ಸೀಸರ್. ನನಗೇನು ಹೇಳುತ್ತೀ ಈಗ? ಇನ್ನೊಮ್ಮೆ ಹೇಳು.
ಕಾಲಜ್ಞಾನಿ. ಮಾರ್ಚ್ ಹದಿನೈದು ಜಾಗ್ರತೆ.
ಸೀಸರ್. ಇವನೊಬ್ಬ ಕನಸುಗಾರ, ಬಿಟ್ಟುಬಿಡೋಣ: ಮುಂದುವರಿಯಿರಿ.
[ಸಂಗೀತ. ಮಾಗೆಟ್ ಬ್ರೂಟಸ್ ಮತ್ತು ಕೇಸಿಯಸ್ ಹೊರತು ಉಳಿದೆಲ್ಲರ ನಿಷ್ಕ್ರಮಣ]
ಕೇಸಿಯಸ್. ಓಟದ ವಿಧಾನ ನೋಡಲು ಹೋಗುವಿಯಾ?
ಬ್ರೂಟಸ್. ನಾನಿಲ್ಲ.
ಕೇಸಿಯಸ್. ನೀನು ಹೋಗಬೇಕೆಂದು ನನ್ನ ಕೋರಿಕೆ.
ಬ್ರೂಟಸ್. ನನಗೆ ಆಟೋಟಗಳಲ್ಲಿ ಆಸಕ್ತಿಯಿಲ್ಲ:ಆಂಟನಿಯಲ್ಲಿರುವ ಆ ಶೀಘ್ರೋತ್ಸಾಹದ ಕೆಲವೊಂದು ಅಂಶ ನನ್ನಲ್ಲಿ ಇಲ್ಲ. ಆದರೆ, ಕೇಸಿಯಸ್, ನಿನ್ನ ಬಯಕೆಗಳಿಗೆ ನಾನು ತಡೆಯಾಗಲಾರೆ: ನಾನು ಹೊರಟುಹೋಗುತ್ತೇನೆ.
ಕೇಸಿಯಸ್. ಬ್ರೂಟಸ್, ನಾನು ಈಚೆಗೆ ನಿನ್ನನ್ನು ಗಮನಿಸಿದ್ದೇನೆ: ನೀನು ನನಗೆ ತೋರಿಸುತ್ತಿದ್ದ ಆ ಕರುಣೆ ಆ ವಾತ್ಸಲ್ಯ ಈಗ ನಿನ್ನ ಕಣ್ಣುಗಳಲ್ಲಿ ಇಲ್ಲ: ನಿನ್ನನ್ನು ಪ್ರೀತಿಸುವ ಈ ಗೆಳೆಯನ ಮೇಲೆ ನಿನ್ನ ಹಸ್ತವೀಗ ಅತಿ ಬಿಗುವಿನದೂ ಅಪರಿಚಿತವೂ ಆಗಿದೆ.
ಬ್ರೂಟಸ್. ಕೇಸಿಯಸ್, ಮೋಸಹೋಗಬೇಡ: ನನ್ನ ದೃಷ್ಟಿಗೆ ನಾನು ಮುಸುಕೆಳೆದಿದ್ದರೆ, ನನ್ನ ಮುಖಚಹರೆಯ ತಾಪ ನನ್ನ ಮೇಲೆ ಮಾತ್ರವೇ ನಾನು ಎರಗಿಸಿಕೊಂಡದ್ದು. ಈಚೆಗೆ ನಾನು ಮನಃಕ್ಲೇಶಗೊಂಡದ್ದು ನಿಜ, ತುಸು ಬೇರೆಯೇ ವಿಚಾರಗಳಿಂದ, ನನ್ನದೇ ಸ್ವಂತ ಕಲ್ಪನೆಗಳಿಂದ, ಇದೇ ಬಹುಶಃ ನನ್ನ ವರ್ತನೆಗೆ ಎರೆಮಣ್ಣು ನೀಡುವುದು. ಆದರೆ ಅದಕ್ಕಾಗಿ ನನ್ನ ಪರಮ ಸ್ನೇಹಿತರು ಹೆಚ್ಚು ಮರುಗುವುದು ಬೇಡ, ಬಡ ಬ್ರೂಟಸ್ ತನ್ನ ವಿರುದ್ಧ ತಾನೇ ಯುದ್ಧದಲ್ಲಿರುತ್ತ ಇತರ ಮನುಷ್ಯರಿಗೆ ಪ್ರೀತಿ ತೋರಿಸುವುದಕ್ಕೆ ಮರೆತಿದ್ದಾನೆ ಎನ್ನುವುದಕ್ಕಿಂತ.
ಕೇಸಿಯಸ್. ಹಾಗಿದ್ದರೆ, ಬ್ರೂಟಸ್, ನಿನ್ನ ತಲ್ಲಣವನ್ನು ನಾನು ಬಹಳ ತಪ್ಪಾಗಿ ತಿಳಿದುಕೊಂಡೆ, ಈ ಕಾರಣ ನನ್ನ ಹೃದಯ ಯೋಚನೆಗೆ ಯೋಗ್ಯವಾದ ಬಹುಮುಖ್ಯ ವಿಚಾರಗಳನ್ನು ಹೂತು ಹಾಕಿದೆ, ಹೇಳು ಬ್ರೂಟಸ್, ನಿನ್ನ ಮುಖ ನಿನಗೆ ಕಾಣಿಸುವುದೇ?
ಬ್ರೂಟಸ್. ಇಲ್ಲ, ಕೇಸಿಯಸ್: ಯಾಕೆಂದರೆ ಪ್ರತಿಬಿಂಬದಲ್ಲಿ ಅಥವಾ ಇನ್ನಿತರ ವಸ್ತುಗಳಲ್ಲಲ್ಲದೆ, ಕಣ್ಣು ತನ್ನನ್ನು ತಾನು
ಕಾಣಲಾರದು.
ಕೇಸಿಯಸ್. ಅದು ತಕ್ಕ ಮಾತು, ಹಾಗೂ ನಿನಗಂಥ ಕನ್ನಡಿಗಳಿಲ್ಲದ್ದಕ್ಕೆ ಜನ ಪರಿತಪಿಸುತ್ತಿದ್ದಾರೆ ಬ್ರೂಟಸ್, ಇದ್ದಿದ್ದರೆ ಅವು ನಿನ್ನಲ್ಲಿ ಅಡಗಿರುವ ಶ್ರೇಷ್ಠತೆಯನ್ನು ನಿನ್ನ ಕಣ್ಣಿಗೆ ಹಿಡಿಯುತ್ತಿದ್ದುವು, ನಿನ್ನ ನೆರಳನ್ನು ನೀನು ನೋಡುವ ಹಾಗೆ;ನಾನು ಕೇಳಿರುವೆ, ಅಮರ ಸೀಸರನ ಹೊರತು, ರೋಮಿನ ಅತಿ ಗಣ್ಯರ ನಡುವೆ, ಬ್ರೂಟಸ್ನ ಕುರಿತು ಮಾತಾಡುತ್ತ, ಮತ್ತು ಈ ಯುಗದ ನೊಗದ ಕೆಳಗೆ ನರಳುತ್ತ, ಉದಾತ್ತ ಬ್ರೂಟಸ್ಗೆ ಕಣ್ಣುಗಳಿರುತ್ತಿದ್ದರೆ ಎಂದು ಜನ ಆಶಿಸುವುದನ್ನು.
ಬ್ರೂಟಸ್. ಯಾವ ಗಂಡಾಂತರಗಳಿಗೆ ನನ್ನನ್ನು ಒಯ್ಯಬಯಸುವಿ, ಕೇಸಿಯಸ್? ನನ್ನಲ್ಲಿ ಇಲ್ಲದ್ದಕ್ಕೆ ನಾನೆಳಸುವಂತೆ ನೀನು ಬಯಸುತ್ತಿರುವಿ ಎಂದಮೇಲೆ?
ಕೇಸಿಯಸ್. ಹಾಗಿದ್ದಲ್ಲಿ ಬ್ರೂಟಸ್, ಕೇಳಲು ಸಿದ್ಧನಾಗು; ಹಾಗೂ ಪ್ರತಿಬಿಂಬದ ಮೂಲಕವಲ್ಲದೆ ನೀನು ನಿನ್ನನ್ನು ಚೆನ್ನಾಗಿ ನೋಡಲಾರಿ ಎನ್ನುವುದು ನಿನಗೆ ಗೊತ್ತಿರುವ ಕಾರಣ; ವಿನಯಪೂರ್ವಕ ನಿನಗೆ ತೋರಿಸಿಕೊಡುತ್ತೇನೆ, ನಿನಗಿನ್ನೂ ಗೊತ್ತಿರದ ಆ ನಿನ್ನ ಭಾಗವನ್ನು. ಸಂದೇಹಿಸುವುದು ಬೇಡ ನನ್ನನ್ನು, ಪ್ರಿಯ ಬ್ರೂಟಸ್: ನಾನೊಬ್ಬ ಯಃಕಶ್ಚಿತ್ ಹಾಸ್ಯಗಾರನೋ ಅಥವಾ ಪ್ರತಿಯೊಬ್ಬ ಹೊಸ ಬಾಯಿಬಡುಕನಿಗೆ ಸ್ನೇಹದ ಮಾತಿತ್ತು ಮಾತು ಹಳಸುವವನೋ ಆಗಿದ್ದರೆ: ನಾನು ಜನರ ಬೆನ್ನಿಗೆ ಬೀಳುವವನೋ, ಅವರನ್ನು ಗಾಢವಾಗಿ ಅಪ್ಪಿಹಿಡಿದು ನಂತರ ನಿಂದಿಸುವವನೋ ಎಂದು ನೀವು ತಿಳಿಯುವುದಾದರೆ: ಅಥವಾ ಉಂಡಾಡಿಗಳಿಗೆಲ್ಲ ಔತಣವಿತ್ತು ಸ್ವಯಂ ಮೆರೆಸುವವನೋ ಎಂದು ನೀನು ತಿಳಿಯುವುದಾದರೆ, ಹಾಗಿದ್ದ ಪಕ್ಷ ನಾನು ಗಂಡಾಂತರಕಾರಿ ಎಂದು ಅಂದುಕೊಳ್ಳಬಹುದು ನೀನು.
[ವಾದ್ಯ, ಘೋಷಣೆ]
ಬ್ರೂಟಸ್. ಈ ಗಲಾಟೆಯ ಅರ್ಥ ಏನು?
ಜನ ಸೀಸರನನ್ನ ರಾಜನನ್ನಾಗಿ ಆಯ್ಕೆಮಾಡಿದ್ದಾರೆಂದು ನನ್ನ ಭಯ.
ಕೇಸಿಯಸ್. ಹೌದು, ನೀನು ಭಯಪಡುತ್ತೀ? ಹಾಗಿದ್ದರೆ ನಾನು ತಿಳಿಯಬೇಕು ನೀನದನ್ನು ಬಯಸುವುದಿಲ್ಲ ಎಂದು.
ಬ್ರೂಟಸ್. ಬಯಸುವುದಿಲ್ಲ ಕೇಸಿಯಸ್, ಆದರೂ ನಾನವನನ್ನು ಬಹಳ ಪ್ರೀತಿಸುತ್ತೇನೆ: ಆದರೆ ನೀನು ಯಾತಕ್ಕೆ ನನ್ನನ್ನಿಲ್ಲಿ ಇಷ್ಟೂ ಹೊತ್ತು ತಡೆದು ನಿಲ್ಲಿಸಿದ್ದೀ?ಏನದು ನೀನು ನನಗೆ ಹೇಳಲು ಬಯಸುವುದು? ಅದೇನಾದರೂ ಸಾರ್ವಜನಿಕ ಹಿತಾಸಕ್ತಿಯ ಕುರಿತಾದರೆ, ಗೌರವವನ್ನು ಒಂದು ಕಣ್ಣಲ್ಲಿ, ಮರಣವನ್ನು ಇನ್ನೊಂದು ಕಣ್ಣಲ್ಲಿ ಇರಿಸು, ನಾನೆರಡನ್ನೂ ಅನಾಸಕ್ತಿಯಿಂದ ನೋಡುವವ: ಮರಣಕ್ಕೆ ಭಯಪಡುವುದಕ್ಕಿಂತಲೂ ನಾನು ಗೌರವವನ್ನು ಹೆಚ್ಚು ಪ್ರೀತಿಸುವುದರಿಂದ ದೇವರು ನನ್ನನ್ನು ಮುನ್ನಡೆಸಲಿ.
ಕೇಸಿಯಸ್. ಆ ಗುಣ ನಿನ್ನಲ್ಲಿದೆಯಂದು ನನಗೆ ಗೊತ್ತು..
ಬ್ರೂಟಸ್, ನಿನ್ನ ಹೊರಮುಖವು ನನಗೆ ಹೇಗೆ ಗೊತ್ತಿದೆಯೇ..ಅದೇ ರೀತಿ. ಸರಿ, ಗೌರವ ನನ್ನ ಮಾತಿನ ವಿಷಯ: ನನಗೆ ತಿಳಿಯದು ನೀನು ಮತ್ತು ಇತರರು ಈ ಜೀವನದ ಬಗ್ಗೆ ಏನು ಯೋಚಿಸುತ್ತೀರಿ ಎನ್ನುವುದು: ಆದರೆ ನನ್ನ ಸ್ವಂತದ ಕುರಿತು ಹೇಳುವುದಾದರೆ, ಆ ಅಂಥ ವಸ್ತುವಿನ ಭಯದಲ್ಲಿ ನಾನೀಗ ಇರುವಂತೆ ಇರದಿರುವುದೇ ಲೇಸು.
ನಾನು ಜನಿಸಿದ್ದು ಸ್ವತಂತ್ರನಾಗಿ, ಸೀಸರನಂತೆಯೇ, ಅಂತೆಯೇ ನೀನು, ನಾವಿಬ್ಬರೂ ಉಂಡದ್ದು ಹಾಗೆ, ಮಾಗಿಯ ಚಳಿಯನ್ನು ಇಬ್ಬರೂ ಸಹಿಸಬಲ್ಲೆವು,ಆತ ಸಹಿಸುವ ಹಾಗೆ. ಯಾಕೆಂದರೆ ಒಮ್ಮೆ ಗಾಳಿ ಬೀಸುವ ಒಂದು ಒರಟು ದಿನ, ನೆರೆಯುದ್ಧ ಟೈಬರ್, ತನ್ನ ದಂಡೆಗೆ ಅಪ್ಪಳಿಸುತ್ತಿರುವ ಸಂದರ್ಭ, ಸೀಸರ್ ನನಗಂದ, ಧೈರ್ಯವಿದೆಯಾ ಕೇಸಿಯಸ್, ನಿನಗೀಗ ಈ ಸಿಟ್ಟೇರಿದ ನೆರೆ ನೀರಿಗೆ ನನ್ನ ಜತೆ ಧುಮುಕಿ ಓ ಅಲ್ಲಿರುವ ಆ ಗುರುತಿನ ವರೆಗೆ ಈಜುವುದಕ್ಕೆ? ಆ ಮಾತು ಕೇಳಿದ್ದೇ ನನ್ನ ಸೈನಿಕ ಸಮವಸ್ತ್ರ ಸಮೇತ ನಾನು ನೀರಿಗೆ ಹಾರಿದೆ, ಮತ್ತು ನನ್ನನ್ನು ಅನುಸರಿಸುವಂತೆ ಅವನಿಗೂ ನುಡಿದೆ: ಹಾಗೇ ಮಾಡಿದ. ಪ್ರವಾಹ ಗರ್ಜಿಸಿತು, ಹಾಗೂ ನಾವದನ್ನು ಬಲಾಢ್ಯ ಮಾಂಸಪೇಶಿಗಳಿಂದ ಬಡಿದು ಬದಿಗೆ ಸರಿಸುತ್ತಲೂ, ಎಂಟೆದೆಯ ಎದೆಯಿಂದ ತಡೆಯುತ್ತಲೂ ನಡೆದೆವು.
ಆದರೆ ನಿಗದಿತ ನಿಶಾನೆಯನ್ನು ತಲಪುವ ಮೊದಲೇ ಸೀಸರ್ ಕೂಗಿದ, ನನ್ನ ಎತ್ತಿಕೋ ಕೇಸಿಯಸ್, ಇಲ್ಲದಿದ್ದರೆ ನಾನು ಮುಳುಗುವೆ ಎಂದು. ನಾನಾದರೆ ನಮ್ಮ ಮಹಾಮೂಲ ಪುರುಷ ಈನಿಯಸ್ ಟ್ರಾಯ್ ನಗರದ ಜ್ವಾಲೆಗಳಿಂದ ವೃದ್ಧ ಆಂಖಿಯಸ್ನನ್ನು ಹೇಗೆ ತನ್ನ ಭುಜದ ಮೇಲಿರಿಸಿ ತಂದನೋ ಆ ಅದೇ ರೀತಿ ಸುಸ್ತಾದ ಸೀಸರನನ್ನು ಟೈಬರಿನ ಅಲೆಗಳಿಂದ ರಕ್ಷಿಸಿದೆ. ಈಗ ಈ ಮನುಷ್ಯ ದೇವರಾಗಿದ್ದಾನೆ, ಮತ್ತು ಕೇಸಿಯಸ್ ಒಬ್ಬ ನಿಕೃಷ್ಟ ಪ್ರಾಣಿ, ಆತ ತನ್ನ ದೇಹ ಬಗ್ಗಿಸಬೇಕು,
ಸೀಸರ್ ನಿರ್ಲಕ್ಷ್ಯದಿಂದ ಅವನತ್ತ ತಲೆದೂಗಿದರೂ ಸಹಾ.
ಸ್ಪೇನಿನಲ್ಲಿದ್ದಾಗ ಸೀಸರಿಗೆ ಜ್ವರ ಬಂತು, ಅದರ ಸನ್ನಿಯಲ್ಲಿ ಅವನು ಹೇಗೆ ನಡುಗಿದನೆನ್ನುವುದನ್ನು ನಾನು ಬಲ್ಲೆ.
ಈ ದೇವರು ನಡುಗಿದನೆನ್ನುವುದು ನಿಜ, ಅವನ ಭಯಭೀತ್ ತುಟಿಗಳು ತಮ್ಮ ಬಣ್ಣ ಬಿಟ್ಟೋಡಿದುವು, ಹಾಗೂ ಯಾವ
ದೃಷ್ಟಿಯ ಕೊಂಕು ಇಡೀ ಲೋಕವ ಬೆರಗುಗೊಳಿಸುವುದೋ ಆ ದೃಷ್ಟಿ ತನ್ನ ತೇಜವ ಕಳೆದುಕೊಂಡಿತು: ಅವನು
ಗೊರಲುವುದನ್ನು ನಾನು ಕೇಳಿದೆ: ಹೌದು, ರೋಮನರನ್ನು ಮೋಡಿಗೊಳಿಸಿದ ಮತ್ತು ಅವನ ಭಾಷಣಗಳನ್ನು ತಮ್ಮ ಪುಸ್ತಕಗಳಲ್ಲಿ ಬರೆದಿಟ್ಟುಕೊಳ್ಳುವಂತೆ ಮಾಡಿದ ಆ ನಾಲಿಗೆ,ಆಹಾ ಅದು ಕೂಗಿತು ಕಾಯಿಲೆ ಬಿದ್ದ ಹುಡುಗಿಯ ಹಾಗೆ, ನನಗೆ ಕುಡಿಯುವುದಕ್ಕೇನಾದರೂ ಕೊಡು ಟಿಟಿನಿಯಸ್:
ಎಲೈ ದೈವಗಳೆ, ನನಗೆ ಆಶ್ಚರ್ಯ, ಅಷ್ಟೊಂದು ದುರ್ಬಲ ಮನ್ನಸ್ಸಿನ ಒಬ್ಬ ಮನುಷ್ಯ ಸಾಮ್ರಾಟ್ ಲೋಕದ
ಆರಂಭ ಗಳಿಸಿರುವುದು, ಹಾಗೂ ಅದರ ಕೀರ್ತಿಕಿರೀಟವನ್ನು ಒಬ್ಬನೇ ಧರಿಸಿರುವುದು.
[ಹರ್ಷೋದ್ಗಾರ, ವಾದ್ಯಘೋಷ]
ಬ್ರೂಟಸ್. ಇನ್ನೊಂದು ಸಾರ್ವತ್ರಿಕ ಹರ್ಷೋದ್ಗಾರ?
ಈ ಕರತಾಡನಗಳು ಸೀಸರನ ಮೇಲೆ ಪೇರಿಸಿದ ಯಾವುದೋ ಹೊಸ ಗೌರವಗಳಿಗೆಂದು ನನ್ನ ನಂಬಿಕೆ.
ಕೇಸಿಯಸ್. ಯಾಕಯ್ಯ, ಆತ ಈ ಸಣಕಲ ಜಗತ್ತನ್ನು ಮಹಾಕಾಯನಂತೆ ಏರಿದ್ದಾನೆ, ಮತ್ತು ಹುಲುಮಾನವರಾದ
ನಾವು ಅವನ ಭಾರೀ ಜಂಘೆಗಳ ಕೆಳಗೆ ನಡೆಯುತ್ತಿದ್ದೇವೆ, ಗೌರವಹೀನ ಗೋರಿಗಳೆಲ್ಲಾದರೂ ನಮಗೆ ಸಿಗುತ್ತವೆಯೇ
ಎಂದು ಆಚೀಚೆ ಇಣುಕುತ್ತಿದ್ದೇವೆ. ಮನುಷ್ಯರು ಕೆಲವೊಮ್ಮೆ ತಮ್ಮ ವಿಧಿಗಳಿಗೆ ತಾವೇ ಮಾಲಿಕರು. ತಪ್ಪಿರುವುವುದು,
ಪ್ರಿಯ ಬ್ರೂಟಸ್, ನಮ್ಮ ತಾರೆಗಳಲ್ಲಲ್ಲ, ನಮ್ಮಲ್ಲೇ, ನಾವು ಗುಲಾಮರಾದ ಕಾರಣ. ಬ್ರೂಟಸ್ ಮತ್ತು ಸೀಸರ್:
ಆ ಸೀಸರನಲ್ಲಿ ಇರುವಂಥದೇನು? ಆ ಹೆಸರು ನಿನ್ನ ಹೆಸರಿಗಿಂತ ಹೆಚ್ಚಾಗಿ ಯಾಕೆ ಕೇಳಿಸಬೇಕು? ಅವನ್ನು
ಒಟ್ಟಿಗೇ ಬರೆ: ನಿನ್ನದೂ ಅಷ್ಟೇ ಚೆನ್ನಾದ ಹೆಸರು: ಧ್ವನಿಸು ಅವನ್ನು, ಅದೂ ಬಾಯಿಗೆ ಅಷ್ಟೇ ಹಿತವಾಗಿರುತ್ತದೆ: ತೂಗು ಅವನ್ನು, ಅದೂ ಅಷ್ಟೇ ಘನವಾಗಿರುತ್ತದೆ, ಮಂತ್ರಿಸು ಅವನ್ನು, ಸೀಸರ್ ಎಬ್ಬಿಸುವಷ್ಟೇ ತ್ವರೆಯಿಂದ ಬ್ರೂಟಸ್ನ ಹೆಸರೂ
ಜೀವಾತ್ಮವೊಂದನ್ನು ಎಬ್ಬಿಸೀತು. ಈಗ ಸಕಲ ದೇವತೆಗಳ ಹೆಸರಲ್ಲಿ ಒಟ್ಟಿಗೇ ಕೇಳುತ್ತೇನೆ, ಯಾವ ಮಾಂಸ ತಿನ್ನುತ್ತಾನೆ
ಈ ನಮ್ಮ ಸೀಸರ, ಇಷ್ಟೊಂದು ಶ್ರೇಷ್ಠನಾಗಿ ಬೆಳೆಯುವುದಕ್ಕೆ?
ಕಾಲವೇ, ನಿನಗೆ ನಾಚಿಕೆಗೇಡು. ರೋಮ್, ನೀನು ಕಳಕೊಂಡಿರುವಿ ಕುಲೋತ್ತಮರನ್ನು. ಮಹಾಪ್ರಳಯದ ನಂತರ
ಯುಗವೊಂದು ಸಾಗಿತೆ, ಒಬ್ಬನಲ್ಲದೆ ಬೇರೆ ಮಹಿಮರೇ ಇರದಂಥ? ರೋಮಿನ ಬಗ್ಗೆ ಆಡಿದವರು ಆಡಬಲ್ಲರೆ ಅದರ
ಪ್ರಶಸ್ತ ಭಿತ್ತಿಗಳು ಒಬ್ಬನನ್ನಲ್ಲದೆ ಇಂದಿನ ತನಕ ಒಳಗೊಳ್ಳಲಿಲ್ಲ ಇನ್ನೆಂದೂ ಬೇರೆಯವರನ್ನು ಎಂದು?
ಈಗ ಇದು ರೋಮ್ ನಿಜ, ಅದರೊಳಗೆ ಸಾಕಷ್ಟು ಸ್ಥಳವೂ ಸರಿಯೇ, ಒಬ್ಬನೇ ಮನುಷ್ಯ ಇರುವಾಗ
ಅದರೊಳಗೆ. ಓ! ನೀನು ಮತ್ತು ನಾನು ನಮ್ಮ ಅಪ್ಪಂದಿರನ್ನುವುದನ್ನು ಕೇಳಿದ್ದೇವೆ, ಒಂದು ಕಾಲದಲ್ಲೊಬ್ಬ ಬ್ರೂಟಸ್ ಇದ್ದ ಎನ್ನುವುದನ್ನು, ಅವನು ರೋಮಿನಲ್ಲಿ ಸೈತಾನ ತನ್ನ ಸ್ಥಾನ ಉಳಿಸುವುದನ್ನು ಸಹಿಸುವುದೂ ಒಂದೇ,
ರಾಜ ತನ್ನ ಆಸ್ಥಾನ ಸ್ಥಾಪಿಸುವುದನ್ನು ಸಹಿಸುವುದೂ ಒಂದೇ.
ಬ್ರೂಟಸ್. ನೀನು ನನ್ನನ್ನು ಪ್ರೀತಿಸುತ್ತೀ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ: ನಾನೇನು ಮಾಡಬೇಕೆನ್ನುವಿ ಆ ಕುರಿತು ನನಗೆ ನನ್ನದೇ ಧ್ಯೇಯವಿದೆ: ಈ ಬಗ್ಗೆ ಹಾಗೂ ಈ ಕಾಲದ ಬಗ್ಗೆ ನಾನೇನು ಯೋಚಿಸಿದ್ದೇನೆ, ಅದನ್ನು ಆಮೇಲೆ ಹೇಳುವೆ.
ಸದ್ಯಕ್ಕೆ ನನ್ನನ್ನು ದಯವಿಟ್ಟು ಇನ್ನಷ್ಟು ಒತ್ತಾಯಿಸಬೇಡ, ನಿನ್ನಲ್ಲಿ ನನ್ನ ಪ್ರೀತಿಯ ವಿನಂತಿ: ನಿನಗೇನು ಹೇಳುವುದಿದೆಯೊ
ನಾನದನ್ನು ತಾಳ್ಮೆಯಿಂದ ಕೇಳುವೆ, ಮತ್ತು ಇಂಥ ಉನ್ನತ ವಿಚಾರಗಳನ್ನು ಕೇಳಲು ಹೇಳಲು ತಕ್ಕ ಭೇಟಿಗೆ ಸಮಯವನ್ನು
ಕಂಡುಕೊಳ್ಳುವೆ. ಅಲ್ಲಿಯ ತನಕ, ಮಿತ್ರಶ್ರೇಷ್ಠನೆ, ಈ ಕುರಿತು ಮೆಲುಕು ಹಾಕು. ಈ ಕಾಲ ನಮ್ಮ ಮೇಲೆ ಹೊರಿಸಲು ತಯಾರಾಗಿರುವ ಇಂಥ ಕಠಿಣ ಪರಿಸ್ಥಿತಿಗಳ ಅಡಿಯಲ್ಲಿ ರೋಮಿನ ಮಗನೆಂದು ಕರೆಸಿಕೊಳ್ಳುವುದಕ್ಕಿಂತ
ಬ್ರೂಟಸ್ ಒಬ್ಬ ಹಳ್ಳೀಗಮಾರನಾಗಿ ಇರುತ್ತಾನೆ.
ಕೇಸಿಯಸ್. ನನಗೆ ಖುಷಿಯಾಗುತ್ತಿದೆ ನನ್ನೀ ದುರ್ಬಲ ಶಬ್ದಗಳು ಬ್ರೂಟಸ್ನಿಂದ ಈ ಇಷ್ಟು ಬೆಂಕಿ ಚಿಹ್ನೆಗಳ ಬಡಿದು ತೆಗೆದುವಲ್ಲ ಎಂದು.
ಸೀಸರ್ ಮತ್ತು ಅವನ ಅನುಚರರ ಪ್ರವೇಶ
ಬ್ರೂಟಸ್. ಆಟಗಳು ಮುಗಿದುವು, ಸೀಸರ್ ವಾಪಸು ಬರುತ್ತಿದ್ದಾನೆ.
ಕೇಸಿಯಸ್. ಅವರು ಸಾಗುತ್ತಿರುವಂತೆ ಕಾಸ್ಕಾನ ಅಂಗಿಕೈ ಹಿಡಿದು ಎಳೆ, ಅವನು ಹೇಳಿಯಾನು ಅವನದೇ ಹುಳಿಮಾತಿನಲ್ಲಿ ಈ ದಿನ ಗಮನಾರ್ಹವಾದ್ದು ಏನು ನಡೆಯಿತು ಎಂಬುದನ್ನು.
ಬ್ರೂಟಸ್. ಸರಿ: ಆದರೆ ಗಮನಿಸು ಕೇಸಿಯಸ್, ಸೀಸರನ ಹುಬ್ಬಿನಲ್ಲಿ ಸಿಟ್ಟಿನ ಗುರುತು ಕನಲುತ್ತಿದೆ, ಮತ್ತು ಉಳಿದವರೆಲ್ಲ
ಬಯ್ಗಳು ತಿಂದ ಮಂದೆಯಂತಿದ್ದಾರೆ; ಕಲ್ಪೂರ್ನಿಯಾಳ ಕದಪು ಬಿಳುಚಿದೆ, ಮತ್ತು ಬೆಕ್ಕಿನ ಕೆಂಗಣ್ಣುಗಳ ಸಿಸಿರೋ ಹೇಗೆ
ಕಾಣಿಸುತ್ತಿದ್ದಾನೆಂದರೆ ಪುರಭವನದ ಸಭೆಗಳಲ್ಲಿ ಕೆಲವು ಪುರಪ್ರಮುಖರಿಂದ ಅವನು ಎದಿರೇಟು ತಿಂದಾಗ ನಮಗೆ ಕಾಣಿಸುತ್ತಿದ್ದ ಆ ಅದೇ ರೀತಿ.
ಕೇಸಿಯಸ್. ಕಾಸ್ಕಾ ನಮಗೆ ಹೇಳುತ್ತಾನೆ ಏನು ಸಂಗತಿ ಎಂದು.
ಸೀಸರ್. ಅಂಟೋನಿಯಸ್!
ಆಂಟನಿ. ಸೀಸರ್!
ಸೀಸರ್. ನನ್ನ ಸುತ್ತ ಮುತ್ತ ದಪ್ಪದ ಮನುಷ್ಯರು ಇರಲಿ, ನಯ ನಾಜೂಕು ತಲೆಯವರು, ಮತ್ತು ರಾತ್ರಿ ನಿದ್ರಿಸುವಂಥವರು:
ಆ ಕೇಸಿಯಸ್ಸಿಗೊಂದು ಹಸಿದ ಸಣಕಲು ನೋಟವಿದೆ, ತುಂಬಾ ಚಿಂತಿಸುತ್ತಾನೆ: ಅಂಥಾ ಮನುಷ್ಯರು ಅಪಾಯಕಾರಿಗಳು.
ಆಂಟನಿ. ಅವನ ಭಯ ಬೇಡ ಸೀಸರ್, ಅವನೇನು ಅಪಾಯಕಾರಿಯಲ್ಲ, ಅವನೊಬ್ಬ ಶ್ರೇಷ್ಠ ರೋಮನ್,ಸಾಕಷ್ಟು ಉಳ್ಳವನು.
ಸೀಸರ್. ಅವನು ಇನ್ನಷ್ಟು ದಪ್ಪವಿರಬೇಕಿತ್ತು: ಆದರೆ ನನಗವನ ಭಯವಿಲ್ಲ: ಆದರೂ ನನ್ನ ಹೆಸರು ಭೀತಿಗೆ
ಒಳಗು ಎಂದಾದರೆ, ಆ ಕೃಶ ಕೇಸಿಯನಿಗಿಂತ ನಾನು ದೂರವಿರಬೇಕಾದ ಇನ್ನೊಬ್ಬ ಮನುಷ್ಯನ ಕಾಣೆ. ಬಹಳ ಓದುತ್ತಾನೆ, ಮಹಾ ಸೂಕ್ಷ್ಮಾವಲೋಕಿ, ಮತ್ತು ಮನುಷ್ಯರ ಎಸಕಗಳ ಆಚೆಗೆ ನೋಡುತ್ತಾನೆ. ನಿನ್ನಂತೆ ಅವನಿಗೆ ಆಟಗಳಲ್ಲಿ ಆಸಕ್ತಿಯಿಲ್ಲ, ಆಂಟನಿ: ಅವನು ಸಂಗೀತ ಕೇಳುವುದಿಲ್ಲ; ನಗುವುದೇ ಅಪರೂಪ, ನಕ್ಕರೆ ತನ್ನನ್ನು ತಾನೇ ಗೇಲಿಮಾಡಿದ
ಹಾಗೆ ನಗುತ್ತಾನೆ, ಯಾವುದರ ಕುರಿತೂ ನಗಲು ತಯಾರಾದ ತನ್ನ ಜೀವನವ ಛೇಡಿಸುವ ಹಾಗೆ. ಅವನಂಥ ಮನುಷ್ಯರು, ತಮಗಿಂತ ಉನ್ನತರ ಕಂಡಾಗ ಎಂದೂ ಹೃದಯ ಹಗುರಾಗಿ ಇರುವುದೇ ಇಲ್ಲ, ಆದ್ದರಿಂದ ಅವರು ಅಪಾಯಕಾರಿಗಳು.
ನಾನು ನಿನಗನ್ನುವುದು ಭಯಪಡಬೇಕಾದ್ದು ಯಾವುದಕ್ಕೆ ಎನ್ನುವುದನ್ನು, ನಾನು ಭಯಪಡುತ್ತೇನೆ ಎಂದಲ್ಲ:
ಯಾಕೆಂದರೆ ನಾನು ಯಾವಾಗಲೂ ಸೀಸರನೆ. ನನ್ನ ಬಲಕ್ಕೆ ಬಾ, ಕಾರಣ ಈ ಕಿವಿ ಕಿವುಡು, ನನಗೆ ನಿಜವಾಗಿ ಹೇಳು,
ಅವನ ಬಗ್ಗೆ ನೀನು ಏನು ಯೋಚಿಸುತ್ತೀ ಎನ್ನುವುದನ್ನು.
[ಸಂಗೀತ. ಸೀಸರ್ ಮತ್ತು ಅನುಚರರ ನಿಷ್ಕ್ರಮಣ, ಕಾಸ್ಕಾನ ಹೊರತು
ಕಾಸ್ಕಾ. ನೀವು ನನ್ನ ನಿಲುವಂಗಿ ಹಿಡಿದೆಳೆದಿರಿ, ನನ್ನ ಜತೆ ಮಾತನಾಡುವುದು ಇದೆಯ?
ಬ್ರೂಟಸ್. ಹೂಂ, ಕಾಸ್ಕಾ, ಈವತ್ತು ಏನಾಯಿತು ಹೇಳು,ಸೀಸರಿಗೆ ಯಾಕೆ ಅಷ್ಟೊಂದು ಬೇಸರ?
ಕಾಸ್ಕಾ. ಯಾಕೆ, ನೀವವನ ಜತೆ ಇದ್ದಿರಿ, ಇರಲಿಲ್ಲವೆ?
ಬ್ರೂಟಸ್. ಇದ್ದಿದ್ದರೆ ಏನಾಯಿತೆಂದು ನಾನು ಕಾಸ್ಕಾನ ಕೇಳುತ್ತಿರಲಿಲ್ಲ.
ಕಾಸ್ಕಾ. ಯಾಕೆ, ಕಿರೀಟವೊಂದನ್ನು ಅವನಿಗೆ ನೀಡಲಾಯಿತು; ನೀಡಿರುತ್ತ, ಹಿಂಗೈಯಿಂದ ಅವನದನ್ನು ಬದಿಗಿರಿಸಿದ,
ಈ ರೀತಿ, ಆಗ ಜನ ಕೂಗಾಡತೊಡಗಿದರು.
ಬ್ರೂಟಸ್. ಎರಡನೇ ಕೂಗಾಟ ಯಾತಕ್ಕೆ?
ಕಾಸ್ಕಾ. ಅದಕ್ಕೇ ಮತ್ತೆ.
ಕೇಸಿಯಸ್. ಜನ ಮೂರು ಸಲ ಕೂಗಿದರು. ಆ ಕೊನೇ ಕೂಗು ಯಾತಕ್ಕೆ?
ಕೇಸಿಯಸ್. ಅದಕ್ಕೇ ಮತ್ತೆ.
ಬ್ರೂಟಸ್. ಕಿರೀಟ ಅವನಿಗೆ ಮೂರು ಸಲ ನೀಡಲಾಯಿತೆ?
ಕಾಸ್ಕಾ. ಅಲ್ಲದಿದ್ದರೆ ನನ್ನಾಣೆ, ಮತ್ತೆ ಮೂರು ಸಲ ಅವನದನ್ನು ಬದಿಗಿರಿಸಿದ, ಪ್ರತಿಸಲವೂ ನೀಡಿದ್ದಕ್ಕಿಂತ ಮೃದುವಾಗಿ;
ಮತ್ತು ಪ್ರತಿಸಲ ಬದಿಗಿರಿಸಿದಾಗಲೂ, ನಮ್ಮ ನಿಷ್ಠಾವಂತ ಪಟ್ಟಣಿಗರು ಕೂಗಾಡಿದರು.
ಕೇಸಿಯಸ್. ಆಂಟನಿ ಮತ್ತೆ.
ಬ್ರೂಟಸ್. ಅದರ ವಿಧಾನ ಹೇಳಪ್ಪ ಕಾಸ್ಕಾ.
ಕಾಸ್ಕಾ. ಅದರ ವಿಧಾನ ಹೇಳುವುದಕ್ಕಿಂತಲೂ ನಾನು ನೇಣಿಗೇರಲು ತಯಾರು: ಅದೊಂದು ಬರೇ ಕಣ್ಕಟ್ಟು,
ನಾನದಕ್ಕೆ ಗಮನ ಕೊಡಲಿಲ್ಲ. ಮಾರ್ಕ್ ಆಂಟನಿ ಅವನಿಗೆ ಕಿರೀಟ ನೀಡುವುದನ್ನು ನಾನು ನೋಡಿದೆ, ಆದರೆ ಅದೊಂದು ಕಿರೀಟವಾಗಿರಲಿಲ್ಲ, ಮಣಿಮುಕುಟಗಳು ಇರುತ್ತವಲ್ಲ, ಅಂಥಾದ್ದು: ಮತ್ತು ನಾನಂದ ಹಾಗೆ ಸೀಸರ್ ಅದನ್ನು ಒಮ್ಮೆ
ಬದಿಗಿರಿಸಿದ: ಆದರೆ ಹಾಗಿದ್ದರೂ ನನಗನಿಸುತ್ತದೆ ಅವನದನ್ನು ಇಟ್ಟುಕೊಳ್ಳಲು ಬಯಸಿದ್ದ. ಆಮೇಲೆ ಆಂಟನಿ ಅದನ್ನು ಪುನಃ ನೀಡಿದ: ಅವನದನ್ನು ಪುನಃ ಬದಿಗೆ ಸರಿಸಿದ: ಆದರೆ ನನಗನಿಸುತ್ತದೆ ಅವನಿಗದರಿಂದ ಬೆರಳು ಕೀಳುವುದಕ್ಕೆ
ಮನಸ್ಸಿರಲಿಲ್ಲ ಎಂದು. ಆಮೇಲೆ ಮೂರನೇ ಬಾರಿ ಆಂಟನಿ ಅವನಿಗದನ್ನು ನೀಡಿದ: ಅವನದನ್ನು ಪುನಃ ಬದಿಗಿರಿಸಿದ.
ಹಾಗೂ ಅವನದನ್ನು ಮತ್ತೆ ನಿರಾಕರಿಸಿದ ಕಾರಣ, ಜನ ಕೇಕೆ ಹಾಕಿದರು, ತಮ್ಮ ಒಡೆದ ಕೈಗಳಿಂದ ಚಪ್ಪಾಳೆ ತಟ್ಟಿದರು, ಬೆವರು ಹಿಡಿದ ತಮ್ಮ ಟೊಪ್ಪಿಗಳನ್ನು ಮೇಲಕ್ಕೆ ಹಾರಿಸಿದರು, ಮತ್ತು ಸೀಸರ್ ಕಿರೀಟ ನಿರಾಕರಿಸಿದ ಅಂತ ಎಷ್ಟೊಂದು ಮೊತ್ತದ ದುರ್ವಾಸನೆಯ ಉಸಿರನ್ನು ಆಡಿ ಹೊರಡಿಸಿದರೆಂದರೆ, ಅದು ಇನ್ನೇನು ಅವನ ಉಸಿರು ಕಟ್ಟಿಸಿದ ಹಾಗೇ: ಯಾಕೆಂದರೆ ಅವನು ಪ್ರಜ್ಞೆ ತಪ್ಪಿ ಕೆಳಕ್ಕೆ ಬಿದ್ದುಬಿಟ್ಟ:
ಮತ್ತು ನನ್ನ ಮಟ್ಟಿಗಾದರೆ ನನಗೆ ನಗುವುದಕ್ಕೆ ಧೈರ್ಯವಿರಲಿಲ್ಲ, ತುಟಿ ಬಿಚ್ಚಬೇಕಲ್ಲ ಎಂದು ಭಯ, ಬಿಚ್ಚಿದರೆ ಆ ಕೆಟ್ಟ ಗಾಳಿ ಹೊಟ್ಟೆಗೆ ಹೋಗುತ್ತದೆ.
ಕೇಸಿಯಸ್. ಆದರೆ ಸಮಾಧಾನ, ದಯವಿಟ್ಟು: ಏನು, ಸೀಸರ್ ಮೂರ್ಛೆ ಹೋದನೆ?
ಕಾಸ್ಕಾ. ಸಂತೆ ಪೇಟೆಯಲ್ಲಿ ಅವನು ಕೆಳಕ್ಕೆ ಬಿದ್ದುಬಿಟ್ಟ, ಬಾಯಲ್ಲಿ ನೊರೆ ಬಂತು, ಮತ್ತು ಅವನಿಗೆ ಮಾತು ಕಟ್ಟಿತು.
ಬ್ರೂಟಸ್. ಬಹುಶಃ ಅವನಿಗೆ ಮೂರ್ಛೆರೋಗವಿದೆ.
ಕೇಸಿಯಸ್. ಇಲ್ಲ, ಸೀಸರನಿಗೆ ಅದಿಲ್ಲ. ಆದರೆ ನಿನಗೆ ಮತ್ತು ನನಗೆ, ಮತ್ತು ಸಜ್ಜನ ಕಾಸ್ಕಾಗೆ—ನಮಗೆ ಮೂರ್ಛೆ ರೋಗವಿದೆ.
ಕಾಸ್ಕಾ. ನೀವೇನು ಹೇಳುತ್ತೀರೋ ನನಗೆ ಗೊತ್ತಾಗುತ್ತಿಲ್ಲ,ಆದರೆ ಸೀಸರ್ ಕೆಳಗೆ ಬಿದ್ದ ಅನ್ನುವುದು ಮಾತ್ರ ನಿಜ.
ಒಂದು ವೇಳೆ ಈ ಚಿಂದಿಬಟ್ಟೆಯ ಜನ ಅವನಿಗೆ ಚಪ್ಪಾಳೆ ತಟ್ಟಿಲ್ಲ, ಕೇಕೆ ಹಾಕಿಲ್ಲ, ಅವನು ಅವರನ್ನು ಮೆಚ್ಚಿಸಿದಂತೆ, ಮತ್ತು
ಮೆಚ್ಚಿಸದಂತೆ, ಎಂದಾದರೆ ನಾನು ಸತ್ಯವಂತನೇ ಅಲ್ಲ.
ಬ್ರೂಟಸ್. ಪ್ರಜ್ಞೆ ಬಂದಾಗ ಅವನೇನಂದ?
ಕಾಸ್ಕಾ. ನಿಜ ಹೇಳುತ್ತೇನೆ, ಬೀಳುವುದಕ್ಕೆ ಮೊದಲು, ತಾನು ಕಿರೀಟ ನಿರಾಕರಿಸಿದ್ದಕ್ಕೆ ಜನಸಾಮಾನ್ಯರು ಖುಷಿ ಪಟ್ಟುದನ್ನು ಕಂಡು, ಅವನು ನನ್ನನ್ನು ತನ್ನ ಅಂಗಿ ಸಡಿಲಿಸುವಂತೆ ಮಾಡಿದ, ತನ್ನ ಕುತ್ತಿಗೆ ಕೊಯ್ಯಿರಿ ಎಂದು
ಜನರನ್ನು ಆಹ್ವಾನಿಸಿದ: ನಾನೊಬ್ಬ ಕಸುಬುಗಾರನಲ್ಲದೆ ಇದ್ದು, ಅವನ ಮಾತನ್ನು ಅಕ್ಷರಶಃ ತೆಗೆದುಕೊಳ್ಳದೆ ಇದ್ದಲ್ಲಿ, ಆ ಖೂಳರ
ಜೊತೆ ನಾನು ನರಕಕ್ಕೆ ಹೋಗಬಯಸುತ್ತೇನೆ, ಹಾಗೆ ಅವನು ಕೆಳಕ್ಕೆ ಬಿದ್ದ. ವಾಪಸು ಪ್ರಜ್ಞೆ ಬಂದಾಗ ಅವನಂದ, ತಾನೇನಾದರೂ ತಪ್ಪು ಮಾಡಿದ್ದರೆ ಅಥವ ನುಡಿದಿದ್ದರೆ, ಪ್ರಜಾಧಿಪತಿಗಳು ಅದು ತನ್ನ ಕುಂದೆಂದು ತಿಳಿಯಬೇಕು ಎಂದು.
ನಾನು ನಿಂತಿದ್ದ ಕಡೆ ಮೂರು ನಾಲ್ಕು ಹೆಂಗಸರು ಅಯ್ಯೋ ಎಂಥಾ ಪುಣ್ಯಾತ್ಮ ಎಂದು ಅತ್ತರು, ಹಾಗೂ ತುಂಬು ಹೃದಯದಿಂದ ಅವನನ್ನು ಕ್ಷಮಿಸಿದರು. ಆದರೆ ಅವರನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗಿಲ್ಲ; ಸೀಸರ್ ಅವರ ತಾಯಿಯರನ್ನು ತಿವಿದಿದ್ದರೂ ಅವರು ಅದಕ್ಕಿಂತ ಕಡಿಮೆಯೇನೂ ಮಾಡುತ್ತಿರಲಿಲ್ಲ.
ಬ್ರೂಟಸ್. ಅದಾದ ನಂತರ ಅವನು ಈ ರೀತಿ ದುಗುಡಪಟ್ಟು ಬಂದು ಹೋದ.
ಕಾಸ್ಕಾ. ನಿಜ.
ಕೇಸಿಯಸ್. ಸಿಸಿರೋ ಏನಾದರೂ ಅಂದನೇ?
ಕಾಸ್ಕಾ. ಅಂದ, ಅವನು ಗ್ರೀಕಿನಲ್ಲಿ ಮಾತಾಡಿದ.
ಕೇಸಿಯಸ್. ಏನೆಂದು?
ಕಾಸ್ಕಾ. ಇಲ್ಲ, ನಾನದನ್ನು ಹೇಳಿದರೆ ಮತ್ತೆ ನಿಮ್ಮ ಮುಖ ನೋಡುವಂತಿಲ್ಲ. ಆದರೆ ಅವನ ಮಾತಿನ ಅರ್ಥಮಾಡಿಕೊಂಡವರು ಒಬ್ಬರ ಮುಖ ಒಬ್ಬರು ನೋಡಿ ಮುಸು ಮುಸು ನಕ್ಕರು, ತಲೆ ಆಡಿಸಿದರು: ಆದರೆ ನನ್ನ ಮಟ್ಟಿಗೆ ಅದೆಲ್ಲ ಗ್ರೀಕೇ ಆಗಿತ್ತು. ನಾನು ನಿಮಗೆ ಇನ್ನಷ್ಟು ಸುದ್ದಿ ಹೇಳಬಲ್ಲೆ. ಮರುಲಸ್ ಮತ್ತು ಫ್ಲೇವಿಯಸ್ರನ್ನು ಸೀಸರನ ಪ್ರತಿಮೆಗಳಿಂದ ಬಟ್ಟೆ ಕಿತ್ತದ್ದಕ್ಕಾಗಿ
ಮುಗಿಸಿದ್ದಾರೆ. ವಿದಾಯ ನಿಮಗೆ. ನನಗೆ ನೆನಪಿರುತ್ತಿದ್ದರೆ ಇನ್ನಷ್ಟು ತಮಾಷೆಯಿತ್ತು.
ಕೇಸಿಯಸ್. ನನ್ನ ಜತೆ ರಾತ್ರಿಯೂಟ ಮಾಡುತ್ತೀಯಾ ಕಾಸ್ಕಾ?
ಕಾಸ್ಕಾ. ಇಲ್ಲ, ಬೇರೆ ಏರ್ಪಾಟಾಗಿದೆ.
ಕೇಸಿಯಸ್. ನಾಳೆ ಮಧ್ಯಾಹ್ನ?
ಕಾಸ್ಕಾ. ಓಹೋ, ನಾನು ಬದುಕಿದ್ದರೆ, ಮತ್ತು ನಿನ್ನ ತಲೆ ನೆಟ್ಟಗಿದ್ದರೆ, ಮತ್ತು ನಿನ್ನ ಊಟ ತಿನ್ನೋದಕ್ಕೆ ತಕ್ಕುದಾಗಿದ್ದರೆ.
ಕೇಸಿಯಸ್. ಸರಿ, ನಾನು ಕಾದಿರುತ್ತೇನೆ.
ಕಾಸ್ಕಾ. ಹಾಗೇ ಆಗಲಿ: ಇಬ್ಬರಿಗೂ ವಿದಾಯ.
[ಕಾಸ್ಕಾ ನಿಷ್ಕ್ರಮಣ
ಬ್ರೂಟಸ್. ಎಂಥಾ ಮಂಡನಾಗಿ ಬೆಳೆದುಬಿಟ್ಟಿದ್ದಾನೆ! ಶಾಲೆಗೆ ಹೋಗುವಾಗ ಒಳ್ಳೇ ಚುರುಕಾಗಿದ್ದ.
ಕೇಸಿಯಸ್. ಈಗಲೂ ಹಾಗೆಯೇ ಇದ್ದಾನೆ, ಯಾವುದೇ ಧೀರ ಅಥವಾ ಮಹತ್ವದ ಕಾರ್ಯ ನಡೆಸಬೇಕಾದಲ್ಲಿ,
ಅವನೆಷ್ಟೇ ಮಂಡತನದ ತೋರಿಕೆ ತೋರಿಸಿದರೂ: ಈ ಒರಟುತನ ಅವನ ಜಾಣ ಬುದ್ಧಿಗೆ ಗೊಜ್ಜು ಇದ್ದಂತೆ,
ಜನರಿಗವನ ಮಾತುಗಳನ್ನು ಹೆಚ್ಚು ರುಚಿಯಿಂದ ಸವಿಯುವುದಕ್ಕೆ ಜೀರ್ಣಶಕ್ತಿ ಕೊಡುವುದೇ ಅದು.
ಬ್ರೂಟಸ್. ಅದು ಗೊತ್ತಾಗುತ್ತದೆ.
ಈಗ ನಾನು ನಿನ್ನನ್ನು ಬಿಟ್ಟು ಹೊರಟೆ: ನಾಳೆ, ನನ್ನ ಹತ್ತಿರ ಮಾತಾಡಬೇಕಿದ್ದರೆ, ನಾನು ನಿನ್ನ ಮನೆಗೆ ಬರುತ್ತೇನೆ: ಅಥವಾ ನಿನಗೆ ಮನಸ್ಸಿದ್ದರೆ ನೀನೇ ನನ್ನ ಮನೆಗೆ ಬಂದುಬಿಡು, ನಾನು ಕಾದಿರುತ್ತೇನೆ.
ಕೇಸಿಯಸ್. ಹಾಗೇ ಮಾಡುತ್ತೇನೆ: ಅಲ್ಲಿಯ ವರೆಗೆ ಲೋಕದ ಕುರಿತು ಯೋಚಿಸು.
[ಬ್ರೂಟಸ್ ನಿಷ್ಕ್ರಮಣ)
ಸರಿ ಬ್ರೂಟಸ್, ನೀನು ಉತ್ತಮನು: ಆದರೂ ನನಗನಿಸುವುದು ನಿನ್ನ ಗೌರವಯುತ ಲೋಹವನ್ನು ಅದು ಒಲಿದಿರುವ ಕಡೆಯಿಂದ
ಬಡಿದು ತೆಗೆಯುವುದು ಸಾಧ್ಯ: ಆದ್ದರಿಂದ ಉತ್ತಮರು ಸದಾ ಸಮಾನ ಮನಸ್ಕರ ಜತೆ ಇರುವುದು ಸರಿಯಾದ್ದು: ಯಾಕೆಂದರೆ,
ದಾಕ್ಷಿಣ್ಯಕ್ಕೆ ಒಳಗಾಗದಷ್ಟು ಗಟ್ಟಿಯಾದವರು ಯಾರಿದ್ದಾರೆ?
ಸೀಸರ್ ನನ್ನ ಕುರಿತು ಕಠಿಣ, ಆದರೆ ಬ್ರೂಟಸ್ ಎಂದರೆ ಅವನಿಗೆ ಪ್ರಾಣ. ನಾನೀಗ ಬ್ರೂಟಸ್ ಮತ್ತು ಬ್ರೂಟಸ್
ಕೇಸಿಯಸ್ ಆಗಿರುತ್ತಿದ್ದರೆ, ಅವನು ನನ್ನ ಮಾತಿಗೆ ಕಿವಿ ಕೊಡಬಾರದು. ಈ ರಾತ್ರಿ ನಾನು ಬೇರೆ ಬೇರೆ ಕೈಬರಹಗಳಲ್ಲಿ ಬೇರೆ ಬೇರೆ ನಾಗರಿಕರಿಂದ ಬಂದಂತೆ, ಬರಹಗಳನ್ನು ಬರೆದು ಅವನ ಕಿಟಿಕಿಯತ್ತ ಎಸೆಯುವೆನು, ಎಲ್ಲವೂ ರೋಮ್
ಅವನ ಹೆಸರಿನ ಕುರಿತು ಹೊಂದಿರುವ ಅಭಿಪ್ರಾಯವನ್ನು ಸಮರ್ಥಿಸುವ ರೀತಿ: ಸೀಸರನ ಮಹತ್ವಾಕಾಂಕ್ಷೆಯೂ ಅವುಗಳಲ್ಲಿ ಯಾದೃಚ್ಛವಾಗಿ ದೃಷ್ಟಿಗೆ ಬೀಳುವಂತೆ.
ಆಮೇಲೆ ಸೀಸರ್ ಎಷ್ಟೇ ಗಟ್ಟಿ ಕೂತಿರಲಿ, ನಾವವನನ್ನು ಅಲುಗಾಡಿಸುತ್ತೇವೆ, ಇಲ್ಲವೇ ಇದಕ್ಕೂ ಕೆಟ್ಟ ದಿನಗಳನ್ನು
ತಾಳಿಕೊಂಡಿರುತ್ತೇವೆ.
[ನಿಷ್ಕ್ರಮಣ)
ದೃಶ್ಯ 3
ಜಾಗ ಅದೇ. ಒಂದು ಬೀದಿ.
ಗುಡುಗು ಮಿಂಚು. ಕಾಸ್ಕಾ ಮತ್ತು ಸಿಸಿರೋ ಪ್ರವೇಶ
ಸಿಸಿರೋ. ನಮಸ್ಕಾರ ಕಾಸ್ಕಾ: ಸೀಸರನನ್ನು ಮನೆಗೆ ಕರೆತಂದೆಯಾ? ಯಾಕೆ ಏದುಸಿರುಬಿಡುತ್ತೀ, ಯಾಕೆ ಹೀಗೆ
ದಿಟ್ಟಿಸಿ ನೋಡುತ್ತೀ?
ಕಾಸ್ಕಾ. ಇಡೀ ಭೂಮಿಯೇ ಒಂದು ಅಭದ್ರ ವಸ್ತುವೋ ಎಂಬಂತೆ ನಡುಗುತ್ತಿರುವಾಗ ನಿಮಗೇನೂ ಅನಿಸುವುದಿಲ್ವೇ?
ಓ ಸಿಸಿರೋ, ನಾನು ಚಂಡಮಾರುತಗಳ ಕಂಡಿದ್ದೇನೆ, ಬೆಳೆದು ಗಂಟುಕಟ್ಟಿದ ಓಕ್ ಮರಗಳನ್ನು ಬಯ್ಯುವ ಗಾಳಿಗಳು
ಸಿಗಿದುಹಾಕುವ ಕಾಲ, ಹಾಗೂ ನಾನು ನೋಡಿದ್ದೇನೆ ಮಹತ್ವಾಕಾಂಕ್ಷಿ ಸಮುದ್ರ ಉಕ್ಕುವುದನ್ನು, ಆರ್ಭಟಿಸುವುದನ್ನು
ಹಾಗೂ ನೊರೆಕಾರುವುದನ್ನು, ಆಕ್ರಮಿಸುವ ಮೋಡಗಳ ಎತ್ತರಕ್ಕೆ ಏರುವುದಕ್ಕೆ: ಆದರೆ ಎಂದೂ ಈ ರಾತ್ರಿಯ ಹಾಗೆ,
ಇಂದಿನ ತನಕ ಎಂದೂ, ಬೆಂಕಿಯುಗುಳುವ ಚಂಡಮಾರುತವ ಕಂಡಿಲ್ಲ. ಒಂದೋ ಅಂತರಿಕ್ಷದಲ್ಲೊಂದು ಅಂತರ್ಯುದ್ಧವಿದೆ,
ಇಲ್ಲವೇ ದೇವರುಗಳ ಬಗ್ಗೆ ಸಲುಗೆ ವಹಿಸಿದ ಜಗತ್ತು ಅವರನ್ನು ಕೆಣಕುತ್ತಿದೆ, ವಿನಾಶ ಕಳಿಸುವಂತೆ.
ಸಿಸಿರೋ. ಯಾಕೆ, ಏನಾದರೂ ವಿಲಕ್ಷಣವಾದುದನ್ನು ನೋಡಿದಿಯಾ?
ಕಾಸ್ಕಾ. ಒಬ್ಬ ಸಾಮಾನ್ಯ ಜೀತದಾಳು, ನಿಮಗವನನ್ನು ಕಂಡು ಗೊತ್ತು, ತನ್ನ ಎಡಗೈ ಹಿಡಿದೆತ್ತಿದ, ಇಪ್ಪತ್ತು
ಹಿಲಾಲುಗಳು ಒಟ್ಟಿಗೇ ಸೇರಿದಂತೆ ಅದು ಹೊತ್ತಿ ಉರಿಯಿತು; ಆದರೂ ಅವನ ಕೈ ಉರಿಯ ಅರಿವಿಲ್ಲದೆ ಕರಗದೆ ಇತ್ತು.
ಅಲ್ಲದೆ ಪುರಭವನದ ಸಮೀಪದಲ್ಲೊಂದು ಸಿಂಹವ ಕಂಡ ಲಾಗಾಯ್ತು ನಾನು ಒರೆಸೇರಿಸಿದ್ದಿಲ್ಲ ನನ್ನ ಖಡ್ಗವನ್ನು, ಅದು
ನನ್ನ ದುರುಗುಟ್ಟಿ ನೋಡಿ ಕೋಪದಿಂದ ಸರಿದುಹೋಯಿತು, ನನ್ನ ಕೆಣಕದೆ, ಮತ್ತು ನೂರು ಭಯಂಕರ ಹೆಂಗಸರು ಒಂದೆಡೆ
ಒಟ್ಟೈಸಿದ್ದರು, ಭಯಭೀತರಾಗಿ, ಬೆಂಕಿಯಲ್ಲಿ ಉರಿಯುವ ಮನುಷ್ಯರು ಬೀದಿಗಳ ಉದ್ದಕ್ಕೆ ನಡೆದಾಡುತ್ತಿರುವುದನ್ನು
ತಾವು ನೋಡಿದುದಾಗಿ ಅವರು ಪ್ರಮಾಣಮಾಡಿದರು. ಹಾಗೂ ನಿನ್ನೆ ಹಾಡುಹಗಲಲ್ಲೆ ರಾತ್ರಿಹಕ್ಕಿಯೊಂದು ಸಂತೆಮಾಳದಲ್ಲಿ ಕುಳಿತು ಕಿರುಚುತ್ತಿತ್ತು. ಈ ಮಹಾ ಶಕುನಗಳು ಹೀಗೆ ಮೇಳೈಸಿದಾಗ, ಜನ ಹೇಳದಿರಲಿ ಅವುಗಳ ಕಾರಣ ಹೀಗೇ, ಇವು ನೈಸರ್ಗಿಕ ಎಂದು:
ಯಾಕೆಂದರೆ ನನಗನಿಸುತ್ತದೆ ಅವು ಬೊಟ್ಟುಮಾಡುವ ಹವಾಮಾನಕ್ಕೆ ಅವು ಗಂಡಾಂತರಸೂಚಿ ಎಂಬುದಾಗಿ.
ಸಿಸಿರೋ. ನಿಜಕ್ಕೂ ಇದೊಂದು ವಿಚಿತ್ರಕಾಲ:
ಆದರೆ ಜನ ಅವರವರ ರೀತಿಗನುಸಾರ ಅರ್ಥಮಾಡುತ್ತಾರೆ, ವಸ್ತುಗಳ ಗುರಿಗಿಂತ ತೀರ ಭಿನ್ನವಾಗಿ. ಸೀಸರ್ ನಾಳೆ
ಪುರಭವನಕ್ಕೆ ಬರುತ್ತಾನೆಯೇ?
ಕಾಸ್ಕಾ. ಬರುತ್ತಾನೆ: ಯಾಕೆಂದರೆ ಅವನು ನಿಮಗೆ ತಿಳಿಸುವುದಕ್ಕೆ ಅಂಟೋನಿಯಸ್ಗೆ ಹೇಳಿದ್ದ, ನಾಳೆ ತಾನಲ್ಲಿ
ಇರುತ್ತೇನೆ ಎಂದು.
ಸಿಸಿರೋ. ಶುಭರಾತ್ರಿ, ಹಾಗಿದ್ದರೆ, ಕಾಸ್ಕಾ. ಈ ಕಲುಷಿತ ಆಕಾಶ ನಡೆಯುವುದಕ್ಕೆ ಹೇಳಿದ್ದಲ್ಲವಯ್ಯ.
ಕಾಸ್ಕಾ. ವಿದಾಯ, ಸಿಸಿರೋ.
[ಸಿಸಿರೋ ನಿಷ್ಕ್ರಮಣ
ಕೇಸಿಯಸ್ ಪ್ರವೇಶ
ಕೇಸಿಯಸ್. ಯಾರದು?
ಕಾಸ್ಕಾ. ಒಬ್ಬ ರೋಮನ್.
ಕೇಸಿಯಸ್. ಕಾಸ್ಕಾ, ನಿನ್ನ ಧ್ವನಿ.
ಕಾಸ್ಕಾ. ನಿನ್ನ ಕಿವಿ ಚೆನ್ನಾಗಿದೆ. ಕೇಸಿಯಸ್, ಎಂಥಾ ರಾತ್ರಿ ಇದು!
ಕೇಸಿಯಸ್. ಸಜ್ಜನರಿಗೆ ಮುದ ನೀಡುವ ರಾತ್ರಿ.
ಕಾಸ್ಕಾ. ಆಕಾಶ ಈ ರೀತಿ ಕಾಡುತ್ತದೆ ಎಂದು ಯಾರಿಗೆ ತಾನೆ ಗೊತ್ತಿತ್ತು?
ಕೇಸಿಯಸ್. ಕುಂದುಕೊರತೆಗಳಿಂದ ತುಂಬಿದ ಭೂಮಿ ಗೊತ್ತಿದ್ದವರಿಗೆ ಗೊತ್ತಿತ್ತು. ನನ್ನ ಮಟ್ಟಿಗೆ ಹೇಳುವುದಾದರೆ,
ನಾನು ಬೀದಿಗಳಲ್ಲಿ ಓಡಾಡಿದ್ದೇನೆ, ಈ ಆತಂಕಕಾರಿ ಇರುಳಿಗೆ ನನ್ನನ್ನು ನಾನು ಒಡ್ಡಿಕೊಂಡು; ಮತ್ತು ಈ ತರ ಸಡಿಲಾಗಿ,
ಕಾಸ್ಕಾ, ನೀನು ನೋಡುವ ಹಾಗೆ, ನನ್ನ ಎದೆಯನ್ನು ಗುಡುಗು ಕಲ್ಲಿಗೆ ತೆರೆದಿದ್ದೇನೆ. ಹಾಗೂ ನೀಲಿ ಕೋಲ್ಮಿಂಚು ಆಕಾಶದ
ಎದೆ ತೆರೆಯಿತು ಎಂದಾಗ ನಾನದರ ಗುರಿಗೆ, ಆ ಕ್ಷಣದ ಸೆಳಕಿಗೆ ನನ್ನನ್ನು ನಾನೇ ನೀಡಿಕೊಂಡಿದ್ದೇನೆ.
ಕಾಸ್ಕಾ. ಆದರೆ ಯಾಕಾದರೂ ನೀನು ಆಕಾಶಕ್ಕೆ ಆಮಿಷ ತೋರಿಸಲು ಹೋದಿ? ಬೆದರುವುದು, ನಡುಗುವುದು ಮನುಷ್ಯರು ಮಾತ್ರ, ಅತ್ಯಂತ ಪ್ರಬಲ ದೇವತೆಗಳು ಚಿಹ್ನೆಗಳಿಂದ ಮತ್ತು ಅಂಥ ಭೀಕರ ಶಕುನಗಳಿಂದ ನಮ್ಮನ್ನು
ದಿಗ್ಭ್ರಮೆಗೊಳಿಸಿದಾಗ.
ಕೇಸಿಯಸ್. ನೀನು ಮಂಡ, ಕಾಸ್ಕಾ: ಒಬ್ಬ ರೋಮನ್ನಲ್ಲಿರಬೇಕಾದ ಜೀವದ ಕಿಡಿಗಳು ನಿನ್ನಲ್ಲಿಲ್ಲ; ಅಥವಾ ನೀನದನ್ನು ಬಳಸುತ್ತ ಇಲ್ಲ. ನಿಡು ನೋಟ ನೋಡುತ್ತಿರುವಿ, ಹೆದರಿಕೆ ತಂದುಕೊಂಡಿರುವಿ, ಆಶ್ಚರ್ಯಚಕಿತನಾಗಿರುವಿ ಆಕಾಶದ ವಿಲಕ್ಷಣ ಅಸಹನೆಯ ಕಂಡು: ಆದರೆ ನಿಜವಾದ ಕಾರಣವನ್ನು ನೀನು ಚಿಂತಿಸಿದಲ್ಲಿ ಯಾಕೆ ಈ ಎಲ್ಲಾ ಕಿಚ್ಚುಗಳು,
ಯಾಕೆ ಈ ಎಲ್ಲಾ ಜಾರಿಳಿಯುವ ಜೀವಗಳು, ಯಾಕೆ ಖಗಗಳೂ ಮೃಗಗಳೂ ತಮ್ಮ ಗುಣದಿಂದಲು ವರ್ಗದಿಂದಲು,
ಯಾಕೆ ವೃದ್ಧರೂ ಮತ್ತು ಮೂರ್ಖರೂ ಮತ್ತು ಮಕ್ಕಳೂ ಲೆಕ್ಕಹಾಕಿ ನೋಡು, ಯಾಕೆ ಈ ಎಲ್ಲ ವಸ್ತುಗಳೂ ಬದಲಾಗುತ್ತಿವೆ ತಮ್ಮ ವಿಧಿಯಿಂದ, ಪ್ರಕೃತಿಯಿಂದ ಮತ್ತು ಪೂರ್ವಕಲ್ಪಿತ ಗುಣಗಳಿಂದ ಪೆಡಂಬೂತ ಗುಣಗಳಿಗೆ;
ಆಗ ಗೊತ್ತಾದೀತು ನಿನಗೆ ಅವರನ್ನು ಆಕಾಶ ಈ ಬೂತಗಳಿಂದ ತುಂಬಿರುವುದು ಭೀತಿ ಮತ್ತು ಅಪಾಯದ ಸಾಧನವನ್ನಾಗಿ ಮಾಡುವುದಕ್ಕೆ, ಪೆಡಂಬೂತದಂತಿರುವ ರಾಜ್ಯವೊಂದಕ್ಕೆ.
ಈಗ ನಾನು, ಕಾಸ್ಕಾ, ನಿನಗೆ ಹೆಸರಿಸಲೇ ಒಬ್ಬ ಮನುಷ್ಯನನ್ನು, ಈ ಭೀಕರ ರಾತ್ರಿಯಂತೆಯೇ ಗುಡುಗುವ, ಮಿಂಚುವ, ಗೋರಿಗಳ
ತೆರೆಸುವ ಮತ್ತು ಪುರಭವನದಲ್ಲಿರುವ ಸಿಂಹದಂತೆಯೇ ಗರ್ಜಿಸುವ ಅಂಥವನ:
ನಿನಗಿಂತ ಬಲವಂತನೇನೂ ಅಲ್ಲ, ಅಥವಾ ನನಗಿಂತ, ವೈಯಕ್ತಿಕ ಕಾರ್ಯದಲ್ಲಿ; ಆದರೂ ಅತಿಕಾಯನಾಗಿ ಬೆಳೆದಿದ್ದಾನೆ, ಭಯಂಕರನಾಗಿ, ಈ ವಿಚಿತ್ರ ಉತ್ಪಾತಗಳ ಹಾಗೆಯೇ.
ಕಾಸ್ಕಾ. ಸೀಸರ್ ನೀನು ಹೇಳುತ್ತಿರುವುದು: ಅಲ್ಲವೇ ಕೇಸಿಯಸ್?
ಕೇಸಿಯಸ್. ಅದು ಯಾರೇ ಆಗಲಿ: ರೋಮನರಿಗೀಗ ಸ್ನಾಯುಗಳಿವೆ, ಅಂಗಗಳಿವೆ, ಪೂರ್ವಜರಿಗೆ ಇದ್ದಂತೆಯೇ:
ಆದರೆ ಕಾಲಗುಣವೆನ್ನಲೇ ನಮ್ಮ ಪಿತೃಗಳ ಚಿತ್ತಗಳು ಮಡಿದಿವೆ, ನಮ್ಮನ್ನಾಳುವುದು ನಮ್ಮ ತಾಯಂದಿರ ಹೆಂಗರುಳುಗಳು, ನಮ್ಮ ನೊಗ, ನಮ್ಮ ಬವಣೆ, ನಮ್ಮನ್ನು ಹೆಂಗಸರಂತೆ ತೋರಿಸುತ್ತಿವೆ.
ಕಾಸ್ಕಾ. ನಿಜ, ನಾಳೆ ಪುರಪ್ರಮುಖರು ಸೀಸರನನ್ನು ರಾಜನನ್ನಾಗಿ ಸ್ಥಾಪಿಸಲಿದ್ದಾರೆಂದು ವದಂತಿ:ಅವನು ಜಲದಲ್ಲಿ, ನೆಲದಲ್ಲಿ, ಇಟೆಲಿಯೊಂದನ್ನುಳಿದು ಉಳಿದೆಲ್ಲ ಜಾಗದಲ್ಲಿ ಕಿರೀಟ ಧರಿಸುತ್ತಾನಂತೆ.
ಕೇಸಿಯಸ್. ನನಗೆ ಗೊತ್ತಿದೆ ಆಗ ನಾನೆಲ್ಲಿ ನನ್ನ ಖಡ್ಗ ಧರಿಸುವೆನೆಂದು; ಕೇಸಿಯಸ್ ಕೇಸಿಯಸ್ನನ್ನು ಜೀತದಿಂದ ಮುಕ್ತಗೊಳಿಸುವನು; ಆಮೂಲಕ, ದೈವಗಳೇ, ದುರ್ಬಲರನ್ನು ನೀವು ಅತ್ಯಂತ
ಸಬಲರ ಮಾಡುತ್ತೀರಿ; ಆಮೂಲಕ, ದೈವಗಳೇ, ನೀವು ಸರ್ವಾಧಿಕಾರಿಗಳನ್ನು ಸೋಲಿಸುತ್ತೀರಿ. ಕಲ್ಲಿನ ಕೋಟೆಯಾಗಲಿ, ಹಿತ್ತಾಳೆ ಬಡಿದ ಭಿತ್ತಿಗಳಾಗಲಿ, ಗಾಳಿಯಿಲ್ಲದ ನೆಲಮಾಳಿಗೆಯಾಗಲಿ, ಕಬ್ಬಿಣದ ಬಲಿಷ್ಠ
ಸಂಕಲೆಗಳಾಗಲಿ, ಸಂಕಲ್ಪಬಲವನ್ನು ಹಿಡಿದಿಡಿರಿಸಲಾರವು:
ಈ ಲೌಕಿಕ ತಡೆಗಳಿಗೆ ಬೇಸತ್ತ ಬದುಕು ತನ್ನನ್ನು ತಾನೇ ಮುಕ್ತಗೊಳಿಸುವ ಶಕ್ತಿಯನ್ನು ಎಂದಿಗೂ ಕಳೆದುಕೊಂಡಿರುವುದಿಲ್ಲ. ನನಗಿದು ಅರಿವಿದ್ದರೆ, ಇಡೀ ಜಗತ್ತೇ ಅರಿತುಕೊಳ್ಳಲಿ, ನಾನು ಹೊತ್ತಂಥ ಸರ್ವಾಧಿಕಾರದ ಈ ಭಾರವನ್ನು ನಾನು ಬೇಕೆಂದಾಗ
ಕಳಚಿಕೊಳ್ಳಬಲ್ಲೆ.
[ಇನ್ನೂ ಗುಡುಗಿನ ಶಬ್ದ]
ಕಾಸ್ಕಾ. ಅಂತೆಯೇ ನಾನೂ: ಅಂತೆಯೇ ಪ್ರತಿಯೊಬ್ಬ ಜೀತದವನೂ ತನ್ನ ಜೀತವಿಮುಕ್ತಿಯ ಶಕ್ತಿಯನ್ನು ತನ್ನ ಕೈಯೊಳಗೆ
ಇರಿಸಿಕೊಂಡಿದ್ದಾನೆ.
ಕೇಸಿಯಸ್. ಹಾಗಿದ್ದರೆ ಮತ್ತೆ ಯಾಕೆ ಸೀಸರ್ ಸರ್ವಾಧಿಕಾರಿ? ಬಡ ಪ್ರಾಣಿ, ಅವನೊಬ್ಬ ತೋಳನೂ ಆಗಲಾರನೆಂದು ನನಗೆ ಗೊತ್ತಿದೆ. ಆದರೆ ರೋಮನರು ಕುರಿಗಳೆಂದು ಅವನು ಕಂಡುಕೊಂಡಿದ್ದಾನೆ.
ರೋಮನರು ಚಿಗರೆಗಳಲ್ಲದಿರುತ್ತಿದ್ದರೆ ಅವನು ಸಿಂಹವಾಗುತ್ತಿರಲಿಲ್ಲ. ಭಾರೀ ದೊಡ್ಡ ಬೆಂಕಿ ಮಾಡುವವರು ಬಡ ಹುಲ್ಲುಗಳಿಂದ ಸುರುಮಾಡುತ್ತಾರೆ. ರೋಮ್ ಎಂಥಾ ಕಸ, ಎಂಥಾ ಕೊಳಕು, ಮತ್ತು ಎಂಥಾ ಹೊಲಸು, ಸೀಸರನಂಥ ದುಷ್ಟನನ್ನು ಬೆಳಗಿಸುವುದಕ್ಕೆ ಅದು ನಿಕೃಷ್ಟ ಪದಾರ್ಥವಾಗಿ ಕೆಲಸಮಾಡುತ್ತಿರುವಾಗ. ಆದರೆ ಓ ದುಃಖವೇ, ನೀನೆಲ್ಲಿಗೆ ಒಯ್ದೆ ನನ್ನನ್ನು?
ನಾನಿದನ್ನು ಬಹುಶಃ ಒಬ್ಬ ಮನವಾರೆ ಜೀತದಾಳಿನ ಮುಂದೆ ಹೇಳುತ್ತಿದ್ದೇನೆ. ಹಾಗಿದ್ದರೆ ನನ್ನ ಉತ್ತರ ಸಿದ್ಧವಾಗಿರಬೇಕು. ಆದರೆ ಸಾಯುಧನಿದ್ದೇನೆ ನಾನು, ಹಾಗೂ ಗಂಡಾಂತರಗಳು ನನಗೆ ನಗಣ್ಯ.
ಕಾಸ್ಕಾ. ನೀನು ಕಾಸ್ಕಾನ ಹತ್ತಿರ ಮಾತಾಡುತ್ತಿರುವಿ, ಈ ಮನುಷ್ಯ ಪುಕ್ಕಲು ಚಾಡಿಕೋರನಲ್ಲ. ಹಿಡಿ ನನ್ನ ಕೈಯ,
ಈ ಎಲ್ಲಾ ಶೋಕಗಳ ನೀಗಿಸಲು ಬದ್ಧನಾಗು, ಅತಿ ದೂರ ಯಾರು ಸಾಗುತ್ತಾರೋ ಅಷ್ಟು ದೂರ ನಾನು ನನ್ನ ಕಾಲಿರಿಸುತ್ತೇನೆ.
ಕೇಸಿಯಸ್. ಇದೀಗ ಒಪ್ಪಂದ.
ಈಗ, ನಿನಗೆ ಗೊತ್ತೇ, ಕಾಸ್ಕಾ, ನಾನು ಈಗಾಗಲೇ ಕೆಲವು ಉನ್ನತ ಮನಸ್ಕ ರೋಮನರನ್ನು ಪ್ರೇರೇಪಿಸಿದ್ದೇನೆ, ನನ್ನ ಜತೆ ಅಪಾಯಕಾರಿ ಪರಿಣಾಮವಿರುವ ಯೋಗ್ಯ ಉದ್ಯೋಗವೊಂದನ್ನು ಕೈಗೊಳ್ಳುವುದಕ್ಕೆ; ಹಾಗೂ ನನಗೆ ಗೊತ್ತಿದೆ ಇದರಿಂದ, ಅವರು ಪಾಂಪಿಯ ಮುಖಮಂಟಪದಲ್ಲಿ ನನಗಾಗಿ ನಿಂತಿರುತ್ತಾರೆ: ಈಗ ಈ ಭೀಕರ ರಾತ್ರಿಗೆ ಯಾವುದೇ ಅಲುಗಾಟವಿಲ್ಲ, ಅಥವ
ಬೀದಿಗಳಲ್ಲಿ ನಡೆದಾಟ; ಅಲ್ಲದೆ ವಾತಾವರಣದ ಚಹರೆ, ನಮ್ಮ ಕೈಯಲ್ಲಿರುವ ಕೆಲಸದಂತೆಯೇ ಅತ್ಯಂತ ಆರಕ್ತ, ಕೆಂಡಾಮಂಡಲ, ಮತ್ತು ಅತಿ ಭೀಕರ.
ಸಿನ್ನಾ ಪ್ರವೇಶ
ಕಾಸ್ಕಾ. ಸ್ವಲ್ಪ ಸರಿದು ನಿಂತುಕೋ, ತುರ್ತಿನಲ್ಲಿರುವ ಒಬ್ಬ ಮನುಷ್ಯ ಬರುತ್ತಿದ್ದಾನೆ ಇಲ್ಲಿ.
ಕೇಸಿಯಸ್. ಅದು ಸಿನ್ನಾ, ಅವನ ನಡೆತದಿಂದಲೇ ನನಗೆ ಗೊತ್ತಾಗುತ್ತದೆ, ಅವನೊಬ್ಬ ಸ್ನೇಹಿತ. ಸಿನ್ನಾ, ಎತ್ತ ಕಡೆ
ಧಾವಿಸುತ್ತಿರುವಿ?
ಸಿನ್ನಾ. ನಿನ್ನನ್ನು ಹುಡುಕಿ: ಇದು ಯಾರು, ಮೆಟೆಲಸ್ ಸಿಂಬರ್? ಕೇಸಿಯಸ್. ಅಲ್ಲ, ಇವನು ಕಾಸ್ಕಾ, ನಮ್ಮ ಪ್ರಯತ್ನಗಳಿಗೆ
ಒಂದು ಸೇರ್ಪಡೆ. ನನಗೆ ಬೆಂಬಲ ಇಲ್ಲವೇ ಸಿನ್ನಾ?
ಸಿನ್ನಾ. ನನಗದು ಸಂತೋಷವೇ.
ಇದೆಂಥಾ ಭಯಂಕರ ರಾತ್ರಿ! ನಾವು ಎರಡು ಮೂರು ಜನ ವಿಲಕ್ಷಣ ದೃಶ್ಯಗಳನ್ನು ನೋಡಿದ್ದೇವೆ.
ಕೇಸಿಯಸ್. ನನಗೆ ಬೆಂಬಲವಿಲ್ಲವೇ? ಹೇಳು.
ಸಿನ್ನಾ. ಇದೆ. ಓ ಕೇಸಿಯಸ್, ಶ್ರೇಷ್ಠ ಬ್ರೂಟಸ್ನನ್ನು ನೀನು ನಮ್ಮ ಪಕ್ಷಕ್ಕೆ
ಒಲಿಸುವುದಾದರೆ—
ಕೇಸಿಯಸ್. ನೀನು ತೃಪ್ತನಾಗಿರು. ಪ್ರಿಯ ಸಿನ್ನಾ, ಈ ಕಾಗದ ತೆಗೆದುಕೋ, ಇದನ್ನು ನ್ಯಾಯಾಧಿಕಾರಿಯ ಕುರ್ಚಿಯಲ್ಲಿರಿಸು, ಅಲ್ಲಿ ಬ್ರೂಟಸ್ ಅದನ್ನು ಕಾಣುವುದು ಖಚಿತ: ಮತ್ತೆ ಇದನ್ನು ಅವನ ಕಿಟಿಕಿಯಲ್ಲಿ ಎಸೆ; ಇದನ್ನು ಹಿರಿಯ ಬ್ರೂಟಸ್ನ ಪ್ರತಿಮೆಗೆ ಅಂಟಿಸು: ಇದೆಲ್ಲ ಆದಮೇಲೆ ಪಾಂಪಿಯ ಮುಖಮಂಟಪಕ್ಕೆ ಬಾ, ಅಲ್ಲಿ ನೀನು ನಮ್ಮನ್ನು ಕಾಣುವಿ. ಡೆಸಿಯಸ್ ಬ್ರೂಟಸ್ ಮತ್ತು ಟ್ರೆಬೋನಿಯಸ್ ಅಲ್ಲಿ ಇದ್ದಾರೆಯೇ?
ಸಿನ್ನಾ. ಎಲ್ಲಾ ಇದ್ದಾರೆ, ಮೆಟೆಲಸ್ ಸಿಂಬರ್ನ ಹೊರತು, ಅವನು ನಿನ್ನನ್ನು ಹುಡುಕಿಕೊಂಡು ನಿನ್ನ ಮನೆಗೆ ಹೋಗಿದ್ದಾನೆ. ಸರಿ, ನಾನು ತ್ವರೆಮಾಡುವೆ, ಈ ಕಾಗದ ಪತ್ರಗಳನ್ನು ನೀನಂದಹಾಗೇ ವಿಲೇವಾರಿ ಮಾಡುತ್ತೇನೆ.
ಕೇಸಿಯಸ್. ಅದಾದ ಕೂಡಲೇ ಪಾಂಪಿ ನಾಟಕ ಮಂದಿರಕ್ಕೆ ಹೋಗು. [ಸಿನ್ನಾ ನಿಷ್ಕ್ರಮಣ ಬಾ ಕಾಸ್ಕಾ, ನೀನು ಮತ್ತು ನಾನು ಬೆಳಗಾಗುವ ಮೊದಲೆ ಬ್ರೂಟಸ್ನನ್ನು ಅವನ ಮನೆಯಲ್ಲಿ ಭೇಟಿ ಮಾಡೋಣ: ಅವನ ಮೂರಂಶ ಈಗಾಗಲೇ ನಮ್ಮದಾಗಿದೆ, ಮುಂದಿನ ಭೇಟಿಯಲ್ಲಿ ಮನುಷ್ಯ ಇಡಿಯಾಗಿ ನಮ್ಮವನಾಗುತ್ತಾನೆ.
ಕಾಸ್ಕಾ. ಎಲ್ಲಾ ಜನರ ಹೃದಯಗಳಲ್ಲೂ ಅವನು ಉನ್ನತ ಸ್ಥಾನದಲ್ಲಿದ್ದಾನೆ: ಮತ್ತು ನಮ್ಮಲ್ಲಿ ಅಪರಾಧ- ವೆನಿಸುವುದನ್ನು ಅವನ ಮುಖ ಪ್ರಬಲ ರಾಸಾಯನಿಕದ ಹಾಗೆ ಸುಗುಣವಾಗಿ ಮತ್ತು ಯೋಗ್ಯತೆಯಾಗಿ ಮಾರ್ಪಡಿಸುತ್ತದೆ.
ಕೇಸಿಯಸ್. ಅವನು ಮತ್ತು ಅವನ ಯೋಗ್ಯತೆ, ಹಾಗೂ ನಮಗಿರುವ ಅವನ ಅತ್ಯಗತ್ಯ, ನೀನು ಚೆನ್ನಾಗಿ ಕಲ್ಪಿಸಿದಿ:
ಹೋಗೋಣ, ಯಾಕೆಂದರೆ ನಟ್ಟಿರುಳ ನಂತರ ಮತ್ತು ಮುಂಜಾನೆಯ ಮುನ್ನ ನಾವವನನ್ನು ಎಬ್ಬಿಸಬೇಕು, ಹಾಗೂ
ಅವನ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
(ಎಲ್ಲರೂ ನಿಷ್ಕ್ರಮಣ)
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..