ನಸುಕು.ಕಾಮ್ - ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸ್ವ-ತಂತ್ರ;ಪರಿಪೂರ್ಣ

ನಿಮಗೆ ನಿಜವಾಗಿ ಅನ್ನಿಸೋದು ಏನು ಅದನ್ನು ಹೇಳಿ; ನಮಗದು ಬೇಕು' - ಎಂದರು ಗುರುಗಳು.' ನನ್ನ ಪಾಡಿಗೆ ನನ್ನನ್ನು ಬಿಡಿ'- ಎಂದೆ. ....
ಲಕ್ಷ್ಮೀಶ್ ತೋಳ್ಪಾಡಿ
ಇತ್ತೀಚಿನ ಬರಹಗಳು: ಲಕ್ಷ್ಮೀಶ್ ತೋಳ್ಪಾಡಿ (ಎಲ್ಲವನ್ನು ಓದಿ)

ನಿಮಗೆ ನಿಜವಾಗಿ ಅನ್ನಿಸೋದು ಏನು ಅದನ್ನು ಹೇಳಿ; ನಮಗದು ಬೇಕು’ – ಎಂದರು ಗುರುಗಳು.

‘ ನನ್ನ ಪಾಡಿಗೆ ನನ್ನನ್ನು ಬಿಡಿ’- ಎಂದೆ. ಇದೇ ನನಗೆ ಅನ್ನಿಸೋದು. ಇದು ಕೊನೆಯ ಮಾತು ಎಂದು ತಿಳಕೊಂಡಿದ್ದೆ. ಎಲ್ಲರ ಮನದಾಳದ ಸತ್ಯವಾಗಿರಬಹುದು ಎಂದುಕೊಂಡಿದ್ದೆ. ಏಕೆಂದರೆ, World is too much with us. ಅಥವಾ ನಾವೇ ಈ ಜಗತ್ತನ್ನು ಹೊತ್ತು ಕೊಂಡಿದ್ದೇವೆ. ಶೇಷನ ಹಾಗೆ. ಹೊತ್ತುಕೊಳ್ಳದೆ ಇರಲಾರೆವು ಕೂಡ. ನಾವು ಏನು ಮಾಡಿದರೂ ಅದು ಈ ಜಗತ್ತಿನ ಅನುಕರಣೆ. ಹಾಗೆಂದು ಏನಾದರೂ ಮಾಡಲೇಬೇಕಲ್ಲ. ಲೋಕದ ಅನುಕರಣೆಯೇ ನಾವು ಮಾಡುವ ಲೋಕ ಆರಾಧನೆ. ಆದರೆ ಆರಾಧನೆಗೆ ಲೋಕ ಒಲಿಯುವ ಬಗೆ ಮಾತ್ರ ಕಾಣುತ್ತಿಲ್ಲ. ಒಳ್ಳೆಯದೇ ಆಯಿತು. ಲೋಕ ಒಲಿಯುವುದೂ ದೊಡ್ಡ ಅಪಾಯವೇ. ಆಗ ನಮ್ಮ ಅನುಕರಣೆಯ ಸಾಮರ್ಥ್ಯವೇ ದೊಡ್ಡ ಸಾಧನೆ- ಎಂದಂತೆ. ಅನುಕರಣೆಯಲ್ಲಿ ಅಂತ ತಪ್ಪೇನು? ಅದು ಬದುಕಿನ ಸಹಜ ವ್ಯಾಪಾರ ಎಂದು ನಾವು ವಾದಿಸಬಹುದಾದರೂ ನಮ್ಮನ್ನು ಒಪ್ಪಬೇಕೆಂಬ ಹಂಬಲದಲ್ಲಿ ನಮ್ಮನ್ನು ನಾವು ನಿಜವಾಗಿ ಕಳಕೊಂಡದ್ದು ಕೂಡ ನಿಜವೇ. ಅದೇ ನಿಸರ್ಗದ ಸನ್ನಿಧಿಯಲ್ಲಿ ನಿಂತಾಗ ಎಲ್ಲ ಭಾರಗಳಿಂದ ಕಳಚಿಕೊಂಡ ಅನುಭವ. ಅದು ನಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ನಿರೀಕ್ಷಿಸಲು ನಾವು ಅದರಿಂದ ಬೇರೆಯಾಗಿಲ್ಲ. Nature is too much with us ಎಂದು ಇನ್ನೂ ಯಾರೂ ಹೇಳಿಲ್ಲ. ನಿಸರ್ಗದ ಸನ್ನಿಧಿ ಎಂದರೆ ಅಲ್ಲಿ ನನ್ನ ಪಾಡಿಗೆ ನಾನು ಇದ್ದಂತೆ. ಯಾವ ಭಂಗವೂ ಇಲ್ಲ. ಈ ಎಲ್ಲಾ ಭಾವನೆಗಳು ನನ್ನಲ್ಲಿ ಆವರಿಸಿಕೊಂಡಿದ್ದವು. ನನ್ನ ಪಾಡಿಗೆ ನನ್ನನ್ನು ಬಿಡಿ- ಇದೇ ನನಗೆ ನಿಜವಾಗಿ ಅನಿಸುವುದು ಎಂದು ಹೇಳುವಾಗ….

ಗುರುಗಳು ಅಷ್ಟು ಹೊತ್ತು ಮೌನವಾದರು. ಗುರುಗಳು ಅಷ್ಟು ಹೊತ್ತು ಮೌನವಾದರು. ಮುಖ ದುಗುಡದ ನೆರಳಿನಿಂದ ಆವೃತವಾಯಿತು. ‘ಹಾಗಾದರೆ, ನನ್ನ ಪಾಡಿಗೆ ನನ್ನ ಬಿಡಿ ಎನ್ನುವಾಗ ನಿಮಗೆ ನಿಮ್ಮದೇ ಆದ ಒಂದು ಪಾಡು ಇದೆ ಎಂದಾಯಿತು’ -ಎಂದರು. ಈ ಮಾತಿಗೆ ಏನು ಹೇಳಬೇಕೆಂದು ನನಗೆ ತೋಚದಿದ್ದಾಗ ಅವರು ಅದೇ ಉಸಿರಿನಲ್ಲಿ ಹೇಳಿದರು- ‘ ನಮ್ಮ ಪಾಡು ಇದಕ್ಕಿಂತ ಸ್ವಲ್ಪ ಹೆಚ್ಚು ಕೆಟ್ಟಿರಬೇಕು ‘.

ಅದೇನು ಗುರುಗಳೇ?

‘ ನಿಮಗೆ ನಿಮ್ಮದೇ ಆದ ಒಂದು ಪಾಡಿದೆ. ಹಾಗೆ ಹೇಳುತ್ತೀರಿ ಕೂಡ. ನಮಗಾದರೋ ನಮ್ಮದೇ ಆದ ಒಂದು ಪಾಡೇ ಇಲ್ಲವಾಗಿದೆ!!. ಪಾಡೇ ಇಲ್ಲ ನಮಗೆ. ನಿಮ್ಮ ಪಾಡೇ ನಮ್ಮ ಪಾಡು ಎಂದುಕೊಂಡರೆ ನೀವು ಹೇಳುತ್ತೀರಿ- ‘ ನಮ್ಮ ಪಾಡಿಗೆ ನಮ್ಮನ್ನು ಬಿಡಿ’ ಅಂತ. ನಾವೇನು ಮಾಡಬೇಕು?

ಇದೀಗ ‘ತಿರುವು’!
ನನ್ನ ಪಾಡಿಗೆ ನನ್ನ ಬಿಡಿ ಎಂದು ನಾನು ಹೇಳುವಾಗ ಇದು ಪ್ರಾಯಶ: ಕೊನೆಯ ಮಾತು ಎಂದು ತಿಳಕೊಂಡಿದ್ದೆ. ಇನ್ನು ಮಾತು ಹುಟ್ಟಲಾರದು ಅಂತ. ಹಾಗಲ್ಲ. ಅದು ಕೊನೆಯ ಮಾತಲ್ಲ. ಅದು ಮೊದಲ ಮಾತೇ. ನಮ್ಮದೇ ಆದ ಪಾಡು ಒಂದಿದ್ದರೆ ಅದನ್ನು ಕಳಕೊಳ್ಳುವುದು ಕೊನೆಯ ಮಾತು. ಅದೂ ಕೊನೆಯ ಮಾತಲ್ಲ. ತನ್ನ ಪಾಡು ಕಳೆದುಕೊಂಡು ಹಾಗಾಗಿಯೇ ಲೋಕದ ಪಾಡಿನ ಜೊತೆ ನಾವು ಇದ್ದೇವೆ ಎನ್ನುವುದು ಕೊನೆಯ ಮಾತು. ಪ್ರಾಯ: ಅದೂ ಅಲ್ಲ . ತನ್ನ ಪಾಡನ್ನು ತಾನು ಕಳಕೊಳ್ಳದೆ, ಲೋಕಕ್ಕೆ ಈ ಅವಸ್ಥೆ ಗೊತ್ತಾಗಲಾರದು- ಎನ್ನುವುದು ಕೊನೆಯ ಮಾತು. ಆದುದರಿಂದಲೇ ಲೋಕದಲ್ಲಿ ಕೊನೆಯ ಮಾತು ಎಂಬುದಿಲ್ಲ.

ಬದುಕು ಅನೇಕ ‘ತಿರುವು’ಗಳಲ್ಲಿ ಹಾದುಹೋಗುವುದು. ತಿರುವುಗಳನ್ನುಒದಗಿಸುವುದೇ ಬದುಕಿನ ನಿಜವಾದ ‘ಕೊಡುಗೆ’ ಇರಬಹುದು. ಅಂದರೆ, ನಾವು ಭಾವಿಸಿದ್ದ ಕ್ಕಿಂತ, ಊಹಿಸಿದ್ದಕ್ಕಿಂತ ಬೇರೆ ಆದ ವಿರುದ್ಧವಾದ, ಆದುದರಿಂದ ನಾವು ಊಹಿಸಲಾಗದ ‘ನಡೆ’ಗಳು ಬದುಕಿನಲ್ಲಿ ಇವೆ ಎಂಬ ಅರಿವು ಆದುದರಿಂದ ನಾವು ಬದುಕಿನಲ್ಲಿ ಎಂಬ- ಅರಿವು. ಒಂದು ಬದಿಯಿಂದ ನಾವು ಕಟ್ಟುತ್ತಾ, ಬದುಕನ್ನು ಕಟ್ಟುತ್ತಾ ನಡೆಯುವೆವು ಅಥವಾ ಹಾಗೆಂದು ಭಾವಿಸುವೆವು. ಇನ್ನೊಂದು ಬದಿಯಿಂದ ಬದುಕು ತಾನು ಕಟ್ಟಿದ್ದನ್ನು ತಾನೇ ಮುರಿಯುತ್ತಾ ಸಾಗುವುದು. ಈ ತಿರುವನ್ನು ನಾವು ಊಹಿಸಲಾರೆವು. ಊಹಿಸಬಲ್ಲೆ ವಾದರೂ ಹಾಗೆ ಊಹಿಸುವುದು ನಮಗೆ ಬೇಕಿಲ್ಲ. ಮಕ್ಕಳು ಮರಳಿನಲ್ಲಿ ಮನೆ ಕಟ್ಟುವರು. ಕಟ್ಟುವಲ್ಲಿ ಸಂತೋಷಪಡುವರು. ಅವರಿಗದು ಆಟ . ಕಟ್ಟಿದ್ದನ್ನು ಮರುಕ್ಷಣ ಕೆಡಹುವರು.ಕೆಡಹುವಲ್ಲಿ ಪ್ರಾಯಶ: ಕಟ್ಟಿದ್ದ ಕ್ಕಿಂತ ಹೆಚ್ಚಿನ ಸಂತಸ. ಇದೂ ಆಟ. ತಿರುವಿನಲ್ಲಿ ನಡೆಯಲಾಗದಿದ್ದರೆ ಆಟದ ಸಂತಸವಿಲ್ಲ.

ದೊಡ್ಡ ಲೇಖಕರು, ತಮ್ಮ ಕೃತಿಗಳಲ್ಲಿ, ಬದುಕಿನ ಈ ವಿಚಿತ್ರ ತಿರುವುಗಳನ್ನು ಸೂಚಿಸುವು ಮಹಾಭಾರತವನ್ನು ಗಮನಿಸಬಹುದು. ಕುಂತಿ, ಸೂರ್ಯನಿಂದ, ಕರ್ಣನನ್ನು ಪಡೆದಳು. ಮಗುವನ್ನು ಪಡೆದೂ ಕುಂತಿಯ ಕನ್ನೆತನ ಕೆಡದೆ ಉಳಿಯಿತಂತೆ. ಅದು ಸೂರ್ಯನ ಅನುಗ್ರಹ. ‘ಕನ್ನಿಕೆ’ಯ ಮುಟ್ಟಿದನು ಮುನ್ನಿನ ಕನ್ನೆತನ ಕೆಡದಿರಲಿ ಎನುತವೆ. ಇದೇನೋ ಅದ್ಭುತವೇ. ಆದರೆ ಮಗು ಕರ್ಣನನ್ನು ಚೆಲುವುದಕ್ಕೂ ಈ ಕನ್ನೆತನ ಕೆಡದಿರುವುದೇ ಕಾರಣ. ಕುಂತಿಯಲ್ಲಿ ತಾಯ್ತನವೇ ಉಂಟಾಗಲಿಲ್ಲ! ಮಗುವನ್ನು ಕೈ ಚೆಲ್ಲಿದಳು.

ಪ್ರಕೃತಿ ಚಿರಕನ್ನಿಕೆ ಮನುಷ್ಯ ಜೀವಿ ಇಲ್ಲಿ ತಾಯಿಯನ್ನು ಹುಡುಕುತ್ತಿದ್ದಾನೆ !

ಸಂಭ್ರಮದ ಜೊತೆಗೆ ಒಂದು ದುರಂತ ಪ್ರಜ್ಞೆ ಇಲ್ಲಿ ತಳಕು ಹಾಕಿಕೊಂಡೇ ಇದೆ. ಕಠೋಪನಿಷತ್ತಿನಲ್ಲಿ ನಚಿಕೇತನ ಆ ಮಾತು. ನಚಿಕೇತನ ತಂದೆ ವಾಜಶ್ರವಸ ಯಜ್ಞ ದೀಕ್ಷಿತನಿದ್ದ. ದಾನ ಮಾಡುತ್ತಿದ್ದ. ದಾನ ಯೋಗ್ಯವಲ್ಲದ ಗೋವುಗಳನ್ನು ದಾನ ಮಾಡಿದ. ಇವುಗಳನ್ನೆಲ್ಲ ನಚಿಕೇತ ನೋಡುತ್ತಿದ್ದ. ಎದ್ದುಬಂದು ತಂದೆಯನ್ನು ಕೇಳಿದ, ‘ಕ ಸ್ಮೈ ಮಾಮ್ ದಾಸ್ಯಸಿ?’ ‘ ನನ್ನನ್ನು ಯಾರಿಗೆ ಕೊಡುತ್ತಿ?’ ನನ್ನನ್ನು ಯಾರಿಗೆ ಕೊಡುತ್ತಿ?’ಎಂಬ ಮಾತಿಗೆ ಅರ್ಥವೇನು? ಬದುಕಿನ ಸಂದರ್ಭದಲ್ಲಿ ಸಹಜವಾಗಿ ಹುಟ್ಟಿಕೊಂಡಂತೆ ಇರುವ ಈ ಮಾತು, ಸಂದರ್ಭವನ್ನು ಬದಲಾಯಿಸತಕ್ಕ ಮಾತು ಕೂಡ. ಇದು ‘ತಿರುವು’. ಇದು ಸತ್ಯವೇ ನಮ್ಮಲ್ಲಿ ಕೇಳುತ್ತಿರುವ ಮಾತು. ‘ಸತ್ಯ ನಮ್ಮ ನಡೆ ತಪ್ಪೆನ್ನಲಾರದು. ಟೀಕಿಸಲಾರದು. ಅದರ ರೀತಿಯೇ ಬೇರೆ. ನೀನು ನನ್ನನ್ನು ಹೇಗೆ ಬಳಸುವುದಕ್ಕೂ ಸ್ವತಂತ್ರ – ಎನ್ನುವಂತಿದೆ ಅದು; ಬಿಟ್ಟು ಬಿಡುವುದಕ್ಕೂ ಕೂಡ

ಸತ್ಯವನ್ನು ಸ್ವ-ತಂತ್ರ ಎನ್ನುತ್ತಾರೆ. ಆದರ ಸ್ವಾತಂತ್ರ್ಯ ಅದು ನಮ್ಮನ್ನು ನಂಬಿದ್ದರಲ್ಲಿದೆ ;ಎನಿಸುತ್ತದೆ. ನಾವು ‘ಸ್ವಾತಂತ್ರ್ಯದ’ ಬಗೆಗೂ ಪ್ರಾಯಶ: ತಪ್ಪುತಿಳಿದಿದ್ದೇವೆ. ನಮ್ಮಲ್ಲಿ ನಮಗೆ ನಂಬಿಕೆ ಇರುವುದು ಸ್ವ- ತಂತ್ರ ಮನೋಧರ್ಮ ಎಂದು ಕೊಂಡಿದ್ದೇವೆ. ಗುರುಗಳ ಬಾಳಿನಲ್ಲಿ ನಾನು ಕಂಡ ಸತ್ಯವೇನೆಂದರೆ, ನಿಜಕ್ಕೂ ಸ್ವತಂತ್ರ ನಾದವನು ಮಾತ್ರ ಇನ್ನೊಬ್ಬನನ್ನು ಪರಿಪೂರ್ಣವಾಗಿ ನಂಬಬಲ್ಲ ಎಂದು; ನಿಜವಾಗಿ ನಂಬಬಲ್ಲ ಎಂದು. ಇದು ವಿರೋಧಾಭಾಸವಾಗಿ ಕಾಣಿಸಬಹುದು. ಕಾಣಿಸುವುದೇ ಅದರ ವಿಶೇಷ ಎನ್ನಬೇಕು. ‘ನನ್ನನ್ನು ಯಾರಿಗೆ ಕೊಡುತ್ತಿ?’ ಎಂದು ಉಪನಿಷತ್ತಿನ ಮಾತು; ‘ನಮ್ಮದೇ ಆದ ಪಾಡೇ ನಮಗಿಲ್ಲ: ಏನು ಮಾಡೋಣ ‘- ಎಂದ ಗುರುಗಳ ಮಾತು ಪರಸ್ಪರ ಡಿಕ್ಕಿ ಹೊಡೆಯುತ್ತಲೇ ಇವೆ!

✍ ತೋಳ್ಪಾಡಿಯವರ ಬೆಟ್ಟ ಮಹಮ್ಮದನ ಬಳಿಗೆ ಬಾರದಿದ್ದರೆ ಪುಸ್ತಕದ ಆಯ್ದ ಭಾಗ.