ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸ್ಮಿತಾ ಅಮೃತರಾಜ್
ಇತ್ತೀಚಿನ ಬರಹಗಳು: ಸ್ಮಿತಾ ಅಮೃತರಾಜ್ (ಎಲ್ಲವನ್ನು ಓದಿ)

ಸಂಗಾತಿ ಎಂಬ ಅಂತರ್ಜಾಲ ಸಾಹಿತ್ಯ ಪತ್ರಿಕೆಯ ಮೂಲಕ ಸಾಕಷ್ಟು ಬರಹಗಾರರನ್ನೂ, ಓದುಗರನ್ನೂ ರೂಪಿಸಿದಂತಹ ಕು. ಸ. ಮಧುಸೂದನರವರು ಒಬ್ಬ ಸಂವೇದನಾಶೀಲ ಬರಹಗಾರ. ಕತೆ, ಕವಿತೆ,ಅಂಕಣ ಬರಹ, ವೈಚಾರಿಕ ಲೇಖನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಸದಾ ಪರಿಚಿತರು. ಅವರ ಬಿಡಿ ಬಿಡಿ ಬರಹಗಳನ್ನು ಅಲ್ಲಲ್ಲಿ ಓದಿ ಆಸ್ವಾದಿಸಿದ್ದ ನನಗೆ ಇತ್ತೀಚೆಗೆ ಅವರ ಇಡೀ ಸಂಕಲನದ ಗುಚ್ಚವನ್ನು ಒಂದೇ ಬಾರಿಗೆ ಓದುವ ಅವಕಾಶ. ಒಂದೊಳ್ಳೆಯ ಕವನ ಸಂಕಲನಕ್ಕೆ ಕು.ಸ. ಮಧುಸೂದನರವರನ್ನು ಅಭಿನಂದಿಸುತ್ತಾ ಅವರ ದುರಿತ ಕಾಲದ ದನಿಯ ಕುರಿತು ಒಂದಷ್ಟು ಬರೆಯಬೇಕೆನ್ನಿಸುತ್ತಿದೆ.

ವರ್ತಮಾನದ ಪ್ರಸ್ತುತತೆಗೆ ಸ್ಪಂದಿಸುವ ಜಾಯಮಾನವುಳ್ಳಂತಹವು ಇಲ್ಲಿಯ ಕವಿತೆಗಳು. ಈ ಸಂದರ್ಭದ ತಲ್ಲಣಗಳು, ಆತಂಕಗಳು, ಸಾಮಾಜಿಕ ಮತ್ತು ರಾಜಕೀಯ ಪಲ್ಲಟಗಳು ಅವರ ಕವಿತೆಯ ದನಿಯಾಗಿವೆ. ತನ್ನ ಸುತ್ತಮುತ್ತಲಿನ ಬಿಕ್ಕಟ್ಟುಗಳಿಗೆ ಮುಖಾಮುಖಿಯಾಗುತ್ತಲೇ ಅವರ ಕವಿತೆಯ ಹೃದಯ ಮಿಡಿಯುತ್ತವೆ. ತನ್ನನ್ನು ಸುತ್ತುವರೆದ ಸಮಾಜದೊಳಗಿನ ಬದುಕಿನ ಸ್ಥಿತಿಗತಿಗಳು ಅದು ತನ್ನದೇ ಬದುಕಿನ ಒಂದು ಭಾಗ ಅಂದುಕೊಂಡಾಗಲಷ್ಟೇ ಇಂತಹ ತಾಕುವ ಕವಿತೆಗಳನ್ನು ಬರೆಯಲು ಸಾಧ್ಯ. ಹಾಗಾಗಿ ಅಂತ:ಕರಣ ತುಂಬಿದ ಇಲ್ಲಿಯ ಕವಿತೆಗಳು ಸಂಕಟಕ್ಕೆ ಸಾಂತ್ವನದ ಕಿವಿಯಂತೆಯೂ, ಗಾಯಕ್ಕೆ ಮುಲಾಮಿನಂತೆಯೂ ಭಾಸವಾಗುತ್ತದೆ. ಹಸಿವು, ಬಡತನ, ಅಸ್ಥಿರತೆ, ದಬ್ಬಾಳಿಕೆ, ಸರ್ವಾಧಿಕಾರ, ಪ್ರೀತಿ, ಪ್ರೇಮ, ದ್ವೇಷ, ಕಲಹ ಎಲ್ಲವುಗಳ ಆಳಕ್ಕಿಳಿದು ಅನುಭವಿಸಿ ಮರುಗುತ್ತದೆ.

ಅವರ ರಣ ಹಸಿವು ಅನ್ನುವ ಕವಿತೆಯಲ್ಲಿ, ಹಸಿವು ಅನ್ನುವಂಥದ್ದು ಯಾವ ಮಟ್ಟದಲ್ಲಿರುತ್ತದೆ? ಆ ಹಸಿವೆಗಾಗಿ ಮನುಷ್ಯನ ಹಪಾಹಪಿಕೆ ಎಂಥದ್ದು? ಹಸಿವು ತೀರಿಕೊಂಡ ನಂತರ ಪ್ರಕಟಗೊಳ್ಳುವ ಸೋಗಿನ ಮುಖವಾಡ, ಅದಕ್ಕೆ ಕೊಟ್ಟು ಕೊಳ್ಳುವ ಸಮರ್ಥನೆಗಳು ಹಸಿವಿನ ಅನೇಕ ಮುಖಗಳನ್ನು ಅಚ್ಚರಿ ಹುಟ್ಟಿಸುವಂತೆ ಅನಾವರಣಗೊಳಿಸುತ್ತವೆ.

ಮತ್ತೊಂದು ಕವಿತೆಯಲ್ಲಿ, ಜಾಗತೀಕರಣದ ಭರಾಟೆಯಲ್ಲಿ ಹೇಗೆ ಇದ್ದದ್ದನ್ನು ಬಿಟ್ಟು, ಇಲ್ಲದಕ್ಕೆ ತುಡಿಯುತ್ತಾ ಏನೂ ಇಲ್ಲದಾಗಿಬಿಡುವ ಸಂಗತಿಯನ್ನು ವಿಡಂಬನಾತ್ಮಕವಾಗಿ ಚಿತ್ರಿಸುತ್ತಾರೆ. ಇರುವ ತನ್ನ ಸ್ವಂತದ ಇಷ್ಟಗಲ ಜಾಗೆಯನ್ನೂ ಮಾರಿ, ಹೆದ್ದಾರಿಯ ಬದಿಯಲ್ಲಿ ಹಸುಗಳಿಗೆ ಮೇವು ಅರಸುವುದು, ಭೂಮಿಯ ಒಡೆಯರೀಗ ಹೈಟೆಕ್ ಡಾಬಾಗಳಲ್ಲಿ ಟೇಬಲ್ ತಟ್ಟೆ ಒರೆಸುವುದು..ಇನ್ನೂ ಮುಂದಕ್ಕೆ ಹೋಗಿ ಕವಿತೆ ಹೀಗೆ ಹೇಳುತ್ತದೆ,

ಮೊನ್ನೆ ಯಾರೋ ನೆಟ್ಟು ಹೋದರು
ಮೈಲಿಗೊಂದರಂತೆ
ಬರಲಿವೆ ಒಳ್ಳೆಯ ದಿನಗಳು.


ಬಡತನದ ಮೆಲೆ ಭ್ರಾಮಕ ಬದುಕಿನ ಆಸೆ, ಅಮಿಷ ಮತ್ತು ಒತ್ತಡಗಳು ಹೇರಲ್ಪಟ್ಟಾಗ, ಒಳ್ಳೆಯ ದಿನಗಳು ಬರಲಿವೆಯೆಂಬ ಆಸೆಯ ಮಿಣುಕು ದೀಪವಷ್ಟೇ ಈಗ ಬದುಕಿಗೆ ಉಳಿದಿರುವುದು. ಈ ವ್ಯಂಗ ನಮ್ಮನ್ನು ತಟ್ಟದೇ ಇದ್ದೀತೇ?
ಇಲ್ಲಿ ಕವಿಮನಸು ದೇಶದ ಸ್ಥಿತಿಯ ಕುರಿತು ಚಿಂತಿಸುತ್ತದೆ. ದೇಶವೊಂದು ಭೂಪಟದಲ್ಲಿ ಎಳೆದ ಕಲ್ಪನೆಯ ಗಡಿಗಳು ಅಂದುಕೊಳ್ಳುವುದಕ್ಕಿಂತ, ದೇಶವೆಂಬುದು ರಕ್ತ, ಮಾಂಸಗಳಿಂದ ಕೂಡಿದ ಮನುಷ್ಯರೆಂದು ಭಾವಿಸಿದಾಗ ಮಾತ್ರ ಮನುಷ್ಯರು ಮನುಷ್ಯರಾಗಿಯೇ ಉಳಿದು ದೇಶದಲ್ಲಿ ಮಾನವೀಯತೆ ಮಾತ್ರ ನೆಲೆಸಬಹುದು ಅನ್ನುವಂತದ್ದು ಕವಿತೆಯ ಸಹಜ ಅಂತ:ಕರಣ.
ನಮಗೆ ಸುಖದ ಕುರಿತು ಮಾತೇ ಹುಟ್ಟುವುದಿಲ್ಲ. ಎಲ್ಲಿ ನೋಡಿದರೂ ನಿರಾಸೆ, ಆತಂಕ, ಹುಂಬ ನಿರೀಕ್ಷೆ. ಅದಕ್ಕೆ ಕವಿ ಬರೆಯುವ ಸಾಲುಗಳು ತುಂಬಾ ಅರ್ಥಪೂರ್ಣವಾದದ್ದು. ಪ್ರಖರ ಹಗಲನ್ನೂ, ಪ್ರಶಾಂತ ಬೆಳದಿಂಗಳನ್ನೂ ಕಳಕೊಂಡ ಮೇಲೆ ಕಷ್ಟ ಕಾಲದ ಮಾತುಗಳಿಗೆ ಕೊನೇಯೇ ಇಲ್ಲ ಅನ್ನುತ್ತಾರೆ. ಎದೆ ತುಂಬಾ ನೋವು, ದಿಗಿಲು ತುಂಬಿಕೊಂಡ ಈ ನೆಲದ ಬದುಕಿನ ಧಾರುಣ ಸ್ಥಿತಿಯನ್ನ ಇದು ಕಣ್ಣಿಗೆ ರಾಚುವಂತೆ ಕಟ್ಟಿ ಕೊಡುತ್ತದೆ. ಅದಕ್ಕಾಗಿಯೇ ನಿಸರ್ಗ ಕಲಿಸುವ ಪಾಠಕ್ಕಿಂತ ಉತ್ತಮವಾದದ್ದು ಯಾವ ಶಾಲೆಯೂ ಕಲಿಸಲಾರದು ಅನ್ನುವುದು ಇಲ್ಲಿಯ ಕವಿತೆಯ ಅಂತರಾಳ. ನಿಸರ್ಗದ ಮಗುವಾಗಿ ಬಿಡುವುದೇ ಪರಮ ಸುಖ ಅನ್ನುವಂಥದ್ದು ಕವಿತೆಯ ಒಳದನಿ.

ಇವತ್ತು ದಬ್ಬಾಳಿಕೆ, ಸರ್ವಾಧಿಕಾರ ಅನ್ನುವಂಥದ್ದು ಸಾಹಿತ್ಯ ಕ್ಷೇತ್ರವನ್ನೂ ಬಿಟ್ಟಿಲ್ಲ ಅನ್ನುವಂಥದ್ದನ್ನು ಹೇಳುತ್ತಾ ಇವತ್ತು ಒಬ್ಬ ಬರಹಗಾರನ ಸಂವೇದನೆಯನ್ನೂ, ಸ್ವಾತಂತ್ರ್ಯವೂ ಹರಣಗೊಳ್ಳುವುದರ ಕುರಿತು ಕವಿ ಖೇದ ವ್ಯಕ್ತಪಡಿಸುತ್ತಾರೆ. ಧಣಿಗಳ ವಿರುದ್ಧ ಏನೂ ಬರೆಯಬಾರದು ಅನ್ನುವ ಆದೇಶ ಇರಬಹುದು, ನಿರಾಳವಾಗಬೇಕೆಂದು ಬರೆಯ ಹೊರಟ ಕವಿತೆಗಳಿಗೆ ಗುಂಡು ಹೊಡೆಯುವುದು , ಇವೆಲ್ಲಾ ಒಂದು ಅಪಾಯಕಾರಿ ಬೆಳವಣಿಗೆಯಂತೆ ಗೋಚರಿಸುತ್ತದೆ. ಕವಿತೆಗಳನ್ನು ಕೊಲ್ಲುವ ಹಂತಕರೇ ತುಂಬಿರುವಾಗ ಮನುಷ್ಯನಿಗೆ ಬದುಕು ಸಾಧ್ಯವೇ ? ಅನ್ನುವ ಆತಂಕ ಒಳಗೊಂದು ಸಣ್ಣಗೆ ನಡುಕವನ್ನು ಹುಟ್ಟಿ ಹಾಕಿ ಬಿಡಬಲ್ಲದು. ಹಾಗಾಗಿ ಒಬ್ಬ ಕವಿಯಾದವನು ಅಲ್ಲೂ, ಇಲ್ಲೂ, ಎಲ್ಲೂ ಸಲ್ಲದೆ ಅತಂತ್ರವಾಗುವ ಸ್ಥಿತಿ ಆತಂಕಕಾರಿಯಾದದ್ದು. ಆದಕಾರಣ ಈ ವ್ಯವಸ್ಥೆಯೊಳಗೆ ಅಮಾಯಕರಂತೆ,ಕಣ್ಣಿದ್ದೂ ಕುರುಡರಂತೆ, ಕಿವಿಯಿದ್ದೂ ಕಿವುಡರಂತೆ ಇರಬೇಕಾದ ಅನಿವಾರ್ಯತೆಯ ಹಿಂದಿನ ನೋವು ಘಾಸಿಗೊಳಿಸುವಂತದ್ದು. ಆ ಕಾರಣದಿಂದ ಇಲ್ಲಿಯ ಕವಿತೆಗಳು ಎಲ್ಲಾ ಸನ್ನಿವೇಶ, ಸಂದರ್ಭಗಳಿಗೆ ಮುಖಾಮುಖಿಯಾಗುತ್ತಲೇ ನಮ್ಮೊಳಗೊಂದು ಪ್ರಶ್ನೆಯನ್ನು ಹುಟ್ಟಿ ಹಾಕುತ್ತದೆ.

ಪ್ರಜಾಪ್ರಭುತ್ವದ ದಿಗ್ವಿಜಯದ ಅಟ್ಟಹಾಸದಲ್ಲಿ ಶಾಸನಗಳ ಕಲ್ಲುಗಳಡಿಯಲ್ಲಿ ಹತರಾಗಿ ಗುರುತೇ ಇಲ್ಲದಾಗಿ ಹೋದ ಅಸಹಾಯಕರ ಚಿತ್ರಣ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ. ರಾಜಕೀಯ ನಾಯಕರ ಕೈಯಲ್ಲಿಯ ಶಾಂತಿ ದ್ಯೋತಕವಾದ ಪಾರಿವಾಳಗಳು ಹಾರಲೊಪ್ಪದೆ ಗೋಣು ವಾರೆಯಾಗಿಸಿ ನೆಲಕ್ಕೆ ಬೀಳುವುದು ಮೌನ ಪ್ರತಿಭಟನೆಯಂತೆ ಗೋಚರಿಸುತ್ತದೆ. ನಮ್ಮ ರಾಜಕೀಯ ನಾಯಕರಿಗೆ ಇತಿಹಾಸ ಮತ್ತು ಪುರಾಣ ತಮ್ಮ ಗದ್ದುಗೆಯನ್ನು ಏರಲು ಮತ್ತು ಉಳಿಸಿಕೊಳ್ಳುವ ತಂತ್ರವಷ್ಟೇ ಎನ್ನುವ ಸತ್ಯವನ್ನ ಕವಿತೆಯ ಸಾಲುಗಳು ನಿರ್ಭಿಡೆಯಿಂದ ಹೇಳುತ್ತವೆ. ನಿಜಕ್ಕೂ ದುರಿತ ಕಾಲದ ದನಿಯಂತಿರುವ ಇಲ್ಲಿಯ ಕವಿತೆಗಳು ನಮ್ಮನ್ನು ಒಳಹೊಕ್ಕು ಅಲ್ಲಾಡಿಸಿ ಇಡುತ್ತವೆ. ಬಿಳಿ ಅಂದರೆ ಏನು ಮತ್ತು ಅದನ್ನು ಕಲೆಯಾಗಿಸದಂತೆ ನೋಡಿಕೊಳ್ಳುವುದು ಎಷ್ಟು ಕಷ್ಟದ್ದು ಅನ್ನುವಂಥದ್ದು ಇಲ್ಲಿಯ ಕವಿತೆಗಳಿಗೆ ತಿಳಿದಿದೆ. ಬೆಕ್ಕಿನಂತಹ ಗಂಡಸರ ಕುರಿತು, ಅವರಿಗಾಗಿ ಕಾಯುವ ಮುಗ್ಧ ಹೆಣ್ಮಕ್ಕಳ ಕುರಿತು ಕವಿತೆಗಳು ಮುಲಾಜಿಲ್ಲದಂತೆ ಹೇಳುತ್ತವೆ. ಹೇಗೆ ಪ್ರೀತಿ ತುಂಬಿದ ಪತ್ರವೊಂದು ಆರಾಧನೆಯಾಗಿ, ನಂತರ ಪ್ರಶ್ನೆಯಾಗಿ, ಕೊನೆಗೆ ಮೌನವಾಗಿ ನಿರುತ್ತರವಾಗಿ ಬಿಡುವಂತಹ ಹೌದು ಹೌದು ಅನ್ನಿಸುವಂತಹ ತಟ್ಟುವ ಸಾಲುಗಳು ಇಲ್ಲಿವೆ. ಇಡೀ ವ್ಯವಸ್ಥೆಯ ಕುರಿತ ಸಿಟ್ಟು, ನೋವು, ಹತಾಶೆ, ದಮನಿತರ ಕುರಿತ ಒಲವು, ಅನುಕಂಪ ಎಲ್ಲವನ್ನೂ ಪ್ರಕಟಪಡಿಸುತ್ತಲೇ ಹೊಸ ನಾಡೊಂದು , ಶಾಂತಿಯ ಬೀಡೊಂದು ಉದಯಿಸುತ್ತದೆ ಅನ್ನುವ ಆಶಾಭಾವ ಕವಿಗಿದೆ.

ಯಾರು ಎಷ್ಟೇ ಅಟ್ಟಹಾಸದಿಂದ ಮೆರೆದರೂ
ಅರಮನೆಯ ಅಸ್ಥಿಭಾರ ಕುಸಿದು
ನೆಲಸಮವಾಗುವುದು
ಬಯಲಿಗೆ ಬಿದ್ದ ನಿನ್ನ ನಮ್ಮವ್ವ
ದುಗ್ಗವ್ವನಡಿಯಲ್ಲಿ ವಿಚಾರಣೆಗೊಳಪಡಿಸಲಾಗುವುದು


ಎನ್ನುವಲ್ಲಿ , ಕಾಲ ಹೀಗೇ ಇರುವುದಿಲ್ಲ, ಎಲ್ಲವೂ ತಿರುವುಮುರುವಾಗಿ ಸಿಗಬೇಕಾದ ನ್ಯಾಯ, ಸಲ್ಲಬೇಕಾದ ಮಾನ್ಯತೆ ದಕ್ಕೇ ದಕ್ಕುತ್ತದೆ ಎನ್ನುವ ಭರವಸೆ ಕೂಡ ವ್ಯಕ್ತವಾಗುತ್ತದೆ. ಅದಕ್ಕಾಗಿಯೇ ಕವಿ

ಎದೆ ಬಗೆಯುವ ಮಾತುಗಳನ್ನು ಬದಿಗೊತ್ತಿ
ನೆಲ ಅಗೆಯೋಣ
ಎನ್ನುತ್ತಾರೆ.
ವೃಥಾ ವ್ಯರ್ಥ ಪ್ರಲಾಪಕ್ಕಿಂತ ಹಸಿರುಕ್ಕಿಸುವ ಕೆಲಸ ಎಷ್ಟೊಂದು ಚೈತನ್ಯದಾಯಕವಾದದ್ದು ಅನ್ನುವಂಥ​ದ್ದನ್ನು ಇಲ್ಲಿಯ ಕವಿತೆಗಳು ಸಾದರಪಡಿಸುತ್ತವೆ.

ವರ್ತಮಾನದ ಸಂಕಟಗಳಿಗೆ ದನಿಯಾಗುತ್ತಲೇ , ಜಾತಿ, ಮತ,ಧರ್ಮ ಹಂಗಿಲ್ಲದೆ ಸಮಸಮಾಜದ ಒಳಿತಿಗಾಗಿ ದುಡಿಯುವ ಮತ್ತು ಸಮಾನತೆಯಿಂದ ಬದುಕುವ ಕನಸು ಇಲ್ಲಿಯ ಕವಿತೆಗಳ ಆಶಯ. ನಮ್ಮೆಲ್ಲರ ಭಾವವೂ ಅದೇ ತಾನೇ. ಕಾವ್ಯ ಲೋಕ ಈ ಸಂಕಲನವನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತದೆ ಅನ್ನುವ ಭರವಸೆಯಿದೆ.