ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನನಗೆ ಬೇಕು ನನ್ನ ಪಾಡಿಗಿರುವ ಸ್ವಾತಂತ್ರ್ಯ ..

ಡಾ. ಕೆ.ಪಿ. ನಟರಾಜ
ಇತ್ತೀಚಿನ ಬರಹಗಳು: ಡಾ. ಕೆ.ಪಿ. ನಟರಾಜ (ಎಲ್ಲವನ್ನು ಓದಿ)

ತಂದೆಯಂತಿರುವಾಕಾಶ ಮೇಲೆ ಭೂ ತಾಯ ಮಡಿಲು ಕೆಳಗೆ
ಹೆಜ್ಜೆ ಹಾಕಲು ನನಗೆ ನನ್ನ ಪಾಡಿಗಿರುವ ಸ್ವಾತಂತ್ರ್ಯ ನಾನೊಂದು ತಲತಲಾಂತರದ ರಮ್ಯ ಕಾವ್ಯ

ನಾನು ಉಕ್ರೈನ್ ನನ್ನ ಮೇಲುಗುಳಲಾಯಿತು ಬಾಂಬುಗಳ
ಉರಿಸಲಾಯಿತು ಸುಡು ಬೆಂಕಿಗಳ .. ಬಸಿರಿನ ಮೇಲೆ ಹಸಿರಿನ ಮೇಲೆ ಪ್ರಾಣಗಳ ಮೇಲೆ

ನಾನು ಶಿಶುಗಳ ತಾಯಿ ಅತ್ತೆ ಕರೆದೆ ಎತ್ತೆತ್ತಲೂ ಕೈಚಾಚಿ ಬೇಡಿದೆ ಎತ್ತಲಿಂದಲೂ ಸಹಾಯ ಹಸ್ತ ಇತ್ತ ಬರದೆ .. ನಾನೀಗ ಮಾನ ಭಂಗಕ್ಕೆ ಪ್ರಾಣಭಂಗಕ್ಕೆ ಸಿಕ್ಕು ಬೆಚ್ಚುಗರೆಯುವ ಹುಚ್ಚಿ

ಬೆಚ್ಚುತ್ತೇನೆ ನಿದ್ದೆಯಲಿ ದುಸ್ವಪ್ನಗಳ ಕಂಡು ಬೆಚ್ಚುವ ಶಿಸುಗಳ ಹಾಗೆ ಜಗತ್ತನ್ನಿನ್ನೆಂದೂ ಮೊದಲ ಅಕ್ಕರೆಗಣ್ಣಲ್ಲಿ ‌ನೋಡಲಾರೆ ವಿಷಣ್ಣತೆಯ ಮಡು ನಾನು

ನಾನೊಬ್ಬಳು ಹುಚ್ಚಿ ಇನ್ನು ನನ್ನ ಮನೆತನದ ಮೇಲೆ ಬೆಂಕಿಯ ಬರೆ ಎಳೆಯಲಾಗಿದೆ ಅನ್ನವನು ಸುಟ್ಟು ಕರಕಲು‌ ಮಾಡಲಾಗಿದೆ
ಗಾಳಿ ಬೆಳಕು ದಿನ ರಾತ್ರಿಗಳನ್ನು

ಜೆಲೆನ್ಸ್ಕಿಯಲಿ ನಾನು ಹೆಣ್ಣಾಗಿ ಗಂಡಾಗಿ ಶಿಸುವಾಗಿ ಮುದಿತನವು ಹಿಡಿದ ಜೀವವಾಗಿ ಹಸುರು ಹೊಲ ಹಣ್ಣಾಗಿ ಹಳದಿ ಕಾಳುಗಳಾಗಿ ಉಕ್ರೈನಿನ ಪ್ರಾಣವಾಗಿ

ಜಗತ್ತು ಹೇಡಿ ಜಗತ್ತು ಪಾಪಿ ಜಗತ್ತು ಸ್ವಾರ್ಥಿ ಜಗತ್ತು ವಿಶ್ವಾಸ ಗಾತುಕ ಜಗತ್ತು ಸ್ವಮೋಹಿ ಜಗತ್ತು ಸ್ವಕರುಣಿ ಜಗತ್ತು ಸ್ವ ಮರುಕಿ ಜಗತ್ತು ನನ್ನ ಕೈ ಹಿಡಿಯಲಿಲ್ಲ….

ಇನ್ನು ಮಾರನೆಯ ದಿನ ಹೇಗಿರುವುದೋ ಕಾಣೆ ಇನ್ನು ಉಕ್ರೈನ್ ಬಯಲ ಜನಪದ ನಾನು ಒಂದೊಮ್ಮೆ ಬರೆದ ಕತೆಗಳನು ಮತ್ತೆ ಕನಸುವೆನೋ‌ ಕಾಣೆ

ನಾನೀಗ ಸತ್ತು ಹುಟ್ಟಬೇಕು ಸತ್ತು ಹುಟ್ಟಿ ಹೊಸದಾಗಿ ನನ್ನ ಕನಸುಗಳ ಬರೆಯಬೇಕು ಎಲ್ಲರೂ ಮಣ್ಣಾಗುವ ಮಣ್ಣಲ್ಲಿ ಮತ್ತೆ ಹುಟ್ಟಿ ಬರಬೇಕು ..

ನನ್ನ ಮೇಲುರಿವ ಬೆಂಕಿಯ ಸೂಡಿದ ಹಸ್ತಗಳೂ ತಣ್ಣಗಾಗಲೇ ಬೇಕಲ್ಲ ಮೃತ್ಯುವಿನ ಶೀತಲವಲ್ಲಿ ಮರಗಟ್ಟಲೇ ಬೇಕಲ್ಲ‌ ಮೇಲಾಕಾಶ ಕೆಳಗೆ ಪ್ರುತಿವಿ ಎಲ್ಲವನೂ ನೋಡುತಿರುವರಲ್ಲ‌

ನಾನು ಉಕ್ರೈನ್ ನಾನು ಒಂದು ಇರುವೆ ನಾನೊಂದು ಅನಾಮಿಕ ಹಕ್ಕಿ ನಾನು ಕಾಡು ಕಾಡಲ್ಲಿರುವೊಂದು ಮರ ಎದ್ದೊಂದು ಬೆಟ್ಟ ನನಗೆ ಬೇಕು ನನ್ನ ಪಾಡಿಗಿರುವ ಸ್ವಾತಂತ್ರ್ಯ