- ಇಂದು ಇಲ್ಲದಿದ್ದರೂ ಇಂದು… - ಅಕ್ಟೋಬರ್ 22, 2022
- ಗೋಧ್ರಾ ಇನ್ನೆಷ್ಟು ದೂರ? - ಮೇ 26, 2022
- ಒಂದು ಯುದ್ಧ, ಒಬ್ಬ ಖೈದಿ ಮತ್ತು ಆಕೆ - ಮಾರ್ಚ್ 4, 2022
“ಹೊಸದೊಂದು ಕಥೆ ಬರೆದಿದ್ದೇನೆ, ಪತ್ರಿಕೆಗೆ ಕಳುಹಿಸುವ ಮೊದಲು ನೀವೊಮ್ಮೆ ನೋಡಲಾಗುತ್ತದೆಯೇ? ಏನಾದರೂ ಸಲಹೆ?”
ಈ ಒಕ್ಕಣೆಯೊಂದಿದೆ ವಾರಕ್ಕೊಂದಾದರೂ ಕಥೆ ನನಗೆ ಬರುವುದುಂಟು. ಹೊಸ ಕಥೆಗಳನ್ನು ಓದುವುದು ಖುಷಿಯ ನೀಡುವ ಸಂಗತಿ. ಓದಿ ನನಗನಿಸಿದ್ದನ್ನು ಹೇಳುತ್ತೇನೆ. ಆಗಾಗ ಮತ್ತೊಂದು ಬಗೆಯ ಪ್ರಶ್ನೆಗಳು ಬರುತ್ತವೆ. ಅವು ಸರಿಸುಮಾರು ಹೀಗಿರುತ್ತವೆ- “ಈ ಕಥೆ ರಿಜೆಕ್ಟ್ ಆಯಿತು. ಹೇಗೆ ಇದನ್ನು ಉತ್ತಮಗೊಳಿಸಬಹುದು, ನೋಡಿ ಹೇಳುತ್ತೀರಾ?”
ಹೀಗೆ ಬರುವ ಬಹುಪಾಲು ಕಥೆಗಳು ಉತ್ತಮ ಕಥೆಗಳೇ ಆಗಿರುತ್ತವೆ. ಆದರೆ ಕಥೆಯೊಂದರ ಗುಣಮಟ್ಟ ಅದರ ಪ್ರಕಟಣೆಯನ್ನು ನಿರ್ಧರಿಸುವಲ್ಲಿ ವಹಿಸುವ ಪಾತ್ರ ದಿನೇದಿನೇ ಕುಗ್ಗುತ್ತಿದೆ ಎಂದು ಅವರಿಗೆ ಹೇಗೆ ತಾನೆ ಹೇಳಲಿ? ಹೇಳಹೋಗುವುದಿಲ್ಲ. “ನಿರಾಶೆ ಬೇಡ. ಮತ್ತೊಂದು ಕಡೆಗೆ ಕಳುಹಿಸಿ” ಎಂದು ಸಮಾಧಾನಿಸುತ್ತೇನೆ.
ಅಪರೂಪಕ್ಕೊಮ್ಮೆ ಈ ಬಗೆಯ ಅಳಲುಗಳು ನನಗೆದರಾಗುತ್ತವೆ- “ನನ್ನ ಕಥೆಗೆ ಬಹುಮಾನ ಬರಲಿಲ್ಲ… ಬೇಸರ ಆಗ್ತಿದೆ.”
ಯಾವುದೇ ಕಥಾಸ್ಪರ್ಧೆಗೆ ಕಥೆ ಕಳುಹಿಸುವ ಅಭ್ಯಾಸವಿಲ್ಲದ ನನಗೆ ಇಂತಹ ಸಂದರ್ಭಗಳಲ್ಲಿ ಏನು ಹೇಳಬೇಕೆಂದು ಹೊಳೆಯುವುದಿಲ್ಲ. ಆದರೆ ಒಂದು ವಿ಼ಷಯದಲ್ಲಿ ಮಾತ್ರ ನನಗೆ ಸ್ಷಷ್ಟತೆ ಇದೆ. ‘ಉತ್ತಮ ಕಥೆ’ಯ ವ್ಯಾಖ್ಯಾನ ತೀರ್ಪುಗಾರರಿಂದ ತೀರ್ಪುಗಾರರಿಗೆ ಬದಲಾಗುವುದು ಸಹಜ. ಹೀಗಾಗಿ, ಇಲ್ಲಿ ಸಲ್ಲದ್ದು ಮತ್ತೆಲ್ಲಾದರೂ ಸಲ್ಲಬಹುದು.
ನಾನು ಹೇಳಹೊರಟಿರುವ ವಿಷಯಕ್ಕೆ ಇಷ್ಟು ಪೀಠಿಕೆ.
ನಮ್ಮ ಕಥೆಗಳು ನಮಗೇನು ಕೊಡುತ್ತವೆ? ಅಥವಾ ನಮ್ಮ ಕಥೆಗಳಿಂದ ನಾವು ಏನನ್ನು ನಿರೀಕ್ಷಿಸಬೇಕು?
ಕಥೆಯೊಂದನ್ನು ಬರೆಯುವಾಗ ಸಿಗುವ ಖುಷಿ, ಬರೆದಾದ ಮೇಲೆ ಮನಸ್ಸಿಗಾಗುವ ತೃಪ್ತಿ- ಇವೆರಡನ್ನು ಮಾತ್ರ ನಾವು ನಮ್ಮ ಕಥೆಗಳಿಂದ ನಿರೀಕ್ಷಿಸಬೇಕು. ಇವೆರಡರಾಚೆಗೆ ಏನು ಸಿಕ್ದಿದರೂ ಅದು ಕೇವಲ ಬೋನಸ್ ಅಷ್ಟೇ.
ಹೊಸದೊಂದು ವಿಚಾರ ಮನಸ್ಸಿನಲ್ಲಿ ಸ್ಫುರಿಸುವುದು, ಅದನ್ನು ಚಂದದ ಕಥೆಯಾಗಿ ಬೆಳೆಸುವ ಬಯಕೆಗೆ ಪೂರಕವಾಗಿ ಹೊಳೆಯುವ ಹೊಸ ಹೊಸ ವಿಚಾರಗಳು, ಬರೆಯುತೊಡಗಿದಂತೇ ಎಲ್ಲಿಂದಲೋ ಹಾರಿಬಂದಂತೆ ಇದ್ದಕ್ಕಿದ್ದಂತೆ ಥಟಕ್ಕನೆ ಹೊಳೆದು ನಮ್ಮನ್ವೇ ಬೆಚ್ಸಿಸಿ ಬೆರಗುಗೊಳಿಸುವ ಮತ್ತಷ್ಟು ವಿಚಾರಗಳು ನೀಡುವ ಒಂದೊಂದು ಖುಷಿಯನ್ನೂ ನಾವು ಅನುಭವಿಸಬೇಕು. ಹಾಗೆಯೇ, ಪದವೊಂದು ಸರಿಯಾಗದು ಎನಿಸಿ ಮತ್ತೊಂದನ್ನು ಸೇರಿಸಿ, “ಅಬ್ಬ ಈಗ ಈ ವಾಕ್ಯ ಸರಿಹೋಯ್ತು!” ಅಂದುಕೊಳ್ಳುತ್ತಾ ಕಥೆಯನ್ನು ತಿದ್ದಿ ತೀಡಿ ಚಂದಗೊಳಿಸಿ ಸಂಭ್ರಮಿಸುವ ಆ ಸುಖ ಇದೆಯಲ್ಲ ಅದಂತೂ ಅದ್ಭುತ.
ಹೀಗೆ ನಮ್ಮ ಕಥೆ ನಮಗೆ ನೀಡುವ ಸಂತೋಷ, ಸಂಭ್ರಮವನ್ನು ಶಾಶ್ವತವಾಗಿ ನಮ್ಮಲ್ಲಿರಿಸಿಕೊಳ್ಳಬೇಕು. ಈ ಖುಷಿಯನ್ನು, ತೃಪ್ತಭಾವವನ್ನು ಮತ್ತಾರೋ ಕಥೆ ರಿಜೆಕ್ಟ್ ಮಾಡಿದರೆಂದು, ಬಹುಮಾನ ಕೊಡಲಿಲ್ಲವೆಂದು ಕೊರಗಿ ಕಳೆದುಕೊಳ್ಳಬಾರದು. ಹಾಗೆ ಮಾಡಿದ್ದೇ ಆದರೆ ಅದು ನಮ್ಮ ಕಥೆಗೆ ನಾವು ಮಾಡುವ ಅವಮಾನ. ಕೊರಗುತ್ತಾ ಕೂರುವುದೇ ಆದರೆ ಕಥೆಯನ್ನು ಬರೆಯದೆಯೇ ಕೂರಬಹುದಾಗಿತ್ತು. ಇನ್ನಷ್ಟು ನೇರವಾಗಿಯೇ ಹೇಳಬೇಕೆಂದರೆ ನಮ್ಮ ಕಥೆಯನ್ನು ಮತ್ತಾವುದಕ್ಕೋ ಮೆಟ್ಟಲೋ, ಏಣಿಯೋ ಎಂಬಂತೆ ನಾವು ಎಂದೂ ಉಪಯೋಗಿಸಬಾರದು. ನಿಮ್ಮ ಕಥೆಯನ್ನು ಕಥೆ ಎಂದಷ್ಟೇ ಪರಿಗಣಿಸಿ, ಪ್ರೀತಿಸಿ, ಗೌರವಿಸಿ.
ಈಗ ವಿಷಯದ ಮತ್ತೊಂದು ಮಗ್ಗುಲಿನತ್ತ ಹೊರಳೋಣ. ಕಥೆ ಪ್ರಕಟವಾಗಿ ನಾಲ್ಕು ಜನ ಓದಲಿ ಎನ್ನುವ ಬಯಕೆ ಸಹಜ. ಆದರೆ ಒಂದು ವಿಷಯ ಗಮನದಲ್ಲಿಡಿ. ಕಥೆಯೊಂದು ಒಳ್ಳೆಯ ಕಥೆ ಎನಿಸಿಕೊಳ್ಳಬೇಕಾದರೆ ಅದಕ್ಕೆ ಕೆಲವು ಅಗತ್ಯ ಲಕ್ಷಣಗಳು ಇರಲೇಬೇಕಾಗುತ್ತವೆ. ಇವನ್ನು ನಾನು ನಮ್ಮ ಶಾಂಗ್ರಿ-ಲಾ ಅಕ್ಯಾಡೆಮಿ ವಿವಿಧ ಸ್ಥಳಗಳಲ್ಲಿ ಆಯೋಜಿಸಿದ ಕಥಾಶಿಬಿರಗಳಲ್ಲಿ ವಿವರವಾಗಿ ಹೇಳಿದ್ದೇನೆ, ಕಳೆದ ಇದೇ ಜೂನ್ ತಿಂಗಳಿಂದಲೂ ನಮ್ಮ ಅಖಿಲ ಭಾರತ ಸಾಹಿತ್ಯ ಪರಿಷತ್ ಆಯೋಜಿಸುತ್ತಿರುವ ಆನ್‍ಲೈನ್ ಕಥಾ ಶಿಬಿರದಲ್ಲಿ ಮತ್ತಷ್ಟು ವಿವರವಾಗಿ ಹೇಳುತ್ತಲೇ ಇದ್ದೇನೆ. ನಾನು ಅಥವಾ ನನ್ನಂಥವರು ಹೇಳದೆಯೂ ಅದೆಷ್ಟೋ ಹೊಸ ಕಥೆಗಾರ-ಕಥೆಗಾರ್ತಿಯರಿಗೆ ಅವು ಗೊತ್ತೇ ಇವೆ. ಇಂದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಹೆಚ್ಚಿನ ಕಥೆಗಳಲ್ಲಿ ಒಳ್ಳೆಯ ಕಥೆಗಿರಬೇಕಾದ ಲಕ್ಷಣಗಳು ದಿನೇದಿನೇ ಕಡಿಮೆಯಾಗುತ್ತಿವೆ. ಅದರರ್ಥ ಆ ಕಥೆಗಳ ಪ್ರಕಟಣೆಯ ಹಿಂದಿರುವುದು ಕಥೆಯ ಗುಣಮಟ್ಟವಲ್ಲ. ನಿಮ್ಮ ಕಥೆಗಳು ಅಂತಹ ಕಥೆಗಳಾಗಬಾರದು.
ಒಳ್ಳೆಯ ಕಥೆ ಬರೆಯಲು ಶ್ರಮವಹಿಸಿ, ಪತ್ರಿಕೆಗೆ ಕಳುಹಿಸಿ. ಪ್ರಕಟವಾದರೆ ಸರಿ, ತಿರಸ್ಕೃತವಾದರೆ ಚಿಂತೆ ಬೇಡ. ಮತ್ತೊಂದೆಡೆಗೆ ಕಳಿಸಿ. ಆದರೆ ಅದಕ್ಕಾಗಿ ಸಂಪಾದಕರ ಬೆನ್ನು ಹತ್ತುವುದು, ಬೇರೇನಾದರೂ ವಿಧಾನಗಳನ್ನು ಅನುಸರಿಸುವುದು ಬೇಡ.
ಈ ಕಾಲದಲ್ಲಿ ಅಂಥವೇ ನಡೆಯುವುದು ಎಂದು ನನಗೆ ಹೇಳಬೇಡಿ. ಹಾಗೆ ಮಾಡುವವರು ಒಂದಷ್ಟು ದಿನ ಯಶಸ್ವಿಯಾಗಬಹುದಷ್ಟೇ, ಸದಾಕಾಲ ಅಲ್ಲ. ಯಾಕೆಂದರೆ ಯಾರ ಸಹಕಾರದಿಂದ ನೀವು ಕಥೆ ಪ್ರಕಟಿಸಿಕೊಂಡಿರೋ ಅವರ ಆಸಕ್ತಿ’ಗಳೂ ಬದಲಾಗುತ್ತಿರುತ್ತವೆ. ಅವರೂ ಮನುಷ್ಯರೇ, ‘ಹೊಸ’ ಇಲಿಯನ್ನು ಕಂಡು ಪುಟನೆಗೆಯುವ ಮಠದೊಳಗಣ ಬೆಕ್ಕುಗಳೇ.. ಅವರ ಆಸಕ್ತಿ ಬೇರೆಡೆ ಹೊರಳುತ್ತಿದ್ದಂತೇ ನಿಮಗೆ ಹಿಂದಿನ ಆದರ ದೊರೆಯುವುದಿಲ್ಲ. ಆಗ ನೀವು ಬೀಳುವ ಪ್ರಪಾತ ಬಹಳ ಆಳವಾಗಿರುತ್ತದೆ. ಕಥೆ ಬರೆದಾಗ ನಿಮಗೆ ಸಿಕ್ಕಿದ್ದ, ಇದುವರೆಗೆ ಅವು ಪ್ರಕಟವಾಗಿ ನೀಡಿದ್ದ ಖುಷಿ ಎಲ್ಲವನ್ನೂ ಆ ಪ್ರಪಾತ ನುಂಗಿಹಾಕಿಬಿಡುತ್ತದೆ.
ನಿಮ್ಮ ‘’ಆಸಕ್ತಿ’’ಗಳನ್ನೂ ಕಾಲಕಾಲಕ್ಕೆ ಬದಲಾಯಿಸುತ್ತಾ, ಬೇರೆಬೇರೆ ಕಡೆ ‘ಸ್ಪಂದನೆ’ಯನ್ನು ಹುಡುಕುತ್ತಾ ನೀವು ಇನ್ನಷ್ಟು ಕಾಲ ಚಲಾವಣೆಯಲ್ಲಿರಬಹುದು. ಹಾಗಂತ ಹೊಸಹೊಸ ಸಹಕಾರಗಳಿಗಾಗಿ ಎಷ್ಟು ಹುಡುಕಾಡಬಲ್ಲಿರಿ? ಹಾಗೆ ಹುಡುಕಾಡುತ್ತಾ ಹುದುಕಾಡುತ್ತಾ ನೀವು ಒಂದು ದಿನ ನಿಮ್ಮನ್ನೇ ಕಳೆದುಕೊಂಡು ನಿಲ್ಲುತ್ತೀರಿ. ಬದುಕಿನ ಅತಿದೊಡ್ಡ ದುರಂತ ಅದು.
ಹೀಗಾಗಿ, ಇಂದು ಪ್ರಕಟವಾಗಿ ನಾಳೆ ಜನ ಮರೆಯುವಂತಹ, ಅಥವಾ ನಿಮ್ಮ ಹೆಸರು ನೋಡಿದ ಕೂಡಲೇ ಓದುಗರು ಮುಂದಿನ ಪುಟಕ್ಕೆ ಹೋಗುವಂತಹ ಕಥೆ ಬರೆಯುವುದು ಬೇಡ. ಬರಹಕ್ಕಷ್ಟೇ ನಿಷ್ಟರಾಗಿ ಒಳ್ಳೆಯ ಕಥೆ ಬರೆಯಿರಿ. ಪ್ರಕಟವಾದರೆ ಸರಿ, ಇಲ್ಲದಿದ್ದರೆ ಕತ್ತೆ ಬಾಲ, ಕುದುರೆ ಜುಟ್ಟು. ಕಥೆ ಬರೆವಾಗ ಆದ ಖುಷಿಯನ್ನು, ಮುಗಿಸಿದ ಮೇಲೆ ಮನಸ್ಸಿಗಾದ ತೃಪ್ತಭಾವವನ್ನು ಎಂದೂ ಯಾವುದಕ್ಕೂ ಬಲಿಗೊಡಬೇಡಿ. ಸಂಕಲನ ಹೊರತನ್ನಿ. ಆಗ ಜನ ಓದಿಯೇ ಓದುತ್ತಾರೆ, ತಕ್ಷಣಕ್ಕೆ ಫೇಸ್‍ಬುಕ್‍ನಂಥ ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಳ್ಳಬಹುದು.
ಒಂದು ಸುಂದರ ಸತ್ಯವನ್ನು ಹೇಳುತ್ತೇನೆ ಕೇಳಿ- ಒಂದು ಒಳ್ಳೆಯ ಕಥೆ ತನ್ನ ಓದುಗರನ್ನು ತಾನೇ ಹುಡುಕಿಕೊಳ್ಳುತ್ತದೆ.
ಏನೇನೋ ಕಸರತ್ತು ಮಾಡಿ, ಯಾರಾರನ್ನೋ ಹಿಡಿದು ಕಥೆಗೆ ಬಹುಮಾನ ಪಡೆದುಕೊಳ್ಳಲು ಹೋಗಬೇಡಿ. ಆ ಹಾದಿಯಲ್ಲಿ, ಬದುಕಿನಲ್ಲಿ ಮತ್ತೆಂದೂ ಗಳಿಸಿಕೊಳ್ಳಲಾಗದಂಥ ಅಮೂಲ್ಯವಾದುವುಗಳನ್ನು ಶಾಶ್ವತವಾಗಿ ಕಳೆದುಕೊಳ್ಳುವ ಅಪಾಯವಿದೆ. ಇನ್ನು ಕಥೆಗೆ ಸಿಕ್ಕಿದ ಬಹುಮಾನದ ಹಣವಂತೂ ನಾಳೆ ಬಿಡಿಗಾಸೂ ಉಳಿಯದಂತೆ ಕಳೆದುಹೋಗುತ್ತದೆ, ಪ್ರಶಸ್ತಿಫಲಕ ಒಂದು ದಿನ ಮಣ್ಣಲ್ಲಿ ಮಣ್ಣಾಗಿಹೋಗುತ್ತದೆ. ಅವಾವುವೂ ಶಾಶ್ವತ ಅಲ್ಲ. ಶಾಶ್ವತವಾಗಿ ಉಳಿಯುವುವು ನೀವು ಬರೆದ “ಒಳ್ಳೆಯ” ಕಥೆಗಳು ಮಾತ್ರ. ಕಥೆಗಾರ ತನ್ನ ಕಥೆಗಳ ಮೂಲಕವಷ್ಟೇ ಕಾಲವನ್ನು ಗೆಲ್ಲಬೇಕು, ಒಳ್ಳೆಯ ಕಥೆಗಾರ ಗೆಲ್ಲುತ್ತಾನೆ ಎಂಬುದನ್ನು ಎಂದೂ ಮರೆಯಬೇಡಿ.
ಕೊನೆಯಲ್ಲಿ ಇನ್ನೊಂದು ಮಾತು. ಯಾರಾದರೂ ಹೊಸ ಕಥೆಗಾರರು ಕಥಾರಚನೆಯ ಬಗ್ಗೆ ಸಲಹೆಸೂಚನೆ ಕೇಳಿದರೆ ನಿಮಗೆ ತಿಳಿದಷ್ಟು ಹೇಳಿಕೊಡಿ. ನಮ್ಮ ಕಥಾರಚನಾ ಕಲೆ ಒಂದು ರಹಸ್ಯ, ಅದು ನಮ್ಮ ಇಂಟಲೆಕ್ಚ್ಯುಯಲ್ ಪ್ರಾಪರ್ಟಿ ರೈಟ್, ಯಾರೊಂದಿಗೂ ಅದನ್ನು ಹಂಚಿಕೊಳ್ಳಕೂಡದು, ಹಂಚಿಕೊಂಡರೆ ಅವರು ನಮಗೇ ಪ್ರತಿಸ್ಪರ್ಧಿಗಳಾಗುತ್ತಾರೆ ಅಂತೆಲ್ಲಾ ಅಂದುಕೊಳ್ಳಬೇಡಿ. ಅದೆಲ್ಲಾ ಭ್ರಮೆ. ಸಾಹಿತ್ಯಲೋಕದಲ್ಲಿ ಯಾರೂ ಯಾರಿಗೂ ಪ್ರತಿಸ್ಪರ್ಧಿಗಳಾಗಲಾರದು. ನಿಮ್ಮಿಂದ ಕಲಿತವರು ನಿಮಗೆ ಸಹಲೇಖಕರಾಗುತ್ತಾರೆ ಅಷ್ಟೇ, ಪ್ರತಿಸ್ಪರ್ಧಿಗಳೆಂದೂ ಆಗುವುದಿಲ್ಲ.. ಹೀಗಾಗಿ, ನಿಮಗೆ ತಿಳಿದಿರುವುದನ್ನು ಹೇಳಿಕೊಡಿ. ಆಗ ಸಿಗುವ ಅಲೌಕಿಕ ಆನಂದವನ್ನು ಅವುಭವಿಸಿ. ಜ್ಞಾನ ಎನ್ನುವುದು ಹಂಚಿದಷ್ಟೂ ವೃದ್ಧಿಸುತ್ತದೆ. ಮತ್ತೆ, ನಿಮ್ಮಿಂದ ಕಲಿತವರು ಬಾಯಿ ಬಿಟ್ಟು ಹೇಳಿಕೊಳ್ಳದೇ ಹೋದರೂ ಸಹಾ, ಅವರ ಮನಸ್ಸಿನಲ್ಲಿ ನೀವಿರುತ್ತೀರಿ. ಹೀಗೆ, ಬದುಕಿರುವಾಗ ಹಲವೆಡೆ ಬದುಕಿ. ಬದುಕು ಮುಗಿದ ಮೇಲೆ ನಿಮ್ಮ ಕಥೆಗಳ ಮೂಲಕ ಬದುಕಿ.
—೦೦೦—
ಹೆಚ್ಚಿನ ಬರಹಗಳಿಗಾಗಿ
ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ
ನೋ ಪಾರ್ಕಿಂಗ್
ಚಾಚಾ ನೆಹರು ಮತ್ತು ನಮ್ಮ ಮಕ್ಕಳು