ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನವಿಲೊಂದಕ್ಕೆ ಎರಡು ಸ್ಪಂದನೆಗಳ ಗರಿ ಸೇರಿ…

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಕನ್ನಡದ ಗಜಲ್ಕಾರರಾದ ಡಾ. ಗೋವಿಂದ ಹೆಗಡೆ ಅವರು ಬರೆದ ಈ ಕೆಳಗಿನ ಗಜಲ್ ಗೆ , ಇಬ್ಬರು ಸೃಜನಶೀಲ ಸಾಹಿತ್ಯಾಸಕ್ತರು ವಿಶೇಷವಾಗಿ ಸ್ಪಂದನೆಗಳನ್ನು ಬರೆದಿದ್ದು, ಅವನ್ನು ಇಲ್ಲಿ ನಮ್ಮ ಓದುಗರಿಗಾಗಿ ಪ್ರಕಟಿಸಲಾಗಿದೆ. -ಸಂಪಾದಕ ವರ್ಗ

ಗಜಲ್

ಬದುಕಿನ ಸಮೀಕರಣಗಳಲ್ಲಿ ಗೆಲ್ಲುವುದೇನು ನವಿಲು
ಉಳ್ಳವರ ಇಲ್ಲದವರ ನಡುವೆ ಸಲ್ಲುವುದೇನು ನವಿಲು

ಕತ್ತಲಲ್ಲಿ ಓಡುತ್ತಲೇ ಇದೆ ಕಣ್ಣು ಕಟ್ಟಿದ ಕುದುರೆ
ಕೀಲಿಕೊಟ್ಟ ನಡೆಗಳಲ್ಲಿ ಮಿಡುಕುವುದೇನು ನವಿಲು

ಮೋಡವೇ ಇಲ್ಲದ ಬಾನು ಮಳೆ ಬರುವುದೇನು
ಬಣ್ಣಬಣ್ಣದ ಕಾರಂಜಿ ಕಂಡು ಕುಣಿವುದೇನು ನವಿಲು

ಅದೋ, ಯಾರದೋ ತಾಳಕ್ಕೆ ಕುಣಿವ ಗೆಜ್ಜೆಯ ಸದ್ದು
ಕನ್ನಡಿಯಲ್ಲಿ ಬಿಂಬ ಕಂಡು ನಿಲ್ಲುವುದೇನು ನವಿಲು

ಗರಿಯೊಂದನ್ನು ಹುಡುಹುಡುಕಿ ಅಲೆದಿದ್ದಾನೆ ‘ಜಂಗಮ’
ಆರ್ತತೆಯಲ್ಲಿ ಚಾಚಿದೆ ಎದೆ ದೊರೆವುದೇನು ನವಿಲು

★ ಡಾ. ಗೋವಿಂದ ಹೆಗಡೆ

ಸ್ಪಂದನೆಯ ಗರಿ – ೧ ಲೇಖಕರು : ಕೆ. ಜನಾರ್ದನ ತುಂಗ

ಕೆ.ಜನಾರ್ದನ ತುಂಗ

ಶ್ರೀ ಕೆ ಜನಾರ್ದನ ತುಂಗ , ಬ್ಯಾಂಕ್ ಆಫ್ ಬರೋಡ ದಲ್ಲಿ ಕಾರ್ಯನಿರ್ವಹಿಸಿ, ನಿವೃತ್ತರಾದವರು. ಸಾಹಿತ್ಯ ಹಾಗೂ ಫಿಲಾಸಫಿಯನ್ನು ಆಳವಾಗಿ ಅಧ್ಯಯನ ಮಾಡಿದವರು. ಒಳ್ಳೆಯ ಓದುಗ, ಉತ್ತಮ ಲೇಖಕರೂ ಆಗಿರುವ ತುಂಗ ಅವರು ತಮ್ಮ ಚಿಂತನಾಶೀಲ ಬರವಣಿಗೆಗಳಿಂದ ಆಪ್ತರಾದವರು.


ಆಕಾಶದಲ್ಲಿ ಮೋಡಗಳು ಸಂಚಯಿಸುತ್ತ ಗುಡುಗು ಸಿಡಿಲುಗಳ ಮೂಲಕ ಮಳೆಯ ಮುನ್ಸೂಚನೆಯನ್ನು ನೀಡುವಾಗ ನವಿಲುಗಳು ನಾಟ್ಯವಾಡುತ್ತವೆ ಎಂಬುದು ಪ್ರತೀತಿ. ಮಳೆಯಿಂದ ಇಳೆ ತಂಪಾಗಿ, ಭೂರಮಣಿ ಹಸಿರುಡುಗೆ ತೊಟ್ಟು ಎಲ್ಲೆಡೆ ಸಂತೋಷ ತುಂಬಿ ತುಳುಕುವುದನ್ನು ನವಿಲು ತನ್ನ ನಾಟ್ಯದ ಮೂಲಕ ಸೂಚಿಸುತ್ತದೆ ಎಂಬುದು ಕವಿಸಮಯ ಎಂದು ನನಗನ್ನಿಸಿದರೂ ಅದನ್ನು ಅನೇಕರು ನಂಬುತ್ತಾರೆ. ಪ್ರಕೃತಿಯ ಲಾಸ್ಯಕ್ಕೆ ನವಿಲಿನ ನರ್ತನವು ಸಹಜ ಪ್ರತಿಕ್ರಿಯೆ.

“ಮೋಡವೇ ಇಲ್ಲದ ಬಾನು ಮಳೆ ಬರುವುದೇನು, ಬಣ್ಣಬಣ್ಣದ ಕಾರಂಜಿ ಕಂಡು ಕುಣಿವುದೇನು ನವಿಲು?” ಆದರೆ ಬಾನಿನಲ್ಲಿ ಮೋಡಗಳೇ ಇಲ್ಲದಿರುವ ಕಾಲವಿದು, ಹೀಗಿರುವಾಗ ಮಳೆ ಬರುವುದೆಂಬ ನಿರೀಕ್ಷೆಯಿದೆಯೆ? ವರ್ಣರಂಜಿತವಾಗಿದ್ದರೂ ಕೃತಕ ಕಾರಂಜಿಯಿಂದ ಚಿಮ್ಮುವ ನೀರನ್ನು ನೋಡಿ ನವಿಲು ಕುಣಿಯುತ್ತದೆಯೇ? ಇಲ್ಲವೆಂಬುದೇ ಉತ್ತರ. ಈ ಚರಣದ ವಾಚ್ಯಾರ್ಥವನ್ನು ಎಲ್ಲೆಲ್ಲೂ ಜಲಪ್ರಳಯವಾಗುತ್ತಿರುವ ಸಂದರ್ಭದಲ್ಲಿ ಗಮನಿಸಿದರೆ ಕಸಿವಿಸಿಯಾದೀತು. ಆದರೆ ನಿಜಾರ್ಥದಲ್ಲಿ, ಸಹಜ ಪ್ರಕೃತಿಯನ್ನು ನಾಶ ಮಾಡಿ ಕೃತಕ ಕಾರಂಜಿಗಳನ್ನು ಸೃಷ್ಟಿಸಿಕೊಂಡರೆ ಸಹಜವಾದ ಆನಂದವು ದೊರೆಯಬಹುದೇ ಎಂದು ಕವಿ ಪ್ರಶ್ನಿಸುತ್ತಿದ್ದಾರೆ.

“ಕತ್ತಲಲ್ಲಿ ಓಡುತ್ತಲೇ ಇದೆ ಕಣ್ಣು ಕಟ್ಟಿದ ಕುದುರೆ, ಕೀಲಿಕೊಟ್ಟ ನಡೆಗಳಲ್ಲಿ ಮಿಡುಕುವುದೇನು, ನವಿಲು?” ಪ್ರಗತಿಯೆಂಬ ಕುರುಡು ಕುದುರೆ ತಾನು ಸೃಷ್ಟಿಸುತ್ತಿರುವ ವಿನಾಶಗಳನ್ನು ಲೆಕ್ಕಿಸದೆ ನಾಗಾಲೋಟ ಮಾಡುತ್ತಿದೆ. ಈ ಕೃತಕ ಪ್ರಗತಿಯು ಸೃಷ್ಟಿಸುವ ಆನಂದವೂ ಕೀಲುಗೊಂಬೆಯಂತೆ ಕೃತಕ ನಡೆಗಳನ್ನು ಹೊಂದಿವೆಯಲ್ಲವೆ?

“ಅದೋ, ಯಾರದೋ ತಾಳಕ್ಕೆ ಕುಣಿವ ಗೆಜ್ಜೆಯ ಸದ್ದು, ಕನ್ನಡಿಯಲ್ಲಿ ಬಿಂಬ ಕಂಡು ನಿಲ್ಲುವುದೇನು ನವಿಲು” ಇಂದು ಯಾವುದೂ ಸಹಜ ಬೆಳವಣಿಗೆಯಲ್ಲ. ಯಾರದೋ ನಿರ್ದೇಶನದಂತೆ ಎಲ್ಲವೂ ಸಾಗುತ್ತಿದೆ. ಸಹಜ ಸಂತೋಷಕ್ಕೆ ಭಾಜನರಾಗಬೇಕಿದ್ದವರು ಇತರರು ಸೃಷ್ಟಿಸಿದ ಕೃತಕ ಸಂತೋಷಕ್ಕೆ ಮನ ತೆತ್ತಿದ್ದಾರೆ. ಆದರೆ ನೆನಪಿರಲಿ, ಕೃತಕತೆಗೆ ನವಿಲು ಹೇಗೆ ಮರುಳಾಗುವುದಿಲ್ಲವೋ ಅದೇ ರೀತಿ, ನಿಮ್ಮ ಮನಮಯೂರವೂ ಕನ್ನಡಿಯಲ್ಲಿ ಕಂಡುಬರುವ ಕೃತಕ ಗುಡುಗು, ಮಳೆಗಳ ಬಿಂಬಗಳಿಗೆ ಮರುಳಾಗುವುದಿಲ್ಲ. ಮನಮಯೂರವು ಮುದದಿಂದ ನರ್ತಿಸುತ್ತಿದೆಯೆಂದು ನೀವು ಭಾವಿಸಿದ್ದರೆ ಅದು, ಕೃತಕ ಹಾಗೂ ಕ್ಷಣಿಕ.

“ಗರಿಯೊಂದನ್ನು ಹುಡುಹುಡುಕಿ ಅಲೆದಿದ್ದಾನೆ ‘ಜಂಗಮ’, ಆರ್ತತೆಯಲ್ಲಿ ಚಾಚಿದೆ ಎದೆ ದೊರೆವುದೇನು ನವಿಲು?” ಇಷ್ಟೆಲ್ಲ ಆಧುನಿಕತೆಯ ನಡುವೆಯೂ ನಿಜವಾದ ಆನಂದದ ಅರಸಾಟ ನಡೆಯುತ್ತಲೇ ಇದೆ. ಕವಿ ಆನಂದದ ಎಳೆಗಳನ್ನು ಹುಡುಕುತ್ತ ಅಲೆಯುತ್ತಿದ್ದಾನೆ. ನವಿಲಿನಂತೆ ಭಾವುಕನಾಗಿ, ದೊರೆಯುವುದೆಂಬ ನಂಬಿಕೆಯಿಂದ, ಆರ್ತತೆಯಿಂದ ನಿರೀಕ್ಷಿಸುತ್ತಿದ್ದಾನೆ. ಅವನಿಗೆ ಸಹಜವಾದ ಆನಂದ ದೊರೆಯುವುದೆ?

“ಬದುಕಿನ ಸಮೀಕರಣಗಳಲ್ಲಿ ಗೆಲ್ಲುವುದೇನು ನವಿಲು, ಉಳ್ಳವರ ಇಲ್ಲದವರ ನಡುವೆ ಸಲ್ಲುವುದೇನು ನವಿಲು? ಉಳ್ಳವರು ತಮ್ಮದೇ ಭ್ರಮೆಯಲ್ಲಿ, ಲೋಕದ ಬಗ್ಗೆ ನಿರ್ಲಕ್ಷ್ಯದಿಂದ ಬದುಕುತ್ತಾರೆ. ಇಲ್ಲದವರಿಗೆ ಹೊಟ್ಟೆ ಹೊರೆದುಕೊಂಡರೆ ಸಾಕಾಗಿದೆ. ಆದರೆ, ಇವೆರಡು ವರ್ಗಗಳ ನಡುವೆ ಭಾವಜೀವಿ ಜಂಗಮನು ಸಮಾಧಾನಚಿತ್ತದಿಂದ ಬದುಕುವುದು ಸಾಧ್ಯವೆ?

ಉತ್ತರವಿರದ ಪ್ರಶ್ನೆಯನ್ನು ಎತ್ತಿದ್ದಾರೆ, ಕವಿ.

★ ಜನಾರ್ದನ ತುಂಗ

ಸ್ಪಂದನೆಯ ಗರಿ – ೨ ಲೇಖಕರು : ಅರುಣಾ ಶ್ರೀನಿವಾಸ

ತವರೂರು ಕೇರಳದ ಮಂಜೇಶ್ವರದಲ್ಲಿ. ಪ್ರಸ್ತುತ ವಾಸ ಧರ್ಮಸ್ಥಳ ಸಮೀಪದ ಉಜಿರೆ ಎಂಬಲ್ಲಿ. ಬಿ.ಎಡ್ ಕಲಿತು ಕೆಲಕಾಲಗಳವರೆಗೆ ಆಂಗ್ಲ ಭಾಷಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಗೃಹಿಣಿಯಾಗಿರುವರು. ಪದವಿಯಿಂದಲೂ ಕತೆ, ಕವನ, ಲೇಖನಗಳನ್ನು ಬರೆಯುವ ಹವ್ಯಾಸ. ಹಲವು ಕತೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಸ್ಥಳೀಯ ಪತ್ರಿಕೆ ಶ್ರೀ ತುಳಸಿಯಲ್ಲಿ ಸುಮಾರು ಮೂರು ವರುಷಗಳಿಂದ ಮೊಗ್ಗರಳಿ ಹೂವಾಗಿ ಎಂಬ ಶೀರ್ಷಿಕೆಯಡಿಯಲ್ಲಿ ಲೇಖನ ಮಾಲೆ ಪ್ರಕಟಗೊಳ್ಳುತ್ತಿದೆ. ಹೂವು ಅರಳಿದ ಹೊತ್ತು ಕವನ ಸಂಕಲನ ಮತ್ತು ಬದುಕು ಬೆಳಕು-ಜೀವನ ಮೌಲ್ಯಗಳ ಕೈಪಿಡಿ ಬಿಡುಗಡೆಯಾದ ಕೃತಿಗಳು.


ಗೋವಿಂದ ಹೆಗಡೆಯವರ ಗಜ಼ಲ್ ಗಳನ್ನು ಭಾವುಕ ಮನವೊಂದು ಓದಿ ಆಸ್ವಾದಿಸುವುದೇ ಒಂದು ಸೊಗಸು. ಆದುದರಿಂದ ಇಲ್ಲಿ ಗಜ಼ಲ್ ನ ವಿಶ್ಲೇಷಣೆ ಎನ್ನುವುದಕ್ಕಿಂತಲೂ , ಆಸ್ವಾದನೆಯ ನಿಟ್ಟಿನಲ್ಲಿ ನನ್ನ ಕವಿಭಾವವನ್ನು ವ್ಯಕ್ತಪಡಿಸಿರುವೆ.

ಪ್ರಸ್ತುತದಲ್ಲಿ ಗೋವಿಂದ ಹೆಗಡೆಯವರು ತಮ್ಮ ಮನದಾಳದಲ್ಲಿ ಕಾಡುತ್ತಿದ್ದ “ನವಿಲನ್ನು” ಅಷ್ಟೇ ಭಾವತೀವ್ರತೆಯಿಂದ ಅತ್ಯಂತ ಸಹಜ ಹರಿವಿನಿಂದ ಹಾಗೂ ಬಣ್ಣಗಳ ಮೆರುಗಿನಿಂದ ಗಜ಼ಲ್ ರೂಪದಲ್ಲಿ ಗರಿ ಬಿಚ್ಚಿಸಿದ್ದಾರೆ. ಇಲ್ಲಿ ರದೀಫ್ “ನವಿಲು” ಕವಿಭಾವದೊಳಗೆ ಸಾಕಾರಗೊಳ್ಳಬೇಕೆಂಬ ಕನಸೊಂದರ ಸೂಚ್ಯವಾಗಿ ಕಾವ್ಯಾಸಕ್ತ ಹೃದಯವನ್ನು ತಟ್ಟುವುದಲ್ಲದೆ, ಇಡೀ ಗಜ಼ಲಿನ ಅಂದವನ್ನೇ ಇಮ್ಮಡಿಗೊಳಿಸಿದೆ.

ಮನದಾಳದಲ್ಲಿ ಕಾಡುವ ಭಾವವೊಂದು, ಉಕ್ಕೆದ್ದು ಹಕ್ಕಿಯಾಗಿ ಸಾಕಾರಗೊಳ್ಳಬಹುದೇ ಎಂಬ ಆರ್ದ್ರವಾದ ತುಡಿತವನ್ನು ಇಡೀ ಗಜ಼ಲಿನುದ್ದಕ್ಕೂ ಬೆಳೆಸಿಕೊಂಡು, ಮಕ್ತಾದಲ್ಲಿ ಭಾವತೀವ್ರತೆಯು ಉತ್ಕೃಷ್ಟ ಸ್ಥಿತಿಗೆ ತಲುಪಿ ಓದಿದ ಬಹಳ ಹೊತ್ತಿನ ನಂತರವೂ ಓದುಗನ ಮನವನ್ನು ಕಾಡುತ್ತಾ ಭಾವಪರವಶಕ್ಕೊಳಗಾಗುವಂತಹ ಶಕ್ತಿ ಗಜ಼ಲಿನಲ್ಲಿರುವುದೇ ಈ ಗಜ಼ಲಿನ ವಿಶೇಷತೆಯಾಗಿದೆ. ಇದಕ್ಕೆ ಪೂರಕವಾಗಿ ನಿರಾಯಾಸವಾಗಿ ಹೆಣೆಯಲ್ಪಟ್ಟ ಕಾಫಿಯಾಗಳೂ ಕೂಡಾ ಗಜ಼ಲಿನ ಅರ್ಥಪೂರ್ಣತೆಗೆ ತಮ್ಮದೇ ನಿಲುವಿನಲ್ಲಿ ನಿಂತಿವೆ.

ಗಜ಼ಲ್ ನ ಮತ್ಲಾದಲ್ಲಿ ಕವಿಯು ಬದುಕಿನ ಜಂಜಾಟದಲ್ಲಿ, ಏರು ತಗ್ಗುಗಳಲ್ಲಿ ಕನಸುಗಳ ಸಾಕಾರದ ಸಾಧ್ಯತೆಯ ಬಗ್ಗೆ ಪ್ರಶ್ನಿಸುತ್ತಾ, ಬಾಳಯಾನದ ನಡೆಯು ಕತ್ತಲಲ್ಲೆ ಕಣ್ಣು ಕಟ್ಟಿದ ಕುದುರೆಯಂತೆ ಓಡುತ್ತಿದ್ದರೂ, ಮನದೊಳಗಿನ ಆಶಯವೊಂದು ಕೀಲಿಕೊಟ್ಟ ನಡಿಗೆಯಲ್ಲಾದರೂ ಸಾಕಾರಗೊಳ್ಳಬಹುದೇ ಎಂಬ ಸುಪ್ತಬಯಕೆಯನ್ನು ಅಭಿವ್ಯಕ್ತಗೊಳಿಸುತ್ತಿದ್ದಾರೆ. ಹೀಗೆ ವಿವಿಧ ಮಜಲುಗಳಲ್ಲಿ ಸಾಗುತ್ತಾ, ಯಾರದೋ ತಾಳಕ್ಕೆ ಕುಣಿಯುತ್ತಾ, ಕನ್ನಡಿಯ ಬಿಂಬವಾಗದೆ, ತನ್ನತನದ ತುಡಿತವನ್ನು ಮೆರೆಯಲಿಚ್ಛಿಸುವ “ಜಂಗಮನು”, ತಮ್ಮ ಕನಸುಗಳ ಸಾಕಾರಕ್ಕೆ ಬೇಕಾದ “ಗರಿ”ಯ ಅನ್ವೇಷಣೆಯಲ್ಲಿ ಆರ್ತತೆಯಲ್ಲಿ ತೊಡಗಿಕೊಳ್ಳುತ್ತಾ, ನವಿಲು ದೊರೆವುದೇನು ಎನ್ನುತ್ತಾ ಭಾವುಕನಾಗಿ ಬಿಡುತ್ತಾರೆ.

ನಿರಾಯಾಸವಾಗಿ ಜೋಡಿಸಿದ ಅರ್ಥಪೂರ್ಣ ಪದಗಳಲ್ಲಿ ಸದ್ದಿಲ್ಲದೆ ಕೂಡಿಕೊಂಡ ನಿಯಮಗಳು, ಗಜ಼ಲಿಗೆ ಸಾರ್ಥಕತೆಯನ್ನು ನಿಸ್ಸಂಶಯವಾಗಿ ತಂದುಕೊಟ್ಟಿದೆ ಹಾಗೂ ಗಜ಼ಲಿನ ಸ್ವಾದವನ್ನು ಕವಿ ಮನಗಳಿಗೆ ಒದಗಿಸಿಕೊಟ್ಟಿದೆ.

ಅರುಣಾ ಶ್ರೀನಿವಾಸ