- ಈಚಲು ಹುಳುಗಳು ಹಾರಿದಾಗ… ! - ಜುಲೈ 18, 2020
- ನಾವೇ ಹೆಣೆದ ಬಲೆಯಲ್ಲಿ ಸಿಲುಕುತ್ತಾ…! - ಜೂನ್ 13, 2020
- ಕೃಷ್ಣ ಸ್ವಾಮಿ ಕಂಡರೆ ಕೈ ಮುಗಿದು ಬಿಡಿ… ! - ಮೇ 30, 2020
ಕೂಸೊತ್ತ ಆನೆ ಬಾಯಿಯಲ್ಲಿ ಮದ್ದು ಸಿಡಿದು ಸತ್ತಾಗ, ಹಾವಿಗೆ ಕಡ್ಡಿಯಲ್ಲಿ ಬಡಿದು ಜಿಂಕೆ ಬಿಡಿಸಿದಾಗ, ಕಾಡಾನೆಗೆ ರಕ್ಷಕರೇ ಗುಂಡು ಹಾರಿಸಿದಾಗ ನಾವು ಗಮನಹರಿಸ ಬೇಕಾಗಿರುವುದು ಮೂಲ ಸಮಸ್ಯೆ ಕಡೆ ಹೊರತು ಸಲ್ಲದ ಕಾರಣಗಳನ್ನು ಹುಡುಕುತ್ತಾ ಮೂಲ ಸಮಸ್ಯೆ ಇಂದ ಜಾರಿಕೊಳ್ಳುವುದರಿಂದ ಅಲ್ಲ. ಅದು ಬೇಟೆಗಾರ ಇಟ್ಟ ಮದ್ದು ಗುಂಡು ಕಡಿದು ಆಯಿತೋ ಅಥವಾ ಇಲ್ಲ ಯಾರೋ ಅದನ್ನು ಆನೆಗೆ ಬೇಕಂತಲೇ ತಿನಿಸಿಯೇ ಆಯಿತೋ , ಹೆಬ್ಬಾವು ಜಿಂಕೆ ಘಟನೆ ನಮ್ಮ ದೇಶದ್ದೋ ಅಲ್ಲವೋ, ರಕ್ಷಕರು ಕೂಡ ನಮ್ಮಂತೆ ಸಾಮಾನ್ಯರೂ ಎಂಬೆಲ್ಲ ಅನಿಸಿಕೆಗಳು ಕ್ಷಣ ಮಾತ್ರಕ್ಕೆ ಹೀಗೂ ಇರಬಹುದು ಎಂದೆಲ್ಲ ಅನಿಸಿರುತ್ತವೆ ಹೊರತು ಇಂತಹ ಘಟನೆಗಳಲ್ಲಿ ಭಾಗಿಯಾದವರಿಗೆ ತಪ್ಪಿಸಿಕೊಳ್ಳಲು ಒಂದು ದಾರಿ ಸಿಗುತ್ತವೆ ಅಷ್ಟೇ.
ಮೇಲೆ ಹೇಳಿದ ಎಲ್ಲ ಸಮಸ್ಯೆಗಳು ಹುಟ್ಟಿಕೊಂಡಿದ್ದು ವನ್ಯ ಜೀವಿಗಳ ಪರಿಸರದಲ್ಲಿ ಮತ್ತು ಅವುಗಳ ಬದುಕಿನಲ್ಲಿ ಮಾನವ ಹಸ್ತ ಕ್ಷೇಪ ಹೆಚ್ಚಾಗುತ್ತಿವೆ ಎಂಬುದರಿಂದ ಶುರುವಾಗಿ ನೈಸರ್ಗಿಕ ಸಂಪನ್ಮೂಲಗಳ ಮೊದಲ ಹಕ್ಕು ಮಾನವನಿಗೆ ಸೇರಿದ್ದು ಎಂಬ ತಪ್ಪು ಕಲ್ಪನೆಗಳು ಹುಟ್ಟಿ ಕೊಂಡಿರುವುದರಿಂದ. ಸ್ವಾತಂತ್ರ ಪೂರ್ವದಲ್ಲಿ ಹುಲಿಗಳ ಬೇಟೆ ಎಂದರೆ ಬಲು ಸಾಮಾನ್ಯ , ಹುಲಿ ಕಾಟ ಹೆಚ್ಚಾದಾಗ ಸರ್ಕಾರವೇ ಬೇಟೆಗೆ ಆಹ್ವಾನ ನೀಡುತ್ತಿತ್ತು ನಂತರ ಇದು ಮುಂದುವರೆದು ಈಗ ಹುಲಿ ಸಂತತಿಗೆ ಬಂದಿರುವ ಗತಿ ನಿಮಗೆ ತಿಳಿದಿದೆ. ಹಳ್ಳಿಗಳಲ್ಲಿ ಆಗೆಲ್ಲ ಪ್ರಾಣಿ ಪಕ್ಷಿಗಳು ಕೂಡ ಯಥೇಚ್ಛವಾಗಿ ಇದ್ದವು ಎಂಬುದನ್ನು ತೋರಿಸುತ್ತದೆ ಆದರೆ ಕ್ರಮೇಣ ಪ್ರಾಣಿ ಪಕ್ಷಿ ಹಿಡಿದು ತಿನ್ನುತ್ತಿದ್ದ ಸಾಮಾನ್ಯ ಸಂಗತಿಗಳು ಇಂದು ದುರಂತಗಳಾಗಿ ಬದಲಾಗಿವೆ.
ಅಂದರೆ ಈಗ ನಾವು ವನ್ಯ ಜೀವಿಗಳನ್ನು ನೋಡುವ ರೀತಿಯೂ ಬದಲಾಗಬೇಕಿದೆ. ಸರ್ಕಾರಗಳು ಒಂದೋ ಕಾಡು ಹೆಚ್ಚಿಸಿ ಪ್ರಾಣಿಗಳನ್ನು ರಕ್ಷಿಸಬೇಕಿದೆ ಇಲ್ಲ ಜನರಿಗೆ ಪ್ರಾಣಿಗಳ ಜೊತೆ ಹೊಂದಿಕೊಂಡು ಹೋಗುವುದನ್ನು ಹೇಳಿ ಕೊಡಬೇಕಿದೆ. ಕಾಡಿನಲ್ಲಿ ರಸ್ತೆಯನ್ನೇ ನಿರ್ಮಿಸಿದ್ದು ಮೊದನೆಯದಾಗಿ ಮಾಡಿದ ತಪ್ಪು ಎಂಬುದು ನಮಗೆ ಅರ್ಥವಾಗದೆ ವನ್ಯ ಜೀವಿಗಳ ಕಾದಾಟದಲ್ಲಿ ಹಸ್ತ ಕ್ಷೇಪ ಮಾಡಿದ್ದು ತಪ್ಪು ಎಂದು ತಿಳಿ ಹೇಳಬೇಕಿದೆ. ಇದಾಗದೆ ಹೋದಲ್ಲಿ ಜನರು ತಮ್ಮ ಸಿಟ್ಟನ್ನು ತೋರಿಸಬೇಕಿರುವುದು ಕಾಡು ನಾಶ ಮಾಡುತ್ತಿರುವ ಪ್ರಭಾವಿ ಜನರ ಮೇಲೆ, ಪಶ್ಚಿಮ ಘಟ್ಟದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಅಭಿವೃದ್ದಿ ಕೆಲಸ ಮಾಡುವ ಯೋಜನೆಗಳನ್ನು ಹುಟ್ಟು ಹಾಕುತ್ತಿರುವವರ ಮೇಲೆ ಹೊರತು ಇದೆಲ್ಲವೂ ಅರಿಯದೆ ಊಟ ಹುಡುಕಿಕೊಂಡು ಬರುವ ಪ್ರಾಣಿಗಳ ಮೇಲಲ್ಲ. ಇಂತಹ ಸೂಕ್ಷ್ಮ ಅರಿತು ಸರ್ಕಾರಗಳು ದೊಡ್ಡ ಮಟ್ಟದಲ್ಲಿ ಕಾರ್ಯನೀತಿಗಳನ್ನು ತಂದು ಮಾನವ ಹಸ್ತಕ್ಷೇಪ ( human animal conflicts) ತಪ್ಪಿಸಿ ವನ್ಯ ಜೀವಿಗಳನ್ನು ಕಾಪಾಡಬೇಕಿದೆ.
ಈ ವಿಚಾರವಾಗಿ ಹಲವು ಚರ್ಚೆಗಳಲ್ಲಿ ಎರಡು ಜನಸಾಮಾನ್ಯರ ವಿಚಾರಗಳು ನಮಗೆಲ್ಲ ಸರಿಯಾಗಿ ಅರ್ಥವಾಗಬೇಕಿದೆ. ಹಿರಿಯ ರೈತರೊಬ್ಬರ ಮನೆಯಲ್ಲಿ ಚಿರತೆ ದಾಳಿ ಮಾಡಿ ಕರು ತಿಂದು ಹೋಗುತ್ತದೆ. ಆಗ ಅವರು ತಮ್ಮ ಮನೆಯಲ್ಲಿ ಮದ್ದುಗುಂಡಿಟ್ಟು ಚಿರತೆಯನ್ನು ಕೊಲ್ಲಬಹುದು ಅಥವಾ ಮಾಂಸ ಇಟ್ಟು ಅದಕ್ಕೆ ಕೀಟ ನಾಶಕ ಬೆರೆಸಿ ಚಿರತೆಗೆ ಊಟ ಎಸೆದು ಸಾಯಿಸಬಹುದು ( ಇದು ನಾನು ಕಂಡು ಹಿದಿದಿದ್ದಲ್ಲ ಹೀಗೆ ಮಾಡಿರುವ ಜನರೂ ಇದ್ದಾರೆ ಎಂಬುದು ನಿಮಗೆ ತಿಳಿದಿರಲಿ ಎಂದು ಹೇಳಿದ್ದಾನೆ) ಆದರೆ ಈ ರೈತರು ಚಿರತೆಯನ್ನು ದೋಷಿಸದೆ ಹೇಳಿದ್ದು ಕರುವನ್ನು ಮುಕ್ತವಾಗಿ ಬಿಟ್ಟದ್ದು ನನ್ನದೇ ತಪ್ಪು ಎಂದು. ಇದು ಅದೆಷ್ಟು ಪ್ರಜ್ಞಾವಂತ ಯೋಚನೆ ಎಂದೆನಿಸಿತು. ಹೀಗೂ ಹೇಳಬಹುದು, ಕರು ಕಳೆದು ಕೊಂಡ ಬಡವರ ಕಥೆ ಅವರಿಗಷ್ಟೇ ಗೊತ್ತು ಎಂದೆಲ್ಲ ಅನಿಸಬಹುದು ಆದರೆ ಚಿರತೆಗೆ ಬಡವ ಶ್ರೀಮಂತ ಎಂಬುದು ತಿಳಿವುದೇ?
ಮತ್ತೊಂದು ಕೊಡಗಿನ ಹಿರಿಯೊಬ್ಬರು ಹೇಳಿದ್ದು ಈ ಆನೆಯ ದಾಳಿಯಿಂದಾಗಿ ಅವರ ಕಾಫಿ ತೋಟಗಳು ಹಾಳಾಗಿದ್ದರೂ , ಹಿರಿಯ ವಯಸ್ಕರ ಪ್ರಾಣವೇ ಹೋಗಿದ್ದರೂ ಆನೆಯ ದಾಳಿಯನ್ನು ತಡೆಯಲು ಅನೇಕ ವಿನಾಶಕಾರಿ ಉಪಾಯಗಳಿದ್ದರು ಅಂತಹ ದುರಂತ ಪ್ರಯೋಗ ಮಾಡದೆ ಅವುಗಳಿಗೆ ಹೊಂದಿಕೊಂಡು ಹೋಗುವುದನ್ನು ಕಲಿಯುತ್ತಿದ್ದೇವೆ ಎಂದು ಹೇಳಿದ್ದು.
ಈಗ ನನದೂ ಒಂದು ಅನಿಸಿಕೆ ಅಷ್ಟೇ ಅದಕ್ಕೆ ಎಲ್ಲರೂ ಅನಿಸಿಕೆ ಮೇಲೆ ಇನ್ನೊಂದು ಅನಿಸಿಕೆ ಹೇಳಬಹುದು ಅಷ್ಟೇ ಬಿಟ್ಟರೆ ವಾದ ವಿವಾದಗಳಿಗೆ ಕೊನೆಯಿಲ್ಲ. ನಾವೇ ಹೆಣೆದ ಬಲೆಯಲ್ಲಿ ನಾವೇ ಸಿಕ್ಕಿ ಹಾಕಿ ಕೊಂಡಿದ್ದೇವಷ್ಟೇ ಬಿಟ್ಟರೆ ಇಂತಹ ಘಟನೆಗಳಿಗೆ ಪ್ರಕೃತಿ ಆಗಲೇ ತೀರ್ಪು ನೀಡಲು ಶುರುವಾಗಿದೆ. ಕಳೆದ ವರ್ಷದ ಅಷ್ಟೂ ಪ್ರವಾಹಗಳು (ಕೇರಳ ಕೊಡಗು ಉತ್ತರ ಕರ್ನಾಟಕ ಇನ್ನೂ ಹಲವು) , ಮಿತಿ ಮೀರಿದ ಸೈಕ್ಲೋನ್ ಗಳು , ಹತ್ತಿ ಉರಿದ ಕಾಡುಗಳು, ಲೋಕಷ್ಟ್ ಅಟ್ಯಾಕ್ ಗಳು, ಈಗ ಕೊರೋನದಂತಹ ಎಲ್ಲವೂ ಪ್ರಕೃತಿ ಮಾನವ ಹಸ್ತ ಕ್ಷೇಪಕ್ಕೆ ವಾಪಸಾಗಿ ಕೊಡುತ್ತಿರುವ ಉತ್ತರವಷ್ಟೇ. ಇನ್ನು ಪ್ರಕೃತಿಯೇ ಎಲ್ಲವನ್ನೂ ಹೇಳುತ್ತಿರುವಾಗ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಹೇಳಲು ನಾವು ನೀವು ಯಾರು ಬಿಡಿ. ಒಂದೋ ನಾವು ಕಲಿಯಬೇಕು ಇಲ್ಲ ಒತ್ತಾಯವಾಗಿ ಪ್ರಕೃತಿ ಎಲ್ಲವನ್ನೂ ಕಲಿಸಲಿದೆ.
ಹೆಚ್ಚಿನ ಬರಹಗಳಿಗಾಗಿ
ನಂಬಿಕೆಯ ವರ್ಷಧಾರೆ
ನಮ್ಮಲ್ಲೇ ಇಹುದೇ ನಮ್ಮ ಸುಖ!
ಹುಚ್ಚು ಅಚ್ಚುಮೆಚ್ಚಾದಾಗ