ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಈಚಲು ಹುಳುಗಳು ಅಲ್ಲಿಯೇ ಹೊಲದ ಬದಿಯಲ್ಲಿದ್ದ ಹುತ್ತದಿಂದ ಹಾರುತ್ತಾ ಹೊಗೆ ಬುಗ್ಗೆಯಂತೆ ಮೇಲೇರುತ್ತಿದ್ದವು. ಇತ್ತ ಹುತ್ತದಿಂದ ಹುಳುಗಳು ಹಾರುತ್ತಿದ್ದರೆ ಹಕ್ಕಿಗಳ ಗುಂಪು ಗುಂಪೇ ಹಾರುತ್ತಾ.....(ಮುಂದೆ ಓದಿ)

ಹೀಗೆ ಒಂದಿನ ನವಿಲಿನ ಚೆಂದ ಪಟ ತೆಗೆಯುವ ಯೋಜನೆ ಹಾಕಿ ನಡೆಯುತ್ತಾ ಹೊರಟದ್ದಾಯ್ತು ಅದೇಕೋ ಅಂದು ನವಿಲು ನಮ್ಮ ಜೊತೆ ಕಣ್ಣು ಮುಚ್ಚಾಲೆ ಆಡುತ್ತಾ ನಡೆಸಿಕೊಂಡು ತೋಟದ ದಾರಿಗಳಲ್ಲಿ ಒಂದೆರಡು ಕಿಲೋಮೀಟರ್ ದೂರವಾದರು ನಡೆಸಿ ಕೊಂಡು ಹೋಗಿರಬೇಕು ಇದೇಕೋ ದೂರದ ಬೆಟ್ಟ ನುಣ್ಣಗೆ ಕಥೆ ಆಯಿತಲ್ಲ ಎಂದು ಬ್ಯಾಲದ ಮರದ ಕೆಳಗೆ ಬಿದ್ದಿದ್ದ ಹಣ್ಣೊಂದನ್ನು ಆಯ್ದು ಖಾಲಿ ಹೊಲದ ಬಳಿ ಕೂತು ಒಡೆದು ಕಿಂಚಿತ್ತೂ ಬಿಡದೆ ಚಿಪ್ಪನ್ನು ಸಹ ಹಲ್ಲಿನಿಂದ ಗೋರಿ ಗೋರಿ ತಿಂದದ್ದಾಯ್ತು. ಆಗ ಅದೆಲ್ಲಿಂದೋ ಬಂದ ಮತ್ತೊಂದು ನವಿಲು ಗರಿ ಬಿಚ್ಚುವ ಎಲ್ಲ ತಯಾರಿ ಮಾಡಿಕೊಳ್ಳುವ ಹೊತ್ತಿನಲ್ಲಿ ನಾವೂ ಕ್ಯಾಮೆರಾ ಎತ್ತಿಕೊಂಡು ತಯಾರಿ ಮಾಡಿಕೊಂಡೆವು ಆದರೆ ಗಂಡು ನವಿಲಿನ ಕೂಗಿಗೆ ಯಾವುದೇ ಹೆಣ್ಣು ನವಿಲು ಸ್ಪಂದಿಸದೇ ಹೋದದ್ದರಿಂದ ಗರಿ ಬಿಚ್ಚಲಿಲ್ಲ. ಬಂದ ದಾರಿಗೆ ಸುಂಕವಿಲ್ಲ ಎಂದು ಮುಂದಿನ ದಿನ ಇದೇ ಜಾಗಕ್ಕೆ ಬಂದು ನಿಂತಾಗ ಅಲ್ಲಿ ನವಿಲಿರಲಿಲ್ಲ ಆದರೆ ಅಲ್ಲೊಂದು ವಿಶೇಷ ನಡೆದಿತ್ತು.

ಈಚಲು ಹುಳುಗಳು ಅಲ್ಲಿಯೇ ಹೊಲದ ಬದಿಯಲ್ಲಿದ್ದ ಹುತ್ತದಿಂದ ಹಾರುತ್ತಾ ಹೊಗೆ ಬುಗ್ಗೆಯಂತೆ ಮೇಲೇರುತ್ತಿದ್ದವು.
ಇತ್ತ ಹುತ್ತದಿಂದ ಹುಳುಗಳು ಹಾರುತ್ತಿದ್ದರೆ ಹಕ್ಕಿಗಳ ಗುಂಪು ಗುಂಪೇ ಹಾರುತ್ತಾ ಮನಸೋ ಇಚ್ಛೆ ಭೇಟೆಯಾಡಿ ಹುಳುಗಳನ್ನು ಹಿಡಿದು ತಿನ್ನಲು ಶುರು ಮಾಡಿದವು.. ನಾನು ಕಂಡ ಸನ್ನಿವೇಶದಲ್ಲಿ ಸುಮಾರೆಂದರೂ ಒಂದತ್ತು ಕವಲು ತೋಕೆಗಳು, ಒಂದೈದು ಪಿಕಳಾರಗಳು, ಗೊರವಗಳು ಸೇರಿದಂತೆ ಹಲವು ಪಕ್ಷಿಗಳು ವಿವಿಧ ಭಂಗಿಯಲ್ಲಿ ಈಚಲು ಹುಳುಗಳನ್ನು ಹಿಡಿದು ತಿನ್ನುತ್ತಿದ್ದವು. ಚಿಕ್ಕವರಿದ್ದಾಗ ಹೀಗೆ ಈಚಲು ಹುಳು ಹಾರಿತೆಂದರೆ ಸಾಕು ನನ್ನ ಹಲವು ಸ್ನೇಹಿತರಿಗೆ ಮೈ ರೋಮಾಂಚನ. ಕಾರಣ ಹೀಗೆ ಹಾರಿದ ಹುಳುಗಳನ್ನು ಹಿಡಿದು ಉರಿದು ಒಗ್ಗರಣೆ ಹಾಕಿಕೊಂಡು ಚಪ್ಪರಿಸಿ ತಿನ್ನುತ್ತಿದ್ದರು ಆದರೆ ಇಂದು ಮಾನವ ಸ್ನೇಹಿತರ ಬದಲು ಪಕ್ಷಿಗಳು ಅವರ ಜಾಗವನ್ನು ಆಕ್ರಮಿಸಿದ್ದವು. ಇಲ್ಲಿಯವರೆಗೂ ಇಂತಹ ಒಂದು ಸನ್ನಿವೇಶವನ್ನು ನೋಡಿರದ ನನಗೆ ಕುತೂಹಲ ಮತ್ತು ರೋಮಾಂಚನ ಒಟ್ಟಿಗೆ ಆಗಿತ್ತು. ಅಯ್ಯೋ ನಮ್ಮೆಲ್ಲರ ರೋಮಾಂಚನದ ಕಥೆ ಅಲ್ಲಿರಲಿ ಆದರೆ ಅಲ್ಲಿ ನಡೆಯುವ ಅಸಲಿ ಕಥೆ ನಿಜವಾಗಿಯೂ ರೋಮಾಂಚನಕಾರಿ.

ಗೆದ್ದಲು ಹುಳುಗಳ ನೋಡಿರದವರು ಯಾರು ಇರಲಾರರು ಆದರೆ ಇದೇ ಗೆದ್ದಲು ಹುಳುಗಳು ಈಚಲು ಹುಳುಗಳಾಗಿ ಮುಂದೊಂದಿನ ಸರಿಯಾದ ಸಮಯದಲ್ಲಿ ಗೂಡಿನಿಂದ ಹೊರ ಬರಲು ಶುರುವಾಗುತ್ತವೆ. ಇದನ್ನು nuptial flight ಎಂದು ಕರೆಯುತ್ತಾರೆ. ಒಂದು ಗೆದ್ದಲಿನ ಕಾಲೋನಿಯಿಂದ ಹಾರಿದ ಹುಳುಗಳಲ್ಲಿ ರಾಣಿ ಹುಳು ಇರುತ್ತದೆ. ಈ ರಾಣಿ ಹುಳು ಫೆರೋಮೊನ್ ಹೊರ ಬಿಟ್ಟು ಗಂಡು ಹುಳುಗಳನ್ನು ಆಕರ್ಷಿಸುತ್ತವೆ. ಇನ್ನು ಹೆಣ್ಣು ಹುಳು ಸಾಮಾನ್ಯವಾಗಿ ಗಂಡು ಹುಳುಗಳಿಂದ ತಪ್ಪಿಸಿಕೊಂಡು ಹಾರುತ್ತಿದ್ದರೆ ಗುಂಪಿನಲ್ಲಿ ಜೋರಾಗಿ ಶಕ್ತಿಶಾಲಿಯಾಗಿ ಹಾರುವ ಗಂಡು ಹುಳುಗಳು ರಾಣಿ ಹುಳುವನ್ನು ಬೆನ್ನಟ್ಟಿ ಹೋಗುತ್ತವೆ. This is the Courtship in termites. A healthier and stronger male should fly as fast as it can to impress a female termite ( queen) and later when queen is impressed they mate each other. ಇದೆಲ್ಲದರ ಮಧ್ಯೆ ಪಕ್ಷಿಗಳ ಬಾಯನ್ನು ಕೂಡ ತಪ್ಪಿಸಿಕೊಳ್ಳಬೇಕು. ಹೀಗೆ ಹಾರಿ ಗೆದ್ದ ಗಂಡು ಹುಳುಗಳು ಹೆಣ್ಣನ್ನು ಒಲಿಸಿಕೊಂಡು , ಹೆಣ್ಣು ಗಂಡು ಹುಳು ಎರಡು ಸೇರಿ ತಮ್ಮ ರೆಕ್ಕೆಗಳನ್ನು ಉದುರಿಸಿಕೊಂಡು ಹೊಸ ಸಂಸಾರ ಶುರು ಮಾಡುತ್ತವೆ. ಅಂದರೆ ಅಧ್ಯಯನದ ಪ್ರಕಾರ ಒಂದು ರಾಣಿ ಹುಳು ಸುಮಾರೆಂದರೂ ಮೂವತ್ತು ಸಾವಿರ ಮೊಟ್ಟೆಗಳನ್ನು ಇಡುತ್ತವೆ.

ಗೆದ್ದಲು ಹುಳುಗಳು ಪರಿಸರಕ್ಕೆ ಅತೀ ಅವಶ್ಯಕ ಎಂಬುದು ನಮಗೆ ನೆನಪಿರಬೇಕು. ಗೆದ್ದಲು ಇಂದ ತಕ್ಷಣ ನಮ್ಮ ಹಲಗೆ ಮರ ಮಟ್ಟುಗಳನ್ನು ತಿಂದು ಹಾಕಲೇ ಹುಟ್ಟಿರುವ ಜೀವಿ ಎಂದು ಭಾವಿಸುವುದು ಬೇಡ. ನಿಮ್ಮ ಮಣ್ಣಿನಲ್ಲಿ ಎರೆ ಹುಳು ಎಷ್ಟು ಮುಖ್ಯವೋ ಮಣ್ಣಿನ ಮೇಲ್ಮೈನಲ್ಲಿ ಎಲೆಗಳನ್ನು ತಿಂದು ಜೀರ್ಣಿಸಿಕೊಳ್ಳುವುದರಲ್ಲಿ, ತೋಟದಲ್ಲಿ ಬಿದ್ದ ಗರಿ ಮೊಟ್ಟೆಗಳನ್ನು ತಿಂದು ಗೊಬ್ಬರ ಮಾಡುವಲ್ಲಿ , ಗೆದ್ದಲಿನ ಪಾತ್ರ ಬಹಳ ಮುಖ್ಯ. ಹುತ್ತದ ಆಸುಪಾಸಿನಲ್ಲಿ ಇರುವ ಮರಗಳನ್ನು ಒಮ್ಮೆ ಗಮನಿಸಿ , ಮರಗಳು ಬಹಳ ಆರೋಗ್ಯಕರವಾಗಿರುತ್ತದೆ. ಇನ್ನು ಹುತ್ತದ ಬಗ್ಗೆ ಮತ್ತೊಂದು ಬರಹದಲ್ಲಿ ಹೇಳುವೆ. ಈಗ ವಿಷಯ ಇಷ್ಟೇ ಹೀಗೆ ಸಾವಿರಾರು ಸಂಖ್ಯೆಯಲ್ಲಿ ಹುಟ್ಟಿದ ಗೆದ್ದಲು ಕೂಡ ಹೆಚ್ಚಾದರೆ ಸಮತೋಲನ ತಪ್ಪಿದಂತೆ ಆದರೆ ಅವುಗಳನ್ನು ಮಿತಿಯಲ್ಲಿ ಇಡಲು ಆಗಲೇ ಪಕ್ಷಿಗಳು ನಮ್ಮಲ್ಲಿವೆ. ಮಾನವರು ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳದೆ ಹುತ್ತಗಳನ್ನು ಹೊಡೆದು ಹಾಕಿದರೆ ನಿಮ್ಮ ಹೊಲಗಳಲ್ಲಿ ಗೊಬ್ಬರ ಮಾಡಲು ಯಾರೂ ಉಳಿದಿರುವುದಿಲ್ಲ. ನೀವು ಗೆದ್ದಲಿನ ನಿಯಂತ್ರಣಕ್ಕೆ ತಲೆ ಕೆಡಿಸಿಕೊಳ್ಳದೆ ಪಕ್ಷಿಗಳಿಗೆ ಆ ಕೆಲಸ ಬಿಟ್ಟು ಕೊಟ್ಟರೆ ಸಾಕಷ್ಟೇ ಎಂಬುದನ್ನು ಈ ಕೆಳಗಿನ ಚಿತ್ರ ಎತ್ತಿ ತೋರಿಸುತ್ತದೆ.

ಗೆದ್ದಲು ಹುಳುಗಳು ಎಲೆ ತಿಂದು ಗೊಬ್ಬರ ಮಾಡಿದರೆ, ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಳ್ಳುವ ಗೆದ್ದಲು ಹುಳುಗಳನ್ನು ಪಕ್ಷಿಗಳು ಹಿಡಿದು ತಿಂದು ಬದುಕು ಕಟ್ಟಿಕೊಳ್ಳುತ್ತವೆ.. ಮಾನವರಾದ ನಾವು ಇಂತಹ ಸೂಕ್ಷ್ಮ ವಿಷಯಗಳನ್ನು ಕಂಡು ಅರಿತು ನೋಡುತ್ತಾ ಪ್ರಕೃತಿಯನ್ನು ಅದರ ಪಾಡಿಗೆ ಅದನ್ನು ಬಿಟ್ಟರೆ ಸಾಕಷ್ಟೇ.

ಮೇಲೆ ಬರೆದಿರುವ ಸನ್ನಿವೇಶದಲ್ಲಿ ಒಂದು ಪಿಕಳಾರ ಈಚಲು ಹುಳು ಹಿಡಿದು ತಿನ್ನುವುದನ್ನು ನೋಡಬಹುದು. – A bulbul with winged termites.