ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ : https://m.facebook.com/story.php?story_fbid=pfbid02pL8e7H53omhKpiGTjyw8EzQrQx6wD8w4NciX3XdxeEgMuhpHxRv1WS8mS3TA4iPTl&id=153587784689725&scmts=

ಪಂಪಾ ಕ್ಷೇತ್ರದ ಇತಿಹಾಸ ಗಮನ – ೩

ಆರ್ಯ​

(ಹಿಂದಿನ ಭಾಗ : ಪಂಪಾ ಕ್ಷೇತ್ರದ ಇತಿಹಾಸ ಗಮನ – ೨)

ಈ ೬೪ ಕಂಬಗಳ ಮಂಟಪವು ಆನೆಗುಂದಿಯ ಪೂರ್ವಭಾಗದಲ್ಲಿ ತುಂಗೆಯ ಒಡಲಲ್ಲಿದೆ. ಬೇಸಿಗೆ ಕಾಲದಲ್ಲಿ ತುಂಗೆಯ ಹರಿವು ಸಾವಧಾನವಿರುವುದರಿಂದ ಮಂಟಪಕ್ಕೆ ನಡೆದೇ ಹೋಗಬಹುದು, ಆದರೆ ಸದ್ಯ ವರ್ಷಾ ಋತುವಾದ್ದರಿಂದ ತುಂಗೆ ತುಂಬಿದ್ದಳು.‌ ಮಂಟಪವನ್ನು ದೂರದಿಂದ ವೀಕ್ಷಿಸಿದ್ದಷ್ಟೇ‌ ನನ್ನ ಪಾಲಿನ ಪುಣ್ಯವಾಗಿತ್ತು. ಮಂಟಪದ ವಿವರಗಳ ಪ್ರಕಾರ ಇಲ್ಲಿ ೬೪ ಕಂಬಗಳಿದ್ದು ಪ್ರತಿಯೊಂದು ಕಂಬವೂ ಒಂದೊಂದು ಕಲೆಯನ್ನು ಪ್ರತಿನಿಧಿಸುತ್ತದೆಯಂತೆ.

ಯಾರೋ ಹುಡುಗನೊಬ್ಬ ತನ್ನ ಮೊಬೈಲಲ್ಲಿ ಜೋರಾಗಿ ಹಾಡೊಂದನ್ನು ಹಾಕಿಕೊಂಡು ಬಡಬಡ ಬರುತ್ತಿದ್ದ, ಆ ಸಪ್ಪಳಕ್ಕೆ ರಸಭಂಗವಾಗಿ, ವಿಕ್ಷಿಪ್ತನಾಗಿ, ಸ್ಥಾನಪಲ್ಲಟಗೈದು ಸುತ್ತಮುತ್ತಲಿನ ಸ್ಥಳಾವಲೋಕನ ಮಾಡಲು ಮೊದಲಾದೆ. ಅಲ್ಲಿನ ಅಸ್ತವ್ಯಸ್ತತೆ, ಅಶುಚಿತ್ವವನ್ನು ಕಂಡು ಕೊಂಚ ಜಿಗುಪ್ಸೆಯುಂಟಾಯಿತು. ತುಂಗಾತೀರದಲ್ಲಿ ಕೆಲವಾರು ದೇವಮೂರ್ತಿಗಳು, ಶಾಸನಗಳಿರುವ ಪಾಶಾಣಗಳು ಎಲ್ಲವೂ ಅಸ್ತವ್ಯಸ್ತವಾಗಿ ಬಿದ್ದಿದ್ದವು, ಕೋಟೆಯ ದೊಡ್ಡ ದೊಡ್ಡ ಕಲ್ಲುಗಳೆಲ್ಲ ಈಗ ಜನರ ದನದ ಕೊಟ್ಟಿಗೆಗಳಾಗಿದ್ದವು.

ಚಿತ್ರ ಕೃಪೆ : ಆರ್ಯ​

ಅಷ್ಟೆಲ್ಲ ಜಾಗವಿದ್ದರೂ ತುಂಗೆಯ ದಡದಲ್ಲಿ, ಮಂಟಪಕ್ಕೆ ಹೋಗುವ ದಾರಿಯಲ್ಲೆಲ್ಲ ಮಲಮೂತ್ರವಿಸರ್ಜನೆಯ ಸುವಾಸನೆ. ಪಂಪೆ – ಹಂಪೆಯಾಗಿ, ಹಂಪೆ‌ ಹಾಳು ಕೊಂಪೆಯಾಗಿರುವುದು ಹೀಗೆ. ಮುಸಲರು ಹಾಳುಗೆಡವಿದ್ದನ್ನು ನಾವು ಮುಂದುವರೆಸಿದ್ದೇವಷ್ಟೇ. ನಮ್ಮನ್ನು ರಕ್ಷಿಸಿದ ಕೋಟೆ-ಕೊತ್ತಲಿಗೇ ಈಗ ರಕ್ಷಣೆಯಿಲ್ಲದಂತಾಗಿದೆ.

ತುಂಗೆಯ ತೀರದಲ್ಲಿ ಮಂಟಪದ ಎಡಗಡೆ ನವಬೃಂದಾವನ ಹಾಗೂ ತಾರಾಪರ್ವತಗಳು ಕಂಡುಬಂದರೆ ಬಲಕ್ಕೆ ಮಗ್ಗುಲು ಬದಲಿಸಿದರೆ ಚಿಂತಾಮಣಿ ದೇವಾಲಯ ಕಾಣಸಿಗುತ್ತದೆ. ನಮ್ಮಂಥವರಿಗೆ ‘ಎಡ’ಪಂಥಕ್ಕೆ ಎಡತಾಕಿ ರೂಢಿಯಿಲ್ಲದ ಕಾರಣ ಬಲಕ್ಕೆ ಹೋಗಿಬರುವುದೆಂದು ನಿಶ್ಚಿಯಿಸಿ ಚಿಂತಾಮಣಿ ದೇವಾಲಯದ ಕಡೆಗೆ ಮೌರ್ಯನೊಂದಿಗೆ ಹೊರಟೆ. ದಿನ ಶನಿವಾರ ಆಗಿದ್ದರಿಂದ ಆಗಲೇ ರಸ್ತೆಗಳೆಲ್ಲ ವಾರಾಂತ್ಯದ ಪ್ರಯಾಣಪ್ರಿಯರಿಂದ ಕಿಕ್ಕಿರಿದಿದ್ದವು. ಈ ಕಿಕ್ಕಿರಿಗಳು ನಮಗೆ ಯಾವತ್ತೂ ಚಿತ್ತಸಮತೆಯನ್ನುಂಟುಮಾಡಿಲ್ಲವಾದ್ದರಿಂದ ಸ್ವಾಭಾವಿಕವಾಗಿಯೇ ಸ್ವಲ್ಪ ಕಿರಿಕಿರಿಯಾಗುವ ಸಂಭವವಿತ್ತು, ನಿರ್ವಾಹವಿಲ್ಲದೇ ನಡೆದಿದ್ದೆ. ಸಮಯ ಹತ್ತು ಗಂಟೆಯ ಮೇಲೆ ಹತ್ತು ನಿಮಿಷವಾಗಿತ್ತು. ಮೇಲೆ ಆಗಸದಲ್ಲಿ ಮೋಡಗಳ ಬಿಡುವಿಲ್ಲದ ಗುಡುಗುಗಳು ಹಾಗೂ ಕೆಳಗೆ ರಸ್ತೆಗಳಲ್ಲಿ ಕಿಕ್ಕಿರಿದ ಗಾಡಿಗಳ ಗಡಬಡಿಕೆಗಳ ಮಧ್ಯೆ ಹಕ್ಕಿಗಳು ಸದ್ದಿಲ್ಲದೇ ಆಹಾರಪ್ರಾಪ್ತಿಗೆಂದು ವಿಹರಿಸುತ್ತಿದ್ದವು. ರಸ್ತೆಯ ಇಕ್ಕೆಲುಗಳಲ್ಲಿ ಸ್ಥಳಿಯರು ಅಂಗಡಿಗಳ ಮುಂದೆ ಕಸಗುಡಿಸಿ, ಸಾರಿಸಿ, ರಂಗವಲ್ಲಿಯನ್ನು ಹರವಿ ಒಳಗೆ ದೇವಪಟದ ಮುಂದೆ ದೀಪ ಹಾಗೂ ಧೂಪವನ್ನು ಹಚ್ಚಿ ಅದರ ಸುವಾಸನೆಗೆ ಮಂದಸ್ಮಿತರಾಗಿ ಕುಳಿತು ಗಿರಾಕಿಗಳಿಗಾಗಿ ಎದುರುನೋಡುತ್ತಿದ್ದರು. ಅಲ್ಲೆಲ್ಲೋ ಮಂದಸ್ವರದಲ್ಲಿ ‘ನಮೋ ವೆಂಕಟೇಶ, ನಮೋ ತಿರುಮಲೇಶ’ ಅನ್ನೋ‌ ಹಾಡು.

ನಮ್ಮ ಕರ್ಣಾಟದ ದೇವಾಲಯಗಳು ನನಗೆ ವಿಶೇಷ ಹಿತವನ್ನುಂಟು ಮಾಡೋಕೆ‌ ಇನ್ನೊಂದು ಕಾರಣವಿದೆ. ಇಲ್ಲಿನ ದೇವಾಲಯದ ರಾಜಮಾರ್ಗದಲ್ಲಿ ಕಡ್ಡಿಪೊಟ್ಟಣದಂತೆ ಕಟ್ಟಿದ ಆಪಣಗಳಲ್ಲಿನ ವರ್ತಕರು ದುಂಬಾಲು ಬಿದ್ದು ತಮ್ಮಲ್ಲೇ ಸಾಮಾನು ಖರೀದಿಸುವಂತೆ ಅಷ್ಟು ಹಿಂಸಿಸುವುದಿಲ್ಲ. ಅನ್ಯ ರಾಜ್ಯ/ಪ್ರದೇಶದ ದೇವಾಲಯಗಳಿಗೆ ಹೋದಾಗ ದೇವಾಲಯಕ್ಕೆ ಒಳಗಾಗುವ ಮುನ್ನವೇ ಆ ಭಕ್ತಿ ಎಂಬ‌ ಭಾವ ಆವಿಯಾಗಿ ಹೋಗುವಷ್ಟು ವರ್ತಕರು ಹಿಂಸೆ ಕೊಡುತ್ತಾರೆ, ವಿಶೇಷವಾಗಿ ಉತ್ತರ ಭಾರತದ ದೇವಸ್ಥಾನಗಳ ಮುಂದೆ.

ಐದಾರು ನಿಮಿಷದಲ್ಲಿ ದೇವಾಲಯದ ಮುಖ್ಯದ್ವಾರದ ಬಳಿಬಂದೆ, ನರಸಿಂಹದೇವರಿಗೆ ಉಘೇ ಎನ್ನುತ್ತ ಶಿವದೇವಾಲಯದ ಹೊಸ್ತಿಲನುತ್ತಮಿಸಿದೆ. ಆಗಲೇ ಜಂಗುಳಿಯೊಂದು ದೇವಸ್ಥಾನದ ಪ್ರಾಂಗಣದಲ್ಲಿ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ವ್ಯಸ್ತವಿದ್ದುದನ್ನು‌ ನೋಡಿದಾಕ್ಷಣ ಸರ್ವಜ್ಞನ ತ್ರಿಪದಿಯೊಂದು ತಲೆಗೆ ಬಂತು –

ಚಿತ್ತವಿಲ್ಲದ ಗುಡಿಯ ಸುತ್ತಿದೊಡೆ ಫಲವೇನು ?
ಎತ್ತು ಗಾಣವನು ಹೊತ್ತು ತಾ ನಿತ್ಯದಲಿ
ಸುತ್ತಿಬಂದಂತೆ ಸರ್ವಜ್ಞ ||

ಅವರನ್ನು ಕಷ್ಟಪಟ್ಟು ದಾಟಿಕೊಂಡು ಮುನ್ನುಡಿಯಿಡುತ್ತ ಶಿವಲಿಂಗವಿರುವ ಗರ್ಭಗುಡಿಯ ಮುಂದೆ ಬಂದು ಮಂಡಿಯೂರಿ ಮನಸಾ ನಮಿಸಿ, ದೇವಾಲಯವನ್ನೆಲ್ಲ ಒಮ್ಮೆ ಸುತ್ತುಹಾಕಿದೆ. ಇದು ವಿರೂಪಾಕ್ಷ ದೇವಸ್ಥಾನದಂತೆ ವಿಜಯನಗರ ಸಾಮ್ಯಾಜ್ಯ ಸ್ಥಾಪನೆಯಾಗುವುದಕ್ಕೂ ತುಂಬ ಮೊದಲೇ ಅಸ್ತಿತ್ವದಲ್ಲಿರುವಂಥದ್ದು. ಇದೇ ಜಾಗದಲ್ಲೇ ಶ್ರೀ ರಾಮಪ್ರಭುಗಳು ಸುಗ್ರೀವನೊಡಗೂಡಿ ವಾಲಿಯ ವಧೆ ಮಾಡಿದ್ದು ಎನ್ನುವ ಐತಿಹ್ಯವಿದೆ. ತರುವಾಯ ತತ್ಪ್ರದೇಶದಲ್ಲಿ ಜನಗಣ ಹೆಚ್ಚಾಗಿದ್ದರಿಂದ ಅಲ್ಲಿ ನಾನು ಹೆಚ್ಚು ಸಮಯ ವ್ಯಯಿಸಲಿಚ್ಛಿಸದೆ ಶಿವ-ಗಂಗೆ-ತುಂಗೆಯರಿಗೆ ನಮಿಸಿ ಹೊರನಡೆದೆ.

ಅಲ್ಲಿಂದ ಮುಂದೆ ಆನೆಗುಂದಿ ಕೋಟೆಯ ಮುಖ್ಯ ಪ್ರಾಕಾರಕ್ಕೆ ಹೊರಟೆ. ಹೊರಡುವ ದಾರಿಯಲ್ಲೆಲ್ಲ ಶ್ರೀಕೃಷ್ಣದೇವರಾಯರ ಸಮಾಧಿಯ ಅಸ್ತವ್ಯಸ್ತತೆಯ ಬೆಗೆಗಿನ ಆಲೋಚನೆಗಳಲ್ಲೇ ಮನಸು ವ್ಯಸ್ತವಾಗಿತ್ತು.

ಚಿತ್ರ ಕೃಪೆ : ಆರ್ಯ​

ಏತನ್ಮಧ್ಯೆ ಹಲವು ಬಂಡೆಗಳನ್ನು ಹತ್ತಿಳಿದು ಆನೆಗುಂದಿ ಕೋಟೆಯ ದ್ವಾರಬಾಗಿಲಿಗೆ ಬಂದು ನಿಂತಾಗಲೇ ಆ ಗುಂಗಿನಿಂದ ಹೊರಬಂದಿದ್ದು. ಇನ್ನೇನು ಕೋಟೆಯೊಳಗೆ ಅಡಿಯಿಡಬೇಕೆನ್ನುವಷ್ಟರಲ್ಲಿ ಒಳಗಿನಿಂದ ಆಕಳುಗಳ ಹಿಂಡೊಂದು ದಿಢೀರನೆ ಎದುರಾಯ್ತು. ಒಮ್ಮೆಗೇ ಎದುರು ಬಂದ ನನ್ನ ಮಾನವಾಕೃತಿಗೆ ಕೆಲವು ಗೋವುಗಳು ಹೌಹಾರಿದವೆನಿಸುತ್ತದೆ, ಸ್ವಲ್ಪ ಗಾಬರಿಯಿಂದ ಹಾರಿ ಹೊರಗೋಡಿದವು. ಹತ್ತಾರು ಗೋವುಗಳಿರಬಹುದು ಅಂತ ಯೋಚಿಸಿ ಎಲ್ಲವೂ ಹೋಗುವವರೆಗೆ ಕಾಯುತ್ತ ಮಗ್ಗುಲಲ್ಲಿ ನಿಂತೆ. ಐದು ನಿಮಿಷವಾಯ್ತು, ಹತ್ತು ನಿಮಿಷವಾಯ್ತು ಆಕಳುಗಳ ಅಂಕಿ ಮುಗಿಯುತ್ತಲೇ ಇಲ್ಲ, ಭೂರಂದ್ರವೊಂದರಿಂದ ಇರುವೆಗಳು ಬರುವಂತೆ ಒಂದಾದ ಮೇಲೊಂದು ಇನ್ನೂ ಬರುತ್ತಲೇ ಇವೆ. ಇಪ್ಪತ್ತು ನಿಮಿಷಕ್ಕೂ ಮೀರಿ ನಾ ಅಲ್ಲೇ ನಿಂತಿದ್ದೆ ಅನಿಸುತ್ತೆ. ಇನ್ನೂ ಗೋವುಗಳ ಆಗಮನವಾಗುತ್ತಲೇ ಇದೆ. ನನಗೆ ಕುತೂಹಲ ತಡೆಯಲಾಗದೇ ನೋಡುತ್ತಲೇ ಇದ್ದೆ. ಸುತ್ತಮುತ್ತ ಕಣ್ಣಾಡಿಸಿದಾಗ ಅಲ್ಲೇ ಹತ್ತಿರದಲ್ಲಿ ಒಬ್ಬರು ಕೃಷಿಕಾರ್ಯದಲ್ಲಿ ನಿರತರಾಗಿದ್ದು, ಅವರ ಹತ್ತಿರ ಹೋಗಿ ಸ್ವಾಮಿ, ಈ ಆಕಳುಗಳು ಎಲ್ಲಿಯವು ? ಮುಗಿಯುತ್ತಲೇ ಇಲ್ಲವಲ್ಲ !? ಹತ್ತಿರದಲ್ಲಿ ಎಲ್ಲಿಯಾದರೂ ಗೋಶಾಲೆ ಏನಾದರೂ ಇದೆಯೇ ? ಎಂದು ಕೇಳು ಅವರು- ಹ್ಞಾ! ಇಲ್ಲೇ ಬೆಟ್ಟದಡಿಯಲ್ಲಿ ದುರ್ಗಾದೇವಿಯ ಹೆಸರಲ್ಲಿ ಒಂದು ದೇವಸ್ಥಾನ, ಅಲ್ಲೇ ಗೋಶಾಲೆಯಿದೆ – ಎಂದರು. ನಾನು- ಓಹ್‌… ಧನ್ಯವಾದ ಎಂದು ಹೇಳಿ ಮತ್ತೆ ಕೋಟೆಯ ತಲೆಬಾಗಿಲ ಕಡೆ ತೆರಳಿದೆ. ಎಲ್ಲ ಗೋವುಗಳು ಹೊರಗಾದ ಮೇಲೆ ಹಿಂದಿನಿಂದ ಕೈಯಲ್ಲಿ ಬೆತ್ತ, ಹೆಗಲ ಮೇಲೊಂದು ಗುಡಾರ ಹಾಕಿಕೊಂಡು ಒಬ್ಬ ತಾತ ಬರುತ್ತಿದ್ದರು, ಅವರು ಹತ್ತಿರ ಬಂದಾಗ ಕೃಷಿಕರಿಗೆ ಕೇಳಿದ ಮತ್ತದೇ ಪ್ರಶ್ನೆಗಳನ್ನು ಕೇಳಿದೆ, ಅವರದೂ ಅದೇ ಉತ್ತರವಾಗಿತ್ತು. ಒಟ್ಟು ಸಾವಿರದ ಮೇಲೆ ಗೋವುಗಳಿವೆ ಅಂದರು. ನಾನು ಮಂತ್ರಮುಗ್ಧನಾಗಿ ಕೆಲಹೊತ್ತು ಅಲ್ಲೇ ನಿಂತಿದ್ದೆ, ತಾತ ಬೆಟ್ಟ ಇಳಿದು ಹೋದರು. ನಾನು ಕೋಟೆಯೊಳಗೆ ಏರಿ ಹೋದೆ. ನಾನೀಗ ಭೂಮಿಯಲ್ಲೇ ಅತ್ಯಂತ ಪುರಾತನವಾದ ಒಂದಾನೊಂದು ಎತ್ತರದ ಪ್ರದೇಶದಲ್ಲಿದ್ದೆ (ಸಂಶೋಧನಾಕಾರರ ಪ್ರಕಾರ ಇದು ಕ್ರಿ.ಪೂ ೩೦೦೦ ವರ್ಷಗಳ ಹಿಂದಿನಿಂದ ಈ ಕಿಷ್ಕಿಂದಾ ಸ್ಥಳ ಭೂಮಿಯ ಮೇಲೆ ಕೆಲವಷ್ಟೇ ಮಾರ್ಪಾಡುಗಳೊಂದಿಗೆ ಅಂದಿನಿಂದ ಇಂದಿನವರೆಗೂ ಅಸ್ತಿತ್ವದಲ್ಲಿದೆ). ನಮಗೆ ಈ ಸಂಶೋಧನೆಗಳ ಕಿಂಚಿತ್ ಅವಶ್ಯಕತೆಯೂ ಇಲ್ಲ. ರಾಮಾಯಣದ ಹಲವು ವೃತ್ತಾಂತಗಳು ಈ ಸ್ಥಳದ ಸುತ್ತಮುತ್ತ ಘಟಿಸಿದ ಕಾರಣ ಇದು ನಿಶ್ಚಿತವಾಗಿಯೂ, ಸಂಶೋಧನಾಕಾರರು ನಿಶ್ಚಯಿಸಿ ಹೇಳಿರುವ ಕ್ರಿ.ಪೂ. ೩ ಸಾವಿರ ವರ್ಷಗಳಿಗಿಂತ‌ ಸಾವಿರಾರು ವರ್ಷ ಹಿಂದೆಯೇ ಸುಸಂಸ್ಕೃತತೆಯಿಂದ ಅಸ್ತಿತ್ವದಲ್ಲಿತ್ತು ಎಂದು ದೃಢವಾಗಿಯೇ ನಂಬಬಹುದು.

(ಮುಂದುವರೆಯುವುದು…)