ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ : ಭರತ್ ದೇವಿಕರ್

ಪಂಪಾ ಕ್ಷೇತ್ರದ ಇತಿಹಾಸ ಗಮನ – ೨

ಆರ್ಯ​

(ಹಿಂದಿನ ಭಾಗ : ಪಂಪಾ ಕ್ಷೇತ್ರದ ಇತಿಹಾಸ ಗಮನ – ೧)

ಒಂದೊಂದು ಪ್ರದೇಶದ ಬೆಟ್ಟಗಳಿಗೆ ಒಂದೊಂದು ವಿಶಿಷ್ಟ ಗುಣಧರ್ಮ, ವಿಶಿಷ್ಟ ಆಕಾರ, ಸಂಸ್ಕಾರಗಳು. ವಿಜಯನಗರದ ದಿಟ್ಟಬೆಟ್ಟಗಳಿಗೆ ಬಂಡೆಗಳ ಗಟ್ಟಿ ಸಂಸ್ಕಾರ ಒದಗಿತ್ತು. ಬೆಟ್ಟದ ಸಸ್ಯಶ್ಯಾಮಲೆಯು ಮಾಧವ-ಸಾಯಣರ ಬ್ರಾಹ್ಮತೇಜದ ಸಂಕೇತವಾದರೆ, ಗುಂಡುಕಲ್ಲುಗಳು ಗಂಡುಗಲಿಗಳಾದ ಹಕ್ಕ-ಬುಕ್ಕರ ಕ್ಷಾತ್ರತೇಜದ ಸಂಕೇತ. ಎರಡರ ಸಮ್ಮಿಲನದಿಂದ ವಿಜಯನಗರದ ಬೆಟ್ಟಗಳಿಗೆ ವಿಶೇಷ ಮೆರಗುಂಟಾಗಿತ್ತು.

ಚಿತ್ರ ಕೃಪೆ : ಆರ್ಯ​
ಚಿತ್ರ ಕೃಪೆ : ಆರ್ಯ

ವರ್ಷಾ ಋತುವಿನ ಸಂಧ್ಯಾಕಾಲವಾದ್ದರಿಂದ ಮೇಲೆ ತಿಳಿನೀಲಿ ಮಿಶ್ರಿತ, ಮೋಡಗಳಿಂದ ಭರಿತ, ಸಂಭ್ರಮಿತ ಆಗಸದ ನೋಟ, ಕೆಳಗೆ ಮಣ್ಣಿನ ಬಣ್ಣವನ್ನು ಕಡಾಪಡೆದುಕೊಂಡು ತುಂಬಿ ಹರಿಯುತ್ತಿರುವ ತುಂಗೆಯ ಹರಿದಾಟ, ಮಧ್ಯದಲ್ಲಿ ತಿಳಿಹಳದಿ, ತಿಳಿಗುಲಾಬಿ ಮಿಶ್ರಿತ ಕಂದು ಬಣ್ಣದ ವಿವಿಧ ಗಾತ್ರದ ಬಂಡೆ-ಗುಡ್ಡಗಳ ಮಾಟ ಹಾಗೂ ಮಾನವನಿಂದ ನಿರ್ಮಿತ ಸುಂದರವಾದ ಭತ್ತದ ತೋಟಗಳ ರಸದೂಟ ಇವೆಲ್ಲವನ್ನು ಕಣ್ತುಂಬಿಕೊಳ್ಳುತ್ತಿದ್ದಾಗ ಮನಸು ಮಾನ್ಯ ಗುಂಡಪ್ಪನವರ ಕಗ್ಗವೊಂದನ್ನು ಪಠಿಸುತ್ತಿತ್ತು.

ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ? ।
ದಿನಪನದೆ? ಚಂದ್ರನದೆ? ನೀರಿನದೆ? ನಿನದೆ? ॥
ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು ।
ಗುಣಕೆ ಕಾರಣವೊಂದೆ? – ಮಂಕುತಿಮ್ಮ॥

ಹಂಪೆಗೆ ಒಳಗಾದಾಗ ಮೊಟ್ಟಮೊದಲು ಶ್ರೀ ಕೃಷ್ಣದೇವರಾಯರ ಸಮಾಧಿಸ್ಥಳಕ್ಕೆ ತೆರಳಬೇಕೆಂದು ಮನದಲ್ಲೇ ನಿಶ್ಚಯಿಸಿದ್ದೆ. ಅಂತೆಯೇ ಮೌರ್ಯನಿಗೆ ಆನೆಗುಂದಿಯ ಕಡೆಗೆ ಹೊರಡಲು ಸೂಚನೆಯಿತ್ತು ದಾರಿಗುಂಟ ಬರುವ ಆರ್ಯರು ತಮ್ಮ ತಮ್ಮ ಗದ್ದೆಯಲ್ಲಿ ಭತ್ತದ ಉದ್ಯೋಗದಲ್ಲಿ ತೊಡಗಿರುವುದನ್ನು ಕಣ್ತುಂಬಿಕೊಳ್ಳುತ್ತಿದ್ದೆ. ಉತ್ತರಕರ್ಣಾಟದ ಹಸಿರನ್ನೆಲ್ಲ ಕೊಳ್ಳೆಹೊಡೆದು ತನ್ನ ಬೊಕ್ಕಸ ತುಂಬಿಸಿಕೊಂಡಿರುವ ಖ್ಯಾತಿ ಗಂಗಾವತಿ ಪ್ರದೇಶಕ್ಕಿದೆ.

ಚಿತ್ರ ಕೃಪೆ : ಆರ್ಯ

ಸಹೃದಯ ಸ್ನೇಹಿತನೊಬ್ಬ ತುಂಗೆಯ ದಡದಲ್ಲಿ ತಂಗುವುದಕ್ಕಾಗಿ ಒಂದು ತಾಣವನ್ನು ತೋರಿಸಿದ್ದ. ಅಂತೆಯೇ ತಂಗುದಾಣಕ್ಕೆ ಹೋಗಿ ಏಕಾಂತವಾಸಕ್ಕೆ ಪ್ರಸಕ್ತವಾದ ಪ್ರಕೋಷ್ಠೆಯೊಂದನ್ನು ಆಯ್ದಕೊಂಡು, ಒಳಗಾಗಿ (check-in) ಅತ್ಯಗತ್ಯ ಮಿತವಾದ ವಸ್ತುಗಳೊಟ್ಟಿಗೆ ಕೃಷ್ಣದೇವರಾಯರ ಸಮಾಧಿಯತ್ತ ನಡೆದೆ.

ಮಳೆಗಾಲದ ಮುಸಲಧಾರೆಯಿಂದ ತುಂಬಿ ತುಳುಕಾಡುತ್ತಿರುವ ತುಂಗೆಯ ಅಂಗವಾದ ಸಾಣಾಪುರ ಕೆರೆಯನ್ನು ಸುತ್ತುವರೆದ ರಸ್ತೆಯನ್ನು ಬಳಸಿಕೊಂಡು ಪಶ್ಚಿಮ ಮಹಾದ್ವಾರದ ಮುಖಾಂತರ ಆನೆಗುಂದಿಯ ಮುಖ್ಯ ಕೋಟೆಯ ಒಳಗಾದೆ‌. ಅಲ್ಲಿಂದ ಅರ್ಧಮೈಲಿನಷ್ಟು ದೂರದಲ್ಲಿ ತುಂಗೆಯ ಒಡಲಿನಲ್ಲಿ ೬೪ ಕಂಬಗಳಿರುವ ಮಂಟಪವೊಂದು ಅನ್ಯಮನಸ್ಕನಂತೆ ನಿಂತಿದ್ದನ್ನು ಕಂಡಾಕ್ಷಣ ತಕ್ಷಣಕ್ಕೆ ನನ್ನ ಕರುಣಾರಸ ಪ್ರವಾಹಕ್ಕೆ ಕಟ್ಟೆಯೊಂದನ್ನು ಕಟ್ಟಿ ಭೂಮಂಡಲದ ಜನಪದವೆಲ್ಲ ಮೂಗಿನ ಮೇಲೆ ಬೆರಳಿಟ್ಟು ಉದ್ಗ​ರಿಸುವಂತಹ, ಅತ್ಯಂತ ವೈಭವಯುತ ಸಾಮ್ರಾಜ್ಯವನ್ನು ಪರಿಪಾಲಿಸಿ ವಿಜಯನಗರ ಸಾಮ್ರಾಜ್ಯದ ಉಚ್ಛ್ರಾಯ ಸ್ಥಿತಿಗೆ ಕಾರಣೀಭೂತನಾದ ತುಳುವ ವಂಶಾವಳಿಯ ಚಂದ್ರಮೌಳಿ

ಸತ್ಯಾಶ್ರಯ
ಆಂಧ್ರಭೋಜ
ರಾಜಪರಮೇಶ್ವರ
ಭಕ್ತ ಪರಮ‌ ಭಟ್ಟಾರಕ
ಮೂರುರಾಯರ ಗಂಡ
ವೇದಮಾರ್ಗ ಪ್ರವರ್ತಕ
ಯವನ‌ ರಾಜ್ಯ ಸಂಸ್ಥಾಪಕ
ಶ್ರೀ ಮನ್ಮಹಾರಾಜಾಧಿರಾಜ
ಕನ್ನಡ ರಾಜ್ಯರಮಾರಮಣ
ಕನ್ನಡ ರಾಜ್ಯ ಲಕ್ಷ್ಮೀ ಮನೋಹರ
ಶ್ರೀ  ವಿರೂಪಾಕ್ಷ ‌ ಪಾಪದ್ಮಾರಾಧಕ
ಛತ್ರಪತಿ ಶಿವಾಜಿ ಸ್ವರಾಜ್ಯ ಪ್ರೇರಕ

ಶ್ರೀ ಶ್ರೀ ಶ್ರೀ ಕೃಷ್ಣದೇವರಾಯರ ಪಾದಪದ್ಮಗಳಲ್ಲಿ ನನ್ನ ಭಕ್ತಿರಸಮಿಶ್ರಿತ ಚಿತ್ತವನ್ನು ಸ್ಥಿರವಾಗಿರಿಸಿ ಒಂದು‌ ಮುಹೂರ್ತ ಕಾಲ ಕುಳಿತಿದ್ದು, ಸ್ವಲ್ಪ ಸಮಯದ ನಂತರ ಆ ಸ್ಥಿತಿಯಿಂದ ಹೊರಬಂದು ವಿದ್ಯಾರಣ್ಯರಾರಭ್ಯ ರಾಮರಾಯನ ಪರ್ಯಂತ ವಿಜಯನಗರ ಸಾಮ್ರಾಜ್ಯದಾದ್ಯಂತ ಚಿತ್ತಸಂಚಲನ ಮಾಡಿದೆ.

ಚಿತ್ರ ಕೃಪೆ : ಆರ್ಯ

ಮನಃಪಟಲದ‌ ಮೇಲೆ ವಿದ್ಯಾನಗರದ (ವಿಜಯನಗರದ) ಎಲ್ಲ ವಿದ್ಯಮಾನಗಳೂ ಒಮ್ಮೆ ಆದ್ಯಂತವಾಗಿ ಮಥಿಸಿ ಹೋದವು. ಪ್ರಪಂಚದ ಇತಿಹಾಸದ ಪುಟಗಳಲ್ಲಿ ಅಕ್ಷರಶಃ ಸುವರ್ಣಾಕ್ಷರಗಳಿಂದ ಸ್ವರಿತ ಸಾಮ್ರಾಜ್ಯದ ಪರಿಪಾಲಕನ‌ ಸಮಾಧಿಸ್ಥಳದ ಪರಿಸ್ಥಿತಿಯನ್ನು ನೋಡಿ‌ ಕರುಳು ಕಿತ್ತುಬಂದಂತಾಯಿತು. ಮಹಾಶಯ ಶ್ರೀ ಕೃಷ್ಣದೇವರಾಯಾದಿಗಳಿಗೆ ನಾವು ಕೊಡುವ ಗೌರವದ ಪರಿ ಇದೆಯಾ !? ತುಂಗೆಯ ಗರ್ಭದಲಿ ಈ ಸ್ಮಾರಕಗಳೆಲ್ಲ ಮುಚ್ಚುಹೋಗಿದ್ದರೆ ಚೆಂದವಿರುತ್ತಿದ್ದೆಂದು ಒಮ್ಮೆ ಅನಿಸಿದ್ದು ಸುಳ್ಳಲ್ಲ. 

ಹುಲ್ಲು ಕಲ್ಲಿಗೆ ಹೊಲ್ಲ |
ಮ್ಲೇಂಚ್ಛ ಆರ್ಯರಿಗೆ ಹೊಲ್ಲ |
ಪಾಶ್ಚಿಮಾತ್ಯರ ಮತವೆಲ್ಲಕೂ ಹೊಲ್ಲ ||

(ಭಾರತದಲ್ಲಾಗುವ ಸರ್ವಾನರ್ಥಗಳಿಗೂ ನಿಶ್ಚಿತವಾಗಿಯೂ ಪರೋಕ್ಷವಾಗಿ/ಅಪರೋಕ್ಷವಾಗಿ ಪಾಶ್ಚಿಮಾತ್ಯರ ಸಂಸ್ಕೃತಿಯೇ ಮೂಲಕಾರಣ)

ಅಲ್ಲಿನ ಹದಗೆಟ್ಟಿರುವ ಪರಿಸ್ಥಿತಿಯ ಬಗ್ಗೆ ಸ್ಥಳೀಯ ಪಂಚಾಯತ ಕಚೇರಿಯಲ್ಲಿ ಒಮ್ಮೆ ದೂರುಕೊಡಬೇಕು ಅಂದುಕೊಂಡು ಅತ್ತಕಡೆ ಹೊರಟೆಯೂ ಕೂಡ. ಕೆಲವು ಕ್ಷಣಗಳ ನಂತರ ಸರ್ವಜ್ಞನ ತ್ರಿಪದಿಯೊಂದು ಪಕ್ಕನೆ ಹೊಳೆಯಿತು –

ಶ್ವಾನ ತೆಂಗಿನಕಾಯ ತಾನು‌ ಮೆಲಬಲ್ಲುದೆ ?
ಹೀನ ಮನದವನಿಗುಪದೇಶವಿತ್ತಡೆ
ಹಾನಿ ಕಾಣಯ್ಯ ಸರ್ವಜ್ಞ ||

ಅದರ ಅರಿವಾಗಿ, ಮುಂದೆ ಮೌರ್ಯನೊಂದಿಗೆ ತುಂಗೆಯ ದಡದಲ್ಲಿರುವ ಚಿಂತಾಮಣಿ ದೇವಸ್ಥಾನ ಸಂಕೀರ್ಣದೆಡೆಗೆ ಹೊರಟೆ. ಮೋಡಗಳು ಎತ್ತಲೋ ಹರಿದು ಹೋಗುತ್ತಿದ್ದ ದೃಶ್ಯ ಸಾಗರದ ತೆರೆಗಳ ಮರುಸಂಯೋಜನೆಯಂತಿದ್ದವು.

ಚಿತ್ರ ಕೃಪೆ : ಮಹೇಶ್

(ಮುಂದುವರೆಯುವುದು…)

*********

ಪದಕೋಶ:
*ಆರ್ಯ – ಎಂಬುದರ ಮೂಲ ಅರ್ಥ ಕೃಷಿಯ ಮೇಲೆ ಅವಲಂಬಿತ ವ್ಯಕ್ತಿ. ಅರ್ ಧಾತು