ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬದುಕ ಪಯಣ ಮುಗಿಸಿದ ಪ್ರೊ.ಚಂಪಾ

ಪ್ರೊ.ಸಿದ್ದು ಯಾಪಲಪರವಿ

‘ಪ್ರೀತಿ ಇಲ್ಲದೆ ಏನನ್ನು ಮಾಡಲಾಗದು ದ್ವೇಷವನ್ನೂ’ ಎಂಬ ಅರ್ಥಪೂರ್ಣ ಸಾಲುಗಳನ್ನು ಕನ್ನಡದ ಸಾಹಿತ್ಯ ಲೋಕಕ್ಕೆ ನೀಡಿದ, ನಾಡು ಕಂಡ ಅಪ್ರತಿಮ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ವಯೋಸಹಜ ಕಾಯಿಲೆಯಿಂದ ನಮ್ಮನ್ನು ಅಗಲಿದ್ದಾರೆ. ಧಾರವಾಡ ಸಂಕ್ರಮಣದ ತ್ರಿಮೂರ್ತಿಗಳಾದ ಪ್ರೊ.ಚಂಪಾ, ಪ್ರೊ.ಗಿರಡ್ಡಿ ಮತ್ತು ಪ್ರೊ.ಸಿದ್ಧಲಿಂಗ ಪಟ್ಟಣಶೆಟ್ಟಿ ಸೇರಿಕೊಂಡು ನವ್ಯದ ಸಂದರ್ಭದಲ್ಲಿ ಹೊಸ ಅಲೆ ಹುಟ್ಟು ಹಾಕಿದರು. ಧಾರವಾಡದ ಕರ್ನಾಟಕ ಕಾಲೇಜು ಮತ್ತು ಇಂಗ್ಲೆಂಡ್ ಲೀಡ್ಸ್ ನಲ್ಲಿ ಅಧ್ಯಯನ ಪೂರೈಸಿ, ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಆಕರ್ಷಕ ಪ್ರಾಧ್ಯಾಪಕರಾಗಿ ಜನಾನುರಾಗಿಯಾದರು. ಅದರಾಚೆಗೆ ಸಾಹಿತಿಯಾಗಿ ಕಾವ್ಯ,ನಾಟಕ,ಕತೆ ಮತ್ತು ವಿಮರ್ಶೆ ಮೂಲಕ ಅಷ್ಟೇ ಎತ್ತರಕ್ಕೆ ಏರಿದರು.

ಅರವತ್ತರ ದಶಕದಲ್ಲಿ ‘ಸಂಕ್ರಮಣ’ ಆರಂಭಿಸಿ ಬರಹಗಾರರ ಪಡೆ ಸೃಷ್ಟಿಸಿದರು.
ನೂರಾರು ಕೃತಿಗಳ ರಚನೆಯ ಜೊತೆಗೆ ರಾಜಕೀಯ, ಹೋರಾಟ ಮತ್ತು ಸಂಘಟನೆ ಅವರ ಆಸಕ್ತಿ, ಪುರೋಹಿತಶಾಹಿ ಮನೋಧರ್ಮದ ಖಂಡನೆ ಅವರ ನಿರಂತರ ಜಪವಾಗಿತ್ತು. ಸಾಮಾಜಿಕ ತರತಮ ಮತ್ತು ಮೇಲ್ವರ್ಗದ ಕುತಂತ್ರಗಳ ಕುರಿತು ವಾಸ್ತವ ಚಿತ್ರಣವನ್ನು ಕಟ್ಟಿಕೊಡುತ್ತಿದ್ದರು. ಅವರು ನೀಡುವ ಜಾಗೃತಿ ತುಂಬಾ ಪರಿಣಾಮಕಾರಿಯಾಗಿ ಇರುತ್ತಿತ್ತು, ಅದನ್ನು ಸಮರ್ಥವಾಗಿ ಒಪ್ಪಿಸುವ ಜಾಣತನ ಅವರದು.

ಮಾತು, ಹರಟೆ,ಗೆಳೆಯರ ಜೊತೆಗೆ ಜಗಳ ಅವರ ಮಿತಿ ಮತ್ತು ಸಾಮರ್ಥ್ಯ. ಹಿರಿಯ ಕವಿ ಬೇಂದ್ರೆ, ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರ ಜೊತೆಗೆ ತಾತ್ವಿಕ ಜಗಳ ಇದ್ದೇ ಇರುತ್ತಿತ್ತು. ಆದರೆ ವೈಯಕ್ತಿಕ ನೆಲೆಯಲ್ಲಿ ಯಾವುದೇ ರೀತಿಯ ದ್ವೇಷ, ನಂಜು ಮನಸಿನಲ್ಲಿ ಇರುತ್ತಿರಲಿಲ್ಲ. ತಮ್ಮೊಂದಿಗೆ ತಾತ್ವಿಕ ತಕರಾರು ಹೊಂದಿದ್ದ ಪೇಜಾವರ ಶ್ರೀಗಳು ಮತ್ತು ರಂಭಾಪುರಿ ಜಗದ್ಗುರುಗಳ ಜೊತೆಗೆ ಸೌಹಾರ್ದ ಚರ್ಚೆ ಮಾಡಿದ್ದೇ ಇದಕ್ಕೆ ಸಾಕ್ಷಿ.
ವೈಯಕ್ತಿಕವಾಗಿ ನನಗೆ ಸಂಕ್ರಮಣ ಹಿರಿಯರ ಕೃಪೆ ನನ್ನ ವ್ಯಕ್ತಿತ್ವವನ್ನು ರೂಪಿಸಲು ಕಾರಣವಾಯಿತು. ಓದು,ಬರಹ ಮತ್ತು ಭಾಷಣಕ್ಕೆ ತೀವ್ರ ಪ್ರಭಾವ ಬೀರಿದ ಮಹನೀಯರು ಇವರು.

ವ್ಯಂಗ್ಯ, ಹರಿತ ಮಾತು ಚರ್ಚೆಯಲ್ಲಿ ಚಂಪಾ ಕಳೆದು ಹೋದರು ಎಂಬ ಆರೋಪವಿದೆ ಆದರೆ ಅದು ಸರಿಯಾದ ಗ್ರಹಿಕೆಯಲ್ಲ. ‘ಜಾಕ್ ಆಫ್ ಆಲ್’ ಎಂಬಂತೆ ‘ಮಾಸ್ಟರ್ ಆಫ್ ಆಲ್’ ಕೂಡ ಆಗಿದ್ದರು. ಅದಕ್ಕೆ ಅವರ ಆಳ ಗ್ರಹಿಕೆಯೇ ಕಾರಣ. ಸಾಹಿತ್ಯ ಕೃಷಿಯಲ್ಲಿ ತುಂಬಾ ಶ್ರದ್ಧೆಯಿಂದ ಪರಿಪೂರ್ಣವಾಗಿ ತೊಡಗಿಕೊಳ್ಳುತ್ತಿದ್ದರು. ಎಲ್ಲ ಪ್ರಕಾರಗಳಲ್ಲಿ ಅಷ್ಟೇ ಮಾಸ್ಟರಿ ಇತ್ತು. ಹಲವಾರು ಹುದ್ದೆಗಳ ಜೊತೆಗೆ ನಿರಂತರ ದೇಶ ಸುತ್ತುವ ಭರದಲ್ಲಿ ಸಮಯದ ಕೊರತೆ ಆದದ್ದು ಸಹಜ. ಅವುಗಳ ಮಧ್ಯೆ ಲಂಕೇಶ್ ಪತ್ರಿಕೆಯ ಮೂಲಕ ಹರಿತ,ವಿಡಂಬನಾತ್ಮಕ ಬರಹಗಳನ್ನು ದಾಖಲಿಸಿದರು.

ಕಸಾಪ ಬದ್ಧತೆ-ರಾಜ್ಯ ಕಸಾಪ ಅಧ್ಯಕ್ಷರಾಗಿದ್ದಾಗ ಆಳುವ ಪಕ್ಷದ ಸಿದ್ದಾಂತಗಳೊಂದಿಗೆ ರಾಜಿ ಮಾಡಿಕೊಳ್ಳದೆ ತಮ್ಮ ತಾತ್ವಿಕ ಬದ್ಧತೆಯನ್ನು ಕಾಪಾಡಿಕೊಂಡ ಘನತೆಯನ್ನು ಮರೆಯಲಾಗದು. ಶಿವಮೊಗ್ಗ ಸಮ್ಮೇಳನದ ಸಂದರ್ಭದಲ್ಲಿ ಎಡಪಂಥೀಯ ಬರಹಗಾರರನ್ನು ಆಹ್ವಾನಿಸಬಾರದು ಎಂಬ ತಕರಾರರನ್ನು ನಿರಾಕರಿಸಿ ಗೋಷ್ಠಿ ನಡೆಸಿದರು. ನಿರಂತರ ಇಡೀ ರಾಜ್ಯ ಸುತ್ತಿ ಸಮ್ಮೇಳನಗಳನ್ನು ಎಲ್ಲಾ ಯಶಸ್ವಿಗೊಳಿಸಿದರು. ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಗದರುವ ಧೈರ್ಯವೂ ಅವರಲ್ಲಿ ಇತ್ತು.
ಸಮಾಜವಾದಿ ಹಿನ್ನೆಲೆಯಲ್ಲಿ ಬೆಳೆದ ಅವರಿಗೆ ಪಟೇಲ್, ದೇವೇಗೌಡ ಮತ್ತು ಪ್ರಕಾಶ ಅವರೊಂದಿಗೆ ಆಪ್ತ ಒಡನಾಟವಿತ್ತು. ಆ ಸಲಿಗೆಯನ್ನು ಬಂಡಾಯ ಸಾಹಿತ್ಯ ಸಂಘಟನೆ ಮತ್ತು ಕನ್ನಡದ ಕೆಲಸಕ್ಕಾಗಿ ಸದ್ವಿನಿಯೋಗಿಸಿದರು. ರಾಜಕೀಯ ಅಂಗಳದಲ್ಲಿ ಇದ್ದರು ನೇರ ರಾಜಕೀಯ ಮಾಡಲಾಗಲಿಲ್ಲ. ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದಾಗ ಅವರನ್ನು ಷರತ್ತು ಬದ್ಧವಾಗಿ ಬೆಂಬಲಿಸಿ ನಂತರ ದೂರ ಸರಿದರು. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ರಾಜ್ಯ ರಾಜಕಾರಣದ ಬದಲಾವಣೆ ಮೇಲೆ ಬೆಳಕು ಚೆಲ್ಲುವ ಮಾತುಗಳನ್ನು ದಾಖಲಿಸಿದರು.

ಅಧ್ಯಕ್ಷರು,ಕನ್ನಡ ಅಭಿವೃದ್ಧಿ ಪ್ರಾಧಿಕಾರ- ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಡಳಿತ ಭಾಷೆಯ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದರು. ಐ.ಎ.ಎಸ್. ಅಧಿಕಾರ ಒಬ್ಬರು ಇವರ ಜವಾರಿ ಕನ್ನಡ ಮತ್ತು ಇರುವಿಕೆಯನ್ನು ನೋಡಿ ಇಂಗ್ಲೀಷಿನಲ್ಲಿ ಮಾತನಾಡಲು ಮುಂದಾದಾಗ, ಅಷ್ಟೇ ತೀಕ್ಷ್ಣವಾದ ಇಂಗ್ಲೆಂಡ್ ಉಚ್ಚಾರದ ಇಂಗ್ಲಿಷ್ ಮಾತಾಡಿ ಅವನ ಬಾಯಿಗೆ ಬೀಗ ಹಾಕಿದರು. ಅಧಿಕಾರದ ಸಾಮರ್ಥ್ಯ ಮತ್ತು ಮಿತಿಯನ್ನು ಅವನಿಗೆ ವಿವರಿಸಿದರು. ಗಡಿ ಪ್ರದೇಶದ ಗೆಳೆಯರನ್ನು ಕಟ್ಟಿಕೊಂಡು ಕನ್ನಡ ಉಳುಸಿ,ಬೆಳೆಸಿದರು. ಅತಿ ಹೆಚ್ಚು ರಾಜ್ಯ ಸುತ್ತಿ ತಮ್ಮ ಹಳೆಯ ವಿದ್ಯಾರ್ಥಿಗಳ ಒಡನಾಟ ರಿನಿವಲ್ ಮಾಡಿಕೊಂಡರು.

ಆತ್ಮೀಯ ಒಡನಾಡಿ- ತಮ್ಮ ಸಮಕಾಲೀನ ಗೆಳೆಯರಿಗೆ ಸೂಕ್ತ ಸ್ಥಾನಮಾನ ಸಿಕ್ಕಾಗ ಮನದುಂಬಿ ಹಾರೈಸುತ್ತ, ಪ್ರಾಸಂಗಿಕವಾಗಿ ಚುಡಾಯಿಸುತ್ತಿದ್ದರು. ದಲಿತ ಮತ್ತು ಹಿಂದುಳಿದ ವರ್ಗಗಳ ಗೆಳೆಯರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ಜಾತಿ,ಧರ್ಮ, ರಾಜಕೀಯದ ನಂಜನ್ನು ಸೋಂಕಿಸಿಕೊಳ್ಳದ ಅಪ್ಪಟ ಸೆಕ್ಯೂಲರ್ ಉದಾರತೆ. ಸಾಹಿತ್ಯ ಅಕಾಡೆಮಿ, ಸಾಹಿತ್ಯ ಪರಿಷತ್ತು,ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ನಾಡಿನ ವಿಶ್ವವಿದ್ಯಾಲಯಗಳ ಮೂಲಕ ಅನೇಕರಿಗೆ ಕೆಲಸ ಮಾಡಲು ಅವಕಾಶ ಒದಗಿಸಿಕೊಟ್ಟರು.

ಅವರ ಕುರಿತು ನಾನು ಬರೆದ ‘ಸಿದ್ದು ತೀರ್ಥದ ವ್ಯವಸ್ಥೆ ಮಾಡ್ಯಾನ’ ಎಂಬ ಲೇಖನ ಅವರ ಮುಕ್ತ ಮನಸಿಗೆ ತಾಜಾ ಉದಾಹರಣೆಗೆ ಎನಿಸಿಕೊಂಡಿತು. ತೀರ್ಥದ ಬೈಟಕ್, ಚರ್ಚೆಯ ಸಂದರ್ಭದಲ್ಲಿ ಕೂಡ ಸೈದ್ಧಾಂತಿಕ ಎಚ್ಚರ ತಪ್ಪುತ್ತಿರಲಿಲ್ಲ. ಗದುಗಿಗೆ ಬಂದಾಗ ‘ಬೆಳಗಿನ ನಾಷ್ಟಾ ಮತ್ತು ರಾತ್ರಿ ತೀರ್ಥದ ವ್ಯವಸ್ಥೆ ನಿಂದ’ ಎಂದು ತಮಾಷೆ ಮಾಡುತ್ತಿದ್ದರು. ಅಲ್ಲಿ ಗುರು,ಶಿಷ್ಯ ಎಂಬ ಆತಂಕ ಇರುತ್ತಿರಲಿಲ್ಲ. ಬೆಂಗಳೂರಿನ ತಮ್ಮ ಮನೆಯಲ್ಲಿ ಒಂದು ವಾರ ಉಳಿಸಿಕೊಂಡು ಓದುವ,ಬರೆಯುವ ಮತ್ತು ವಿಮರ್ಶಾ ಕ್ರಮವನ್ನು ಶಿಸ್ತು ಬದ್ಧವಾಗಿ ಕಲಿಸಿಕೊಟ್ಟರು. ಆಗ ಅವ್ವ ನೀಲಮ್ಮ ಅವರ ಉಣಬಡಿಸಿದ ಅನ್ನದ ಋಣ ನನ್ನ ಶಕ್ತಿಯನ್ನು ಹೆಚ್ಚಿಸಿತು. ವೈಯಕ್ತಿಕ ಬದುಕಿನ ನೋವು,ನಲಿವುಗಳನ್ನು ಯಾರೊಂದಿಗೂ ಹಂಚಿಕೊಳ್ಳದೆ ಸಮಚಿತ್ತ ಭಾವದಿಂದ ಎದುರಿಸುವ ಅವರ ಜೀವಚೈತನ್ಯ ಅನುಕರಣೀಯ. ಒಂದು ನೆಲೆಯಲ್ಲಿ ನಿರ್ಲಿಪ್ತತೆ ಮತ್ತು ಸಂತೃಪ್ತ ಭಾವವನ್ನು ಅರಗಿಸಿಕೊಂಡು ಬದುಕಿನ ಪ್ರತಿ ಕ್ಷಣವನ್ನು ಆನಂದಿಸುತ್ತಿದ್ದರು.

ಅಪಾರ ಸ್ಮರಣ ಶಕ್ತಿ- ರಾಜ್ಯದ ತುಂಬಾ ಇರುವ ಸಂಕ್ರಮಣದ ಚಂದಾದಾರರು ಮತ್ತು ಶಿಷ್ಯರ ಹೆಸರುಗಳನ್ನು ನೆನಪಿಟ್ಟುಕೊಂಡು ಮಾತನಾಡಿಸುತ್ತಿದ್ದರು. ಅಷ್ಟೇ ತಮಾಷೆಯಿಂದ ಚಂದಾ ವಸೂಲಿ ಮಾಡುತ್ತಿದ್ದರು. ‘ನಿಮ್ಮ ಚಂದಾ ಬರಲಿಲ್ಲ ಇದ್ರ ಕೊಟ್ ಬಿಡ್ರಿ’ ಎಂಬ ಮಾತಲ್ಲೂ ಅದೇ ಆಪ್ತ ವ್ಯವಹಾರ ಚತುರತೆ.
ಹೃದಯ ಚಿಕಿತ್ಸೆ ನಂತರ ಚೇತರಿಸಿಕೊಂಡರೂ, ಓಡಾಡುವ ಚೈತನ್ಯ ಕುಂಠಿತವಾಯಿತು. ಕಳೆದ ಒಂದು ವರ್ಷದಿಂದ ಸಾರ್ವಜನಿಕ ಸಂಪರ್ಕ ಕಳೆದುಕೊಂಡರು. ಅವರ ಮಾತು,ನಗು,ಒಡನಾಟ ಮತ್ತು ಆತ್ಮೀಯತೆ ಮಾತ್ರ ಸದಾ ಹಚ್ಚ ಹಸಿರು. ಅವರು ಕೇವಲ ದೈಹಿಕವಾಗಿ ಹೋಗಿದ್ದಾರೆ ಅಷ್ಟೇ.

ಪ್ರೊ.ಸಿದ್ದು ಯಾಪಲಪರವಿ, ಕಾರಟಗಿ.