ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬೀದಿ ದೀಪದ ಕೆಳಗೆ

ಟಿ ಎಸ್ ಶ್ರವಣ ಕುಮಾರಿ
ಇತ್ತೀಚಿನ ಬರಹಗಳು: ಟಿ ಎಸ್ ಶ್ರವಣ ಕುಮಾರಿ (ಎಲ್ಲವನ್ನು ಓದಿ)

“ಏನ್ ಗೊತ್ತಾ ಗಿರಿ. ನಾನು ಅದನ್ನ ಮನಸ್ಸಿಗೆ ಹಚ್ಕೊಂಡಿಲ್ಲ; ಆದರೆ ಆ ಹೆಂಗಸಿದ್ಲಲ್ಲ, ಅವ್ಳನ್ನ ಎಲ್ಲೋ ನೋಡಿದೀನಿ ಅನ್ಸತ್ತೆ. ಅವ್ಳ ಎತ್ರ, ನಿಲುವು, ಬಾಡಿ ಲಾಂಗ್ವೇಜ್‌ ಎಲ್ಲಾ ನಂಗೆ ತುಂಬಾ ಪರಿಚಿತ ಅನ್ನಿಸ್ತು ಕಣೋ. ಜ್ಞಾಪಿಸ್ಕೊಳಕ್ಕೆ ಟ್ರೈ ಮಾಡ್ತಾನೇ ಇದೀನಿ. ಅವ್ಳು ಹಾರ್ಡ್‌ಡಿಸ್ಕಿಂದ ಹೊರಗೇ ಬರ‍್ತಿಲ್ಲ ಕಣೋ”

ಹೀಗೇ… ಅಂದು ಮಾಧವಿ ಆಫೀಸು ಬಿಡುವಾಗಲೇ ಏಳು ಗಂಟೆಯಾಗಿತ್ತೇನೋ… ಇನ್ನೂ ಬೇಸಿಗೆಯ ದಿನವಾದ್ದರಿಂದ ಪೂರ್ತಿ ಕತ್ತಲಾಗಿರಲಿಲ್ಲ. ಆಫೀಸರೊಬ್ಬರು ರಿಟೈರ್‌ ಆಗಿದ್ದಕ್ಕೆ ಡಿಪಾರ್ಟ್‌ಮೆಂಟಿನವರು ಒಂದು ಪಾರ್ಟಿ ಕೊಟ್ಟಿದ್ದರು. ಎಲ್ಲರೂ ಐದೈದು ನಿಮಿಷ ಎನ್ನುವಂತೆ ಅವರ ಗುಣಗಾನ ಮಾಡುತ್ತಾ ಮೀಟಿಂಗ್‌ ಮುಗಿದಾಗ ಏಳು ಗಂಟೆ ಸಮೀಪಿಸುವುದರಲ್ಲಿತ್ತು. ಅವರಿಗೆ ವಿಶ್‌ ಮಾಡಿದವಳೇ ಓಡಿದಂತೆ ಬಂದು ಬಸ್ಟಾಪಿನಲ್ಲಿ ನಿಂತಿದ್ದಳು. ʻಕೆ.ಜಿ. ರೋಡು ಆರು ಗಂಟೆಯ ಮೇಲೆ ಒಬ್ಬೊಬ್ಬಳೇ ಓಡಾಡಕ್ಕೆ ಒಳ್ಳೆಯ ಜಾಗವಲ್ಲʼ ಎಂದು ಗಿರೀಶ ಮಾಧವಿಗೆ ಯಾವಾಗಲೂ ಎಚ್ಚರಿಸುತ್ತಿದ್ದ. ʻಹಾಗೆ ಲೇಟಾದ ದಿನ ಸ್ಟಾಪಿನಲ್ಲಿ ಜೊತೆಯವರು ಯಾರೂ ಇಲ್ದಿದ್ರೆ ಆಟೋ ಹಿಡ್ಕೊಂಡು ಬಂದ್ಬಿಡು, ದುಡ್ಡಿನ ಮುಖ ನೋಡ್ಬೇಡʼ ಎಂತಲೂ ಹೇಳಿದ್ದ. ʻಇವ್ನು ಯಾವಾಗ್ಲೂ ಹೀಗೇ… ನಂಗಿಂತ ಪುಕ್ಕಲು. ಇಷ್ಟು ಜನ ಓಡಾಡೋ ಜಾಗದಲ್ಲಿ ಯಾರೇನು ಮಾಡ್ತಾರೆʼ ಎಂದು ಧೈರ್ಯವಹಿಸಿ ಬಸ್ಸಿನ ದಾರಿ ಕಾಯುತ್ತಾ ನಿಂತಳು. ಸ್ವಲ್ಪ ಹೊತ್ತಿನಲ್ಲೇ ಸ್ವಲ್ಪವೇ ಜಾಗಬಿಟ್ಟು ಪಕ್ಕದಲ್ಲಿ ಒಬ್ಬ ಮಧ್ಯವಯಸ್ಕ ಸುಮಾರು ಒಂದೈವತ್ತು ವರ್ಷದ ಸನಿಹವಿರಬಹುದೇನೋ… ಬಂದು ನಿಂತ. ಸ್ಟಾಪಿನಲ್ಲಿ ಹೆಂಗಸರ‍್ಯಾರೂ ಕಾಣಲಿಲ್ಲ. ಆದರೆ ನಾಲ್ಕೈದು ಜನ ಗಂಡಸರು ಅಲ್ಲಿಲ್ಲಿ ಬಸ್ಸಿಗೆ ಕಾಯುತ್ತಾ ನಿಂತಿದ್ದರು. ಈತನೂ ಹಾಗೆಯೇ ನಿಂತಿದ್ದ.

ಸ್ವಲ್ಪ ಹೊತ್ತಿನ ನಂತರ “ಅವನು ಸಿಟಿ ಮಾರ್ಕೆಟ್‌ ಕಡೆ ಹೋಗೋ ಬಸ್‌ ಯಾವ್ದಾದ್ರೂ ಹೋಯ್ತೆ?” ಎಂದು ಕೇಳಿದ. ಪ್ರಶ್ನೆ ಸಹಜವಾಗಿದ್ದರಿಂದ “ಇಲ್ಲ, ನಾನು ಬಂದಾಗಿನಿಂದ ಯಾವ ಬಸ್ಸೂ ಹೋಗಿಲ್ಲ” ಎಂದಳು. “ನೀವು ಕಾಯ್ತಾ ಎಷ್ಟೊತ್ತಾಯ್ತು?” ಎಂದ. “ಒಂದ್ಹತ್ತು ನಿಮಿಷವಾಗಿರ‍್ಬೋದು ಅನ್ಸತ್ತೆ” ಎಂದಳು. “ನೀವು ಯಾವ ಕಡೆ ಹೋಗ್ಬೇಕು?” ಎಂದ. ಈಗ ಅವನತ್ತ ತಿರುಗಿ ನೋಡಿದಳು. ಅದೇ ರಸ್ತೆಯ ಯಾವುದೋ ಕಚೇರಿಯಲ್ಲಿ ಅಧಿಕಾರಿಯಾಗಿರಬಹುದು ಅನ್ನಿಸಿತು ಅವನ ಇರಸರಿಕೆ ನೋಡಿದರೆ. ದಿನವೆಲ್ಲಾ ಕೆಲಸಮಾಡಿ ಬಳಲಿ ಬಂದು ನಿಂತಿದ್ದಾನೇನೋ. ಜೊತೆಗೆ ಈ ಸೆಖೆಯ ದಿನದಲ್ಲೂ ಕೋಟು ಹಾಕಿಕೊಂಡು, ಟೈ ಕಟ್ಟಿಕೊಂಡು ಬಂದಿದ್ದಾನಲ್ಲ ಪಾಪ” ಎನ್ನಿಸಿತು. “ನಾನು ಜಯನಗರದ ಕಡೆ ಹೋಗಬೇಕು” ಎಂದಳು ಮಾಧವಿ ನಸುನಗುತ್ತಾ. ಅದೇ ತಪ್ಪಾಯಿತೇನೋ, “ಓ… ಹೌದೇ, ಆ ಕಡೆಯ ಬಸ್ಸೂ ಇನ್ನೂ ಬಂದಿಲ್ವೇ? ಸುಮ್ನೆ ಹೀಗ್ನಿಂತು ಕಾಯೋದು ಅಂದ್ರೆ ತುಂಬಾ ಬೋರಲ್ವಾ. ಬನ್ನಿ, ಇಲ್ಲೇ ಯಾವ್ದಾದ್ರೂ ಹೋಟ್ಲಲ್ಲಿ ಕಾಫಿ ಕುಡ್ದು ಬರೋಣ” ಎಂದ. ಈಗ ಮಾಧವಿಗೆ ʻಇದು ಯಾಕೋ ಸರಿಯಾಗಿಲ್ಲʼ ಅನ್ನಿಸಿ, “ನಾನು ಕಾಫಿ ಕುಡ್ಯೋಲ್ಲ, ನೀವು ಹೋಗಿ” ಎಂದಳು ಅವನ ಕಡೆ ತಿರುಗದೆಯೇ. ಆದರೆ ಅವನು ಬಿಡುತ್ತಲೇ ಇಲ್ಲ “ಪರವಾಗಿಲ್ಲ ಬನ್ನಿ, ಸಂಕೋಚ ಯಾಕೆ. ನಾವು ಬರೋ ಹೊತ್ತಿಗೂ ಬಸ್ಸು ಸಿಗ್ದಿದ್ರೆ ಆಟೋನಲ್ಲಿ ನಿಮ್ಮನ್ನ ಜಯನಗರ ತಲುಪ್ಸಿ ಮುಂದ್ಹೋಗ್ತೀನಿ. ಬನ್ನಿ ಪ್ಲೀಸ್‌, ಬನ್ನಿಬನ್ನಿ” ಎಂದು ಒತ್ತಾಯಿಸಿದ. ʻಇದೆಲ್ಲಿ ಗ್ರಾಚಾರ, ಇವ್ನಿಂದ ತಪ್ಪಿಸ್ಕೊಂಡರೆ ಸಾಕು, ಗಿರೀಶ ಹೇಳಿದ್ದು ಇದಕ್ಕೇ ಇರ‍್ಬಹುದುʼ ಎನ್ನಿಸಿ ಗಾಭರಿಯಿಂದ ಸುತ್ತಮುತ್ತ ನೋಡುತ್ತಿರುವಾಗ ಪುಣ್ಯಕ್ಕೆಂಬಂತೆ ಒಂದು ಖಾಲಿ ಆಟೋ ಬಂತು. ತಕ್ಷಣ ಅದರಲ್ಲಿ ಹತ್ತಿ ಕುಳಿತು “ಜಯನಗರ” ಎಂದಳು. ಅವನೂ ನಿರಾಕರಿಸದೆ ಸ್ಟಾರ್ಟ್‌ ಮಾಡಿದ. “ಮೇಡಂ, ನಾನೂ ಬರ‍್ತೀನಿರಿ, ನನ್ನನ್ನ ಜೆ.ಸಿ. ರೋಡಿನಲ್ಲಿಳಿಸಿ ನೀವು ಮುಂದೆ ಹೋಗೋರಂತೆ” ಎನ್ನುತ್ತಾ ಅವನು ಸರಸರ ಹೆಜ್ಜೆ ಹಾಕಿದ. “ಬೇಗ ಹೊರಡಪ್ಪ” ಎಂದೊಡನೆಯೇ ಆಟೋ ಭರ್ರನೆ ಮುಂದೋಡಿತು. ಸ್ವಲ್ಪ ದೂರ ಹೋದ ಮೇಲೆ ಆಟೋದವನು ಹಿಂತಿರುಗಿ ಸ್ಟಾಪಿನ ಕಡೆಗೆ ನೋಡಿ “ಬಾಂಚೋದ್, ಹಲ್ಕಾಗಳು ಕಾಯ್ಕೊಂಡು ನಿಂತಿರ‍್ತಾವೆ. ಮರ‍್ಯಾದಿಲ್ಲದ್‌ ಮುಂಡೇವು” ಎಂದು ಬೈದುಕೊಳ್ಳುತ್ತಾ ಆಟೋ ವೇಗ ಹೆಚ್ಚುಮಾಡಿದ. ಮಾಧವಿ ನಿಟ್ಟುಸಿರು ಬಿಟ್ಟಳು.


ರಾತ್ರಿ ಗಿರೀಶ ಬಂದೊಡನೆ “ಹೀಗಾಯ್ತು ಕಣೋ ಗಿರಿ. ನಂಗೀಗ್ಲೂ ಭಯವಾಗ್ತಿದೆ. ನಾಳೇನೂ ಅವ್ನು ಬಸ್ಟಾಪ್ನಲ್ಲಿ ನಿಂತು ಮಾತಾಡ್ಸಿದ್ರೆ ಏನೋ ಮಾಡೋದು” ಎಂದಳು ದುಗುಡದಿಂದ. “ಅಯ್ಯೋ ಮಧು, ಹೀಗ್ ಹೆದರ‍್ಕೊಂಡ್ರೆ ಹೇಗೋ. ಹುಷಾರಾಗಿರ‍್ಬೇಕಷ್ಟೇ. ಗುರ‍್ತು ಪರಿಚಯ ಇಲ್ದೇ ಇರೋವ್ರು ಮಾತಾಡ್ಸಕ್ಕೆ ಅವ್ಕಾಶ ಕೊಡ್ಬಾರ‍್ದು. ಈಗ ಗೊತ್ತಾಯ್ತಲ್ಲ, ನಾಳೆಯಿಂದ ಏನೇ ಆದ್ರೂ ಆಫೀಸಲ್ಲಿ ಜಾಸ್ತಿ ಹೊತ್ತು ಇರ‍್ಬೇಡ. ಹಾಗಿರ‍್ಲೇಬೇಕಾದಾಗ ಜೊತೆಗೆ ಯಾರಾದ್ರೂ ಬರ‍್ತಾರೆ ಅನ್ನೋದ್ನ ಕನ್ಫರ್ಮ್‌ ಮಾಡ್ಕೊಂಡು ಇರು” ಎಂದ ಅವಳ ಭುಜವನ್ನು ಬಳಸಿ ಸಂತೈಸುತ್ತಾ. “ನಮ್ಮೂರೇ ವಾಸಿ ಕಣೋ. ಎಲ್ನಿಂತ್ರೂ ಯಾರೋ ಒಬ್ರು ಗುರ‍್ತಿರೋರು ಸಿಕ್ತಾರೆ. ರಾತ್ರಿ ಹತ್ತು ಗಂಟೆಯಾದ್ರೂ ಭಯವಿಲ್ಲ ಗೊತ್ತಾ” ಎಂದಳು ಮುಖವುಬ್ಬಿಸಿ. “ಬೆಂಗ್ಳೂರಿನ ಐದ್ನೇ ಒಂದು ಭಾಗದಷ್ಟೂ ಇಲ್ಲ ನಿಮ್ಮೂರು, ಪ್ರಪಂಚ ಗುಂಡುಗಿದೆ ಅಂತ ಅಲ್ಲಲ್ಲೇ ಸುತ್ತುತಿರ‍್ತಾರೆ” ಗಿರೀಶ ಜೋರಾಗಿ ನಕ್ಕುಬಿಟ್ಟ. ಪಕ್ಕದಲ್ಲಿದ್ದ ನ್ಯೂಸ್‌ಪೇಪರಿಂದ ಅವನ ತಲೆಗೆ ಕುಟ್ಟಿ ಮೇಲೆದ್ದಳು.

ಅದಾದ ನಂತರ ಎಷ್ಟೋ ದಿನಗಳು ಮತ್ತೆ ಅವನು ಎಲ್ಲಿ ಕಂಡು ಬಿಡ್ತಾನೋ ಅನ್ನೋ ಭಯವೇ ಮಾಧವಿಯನ್ನು ಆವರಿಸಿಕೊಂಡಿತ್ತು. ಗೆಳತಿಯರೊಂದಿಗೆ ಹೀಗಾಯ್ತು ಎಂದಾಗ, ಅವರೂ ಗಿರೀಶನ ರೀತಿಯೇ ಬೋಧನೆ ಮಾಡಿದರು. ಜೊತೆಗೆ “ನೀನು ಮಲೆನಾಡಿನ ಸುಂದರಿ ಬೇರೆ. ಯಾರ‍್ಗಾದ್ರೂ ಮಾತಾಡ್ಸೋಣ ಅನ್ಸುತ್ತೆ. ಇನ್ನಿಂಥವರು ಬಿಡ್ತಾರಾ” ಅಂತ ಒಗ್ಗರಣೆಯನ್ನೂ ಹಾಕಿದರು. ಅಂತೂ ಇವಳಿಗೇ ಇಲ್ಲಿನ ರೀತಿ ರಿವಾಜುಗಳು ಅಭ್ಯಾಸವಾಯಿತೋ, ಅಥವಾ ಇನ್ನೊಂದು ಸಲ ಅಂಥಹ ಪ್ರಸಂಗ ಎದುರಾಗಲಿಲ್ಲವೋ ಆ ಘಟನೆ ಸ್ವಲ್ಪಮಟ್ಟಿಗೆ ಮರೆವಿಗೆ ಸಂದಿತು.


ಹೀಗೆಯೇ ಒಂದೆರಡು ವರ್ಷಗಳು ಕಳೆದ ಮೇಲೆ ಒಂದು ಚಳಿಗಾಲದ ಸಂಜೆ ಆರು ಗಂಟೆಗೇ ಕತ್ತಲಾವರಿಸುತ್ತಿತ್ತು. ಎದುರಿಗೆ ಮೆಜೆಸ್ಟಿಕ್‌ಗೆ ಹೋಗುವ ಕಡೆಗಿನ ಬಸ್ಟಾಪಿನಲ್ಲಿ ಹೆಚ್ಚುಕಡಿಮೆ ಅಂದಿನಂತದೇ ಒಂದು ಘಟನೆ ಮರುಕಳಿಸುತ್ತಿತ್ತು. ಅಪರಿಚಿತರಂತಿದ್ದ ಅವರಿಬ್ಬರು ಕೆಲವೇ ಕ್ಷಣಗಳಲ್ಲಿ ಅದೇನು ಮಾತಾಡಿಕೊಂಡರೋ, ಸೀದಾ ಅವೆನ್ಯೂ ರೋಡಿನ ಕಡೆಗೆ ಒಟ್ಟಿಗೇ ಹೆಜ್ಜೆ ಹಾಕಿದರು. ಸ್ವಲ್ಪ ಹೊತ್ತಿನಲ್ಲೇ ಆ ಗಂಡಸು ಅವಳ ಭುಜವನ್ನು ಬಳಸಿದ. ಅವಳು ಅವನ ತೋಳಿಗಂಟಿಕೊಂಡಳು. ಎಷ್ಟು ಕಾಲದ ಪ್ರೇಮಿಗಳೋ ಎನ್ನುವಂತೆ ಒತ್ತೊತ್ತಿಗೆ ನಡೆಯುತ್ತಾ ಮುಂದೆ ಸಾಗಿ ಮೈಸೂರ್‌ ಬ್ಯಾಂಕ್‌ ಸರ್ಕಲ್ಲಿನ ಬಳಿ ಎಡಕ್ಕೆ ತಿರುಗಿದರು. ಆ ಹೆಂಗಸಿನ ಹಾವ ಭಾವ ಮಾಧವಿಗೆ ಯಾರನ್ನೋ ನೆನಪಿಸುತ್ತಿತ್ತು. ನೆನಪಿನ ಕೋಶಗಳಲ್ಲೆಲ್ಲಾ ಕೈಯಾಡಿಸಿ ಒಂದು ಸುತ್ತು ಬಂದರೂ ʻಎಲ್ಲೋ ನೋಡಿದಂತಿದೆ, ಆದರೆ, ಸ್ಪಷ್ಟವಾಗಿ ನೆನಪಿಗೆ ಬರುತ್ತಿಲ್ಲʼ.

ಬಸ್ಸಿನಲ್ಲಿ ಕುಳಿತಾಗಲೂ, ಮನೆಗೆ ತಲುಪಿದ ಮೇಲೂ, ರಾತ್ರಿ ಅಡುಗೆ ಮಾಡುತ್ತಿರುವಾಗಲೂ, ಊಟ ಮಾಡುತ್ತಿರುವಾಗಲೂ ಆ ಗುಂಗಿನಿಂದ ಹೊರಬರಲಾಗುತ್ತಿಲ್ಲ. ಗಿರೀಶನ ಮಾತುಗಳಿಗೂ ಬರೀ ಹೂಂ, ಉಹ್ಞೂಂಗಳಲ್ಲೇ ಉತ್ತರಿಸಿದಳು. “ಯಾಕೆ ಮಧು, ಎಲ್ಲೋ ಕಳ್ದೋಗಿದೀಯಲ್ಲ, ಏನಾಯ್ತು” ಕಳಕಳಿಯಿಂದ ಕೇಳಿದ ಮಲಗುವ ಮುನ್ನ. “ಗಿರಿ, ಇವತ್ತೇನಾಯ್ತು ಗೊತ್ತಾ, ಹೆಚ್ಚು ಕಡಿಮೆ ಅವತ್ತು ಬಸ್ಟಾಪಿನಲ್ಲಾಗಿತ್ತಲ್ಲಾ ಹಾಗೇ ಆಯ್ತು”. ತಕ್ಷಣವೇ ಗಿರೀಶ “ಯಾಕಪ್ಪಾ, ಮತ್ತಿವತ್ತು ನೀನು ಆಫೀಸ್‌ ಬಿಡೋದು ಲೇಟಾಯ್ತಾ. ಏನೂ ತೊಂದ್ರೆ ಆಗ್ಲಿಲ್ಲ ತಾನೆ” ಎಂದು ಅವಳ ಭುಜಬಳಸಿದ. “ಅಯ್ಯೋ ಮಾತಾಡಕ್ಕೆ ಬಿಡು. ನಂಗಲ್ಲಾ, ಎದುರು ಬಸ್ಟಾಪಲ್ಲಿ ಹಾಗೇ ಅವನ್ಯಾರೋ ನಿಂತಿದ್ದ. ಒಬ್ಬಳು ಹೆಂಗಸು ಚೆನ್ನಾಗಿ ಅಲಂಕಾರ ಮಾಡ್ಕೊಂಡು ನಿಂತಿದ್ಲು. ಖಂಡಿತಾ ಇಬ್ರೂ ಪರಿಚಯ ಇರೋವ್ರಲ್ಲ ಅಂತ ಗೊತ್ತಾಗ್ತಿತ್ತು. ಒಂದೈದು ನಿಮ್ಷದಲ್ಲೇ ಅವರಿಬ್ರೂ ನೋಡ್‌ ನೋಡ್ತಿರೋಹಾಗೇ ಎಷ್ಟು ವರ್ಷದಿಂದ ಪ್ರೇಮಿಗಳೋ ಅನ್ನೋಹಾಗೆ ಅಲ್ಲಿಂದ ಹೊರಟ್ರು ಗೊತ್ತಾ” ಎಂದು ಮತ್ತೆ ಯೋಚನೆಯಲ್ಲಿ ಮುಳುಗಿದಳು. “ಅಯ್ಯೋ ನಾನು ನಿಂಗೇನಾಯ್ತೋ ಅಂದ್ಕೊಂಡೆ. ಇದು ಸಂಜೆ ಮೇಲೆ ಅಲ್ಲಿ ದಿನನಿತ್ಯ ನಡೆಯೋ ವ್ಯಾಪಾರ. ಇದನ್ನ ನೋಡಿದ್ರೂ ನೋಡ್ದಿದ್ದೋರ ಹಾಗೆ ಬರ‍್ತಿರಬೇಕು. ನೀನು ಅವ್ರನ್ನ ಮನೆತಂಕ, ನಮ್ಮ ಬೆಡ್‌ರೂಮಿನ ತಂಕ ಕರ‍್ಕೊಂಡು ಬಂದಿದೀಯಲ್ಲ ಮಂಗಮ್ಮಾ” ಎಂದು ಅವಳ ತಲೆಯನ್ನು ಎರಡೂ ಕೈಗಳಲ್ಲಿ ಹಿಡಿದುಕೊಂಡು ಅಲ್ಲಾಡಿಸಿದ. “ಏನ್ ಗೊತ್ತಾ ಗಿರಿ. ನಾನು ಅದನ್ನ ಮನಸ್ಸಿಗೆ ಹಚ್ಕೊಂಡಿಲ್ಲ; ಆದರೆ ಆ ಹೆಂಗಸಿದ್ಲಲ್ಲ, ಅವ್ಳನ್ನ ಎಲ್ಲೋ ನೋಡಿದೀನಿ ಅನ್ಸತ್ತೆ. ಅವ್ಳ ಎತ್ರ, ನಿಲುವು, ಬಾಡಿ ಲಾಂಗ್ವೇಜ್‌ ಎಲ್ಲಾ ನಂಗೆ ತುಂಬಾ ಪರಿಚಿತ ಅನ್ನಿಸ್ತು ಕಣೋ. ಜ್ಞಾಪಿಸ್ಕೊಳಕ್ಕೆ ಟ್ರೈ ಮಾಡ್ತಾನೇ ಇದೀನಿ. ಅವ್ಳು ಹಾರ್ಡ್‌ಡಿಸ್ಕಿಂದ ಹೊರಗೇ ಬರ‍್ತಿಲ್ಲ ಕಣೋ” ಎಂದಳು. “ಈಗ ಅದು ಅಷ್ಟು ಇಂಪಾರ್ಟೆಂಟಾ. ನಾಳೆ ಎಕ್ಸಾಮಿಗೆ ಬರೀಬೇಕಿದ್ಯಾ ಹೇಳು. ಆ ಗುಂಗಾಡಿ ಹುಳೂನ ತಲೆಯಿಂದ ಆಚೆ ಹಾಕಿ, ಲೈಟ್‌ ಆರ‍್ಸಿ ಸುಮ್ನೆ ಮಲ್ಗು” ಎನ್ನುತ್ತಾ ಹೊದಿಕೆಯೆಳೆದುಕೊಂಡ. ಮಾಧವಿಯೂ ಮಲಗಲು ಪ್ರಯತ್ನಿಸಿದಳು. ಆದರೆ ಅಷ್ಟು ಸುಲಭಕ್ಕೆ ನಿದ್ರೆ ಬರಲಿಲ್ಲ.


ಅಂದು ಸಂಜೆ ಏನೋ ಷಾಪಿಂಗಿನ ನೆಪ ಮಾಡಿಕೊಂಡು ಕಾಂಪ್ಲೆಕ್ಸ್‌ಗೆ ಹೊರಟರು ಇಬ್ಬರೂ. ಸುಡುತ್ತಿದ್ದ ಮೆಕ್ಕೆ ಜೋಳವನ್ನು ನೋಡಿದ ತಕ್ಷಣ ಊರಿನ ನೆನಪು ನುಗ್ಗಿಬಂದು “ಗಿರಿ, ಜೋಳ ತಿನ್ನೋಣ್ವೋ” ಎಂದಳು. “ಸರಿ ಎಳೆ ಜೋಳ ಸುಡಿಸು” ಎಂದ. ಇವಳು ಆರಿಸುತ್ತಿರುವಾಗ, “ಏ ಮಾಧವಿ, ಎಷ್ಟು ದಿನಾ ಆಯ್ತೆ ನಿನ್ನ ನೋಡಿ” ಎಂದು ಯಾರೋ ಕರೆದದ್ದು ಕೇಳಿಸಿ ಪಕ್ಕನೆ ತಿರುಗಿದಳು. ನೋಡಿದರೆ ಹೈಸ್ಕೂಲಿನಲ್ಲಿ, ಪಿಯುಸಿಯಲ್ಲಿ, ಸಹಪಾಟಿಯಾಗಿದ್ದ ಮಮತಾ. ಒಬ್ಬರನ್ನೊಬ್ಬರು ನೋಡಿ ಐದು ವರ್ಷದ ಮೇಲಾಗಿತ್ತೇನೋ. “ಅಯ್ಯೋ, ನೀನು ಬೆಂಗ್ಳೂರಲ್ಲೇ ಇದೀಯೇನೇ. ಎಲ್ಲಿದೀಯೇ ಇಲ್ಲಿ…….” ಎಂದು ಆರಂಭವಾದ ಮಾತು ಜೋಳ ಸುಟ್ಟು, ತಿಂದು ಮುಗಿದರೂ ಮುಗಿಯಲಿಲ್ಲ. ಇಬ್ಬರೂ ಅವರವರ ಗಂಡಂದಿರನ್ನು ಪರಿಚಯ ಮಾಡಿಕೊಟ್ಟರು. ಒಬ್ಬರನ್ನು ಇನ್ನೊಬ್ಬರು ಮನೆಗೆ ಕರೆದಿದ್ದಾಯಿತು. ಅಂತೂ ಸಧ್ಯದಲ್ಲೇ ಇನ್ನೊಮ್ಮೆ ಸಿಗುವ ಮಾತಾಡಿಕೊಂಡು ಹೊರಟರು. ದಾರಿಯುದ್ದಕ್ಕೂ ತಮ್ಮ ಹೈಸ್ಕೂಲಿನ ದಿನಗಳದ್ದೇ ಮಾತು. ಅಂದಿನ ಟೀಚರ್ಸ್‌, ಜೊತೆಗಿದ್ದ ಫ್ರೆಂಡ್ಸ್‌, ಸ್ಕೂಲಿನ ಆವರಣದಲ್ಲಿದ್ದ ಮಾವಿನ ಮರಗಳು, ಸಿಡುಕುಮೂತಿ ಪ್ರಿನ್ಸಿಪಾಲ್‌, ಸ್ಕೂಲ್‌ಡೇನಲ್ಲಿ ಡ್ಯಾನ್ಸ್‌ ಮಾಡಿದ್ದು… ನಡೆಯುತ್ತಾ ಮನೆ ತಲುಪುವ ತನಕವೂ ತುಂಬ ಉತ್ಸಾಹದಲ್ಲಿದ್ದಳು. ಮನೆ ಬಾಗಿಲಿನ ಬೀಗ ತೆರೆಯುತ್ತಿದ್ದವಳು ಥಟ್ಟನೆ ನಿಂತು ʻಯುರೇಖಾʼ ಎಂದು ಕೂಗುವ ಹಾಗೆ ಎರಡೂ ಕೈಯೆತ್ತಿ ಕುಣಿಸುತ್ತಾ “ಗಿರಿ, ಅವಳ್ಯಾರು ಅಂತ ನಂಗೆ ನೆನಪಾಗೋಯ್ತು ಕಣೋ” ಎಂದು ನಿಂತೇಬಿಟ್ಟಳು ಏನೋ ಅದ್ಭುತವಾದದ್ದೊಂದನ್ನು ಜ್ಞಾಪಿಸಿಕೊಂಡಂತೆ. “ಮಧು, ಇಷ್ಟು ಹೊತ್ತೂ ಕೊರಸ್ಕೊಂಡಿದೀನಿ. ಇನ್ನಾದ್ರೂ ಸಾಕುಮಾಡಿ ಸ್ವಲ್ಪ ರಾತ್ರಿಗೇನಾದ್ರೂ ಹೊಟ್ಟೆಗೆ ಕರುಣಿಸ್ತೀಯಾ?” ಅನ್ನುತ್ತಾ ಸೋಪಾದಲ್ಲಿ ಕುಳಿತ. “ಇಲ್ಲಾ, ಇದನ್ನ ನೀನು ಕೇಳಿಸ್ಕೊಳ್ಳೇಬೇಕು. ಆಮೇಲೇ ಮುಂದಿನ್ಕೆಲಸ” ಪಟ್ಟುಹಿಡಿದು ಮುಂದೆ ಕುಳಿತಳು. “ಸರಿ, ಮನಸ್ಸಿಗೆ ಏನಾದ್ರೂ ಬಂದ್ಬಿಟ್ರೆ ನೀನೆಲ್ಲಿ ಸುಮ್ನಾಗ್ತೀಯಾ? ಅದೇನೋ ಬೇಗ್ಬೇಗ ಹೇಳಿ ಪೂರೈಸು. ಆಗ್ಲೇ ಎಂಟು ಗಂಟೆಯಾಗಿದೆ” ಎಂದು ಕೇಳಲು ಸಿದ್ಧನಾದವನಂತೆ ಕುಳಿತುಕೊಂಡ.

“ಏನಾಯ್ತು ಗೊತ್ತಾ…” ಫ್ಲಾಶ್‌ಬ್ಯಾಕ್‌ಗೆ ಹೋದಳು ಮಾಧವಿ. “ನಾವಾಗ 9ನೇ ಕ್ಲಾಸ್ನಲ್ಲಿದ್ವಿ. ಲಂಚ್‌ಟೈಮ್‌ ಆದ್ಮೇಲೆ ಎರಡ್ನೇ ಪಿರಿಯೆಡ್‌ ಕನ್ನಡ ಇತ್ತು. ನಾನಿನ್ನೂ ಹೋಂವರ್ಕ್‌ ಮುಗ್ಸಿರ‍್ಲಿಲ್ಲ” “ಆಗ್ಲೂ ಹೀಗೇ ಕೆಲ್ಸ ಕದೀತಿದ್ಯಾ” ಕಾಲೆಳೆದ ಗಿರೀಶ, “ಏ ಮೊದ್ಲು ಸ್ವಲ್ಪ ಕೇಳಿಸ್ಕೊಳೋ, ಆಮೇಲೆ ಒಟ್ಗೆ ಮಾತಾಡೋವಂತೆ” ರೇಗಿದಳು. “ಆಯ್ತು ಜೀ ಹುಜೂರ್‌ ಹೇಳಿ” ನಾಟಕೀಯವಾಗಿ ಕೈಮುಗಿದು ಅವಳೆದುರು ಕೈಕಟ್ಟಿಕೊಂಡು ಬಾಯಿಮೇಲೆ ಬೆಟ್ಟಿಟ್ಟುಕೊಂಡು ಕೂತ. “ದಟ್ಸ್‌ ಲೈಕ್‌ ಎ ಗುಡ್ಬಾಯ್. ಬೇಗ್ಬೇಗ ಬರೀತಿದ್ದೆ. ಈ ಮಮತಾ ಬಂದು ಕಿವೀಲಿ “ಕಲ್ಪನಾನ ಅಮ್ಮ ಬಂದಿದಾಳೆ. ಪ್ರಿನ್ಸಿಪಾಲ್‌ ಕರ‍್ಸಿರ‍್ಬೇಕು ಬೇಗ್ಬಾ” ಅಂತ ಕರದ್ಲು. “ಅವ್ರಮ್ಮ ಬಂದ್ರೇನೀಗ?” ಅಂದೆ. ಇನ್ನೂ ಗುಟ್ಟಾಗಿ “ಯಾಕಂದ್ರೆ ಅವರಮ್ಮ ಸೂಳೆನಂತೆ. ಎಲ್ರೂ ಬಚ್ಚಿಟ್ಕೊಂಡು ಅವ್ರನ್ನೇ ನೋಡ್ತಿದಾರೆ” ಅಂದ್ಳು. ಕಲ್ಪನಾ 10ನೇ ಕ್ಲಾಸು, ನಂಜೊತೆ ಯಾವಾಗ್ಲಾದ್ರೂ ಸಾಯಂಕಾಲ ಮನೆಗೋಗೋವಾಗ ಸಿಕ್ತಿದ್ಲು. ಸುಮ್ನೆ ಪರಿಚಯ ಇತ್ತಷ್ಟೇ. ನಮ್ಗೋ, ಹೈಸ್ಕೂಲಿಗೆ ಸೇರಿದ್ಮೇಲೇನೆ ಇಂಥ ಪದಗಳು, ವಿಷಯಗಳು ಗೊತ್ತಾಗಿದ್ದಿದ್ದು. ನಂಗಾಶ್ಚರ್ಯ, ಕುತೂಹಲ! “ನಿಂಗ್ಯಾರ್‌ ಹೇಳಿದ್ರು… ಬರ‍್ತೀನ್ತಡಿ. ಸೂಳೇರು ಹೇಗಿರ‍್ತಾರೆ ಅಂತ ನೋಡ್ಲೇಬೇಕು” ಅಂದವಳೇ ಕುತೂಹಲದಿಂದ ಪುಸ್ತಕ ಮುಚ್ಚಿಟ್ಟು ಅವಳ ಜೊತೆ ಓಡಿದೆ. ಸ್ಟೂಡೆಂಟ್ಸ್‌ ಚೆನ್ನಾಗಿ ಓದ್ದೇ ಇದ್ರೆ ಹೀಗೆ ಅವ್ರ ಪೇರೆಂಟ್ಸ್‌ನ ಸಾಮಾನ್ಯವಾಗಿ ಕರಿಸ್ತಿದ್ರು. ಅವ್ಳು ಸದಾ ಹೋಂವರ್ಕ್‌ ಮಾಡಿಲ್ದೆ ಕ್ಲಾಸ್‌ ಹೊರ‍್ಗೆ ನಿಲ್ಲೋ ಪನಿಶ್ಮೆಂಟ್‌ ತೊಗೊಳ್ತಿದ್ದಿದ್ದು ಸ್ಕೂಲಲ್ಲಿ ಎಲ್ರಿಗೂ ಗೊತ್ತಿತ್ತು. ಅದಕ್ಕೇ ಅವ್ಳಿಗೂ ಕರ‍್ಕೊಂಬರಕ್ಕೆ ಹೇಳಿದ್ರೇನೋ… ನೋಡಿದ್ರೆ… ಎಷ್ಟೊಂದು ಜನ ಸ್ಟೂಡೆಂಟ್ಸ್ ತಮ್ಮ ಮುಖ ಕಾಣ್ದಿದ್ಹಾಗೆ ಮೆಟ್ಲಮೇಲೆ ಕೂತ್ಕೊಂಡು ಕಣ್ಣು ಕಾಣೋಷ್ಟು ಮಾತ್ರಾ ತಲೆಯೆತ್ತಿ ಆಫೀಸ್ ರೂಮಿನ ಕಡೆ ಇಣುಕಿ ನೋಡ್ತಿದಾರೆ. ನಾವಿಬ್ರೂ ಮೆತ್ಗೆ ಹಾಗೇ ಇಣುಕಿದ್ವಿ. ಪ್ರಿನ್ಸಿಪಾಲ್‌ ಏನೋ ದಬಾಯಿಸ್ತಿದಾರೆ. ಆಯಮ್ಮ ಏನೋ ಸಮಝಾಯಿಷಿ ಕೊಡ್ತಿದಾರೆ. ಇವ್ಳು ತಲೆತಗ್ಗಿಸ್ಕೊಂಡು ಅಳ್ತಿದಾಳೆ. ಮಾತು ಮುಗೀತೇನೋ ಅಂತೂ ಆಯಮ್ಮ ಎದ್ದು ಹೊರಟ್ಳು. ಪ್ರಿನ್ಸಿಪಾಲೂ ಎದ್ದು ಈ ಪಕ್ಕ ತಿರುಗಿದ್ರೆ ನಾವೆಲ್ಲಾ ಮೆಟ್ಲಮೇಲೆ! “ಏನ್ ಮಾಡ್ತಿದೀರಿ ಎಲ್ರೂ ಇಲ್‌ ಕೂತ್ಕೊಂಡು. ಇಲ್ಲೇನ್‌ ಕೋತಿ ಕುಣೀತಿದ್ಯಾ” ಅಂತ ಅವಾಜ಼್ ಹಾಕಿದ್ರು ನೋಡು, ಎಲ್ರೂ ಓಟ್ಟಾ… ಸಿಕ್ಕಾಕ್ಕೊಂಡಿದ್ರೆ ಸಕತ್‌ ಪನಿಶ್‌ಮೆಂಟ್‌ ಸಿಕ್ಕಿರೋದು. ಧಬಧಬಾಂತ ಎಲ್ರೂ ಅವ್ರವ್ರ ಕ್ಲಾಸಲ್ಲಿ ಬಂದ್ಕೂತು ಒಂದೇ ನಗು; ಯಾಕ್‌ ನಕ್ವಿ ಅಂತ ಈಗ್ಲೂ ಗೊತ್ತಿಲ್ಲ.

ಕಡೆಗೆ ಅವ್ರಮ್ಮ ಯಾರಪ್ಪಾಂದ್ರೆ ದಿನ್ವೂ ನಮ್ ಬಸ್ಟಾಂಡ್‌ ಹತ್ರಾನೇ ಬೀದಿ ದೀಪದ್‌ ಕೆಳ್ಗೆ ನಿಂತಿರ‍್ತಿದ್ದ ಹೆಂಗ್ಸು. ಒಂದೊಂದ್ಸಲ ಯಾರತ್ರಾನಾದ್ರೂ ಮಾತಾಡ್ತಿರೋದು ನೋಡ್ತಿದ್ವಿ. ನಮ್ಮನೆ ಬಸ್ಟಾಂಡ್‌ ದಾಟಿ ಎರಡ್ನೇ ಕ್ರಾಸಲ್ಲಲ್ವಾ ನಾವು ಓಡಾಡೋವಾಗ ಅವ್ಳನ್ನ ಸಾಕಷ್ಟು ಸಲ ನೋಡ್ತಿದ್ವಿ. “ಅಲ್ಲಿ ಕೂತಿರೋ ಹೆಂಗಸ್ರೆಲ್ಲಾ ಏನಾದ್ರೂ ಹಣ್ಣೋ, ಹೂವೋ, ತರ‍್ಕಾರೀನೋ ಏನೋ ಒಂದನ್ನ ಬುಟ್ಟೀಲಿಟ್ಕೊಂಡು ಮಾರಾಟ ಮಾಡ್ತಿರ‍್ತಾರೆ. ಇವ್ಳು ಸುಮ್ನೆ ನಿಂತ್ಕೊಂಡು ಏನ್ಮಾಡ್ತಾಳೆ” ಅಂತ ನಮ್ಮಮ್ಮನ್ನ ಒಂದ್ಸಲ ಕೇಳಿದ್ದೆ. “ಅದೆಲ್ಲಾ ನಿಂಗ್ಯಾಕೆ? ಆ ವಿಷ್ಯಾ ಎಲ್ಲಾ ಚಿಕ್ಕಮಕ್ಳು ಮಾತಾಡ್ಕೂಡ್ದು” ಅಂತ ಬೈದಿದ್ರು. “ಅಯ್ಯಾ… ಬಯ್ಯೋಂತದ್‌ ನಾನೇನ್‌ ಕೇಳ್ದೆ. ಅವ್ಳೇನು ವ್ಯಾಪಾರ ಮಾಡ್ತಾಳೆ ಸುಮ್ನೆ ನಿಂತ್ಕೊಂಡು ಅಂತ್ಕೇಳ್ದೆ” ಅಂತ ನಾನೂ ಸಿಡುಕಿದ್ದೆ. ಅವತ್ತು, ಅವ್ಳು ಸೂಳೆ ಅಂತ ಗೊತ್ತಾದ್ಮೇಲೆ ಗಿರಿ, ನಂಗೆ ಭಯವಾಗ್ಬಿತ್ತೋ. ಅಲ್ಲೀವರ‍್ಗೆ ಎಷ್ಟೋ ದಿನ ಸಾಯಂಕಾಲ ನಾನು ಕಲ್ಪನಾ ಜೊತೆಗೇ ಮನೆಗ್ಹೋಗ್ತಿದ್ವಿ. ಅವತ್ತಿಂದ ಅವ್ಳೇನಾದ್ರೂ ದಾರೀಲ್‌ ಸಿಕ್ಬಿಟ್ರೆ ಅವ್ಳ ಜೊತೆ ಹೋಗ್ಬೇಕೋ, ಬೇಡ್ವೋ ಅಂತ ಯೋಚ್ನೆ ಶುರ‍್ವಾಯ್ತು. ಅವರಮ್ಮ ಹಾಗಿದ್ರೆ ಪಾಪ ಅವ್ಳದೇನು ತಪ್ಪು. ಗೆಜ್ಜೆಪೂಜೆ ಪಿಕ್ಚರಲ್ಲಿ ಕಲ್ಪನಾ ಎಷ್ಟು ಒಳ್ಳೇಳ್ವಲ್ವಾ. ಹಾಗೆಲ್ಲಾ ಸುಮ್ಸುಮ್ನೆ ಒಬ್ರಿಗೆ ಬೇಜಾರು, ಅವ್ಮಾನ ಮಾಡ್ಬಾರ‍್ದು ಅಂತ ನಂಗೆ ನಾನೇ ಹೇಳ್ಕೊಂಡೆ. ಆಮೇಲೆ ಒಂದು ವಾರ ಜೊತೇಲೇ ಮನೇಗ್ಬಂದ್ವಿ. ನಾನೂ ಏನೂ ಕೇಳ್ಳಿಲ್ಲ; ಅವ್ಳೂ ಏನೂ ಹೇಳ್ಳಿಲ್ಲ”.

“ಅದೇನಾಯ್ತೋ ಆಮೇಲೆ ಕಲ್ಪನಾ ಸ್ಕೂಲಿಗೇ ಬರ‍್ಲಿಲ್ಲ. ಪರೀಕ್ಷೆಗೆ ಇನ್ನೊಂದು ತಿಂಗ್ಳಿತ್ತು ಅಷ್ಟೇ. ಸೀದಾ ಎಕ್ಸಾಂ ಬರದ್ಲಾ ಅಂತ್ಲೂ ಗೊತ್ತಾಗ್ಲಿಲ್ಲ. ಕಾಲೇಜು ಸೇರ‍್ಕೊಂಡ್ಮೇಲೆ ಅವ್ಳ ವಿಷ್ಯ ಮರ‍್ತೇ ಹೋಗಿತ್ತು. ಒಂದಿನ ಮಾರ್ಕೆಟ್ಟಿಂದ ವಾಪಸ್‌ ಬರ‍್ತಾ ಯಾರೋ ಕರ‍್ದಂಗಾಯ್ತು, ತಿರುಗಿ ನೋಡ್ತೀನಿ, ಅವ್ಳೇ… ಅವ್ಳ ಡ್ರೆಸ್ಸೇನು, ಅಲಂಕಾರ ಏನು, ಯಾಕೋ ಇವ್ಳೂ ಅವ್ರಮ್ಮನ ದಾರೀನೇ ಹಿಡಿದ್ಲಾ ಅನ್ನಿಸ್ತು. ನಿಂತ್ಬಿಟ್ನಲ್ಲ, ಮಾತಾಡಿಸ್ಲೇ ಬೇಕಾಯ್ತು. ʻಹೇಗಿದೀಯೇಂತʼ ಕೇಳ್ದೆ. ʻನೋಡಿದ್ರೆ ಗೊತ್ತಾಗ್ತಿಲ್ವಾಂತʼ ನಕ್ಕಳು. ʻಗೊತ್ತಾಗ್ತಿದೆ. ಆದ್ರೆ ಯಾಕೆ ಕಲ್ಪನಾ ಹೀಗ್ಮಾಡ್ಕೊಂಡೆ, ಏನಾದ್ರೂ ಬೇರೆ ಕೆಲ್ಸ ಹಿಡೀಬೋದಿತ್ತಲ್ವೇನೆʼ ಅಂದ್ರೆ ನಕ್ಬಿಟ್ಳು. ʻಯಾರೇ ಕೊಡ್ತಾರೆ ಏನೂ ಓದ್ದಿರೋಳಿಗೆ ಕೆಲ್ಸ? ಏನೋ ಒಂದು ಜವಾನಿನೋ, ಆಯಾನೋ ಆಗ್ಬೋದಿತ್ತೇನೋ. ಇದೊಂತರಾ ಚೆನ್ನಾಗೇ ಇದೆ ಬಿಡು. ಮರ‍್ಯಾದಸ್ತ್ರು ಅನ್ಸ್‌ಕೊಂಡೋರು ದಿನಾ ಮನೇಲಿ ಅದೇ ಅನ್ನ ಸಾರು ಊಟ ಮಾಡ್ತಾರೆ. ನಾನು ಸಿಕ್ಕ ಹೋಟ್ಲಲ್ಲಿ ಒಂದಿನಾ ನಾರ್ತ್‌ ಇಂಡಿಯನ್‌, ಒಂದಿನ ಸೌತ್‌ ಇಂಡಿಯನ್‌, ಒಂದಿನಾ ಇಟಾಲಿಯನ್‌, ಒಂದಿನಾ ಕಾಂಟಿನೆಂಟಲ್ ಅಂತ ತಿಂತೀನಿ… ಮಜ್ವಾಗಿದೆ ಲೈಫುʼ ಅಂತ ಕ‌ಣ್ಣುಹೊಡೆದ್ಲು! ನಾನು ಬೆಪ್ಪಾಗ್ಹೋದ್ನೋ. ಅಷ್ಟ್ರಲ್ಲಿ ಪಕ್ಕದಲ್ಲೇ ಒಂದು ಕಾರ್‌ ನಿಂತ್ಕೊಂಡು ಹಾರ‍್ನಾಯ್ತು. ʻಬರ‍್ತೀನಿ. ಇಲ್ಲಿ ಕಾದಿರು ಅಂದಿದ್ರು, ಅದಕ್ಕೇ ನಿಂತಿದ್ದೆ. ಇವತ್ತು ಫೈವ್‌ಸ್ಟಾರುʼ ಅಂತ ಹೆಬ್ಬೆಟ್ಟು ತೋರ‍್ಸಿ, ಮುಂದಿನ್‌ ಸೀಟಲ್ಲಿ ಅವನ ಪಕ್ಕ ಕೂತು ʻಝಂʼ ಅಂತ ಹೊರಟೇಬಿಟ್ಳು. ಬೆಪ್ಪಾಗಿ ನಾನು ನೋಡ್ತಾ ನಿಂತಿದ್ರೆ ಪಕ್ಕದಲ್ಲಿ ಯಾವನೋ ಒಬ್ಬ ʻಏನಮ್ಮಾ ನೀನವ್ಳ ಫ್ರೆಂಡಾʼ ಅಂತ ಕಣ್‌ ಮಿಟಿಕ್ಸೋದಾ! ಮೈಯೆಲ್ಲಾ ಬೆವೆತೋಯ್ತು. ತಿರುಗಿ ನೋಡ್ದೆ ಅಲ್ಲಿಂದ ಆಲ್‌ಮೋಸ್ಟ್‌ ಮನೆಗೆ ಓಡ್ಕೊಂಡೇ ಹೋದೆ ಕಣೋ. ಆಮೇಲೆ ಮತ್ಯಾವತ್ತೂ ಸಿಗ್ಲಿಲ್ಲ ಅವ್ಳು”.

“ಅವತ್ತು ಬಸ್‌ಸ್ಟಾಪಲ್ಲಿ ನಿಂತಿದ್ದವ್ಳು ಹಾಗೇ ಇದ್ಲು ಕಣೋ. ಅವ್ಳೇ ಇರ‍್ಬೇಕು, ಹೌದು ಅವ್ಳೇ. ಬೆಂಗ್ಳೂರಿಗೇ ಬಂದಿದಾಳೇನೋ. ಸಧ್ಯ ನಾನು ಅವ್ಳ ಕಣ್ಣಿಗೆ ಬೀಳ್ಳಿಲ್ವಲ್ಲ. ಅಲ್ಲಾ… ನಾಕ್ವರ್ಷದ ಹಿಂದೆ ಕಾರಲ್ಲಿ ಕೂತು ಹೋಗ್ತಿದ್ದವ್ಳು ಆಗ್ಲೇ ಬೀದಿ ದೀಪದ ಕೆಳಗೆ ಬಂದ್ಬಿಟ್ಲಲ್ಲಾಂತ” ಎಂದಳು. “ಕಣ್ಣಿಗ್‌ ಬಿದ್ದಿದ್ರೆ ಏನ್ಮಾಡ್ತಿದ್ದೆ?” ಇಷ್ಟು ಹೊತ್ತೂ ಸುಮ್ನೆ ಕೇಳಿಸ್ಕೊಳ್ತಾ ಕೂತಿದ್ದ ಗಿರೀಶ ಅವಳನ್ನು ಕೆಣಕಿದ. “ಹೌದಲ್ಲಾ, ಇನ್ನೊಂದ್ಸಲ ಕಂಡ್ರೆ ಏನ್ಮಾಡ್ಲೋ?” ಅವನನ್ನೇ ಕೇಳಿದಳು. “ನೋಡು ಮಧು. ಎಷ್ಟೇ ಪರಿಚಯವಿದ್ರೂ, ಅನುಕಂಪವಿದ್ರೂ ಸಾರ್ವಜನಿಕವಾಗಿ ಇಂತವರ ಜೊತೆ ಗುರ್ತಿಸಿಕೊಳ್ಳೋದು ಒಳ್ಳೇದಲ್ಲ ಅನ್ಸತ್ತೆ. ಅಂಥವರ ಜೊತೆ ಓಡಾಡೋ ಗಂಡಸರನ್ನ ಸಮಾಜ ಸುಲಭವಾಗಿ ಒಪ್ಕೊಳತ್ತೆ. ಆದ್ರೆ ಅಂಥವ್ರನ್ನ, ಅವ್ರ ಜೊತೇಲಿರೋರ‍್ನ ನೋಡೋ ರೀತೀನೇ ಬೇರೆ. ಸಾಧ್ಯವಾದ್ರೆ ಅವಾಯ್ಡ್‌ ಮಾಡು. ಇಲ್ದಿದ್ರೆ ಎರಡ್ಮಾತಾಡಿ ಹೊತ್ತಾಯ್ತೂಂತ ಹೊರಡು” ಎಂದವನೇ ನಾಟಕೀಯವಾಗಿ “ಇಷ್ಟೊತ್ತೂ ತಾಳ್ಮೆಯಿಂದ ಗೆಜ್ಜೆಪೂಜೆಯ ಕಲ್ಪನಾ ಪುರಾಣವನ್ನು ಕೊರೆದು ನನ್ನನ್ನ ಧನ್ಯನನ್ನಾಗಿ ಮಾಡಿದ್ದಕ್ಕೆ ಪ್ರಣಾಮಗಳು. ಈಗಾಗ್ಲೇ ಒಂಭತ್ತು ಗಂಟೆಯಾಯ್ತು. ನೀನೇನೂ ಇವತ್ತು ಅಡುಗೆ ಮಾಡಲ್ಲ ಅಂತ ಗೊತ್ತಾಯ್ತು. ನಡಿ, ಇನ್ನೊಂದ್ರೌಂಡ್‌ ವಾಕ್ ಹೋಗಿ ಸುಖ್‌ಸಾಗರ‍್ನಲ್ಲಿ ಪಾವ್ಭಾಜಿ ತಿಂದ್ಬರೋಣ, ಕಥೆ ಕೇಳಿದ್ದಕ್ಕೆ ತೆರಿಗೆ ಕಟ್ಬೇಕಲ್ಲ” ಎಂದ. “ಥ್ಯಾಂಕ್ಯೂಕಣೋ” ಎಂದೆದ್ದಳು.