ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮರಿಹಕ್ಕಿ ಮರಳಿತು ಕಾಡಿಗೆ… 

ಚಿಂತಾಮಣಿ ಕೊಡ್ಲೆಕೆರೆ
ಇತ್ತೀಚಿನ ಬರಹಗಳು: ಚಿಂತಾಮಣಿ ಕೊಡ್ಲೆಕೆರೆ (ಎಲ್ಲವನ್ನು ಓದಿ)

                ಧರಣಿ ಮಂಡಲ ಮಧ್ಯದೊಳಗೆ ಮೆರೆವ ಕರ್ನಾಟಕ ದೇಶದ ಅಂಚಿನೊಳಗೆ ಮಿಂಚುತ್ತಿರುವ ಕನ್ನಡ ಕರಾವಳಿಯ ಹಿರೇಗುತ್ತಿಯೆಂಬ ಹಳ್ಳಿಯ ಮೂಡಣ ದಿಕ್ಕಲ್ಲಿ ಕೋಳಿಮಂಜುಗುಣಿ, ಕೆಕಣಿ, ಖಂಡಗಾರ ಮುಂತಾದ ಹೆಸರಿನ ದಟ್ಟ ಕಾಡೂರುಗಳಿರುವವು.  ಅಲ್ಲಿ ಇಂದಿಗೂ  ದಟ್ಟ ಕಾಡಿನ ಬೃಹನ್ಮರಗಳಲ್ಲಿ ಕಾಡುಹಕ್ಕಿಗಳಷ್ಟೇ ಗೂಡು ಕಟ್ಟಿ ವಾಸವಾಗಿರುವ,  ಮನುಷ್ಯರು ಯಾರೂ ಇನ್ನೂ  ಹೆಜ್ಜೆಇಟ್ಟಿರದ, ಅಜ್ಞಾತ ವಲಯಗಳಿರುವವು.  ಅಲ್ಲಿ ಆ ಹಕ್ಕಿಗಳಿಗೆ ಬೇಕಾದ ಹಣ್ಣುಗಳು ಇರುವವು.  ಇನ್ನು ಆ ಹಕ್ಕಿಗಳಾದರೂ  ಬಡಪೆಟ್ಟಿಗೆ ಯಾರ ಕಣ್ಣಿಗೂ ಬೀಳವು.  ಬೆಳಿಗ್ಗೆ ಮೂರೂವರೆ ನಾಲ್ಕರ ಹೊತ್ತಿಗೆ ಹಕ್ಕಿಗಳು ತಾವು ಇರುವ ಎಡೆಗಳಿಂದ ಹಾಡತೊಡಗಿದವೆಂದರೆ ಸುತ್ತಮುತ್ತಣ ಹಳ್ಳಿಗಳೆಲ್ಲವೂ ಗಂಧರ್ವಲೋಕವಾಗಿ ಬಿಡುವವು.  ಅದು ಯಾವ ರಾಗ? ಸಂಗೀತಜ್ಞರೇ ಅದನ್ನು ಹೇಳಬೇಕು.  ಆ ಹಕ್ಕಿಯ ಉಸಿರೇ ಆ ಹಾಡಾಗಿ ಬಂದಂತಿರುತ್ತಿತ್ತು.  ಚಿಕ್ಕಂದಿನಲ್ಲಿ ನಾನು ಆ ಹಾಡುಗಳನ್ನು ಕೇಳಿರುವೆ.  ನಮ್ಮ ಹಳ್ಳಿಗಳಲ್ಲಿ ಮಳೆ, ಬೆಳೆ ಚೆನ್ನಾಗಿ ಆಗುತ್ತಿರಲು, ಬಡತನದ ನಡುವೆಯೂ ಜನಜೀವನ ಸಮೃದ್ಧವಾಗಿರಲು ಆ ಕಾಣದ ಹಕ್ಕಿಗಳ ಮಂಜುಳ ವಾಣಿಯೇ  ಕಾರಣವೆಂದು ಹಿರಿಯರು ಹೇಳುತ್ತಿದ್ದರು.  ಊರಲ್ಲಿ ಯಾರು ಭಾವಗೀತೆ ಹಾಡಿದರೂ, ಭಜನೆ ಮಾಡಿದರೂ, ಯಕ್ಷಗಾನದಲ್ಲಿ ಭಾಗವತಿಕೆ  ಹಾಡು ಹೇಳಿದರೂ ಆ ಹಕ್ಕಿಗಳ ಹಾಡಿನ ನೆರಳು ಅಲ್ಲಿ ಬಿದ್ದಂತೆ  ಅನಿಸುತ್ತಿತ್ತು.  ಅದನ್ನು  ಹೀಗೂ ಹೇಳಬಹುದು: ಆ ಹಕ್ಕಿಗಳ ಹಾಡಿನ ಮಧುರ ರಸದ ಒಂದು ತೊಟ್ಟು ಇವರ ಎದೆಯೊಳಗೆ ಬಿದ್ದು ಗಾನದ ನದಿಯೇ ಹರಿದಿದೆ ಎಂದು ಭಾಸವಾಗುತ್ತಿತ್ತು. ನಮ್ಮ ಮನೆ ಆ ಕಾಡಿನಿಂದ ಸಾಕಷ್ಟು  ದೂರದಲ್ಲಿರುವುದಾದರೂ ಬೆಳಗಿನ ಹೊತ್ತಿಗೆ ಆ ಹಕ್ಕಿಹಾಡು ಕೇಳಲು ನಾನು ತವಕಿಸುತ್ತಿದ್ದೆ. ಗಾಳಿ ಈ ಮುಖವಾಗಿ ಬೀಸುತ್ತಿದ್ದಾಗ ಕೆಲವೊಮ್ಮೆ ಆ ಹಾಡು ನನಗೆ ಕೇಳುತ್ತಿತ್ತು, ಕೂಡ. ಯಾರೂ ಇರದ  ಒಂದು ಮಧ್ಯಾಹ್ನ ಆ ಹಕ್ಕಿ ನಮ್ಮ ಮನೆಯ ತೋಟಕ್ಕೆ ಬಂದು ಬಾಗಿದ ಪೇರಲ ಗಿಡದ ತೂಗಾಡುವ ಟೊಂಗೆಯ ಮೇಲೆ ಕೆಲ ಕಾಲ ಕೂತಿದ್ದು ಹಾರಿಹೋಯಿತು. ಅಪರೂಪದ ಆ ಹಕ್ಕಿಯು ಆ ‘ಕಾಣದ ಕಾಡು ಹಕ್ಕಿಯೇ’ ಎಂದು ನನ್ನ ಒಳ ಮನಸು ಹೇಳಿತು. ಆ ಹಕ್ಕಿಯ ಹಾಡನ್ನು ಎದೆಯೊಳಗೆ ಇಟ್ಟುಕೊಂಡು ನಾನು ಕವಿತೆಗಳನ್ನು ಬರೆದು ಕವಿಯಾದೆನು. ಇಂದು ಆ ಹಕ್ಕಿಯ ಸಂತತಿಯ ಒಂದು ಮರಿ ಹಕ್ಕಿಯ ಕಥೆ ಹೇಳುವೆನು. 

             ಆ ಕಾಡಿನ ಈ ಮರಿ ಹಕ್ಕಿಯು ಒಂದು ದಿನ ತನ್ನ ತಂದೆ ತಾಯಿಯರನ್ನು ಕೇಳಿತು: “ಹೇಳಿರಿ.  ಇನ್ನೂ ಎಷ್ಟು ದಿನ ನಾವು ಈ ಕಾಡಿನಲ್ಲಿಯೇ ಇರಬೇಕು? ನಾವೇಕೆ ನಾಡಿಗೆ ಹೋಗಬಾರದು? ನಾವೇಕೆ  ನಗರಗಳಿಗೆ ಹೋಗಬಾರದು?”

           ಅಪ್ಪಹಕ್ಕಿ ಹೇಳಿತು: “ನಮಗಿಲ್ಲಿ ಏನು ಕಡಿಮೆಯಾಗಿದೆ ಎಂದು ನಾವು ನಾಡಿಗೆ ಹೋಗಬೇಕು?”

         ಅಮ್ಮ ಹಕ್ಕಿ ಹೇಳಿತು:”ಇದು ದೇವರು ಮಾಡಿರುವ ವ್ಯವಸ್ಥೆ. ನಾವು ಇರಬೇಕಾದದ್ದು ಹೀಗೆ”

          ಅಜ್ಜ ಹಕ್ಕಿ ಹೇಳಿತು: ” ಬಲ್ಲವರಿಗೆ ನಮ್ಮ ಕುರಿತು ತಿಳಿದಿದೆ. ಕೆಲವು ವಿಷಯಗಳು ಇರಬೇಕಾಗಿರುವುದು ಹೀಗೆಯೇ ಎಂಬುದು ನಿಶ್ಚಿತ.ನಗರ ನಮ್ಮ ಬಾಳುವೆಗೆ ಸೂಕ್ತ ಜಾಗವಲ್ಲ.  ಅಲ್ಲಿ ನಮ್ಮ ಈ ಕಾಡು ಹಾಡುಗಳು ಹುಟ್ಟುವುದಾದರೂ ಹೇಗೆ!”

       ಅಜ್ಜಿ ಹಕ್ಕಿ ಹೇಳಿತು: “ಹೌದು ಮರಿ. ಯಾರಿಗೂ ಕಾಣದಂತಿದ್ದು ನಮ್ಮ ಹಾಡುಗಳನ್ನು ಹಾಡಿಕೊಂಡು ಹೋಗುವುದಕ್ಕಾಗಿಯೇ ದೇವರು ನಮ್ಮನ್ನು ನಿರ್ಮಿಸಿರುವನು.  ದೇವರಿಗೆ ಅತ್ಯಂತ ಸಮೀಪದಲ್ಲಿ ನಾವಿಲ್ಲಿ ಬದುಕುತ್ತಿದ್ದೇವೆ. ಈಗಲೂ ಆನಂದವಾಗಿಯೇ ಇದ್ದೇವೆ,ಇನ್ನು ಮುಂದೆಯೂ ಇಲ್ಲಿ ನಾವು ಆನಂದವಾಗಿರೋಣ”.  

           ಮರಿ ಹಕ್ಕಿ ತನ್ನ ಹಿರಿಯರ ಮಾತುಗಳನ್ನು ಕೇಳಿಸಿಕೊಂಡು ರೆಕ್ಕೆಗಳನ್ನು ಕುಣಿಸುತ್ತಾ  ಉತ್ತರಿಸಿತು: “ನಿಮ್ಮ ಮಾತು ಚೆನ್ನಾಗಿದೆ. ಅದಕ್ಕೆ ನಾನೇನೂ ಹೇಳಲಾರೆ.  ಆದರೆ ನಗರಗಳಲ್ಲಿ ಜನರ ಬದುಕು ಸ್ವರ್ಗ ಸಮಾನವಾಗಿದೆ.ಅಲ್ಲಿಯ ಜನರ ದೌಲತ್ತು ನೋಡುವಂಥದ್ದು. ನಾನು ಆಗಾಗ ಹತ್ತಿರದ ಪಟ್ಟಣಗಳಿಗೆ ಹೋಗಿ ಬರುತ್ತಾ ಇರುತ್ತೇನಲ್ಲ, ಹಾಡುಗಳಿಗೆ ಆ ಪಟ್ಟಣಗಳಲ್ಲಿ ಎಷ್ಟು ವೇದಿಕೆಗಳು! ಎಷ್ಟು ಅವಕಾಶ! ನಾಟಕ,

ಸಿನಿಮಾಗಳಲ್ಲಿ ಹಾಡಬಹುದು, ಆರ್ಕೆಸ್ಟ್ರಾದಲ್ಲಿ ಹಾಡಬಹುದು” …ಮತ್ತೆ .. ಮತ್ತೆ ತಡವರಿಸುತ್ತಾ ಹಕ್ಕಿ ಹೇಳಿತು: ” ಹಾಡುಗಾರರಿಗೆ ಅಲ್ಲಿ ಪ್ರಶಸ್ತಿ ಕೊಡುತ್ತಾರೆ, ಹಣ ಸಿಗುತ್ತದೆ, ಸೈಟು ಸಿಗುತ್ತದೆ “

                 ಹಿರಿಯ ಹಕ್ಕಿಗಳು ನಕ್ಕುಬಿಟ್ಟವು. ಒಟ್ಟಾಗಿ ಕೇಳಿದವು: “ಅದರಿಂದ ನಮಗೇನಾಗಬೇಕಾಗಿದೆ? ನಮಗೆ ಯಾವುದೇ ಸಿಟಿಯಲ್ಲಿ ಸೈಟು ಯಾಕೆ ಬೇಕು? ಹಣ ತೆಗೆದುಕೊಂಡು ನಾವೇನು ಮಾಡಬೇಕು? ಪ್ರಶಸ್ತಿ ಫಲಕ ತೂಗುಹಾಕಲು ನಮ್ಮ ಗೂಡುಗಳಲ್ಲಿ ಗೋಡೆಯೇ ಇಲ್ಲ. ನಮ್ಮ ಪ್ರೇರಣೆಗಳು ಒಳಗಿವೆ, ಹೊರಗಲ್ಲ. ನೀನು ಹೀಗೆ ಯೋಚಿಸುತ್ತಿರುವುದು  ಅಪಾಯಕರ.ಇನ್ನು ಮುಂದೆ ದೊಡ್ಡ ಶಹರಗಳಿಗೆ ಹೋಗಲೇಬೇಡ.  ಇದರಿಂದ ನಿನ್ನ ಹಾಡುಗಾರಿಕೆಗೆ ಮಾತ್ರವಲ್ಲ, ನಮ್ಮ ಹಾಡಿಗೂ ಅಪಶ್ರುತಿ ಸೇರಿಕೊಳ್ಳಬಹುದು”.  

              ಇವೆಲ್ಲ ಸಂಭಾಷಣೆಗಳು ಒಂದೇ ದಿನ ನಡೆದವು ಎಂದಲ್ಲ. ಎಷ್ಟೋ ದಿನ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಈ ಮಾತುಗಳು ಒಬ್ಬರಿಂದ ಒಬ್ಬರಿಗೆ ಹರಿದಾಡುತ್ತಲಿದ್ದವು.  ಮರಿ ಹಕ್ಕಿ  ಕೆಲವೊಮ್ಮೆ ಹಠ ಹಿಡಿದು ಉಪವಾಸ ಮಾಡಿತು.  ಎಷ್ಟೋ ಸಲ ಅತ್ತೂಬಿಟ್ಟಿತು. ಕಣ್ಣು ಕುಕ್ಕುವ ಬೆಳಕಿನ ಸಮಾರಂಭಗಳಲ್ಲಿ ಸಾಧಕರ ಸಾಧನೆ ವಿವರಿಸಿ, ಶಾಲು ಹೊದೆಸಿ, ಹಾರ ತೊಡಿಸಿ, ಫಲಕ, ಹಣ್ಣು ಹಂಪಲ, ನಗದು ಹಣ ಕೊಡುವ ಸಂದರ್ಭಗಳನ್ನು ನೆನೆದರೇ ಅದಕ್ಕೆ ರೋಮಾಂಚನವಾಗುತ್ತಿತ್ತು. ತನ್ನ ಅಪ್ಪ, ಅಜ್ಜ, ಅಮ್ಮ, ಅಜ್ಜಮ್ಮ ಪ್ರತಿಯೊಬ್ಬರೂ ಇಂಥ ಮನ್ನಣೆಗಳಿಗೆ ಅರ್ಹರು ಎಂದು ಆ ಹಕ್ಕಿಯ ಖಚಿತ ಅಭಿಪ್ರಾಯ. ಆಯಿತು, ಇವರಿಗೆ ಬೇಡ, ನಾನಾದರೂ ಇಂಥ ಪ್ರಶಸ್ತಿಗಳನ್ನು ಪಡೆದುಕೊಳ್ಳುವೆ.. ಹೀಗೆ ಆ ಎಳೆಹಕ್ಕಿಯ ವಿಚಾರಗಳು.  ಎಳೆ ಹಕ್ಕಿಯ ಒತ್ತಾಯ, ಸವಿನಯ ಪ್ರತಿಭಟನೆ ಎಲ್ಲವೂ ನಡೆಯುತ್ತಿರಲು    ಕಾಡಿನ ಎಲ್ಲ ಹಿರಿಯ  ಹಕ್ಕಿಗಳು ಒಂದಷ್ಟು ದಿನ ಸಮಾಲೋಚನೆ ನಡೆಸಿ ಒಂದು ತೀರ್ಮಾನಕ್ಕೆ ಬಂದವು. ಒಂದು ದಿನ ಮರಿಹಕ್ಕಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಹಿರಿ ಹಕ್ಕಿಗಳು  ಹೇಳಿದವು:

           “ನಿನ್ನ ಮಾತುಗಳನ್ನು ಕಳೆದ ಅನೇಕ ದಿನಗಳಿಂದ ಕೇಳಿಸಿಕೊಂಡಿದ್ದೇವೆ. ನೋಡು, ನಮ್ಮೂರಿನವನೇ ಒಬ್ಬ ಈಗ ಬೆಂಗಳೂರಿನ ಕೊಂಚ ಹೊರವಲಯದಲ್ಲಿರುವ ಬ್ಯಾಡರಹಳ್ಳಿಯಲ್ಲಿದ್ದಾನೆ.  ಕವಿ ಎಂದು ಸ್ವಲ್ಪ ಹೆಸರು ಮಾಡಿದ್ದಾನಂತೆ. ಅವನ ಮನಸು ನಮ್ಮ ಹಾಡಿನ ಶ್ರುತಿಗೆ ಹೊಂದಿಕೊಂಡೇ ಉಳಿದಿದೆ. ಹಾಗಾಗಿ ನಿನಗೆ ಅವನನ್ನು ಗುರುತಿಸಲು ಕಷ್ಟವಾಗುವುದಿಲ್ಲ. ನಾವು ಇಲ್ಲಿಂದ ಒಂದು ಹಾಡು ಹೇಳತೊಡಗುತ್ತೇವೆ. ನೀನು ಹಾರಲು ಆರಂಭಿಸು, ಬೆಂಗಳೂರಿನ ಕಡೆ ಹೋಗುವ ಬಸ್ಸುಗಳ ಹಾದಿಯಲ್ಲಿ ಹಾರಿ ಹೋಗು.  ಎಂದೂ  ನಮ್ಮ ಹಾಡಿನ ಗತಿಯನ್ನು ಬಿಟ್ಟು ಚಲಿಸಬೇಡ.  ಆಗ ನೀನು ಅವನ ಮನೆ ಮುಟ್ಟುತ್ತೀಯೆ.  ಅವನು ಏನು ಹೇಳುತ್ತಾನೋ ಹಾಗೆ ಮಾಡು.  ಹೋಗು, ಹಾರು, ನಿನಗೆ ಒಳ್ಳೆಯದಾಗಲಿ…”

            ಹೀಗೆ ಒಂದು ಇಡೀ ರಾತ್ರಿ ಬಸ್ಸಿನೊಡನೆ ಹಕ್ಕಿ ಮೇಲಿನಿಂದ ಹಾರುತ್ತಾ  ಬೆಂಗಳೂರು ಪ್ರವೇಶಿಸಿತು. ಜಾಲಹಳ್ಳಿಯ ಹತ್ತಿರ   ಒಂದು ಕಡೆ ಹಾಡಿನ ದಿಕ್ಕು ಮತ್ತು ಬಸ್ಸಿನ ದಿಕ್ಕು ಬೇರೆಯಾದವು. ಹಾಡಿನ ದಿಕ್ಕು  ಹಿಡಿದು ಆ ಮರಿಹಕ್ಕಿ ನನ್ನ ಮನೆ ಚಾವಣಿ ಮೇಲೆ ಬಂದು ಕುಳಿತಿತು.ಆ ದಿನ ತುಂಬ ಬೇಗ ಎದ್ದ  ನಾನು ಮೇಲೆ ಹೋಗಿ ಅಡ್ಡಾಡುತ್ತಾ ಸೂರ್ಯೋದಯ ಗಮನಿಸುತ್ತಿದ್ದೆ.  ಹಕ್ಕಿ ಹಾಡು ಹಿಂದಿನಿಂದ ಕೇಳಿಸಿತು. ಹಿರೇಗುತ್ತಿಯಲ್ಲಿ ಎಳೆಯ ದಿನಗಳಲ್ಲಿ ಕೇಳಿದ್ದ, ಕೇಳಿಸಿದಂತಿದ್ದ, ಮನಸೊಳಗೆ ಸದಾ ಕೇಳಿದಂತಾಗುತ್ತಿದ್ದ ಹಾಡು ಇದೀಗ ನನ್ನ ಬೆನ್ನ ಹಿಂದೆ ಕೇಳುತ್ತಿದೆ! ಆಶ್ಚರ್ಯದಿಂದ ಹಿಂತಿರುಗಿ ನೋಡಿದೆ. 

                ಆ ಹಕ್ಕಿ! ಅದೇ ಹಕ್ಕಿ! ಅಂದು ಒಂದು ಮಧ್ಯಾಹ್ನ ಯಾರೂ  ಇರದಾಗ ನಮ್ಮ ಹಿತ್ತಿಲಿನ ಬಾಗಿದ ಪೇರಲ ಗಿಡದ ತೂಗಾಡುವ ಟೊಂಗೆಯ ಮೇಲೆ ಕುಳಿತು  ದರ್ಶನ ಕೊಟ್ಟ ಹಕ್ಕಿ, ಆ ಹಕ್ಕಿಯ ಸಂತತಿಯದು ಇದು ಎಂದು ಸುಲಭವಾಗಿ ನಾನು ಗುರುತು ಹಿಡಿದೆ. 

                 “ನೀನು ಇಲ್ಲಿ!” ಎಂದೆ. 

             ಆ ಹಕ್ಕಿಯು ತನ್ನ ಕಥೆ ಹೇಳಿತು.  ಅದಕ್ಕೆ ರುಚಿಯಾದ ಹಣ್ಣುಗಳನ್ನು ಕತ್ತರಿಸಿ ಕೊಟ್ಟೆ, ಪ್ರೀತಿಯಿಂದ ತಿಂದು  ನೀರು ಕುಡಿಯಿತು. ತಡ ಮಾಡದೆ ಯಾರ ಬಳಿಯಾದರೂ  ತನ್ನನ್ನು ಕರೆದೊಯ್ದು ಒಂದು ಪ್ರಶಸ್ತಿ ಕೊಡಿಸಲೇಬೇಕೆಂದು ಗೋಗರೆಯತೊಡಗಿತು. “ಇಂದು ವಿಶ್ರಮಿಸು. ಇಲ್ಲಿ ಸಾಕಷ್ಟು ಜಾಗವಿದೆ.  ಮೆತ್ತಗಿನ ಹುಲ್ಲು ಬಟ್ಟೆಗಳನ್ನು ಹಾಸಿಕೊಡುತ್ತೇನೆ, ನನ್ನ ಪರಿಚಯದ ಒಬ್ಬರು ಪ್ರಭಾವಿ ಜನ ಇದ್ದಾರೆ.  ನಾಳೆ ನಿನ್ನನ್ನು ಅವರ ಬಳಿ ಕರೆದೊಯ್ಯುತ್ತೇನೆ”.  ಇಷ್ಟು ಹೇಳಿದ್ದೇ  ಆ ಹಕ್ಕಿ ಸಂತುಷ್ಟವಾಗಿ ನಿದ್ದೆ ಹೋಯಿತು. 

          ನನ್ನ ಪರಿಚಯದ ಪ್ರಭಾವಿ ವ್ಯಕ್ತಿಗಳು ಅವರಿಗೆ ಆಪ್ತರಾದ ಲೋಕೋಪಯೋಗಿ ಮಂತ್ರಿಗಳ ಬಳಿ  ನಮ್ಮನ್ನು ಕರೆದೊಯ್ದರು.  ನಾವು  ಹೋಗುವಲ್ಲೆಲ್ಲ ಆ ಹಕ್ಕಿ  ತನ್ನ ಪಾಡಿಗೆ ತಾನು ಹಾರುತ್ತ ಬರುತ್ತಿತ್ತು.  ಲೋಕೋಪಯೋಗಿ ಮಂತ್ರಿಗಳ ಖಾಸಗಿ ಕೋಣೆಗೇ  ನಮಗೆ ನೇರ ಪ್ರವೇಶ ಸಿಕ್ಕಿತು. ನಮ್ಮೊಡನೆ ಒಂದು ಹಕ್ಕಿಯು ಬರುತ್ತಿರುವುದನ್ನು ಕಂಡು ಅವರು ಚಕಿತರಾದರು.  ನಮ್ಮ ಪರಿಚಯ, ನಮಸ್ಕಾರ, ಚಮತ್ಕಾರ ಎಲ್ಲ ಮುಗಿದ ಮೇಲೆ ‘ತಾವು ಈ ಹಕ್ಕಿಯ ಹಾಡು ಕೇಳಬೇಕು’ ಎಂದು ನಾನು ಕೈಮುಗಿದು ಪ್ರಾರ್ಥಿಸಿದೆ. 

          ಯಜಮಾನರು “ಆಗಲಿ” ಎಂದರು. 

             ಹಕ್ಕಿ ಹಾಡತೊಡಗಿತು.  ಅಬ್ಬಾ ಆ ಹಾಡೇ! ಅದರ ಮಧುರ ರಸದಲ್ಲಿ ನಾವೆಲ್ಲ ಮುಳುಗಿ ಏಳತೊಡಗಿದೆವು.  ಮಂತ್ರಿಗಳು  ಎಷ್ಟೋ ಹೊತ್ತು ಸಮಾಧಿಯಲ್ಲಿ ಕುಳಿತರು. 

            “ನನ್ನ ಜನ್ಮದಲ್ಲೇ ಇಂತಹ ಹಾಡು ಕೇಳಿರಲಿಲ್ಲ” ಎಂದರು. 

           “ಹಾಗಾದರೆ ತಾವು ನಮ್ಮ ಹಕ್ಕಿಗೆ ಯಾವುದಾದರೂ ಒಂದು ಪ್ರಶಸ್ತಿ ಕೊಡಿಸಬೇಕು” ಎಂದು ತಕ್ಷಣ ನಾನು ಪ್ರಾರ್ಥಿಸಿದೆ. 

            ಮಂತ್ರಿಗಳು ಅನುಭವಿಗಳು.  ಅವರು ಹೇಳಿದರು: “ಅದು ಮಾತ್ರ ಸಾಧ್ಯವಾಗಲಾರದು.  ಪ್ರಶಸ್ತಿಗೆ ಕನಿಷ್ಠ ಅರವತ್ತು  ವರ್ಷಗಳಾದರೂ ಆಗಬೇಕೆಂಬ ನಿಯಮವಿದೆ.  ಹಾಡುವವರಿಗೆ ಗಾನಕೋಗಿಲೆ, ಗಾನ ಪಿಕ ಎಂದೆಲ್ಲ ನಾವು ಬಿರುದು ಕೊಡುವುದಿದೆ.  ಆದರೆ ಕೋಗಿಲೆಯೇ ಬಂದು ಪ್ರಶಸ್ತಿಗೆ ಬೇಡಿಕೆ ಇಟ್ಟರೆ ಏನು ಮಾಡುವುದು? ನಾವು ಮನುಷ್ಯರಿಗೆ ಮಾತ್ರ ಪ್ರಶಸ್ತಿ ಕೊಡುತ್ತಿದ್ದೇವೆ”. 

          ನನಗೆ ನಿರಾಸೆಯಾಯಿತು.  ಅಷ್ಟರಲ್ಲಿ ಮಂತ್ರಿಗಳು “ಬೇರೆ ಯಾವುದಾದರೂ ರೀತಿಯಲ್ಲಿ ನಾವು ಈ ಸಂಗೀತಗಾರರಿಗೆ ಸಹಾಯ ಮಾಡಬಹುದು” ಎಂದರು. 

             ಗೆಳೆಯರು ಕೇಳಿದರು: “ಏನು ಮಾಡಲು ಸಾಧ್ಯವಿದೆ ಸರ್?”

           “ಇವರ ಊರು ದಟ್ಟಡವಿಯಲ್ಲಿದೆ ಎಂದು ಆಗ ಹೇಳಿದಿರಿ. ನಮ್ಮ ಇಲಾಖೆಯಿಂದ ಅಲ್ಲಿಗೆ ಒಳ್ಳೆಯ ರಸ್ತೆ ಮಾಡಿಸಿಕೊಡುತ್ತೇನೆ”. 

             ತಕ್ಷಣ ಹಕ್ಕಿ ಮಾತನಾಡಿತು: “ಆದರೆ ನಮಗೆ ರಸ್ತೆಗಳು ಬೇಕಾಗುವುದೇ ಇಲ್ಲ! ಹಾರಿ ಎಲ್ಲಿಂದ ಎಲ್ಲಿಗೂ ಹೋಗಬಲ್ಲ ನಮಗೆ ರಸ್ತೆಗಳಿಂದ ಏನು ಉಪಯೋಗ?”

          “ಅಲ್ಲ, ತಮಗೆ ಪ್ರಶಸ್ತಿಯಿಂದಲಾದರೂ ಏನು ಉಪಯೋಗ?” ಎಂದು ಮಂತ್ರಿಗಳು ಕೇಳಿದರು. ನನ್ನ ಪ್ರಕಾರ  ಅವರು ನಿಜಕ್ಕೂ ತುಂಬಾ ಒಳ್ಳೆಯ ಪ್ರಶ್ನೆಯನ್ನೇ ಕೇಳಿದರು.  ಆದರೆ ಹಕ್ಕಿಗೆ  ಸಿಕ್ಕಾಪಟ್ಟೆ ಸಿಟ್ಟು ಬಂದಿತು. 

         “ಪ್ರಪಂಚದಲ್ಲಿ ಎರಡು ಬಗೆಯ ವಸ್ತುಗಳಿವೆ.  ಕೆಲವು ಲೋಕೋಪಯೋಗಿ, ಕೆಲವು ಭಾವೋಪಯೋಗಿ.  ಆಹಾರ, ವಸತಿ ಮುಂತಾದ ಎಲ್ಲಾ ಲೋಕೋಪಯೋಗಿ ಸಂಗತಿಗಳು ನಮ್ಮಲ್ಲಿವೆ.  ಚಪ್ಪಾಳೆ, ಶಾಲು, ಹಾರ, ಎರಡು ಒಳ್ಳೆಯ ಮಾತು, ಸಹೃದಯರ ಕಣ್ಣಿಂದ ರಸೋತ್ಕರ್ಷದಲ್ಲಿ ಜಿನುಗುವ ಕಣ್ಣಹನಿ, ಸಣ್ಣ ಹನಿ, ಅದು, ಅದನ್ನು ಬಯಸಿ ಬಂದಿದ್ದೇನೆ.  ನೀವೇ ಗುರುತಿಸಿ ಕೊಡಬಹುದಿತ್ತು, ಕೊಡಲಿಲ್ಲ.  ಈಗ ನಾನು ಕೇಳಿಕೊಂಡು ಬಂದರೂ ಕೊಡಲು ಆಗುವುದಿಲ್ಲ ಎನ್ನುತ್ತೀರಿ” ಹಕ್ಕಿಯ ನುಡಿಗಳಲ್ಲಿ ಕಾವಿತ್ತು, ನೋವೂ ಇತ್ತು. 

           ಸಚಿವರು ದಂಗಾಗಿ ಹೋದರು.  ಒಂದು ಹಕ್ಕಿ ಇಷ್ಟೊಂದು ಮಾತಾಡಲು ಸಾಧ್ಯವೇ ಇಲ್ಲವೆಂದು ಅರ್ಧಗಂಟೆ ಹಿಂದೆ ಅವರು ಹೇಳುತ್ತಿದ್ದರೇನೋ. ಈಗ ಖಂಡಿತ ಹಾಗಿಲ್ಲ.  ಅವರು ದನಿ ತಗ್ಗಿಸಿ ಹೇಳಿದರು:

            “ನೋಡಿ.  ಒಬ್ಬೊಬ್ಬ ವ್ಯಕ್ತಿಗೂ ಒಂದೊಂದು ಹೆಸರಿರುತ್ತದೆ.  ನಿಮಗೆ ಅಂಥ ಒಂದು ಹೆಸರಿದೆಯೇ? ಇಲ್ಲ.  ಜನನ ದಾಖಲೆ ಇದೆಯೇ? ಇಲ್ಲ.  ಆಧಾರ ಕಾರ್ಡ್ ಇದೆಯೇ? ಇಲ್ಲ. ಇನ್ನು ಅರವತ್ತು ವರುಷದ ನಿಯಮ.  ನೀವು ಅಷ್ಟು ವರ್ಷ ಬದುಕಿರುವುದೇ ಇಲ್ಲ! ನನ್ನ ಸಮಸ್ಯೆಯನ್ನು ತಾವು ಅರ್ಥಮಾಡಿಕೊಳ್ಳಬೇಕು” ಮಂತ್ರಿಗಳು ಗಂಭೀರವಾಗಿ ಕಣ್ಣು ಮುಚ್ಚಿ ಹೇಳುತ್ತಿದ್ದರು.  ನಾವು ಗಂಭೀರವಾಗಿ ಅವರತ್ತ ನೋಡುತ್ತಾ ತಲೆಯಾಡಿಸುತ್ತಿದ್ದೆವು.  ಅದಾವ ಹೊತ್ತಿಗೋ ಹಕ್ಕಿ ಯಾರನ್ನೂ  ಹೇಳದೆ ಕೇಳದೆ ಅಲ್ಲಿಂದ ಹಾರಿಹೋಗಿದೆ ಎಂಬುದು ನಮ್ಮ ಲಕ್ಷ್ಯಕ್ಕೆ ಬರುವಾಗ ತುಂಬಾ ತಡವಾಗಿತ್ತು.  ಮಂತ್ರಿಗಳ ಕ್ಷಮೆ ಕೋರಿ ನಾವು ಮನೆಗೆ ವಾಪಸಾದೆವು. 

          ಮನೆಗೆ ಬಂದು ಸ್ವಲ್ಪ ಹೊತ್ತು ವಿಶ್ರಮಿಸಿ ಟೆರೇಸಿಗೆ ಹೋದೆ.  ನನ್ನ ಸಂಜೆಯ ನಡಿಗೆ ಅಲ್ಲಿಯೇ.  ಮೂಲೆಯಲ್ಲಿ ಹಕ್ಕಿ ಚಿಂತಾಕ್ರಾಂತವಾಗಿ ಕುಳಿತಿರುವುದನ್ನು ನೋಡಿ ಸಂಕಟವಾಯಿತು.  ಅದು ನನ್ನ ಮನೆಗೆ ಹಿಂತಿರುಗಿರಬಹುದು ಎಂದು ನಾನು ನಿಜಕ್ಕೂ ಆಲೋಚಿಸಿರಲಿಲ್ಲ. ಸುಮ್ಮನೆ ಕುಳಿತಿದ್ದ ಹಕ್ಕಿಯ ಪಕ್ಕಕ್ಕೆ ನಾನೂ  ಹೋಗಿ ಕುಳಿತೆ. ಎಷ್ಟೋ ಹೊತ್ತು ಮೌನವಾಗಿ ಕುಳಿತಿದ್ದೆವು. 

        ಹಕ್ಕಿ ಹೇಳಿತು: “ಇಂದು ಸಂಜೆ ನಾನು ನಮ್ಮೂರಿಗೆ ಮರಳುವೆ”

        ನಾನು ಹೇಳಿದೆ: “ಇಷ್ಟು ಬೇಗ! ಇಷ್ಟಕ್ಕೇ  ನಿನಗೆ ನಿರಾಸೆಯಾಗಿ ಬಿಟ್ಟಿತೇ! ಇನ್ನೂ ನಮ್ಮ ಪ್ರಯತ್ನ ಆರಂಭವಾಗಿದೆ ಅಷ್ಟೇ”

             “ಅದೆಲ್ಲ ಬೇಡ ಬಿಡಿ” ಹಕ್ಕಿ ಹೇಳಿತು. 

             “ಪ್ರಶಸ್ತಿ ಬೇಡವೇ!?”

           “ಅದೊಂದು ಹುಚ್ಚು ಎಂದು ನನಗೆ ಅರ್ಥವಾಗಿ ಹೋಯಿತು.  ನನ್ನ ಅಪ್ಪ ಬಯಸಲಿಲ್ಲ, ಅಜ್ಜ ಬಯಸಲಿಲ್ಲ. ನನಗೆ ಪ್ರಶಸ್ತಿ! ಹಾಡುವುದೇ ನನ್ನ ಪ್ರಶಸ್ತಿ. ನಿಮ್ಮ ಮುಂದೆ ಇವತ್ತು ಮಧ್ಯಾಹ್ನ ಹಾಡುತ್ತಿದ್ದರೆ ನಿಮ್ಮ ಇಡೀ ಬೆಂಗಳೂರು ಆ ರಸ ಗಂಗೆಯಲ್ಲಿ ಕರಗಿ ಹೋಗುತ್ತಿದ್ದುದು  ನನ್ನ ಗಮನಕ್ಕೆ ಬಂತು – ಮಕ್ಕಳ ಕೈಲಿ ಐಸ್ ಕ್ಯಾಂಡಿ ಕರಗಿ ಹೋಗುವಂತೆ! ದೇವರೇ, ದೇವರೇ..  ನಮ್ಮೂರ ಮರಗಳು, ನೆಲ, ಬಾನು  ನೋಡಬೇಕು ನೀವು. (ನೋಡಿದ್ದೀರಿ ನೀವು).  ಹೇಗೆ ಅವು ನಮ್ಮ ಹಾಡು ಕೇಳುತ್ತಾ ಅಚಲವಾಗಿ ನಿಂತಿವೆ, ಸ್ಥಿರತೆ ಸಾಧಿಸಿವೆ! ಅಡಿಕೆ, ತೆಂಗಿನ ಮರಗಳ ಗರಿಗಳು ಹೊಯ್ದಾಡುತ್ತಿದ್ದರೆ, ಆ ಸಮುದ್ರ ಭೋರ್ಗರೆಯುತ್ತಿದ್ದರೆ, ಅಘನಾಶಿನಿ ಉಕ್ಕಿ ಹರಿಯುತ್ತಿದ್ದರೆ ಅದೇ ಪ್ರಶಸ್ತಿ ಎಂದು ನನಗೆ ಅರ್ಥವಾಗಿಹೋಯಿತು. ನನಗೆ ಈಗ ತೋರುತ್ತಿದೆ, ಅಪ್ಪ-ಅಮ್ಮ ಎಲ್ಲರೂ  ಇದೆಲ್ಲ ನನಗೆ ತಿಳಿಯಲೆಂದೇ ಇಲ್ಲಿಗೆ ಕಳಿಸಿಕೊಟ್ಟಿರಬೇಕು. ಅದೇನೇ ಇರಲಿ, ನಿಮಗೆ ನಮಸ್ಕಾರ, ಪ್ರೀತಿಯ ವಂದನೆಗಳು, ಊರಿಗೆ ಬಂದಾಗ ಸಿಕ್ಕೋಣ” 

         ಮರಿಹಕ್ಕಿ ಗರಿ ಕೊಡವಿ ಹಾರಲು  ಸಜ್ಜಾಯಿತು.  ‘ಇಂದು ಉಳಿದು ನಾಳೆ ಹೋಗು’ ಎಂದು ಪರಿಪರಿಯಾಗಿ ಕೇಳಿಕೊಂಡರೂ ಒಪ್ಪಲಿಲ್ಲ.  “ಕಡೆಯ ಪಕ್ಷ ಒಂದು ಹಾಡು ಹೇಳು” ಎಂದು ನಾನು ಕೇಳಿಕೊಂಡೆ. 

             ಮರಿ ಹಕ್ಕಿ ಹಾಡತೊಡಗಿತು.  ಅದು ಎಂಥ ಹಾಡು! ಅದರ ಮುಂದೆ  ನಮ್ಮದು ಎಂಥ ಪಾಡು!   ಹಕ್ಕಿ ಮತ್ತು ನಾನು, ಇಬ್ಬರೇ, ಇಬ್ಬರಿಗಾಗಿಯೇ ಇತ್ತು ಆ ಹಾಡು. ಇಲ್ಲ, ಹಾಗೂ ಹೇಳಲಾಗದು,  ಬರೇ ಹಾಡೊಂದೇ ಅಲ್ಲಿ ಇದ್ದುದು. 

                     ಹಾಡು ಕ್ಷೀಣವಾಗತೊಡಗಿತು.  ನಿಧಾನವಾಗಿ ನಾನು ಕಣ್ತೆರೆದಾಗ ಹಕ್ಕಿ ಮರುಪಯಣ ಆರಂಭಿಸಿತ್ತು. 

                                ನಾನು ನೋಡುತ್ತಲೇ ಇದ್ದೆ:

                                     ಹಕ್ಕಿ ಹಾರುತ್ತಾ ಹಾರುತ್ತಾ ದೂರವಾಗುತ್ತಿತ್ತು…. 
                                     ಜೊತೆಗೆ ಅದರ ಹಾಡೂ……