ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸವಿತಾ ಎಸ್. ಶೆಟ್ಟಿ
ಇತ್ತೀಚಿನ ಬರಹಗಳು: ಸವಿತಾ ಎಸ್. ಶೆಟ್ಟಿ (ಎಲ್ಲವನ್ನು ಓದಿ)

ತಾಯ್ನಾಡಿನ ಬಳಿಕ ನನಗೆ ಬಹು ಇಷ್ಟವಾದ ನಗರವೆಂದರೆ ಅದು ಮುಂಬಯಿ. ಇಪ್ಪತ್ತೆರಡು ವರ್ಷದ ಹಿಂದೆ ನಾನು ಊರಿನಲ್ಲಿ ನನ್ನ ಕಾಲೇಜು ವಿದ್ಯಾಭ್ಯಾಸಗೈಯುತ್ತಿದ್ದಾಗ ಇನ್ನು ಮುಂದಿನ ಶಿಕ್ಷಣಕ್ಕಾಗಿ (ಎಂ.ಎ.) ಮುಂಬಯಿಗೆ ಹೋಗುವೆ ಎಂಬ ಕನಸನ್ನು ಇಟ್ಟುಕೊಂಡಿದ್ದೆ. ನನ್ನ ಅಣ್ಣ, ಅಕ್ಕಂದಿರು ಮುಂಬಯಿಯಲ್ಲಿದ್ದುದು ಇದಕ್ಕೆ ಕಾರಣವಿರಬಹುದು, ಅಯ್ಯೋ ಅವರೆಲ್ಲ ಮುಂಬೈಯಲ್ಲಿದ್ದಾರೆ, ನಾನೂ ಮುಂಬಯಿಗೆ ಹೋಗುತ್ತೇನೆಂದು ಅಮ್ಮನಲ್ಲಿ ಆಗಾಗ ಹೇಳುತ್ತಿದ್ದೆ. ಕಾಲೇಜು ಶಿಕ್ಷಣ ಮುಗಿಸಿದ ಮೇಲೆ ನೀನೂ ಹೋಗು’ ಅಂತ ಅಮ್ಮ ಸಮಾಧಾನಿಸುತ್ತಿದ್ದರು. ನನಗೂ ಅಷ್ಟೇ ಕಾತರ. ಯಾವಾಗ ನನ್ನ ಕಾಲೇಜು ಶಿಕ್ಷಣ ಮುಗಿಯುತ್ತದೆ, ನಾನು ಯಾವಾಗ ಮುಂಬಯಿಗೆ ಕಾಲಿಡುವುದು ಎಂದು. ಕಾಲೇಜು ಮುಗಿದ ತಕ್ಷಣ ಇನ್ನು ಎಂ.ಎ. ಮಾಡಲು ನಾನು ಮುಂಬಯಿಗೆ ಬರುತ್ತೇನೆಂದು ಮುಂಬಯಿಯಲ್ಲಿದ್ದ ನನ್ನ ಮಾವನವರಲ್ಲಿಯೂ ಪ್ರಸ್ತಾಪಿಸಿದ್ದೆ. ನನಗೆ ಊರಲ್ಲಿರುವಾಗಲೇ ಹಿಂದಿ ಮಾತನಾಡಲು ಬರುತ್ತಿದ್ದುದರಿಂದ ಭಾಷೆಯ ಸಮಸ್ಯೆ ಬರಲಾರದು ಎಂಬ ಧೈರ್ಯವಿತ್ತು. ಅದಲ್ಲದೆ ಕನ್ನಡದಲ್ಲಿ ಎಂ.ಎ. ಮಾಡುವುದರಿಂದ ತೊಡಕಾಗದು ಎಂದು ಅಂದುಕೊಂಡಿದ್ದೆ. ಅಂತೂ ಕಾಲೇಜು ಮುಗಿಯಿತು, ರಜೆ ಕಳೆದು ಇನ್ನು ಎಂ.ಎ. ತರಗತಿ ಆರಂಭವಾಗಲು ಒಂದು ವಾರ ಇತ್ತು. ಮುಂಬಯಿ ಪ್ರಯಾಣಕ್ಕೆ ತಯಾರಿಯೂ ನಡೆಯಿತು. ಎಂ.ಎ.ಗೆ ಪ್ರವೇಶ ಪಡೆಯುವಲ್ಲಿ ನನ್ನ ಮಾವ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿದ್ದುದರಿಂದ ಎಲ್ಲ ತಯಾರಿ ಅವರೇ ಮಾಡಿಕೊಟ್ಟಿದ್ದರು. ಅಂತೂ ಮುಂಬಯಿಗೆ ಹೋಗುವ ದಿನ ಸಮೀಪಿಸುತ್ತಿದ್ದಂತೆ ನನಗೆ ಯಾಕೋ ಮುಂಬಯಿಗೆ ಹೋಗುವುದು ಬೇಡ ಅಂತ ಅನಿಸತೊಡಗಿತು. ಕಾರಣ ಅಮ್ಮನನ್ನು ಮತ್ತು ನಾನು ಹುಟ್ಟಿ ಬೆಳೆದ ಊರನ್ನು ಬಿಟ್ಟು ಹೋಗಲು ಮನಸ್ಸಿಲ್ಲ. ಈ ವಿಷಯವನ್ನು ಅಮ್ಮನಲ್ಲೂ ಹೇಳಿಬಿಟ್ಟೆ.ಬೇಡಮ್ಮಾ ನಾನು ಹೋಗುವುದಿಲ್ಲ, ನಿಮ್ಮನ್ನು ಬಿಟ್ಟು ಹೋಗಲು ಮನಸ್ಸಿಲ್ಲ’ ಎಂದೆ. ಪದೇ ಪದೇ ನನ್ನನ್ನು ಪೀಡಿಸುತ್ತಿದ್ದೀ ಈಗ ಏನಾಯಿತು ಅಂತ ಅಮ್ಮನ ಪ್ರಶ್ನೆ. ನನ್ನನ್ನು ಮುಂಬಯಿಗೆ ಕಳುಹಿಸಲು ಅಮ್ಮನಿಗೂ ಮನಸ್ಸಿರಲಿಲ್ಲ. ನಾನು ಹಠ ಹಿಡಿದಿದ್ದರಿಂದ ಹೋಗು ಅಂತ ಒಲ್ಲದ ಮನಸ್ಸಿನಿಂದ ಹೇಳಿದ್ದರು ಅಷ್ಟೆ.

ಮುಂಬಯಿಗೆ ಹೋಗುವ ಮುಂಚಿನ ದಿನ ನಿದ್ದೆ ನನ್ನ ಬಳಿ ಸುಳಿಯಲೇ ಇಲ್ಲ. ನಮ್ಮ ಸಂಬಂಧಿಕರೊಬ್ಬರು ಮುಂಬಯಿಗೆ ಹೋಗುವವರಿದ್ದರು ಅವರ ಜೊತೆ ನಾನು ಹೋಗುವುದು ಎಂದು ಮೊದಲೇ ನಿರ್ಧಾರವಾಗಿ ಬಸ್ಸಿನ ಟಿಕೇಟು ತೆಗೆದೂ ಆಗಿತ್ತು. ಇನ್ನೇನು ಮಾಡುವುದು ಹೊರಡಲೇ ಬೇಕಲ್ಲ ಎಂದು ಒಲ್ಲದ ಮನಸ್ಸಿನಿಂದ ಹೊರಟೆ. ಬಸ್ಸಿನಲ್ಲಿ ಮುಂಬಯಿಗೆ ಹೋಗುವ ದಾರಿಯುದ್ದಕ್ಕೂ ಬೇರೆ ಯಾವ ವಿಚಾರವೂ ಮನಸ್ಸಿಗೆ ಬರದೆ ಅಮ್ಮನ ನೆನಪಿನೊಂದಿಗೆ ಊರಿನ ನೆನಪು ಕಾಡುತ್ತಿತ್ತು. ನಾನೇಕೆ ಈ ರೀತಿ ಹಠ ಹಿಡಿದೆ, ಹೀಗೆ ಮಾಡಬಾರದಿತ್ತು ಅಂತ ಬಾರಿಬಾರಿಗೂ ಮನಸ್ಸು ಹೇಳುತ್ತಿತ್ತು. ಅಂತೂ ಮುಂಬಯಿ ತಲುಪಿದೆ.
ಮುಂಬಯಿಯ ಜನನಿಬಿಡ ಪ್ರದೇಶ, ದೊಡ್ಡ ದೊಡ್ಡ ಕಟ್ಟಡಗಳು, ಇಲ್ಲಿನ ಬಸ್ಸು, ರೈಲು ಓಡಾಟ, ನೂಕುನುಗ್ಗಲು ಯಾಂತ್ರಿಕ ಬದುಕು, ಅಯ್ಯೋ ಬೇಡಪ್ಪಾ ಈ ಮುಂಬಯಿ’ ಅಂತ ಅನಿಸಿತು. ನಾನು ಇಲ್ಲಿ ಹೊಂದಿಕೊಳ್ಳಬಲ್ಲೆನೇ, ಊರಲ್ಲಾದರೆ ಗಿಡ, ಮರ, ಗದ್ದೆ ಅಲ್ಲಿನ ಓಡಾಟ ತುಂಬಾ ಖುಷಿಯ ವಾತಾವರಣವಿದ್ದು ಇಲ್ಲಿ ಬರೀ ಯಾಂತ್ರಿಕ ಬದುಕು. ಆಗ ಮೊಬೈಲ್ ಇಲ್ಲದಿದ್ದುದರಿಂದ ಫೋನಿನಲ್ಲಿ ಮಾತುಕತೆ ನಡೆಯುತ್ತಿತ್ತು. ಅಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸುತ್ತಿದ್ದೆ. ಮುಂಬಯಿಯಲ್ಲಿರಲು ನನ್ನಿಂದ ಸಾಧ್ಯವಿಲ್ಲವೆಂದು ಹೇಳಿದರೆ ಅಮ್ಮ ಮತ್ತೆ ಹೋದದ್ದೇಕೆ ಎಂದು ಬೈಯುವರೆಂದು ಸುಮ್ಮನಿರುತ್ತಿದ್ದೆ. ಅಮ್ಮನಿಗೆ ನಾನು ಊರಿಗೆ ವಾಪಾಸು ಬರಬೇಕೆ ಎಂದು ಕೇಳಲು ಫೋನ್ ಮಾಡಿ, ಹೇಳಲು ಹೆದರಿ ಕುಶಲೋಪರಿ ಮಾತನಾಡಿ ಮತ್ತೆ ಹಾಗೇ ಫೋನ್ ಇಡುತ್ತಿದ್ದೆ.ಹೇಗೂ ಎರಡು ವರ್ಷ ಮುಂಬಯಿಯಲ್ಲಿದ್ದು ಮತ್ತೆ ನಾನು ಖಂಡಿತ ಊರಿಗೆ ಮರಳುತ್ತೇನೆ’ ಎಂದು ಮನದಲ್ಲಿ ನನ್ನನ್ನು ನಾನೇ ಸಮಾಧಾನಪಡಿಸಿಕೊಳ್ಳುತ್ತಾ ಗಟ್ಟಿ ನಿರ್ಧಾರ ಮಾಡಿಕೊಂಡೆ.

ಪ್ರಥಮವಾಗಿ ಮುಂಬಯಿ ರೈಲು ಪ್ರಯಾಣ ಮಾಡಿದ್ದೇ ನಾನು ಮುಂಬಯಿ ವಿಶ್ವವಿದ್ಯಾಲಯಕ್ಕೆ ಹೋಗಲೆಂದು. ಮುಂಬಯಿ ಬಂದ ಮೊದಲ ಎರಡು ತಿಂಗಳು ಪ್ರಯಾಣ ಸುಲಭವಾಗುವ ನಿಟ್ಟಿನಲ್ಲಿ ನಾನು ಚಿಕ್ಕಮ್ಮನ ಮನೆ ಭಾಂಡುಪ್‍ನಲ್ಲಿ ಇದ್ದೆ. ಮತ್ತೆ ನಾನು ಸ್ವಲ್ಪ ದಿನದ ಬಳಿಕ ಅಕ್ಕನ ಮನೆಯಾದ ಭಾಯಂದರ್‍ಗೆ ಹೋಗುವವಳಿದ್ದೆ. ಭಾಂಡುಪ್‍ನಿಂದ ಕಲೀನಾಕ್ಕೆ ಹೋಗಲು ಕುರ್ಲಾ ಇಳಿದು ನಂತರ ಅಲ್ಲಿಂದ ಕ್ಯಾಂಪಸ್‍ಗೆ ಹೋಗಲು ಬಸ್ಸು ಹಿಡಿಯಬೇಕಾಗಿತ್ತು. ಒಂದೆರಡು ದಿನ ನಾನು ಕರೆದುಕೊಂಡು ಹೋಗುತ್ತೇನೆ, ಮತ್ತೆ ನಿನಗೆ ಹೋಗಬಹುದು’ ಅಂತ ಮಾವ ಹೇಳಿ ಎರಡು ದಿನ ನನ್ನನ್ನು ಕರೆದುಕೊಂಡು ಹೋದರು.ರೈಲನ್ನು ಹತ್ತಿದರೆ ಸಾಕು ಇಳಿಯಬೇಕಾದರೆ ಅವರೇ ದೂಡಿ ಇಳಿಸುತ್ತಾರೆ’ ಎಂದು ಮುಂಬಯಿ ರೈಲಿನ ನಿಜಸಂಗತಿಯನ್ನು ತಮಾಷೆಯಾಗಿ ಮಾವ ರೈಲಿನಲ್ಲಿ ಪ್ರಯಾಣಿಸುವಾಗ ಹೇಳುತ್ತಿದ್ದರು. ಒಂದೆರಡು ದಿನದಲ್ಲಿ ಸಾಕಷ್ಟು ಕಲಿತುಕೊಂಡೆ. ಆದರೂ ಒಂದು ವಾರ ಮಾವನವರೇ ನನ್ನನ್ನು ಯೂನಿವರ್ಸಿಟಿಗೆ ಕರೆದುಕೊಂಡು ಹೋಗುತ್ತಿದ್ದರು. ಮತ್ತೆ ನಾನೊಬ್ಬಳೇ ಹೋಗಲು ಆರಂಭಿಸಿದೆ.
ಅಂತೂ ಎಂ.ಎ. ಮಾಡುತ್ತಿರುವಾಗ ಸಹಪಾಠಿಗಳು ಊರಿನವರೇ ಆದುದರಿಂದ ಅವರ ಪರಿಚಯ ಸಲುಗೆಗೆ ತಿರುಗಿ ಮತ್ತೆ ಅಷ್ಟೊಂದು ಊರಿನ ನೆನಪು ಕಾಡುತ್ತಿರಲಿಲ್ಲ. ಆದರೂ ಎರಡು ವರ್ಷದಲ್ಲಿ ಎರಡು ಸಲ ಊರಿಗೆ ಹೋಗಿ ಬಂದಿದ್ದೆ. ಮುಂಬಯಿ ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ಊರಿನ ವಾತಾವರಣ, ಅದರ ಜೊತೆಗೆ ನಮ್ಮ ಪ್ರಾಧ್ಯಾಪಕರು ನಮಗೆ ಬೇಕಾದ ಮಾಹಿತಿ ನೀಡಿ ಸಹಕರಿಸುತ್ತಿದ್ದರು. ಮುಂಬಯಿಯಲ್ಲಿ ಕನ್ನಡದ ಕಾರ್ಯಕ್ರಮಗಳು ಬಹಳಷ್ಟು ನಡೆಯುತ್ತಿರುವುದರಿಂದ, ಊರಿನ ಸಾಕಷ್ಟು ಮಂದಿಯ ಪರಿಚಯವಾದುದರಿಂದ ಬಳಿಕ ನನಗೆ ಮುಂಬಯಿ ಆಪ್ತವಾಗುತ್ತಾ ಬಂತು. ಇಲ್ಲಿನ ಜನದಟ್ಟಣೆ, ರೈಲು ಪ್ರಯಾಣ ಎಲ್ಲಕ್ಕೂ ಒಗ್ಗಿಕೊಂಡೆ.

ಮುಂಬಯಿ ರೈಲು ಪ್ರಯಾಣ ಅದೊಂದು ಹರಸಾಹಸವೇ ಸರಿ. ರೈಲಿನ ನೂಕು ನುಗ್ಗಲಿನಲ್ಲಿ ನಮ್ಮ ವಸ್ತುಗಳು ರೈಲಿನಿಂದ ಇಳಿದಾಗ ಅದು ಯಥಾಸ್ಥಿತಿಯಲ್ಲಿರುತ್ತದೆ ಎಂದು ಹೇಳಬರುವುದಿಲ್ಲ. ಮೊಬೈಲ್, ಪರ್ಸ್ ಕಳವು, ಒಂದೋ ನಮ್ಮ ಬ್ಯಾಗಿನ ಕೈತುಂಡಾಗಿಯೋ ಅಥವಾ ಚಪ್ಪಲಿ ತುಂಡಾಗಿ ಇಲ್ಲವೇ ನಮ್ಮ ಶಾಲು ಟ್ರೈನಿನ ಒಳಗೇ ಸಿಕ್ಕಿಕೊಳ್ಳುವುದು, ಬಟ್ಟೆ ಹರಿದುಹೋಗುವುದು ಇಂತಹ ಒಂದಿಲ್ಲೊಂದು ಪ್ರಸಂಗ ನಡೆದುಹೋಗುತ್ತದೆ. ಇದರಲ್ಲಿ ಹೆಚ್ಚಿನ ಅನುಭವ ನನಗೂ ಆಗಿದೆ. ಅದರಲ್ಲೂ ನನ್ನ ನೆನಪಿನಲ್ಲಿ ಉಳಿದ ಸಂಗತಿ ಎಂದರೆ ನನ್ನನ್ನು ಬಿಟ್ಟು ಹೋಗಲಿದ್ದ ಟೈಟನ್ ವಾಚ್. ದೂರದಲ್ಲಿ ಟ್ರೈನ್ ಬರುತ್ತಿರುವಾಗಲೆ ಫ್ಲಾಟ್‍ಫಾರ್ಮ್‍ನಲ್ಲಿ ರೈಲು ಹಿಡಿಯಲು ಯುದ್ಧಕ್ಕೆ ಸಜ್ಜಾಗುವಂತೆ ನಿಲ್ಲುವ ಪರಿ ಹೆದರಿಕೆ ಹುಟ್ಟಿಸುವಂತದ್ದು. ಬಂದ ರೈಲನ್ನು ನಾವು ಹಿಡಿಯುತ್ತೇವೆಯೋ ಇಲ್ಲವೋ ಎಂಬ ಧೈರ್ಯ ಇರುವುದಿಲ್ಲ. ಅಷ್ಟು ತುಂಬಿಕೊಂಡೇ ಬರುತ್ತದೆ. ಅಂತಹದ್ದರಲ್ಲಿ ಕಚೇರಿಗೆ ಹೋಗಲು ನಾನೂ ಎಲ್ಲರಂತೆ ಫ್ಲಾಟ್‍ಫಾರ್ಮ್‍ನಲ್ಲಿ ಮುಂದೆ ನಿಂತಿದ್ದೆ. ರೈಲು ಬಂದು ಪೂರ್ತಿ ನಿಲ್ಲುವ ಮೊದಲೇ ಕೆಲವರಂತೂ ರೈಲಿನೊಳಗೆ ಜಿಗಿದು ಆಗಿರುತ್ತದೆ. ಆದರೆ ನಾನಂತಹ ಸಾಹಸ ಮಾಡಲು ಎಂದೂ ಹೋಗಿಲ್ಲ. ಹೀಗೆ ರೈಲು ಫ್ಲಾಟ್‍ಫಾರ್ಮ್‍ಗೆ ಬಂದ ಕೂಡಲೇ ನನ್ನ ಹತ್ತಿರ ನಿಂತವಳು ಪೂರ್ತಿ ರೈಲು ನಿಲ್ಲುವ ಮೊದಲೇ ಒಳಗೆ ಜಿಗಿದುಬಿಟ್ಟಳು. ಅವಳು ರೈಲು ಹತ್ತುವ ಭರಾಟೆಯಲ್ಲಿ ನನ್ನ ಕೈಯಲ್ಲಿದ್ದ ಟೈಟನ್ ವಾಚ್‍ನ್ನು ಕೂಡ ಜೊತೆಯಲ್ಲಿ ಕೊಂಡೊಯ್ದಳು. ಅದು ಬಳೆಯಾಕಾರದ್ದಾದ್ದರಿಂದ ಅದು ನನ್ನ ಕೈಯಿಂದ ನುಸುಳಿಕೊಂಡು ಅವಳ ಜಡೆಯಲ್ಲಿ ಸಿಕ್ಕಿಕೊಂಡಿತ್ತು. ಅದಷ್ಟರಲ್ಲಿ ಅವಳ ಹಿಂದೆ ಇನ್ನಿಬ್ಬರು ಹತ್ತಿಯೂ ಆಯಿತು. ಅಯ್ಯೋ ದೇವರೆ ಇನ್ನೇನು ಮಾಡುವುದು ನನ್ನ ವಾಚ್ ಇನ್ನು ಸಿಗುವಂತಿಲ್ಲ ಎಂದುಕೊಂಡೆ. ಆದರೆ ಅಷ್ಟರಲ್ಲಿಯೇ ನಾನೂ ಆ ಟ್ರೈನ್ ಹತ್ತಿಯೇಬಿಟ್ಟೆ. ಬಚಾವಾದೆ! ಇನ್ನು ನನ್ನ ವಾಚ್ ಸಿಗಬಹುದು ಎಂದುಕೊಂಡೆ. ಆದರೆ ಆ ಹುಡುಗಿಯನ್ನು ಈ ರಶ್‍ನಲ್ಲಿ ಹುಡುಕುವುದೇಗೆ? ಹೀಗೆ ಅಂದುಕೊಂಡಾಗಲೇ ಆ ಹುಡುಗಿ ನನ್ನ ಎದುರಲ್ಲಿಯೇ ನಿಂತುಕೊಂಡಿದ್ದಳು. ಅವಳ ಕೂದಲಿನಲ್ಲಿ ಸಿಕ್ಕಿಕೊಂಡ ನನ್ನ ವಾಚ್ ನನ್ನನ್ನು ನೋಡಿ ಕರೆಯುವಂತೆ ಭಾಸವಾಯಿತು. ನೋಡಿ ಮನಸ್ಸಿಗೆ ಸಮಾಧಾನವಾಯಿತು. ಪಾಪ, ಆಕೆಗೂ ಈ ವಿಷಯ ಗೊತ್ತಿಲ್ಲ. ಅವಳಲ್ಲಿ ನನ್ನ ವಾಚ್ ನಿನ್ನ ಕೂದಲಲ್ಲಿ ಸಿಕ್ಕಿಕೊಂಡಿದೆ ತೆಗೆಯುತ್ತೇನೆ’ ಎಂದೆ.ಅಂತೂ ಈ ರೈಲು ಹತ್ತಲು ಸಿಕ್ಕಿದ್ದರಿಂದ ನನ್ನ ವಾಚ್ ನನ್ನ ಕೈಸೇರುವಂತಾಯಿತು’ ಎಂದು ನಿಟ್ಟುಸಿರು ಬಿಟ್ಟೆ. ಮುಂಬಯಿ ರೈಲು ಪ್ರವಾಸದ ಇಂತಹ ಒಂದಿಲ್ಲೊಂದು ಘಟನೆ, ಅನುಭವಗಳು ಹೆಚ್ಚಿನವರಿಗಾಗಿರಬಹುದು.
ಎಂ.ಎ. ಆದ ಕೂಡಲೇ ಮುಂಬಯಿಯಲ್ಲೇ ಪತ್ರಿಕೋದ್ಯಮದತ್ತ ಆಸಕ್ತಿ ತಾಳಿ, ಉದ್ಯೋಗಕ್ಕೂ ಸೇರಿಕೊಂಡೆ. ಬಳಿಕ ಮದುವೆಯಾಗಿ ಮುಂಬಯಿಯಲ್ಲಿ ಸಂಸಾರ ಸಾಗಿಸುತ್ತಾ ಗಟ್ಟಿತಳವೂರಿದ ನನಗೆ ತಾಯ್ನಾಡಿನಂತೆ ಮುಂಬಯಿಯೂ ಆಪ್ತವಾಗತೊಡಗಿತು. ಅಂತೂ ಮುಂಬಯಿ ಕನ್ನಡಿಗಳಾಗಿ ಬಿಟ್ಟೆ. ಊರಿಗೆ ಹೋದರೂ ಸ್ವಲ್ಪದಿನ ಇದ್ದು ಮತ್ತೆ ಮುಂಬಯಿಯತ್ತ ತೆರಳಲು ಮನಸ್ಸಾಗುತ್ತದೆ.

ಮುಂಬಯಿ ಮಾಯಾನಗರಿ. ವಾಣಿಜ್ಯ ನಗರಿಯಾದ ಮುಂಬಯಿಯಲ್ಲಿ ಇಲ್ಲಿ ಜಾತಿ, ಮತಭೇದವಿಲ್ಲ, ಎಲ್ಲ ಪ್ರಾಂತ್ಯದ ಜನರೂ ಇಲ್ಲಿ ನೆಲೆಸಿ ತಮ್ಮ ತಮ್ಮ ಉದ್ಯೋಗ, ಉದ್ದಿಮೆಗಳಲ್ಲಿ ವ್ಯಸ್ತರಾಗಿದ್ದಾರೆ. ಹೊಟ್ಟೆಪಾಡಿಗಾಗಿ ತಮ್ಮ ತಾಯ್ನೆಲವನ್ನು ಬಿಟ್ಟು ಮುಂಬಯಿ ನಗರವನ್ನು ಸೇರಿಕೊಂಡು ಒಂದಿಲ್ಲೊಂದು ಕೆಲಸ ಕಾರ್ಯಗಳನ್ನು ಮಾಡಿಕೊಂಡು ಜೀವನ ಸಾಗಿಸುವಲ್ಲಿ ಮುಂಬಯಿ ಎಲ್ಲರಿಗೂ ದಾರಿ ಕಲ್ಪಿಸಿಕೊಟ್ಟಿದೆ. ಇಲ್ಲಿನ ಸಂಘ ಸಂಸ್ಥೆಗಳು, ಇಲ್ಲಿ ನಡೆಯುವ ಕಾರ್ಯಕ್ರಮಗಳು ಒಂದೆರಡಲ್ಲ. ಇಲ್ಲಿನ ತುಳು-ಕನ್ನಡಿಗರು ತಮ್ಮನ್ನು ಬಿಡುವು ಮಾಡಿಕೊಂಡು ಸಂಘ-ಸಂಸ್ಥೆಗಳಲ್ಲಿ ಸೇರಿಕೊಂಡು ಸಮಾಜ ಸೇವೆಯನ್ನು ಮಾಡುತ್ತಾ ಬರುತ್ತಿರುವುದು, ಅಷ್ಟೇ ಅಲ್ಲದೆ ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿರುವುದು ಮೆಚ್ಚುವಂತಹ ಕಾರ್ಯ. ಹೀಗೆ ಮುಂಬಯಿ ಸೇರಿದ ಪ್ರತಿಯೊಬ್ಬರೂ ಮುಂಬಯಿ ಪ್ರೇಮಿಗಳಾಗದೇ ಇರಲಾರರು. ಅಷ್ಟು ಅಯಸ್ಕಾಂತದಂತೆ ಮುಂಬಯಿ ನಮ್ಮನ್ನು ಸೆಳೆಯುತ್ತದೆ.
ಶಿಕ್ಷಕರಾಗಿ, ಲೇಖಕರಾಗಿ, ಪತ್ರಿಕೋದ್ಯಮ, ಸಂಘ-ಸಂಸ್ಥೆ, ಹೊಟೇಲು ವ್ಯವಹಾರ ಹೀಗೆ ತಮ್ಮನ್ನು ತಾವು ವಿಭಿನ್ನ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬಹಳಷ್ಟು ಮಂದಿ ಮುಂಬಯಿಯಲ್ಲಿ ಹೆಸರುವಾಸಿಯಾಗಿದ್ದಾರೆ. ಇವೆಲ್ಲದರಲ್ಲಿ ಮುಂಬಯಿ ಪಾತ್ರ ಬಲು ದೊಡ್ಡದು. ಮುಂಬಯಿಗೆ ಹೊಟ್ಟೆಪಾಡನ್ನು ಅರಸಿಕೊಂಡು ಬಂದವರು ತಮಗೆ ಬೇಕಾದ ಕಾರ್ಯಕ್ಷೇತ್ರವನ್ನು ಅರಸಿಕೊಂಡು ಅದರಲ್ಲಿ ತಮ್ಮನ್ನು ತಾವು ಗಟ್ಟಿಗೊಳಿಸಿಕೊಂಡಿದ್ದಾರೆ. ಮುಂಬಯಿಯಲ್ಲಿ ಪಶ್ಚಿಮ, ಮಧ್ಯ, ಹಾರ್ಬರ್ ಹೀಗೆ ತನ್ನ ವಿಸ್ತಾರತೆಯಿಂದ ಆಕರ್ಷಿತ ಪ್ರದೇಶವಾಗಿ ಮೂಡಿಬಂದಿದೆ. ಇಲ್ಲಿ ನೆಲೆಸಲು ಬಂದವರು ಬಲುಬೇಗನೆ ಇಲ್ಲಿಂದ ಹಿಂತಿರುಗಲಾರರು. ಸಾಕಷ್ಟು ಮಂದಿ ತಮ್ಮ ಕಾರ್ಯಚಟುವಟಿಕೆಯಿಂದ ಜೀವನವನ್ನು ಭದ್ರವಾಗಿ ರೂಪಿಸಿಕೊಂಡು ಮಹಾರಾಷ್ಟ್ರದಲ್ಲಿ ನೆಲೆಯೂರಿರುವುದನ್ನು ಗಮನಿಸಬಹುದು. ಅಂತೂ ಬದುಕಲು ದಾರಿ ಕಲ್ಪಿಸಿಕೊಟ್ಟ ಮುಂಬಯಿ ನನಗೆ ಬಲು ಆಪ್ತವಾದ ನಗರ ಎನ್ನಲು ಅಡ್ಡಿಯಿಲ್ಲ.