ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮೈಸೂರು ಅಸೋಸಿಯೇಷನ್ – ಮುಂಬೈ ಕನ್ನಡಿಗರ ಕಣ್ಮಣಿ

ನಗರಗಳು ಬೆಳೆದಂತೆಲ್ಲಾ ಜನರು ತಮ್ಮ ಜೀವನೋಪಾಯಕ್ಕಾಗಿ ಹುಟ್ಟಿದ ಊರಿನಿಂದ ದೂರ ನೆಲೆಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ದೂರದ ಊರಿನಲ್ಲಿ ಹೇಗೆ ಬದುಕುವುದು, ನಮ್ಮವರೆಲ್ಲಾ ಈ ಊರಿನಲ್ಲಿ ಇರುವಾಗ ನಮ್ಮ ದೂರದ ಊರಿನ ಬದುಕು ಹೇಗಿರುತ್ತದೆಂಬ ಆತಂಕ ಮನೆಮಾಡುವುದು ಬಹಳ ಸಹಜವಷ್ಟೆ. ಎಲ್ಲ ಬೆಳೆದ ನಗರಗಳಲ್ಲಿ ಹಲವಾರು ಜನರು ಈ ರೀತಿಯಿಂದ ಆತಂಕದಿಂದಲೇ ನಗರಗಳಿಗೆ ಕಾಲಿಟ್ಟವರು. ಸ್ವಜನರ ಪರಿಚಯ ಮಾಡಿಕೊಂಡು ದೂರದ ಊರಿನಲ್ಲಿ ತಮ್ಮ ತವರೂರಿನ ಸಂಸ್ಕೃತಿ, ಕಲೆ, ಭಾಷೆ, ಸಾಹಿತ್ಯ ಇವೆಲ್ಲವನ್ನು ಬೆಳೆಸುವ ದಾರಿಯಲ್ಲಿ ಹಲವಾರು ಸಂಘ, ಸಂಸ್ಥೆಗಳು ವಿಶ್ವದಾದ್ಯಂತ ತಲೆಯೆತ್ತಿ ತಮ್ಮದೇ ಆದ ಕೊಡುಗೆಯನ್ನು ಸತತವಾಗಿ ನೀಡುತ್ತಾ ಬಂದಿದೆ. ಈ ರೀತಿಯ ಎಲ್ಲ ಸಂಸ್ಥೆಗಳಿಗೆ ನನ್ನದೊಂದು ಸಲಾಂ!!
ನಾನೂ ಸಹ ಬೆಂಗಳೂರಿನಿಂದ ಮುಂಬೈಗೆ ಬರುವಾಗ ಏನೋ ಹೇಗೋ ಎಂಬ ಅಳುಕಿನಿಂದಲೇ ಈ ಮಹಾನಗರಕ್ಕೆ ಕಾಲಿಟ್ಟವಳು. ವೃತ್ತಿಪರ ಜೀವನದಲ್ಲಿ ಎಲ್ಲರ ಪರಿಚಯವಿದ್ದರೂ ವೈಯಕ್ತಿಕವಾಗಿ ಮುಂಬೈನಲ್ಲಿ ಹೆಚ್ಚು ಮಂದಿಯ ಪರಿಚಯವಿರಲಿಲ್ಲ. ನಮ್ಮ ತಂದೆ, ತಾಯಿ ಮತ್ತು ಮಗಳಿಗೆ ಒಂದು ಸಾಮಾಜಿಕ ಜೀವನವನ್ನು ಒದಗಿಸಿಕೊಡಲು ಮಾತುಂಗದಲ್ಲಿರುವ ಮೈಸೂರು ಅಸೋಸಿಯೇಷನ್ ಹುಡುಕಿಕೊಂಡು ಹೋದಾಗ ಒಂದು ಹೊಸ ಜಗತ್ತೇ ಬಾಗಿಲು ತೆರೆದುಕೊಂಡಿತ್ತು. ಅಲ್ಲಿನ ಸದಸ್ಯರ ಆತ್ಮೀಯತೆ, ವಿವಿಧ ಬಗೆಯ ಕಾರ್ಯಕ್ರಮಗಳು ನನ್ನನ್ನು ಆಕರ್ಷಿಸಿ ನಾನು ಸದಸ್ಯತ್ವವನ್ನು ಪಡೆದುಕೊಂಡೆ. ಅಸೋಸಿಯೇಷನ್ ಜೊತೆಗಿನ ಒಡನಾಟ ಅಲ್ಲಿನ ಚಟುವಟಿಕೆಗಳ ಪರಿಚಯ ಮಾಡಿಕೊಟ್ಟಿತು.
ಮೈಸೂರು ಅಸೋಸಿಯೇಷನ್ ಕಥೆ ಆರಂಭವಾದದ್ದು ಫೆಬ್ರವರಿ 1926ರಲ್ಲಿ. ಮೈಸೂರು ಪ್ರಾಂತ್ಯದ ಕೆಲ ಯುವ ವೃತ್ತಿಪರ ಜನರು ಭೇಟಿಯಾಗಿ, ಮೈಸೂರಿನ ಸಂಸ್ಕೃತಿಯನ್ನು ಮುಂಬೈನಲ್ಲಿ ಬೆಳಗಿಸಲು ಒಂದು ವೇದಿಕೆಯನ್ನು ನಿರ್ಮಿಸಿದರು. ಈ ವೇದಿಕೆಗೆ ಮೊದಲ ಅಧ್ಯಕ್ಷರು ದಿವಾನ್ ಬಹಾದ್ದೂರ್ ಕೆ. ರಾಮಸ್ವಾಮಿಯವರು. ಆಗಸ್ಟ್ 15, 1926 ರಂದು ಮೈಸೂರು ಅಸೋಸಿಯೇಷನ್ ಔಪಚಾರಿಕವಾಗಿ ತಲೆ ಎತ್ತಿತು. ಮುಂಬೈ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಸುಬ್ಬರಾವ್ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ಬಾಡಿಗೆ ಕಟ್ಟಡದಲ್ಲಿ ಆರಂಭವಾದ ಸಂಸ್ಥೆ 1932 ರಲ್ಲಿ ಮಾತುಂಗದಲ್ಲಿ ಜಾಗವನ್ನು ಪಡೆದುಕೊಂಡು ನಿಧಾನವಾಗಿ ಕಟ್ಟಡ ವಿಸ್ತಾರಗೊಂಡಿತು. ಮೈಸೂರು ಮಹಾರಾಜರುಗಳಾದ ಶ್ರೀ ಕೃಷ್ಣರಾಜ ಒಡೆಯರ್ ಹಾಗೂ ಶ್ರೀ ಜಯಚಾಮರಾಜೇಂದ್ರ ಒಡೆಯರ್‍ರವರು ಅಸೋಸಿಯೇಷನ್‍ಗೆ ಸ್ಫೂರ್ತಿ ನೀಡಿ ಖುದ್ಧಾಗಿ ಭೇಟಿ ಕೂಡ ಮಾಡಿದ್ದರು. ಇದೀಗ ಮೈಸೂರು ಅಸೋಸಿಯೇಷನ್ ಮುಂಬೈಯಲ್ಲಿ ಕನ್ನಡಿಗರಿಗೆ ಕರ್ನಾಟಕದ ಸಂಸ್ಕೃತಿಯ ಸೊಗಡನ್ನು ಪಸರಿಸುತ್ತಾ, ವಿವಿಧ ಕಲೆಗಳನ್ನು ಮತ್ತು ಕಲಾವಿದರನ್ನು ಪೋಷಿಸುತ್ತಾ ಎಲ್ಲರ ನೆಚ್ಚಿನ ತವರುಮನೆಯಾಗಿ ಮಹತ್ವದ ಪಾತ್ರವನ್ನೂ, ಭೂಮಿಕೆಯನ್ನೂ ನಿಭಾಯಿಸುತ್ತಿದೆ.

ಮೈಸೂರು ಅಸೋಸಿಯೇಷನ್ ಈ 95 ವರ್ಷಗಳಲ್ಲಿ ತನ್ನದೇ ಆದ ಅಸ್ತಿತ್ವವನ್ನು ಕಟ್ಟಿಕೊಂಡಿದೆ. ಕರ್ನಾಟಕದಿಂದ ಉದ್ಯೋಗ ನಿಮಿತ್ತವಾಗಿ ಮುಂಬೈಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಕನ್ನಡಿಗರು ಬಹಳ ಜನರಿದ್ದಾರೆ. ಆರಂಭದ ದಿನಗಳಲ್ಲಿ ಇಂಜಿನಿಯರ್‍ಗಳು, ವಕೀಲರು, ವಾಸ್ತುಶಿಲ್ಪಿಗಳು, ಸಣ್ಣ ಉದ್ಯಮ ನಡೆಸುವವರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಿಂದ ಜನರು ಬರುತ್ತಿದ್ದು ನಮ್ಮ ಸದಸ್ಯರುಗಳ ಹಲವು ರೀತಿಯ ಪರಿಣ ತಿಯಿಂದ ಅಸೋಸಿಯೇಷನ್ ಚಟುವಟಿಕೆಗಳೂ ಕಾಲಕಾಲಕ್ಕೆ ತಕ್ಕಂತೆ ಮಾರ್ಪಾಡುಗೊಳ್ಳುತ್ತಾ ಬಂದಿದೆ.
ಕ್ರೀಡೆ, ಸಾಹಿತ್ಯ, ಸಂಗೀತ, ನಾಟಕ, ನೃತ್ಯ, ಧಾರ್ಮಿಕ ಕಾರ್ಯಕ್ರಮಗಳು, ಭೋಜನ ಇತ್ಯಾದಿಗಳು ಮೈಸೂರು ಅಸೋಸಿಯೇಷನ್ ಬೆಳವಣಿ ಗೆಯ ಬೆನ್ನೆಲುಬು. 1930ರಲ್ಲಿ ವಾಲಿಬಾಲ್ ಪ್ರಮುಖ ಕ್ರೀಡೆಯಾಗಿದ್ದರೆ, ನಂತರದ ದಿನಗಳಲ್ಲಿ ಬಾಸ್ಕೆಟ್ ಬಾಲ್ ಪ್ರಮುಖ ಸ್ಥಾನ ಪಡೆಯಿತು. ತದನಂತರ ಬಿಲಿಯಡ್ರ್ಸ್ ಆಟಕ್ಕೂ ಸಹ ಅಸೋಸಿಯೇಷನ್ ಹೆಸರುವಾಸಿಯಾಯಿತು. 1949, 50, 51ರಲ್ಲಿ ಮುಂಬೈ ಪ್ರಾಂತ್ಯದ ಚಾಂಪಿಯನ್ ಆಗಿ ಕೂಡ ಹೊರಹೊಮ್ಮಿತು. ಹಲವಾರು ಟ್ರೋಫಿಗಳು, ಪದಕಗಳು ಲಭ್ಯವಾದವು. 1950ರಲ್ಲಿ ಮುಂಬೈನಲ್ಲಿ ನಡೆದ ಒಲಂಪಿಕ್ಸ್‍ನಲ್ಲಿ ನಾಲ್ಕು ಸದಸ್ಯರು ಮುಂಬೈಯನ್ನು ಪ್ರತಿನಿಧಿಸಿದ್ದರು. ಟೇಬಲ್ ಟೆನಿಸ್ ಪಂದ್ಯಾವಳಿಯನ್ನು ಕೂಡ ಅಸೋಸಿಯೇಷನ್ ಆಯೋಜಿಸಿತ್ತು. ಕ್ರೀಡೆಯಲ್ಲಿ ಅಸೋಸಿಯೇಷನ್ ಬಹಳ ಹೆಸರನ್ನು ಗಳಿಸಿತ್ತು.

ಇನ್ನು ಶಿಕ್ಷಣ ಕ್ಷೇತ್ರದಲ್ಲಿಯೂ ಸಹ ಅಸೋಸಿಯೇಷನ್ ತನ್ನ ಕೊಡುಗೆಯನ್ನು ನೀಡಿದೆ. ‘ನ್ಯಾಷನಲ್ ಕನ್ನಡ ಎಜ್ಯುಕೇಷನ್ ಸೊಸೈಟಿ’ಯ ಬೆಳವಣಿಗೆಯ ಹಂತದಲ್ಲಿ ಮಹತ್ತರ ಪೋಷಕ ಪಾತ್ರವನ್ನು ನಿರ್ವಹಿಸಿತು. ಇಂದು ಈ ಶಾಲೆ ಬಹಳ ಪ್ರತಿಷ್ಠಿತ ಮಟ್ಟವನ್ನು ತಲುಪಿ ಕೆಜಿ ಯಿಂದ ಪಿಜಿ ಯವರೆಗೆ ಶಿಕ್ಷಣವನ್ನು ಒದಗಿಸುತ್ತಾ ತನ್ನ ಸೇವೆಯನ್ನು ಸಲ್ಲಿಸುತ್ತಿದೆ.
ಅಸೋಸಿಯೇಷನ್ ಆರಂಭದಿಂದಲೂ ಲಲಿತ ಕಲೆಯನ್ನು ಪೋಷಿಸುತ್ತಾ, ಪ್ರೋತ್ಸಾಹಿಸುತ್ತಾ ಬಂದಿದೆ. ಮುಂಬೈ ಆರ್ಟ್ ಸೊಸೈಟಿಯೊಂದಿಗೆ ಕೈ ಜೋಡಿಸಿ ಚಿತ್ರಕಲಾ ಪ್ರದರ್ಶನವನ್ನು ಉತ್ತಮ ಮಟ್ಟದಲ್ಲಿ ಆಯೋಜಿಸಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕಲಾವಿದರನ್ನು ಪೋಷಿಸಿದೆ. ಗಣಪತಿ ಹಬ್ಬದ ಸಂದರ್ಭದಲ್ಲಿ ಸಂಗೀತ ಹಾಗೂ ನೃತ್ಯೋತ್ಸವವನ್ನು 1946ರಿಂದ ನಡೆಸುತ್ತಾ ಬಂದಿದೆ. ಹೆಸರಾಂತ ಕಲಾವಿದರು ಹಾಗೂ ಉದಯೋನ್ಮುಖ ಕಲಾವಿದರು ಅಸೋಸಿಯೇಷನ್ ವೇದಿಕೆಯಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಲೇ ಬಂದಿದ್ದಾರೆ. ನೃತ್ಯರೂಪಕಗಳೂ, ವೈವಿಧ್ಯಮಯ ಪ್ರದರ್ಶನಗಳೂ ಇಲ್ಲಿ ನಡೆದಿದ್ದು, ಮುಂಬೈನ ಕನ್ನಡಿಗರು ಹೊರನಾಡಿನಲ್ಲಿದ್ದರೂ ನಮ್ಮ ಸಂಸ್ಕೃತಿಯ ರಸದೂಟವನ್ನು ಮನೆಯ ಬಾಗಿಲಲ್ಲೇ ಉಣಬಡಿಸಿದ ಹೆಗ್ಗಳಿಕೆ ಮೈಸೂರು ಅಸೋಸಿಯೇಷನ್ನಿನದು.

ಮೈಸೂರು ಅಸೋಸಿಯೇಷನ್ ನಲ್ಲಿ ನಡೆದ ಒಂದು ನಾಟಕದ ದ್ರಶ್ಯ

ಇನ್ನು ರಂಗಭೂಮಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳಬೇಕೆಂದರೆ ಅಸೋಸಿಯೇಷನ್ನಿನ ರಂಗ ಕಲಾವಿದರ ತಂಡ ಬಹುಶಃ ದೇಶದ ಅತಿ ಹಳೆಯ ತಂಡವೆಂದೇ ಹೇಳಬೇಕು. ನಾಟಕೋತ್ಸವ ಬಹಳವೇ ಸಡಗರದಿಂದ ನಡೆಯುತ್ತಾ ಬಂದಿದೆ. ನುರಿತ ಹೆಸರುವಾಸಿ ತಂಡಗಳು ಇಲ್ಲಿ ಬಂದು ಪ್ರದರ್ಶನ ನೀಡಿವೆ. ಸದಸ್ಯರುಗಳ ತಂಡವೂ ಹಲವಾರು ನಾಟಕಗಳನ್ನು ಪ್ರದರ್ಶಿಸಿವೆ. ತಂಡಕ್ಕೆ ನಿಯಮಿತ ಕಾಲದಲ್ಲಿ ತರಬೇತಿ, ಶಿಬಿರ, ಕಾರ್ಯಾಗಾರ ಎಲ್ಲವೂ ವಿಶಿಷ್ಟ ರೀತಿಯಲ್ಲಿ ಆಯೋಜಿಸಲ್ಪಡುತ್ತಿದೆ. ನಾಲ್ಕು ಪೀಳಿಗೆಯ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಸಂತಸದ ವಿಷಯವೇ ಸರಿ. ಇತ್ತೀಚಿನ ಕೆಲ ವರ್ಷಗಳಲ್ಲಿ ನಾಟಕ ರಚನಾ ಸ್ಪರ್ಧೆಯನ್ನೂ ಅಸೋಸಿಯೇಷನ್ ನಡೆಸುತ್ತಿದೆ. ಮರಾಠಿ ನಾಟಕಗಳೂ ಸಹ ಪ್ರದರ್ಶನಗೊಂಡು ಅಂತರರಾಜ್ಯ ಸಂಸ್ಕೃತಿ ವಿನಿಮಯ ಸಹ ಸೌಹಾರ್ದಯುತವಾಗಿ ನಡೆಯುತ್ತಿರುವುದು ನಮ್ಮ ಹೆಮ್ಮೆಯ ವಿಷಯ.
ಇದೇ ರೀತಿ ಸಂಗೀತ ಕ್ಷೇತ್ರದ ಕಾರ್ಯಕ್ರಮಗಳೂ ಸಹ ಅಸೋಸಿಯೇಷನ್ನಿನಲ್ಲಿ ವೈವಿಧ್ಯಮಯವಾಗಿ ಮೆರೆಯುತ್ತಿದೆ. ಶಾಸ್ತ್ರೀಯ ಸಂಗೀತ, ಭಾವ ಗೀತೆ ಹಾಗೂ ಸುಗಮ ಸಂಗೀತ, ದಾಸ ಜಯಂತಿ, ಜಾನಪದ ಸಂಗೀತ ಎಲ್ಲಾ ಪ್ರಕಾರಗಳೂ ಸಹ ನಮ್ಮ ಸಂಸ್ಕೃತಿಯ ಮೆರುಗನ್ನು ಹೆಚ್ಚುಗೊಳಿಸುತ್ತಿದೆ. ಬೆಳೆಯುವ ಮಕ್ಕಳಲ್ಲಿ ಸಂಗೀತದ ಒಲವು ಹೆಚ್ಚಿಸಲು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನೂ ಕೂಡ ನೀಡಲಾಗುತ್ತದೆ. ಇಷ್ಟಲ್ಲದೆ ಮುಂಬೈನ ಕಲಾವಿದರಿಗೆ ಕಲಾ ಪ್ರದರ್ಶನಕ್ಕೆ ಅವಕಾಶವನ್ನೂ ನೀಡಲಾಗುತ್ತದೆ.
ಅಸೋಸಿಯೇಷನ್ ಸಾಹಿತ್ಯ ಕ್ಷೇತ್ರದಲ್ಲಿಯೂ ಸಹ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಮುಂಬೈ ವಿಶ್ವವಿದ್ಯಾನಿಲಯದ ಜೊತೆಗೂಡಿ ದತ್ತಿ ಉಪನ್ಯಾಸವನ್ನು ಪ್ರತಿವರ್ಷ ನಡೆಸುತ್ತಾ ಬಂದಿದೆ. ಅಂತರರಾಷ್ಟ್ರೀಯ ಕವನ ಸ್ಪರ್ಧೆ, ಕಥಾ ಸ್ಪರ್ಧೆಯನ್ನೂ ಸಹ ಕಳೆದ ಕೆಲ ವರ್ಷಗಳಿಂದ ನಡೆಸುತ್ತಾ ಬಂದಿದೆ. ಈ ಸ್ಪರ್ಧೆಗಳಿಗೆ ಸ್ಪಂದನ ಎಲ್ಲೆಡೆಯಿಂದ ದೊರಕುತ್ತಿದ್ದು ಉತ್ತಮ ಮಟ್ಟದ ಸಾಹಿತ್ಯ ಪೋಷಣೆಗೆ ಪೂರಕವಾಗಿದೆ.

ಹಬ್ಬ ಹರಿದಿನಗಳಲ್ಲಿ ನಮ್ಮ ಊರನ್ನು ನಾವು ನೆನಪಿಸಿಕೊಳ್ಳುವುದು ಬಹಳ ಸಹಜ. ಮುಂಬೈನ ಸದಸ್ಯರಿಗೆ ಮುಂಬೈನಲ್ಲೇ ಸ್ವಂತ ಊರಿನ ಅನುಭವ ನೀಡಲು ಅಸೋಸಿಯೇಷನ್ ಪ್ರಮುಖ ಹಬ್ಬಗಳನ್ನು ಸದಸ್ಯರೊಂದಿಗೆ ಆಚರಿಸುತ್ತದೆ. ಶಿವರಾತ್ರಿ, ವಸಂತಹಬ್ಬ, ಗೌರಿ ಗಣೇಶ, ರಾಮನವಮಿ, ಅಕ್ಷಯ ತೃತೀಯ, ಗಣೇಶ ಜಯಂತಿ, ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಸ್ಥಾಪನಾ ದಿನ, ಕ್ರೀಡೋತ್ಸವ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಆಚರಿಸುತ್ತದೆ. ಇಂದಿಗೂ ಸಹ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಂತ ಊರನ್ನು ಇಲ್ಲಿಯೇ ಸೃಷ್ಟಿಸುತ್ತಾರೆ.
ಸದಸ್ಯರುಗಳ ಮನರಂಜನೆಗಾಗಿ ಹಲವಾರು ರೀತಿಯ ಕಾರ್ಯಕ್ರಮಗಳನ್ನೂ ಸಹ ಅಸೋಸಿಯೇಷನ್ ಆಯೋಜಿಸುತ್ತದೆ. ಪ್ರತಿ ತಿಂಗಳ ಚಟುವಟಿಕೆಗಳನ್ನೂ ಹಾಗೂ ಜ್ಞಾನಭರಿತ ಲೇಖನಗಳನ್ನೂ ‘ನೇಸರು’ ಮಾಸ ಪತ್ರಿಕೆಯ ಮೂಲಕ ಸದಸ್ಯರಿಗೆ ತಲುಪಿಸುತ್ತದೆ. ಮುಂಬೈಯಿಂದ ವಾಪಸ್ಸಾದ ಸದಸ್ಯರುಗಳಿಗೂ ಸಹ ‘ನೇಸರು’ ಅಸೋಸಿಯೇಷನ್ನಿನ ಕೊಂಡಿಯಂತೆ. ಈ ಪತ್ರಿಕೆಯನ್ನು ಹಲವಾರು ಮಂದಿ ತಮ್ಮ ಲೇಖನದ ಮೂಲಕ ಪೋಷಿಸುತ್ತಾರೆ. ಪತ್ರಿಕೆಯನ್ನು ಓದಿ ಮೆಚ್ಚುಗೆ ಸೂಸಿ ನಮ್ಮ ಶ್ರಮ ಸಾರ್ಥಕ ಎಂಬ ಭಾವನೆ ಮೂಡಿಸುವುದೂ ಸದಸ್ಯರೇ.
ಒಟ್ಟಾರೆ ಹೇಳಬೇಕೆಂದರೆ ಮೈಸೂರು ಅಸೋಸಿಯೇಷನ್ ವೈಭವಯುತವಾದ 95 ವಸಂತಗಳನ್ನು ಕಳೆದಿದೆ. ಇನ್ನೂ ಉತ್ಸಾಹದ ಚಿಲುಮೆಯಾಗಿ ಮುನ್ನೆಡೆಯುತ್ತಾ ಇದೆ. ಇಷ್ಟು ದೀರ್ಘಕಾಲ ಸಂಸ್ಥೆ ನಡೆಯಬೇಕಾದರೆ ಅದರ ಹಿಂದಿರುವ ಪರಿಶ್ರಮ ಬಹಳ ದೊಡ್ಡದು. ಆರಂಭದಿಂದ ಇಲ್ಲಿಯವರೆಗೆ ಹಲವಾರು ಮಂದಿ ತಮ್ಮ ಸೇವೆಯ ಮೂಲಕ, ತ್ಯಾಗದ ಮೂಲಕ, ಶ್ರಮದಿಂದ ದುಡಿದಿದ್ದಾರೆ. ‘ಎಂದರೋ ಮಹಾನುಭಾವಲು, ಅಂದರಿಂದೀಕು ವಂದನಮು’ ಎಂಬಂತೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಂಸ್ಥೆಯ ಏಳಿಗೆಗಾಗಿ ದುಡಿದ ಎಲ್ಲ ಮಹನೀಯರಿಗೂ ಸಾಷ್ಟಾಂಗ ಪ್ರಣಾಮಗಳು.
ಅಸೋಸಿಯೇಷನ್ ಶತಮಾನದತ್ತ ಚುರುಕಾಗಿ ಉತ್ಸಾಹದಿಂದ ಧಾಪುಗಾಲಿಡುತ್ತಿದೆ. ಮುಂಬೈನ ಕನ್ನಡಿಗರ ಕಣ್ಮಣಿ ಯಾಗಿ, ಎಲ್ಲರ ತವರೂರಾಗಿ ತನ್ನ ಸವಿಯನ್ನು ಹಂಚುತ್ತಾ, ಛವಿಯನ್ನು ಬೀರುತ್ತಾ, ತನ್ನ ಉತ್ತಮ ಕಾರ್ಯಕ್ರಮಗಳನ್ನು, ಕೆಲಸವನ್ನೂ ಹತ್ತು ಹಲವಾರು ಶತಮಾನಗಳ ಕಾಲ ಮುಂದುವರೆಸುತ್ತದೆಂದು ಆಶಿಸೋಣಿವೇ? ನಿಮ್ಮೆಲ್ಲರ ಸಹಕಾರ, ಸಹಯೋಗ ಹೀಗೆ ಸತತವಾಗಿ, ಅವಿರತವಾಗಿ ಸಾಗುತ್ತದೆಂಬ ಆಶಾಭಾವನೆಯೊಂದಿಗೆ ಬೀಳ್ಕೊಡುತ್ತಿದ್ದೇನೆ. ‘ದೋಣಿ ಸಾಗಲಿ ಮುಂದೆ ಹೋಗಲಿ……’