- ಯಕ್ಷಗಾನ ರಂಗಕ್ಕೆ ಮೆರುಗು ನೀಡಿದ ಕಲಾವಿದ ಕೊಲ್ಯಾರು ರಾಜು ಶೆಟ್ಟಿ - ಸೆಪ್ಟೆಂಬರ್ 10, 2021
ಮುಂಬೈ ಸಾಹಸಿಗರ ತಾಣ.ಇಲ್ಲಿ ಮೊದಲು ಕನ್ನಡವನ್ನು ಬಿತ್ತಿ ಬೆಳೆದವರು ಹೋಟೆಲ್ ಉದ್ಯಮಿಗಳು .ದಕ್ಷಿಣ ಕನ್ನಡದವರು ತಮ್ಮ ಮತ್ತು ತಮ್ಮ ಕುಟುಂಬದ ಜೀವನ ಮಟ್ಟವನ್ನು ಸುಧಾರಿಸಲು ಹೋಟೆಲ್ ಉದ್ಯಮವನ್ನು ನಂಬಿಕೊಂಡೇ ಮುಂಬೈಗೆ ವಲಸೆ ಬಂದಿದ್ದಾರೆ .ಮುಂಬೈಯಲ್ಲಿ ಶುಚಿ ರುಚಿಯಾದ ಆಹಾರವನ್ನು ಕೊಟ್ಟು ಹಸಿದವರ ಪಾಲಿಗೆ ಅನ್ನದಾತರಾಗಿ ಕಾರ್ಯನಿರ್ವಹಿಸಿದವರು ತುಳು ಕನ್ನಡಿಗರು. ಕನ್ನಡ ಉಳಿದಿದ್ಧೆ ಹೋಟೆಲ್ ಉದ್ಯಮ ಮತ್ತು ಕರ್ನಾಟಕದಿಂದ ವಲಸೆ ಬಂದ ಪ್ರತಿಯೊಬ್ಬ ವ್ಯಕ್ತಿಯಿಂದ ಎಂಬ ಮಾತು ಸ್ವೀಕಾರಾರ್ಹವಾಗಿದೆ.೧೯೪೫ ರ ಹೊತ್ತಿನ ಆರಂಭದ ದಿನಗಳಲ್ಲಿ ಹೋಟೆಲ್ ಗಳಲ್ಲಿ ಕೆಲಸ ಮಾಡುತ್ತಾ ರಾತ್ರಿಶಾಲೆಯಲ್ಲಿ ಕಲಿತು ತಮ್ಮ ಜೀವನದಲ್ಲಿ ಮೇಲೆ ಬಂದು ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡವರು ಹೆಚ್ಚಿನವರು ಎನ್ನಬಹುದು . ಹೀಗೆ ಪರಿಶ್ರಮಿಗಳಾಗಿ ಸಾಧನೆ ಮಾಡಿದವರಲ್ಲಿ ಕೊಲ್ಯಾರು ರಾಜು ಶೆಟ್ಟಿ ಅವರೂ ಒಬ್ಬರು.
ಮುಂಬೈ ಯಕ್ಷಗಾನ ಕ್ಷೇತ್ರಕ್ಕೆ ಕೊಲ್ಯಾರು ಅವರ ಕೊಡುಗೆ ಅಪಾರವಾದದ್ದು.ಅವರು ಕೇವಲ ಯಕ್ಷಗಾನ ಕಲಾವಿದರಲ್ಲದೆ ಯಕ್ಷಗಾನದ ವಿಮರ್ಶಕ, ಸಮೀಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ .ಮುಂಬಯಿಯ ಆರಂಭದ ದಿನಗಳಲ್ಲಿ ಯಕ್ಷಗಾನದಲ್ಲಿ ತಾಳಮದ್ದಳೆಯ ಕಲಾವಿದರಾಗಿ, ಪಾತ್ರಧಾರಿಯಾಗಿ, ಅರ್ಥದಾರಿಯಾಗಿ ತಮ್ಮ ಅಭಿರುಚಿಯನ್ನು ಬೆಳೆಸಿ ಕೊಳ್ಳುತ್ತಾ ಬಂದವರು. ಕೊಲ್ಯಾರು ಅವರು ಹೋಟೆಲ್ ಉದ್ಯಮಿಯಾಗಿದ್ದು ತಮ್ಮ ಬಿಡುವಿನ ವೇಳೆಯಲ್ಲಿ ಯಕ್ಷಗಾನದ ಬಗ್ಗೆ ಇರುವ ಅನೇಕ ಪೌರಾಣಿಕ ಕೃತಿಗಳನ್ನು ಅಧ್ಯಯನ ಮಾಡಿ ಇಪ್ಪತ್ತೆರಡು ಕೃತಿಗಳನ್ನು ಗಳನ್ನು ರಚಿಸಿ, ಮುದ್ರಿಸಿ , ಪ್ರಕಟಿಸಿರುವುದು ಗಮನಾರ್ಹವಾದ ಸಂಗತಿಯಾಗಿದೆ .ಮುಂಬಯಿಯ ಯಾವುದೇ ಪ್ರದೇಶಗಳಲ್ಲಿ ಯಕ್ಷಗಾನ ಕಾರ್ಯಕ್ರಮಗಳು ನಡೆದರೂ ಸಹ ಅಲ್ಲಿಗೆ ಹೋಗಿ ಯಕ್ಷಗಾನವನ್ನು ವೀಕ್ಷಿಸಿ ಆ ಯಕ್ಷಗಾನಗಳಲಿೢ ಬರುವ ಪೌರಾಣಿಕ ಕಥೆಗಳ ಗುಣಮಟ್ಟವನ್ನು, ಕಲಾವಿದರ ನಟನೆಯನ್ನು ಕುರಿತು ಕನ್ನಡದ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಾ ಲೇಖಕರಾಗಿ ಬೆಳೆದರು.ಕಳೆದ ಆರು ದಶಕಗಳಿಂದ ಮುಂಬೈ ನಿವಾಸಿಯಾಗಿದ್ದು, ಮುಂಬಯಿಯಲ್ಲಿನ ಯಕ್ಷಗಾನದ ಬೆಳವಣಿಗೆಗೆ ಅಹರ್ನಿಶಿ ಚಿಂತಿಸುತ್ತ ಬಂದವರು ಕೊಲ್ಯಾರು ರಾಜು ಶೆಟ್ಟಿ ಯವರು.
ಮುಂಬಯಿಯಲ್ಲಿ ಯಕ್ಷಗಾನಕ್ಕೆ ವಿಶೇಷ ಮನ್ನಣೆ ದೊರೆತಿದ್ದು ನಮ್ಮ ಭಾಗ್ಯವೇ ಸರಿ . ರಾಜು ಶೆಟ್ಟಿ ಅವರು ಚಿಕ್ಕ ವಯಸ್ಸಿನಲ್ಲೇ ಮುಂಬೈಗೆ ವಲಸೆ ಬಂದು ತಮ್ಮ ಸ್ವಪ್ರಯತ್ನದಿಂದ ಯಕ್ಷಗಾನ ಕಲಾವಿದರಾಗಿ, ಕೃತಿಕಾರರಾಗಿ ಸಮಾಜದಲ್ಲಿ ಚಿರಪರಿಚಿತರಾಗಿದ್ದಾರೆ. ಕನ್ನಡದ ಪ್ರಾಚೀನ ಕಾವ್ಯಗಳಲ್ಲಿ ಅಭಿರುಚಿ, ನಾಡು ನುಡಿಯ ಬಗ್ಗೆ ಆಸಕ್ತಿ , ಚಿಕ್ಕಂದಿನಿಂದಲೇ ಬಂದ ರಂಗಭೂಮಿಯ ಬಗೆಗಿನ ಅನನ್ಯ ಪ್ರೇಮ ಹಾಗೂ ಮುಂಬಯಿಯಲ್ಲಿ ಸದಾ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಲವಲವಿಕೆಯಿಂದ ಭಾಗವಹಿಸುವ ಮೂಲಕ ಅನುಭವ ಮತ್ತು ಜ್ಞಾನವನ್ನು ಪಡೆದು ಮುಂಬಯಿಯ ಯಕ್ಷಗಾನ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡಿದವರಲ್ಲಿ ಕೊಲ್ಯಾರು ರಾಜು ಶೆಟ್ಟಿ ಯವರು ಸಹ ಒಬ್ಬರು .
ಮುಂಬಯಿ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರಾದ ಕೊಲ್ಯಾರು ಅವರು ಮೂಲತಃ ಉಡುಪಿ ಜಿಲ್ಲೆಯ ಹಿರಿಯಡ್ಕದವರು. ಇವರು ೧೯೪೪ರ ಅಗಸ್ಟ್ ನಲ್ಲಿ ಜನಿಸಿದರು.ಇವರ ಬಾಲ್ಯದ ದಿನಗಳು ಸುಖದ ಸುಪ್ಪತ್ತಿಗೆಯಾಗಿರಲಿಲ್ಲ. ತಂದೆಯನ್ನು ಬಾಲ್ಯದಲ್ಲಿಯೇ ಕಳೆದುಕೊಂಡು ತಾಯಿಯ ಮಡಿಲಿನಲ್ಲಿ ಬೆಳೆಯತೊಡಗಿದರು .ಇವರು ಬಾಲ್ಯದ ಆರು ವರ್ಷಗಳನ್ನು ಪೆರ್ಡೂರಿನಲ್ಲಿ ಕಳೆದು ನಂತರ ಕುಟುಂಬದ ಮನೆಯಾದ ಹಿರಿಯಡ್ಕಕ್ಕೆ ಬಂದು ಎರಡನೇ ತರಗತಿಗೆ ಸೇರಿದರು.ಮನೆಗೆ ಆಧಾರಸ್ತಂಭವಾಗಿದ್ದ ತಂದೆಯನ್ನು ಒoದು ವರ್ಷದ ಮಗು ಇರುವಾಗಲೇ ಕಳೆದುಕೊಂಡಿದ್ದರಿಂದ ನಾಲ್ಕನೆಯ ತರಗತಿಯಲ್ಲಿ ಉತ್ತೀರ್ಣರಾಗಿ ಶಾಲೆಯನ್ನು ಬಿಡಬೇಕಾಯಿತು.ಅವರ ತಾಯಿ ಬೇರೆಯವರ ಗದ್ದೆ ಮತ್ತು ಮನೆ ಕೆಲಸ ಮಾಡಿ ಎರಡು ಗಂಡು ಮಕ್ಕಳನ್ನು ಸಾಕುತ್ತಿದ್ದರು ಹಾಗಾಗಿ ಶಾಲೆಯನ್ನು ಕಲಿಯಲು ಅನುಕೂಲತೆ ಇಲ್ಲದೆ ಹನ್ನೊಂದನೆಯ ಪ್ರಾಯದಲ್ಲಿ ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಪುಣೆ ಯಲ್ಲಿ ಬಾಲಕಾರ್ಮಿಕನಾಗಿ ದುಡಿಯಲು ಪ್ರಾರಂಭಿಸಿದರು .ಎರಡನೇ ತರಗತಿಯಲ್ಲಿರುವಾಗಲೇ ಉತ್ತಮ ಪುಸ್ತಕಗಳನ್ನು ಮತ್ತು ಮೇಲಿನ ತರಗತಿಯ ಕನ್ನಡದ ಪಠ್ಯ ಪುಸ್ತಕಗಳನ್ನು ಹೆಚ್ಚು ಆಸಕ್ತಿಯಿಂದ ಓದುತ್ತಿದ್ದ ಕಾರಣ ಸರಸ್ವತಿ ತಾನಾಗಿ ಒಲಿದು ಬಂದಳು ಎಂದು ಹೇಳಬಹುದು .ಪುಣೆಯಲ್ಲಿ ಇರುವಾಗಲೇ ಅವರ ಕೈಗೆ ಸಿಗುತ್ತಿದ್ಧ ಚಂದಮಾಮ, ಬಾಲಮಿತ್ರ, ನವಕರ್ನಾಟಕ ದಿನಪತ್ರಿಕೆಯನ್ನು ಬಹಳ ಆಸಕ್ತಿಯಿಂದ ಓದುವ ಹವ್ಯಾಸವೂ ಹೆಚ್ಚಾಗಿ ಬೆಳೆಯಿತು. ಪುಣೆಯಲ್ಲಿ ಬಾಲ ಕಾರ್ಮಿಕನಾಗಿ ದುಡಿಯುತ್ತಿದ್ದರಿಂದ ಮರಾಠಿ ನಾಮಫಲಕದ ಅಕ್ಷರಗಳನ್ನು ಓದಲು ಪ್ರಾರಂಭಿಸಿ ಮರಾಠಿ ದಿನಪತ್ರಿಕೆಗಳನ್ನು ಸಹ ಓದಲು ಪ್ರಾರಂಭಿಸಿದರು. ಹಾಗೆಯೇ ಕನ್ನಡದ ಪ್ರಸಿದ್ಧ ಕವಿಗಳ ಎಲ್ಲ ಕೃತಿಗಳನ್ನು ಓದುತ್ತಾ ಪುಣೆಯಲ್ಲಿ ಮೂರು ವರ್ಷ ಬೆಳಿಗ್ಗೆಯಿoದ ಸಾಯಂಕಾಲದವರೆಗೂ ಕೆeವಲ ಏಳು ರುಾಪಾಯಿ ತಿಂಗಳ ಸಂಬಳಕ್ಕೆ ದುಡಿಯ ತೊಡಗಿದರು. ಮುಂಬಯಿಯಲ್ಲಿ ರಾತ್ರಿಶಾಲೆಗಳು ನಡೆಯುತ್ತವೆ , ವಿಶೇಷವಾಗಿ ಯಕ್ಷಗಾನ ಯಕ್ಷಗಾನ ಮೇಳಗಳಿವೆ ಅಲ್ಲಿ ಯಾವಾಗಲೂ ಯಕ್ಷಗಾನ ಪ್ರದರ್ಶನಗಳು ಜರುಗುತ್ತಿವೆ ಎಂಬೆಲ್ಲ ಕುತೂಹಲಕಾರಿಯಾದ ವಿಷಯಗಳನ್ನು ತಮ್ಮ ಸ್ನೇಹಿತರಿಂದ ತಿಳಿದುಕೊಂಡ ಮೇಲೆ ಅವರಿಗೆ ಪುಣೆಯಲ್ಲಿರುವ ಮನಸ್ಸೇ ಆಗಲಿಲ್ಲ ತಕ್ಷಣ ತನ್ನ ಮಿತ್ರನ ಜೊತೆಯಲ್ಲಿ ೧೯೫೮ ರಲ್ಲಿ ಮುಂಬಯಿ ಸೇರಿದರು.
ಮುಂಬೈ ಮಹಾನಗರಕ್ಕೆ ಹದಿನಾಲ್ಕುನೆe ವಯಸ್ಸಿನಲ್ಲಿ ಜೀವನದ ಹಾದಿಯನ್ನು ಅರಸಿ ಬಂದ ಕೊeಲ್ಯರು ಅವರು ಹೋಟೆಲ್ ಕಾರ್ಮಿಕನಾಗಿ ಫೋರ್ಟ್ ಪರಿಸರದಲ್ಲಿ ಕೆಲಸಕ್ಕೆ ಸೇರಿದರು .ಪೋರ್ಟ್ ನಲ್ಲಿ ತುಂಬಾ ರಾತ್ರಿಶಾಲೆಗಳು ನಡೆಯುತ್ತಿದ್ದವು ಸಾಯಂಕಾಲದ ಸಮಯ ಅರು ಗಂಟೆಗೆ ಅಲ್ಲಿನ ಎಲ್ಲಾ ರಸ್ತೆಗಳಲ್ಲಿ ರಾತ್ರಿ ಶಾಲೆಯು ವಿದ್ಯಾರ್ಥಿಗಳಿಂದ ತುಂಬಿರುತ್ತಿದ್ದರೂ ಕೂಡ ಅವರಿಗೆ ಶಾಲೆಗೆ ಹೋಗಲು ಸಮಯಾವಕಾಶ ಸಿಗದೇ ರಾತ್ರಿ ಶಾಲೆ ಕಲಿಕೆಯಿoದಲೂ ವಂಚಿತರಾದರು.ಜೀವನದ ಸುದೀರ್ಘ ಅನುಭವವನ್ನು ಹೋಟೆಲ್ ಉದ್ಯೋಗ, ಉದ್ಯಮದಲ್ಲಿ ಪಡೆದುಕೊಂಡ ಇವರಿಗೆ ಹೆಚ್ಚಿನ ಆಸಕ್ತಿ ಇದ್ದದ್ದು ಯಕ್ಷಗಾನ ಮತ್ತು ಕನ್ನಡ ಸಾಹಿತ್ಯದಲ್ಲಿ .ಇವರು ಮುಂಬೈಗೆ ಬಂದ ಹೊಸತರಲ್ಲಿ ಮುಂಬಯಿಯಲ್ಲಿ ಅನೇಕ ತಾಳಮದ್ದಲೆ ಸಂಘಗಳು ಇದ್ದವು. ನುರಿತ ಅರ್ಥದಾರಿಗಳು ಹಿರಿಯ ಕಲಾವಿದರೂ ತಮ್ಮ ತವರೂರಿನಿಂದ ಬಂದ ಅನೇಕ ಸೋದರರು ಒಟ್ಟುಗೂಡಿ ತಾಳಮದ್ದಳೆಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು .ಅವರ ತವರೂರಾದ ಹಿರಿಯಡಕ ಮತ್ತು ಪೆರ್ಡೂರು ದೇವಸ್ಥಾನಗಳಲ್ಲಿ ಯಕ್ಷಗಾನ ಮೇಳಗಳು ನಡೆಯುತ್ತಿದ್ದು, ಅಲ್ಲಿಯ ಪರಿಸರದಲ್ಲಿನ ಯಕ್ಷಗಾನ ಕಲಾವಿದರು ಮತ್ತು ಯಕ್ಷಗಾನ ಪ್ರದರ್ಶನಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ನೋಡುತ್ತಿದ್ದರು. ಅಲ್ಲದೆ ಇವರ ಮಾವನವರಾದ ಶೀನ ಶೆಟ್ಟಿ ಎಂಬುವರು ಯಕ್ಷಗಾನದ ಬಡಗುತಿಟ್ಟಿನ ಪ್ರಸಿದ್ಧ ವೇಷಧಾರಿ ಹಾಗೂ ಪೆರ್ಡೂರು ಮೇಳದ ದೀರ್ಘಕಾಲದ ಸಂಚಾಲಕರಾಗಿದ್ದು, ಅವರಿಗೆ ಸಲ್ಲುತ್ತಿದ್ದ ಗೌರವ ಆದರಗಳನ್ನು ಕಣ್ಣಾರೆ ಕಂಡ ಕೊಲ್ಯಾರು ಅವರು ತಮಗೂ ಇಂತಹ ಗೌರವಾದರಗಳನ್ನು ಪಡೆಯಲು ಕುತೂಹಲವನ್ನು ಹೊಂದಿದರು. ಹೀಗೆ ಯಕ್ಷಗಾನ ಕಲೆಗೆ ಮಾರು ಹೋಗಿದ್ದ ಕೊಲ್ಯಾರು ಅವರು ಒಬ್ಬ ಉತ್ತಮ ಅರ್ಥದಾರಿಯಾಗಬೇಕೆಂದು ಕನಸನ್ನು ಕಂಡವರು. ಆ ಕನಸನ್ನು ನನಸಾಗಿಸಿಕೊಳ್ಳಲು ಸಾಹಿತ್ಯದ ಪೌರಾಣಿಕ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಐವತ್ತರ ದಶಕದಲ್ಲಿ ಮುಂಬೈಗೆ ಬಂದ ಕೊಲ್ಯರು ಅವರು ಹೋಟೆಲ್ ಕಾರ್ಮಿಕನಾಗಿ ದುಡಿಯುತ್ತಾ, ಓದಿಗೆ ಅವಕಾಶ ಪ್ರೋತ್ಸಾಹ ದೊರೆಯದೇ ಬಯಲಾಟ, ತಾಳಮದ್ದಲೆ,ಯಕ್ಷಗಾನ ರಂಗದಂತಹ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡರು .ಪ್ರಾರಂಭದಲ್ಲಿ ಯಕ್ಷಗಾನದ ವಿಷಯಗಳನ್ನು ಕುರಿತು ವಿಮರ್ಶಿಸುತ್ತಾ ,ಟೀಕಾತ್ಮಕವಾಗಿ ಮತ್ತು ಲೋಪದೋಷಗಳನ್ನು ಸರಿಪಡಿಸುವ ದೃಷ್ಟಿಯಿಂದ ಲೇಖನಗಳನ್ನು ಉದಯವಾಣಿ ,ಕನ್ನಡಪ್ರಭ, ಮುಂಗಾರು, ಕರ್ನಾಟಕ ಮಲ್ಲ ,ಅಮೃತ ವಾರ ಪತ್ರಿಕೆಯಲ್ಲಿ ಬರೆದರು. ಯಕ್ಷಗಾನದಲ್ಲಿ ಕಂಡುಬಂದ ಆಭಾಸಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಂಡಿದ್ದನ್ನು ಕಂಡ ಹಾಗೆ ಟೀಕಾತ್ಮಕವಾಗಿ ವಿವರಿಸಿ ಬರೆದ ಲೇಖನಗಳಿಗೆ ಪ್ರತಿ ಉತ್ತರ ಬಂದಾಗ ತಮ್ಮ ಬರವಣಿಗೆಗೂ ಹೆಚ್ಚಿನ ಮಹತ್ವವಿದೆ ಎಂಬುದನ್ನು ಅರಿತು, ಸಮಾಜದ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಮಲ್ಲ ಮುಂಬಯಿ ದಿನಪತ್ರಿಕೆಯಲ್ಲಿ ನಿರಂತರ ವಿಮರ್ಶೆಯ ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು.
ಜಾನಪದ ಕ್ಷೇತ್ರದಲ್ಲಿ ಯಕ್ಷಗಾನ ಕಲೆಯು ವೈವಿಧ್ಯಮಯವಾದ ಮತ್ತು ಸರ್ವಾಂಗ ಸುಂದರ ಕಲೆಯಾಗಿದೆ.ಇಂತಹ ಕಲೆಗೆ ಸಂಬಂಧಪಟ್ಟ ಪ್ರತಿಯೊಂದು ವಿಷಯಗಳನ್ನು ಮತ್ತು ಕಲೆಯ ಬೆಳವಣಿಗೆಗೆ ನಿರಂತರ ಶ್ರಮಿಸುತ್ತಿರುವ ಹಿರಿಯ ಕಿರಿಯ ಕಲಾವಿದರ ಜೀವನ ಸಾಧನೆಯನ್ನು ಸಮಾಜ ಮುಖಕ್ಕೆ ಪರಿಚಯಿಸುತ್ತಾ ಹಲವಾರು ಲೇಖನಗಳನ್ನು ಕೂಡ ಬರೆದಿದ್ದಾರೆ.ಬರಿಗೈಯಲ್ಲಿ ಜೀವನ ನಿರ್ವಹಣೆಗೆ ಮುಂಬೈಗೆ ಬಂದ ಕರುನಾಡಿನ ಮೂಲದವರು ಹೋಟೆಲ್ ಉದ್ಯೋಗವನ್ನು ಮಾಡುತ್ತಲೇ, ತಮ್ಮ ಆಚಾರ-ವಿಚಾರ,ಸಂಸ್ಕೃತಿ, ಸಂಸ್ಕಾರ, ಯಕ್ಷಗಾನ ಕಲೆಯ ಮೇಲಿನ ಆಸಕ್ತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು, ಹೊಸ ತಲೆಮಾರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ದೃಷ್ಟಿಕೋನದಿಂದ ಸಂಘ- ಸಂಸ್ಥೆಗಳನ್ನು ಕಟ್ಟಿ ಜೀವನಕ್ಕೆ ಅವಶ್ಯಕವಾದದ್ದು ವಿದ್ಯೆ ಮತ್ತು ಹಣ ಎಂಬುದನ್ನು ಅರಿತರು.೧೯೯೧ರಲ್ಲಿ ಮಲ್ಲಿಕಾರ್ಜುನಯ್ಯನವರು ಕರ್ನಾಟಕ ಮಲ್ಲ ದಿನ ಪತ್ರಿಕೆಯನ್ನು ಪ್ರಾರಂಭಿಸಿದಾಗ ಮುಂಬೈ ಕನ್ನಡಿಗರ ಬಹುಕಾಲದ ಅವಶ್ಯಕತೆಯನ್ನು ಪೂರೈಸಿದ ಪತ್ರಿಕೆಯಲ್ಲಿ ಕೊಲ್ಯಾರು ರಾಜು ಶೆಟ್ಟಿ ಅವರು ದೀರ್ಘಕಾಲದವರೆಗೂ ಲೇಖನಗಳನ್ನು ಬರೆದರು.ಪುರಾಣದ ಕತೆಗಳನ್ನು ಸರಳ ,ಸುಲಲಿತ ವಾಗಿ ಕೃತಿಗಳನ್ನು ರಚಿಸಿದರು. ಈ ಕಲೆಯ ಮೂಲಕ ಭಾಷೆ ,ಸಂಸ್ಕೃತಿ, ಸಂಪ್ರದಾಯಗಳನ್ನು ಸತ್ಯ ಧರ್ಮವನ್ನು ಯುವ ಪೀಳಿಗೆಗೆ ಸಾರುವ ಕೆಲಸವನ್ನು ಮಾಡಿ ಮುಂಬೈ ಕನ್ನಡಿಗರಿಗೆ ಉತ್ತಮ ಲೇಖಕರೆಂದು ಚಿರಪರಿಚಿತರಾದರು.
ಕೊಲ್ಯಾರು ರಾಜು ಶೆಟ್ಟಿ ಅವರನ್ನು ಕುರಿತು ಮುಂಬಯಿಯ ಹೆಸರಾಂತ ಭಾಗವತರಾದ ಪೊಲ್ಯ ಲಕ್ಷ್ಮೀನಾರಾಯಣ ಅವರು ತಮ್ಮ ಅಭಿಪ್ರಾಯವನ್ನು ಹೀಗೆ ವ್ಯಕ್ತಪಡಿಸಿದ್ದಾರೆ .”ಯಕ್ಷಗಾನ ಸಾಹಿತ್ಯದಲ್ಲಿ ಕೊಲ್ಯಾರು ಅವರು ಸಾಕಷ್ಟು ಕೃತಿಗಳನ್ನು ರಚಿಸಿರುವುದು ಜನಜನತ. ದಣಿವರಿಯದ ಸತತ ಕಾರ್ಯನಿರತ ,ವೇಗಕ್ಲಪ್ತತೆ , ಅವಧಾನ ಎಲ್ಲರ ಬಗೆಗೆ ನಮನ ಆಸಕ್ತಿ ವೈವಿಧ್ಯ, ಒಪ್ಪಿದ ಕಾರ್ಯಕ್ಕೆ ಬದ್ಧತೆಗಳಲ್ಲಿ ಕೊಲ್ಯಾರು ಅವರು ಮಾದರಿ ವ್ಯಕ್ತಿ. ಆಡಂಬರವಿಲ್ಲದ ಸ್ನೇಹಶೀಲತೆ.ಒಮ್ಮೆ ಪರಿಚಯವಾದರೆ ಮರೆಯದ ವ್ಯಕ್ತಿತ್ವ ಅವರದು ಸದಾ ಹಸನ್ಮುಖಿ,ಹಲವಾರು ಪ್ರತಿಕೂಲತೆಗಳನ್ನು ಸಾಂಸಾರಿಕ ದುರಂತಗಳನ್ನು ಮೆಟ್ಟಿನಿಂತು ತೋರಗೊಡದೆ ನಗುನಗುತ್ತ ಬಾಳುವ ಕುಾeಲ್ಯಾರು ಅವರ ಸ್ನೇಹ ಒoದು ಒಳ್ಳೆಯ ಜೀವನ ಅನುಭವವೇ ಸರಿ. ಇವರು ಬಯಲಾಟ, ತಾಳಮದ್ದಲೆ, ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡವರು. ಮುಂಬಯಿ ಮಹಾನಗರದಲ್ಲಿ ಹಲವಾರು ಶಿಷ್ಯರಿಗೆ ಮಾರ್ಗದರ್ಶನ ನೀಡುತ್ತಿರುವ ಓರ್ವ ಸಹೃದಯಿಯಾದ ಹಿರಿಯ ಕಲಾವಿದ.ಅಮೂಲ್ಯ ಕಲಾಸಂಗ್ರಹಗಳನ್ನು ಸಂಘ ಸಂಸ್ಥೆಗಳಿಗೆ ಉದಾರವಾಗಿ ದಾನ ಮಾಡಿದ ಕೊಲ್ಯಾರು ರಾಜು ಶೆಟ್ಟಿ ಅವರದ್ದು ಕೃತಜ್ಞತೆ ಬಯಸದ ಪವಿತ್ರಾ ಸರಳ ಗುಣ ಇವರದ್ದು “ಎಂದಿದ್ದಾರೆ.
1962ರಲ್ಲಿ ಶ್ರೀಕೃಷ್ಣನ ಕೃಪೆ ಯಕ್ಷಗಾನ ಮಂಡಳಿಯು ಪ್ರಾರಂಭವದಾಗ ಬಡಗುತಿಟ್ಟಿನ ಮೇಳದ ಅತಿ ಕಿರಿಯ ವಯಸ್ಸಿನ ವ್ಯವಸ್ಥಾಪಕರಾಗಿ ಕೆಲಸ ಕೊeಲ್ಯರು ಅವರು ಮಾಡತೊಡಗಿದರು.ರಾಮದಾಸ ಪ್ರಭುಗಳಿಂದ ನಾಟ್ಯವನ್ನು ಕಲಿತ ಇವರಿಗೆ ಮುಂಬಯಿಯ ಗುರುನಾರಾಯಣ ಯಕ್ಷಗಾನ ಮಂಡಳಿ, ಜನಪ್ರಿಯ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ,ಘಾಟ್ಕೋಪರ್, ಬಂಟರ ಕಲಾ ವೇದಿಕೆ ಗೀತಾಂಬಿಕಾ ಮಂಡಳಿಗಳಲ್ಲಿ ಯಕ್ಷಗಾನ ಕಲಾವಿದನಾಗಿ ಕಾಲಿಗೆ ಗೆಜ್ಜೆಕಟ್ಟಿ ಕುಣಿಯುವ ಭಾಗ್ಯವೂ ಕೂಡ ಇವರಿಗೆ ದೊರೆಯಿತು. ಯಕ್ಷಗಾನ ಮಂಡಳಿಯ ಸಂಚಾಲಕನಾಗಿ ವೇಷಧಾರಿಯಾಗಿ ಇವರು ದುಡಿದರು.ಜೀವನದಲ್ಲಿ ಯಾವುದೇ ಪದವಿಯನ್ನು ಗಳಿಸದೇ ಇದ್ದರೂ ತಮ್ಮ ಸ್ವಪ್ರಯತ್ನದಿಂದ ಕನ್ನಡದ ಮಹಾಕಾವ್ಯಗಳಾದ ರಾಮಾಯಣ ,ಮಹಾಭಾರತ, ಭಾಗವತ ಪುರಾಣಗಳಿಂದ ಅಪಾರ ಜ್ಞಾನವನ್ನು ಗಳಿಸಿಕೊಂಡು ತಮ್ಮದೇ ಆದ ಶೈಲಿಯಲ್ಲಿ ಸರಳ ಅರ್ಥ ವಿವರಣೆಯೊಂದಿಗೆ ಸುಮಾರು ಇಪ್ಪತ್ತು ಕೃತಿಗಳನ್ನು ಬರದಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ತಾವು ಪಡೆದ ಅನುಭವಗಳನ್ನು ಮತ್ತು ಹಿರಿಯ ಕಿರಿಯ ಕಲಾವಿದರನ್ನು ಲೇಖನಗಳ ಮೂಲಕ ಸಮಾಜಕ್ಕೆ ಮುಖಕ್ಕೆ ಪರಿಚಯಿಸುತ್ತಾ ಬಂದಿದ್ದಾರೆ. ಬಾಲ್ಯದಿಂದಲೇ ಯಕ್ಷಗಾನದ ಆಕರ್ಷಣೆಯನ್ನು ಹೊಂದಿದ ಕೊಲ್ಯಾರು ಜೀವನದ ಹಲವಾರು ಸಮಸ್ಯೆ, ಕಷ್ಟ- ನಷ್ಟದ ಮಧ್ಯದಲ್ಲಿ ಸುಪ್ರಸಿದ್ಧ ಅರ್ಥದಾರಿಗಳೊoದಿಗೆ ಕಲಾವಿದರಾಗಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.ಯಕ್ಷಗಾನ ಹವ್ಯಾಸಿಗಳೊಂದಿಗೆ ನಿಕಟ ಸಂಪರ್ಕವನ್ನು ಬೆಳೆಸಿಕೊಂಡು ಅರ್ಥದಾರಿಕೆಯಲ್ಲಿ ಅವಶ್ಯಕವಾದ ಜ್ಞಾನವನ್ನು ಲವಲವಿಕೆಯಿಂದ ಪಡೆದುಕೊಂಡರು. ಹೀಗೆ ಈ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಜನಮನ್ನಣೆ ಗಳಿಸಿ, ಮುಂಬಯಿಯ ಎಲ್ಲಾ ಕಡೆ ನಡೆಯುವ ಕನ್ನಡದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಮುಂಬಯಿಯ ಹವ್ಯಾಸಿ ಯಕ್ಷಗಾನ ಕ್ಷೇತ್ರದ ಬೆಳವಣಿಗೆಗೆ ನಿರಂತರ ಶ್ರಮಿಸಿದರು.
ರಾಜು ಶೆಟ್ಟಿಯವರ ಮೊದಲ ಕಾದಂಬರಿಯಾದ “ನಮ್ಮ ತುಳುನಾಡು” ಇದು ಅವರು ಹುಟ್ಟಿ ಬೆಳೆದ ಕರಾವಳಿಯ ಮಣ್ಣನ್ನು ಕುರಿತು ಬರೆದಿದ್ದಾಗಿದೆ .ಇದು ಕೃತಿಯಾಗಿ ಹೊರಬರದೆ ಲೇಖನಮಾಲೆಯಾಗಿ ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ಜನಮನ್ನಣೆಯನ್ನು ಗಳಿಸಿತು.ಅವರ ಇನ್ನೊಂದು ಕಾದಂಬರಿಯಾದ “ಅನ್ನದಾತ” ಹೋಟೆಲ್ ಉದ್ಯಮದ ಆಧಾರದ ಮೇಲೆ ಬರೆಯಲಾಗಿದ್ದು,ಇದರಲ್ಲಿ ಹೋಟೆಲ್ ಉದ್ಯಮಿಗಳ ಜೀವನ, ಆಗು ಹೋಗುಗಳನ್ನು ಕುರಿತದ್ದಾಗಿದೆ.ಇದೂ ಕೂಡ ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ಪ್ರಕಟವಾಗಿ ಜನಪ್ರಿಯತೆಯನ್ನು ಗೊಳಿಸಿದೆ.
ಯಕ್ಷಗಾನದ ಹವ್ಯಾಸಿ ಕಲಾವಿದರಿಗೆ ಉಪಯುಕ್ತವಾಗಲಿ ಎಂಬ ಉದ್ದೇಶದಿಂದಲೇ ಅರ್ಥಸಹಿತವಾದ ಪ್ರಸಂಗಗಳನ್ನು ಕೊಲ್ಯಾರು ರಾಜು ಶೆಟ್ಟಿ ಅವರು ರಚಿಸಿದ್ದಾರೆ. ಇಪ್ಪತ್ತೆರಡು ಕೃತಿಗಳನ್ನು ರಚಿಸಿ ,ಮುದ್ರಿಸಿ ಪ್ರಕಟಿಸಿ ಮುಂಬೈನ ಕಲಾರಸಿಕರ ಮತ್ತು ಓದುಗರ ಗಮನವನ್ನು ಸೆಳೆದಿದ್ದಾರೆ.ಇವರ ಕೃತಿಗಳೆಂದರೆ
೧.ಯಕ್ಷಗಾನ ಪೀಠಿಕಾ ಸೌರಭ
೨.ಶನಿ ಶನೀಶ್ವರ ಮಹಾತ್ಮೆ ಅರ್ಥಸಹಿತ ಇದು ನಾಲ್ಕರಿಂದ ಐದು ಬಾರಿ ಪುನರ್ ಮುದ್ರಣಗೊಂಡಿದೆ.
೩. ಜೈಮಿನಿ ಭಾರತದ ಕಥಾ ಸೌರಭ ಸರಳಾನುವಾದವನ್ನು ಮಾಡಿದ್ದಾರೆ. ಏಕೆಂದರೆ ಲಕ್ಷ್ಮೀಶನ ಜೈಮಿನಿ ಭಾರತ ಕಾವ್ಯಾನುವಾದ ಕೃತಿಯು ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧ ಕೃತಿಯಾಗಿದ್ದು, ಇದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆದ್ದರಿಂದ ಕನ್ನಡ ಸಾಹಿತ್ಯಾಸಕ್ತರಿಗೆ ಮತ್ತು ಜನಸಾಮಾನ್ಯರಿಗೆ ತಿಳಿಸುವ ದೃಷ್ಟಿಕೋನದಿಂದ ಅವರು ಸರಳಾನುವಾದವನ್ನು ಮಾಡಿದ್ದಾರೆ.
೪.ವೀರೇಶ ಚರಿತೆ
೫ .ಯಕ್ಷ ಪ್ರಶ್ನಾವಳಿ
೬.ಅಮಾತ್ಯ ವಿದುರ
೭. ಹಂಸ ಸಂದೇಶ
೮.ಅಮರ ಸಿಂದೂದ್ಭವ
೯.ಸಮಗ್ರ ಭೀಷ್ಮ
೧೦.ಪೌರಾಣಿಕ ಯಕ್ಷಗಾನ ಪ್ರಸಂಗಗಳ ಮಾಲಿಕೆ
೧೧. ಶ್ರೀ ದೇವಿ ಮಹಾತ್ಮೆ
೧೨.ಶಬರಿಮಲೆ ಸ್ವಾಮಿ ಅಯ್ಯಪ್ಪ
೧೩.ಬಾಲಯೋಗಿ ಪರಮಪೂಜ್ಯ ಸದಾನಂದ ಮಹಾರಾಜರ ಜೀವನಚರಿತ್ರೆ ಹಿಂದಿಯಿಂದ ಕನ್ನಡಕ್ಕೆ ಅನುವಾದ ಮಾಡಿರುವ ಆಧ್ಯಾತ್ಮಿಕ ಕೃತಿಯಾಗಿದೆ .
೧೪ .ಇನ್ನ ಬೈಲುಗುತ್ತು ಮನೆಯ ದೈವ ದೇವರುಗಳ ಕಾರಣಿಕ ಹಾಗೂ ಮನೆತನದ ಇತಿಹಾಸ ಹೀಗೆ ಇನ್ನೂ ಮುಂತಾದ ಕೃತಿಗಳನ್ನು ರಚಿಸಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ .
ಯಕ್ಷಗಾನ ಕ್ಷೇತ್ರದಲ್ಲಿ ರಾಜು ಕೊಲ್ಯರು ಶೆಟ್ಟಿಯವರು ಮಾಡಿರುವಂತಹ ಸಾಧನೆಗಾಗಿ ಹಲವಾರು ಪ್ರಶಸ್ತಿಗಳು ಸನ್ಮಾನಗಳು ಇವರಿಗೆ ಒಲಿದು ಬಂದಿವೆ .ಸೀತಾನದಿ ಗಣಪಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ .ಕಣಂಜಾರು ಸದಾನಂದ ಶೆಟ್ಟಿ ಸ್ಮಾರಕ ಪ್ರಶಸ್ತಿ. ಯಕ್ಷರಕ್ಷಾ ಪ್ರಶಸ್ತಿ. ಯಕ್ಷಧ್ರುವ ಪ್ರಶಸ್ತಿ .ಸರ್ .ವಿಶ್ವೇಶ್ವರಯ್ಯ ಪ್ರಶಸ್ತಿ ಬೆಂಗಳೂರು. ಜಾನಪದ ಲೋಕ ಪ್ರಶಸ್ತಿ ಬೆಂಗಳೂರು. ಪ್ರೊಫೆಸರ್ ಸೀತಾರಾಮ ಶೆಟ್ಟಿ ಸ್ಮಾರಕ ಪ್ರಶಸ್ತಿ. ವೈ .ಜಿ.ಶೆಟ್ಟಿ ಸ್ಮಾರಕ ಪ್ರಶಸ್ತಿ. ಬಂಟರ ಸಂಘದಿಂದ ಬಂದಿರುವಂತದ್ದು, ಕಾಂಜೂರು ಕಲಾ ಕೇಂದ್ರ ಯಕ್ಷ ಪ್ರೇಮಿಗಳ ಸಂಘ ಡೊಂಬಿವಲಿ ಪ್ರಶಸ್ತಿಗಳು ಲಭಿಸಿವೆ .ಅಲ್ಲದೇ ಇವರ ಕಲಾಸೇವೆಯನ್ನು ಮೆಚ್ಚಿ ಯಕ್ಷ ಪ್ರೇಮಿಗಳ ಸಂಘ ಡೊಂಬಿವಲಿ ಶ್ರೀ ವೆಂಕಟೇಶ ಪೈ ಯವರ ನೇತೃತ್ವದಲ್ಲಿ ಒಂದು ಲಕ್ಷ ಕ್ಷೇಮನಿಧಿಯನ್ನು ಮತ್ತು ಶ್ರೀ ಬಾಲಕೃಷ್ಣ ಶೆಟ್ಟಿ ನೇತೃತ್ವದಲ್ಲಿ ಇಪ್ಪತ್ತೈದು ಸಾವಿರ ರೂಪಾಯಿ ನಿಧಿಯನ್ನು ನೀಡಿದ್ದಾರೆ .ಹಾಗೆ ಮುಂಬಯಿಯ ಅನೇಕ ಸಂಘ-ಸಂಸ್ಥೆಗಳಿಂದ ಸನ್ಮಾನಗಳು, ಪ್ರಶಸ್ತಿಗಳು ಇವರ ಕಲಾಪ್ರತಿಭೆಗೆ ದೊರಕಿದ್ದು, ಅವರ ಅಭಿಮಾನಿಗಳು ಅಭಿನಂದನಾ ಗ್ರಂಥವನ್ನು ಸಹ ಇವರ ಹೆಸರಿನಲ್ಲಿ ಪ್ರಕಟಿಸಿ ಯಕ್ಷಗಾನ ಸಾಧನೆಯನ್ನು ಲೋಕಮುಖಕ್ಕೆ ತಿಳಿಸಿದ್ದಾರೆ.
ಹೆಚ್ಚಿನ ಬರಹಗಳಿಗಾಗಿ
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ
ಕರ್ಪೂರಿ ಠಾಕೂರ್
ಕನ್ನಡ ನಾಟ್ಯ ರಂಗ