“ಸುಬ್ಬಣ್ಣ…ಸುಬ್ಬಣ್ಣ…” ಎಂದು ಶ್ರೀನಿವಾಸ ಕರೆಯುತ್ತ ಬಂದ. ಸುಬ್ಬಣ್ಣನ ಹದಿನಾರರ ವಯಸ್ಸಿನ ಮಗಳ ನಿರೀಕ್ಷೆಯಲ್ಲಿದ್ದವನಿಗೆ ಇಂದು ಅಚ್ಚರಿ ಕಾದಿತ್ತು.
ಒಬ್ಬಳು ಹೊಸ ಹೆಂಗಸು “ಯಾರು?” ಎಂದು ಕೇಳುತ್ತ ಹೊರಬಂದಳು.
ಅರೆ…!? ಅಂಗಳದಲ್ಲಿ ನಿಂತು ಸುಬ್ಬಣ್ಣನನ್ನು ಕರೆಯುತ್ತಿದ್ದವನಿಗೆ ಒಮ್ಮೆಲೇ ಆಶ್ಚರ್ಯವೂ ಆಯಿತು. ಅನುಮಾನಗಳೂ ಹುಟ್ಟಿಕೊಂಡವು.
ಯಾರಿವಳು? ಆದರೂ ತೋರಿಸಿಕೊಳ್ಳದೆ ತನ್ನ ಎಂದಿನ ಮಂದಹಾಸದ ಮುಖಚಹರೆಯೊಂದಿಗೆ ಅವಳನ್ನು ಕೇಳಿದ.
“ಸುಬ್ಬಣ್ಣ ಎಲ್ಲಿ?”
“ರೈಸ್ ಮಿಲ್ಲಿಗೆ ಹೋಗಿದ್ದಾರೆ” ಥಟ್ಟನೆ ಬಂದಿದ್ದ ಉತ್ತರದ ದನಿಯಲ್ಲಿ ಅಳುಕಿತ್ತು. ಶ್ರೀನಿವಾಸನ ಗರುಡದೃಷ್ಟಿಗೆ ಬೀಳದೇ ಇರಲಿಲ್ಲ.
“ಹೌದ!?” ಎಂದು ಅವಳ ಉತ್ತರಕ್ಕೆ ಪ್ರತಿಕ್ರಿಯಿಸಿದವನು ಅಷ್ಟಕ್ಕೇ ಮಾತು ಮುಗಿಸದೇ,”ನೀವ್ಯಾರು? ನೆಂಟರ?” ಎಂದು ಕೇಳಿದ.
ಅವಳು ಹೌದೆಂದವಳು,”ಅವರಿಂದ ಏನಾಗ್ಬೇಕಿತ್ತು?”ಎಂದು ವಿಷಯ ಬದಲಿಸಿಬಿಟ್ಟಳು.
ಅವನದಕ್ಕೆ ಏನೂ ಇಲ್ಲವೆಂದು,”ಸುಬ್ಬಣ್ಣ ಬಂದ್ಮೇಲೆ ಸೀನ ಬಂದಿದ್ದ ಅಂತ್ಹೇಳಿ. ಅವನಿಗೆ ಗೊತ್ತಾಗುತ್ತೆ” ಎಂದು ತಿರುಗಿ ಅಂಗಳ ದಾಟಿ ಕಾಲು ದಾರಿಯಲ್ಲಿ ಅವಳನ್ನು ನೋಡಿದಾಗ ಹುಟ್ಟಿಕೊಂಡ ಅನುಮಾನಗಳ ಜೊತೆ ನಡೆಯಲಾರಂಭಿಸಿದ.
ಅವಳು ಅವನು ಹೋದ ದಾರಿಯನ್ನೇ ನೋಡಿ ಬಾಗಿಲು ಹಾಕಿ ಅಡುಗೆ ಮನೆಗೆ ನಡೆದಳು.
ಅರ್ಥವಾಗಿತ್ತು.
ಕಥೆ ಈಗಷ್ಟೇ ಆರಂಭವಾಗಿದೆ. ಇಷ್ಟು ವರ್ಷಗಳ ಕಾಲ ನಡೆದದ್ದು ಬರೀ ಯುದ್ಧ. ಅಲ್ಲಿ ಸಾಯದೇ ಬದುಕುಳಿದು ಜೀವನವೆಂಬ ಪುಸ್ತಕವನ್ನು ಪ್ರವೇಶಿಸಿ ಕಥೆಯಾಗುವುದೇ ಗುರಿಯಾಗಿತ್ತು. ಅದನ್ನು ತಲುಪಾಗಿದೆ. ಈಗ ಪುಸ್ತಕದೊಳಗಿದ್ದೇನೆ. ಇಲ್ಲಿ ಪುಟ ತಿರುಗುತ್ತದೆ. ಪಾತ್ರಗಳು ಸಾವಿರವಿರುತ್ತವೆ. ಕಥೆ ಒಂದಕ್ಕೆ ನೂರು ನಂಟುಗಳಿರುತ್ತವೆ, ಗಂಟುಗಳಿರುತ್ತವೆ. ಇಲ್ಲಿ ಜೀವಿಸಬೇಕು. ಎಲ್ಲರೊಡನೆ ಎಲ್ಲರಂತೆ ಜೀವಿಸಬೇಕು, ಕಥೆಯಾಗಬೇಕು. ಮಾತು, ಕಷ್ಟ, ನಷ್ಟ, ಸುಖ, ದುಃಖ, ಜಗಳ, ಪ್ರೀತಿ ಎಲ್ಲವೂ ಒಂದರ ಹಿಂದೊಂದರಂತೆ ಬರುವ ಸಮುದ್ರದಲೆಗಳು ಅಪ್ಪಳಿಸಿದಾಗ ಅಪ್ಪಿಕೊಳ್ಳಬೇಕು. ಅಪ್ಪಳಿಸದಿದ್ದರೂ ದೂರದಿಂದಲೇ ನೋಡಿ ಕಣ್ತುಂಬಿಕೊಳ್ಳಬೇಕು. ಕಣ್ಣೀರ ಸ್ನಾನವೋ? ಪನ್ನೀರ ಸ್ನಾನವೋ? ಎರಡೂ ಒಂದೇಯಿಲ್ಲಿ. ಮನೆಗೆ, ಸಮಾಜಕ್ಕೆ ಗರತಿಯಾಗಿ, ಹೆಣ್ಣಾಗಿ ಬದುಕಬೇಕು, ಕಥೆಯಾಗಬೇಕು. ಇಲ್ಲಿ ಯುದ್ಧದ ಆಯ್ಕೆಯಿಲ್ಲ. ಮಾಡಬಾರದು ಎನ್ನುತ್ತ ಹೊಸದಾಗಿ ಆರಂಭವಾಗಿರುವ ಜೀವನವನ್ನು ಜೀವಿಸಲಾರಂಭಿಸಿದವಳನ್ನು ಕರೆಯುತ್ತ ವಿನುತಾ ಬಂದಳು.
“ಸೌಮ್ಯಕ್ಕ…”
ಸುಬ್ಬಣ್ಣನ ಮಗಳು, ವಯಸ್ಸು ಹದಿನಾರು. ಪರಿಚಯವಾಗಿ ಕೇವಲ ದಿನಗಳಾಗಿವೆಯಷ್ಟೇ. ಸಂಬಂಧದಲ್ಲಿ ಏನೂ ಅಲ್ಲ. ಆದರೂ ಬಾಯ್ತುಂಬ ಅಕ್ಕ ಎಂದು ಕರೆಯುತ್ತಿದ್ದಾಳೆ.
ಹೃದಯ ಸಂತೋಷದಿಂದ ತುಂಬಿ ಒಮ್ಮೆ ತನ್ನ ಹಳೆಯ ದಿನಗಳನ್ನು ಮರೆತ ಅವಳು ಅಡುಗೆ ಮನೆಯಲ್ಲಿ ಮಾಡುತ್ತಿದ್ದ ಕೆಲಸವನ್ನು ಬಿಟ್ಟು ತಿರುಗಿ ಏನೆಂದು ಕೇಳಿದಳು.
ಇದಕ್ಕೆ ವಿನುತಾ,”ಆಗ ಬಂದಿದ್ದು ಸೀನಣ್ಣನ?” ಎಂದು ಕೇಳಿದಳು.
ಇವಳು ಕೇಳಿದ್ದಕ್ಕೆ ಪ್ರತಿಯಾಗಿ ಅವಳು ಕೇಳಿದ್ದಕ್ಕೆ ಉತ್ತರಿಸಿದ ಸೌಮ್ಯ ನಡೆದ ಸಂಭಾಷಣೆಯನ್ನು ಹೇಳಿ, “ಏನಾದ್ರೂ ತಪ್ಪಾಯ್ತ?” ಎಂದು ಕೇಳಿದಳು.
ಅವಳಿಗೆ ಈಗಲೂ ಭಯವೇ.
“ತಪ್ಪೇನೂ ಆಗಿಲ್ಲ. ಆದ್ರೂ ಸ್ವಲ್ಪ ಹುಷಾರಾಗಿರ್ಬೇಕು. ಸೀನಣ್ಣ ಸ್ವಲ್ಪ ಬಾಯಿಬಡುಕ. ಒಂದಕ್ಕೆ ನಾಲ್ಕು ಸೇರಿಸಿ ಹೇಳೋ ಜಾತಿ. ಇವತ್ತು ನಮ್ಮನೇಲಿ ಯಾವತ್ತೂ ನೋಡ್ದೆ ಇರೋ ಹೆಣ್ಣನ್ನ ನೋಡಿದ್ದೇನೆ. ಯಾರಿರಬಹುದು? ಅಂತ ಆಲೋಚನೆ ಮಾಡ್ತಾ ಊರಲ್ಲಿ ಉತ್ತರ ಹುಡುಕ್ತಾನೆ.”
“ಹಾಗಾದ್ರೆ ಮುಂದೆ?” ಅವಳಿಗೆ ತನ್ನ ಹೆಸರು ಹಾಳಾಗುತ್ತದೆ ಎನ್ನುವುದಕ್ಕಿಂತ ಸುಬ್ಬಣ್ಣನವರ ಹೆಸರು ಹಾಳಾಗುವುದಲ್ಲ ಎಂಬ ಆತಂಕ.
ಆದರೆ ವಿನುತಾಗೆ ಆ ಚಿಂತೆಯಿರಲಿಲ್ಲ. ಸೀನಣ್ಣ ಕುತೂಹಲ, ಅನುಮಾನಗಳಿಂದ ಒಂದಿಷ್ಟು ದಿನ ಊರಲ್ಲಿ ಚರ್ಚೆಯಾದರೂ ಹೆಚ್ಚು ತೊಂದರೆಯಾಗುವುದಿಲ್ಲ ಎಂದು ಸೌಮ್ಯನಿಗೂ ಧೈರ್ಯ ಹೇಳಿದ ಅವಳು,”ನಾನು ಮೆತ್ತಿಲಿರ್ತೇನೆ” ಎಂದು ನಡೆದಳು.
ವಿನುತಾ ಆಡಿದ ಮಾತೇ ಅವಳ ಭಯವನ್ನು ಚೂರು ದೂರ ಮಾಡಿತಾದರೂ ಪುರುಷ ಸಮಾಜದ ಅಹಂಕಾರವನ್ನು ಅತ್ಯಂತ ಸಮೀಪದಿಂದ ನೋಡಿದವಳಿಗೆ ಅ ಧೈರ್ಯವೂ ಹೆಚ್ಚು ಹೊತ್ತು ಉಳಿಯಲಿಲ್ಲ.
ನನ್ನಿಂದಾಗಿ ಸುಬ್ಬಣ್ಣನವರ ಮರ್ಯಾದೆ ಹರಾಜಾಗಬಾರದು. ಹಾಗೊಂದು ವೇಳೆ ಅಂತಹ ಸ್ಥಿತಿ ಬಂದರೆ ಮೊದಲು ಇಲ್ಲಿಂದ ಜಾಗ ಖಾಲಿ ಮಾಡಬೇಕೆಂದುಕೊಂಡ ಅವಳು ಅದೇ ಭಯದಲ್ಲಿ ಅಡುಗೆ ಮನೆಯ ಒಲೆ ಉರಿಸಿದಳು.
ಉಫ್…ಅಷ್ಟೊತ್ತಿಗೆ ಊರಿನಿಂದ ಪೇಟೆಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಕಾಮತರ ಅಂಗಡಿಯಲ್ಲಿ ಅವರು ಕರೆಂಟ್ ಬಂತೆಂದು ಅಂಗಡಿಯೊಳಗೆ ಹಚ್ಚಿದ್ದ ಚಿಮಣಿ ದೀಪವನ್ನು ಗಾಳಿಯೂದಿ ಆರಿಸಿದ್ದರು.
ಅದೇ ವೇಳೆಗೆ ಅಂಗಡಿಗೆ ಗಂಗಯ್ಯ ಶೆಟ್ಟಿ ಕವಳ ಜಗಿಯುತ್ತ ಕಂಕುಳಲ್ಲಿ ಒಂದು ಕೈಚೀಲ ಸಿಕ್ಕಿಸಿಕೊಂಡು ಉಟ್ಟಿದ್ದ ಲುಂಗಿಯನ್ನು ಎತ್ತಿ ಕಟ್ಟಿಕೊಳ್ಳುತ್ತ ಬಂದರು.
“ಕಾಮತರೇ” ಅದೇ ಯಾವತ್ತಿನ ಕೂಗು.
ಕಾಮತರ ಮೊಗದಲ್ಲಿ ಚೆಂಡು ಹೂ ಶೆಟ್ಟಿಯನ್ನು ಕಂಡ ತಕ್ಷಣ.
“ಓ ಶೆಟ್ರು ಬರ್ಬೇಕು ಬರ್ಬೇಕು. ತುಂಬಾ ದಿನ ಆಗೋಯ್ತು ಈ ಕಡೆ ಬರದೇ. ನಾನು ನಮ್ಮ ಶೆಟ್ರಿಗೆ ಈ ಬಡ ಕಾಮತರ ಅಂಗಡಿ ಎಲ್ಲಿ ಮರ್ತೇ ಹೋಯ್ತೇನೊ? ಅಂದ್ಕೊಳ್ತಿದ್ದೆ. ಅಷ್ಟರಲ್ಲಿ ನೀವು ಬಂದ್ಬಿಟ್ರಿ ನೋಡಿ.” ಎಂದು ಸ್ವಾಗತಿಸಿದ ಕಾಮತರು ನಂತರದಲ್ಲಿ ಅನೇಕ ನಿಮಿಷಗಳ ಕಾಲ ಗಂಗಯ್ಯ ಶೆಟ್ಟರಿಗೆ ಬೇಕಾದ ಸಾಮಾನುಗಳನ್ನು ಕಟ್ಟಿಕೊಡುತ್ತ ಅವರ ಜೊತೆ ಲೋಕಾರೂಢಿಯಾಗಿ ಮಾತನಾಡುತ್ತಿರುವಾಗ ಥಟ್ಟನೆ ಒಂದು ವಿಷಯ ಕೇಳಿದರು.
“ಶೆಟ್ರೇ ಸುಬ್ಬಣ್ಣೋರ ಮನೇಲಿ ಏನಾದ್ರೂ ವಿಶೇಷ ಇದ್ಯಾ?”
ಶೆಟ್ಟರಿಂದಲೂ ಥಟ್ಟನೆ ಉತ್ತರ ಬಂದಿತು.
“ಇಲ್ಲ.”
“ಓ ಹೌದಾ?” ಎಂದು ಕಾಮತರು ಯೋಚಿಸುತ್ತ ಆ ಸಂಭಾಷಣೆಯನ್ನು ನಿಲ್ಲಿಸುತ್ತಿದ್ದರೆ ಶೆಟ್ಟರು ಅವರ ಯೋಚನೆಯನ್ನು ಗಮನಿಸಿ,”ಯಾಕೆ?” ಎಂದು ಸಹಜವಾಗಿ ಕೇಳಿದರು.
ಆಗ ಕಾಮತರು ತಡೆಯಲಾರದೇ ಎರಡು ದಿನಗಳ ಹಿಂದೆ ಸಂಜೆಯ ಸಮಯದಲ್ಲಿ ತಾವು ನೋಡಿದ್ದನ್ನು ಪಟಪಟನೆ ಶೆಟ್ಟರೆದುರು ಉದುರಿಸಿಬಿಟ್ಟರು.
ಒಂದು ರಿಕ್ಷಾ ಕಾಮತರ ಅಂಗಡಿಯ ಪಕ್ಕದ ರಸ್ತೆಯಲ್ಲಿ ಬಂದು ನಿಂತಾಗ ಸಮಯವಿನ್ನೂ ಸಂಜೆ ಆರೂವರೆ. ಕಾಮತರ ಅಂಗಡಿಯಲ್ಲಿ ಯಾವಾಗಲೂ ಇರುವಂತೆ ನಿರ್ಜನವೇ. ಅಂಗಡಿಯ ದೀಪ ಹಾಕಿತ್ತು. ಗೋಡೆಯಲ್ಲಿ ಸಣ್ಣ ಟಿವಿಯಲ್ಲಿ ವಾರ್ತೆಯೊಂದು ಬಿತ್ತರವಾಗುತ್ತಿತ್ತು. ಕಾಮತರ ದೃಷ್ಟಿ ಟಿವಿಯ ಮೇಲಿದ್ದರೂ ರಿಕ್ಷಾದ ಶಬ್ದ ಅವರ ಗಮನವನ್ನು ಅತ್ತ ಸೆಳೆದಿತ್ತು. ಎದ್ದು ಬಗ್ಗಿ ನೋಡಲಿಲ್ಲ ಯಾರೆಂದು. ಸುಮ್ಮನೆ ಕುತ್ತಿಗೆ ಉದ್ದ ಮಾಡಿದರಷ್ಟೇ. ಊರಿನ ಸುರಮನೆಯ ಸುಬ್ಬಣ್ಣ ಒಬ್ಬಳು ಹೆಂಗಸಿನೊಂದಿಗೆ ಒಂದು ಬ್ಯಾಗಿನೊಂದಿಗೆ ಇಳಿದಿದ್ದ.
ಅರೇ!?
ಕಾಮತರಿಗೆ ಆಶ್ಚರ್ಯ.
ಸುರಮನೆಯ ಸುಬ್ಬಣ್ಣನಿಗೆ ಹೆಂಡತಿಯಿಲ್ಲ. ಆ ಹೆಂಡತಿಗೆ ಅಕ್ಕ-ತಂಗಿ ಯಾರೂ ಇಲ್ಲ. ಇನ್ನು ಸುಬ್ಬಣ್ಣನಿಗೆ ಇರುವ ಕುಟುಂಬವೆಂದರೆ ಅವನ ಮಗಳೊಬ್ಬಳು ಮಾತ್ರ. ಹೆತ್ತವರು ತೀರಿಕೊಂಡಿದ್ದಾರೆ. ಅಣ್ಣ-ತಮ್ಮ, ಅಕ್ಕ-ತಂಗಿಯೆಂದು ಇರುವವರು ಸೊನ್ನೆ. ಸುಬ್ಬಣ್ಣನ ಜನ್ಮದ ಸಮಯದಲ್ಲಿ ಕಾಮತರಿನ್ನೂ ಹದಿಹರೆಯದ ಪ್ರಾಯದಲ್ಲಿರುವಾಗ ಊರಿನಲ್ಲಿ ಹೆಂಗಸರು ಆಡುತ್ತಿದ್ದ ಸುರಮನೆಯ ಕಥೆಯನ್ನು ಆಲಿಸಿ ಕಂಠಪಾಠ ಮಾಡಿಕೊಂಡಿದ್ದಾರೆ. ಗೊತ್ತಿದೆ. ಬಯಸಿ ಬಯಸಿ ಕಷ್ಟಪಟ್ಟು, ಪೂಜೆ-ವ್ರತಗಳನ್ನು ಮಾಡಿ ಹಡೆದ ಗಂಡುಮಗ ಸುಬ್ಬಣ್ಣ. ಹೀಗಿರುವಾಗ ಸುಬ್ಬಣ್ಣನ ಜೊತೆ ಇರುವ ಹೆಂಗಸು ಯಾರು? ಮೊದಲು ಯೋಚಿಸಿದರಾದರೂ ಆನಂತರ ಯಾರೋ ನೆಂಟರೆಂದು ಸುಮ್ಮನಾದರು. ಸುಬ್ಬಣ್ಣ ರಿಕ್ಷಾದವನಿಗೆ ಹಣ ಕೊಟ್ಟ ಬಳಿಕ ಅಂಗಡಿಯ ಕಡೆ ಬರಲಿಲ್ಲ. ಅವಳನ್ನು ಕರೆದುಕೊಂಡು ಮನೆಯ ದಾರಿ ಹಿಡಿದ.
ಗಂಗಯ್ಯ ಶೆಟ್ಟರು ಆಲೋಚಿಸಿದರು. ಅವರಿಗೆ ಏನೆಂದರೆ ಏನೂ ಗೊತ್ತಿಲ್ಲ.
“ನಾನು ಯಾರನ್ನೂ ನೋಡಿಲ್ಲ. ನಮ್ಮನೇಲೂ ಯಾರೂ ಯಾರನ್ನೂ ನೋಡಿಲ್ಲ. ಬಹುಶಃ ಬಂದವರು ಹಾಗೇ ಹೋದ್ರೇನೋ?” ಎಂದು ಕಾಮತರಿಗೆ ಕೊಡಬೇಕಾದ ನಗದನ್ನು ಕೊಟ್ಟು ಚೀಲವನ್ನು ಪಡೆದು ಸ್ನೇಹದ ನಗುವನ್ನು ಮತ್ತೆ ಕೊಟ್ಟು ತಿರುಗಿ ಊರೊಳಗೆ ನಡೆದಾಗ ಸದಾನಂದ ಗಡಿಬಿಡಿಯಲ್ಲಿ ತಲೆಕೆಡಿಸಿಕೊಂಡು ಕಾಮತರ ಅಂಗಡಿಗೇ ಬರುತ್ತಿದ್ದ. ಅವನನ್ನು ಯಾವುದೋ ಗಂಭೀರವಾದ ವಿಷಯ ಕಾಡುತ್ತಿತ್ತು. ಗಂಗಯ್ಯ ಶೆಟ್ಟರು ಅವನನ್ನು ಕಂಡ ಕೂಡಲೇ,”ಸದಾನಂದ, ಈ ಹೊತ್ತಲ್ಲಿ ಯಾವ್ಕಡೆಗೊ?” ಎಂದು ದೋಸ್ತಿಯ ಸಲಿಗೆಯಲ್ಲಿ ಕೇಳಿದರೆ ಅವನು ಕಿವುಡನಾಗಿ ಅಂಗಡಿಗೆ ಬಂದು,”ಕಾಮತರೇ, ಒಂದು ಸಿಗರೇಟ್ ಪ್ಯಾಕ್ ಕೊಡಿ” ಎಂದ.
ಶೆಟ್ಟರು ಒಮ್ಮೆ ತಿರುಗಿ ನೋಡಿ ಏನೋ ಎಂಬಂತೆ ಹಾಗೆಯೇ ಮನೆಗೆ ನಡೆದರೆ ಕಾಮತರು ಅವನನ್ನೇ ಅಚ್ಚರಿಯಿಂದ ನೋಡುತ್ತ ಸಿಗರೇಟ್ ಪ್ಯಾಕ್ ಜೊತೆ ಲೈಟರನ್ನೂ ಕೊಟ್ಟು,”ಏನಾಯ್ತು?” ಎಂದು ಕೇಳಿದರು.
ಸದಾನಂದ ತಕ್ಷಣ ಏನೂ ಹೇಳಲಿಲ್ಲ. ಅವನಿಗೆ ಹೇಳುವುದಕ್ಕಿಂತ ಹೆಚ್ಚು ತಣ್ಣಗೆ ಆಲೋಚಿಸುವುದು ಬೇಕಾಗಿತ್ತು. ಹೀಗಾಗಿ ಕಾಮತರು ಕೇಳಿದ್ದಕ್ಕೆಯೂ ಕಿವುಡನಾಗಿ ಅಂಗಡಿಯ ಚೇಟಿಯಲ್ಲಿ ಕುಳಿತು ಒಂದು ಸಿಗರೇಟ್ ಖಾಲಿಯಾಗುವವರೆಗೂ ತನ್ನದೇ ಆಲೋಚನೆಗಳಲ್ಲಿ ಮುಳುಗಿದವನು ಅನಂತರ ಅವರ ಪ್ರಶ್ನೆಗೆ ಉತ್ತರಿಸಿದ.
“ಸುಬ್ಬಣ್ಣ ಎರಡನೇ ಮದ್ವೆ ಆದ”.
***
ಹೆಂಡತಿಯೇ…ಸೌಮ್ಯ ಸುಬ್ಬಣ್ಣನ ಎರಡನೆಯ ಹೆಂಡತಿಯಲ್ಲದೇ ಬೇರಾರೂ ಆಗಿರಲು ಸಾಧ್ಯವೇ ಇಲ್ಲ.
ಶ್ರೀನಿವಾಸನ ತಲೆಯಲ್ಲಿ ಓಡಿದ ಆಲೋಚನೆಯೇ ಒಂದು, ಸದಾನಂದನ ತಲೆಯಲ್ಲಿ ಹೊಕ್ಕ ಮಾತೇ ಇನ್ನೊಂದು. ಒಬ್ಬ ಗಂಡು ಅದೂ ಅಪರಿಚಿತ ಹೆಣ್ಣೊಬ್ಬಳು ಅಲ್ಲಲ್ಲ, ಹೆಂಗಸನ್ನು ಏಕೆ ಮನೆಗೆ ಕರೆದುಕೊಂಡು ಬರುತ್ತಾನೆ? ಸದಾನಂದ ತನ್ನೊಳಗೆ ಅನೇಕ ಬಾರಿ ಕೇಳಿಕೊಂಡಿದ್ದ.
ಸುಬ್ಬಣ್ಣನ ಮನೆಯಿಂದ ಹೊರಟಾಗ ಶ್ರೀನಿವಾಸನ ತಲೆಯಲ್ಲಿದ್ದದ್ದು ಆ ಹೆಣ್ಣು ಮಾತ್ರವಾಗಿತ್ತು. ಆ ಹೆಣ್ಣನ್ನು ಹೊರತುಪಡಿಸಿದರೆ ಅವಳ ಕುರಿತಾಗಿ ಅವಳಿಗೂ ಸುಬ್ಬಣ್ಣನಿಗೂ ಇರುವ ಸಂಬಂಧದ ಕುರಿತಾಗಿ ಅಷ್ಟಾಗಿ ಆಲೋಚಿಸಿರಲಿಲ್ಲ. ಹಾಗಂದ ಮಾತ್ರಕ್ಕೆ ಅವನ ತಲೆಯಲ್ಲಿ ಆ ಆಲೋಚನೆ ಓಡದೇ ಇರಲಿಲ್ಲ. ಅನುಮಾನಗಳನ್ನು ತನ್ನಲ್ಲಿಯೇ ಇಟ್ಟುಕೊಂಡಿದ್ದನೇ ಹೊರತು ಎದುರಿಗಿರುವ ವ್ಯಕ್ತಿಗೆ ಹರಡಿ ಪರಿಸರವನ್ನು ಹಾಳು ಮಾಡಿರಲಿಲ್ಲ. ಅವನಿಗೆ ಸುಬ್ಬಣ್ಣನ ಮೇಲಿನ ಕಾಳಜಿಗಿಂತ ಹೆಚ್ಚಾಗಿ ತಾನು ನೋಡಿದ ಹೆಣ್ಣಿನ ಮೇಲೆ ಗೌರವದ ಭಾವ ಇವನ ಪ್ರಯತ್ನವಿಲ್ಲದೇ ಹುಟ್ಟಿಕೊಂಡಿತ್ತು.
ಆಕರ್ಷಣೆಯೇ? ಅವನು ಕೇಳಲಿಲ್ಲ.
ಎದುರಿಗೆ ಸದಾನಂದ ಸಿಕ್ಕು,”ಏ ಸೀನ ಯಾಕೆ ಆಕಾಶ ಕಳಚಿ ಬಿದ್ದಿರೋ ಹಾಗೆ ಬರ್ತಿದ್ದೀಯ? ಏನಾಯ್ತು? ಎಲ್ಲಿಗ್ಹೋಗಿದ್ದೆ?” ಎಂದು ಕೇಳಿದಾಗ,”ಸುರಮನೆಗೆ” ಎಂದಿದ್ದ.
“ಅಲ್ಲೇನಾಯ್ತು? ಸುಬ್ಬಣ್ಣ ಮತ್ತೇನಾದ್ರೂ ಸಿಟ್ಟಾದ್ನ?”
“ಇಲ್ಲ” ಎಂದನಷ್ಟೆ.
“ಹಾಗಾದ್ರೆ ಮತ್ತೇನಾಯ್ತು?” ಸದಾನಂದ ಕುಟ್ಟಿ ಕೇಳಿದ್ದ.
ಶ್ರೀನಿವಾಸ ಒಮ್ಮೆ ಹೇಳಲೋ? ಬೇಡವೋ? ಎಂದು ಆಲೋಚಿಸಿದನಾದರೂ ಇದರಲ್ಲಿ ಹೇಳುವಂಥದ್ದೇನಿದೆ? ಎಂದು ಸುಮ್ಮನಾಗಿಬಿಟ್ಟ.
ಯಾವತ್ತೂ ಹಾಗೆ ಸುಮ್ಮನಾಗುವವನಲ್ಲ. ವಿಷಯ ಏನೇ ಇರಲಿ, ವ್ಯಕ್ತಿ ಯಾರೇ ಆಗಿರಲಿ ಸಂದರ್ಭ, ಪರಿಸರ ಹೇಗೇ ಇರಲಿ ಬಾಯ ತುದಿಯಲ್ಲಿರುವ ವಿಷಯವನ್ನು ಗಂಟಲಿನಲ್ಲಿ ಇಳಿಸಿದವನಲ್ಲ. ಅವನಿಗೆ ಹಾಗೆ ಮಾಡಿ ಅಭ್ಯಾಸವಿಲ್ಲ. ಹಾಗೆ ಮಾಡಲು ಒಮ್ಮೆಯೂ ಆಲೋಚಿಸಿದವನಲ್ಲ. ಆದರಿಂದು ಅವನು ಆಲೋಚಿಸಲಿಲ್ಲ.
ಸದಾನಂದ ಕುಟ್ಟಿ ಕುಟ್ಟಿ ಕೇಳಲಾರಂಭಿಸಿದ ಕೂಡಲೇ ಹೇಳುವುದು ಬೇಡವೆಂದು ಸುಮ್ಮನಾಗಿಬಿಟ್ಟ. ನಾಲಿಗೆಯಲ್ಲಿದ್ದ ಸುಬ್ಬಣ್ಣನ ಮನೆಯ ಹೆಣ್ಣಿನ ವಿಷಯವನ್ನು ಅವನಿಗೆ ಹೇಳಲೇ ಇಲ್ಲ. ಯಾವುದೋ ಮನೆಗೆಲಸದ ಕಾರಣ ಕೊಟ್ಟು ಮುಂದೆ ನಡೆದ.
ಸದಾನಂದ ನಂಬಿ ಶ್ರೀನಿವಾಸ ಹೋದ ದಾರಿಯ ವಿರುದ್ಧ ದಿಕ್ಕಿನಲ್ಲಿ ನಡೆದು ಅದೇ ಸುರಮನೆಗೆ ಬಂದ. ಆದರೆ ಅಂಗಳದಲ್ಲಿ ನಿಂತು ಸುಬ್ಬಣ್ಣ ಎಂದು ಕೂಗಲಿಲ್ಲ.
“ಸುಬ್ಬಣ್ಣ…” ಎಂದು ಮನೆಯೊಳಗೆ ಬಂದು ಹೊಳ್ಳಿಯಲ್ಲಿದ್ದ ಕುರ್ಚಿಯಲ್ಲಿ ಕುಳಿತು ಕರೆದ.
ಅಯ್ಯೋ…ಅಡುಗೆ ಮನೆಯಲ್ಲಿದ್ದ ಸೌಮ್ಯಳಿಗೆ ಗಾಬರಿಯಾದರೆ ಅವಳಿಗಿಂತ ಹೆಚ್ಚು ಕಂಗಾಲಾದವಳು ವಿನುತಾ. ಮೆತ್ತಿಗೆ ಕುಳಿತು ಓದುತ್ತಿದ್ದವಳು ಭೂಕಂಪವೇ ಆಯಿತೇನೋ ಎಂಬಂತೆ ಕೆಳಗೋಡಿ ಬಂದು ನಗುಮೊಗದಲ್ಲಿ ಮಾತನಾಡಿದಳು.
“ನಿನ್ನಪ್ಪ ಎಲ್ಲಿ?” ಸದಾನಂದನ ಮಾತುಗಳಲ್ಲಿ ಯಾವ ಬದಲಾವಣೆಯೂ ಇರಲಿಲ್ಲ.
ಸೌಮ್ಯ ಬಾಗಿಲ ಸಂದಿಯಿಂದ ಮನೆಯ ಹೊಳ್ಳಿಯಲ್ಲಿ ಕುಳಿತಿದ್ದ ಗಂಡಸನ್ನು ನೋಡಿದಳು.
ಸುಬ್ಬಣ್ಣನವರ ವಯಸ್ಸಿನ ಒಬ್ಬ ಗಂಡಸು, ಸುರಮನೆಯ ಆಪ್ತ. ಇಷ್ಟೇ ಅವಳಿಗೆ ತಿಳಿದದ್ದು. ಉಳಿದಂತೆ ಏನೂ ಅವಳಿಗೆ ತಿಳಿಯಲಿಲ್ಲ. ಹೊರಗೆ ಹೋಗಿ ಮಾತನಾಡಲು ಅವಳು ಆಲೋಚಿಸಲಿಲ್ಲ. ವಿನುತಾ ಮಾತನಾಡಿ ಅವನಿಗೆ ತನ್ನ ಮುಖ ತೋರಿಸದೆ ಕಳುಹಿಸುತ್ತಾನೆಂದುಕೊಂಡು ಸುಮ್ಮನೆ ಒಳಗೇ ಅಡುಗೆಯಲ್ಲಿ ತೊಡಗಿದ್ದರೆ ಅವಳೇ ಒಳಗೆ ಬಂದು ಮನೆಗೆ ಬಂದವನಿಗೆ ಕುಡಿಯಲು ಏನಾದರೂ ಮಾಡಿಕೊಂಡು ಬಾ ಎಂದಳು.
ಸೌಮ್ಯಾಗೆ ಮಾಡುವುದಿಲ್ಲ ಎನ್ನುವ ಮನಸ್ಸಾದರೂ ಒಪ್ಪಿಕೊಂಡು ಆರಂಭಿಸಿದ ಜೀವನದಲ್ಲಿ ಯಾವಾಗ ಏನು ಬಂದರೂ ಎಲ್ಲದಕ್ಕೂ ಸಿದ್ಧಳಿರಬೇಕೆಂದು ಅವಳ ಮಾತಿಗೊಪ್ಪಿಕೊಂಡು ಒಂದು ಲೋಟ ಚಹ ಮಾಡಿ ಬಟ್ಟಲಿನಲ್ಲಿ ತಿನ್ನಲು ಒಂದಷ್ಟು ಬಾಳೆಕಾಯಿ ಚಿಪ್ಸುಗಳನ್ನು ತಂದು ಹೊರಗಿಟ್ಟಳು.
ಸದಾನಂದನಿಗೆ ಆಶ್ಚರ್ಯ.
ಈ ಹೆಣ್ಣು ಯಾರು? ಅಲ್ಲಲ್ಲ, ಹೆಂಗಸು!
ವಿನುತಾ ದೂರದ ಬಂಧುವೆಂದು ಸುಳ್ಳು ಹೇಳಿದಳಾದರೂ ಅವನದನ್ನು ನಂಬಲಿಲ್ಲ. ಸುರಮನೆಯ ಎಂದೆಂದೂ ಆಪ್ತನಾದ ಸದಾನಂದನಿಗೆ ಅವಳ ಮಾತಿನಲ್ಲಿ ಸುಳ್ಳು ಕಾಣಿಸದೇ ಇರಲಿಲ್ಲ. ಆದರೂ ಅವಳೆದುರು ಕೆದಕದೇ ನೇರವಾಗಿ ಸುಬ್ಬಣ್ಣನನ್ನೇ ಕೇಳೋಣವೆಂದು ಸುಮ್ಮನಾಗಿ ಅಲ್ಲಿಂದ ಬಂದುಬಿಟ್ಟ.
ಕೇಳುತ್ತಿದ್ದ ಕಾಮತರಿಗೆ ತಮ್ಮ ಕಿವಿಯನ್ನೇ ನಂಬಲಾಗುತ್ತಿರಲಿಲ್ಲ.
“ನಿಜವೇ?” ಎಂದು ಮತ್ತೆ ಮತ್ತೆ ಕೇಳಿದರು.
ಕಾಮತರ ಮಾತಿಗೆ ಸದಾನಂದ,”ನೀವು ಸುಬ್ಬಣ್ಣನ್ನೇ ಕೇಳಿ” ಎಂದು ಹೋಗಿಬಿಟ್ಟ.
ಅವರಿಗಿದ್ದ ಉತ್ಸಾಹವೆಲ್ಲ ಒಮ್ಮೆಲೇ ಇಳಿದು ಹೋದಂತಾಯಿತು. ಸದಾನಂದ ಬಂದ, ಬೆಂಕಿ ಹಚ್ಚಿದ, ಹೋದ. ಅವನಿಗೇ ಇನ್ನೂ ಸಂಪೂರ್ಣ ವಿಷಯ ಏನೆಂದು ಗೊತ್ತಿಲ್ಲ. ಆದರೂ ಕಾಮತರ ಕಿವಿಗೆ ಸುರಮನೆಯನ್ನು ಹಾಕಿ ತನಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ನಡೆದುಬಿಟ್ಟ. ಕಾಮತರು ಅವನು ಹೋದ ನಂತರದಲ್ಲಿ ಕೆಲಹೊತ್ತು ಅವನಿಗೆ ಬೈದುಕೊಂಡರೂ ಸುಬ್ಬಣ್ಣನವರ ಸವಾರಿ ಇಲ್ಲಿಗೇ ಬರುತ್ತದಲ್ಲ ಎಂದು ಆರಾಮಾಗಿ ಅಂಗಡಿಯಲ್ಲಿಯೇ ಸುಬ್ಬಣ್ಣನ ದಾರಿ ನೋಡುತ್ತ ಉಳಿದರೆ ಮನೆ ತಲುಪಿದ ಗಂಗಯ್ಯ ಶೆಟ್ಟರು ಇಣುಕಿ ಸುಬ್ಬಣ್ಣನ ಮನೆಯನ್ನು ನೋಡಿದ್ದರು.
“ಏನ್ರಿ ಹಾಗ್ನೋಡ್ತಿದ್ದೀರ?” ಶೆಟ್ಟರ ಹೆಂಡತಿಗೆ ಕುತೂಹಲ.
ಅವಳು ಕೇಳಿದ್ದಕ್ಕೆ ಶೆಟ್ಟರು ತಕ್ಷಣ ಉತ್ತರಿಸದೇ ಕೆಲ ಕ್ಷಣಗಳ ಕಾಲ ಸುರಮನೆಯನ್ನೇ ನೋಡಿ ತಿರುಗಿ ಒಳಬಂದು ಕಾಮತರ ಅಂಗಡಿಯಲ್ಲಿ ಅವರು ಹೇಳಿದ್ದನ್ನು ಹೆಂಡತಿಗೆ ಹೇಳಿ ಮತ್ತೆ ಬಗ್ಗಿದರು. ಗಂಡ ಹೇಳಿದ್ದನ್ನು ಕೇಳಿದ ಹೆಂಡತಿಗೆ ನಂಬಲಾಗುತ್ತಿಲ್ಲ. ಯಾವಾಗಲೂ ಮನೆಯಲ್ಲಿಯೇ ಇರುವ ನಾನೇ ಇನ್ನೂ ಸುರಮನೆಯಲ್ಲಿ ಹೊಸ ಹೆಣ್ಣನ್ನು ನೋಡಿಲ್ಲ. ಹೀಗಿರುವಾಗ ಈ ಕಾಮತರ ಕಣ್ಣಿಗೆ ಬಿದ್ದದ್ದು ಸಾಕು ಎಂದು ತನ್ನ ಕಣ್ಣನ್ನೇ ಹಳಿದುಕೊಳ್ಳುತ್ತ ಕುತ್ತಿಗೆ ಉದ್ದ ಮಾಡಿ ಸುರಮನೆಗೆ ಯಾರು ಬಂದಿದ್ದಾರೆ ಎಂದು ತಿಳಿದುಕೊಳ್ಳಲು ಉಪಾಯವೊಂದನ್ನು ಮಾಡಿ ಆ ದಿನ ಸಾಯಂಕಾಲ ಒಂದು ಬಟ್ಟಲಿನಲ್ಲಿ ಸಿಹಿತಿನಿಸುಗಳನ್ನಿಟ್ಟುಕೊಂಡು ಸುರಮನೆಗೆ ಕಾಲಿಟ್ಟು,”ವಿನುತಾ” ಎಂದಳಷ್ಟೆ.
ಜಗುಲಿಯಲ್ಲಿದ್ದ ಸೌಮ್ಯಳ ಎದೆ ಧಸ್ಸೆಂದಿತು.
ಬೆಳಗಿನ ಸಮಯದಲ್ಲಿ ಗಂಡಸರನ್ನು ಎದುರಿಸಿದ ಅವಳು ಈಗ ಹೆಂಗಸೊಬ್ಬಳನ್ನು ಎದುರಿಸಬೇಕಾಗಿತ್ತು.
ಯಾರಿವಳು? ಎಲ್ಲಿಯವಳು? ಯಾವ ರೀತಿಯ ಸಂಬಂಧ? ಪ್ರಶ್ನೆಗಳು ಶೆಟ್ಟರ ಹೆಂಡತಿಯಿಂದ ನೇರವಾಗಿ ಬರಲಿಲ್ಲ. ಅವಳೂ ಶ್ರೀನಿವಾಸ ಮತ್ತು ಸದಾನಂದರಂತೆಯೇ ವಿನುತಾ ಹೇಳಿದ್ದಕ್ಕೆ ಹೌದಾ ಎನ್ನುತ್ತ ಸೌಮ್ಯಳಿಗೆ,”ಪಕ್ಕದ ಮನೆನೇ ನಮ್ದು. ಬಾ ಒಂದ್ಸಾರಿ” ಎನ್ನುತ್ತ ಹಾಗೆಯೇ ಮನೆಗೆ ವಾಪಸ್ಸಾಗಿ ಗಂಡನ ಜೊತೆ ಗುಟ್ಟೊಂದನ್ನು ಮಾತನಾಡಿದಳು.
ಸುಬ್ಬಣ್ಣ ಏನೋ ನಡೆಸಿದ್ದಾನೆ….
***
ಎಲ್ಲರ ದೃಷ್ಟಿಯೂ ಸುರಮನೆಯ ಮೇಲೆಯೇ!
ಆ ಮನೆಗೊಬ್ಬಳು ಹೆಂಗಸು ಬಂದಿದ್ದಾಳೆ. ಕತ್ತಲ್ಲಿ ತಾಳಿಯಿದೆ, ಕಾಲಿಗೆ ಕಾಲುಂಗುರವಿದೆ, ವಯಸ್ಸು ಸುಬ್ಬಣ್ಣನಿಗಾಗುವಷ್ಟು ಆಗಿರಬಹುದು. ವಿನುತಾ ಅಕ್ಕ ಎಂದರೂ ಯಾರಿಗೂ ನಂಬಿಕೆಯಿಲ್ಲ. ಸದಾನಂದ ಮತ್ತವನ ಬಳಗ ಸುಬ್ಬಣ್ಣನಿಗೆ ಆಗಾಗ ಎರಡನೇ ಮದುವೆಯಾಗು ಎನ್ನುತ್ತಿದ್ದರೆ ಸುಬ್ಬಣ್ಣ ಆಗುವುದಿಲ್ಲವೆಂದು ಓಡಾಡುತ್ತಿದ್ದ. ಇವರೂ ಅವನಿಗೆ ಒತ್ತಾಯ ಮಾಡುವಷ್ಟು ಮಾಡಿ ಸುಮ್ಮನಾಗಿದ್ದರು. ಜೊತೆಯಲ್ಲಿ ವಿನುತಾ ಕೂಡ ಬೆಳೆದಿದ್ದರಿಂದ ಸುಬ್ಬಣ್ಣ ಈಗ ಇನ್ನೊಂದು ಮದುವೆಯಾಗುವುದು ಸರಿಯಲ್ಲವೇನೋ? ಎಂದೂ ಆಲೋಚಿಸಿದ್ದರಿಂದ ಯಾರೂ ಸುಬ್ಬಣ್ಣನ ಮನೆಗೆ ಹೊಸ ಹೆಣ್ಣು ಬರಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದರು. ಅಂತಹ ಸಮಯದಲ್ಲಿ ಕೆಲಸಕ್ಕೆಂದು ಪೇಟೆಗೆ ಹೋದ ಸುಬ್ಬಣ್ಣ ಮನೆಗೆ ಬರುವಾಗ ಒಬ್ಬಳು ಹೆಂಗಸಿನ ಜೊತೆ ಬಂದಿದ್ದಾನೆಂದರೆ!? ಯಾರಿಗೂ ಒಪ್ಪಲು ಸಾಧ್ಯವಾಗಲಿಲ್ಲ.
ಸ್ವತಃ ಸುಬ್ಬಣ್ಣನ ಮಗಳೇ ಮೊದಲು ವಿರೋಧಿಸಿದ್ದಳು.
ಆದರೆ ಸುಬ್ಬಣ್ಣ ಮಗಳನ್ನು ಕೂರಿಸಿ ಸೌಮ್ಯಳ ಕುರಿತು ವಿವರಿಸಿದ ನಂತರ ಅವಳನ್ನು ಅಕ್ಕ ಎಂದು ಒಪ್ಪಿಕೊಂಡು ಮನೆ ತುಂಬಿಸಿಕೊಂಡಳು.
ಸೌಮ್ಯಾಗೆ ಎಲ್ಲವೂ ಹೊಸದು. ಸುಬ್ಬಣ್ಣ, ಅವನ ಮಗಳು, ಸುರಮನೆ, ಊರು, ಕೇರಿ, ಸ್ನೇಹಿತರು ಎಲ್ಲವೂ ಕಷ್ಟ, ಎಲ್ಲವೂ ಸುಖ.
ದಿವಸಕ್ಕೆ ನೂರುಬಾರಿ ನನ್ನಿಂದ ಸುಬ್ಬಣ್ಣನವರಿಗೆ ಕಷ್ಟವಾಗದಿರಲೆಂದು ದೇವರನ್ನು ಬೇಡುತ್ತ ವಿನುತಾ ಹೇಳಿದ ಸುಳ್ಳನ್ನೇ ಹೇಳುತ್ತ ಅಕ್ಕಪಕ್ಕದವರಿಗರ ಪರಿಚಯದವಳಾದರೆ ಊರ ಕೆಲ ಗಂಡಸರು ಕಾಮತರ ಅಂಗಡಿಯಲ್ಲಿ ಸುಬ್ಬಣ್ಣನನ್ನು ಸುತ್ತುವರೆದಿದ್ದರು.
ಅವರಿಗೆ ಸುಬ್ಬಣ್ಣ ಮಾಡಿದ್ದು ತಪ್ಪು ಎಂದಿಲ್ಲ, ಏನೇ ಮಾಡುವುದಿದ್ದರೂ ಹೇಳಿ ಮಾಡಬಹುದಿತ್ತಲ್ಲ? ಸದಾನಂದನಿಗೆ ಸುಬ್ಬಣ್ಣ ತನ್ನನ್ನು ಹೊರಗಿಟ್ಟ ಎಂದು ಸಿಟ್ಟು, ಗಂಗಯ್ಯ ಶೆಟ್ಟರಿಗೆ ಸುಬ್ಬಣ್ಣ ಗುಟ್ಟು ಮಾಡಿದ ಎಂದು ಸಿಟ್ಟು, ಶ್ರೀನಿವಾಸನಿಗೆ ಅರ್ಥವಾಗದ ಭಾವಗಳು ಹಾಗೂ ಉಳಿದವರಿಗೆ ಸುಬ್ಬಣ್ಣನ ಮೇಲೆ ಸಿಟ್ಟಾಗಲು ಅವರದೇ ಆದ ಕಾರಣಗಳಿದ್ದವು.
“ಹೇಳು, ಅವಳ್ಯಾರು?”
“ನಾವೆಲ್ಲ ಹೇಳ್ದಾಗ ಎರಡನೇ ಮದ್ವೆ ಆಗಲ್ಲ ಅಂತಿದ್ದೆ. ಈಗ್ಯಾಕೆ ಹೀಗ್ಮಾಡ್ದೆ?”
“ನಾವೆಲ್ಲ ನಿಂಗೆ ದೂರದವರಾ?”
“ಛೇ ಸುಬ್ಬಣ್ಣ, ನೀನು ಹೀಗೆ ಗುಟ್ಟು ಮಾಡ್ತೀಯ ಅಂದ್ಕೊಂಡಿರ್ಲಿಲ್ಲ” ಎಂದು ಒಬ್ಬೊಬ್ಬರಾಗಿ ಎಲ್ಲರೂ ತಮ್ಮ ತಮ್ಮ ಸಿಟ್ಟನ್ನು ಹೀಗೆ ಪ್ರಶ್ನೆ, ಆರೋಪಗಳ ಮೂಲಕ ಹೊರಹಾಕಿ ಅವನ ಉತ್ತರಕ್ಕೆ ಕಾದರೆ ಒಂದು ನಿಮಿಷ ಸುಬ್ಬಣ್ಣ ಮಾತೇ ಆಡಲಿಲ್ಲ.
ಸುಮ್ಮನೆ ಕುಳಿತು ಸುತ್ತಲೂ ನಿಂತು ಅವನ ಉತ್ತರವನ್ನ ನಿರೀಕ್ಷಿಸುತ್ತಿದ್ದ ಎಲ್ಲರನ್ನೂ ನೋಡಿ ಯಾರೂ ನಂಬದಂತಹ ಉತ್ತರವನ್ನು ಹೇಳಿದ.
ಸೌಮ್ಯ ನನ್ನ ಮಗಳು!!
-0-0-0-
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ