ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಜಯ ಕುಮಾರ ಎಂಬ ಕನಸುಗಾರನ ಕಲಾಜಗತ್ತೆಂಬ ರಂಗಶಾಲೆ

ಶುಭಲಕ್ಷ್ಮಿ ಶೆಟ್ಟಿ
ಇತ್ತೀಚಿನ ಬರಹಗಳು: ಶುಭಲಕ್ಷ್ಮಿ ಶೆಟ್ಟಿ (ಎಲ್ಲವನ್ನು ಓದಿ)

ಬಹುರಾಜ್ಯಗಳಿಂದ ಆಕರ್ಷಿತವಾಗಿ, ವ್ಯವಹಾರದ, ವ್ಯಾಪಾರದ ಕೇಂದ್ರವಾಗಿ ರೂಪುಗೊಂಡ ಮಹಾನಗರವೊಂದು ಸರ್ವಾಂಗೀಣವಾಗಿ ಬೆಳೆಯುವುದೇ ಅಪರೂಪದ ಸೋಜಿಗ. ಅದರಲ್ಲೂ ಶತಮಾನಗಳಿಂದ ವ್ಯವಹಾರವೇ’ ಧರ್ಮವಾಗಿರುವ ಮುಂಬಾಪುರಿಯಂತಹ ಕಾಸ್ಮೋ ಸಿಟಿಯೊಂದು ಕಲಾಧರ್ಮವನ್ನು, ಅದರ ಮರ್ಮವನ್ನರಿತು, ಪೋಷಿಸಿ ಬೆಳೆಯುವುದೆಂದರೆ ನಮ್ಮ ತುಳುವ ಕವಿ ರತ್ನಾಕರ ವರ್ಣಿಯನ್ನು ನೆನಪಿಸಿ.. ಅಯ್ಯಯ್ಯ ಎಂಚ ಪೊರ್ಲಾಂಡ್’ ಎಂದೇ ಉದ್ಗರಿಸಬೇಕಾಗುತ್ತದೆ.
ಒಂದರ್ಥದಲ್ಲಿ ಅಗಾಧವಾಗಿ ಬೆಳೆದು ನಿಂತ ಶುಷ್ಕ ಅಸ್ಥಿಪಂಜರಕ್ಕೆ ಮಾಂಸ ಮಜ್ಜೆಯ ಹೂರಣ ಹಚ್ಚಿ, ರಕ್ತ ತುಂಬಿ ಅಂಗ-ಆಕಾರದ ಓರಣ ನೀಡಿ ಜೀವ ತುಂಬಿದಂತೆಯೇ ಸರಿ…!
ಹೀಗೆ, ಕಳೆದೆರಡು ಶತಮಾನಗಳಲ್ಲಿ ಕನ್ನಡಕ್ಕಿನ್ನೊಂದು ನೆಲವಾಗಿ-ನೆಲೆಯಾಗಿ-ವರವಾಗಿ ಒದಗಿದ ಈ ಮುಂಬಾ ನಗರಿಗೆ, ಇಲ್ಲಿನ ಕನ್ನಡ ಜನಮಾನಸಕ್ಕೆ ಅಂಥಾದ್ದೊಂದು ಸ್ಪರ್ಶ ನೀಡಿದ ಅಗ್ಗಳಿಕೆ ಕಲಾಜಗತ್ತೆಂಬ ಕಲೆಯ ಆಲಯಕೆ ಸಲ್ಲಬೇಕು.
ಬಹುಮುಖೀ ನಡಿಗೆ…

ಕರಾವಳಿಯ ಬದುಕು – ಬನ್ನ-ಬಣ್ಣ, ಒಂದೊಮ್ಮೆ ಅಲ್ಲಿ ಢಾಳಾಗಿದ್ದ ಯಾಜಮಾನ್ಯ ವ್ಯವಸ್ಥೆಗಳ ಒಳಸುಳಿಗಳನ್ನು, ಜನಪದೀಯ ವೈಶಿಷ್ಟ್ಯಗಳನ್ನು, ದೈವಾರಾಧನೆ, ಕಟ್ಟುಕಟ್ಟಳೆಗಳನ್ನು ಅನಾವರಣಗೊಳಿಸಿದ ವಿಶಿಷ್ಟ ನಾಟಕಗಳ ರಚನೆ, ನಿರ್ದೇಶನ, ರಂಗನಿರ್ಮಾಣ, ರಂಗ ನಿರೂಪಣೆ, ನಟನೆ ಹೀಗೆ ರಂಗದ ಸಕಲಾಂಗಗಳ ಸಾರಥ್ಯ ವಹಿಸುವ ತೋನ್ಸೆ ವಿಜಯ ಕುಮಾರ ಶೆಟ್ಟರ ಕಲಾಜಗತ್ತು… ನಿಜಾರ್ಥದ ಟೋಟಲ್ ಥಿಯೇಟರ್ – ಒಂದು ಸಮಗ್ರ ಕಲಾ ಶಾಲೆ!

80ರ ದಶಕ, ಮುಂಬಯಿ ಕೇಂದ್ರಿತ ಮಹಾರಾಷ್ಟ್ರದ ಕನ್ನಡ ರಂಗಭೂಮಿಯ ಸ್ಥಿತ್ಯಂತರ ಕಾಲ. ಹೊಸತನ ನಾವೀನ್ಯದಿಂದ ಹೊಳೆಯುತ್ತಿದ್ದ ಮರಾಠಿ ರಂಗಭೂಮಿಯ ಮಧ್ಯೆ ಮುಂಬಯಿಯಲ್ಲಿ ಅಸ್ತಿತ್ವದಲ್ಲಿದ್ದ ಕನ್ನಡದ ಹವ್ಯಾಸಿ ರಂಗ ಸಂಘಟನೆಗಳು ತಾವೂ ಹೊಸತನಕ್ಕೆ – ಹೊಸಸ್ಪರ್ಶಕ್ಕೆ ಕಾದು ಕೂತಿದ್ದವು. ಇಂತಹದೊಂದು ಸಂದರ್ಭ 1979ರಲ್ಲಿ ಮಹಾನಗರದ ಜನ ನಿಬಿಡ ಮಾಟುಂಗ-ದಾದರ್ ನಡುವಣ ಒಂದು ಕಾಲೇಜು ಕ್ಯಾಂಟೀನಿನ ನಾಲ್ಕು ಟೇಬಲ್‍ಗಳ ನಡುವೆ ಆರೋ- ಎಂಟೋ ಮಂದಿಯ ಕೈಯೊಳಗೆ, ಸಂಜೆಗೆಂಪಿನ ಚಹಾ ಕಪ್ಪು ಬಿಸಿ ಆರುವ ಹೊತ್ತು ಜನ್ಮ ತಳೆದು ತನ್ನ ಅಪೂರ್ವ ರಂಗ ಕೃತಿಗಳ ಮೂಲಕ, ವಿಶಿಷ್ಟ ಪ್ರಯೋಗಗಳ ಮೂಲಕ ನಗರದ ಹೊಸಿಲು ದಾಟಿ, ಕನ್ನಡದ ಕರಾವಳಿ, ದೂರದ ಮರಳು ನಾಡಿನ ದೇಶಗಳ ತುಳು – ಕನ್ನಡದೆದೆಗಳ ಮೀಟಿ ಸದಾ ಹೊಸತಿನೆಡೆಗೆ ದಿಟ್ಟಿ ನೆಟ್ಟ ಕಲಾಜಗತ್ತಿಗೀಗ ನಲವತ್ತೆರಡರ ನಲುಗು!

ಕಾಲೇಜು ಜೀವನದಲ್ಲಿ ಅದಾಗಲೇ ನಾಟಕ ರಚನೆ, ನಟನೆ ನಿರ್ದೇಶನದ ಮೂಲಕ ತಾನೇನು, ತನ್ನೊಳಗೇನು ಎಂದು ಸ್ಪಷ್ಟಪಡಿಸಿಕೊಂಡಿದ್ದ ಕರಾವಳಿಯ ತುಳುವ ಮಣ್ಣಿನ ಸಾಮಾಜಿಕ, ಸಾಂಸ್ಕೄತಿಕ, ಜನಪದೀಯ ಸಂಸ್ಕೄತಿಯ ದನಿ-ಬನಿ ಹೊತ್ತು ಮುಂಬಯಿ ಎಂಬ ಮಹಾಶಹರಿಗೆ – ಬಹು ಸಂಸ್ಕೄತಿ ಯ ತವರಿಗೆ ಮುಖ ಮಾಡಿದ ಉಡುಪಿಯ ಪಡುತೋನ್ಸೆಯ 24ರ ತರುಣ ವಿಜಯ ಕುಮಾರನ ಕಿಸೆ ಖಾಲಿಯಿತ್ತು. ಆದರೆ ತಲೆ ತುಂಬಾ ಯೋಚನೆಗಳಿತ್ತು. ಕಣ್ಣಪಾಪೆಯ ತುಂಬಾ ಕನಸುಗಳಿತ್ತು… ಹತ್ತಾರು ದಿನ -ರಾತ್ರಿ ಶಾಲೆ, ಕನ್ನಡ ಕಾಲೇಜುಗಳು ಅಲ್ಲಿಯ ಕನ್ನಡ-ತುಳು ಸಂಘಗಳು… ಅಲ್ಲಿ ನಡೆಯುತ್ತಿದ್ದ ನಾಟಕ ಸ್ಪರ್ಧೆಗಳು ಹೀಗೆ ಮುಂಬಾನಗರಿ ವಿಜಯ ಕುಮಾರ ಹೊತ್ತಿದ್ದ ಕನಸುಗಳ ಬಿತ್ತಿ ಬೆಳೆವುದಕ್ಕೆ ಹದವಾಗಿ ನಿಂತಿತ್ತು.
ಮುಂದಿನದು ಯಶೋಗಾಥೆ…
ವಸುಂಧರಾ, ನಾವಿಲ್ಲದಾಗ, ಭೂತದ ಇಲ್ಲ್, ಬದಿ, ಬೊಲ್ಲ, ಎನಡ್ದಾವಂದ್, ಹಗ್ಗದ ಕೊನೆ, ಒರಿಯೆ ಮಗೆ ಒರಿಯೆ…, ಈ ನಲ್ಕೆದಾಯೆ, ಶರಶಯ್ಯೆ ಹೀಗೆ ಸಾಲು ಸಾಲು 50ಕ್ಕೂ ಮಿಕ್ಕ ಗುಣಮಟ್ಟದ ರಂಗಕೃತಿಗಳು.. ಅದನ್ನು ರಂಗ ಕಾವ್ಯವನ್ನಾಗಿ ಅರಳಿಸಿದ ವಾಮನ್, ಭವಾನಿ ಶಂಕರ್, ಉಮೇಶ್ ಶೆಟ್ಟಿ, ಸದಾಶಿವ ಸಾಲ್ಯಾನ್, ಸುರೇಂದ್ರ ಕುಮಾರ್ ಹೆಗ್ಡೆ, ಮೋಹನ್ ಮಾರ್ನಾಡ್, ಲಿಲೇಶ್ ಶೆಟ್ಟಿ, ಪ್ರಭಾಕರ್, ಕೃಷ್ಣರಾಜ್, ಜಗದೀಶ್ ರಾವ್, ಲಕ್ಷ್ಮಣ ಕಾಂಚನ್, ಎಚ್. ಮೋಹನ್, ರಘುರಾಜ್, ಚಂದ್ರಪ್ರಭಾ, ಜೂಲಿಯಟ್, ರಘುವೀರ್, ಅರವಿಂದ್, ಸರೋಜಾದೇವಿ, ಚಂದ್ರಾವತಿ… ಹೀಗೆ ಮುಂದುವರಿದ ನೂರಕ್ಕೂ ಮಿಕ್ಕ ಪರಿಪೂರ್ಣ ಕಲಾವಿದರ ಗುಚ್ಛ….

ವಿಜಯ ಬರಿದೆ ರಂಗ ಸಂಗ ವಿಶಾರದನಲ್ಲ… ರಂಗವೇರಿದ ಎಲ್ಲ ಕೃತಿಗಳ ಯಶಸ್ಸನ್ನು ಖಾತ್ರಿಗೊಳಿಸುವ ಒಬ್ಬ ಅಪರೂಪದ ಸಂಘಟಕ!
ಮುಂಬಯಿ ನೆಲದಲ್ಲಿ, ಕಲಾಜಗತ್ತಿನ ಪ್ರತಿ ವಾರ್ಷಿಕ ನಾಟಕ ಉತ್ಸವಗಳಲ್ಲದೆ 5, 10, 15, 20, 25 ಹೀಗೆ ನಾಲ್ಕು ದಶಕದ ತುಂಬ ಪ್ರತಿಹಂತಗಳಲ್ಲಿ ವಾರಗಟ್ಟಲೆ ಕಾಲ ರಂಗ ಸಂಭ್ರಮ ನಡೆಸಿ ಇಡಿಯ ಮುಂಬಯಿ ತುಳು – ಕನ್ನಡ ವಾಙ್ಮಯಕ್ಕೆ ಕಲೆ- ಸಂಸ್ಕøತಿ – ಸಾಹಿತ್ಯದ ರಂಜನೆಯನ್ನು ಉಣಬಡಿಸಿದವರು… ಬಣ್ಣ ತೊಡಿಸಿದವರು.

ಸಂಸ್ಥೆಯ 25ಕ್ಕೆ ಹುಟ್ಟಿದ ಚಿಣ್ಣರಬಿಂಬ ಈ ಹೊತ್ತು ನಾಲ್ಕು ಸಾವಿರಕ್ಕೂ ಹೆಚ್ಚು ಚಿಣ್ಣರ ತನುಮನವರಳಿಸಿ ಬೆಳೆಸಿ – ಬೆಳೆದ ಬೃಹತ್ ಆಲ…
ಸರಿಗಮಪದನಿ’ ಒಂದು ವಿಶಿಷ್ಟ ಸಂಗೀತ ಬಿಳಲು ಸಂಸ್ಥೆಯ ಯುವ ಕಲಾವಿದರದೇ ಆದ ನಾದ ನಿನಾದದ ಕೊಳಲು.. 2008ರ ದಾದರ್ ಕಾಮ್ಗಾರ್ ಸ್ಟೇಡಿಯಂನಲ್ಲಿ ಕಲಾಜಗತ್ತು ಕಟ್ಟಿದ ಬೊಂಬಾಯಿಡ್ ತುಳುನಾಡ್ ವಿಜಯ ಕುಮಾರ್ ಅವರ ಸಾಂಸ್ಕøತಿಕ ಆಳ್ತನ, ಸಂಘಟನೆ ಹಾಗೂ ಕೌಶಲ್ಯಕ್ಕೆ ಭಾಷ್ಯ ಬರೆಯಿತು. ಎಂಟು ದಿನಗಳ ಈ ಮಹಾತುಳುವ ನಾಡು ನುಡಿಯ ಜಾತ್ರೆಯಾಗಿ ಕಂಬಳದ ಕಣವಾಗಿ ನೇಮ ಕೋಲ ತಂಬಿಲ, ಮಂದಿರ ಮಸೀದಿ ಇಗರ್ಜಿಗಳ ಅಂಗಣವಾಗಿ, ತುಳುನಾಡ ಕಂಗಣವಾಗಿ ಮೆರೆಯಿತು… ಜಗತ್ ವಿಖ್ಯಾತಿ ಪಡೆಯಿತು. 60ರ ಲಿಮ್ಕಾ ರಂಗೋತ್ಸವ…. 79ರಲ್ಲಿ ಕಲಾಜಗತ್ತಿನೊಂದಿಗೆ ತನ್ನ ಮುಂಬಯಿರಂಗ ಪಯಣವನ್ನಾರಂಭಿಸಿ ಮಹಾರಾಷ್ಟ, ಗುಜರಾತ್, ಕರ್ನಾಟಕದತ್ತಲೂ ಹೆಜ್ಜೆಯಿಟ್ಟು, ದೂರದ ಕೊಲ್ಲಿ ತುಳು-ಕನ್ನಡ ಜನಮಾನಸವನ್ನೂ ರಂಗ ಸಾಧನೆಯ ಮೂಲಕವೇ ಮುಟ್ಟಿ ತಟ್ಟಿ ಗೆದ್ದ ವಿಜಯ ಕುಮಾರ್ ತನ್ನ ಜೀವನದ 60ರ ಸಂವತ್ಸರಕ್ಕೂ ವಿಶಿಷ್ಟ ರಂಗಸ್ಪಂದನವನ್ನೇ ನೀಡಿದರು..

ಒಂದೇ ದಿನ ಒಂದೇ ವೇದಿಕೆಯಲ್ಲಿ, ಒಂದೇ ಕ್ಷಣದ ವಿರಾಮವಿಲ್ಲದೆ ಪ್ರೇಕ್ಷಕ ಸಂದೋಹದ ಮುಂದೆ 60 ನಾಟಕ ಕೃತಿ, 60 ಸ್ವರ, 60 ಬಾರಿ ವೇಷಾಲಂಕಾರ, 60ಕ್ಕೂ ಹೆಚ್ಚು ಸಹ ಕಲಾವಿದರ ಜೊತೆಯಿರುವ, 60 ಭಿನ್ನ ಸಂದರ್ಭ – ಸಂಗೀತ – ಹಾಡುಗಳನ್ನೊಳಗೊಂಡ 60 ಪಾತ್ರಗಳನ್ನು ರಂಗ ಸಾಕಾರಗೊಳಿಸುವ ಮೂಲಕ ಲಿಮ್ಕಾ ವಿಶ್ವ ದಾಖಲೆಗೆ ಸೇರಿ ಹೋದರು.. ಮುಂಬಯಿ ತುಳು-ಕನ್ನಡಿಗರ ಸಿಂಗರದ ಗರಿಯಾದರು. ಪ್ರಶಸ್ತಿ – ಪುರಸ್ಕಾರ – ಮಾನ – ಸನ್ಮಾನಗಳಿಂದ ಬೀಗದೆ – ಹಿಗ್ಗದೆ ತನ್ನ ರಂಗಕಾಯಕವನ್ನು, ನಾಡು-ನುಡಿ-ಸಂಸ್ಕೄತಿ ಕಾರ್ಯಗಳನ್ನು ಅಬಾಧಿತವಾಗಿ ಮುಂದುವರಿಸುತ್ತಲೇ ತೋನ್ಸೆ ವಿಜಯ ಕುಮಾರ್ ಶೆಟ್ಟಿ ಯುವಕತನವನ್ನು ಕಳೆದುಕೊಳ್ಳದೆಯೇ ಅರವತ್ತರಾಚೆ ನಡೆದಿದ್ದಾರೆ. ಮುಂಬಯಿ ಕನ್ನಡ ರಂಗಭೂಮಿಯಾಚೆಗೂ ಕನ್ನಡದ ನುಡಿ-ನಡೆಗೆ ಸದಾಪ್ರಸ್ತುತ’ರಾಗಿಯೇ ಸಾಗಿದ್ದಾರೆ ಎಂಬುದೇ ಇಲ್ಲಿ ಕಾಣಿಸಬೇಕಾದ ಕೊನೆಯ ಮಾತು!