- ಕ್ಯಾಮೆರಾ ಮನ್.. - ಡಿಸಂಬರ್ 31, 2021
- ಯುದ್ಧ ಗೆದ್ದ ನಂತರ - ಜುಲೈ 20, 2021
- ಪುಸ್ತಕ ದಿನ ಮತ್ತು ಚೆಕ್ ರೋಲ್ ಸಾಹಿತ್ಯ - ಏಪ್ರಿಲ್ 23, 2021
ಕೇವಲ ಮುನ್ನೂರು ರೂಪಾಯಿ ಕಳೆದದ್ದಕ್ಕೆ ಕಾಲೇಜು ಬಿಡಿಸಿ ,ಬಂದ ವರನಿಗೆ ಕೊಟ್ಟು ಕೈತೊಳೆದು, ಅವಳೇನಾದ್ರೂ ‘ಇನ್ನೂ ನಾಕು ವರ್ಸ ಮನೇಲೇ ಇದ್ದಿದ್ರೆ ಗುಡ್ಸಿ ಗುಂಡಾಂತರ ಮಾಡುಬುಡ್ತಿದ್ಳು ಮನೆಯಾ’ ಅಂತ ಹೆಮ್ಮೆಯಿಂದ ತನ್ನ ಗೆಳೆಯನ ಬಳಿ ಹೇಳಿದ್ದ ಅಪ್ಪ,ತವರಿಗೆ ಹೋದರೆ ಎಲ್ಲಿ ಹಣ,ಆಸ್ತಿಲಿ ಪಾಲು ಕೇಳ್ತಾಳಾ ಅಂತ ಮೊದಲೇ ಉಪಾಯದಲ್ಲಿ ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ‘ ಅನ್ನುತ್ತಲೇ ಸ್ವಯಾರ್ಜಿತದ ಆಸ್ತಿಯನ್ನು ಗಂಡುಮಕ್ಕಳಿಗೇ ಕೊಟ್ಟರೇ ಶ್ರೇಯಸ್ಸು ಎಂದು ಪರೋಕ್ಷವಾಗಿ ಹೇಳುವ ಅಮ್ಮ.
ನಂದಿನಿ ಹೆದ್ದುರ್ಗ ಅವರ ಕಥೆಯಿಂದ…
ವಾರದಿಂದ ಎಡೆಬಿಡದೆ ಸುರಿದ ಮಳೆಗೆ ಅಂಗಳದ ತುಂಬೆಲ್ಲ ಎದ್ದ ಹಾವಸೆ.
ಮೆಟ್ಟಿಲಿಳಿದರೆ ಸಾಕು,ದೊಪ್ಪೆನ್ನುವ ಭಯ. ಜೀರುಂಡೆ,ಕಪ್ಪೆಗಳು ಬಾಯಿಹೊಲಿದು ಮೌನ ವ್ರತದಲ್ಲಿ.
ಪ್ಲಾಸ್ಟಿಕ್ ಚಪ್ಪಲಿ ಮೆಟ್ಟಿ ಮೆಲ್ಲಗೆ ಮೆಟ್ಟಿಲಿಳಿದು ಹೂಬುಟ್ಟಿ ಹಿಡಿದು ಹೆಜ್ಜೆಗೆ ಹೆಜ್ಜೆ ಕೂಡಿಸಿ ನೆಲದ ಮೇಲೆ ಗಮನವಿಡುತ್ತಾ ಆ ಮದರಂಗಿ ಬಣ್ಣದ ದಾಸವಾಳದ ಗಿಡದ ಬಳಿ ಹೋಗಿ ನೋಡಿದರೆ ಒಂದೂ ಹೂವಿಲ್ಲ.!
ವರ್ಷವಿಡೀ ಮೈತುಂಬಾ ಹೂಮುಡಿದು
ಒಮ್ಮೆ ನನ್ನೆಡೆಗೆ ನೋಡದೆ ಹೋದರೆ ನನ್ನಾಣೆ ಎನ್ನುವಂತಿದ್ದ ಆ ಗಿಡ ಮೈಯಿಳಿದು ಹೋದ ಹೆಣ್ಣಿನಂತೆ.ಮೊಳೆವಷ್ಟು,ಬೆಳೆವಷ್ಟು ಮಳೆ ಸುರಿವ ಬದಲು ಕೊಳೆಸುವ ಉಮೇದು ಈ ದೇವರಿಗೆ ಯಾಕೋ.
‘ಕಲ್ಲು ದೇವರಿಗೆ ಇವತ್ತು ಹೂವಿಲ್ಲ’ ಎಂದುಕ್ಕೊಳ್ಳುತ್ತ ಸಿಕ್ಕ ಚಿಕ್ಕ ಪುಟ್ಟ ಪತ್ರೆಗಳನ್ನೇ ಎತ್ತಿ ಬುಟ್ಟಿಯೊಳಗಿಟ್ಟು
ಹೊಸಿಲು ದಾಟುವಾಗ ಬೇಡವೆಂದರೂ
ಏನೋ ನೆನಪಾಗಿ ಕಣ್ಣು ಮಸುಕುಮಸುಕು.
ಇದೇ ದಿನ.,ಇಲ್ಲೆ..!
ಇಪ್ಪತೈದು ವರ್ಷಗಳ ಹಿಂದೆ ಕೇಸರಿ ಒಡಲಿನ ಜರತಾರಿ ಸೀರೆಯ ಮೇಲೆ ತಾಯುಡುಕೆ ಸೀರೆ ಹೊದ್ದು,ಬಿಗಿದ ಶಲ್ಯ-ಸೆರಗಿನಡಿಯಲ್ಲಿ ಬೆಸೆದ ಕಿರುಬೆರಳುಗಳು.ಎದೆ ತುಂಬಾ ಸಾವಿರ ಕನಸುಗಳು.
ಅಕ್ಕಿ -ಬೆಲ್ಲ ತುಂಬಿ ಹೊಸಿಲ ಮೇಲಿಟ್ಟ ಸೇರನ್ನು ಬಲಗಾಲಿನಲ್ಲಿ ಮೆಲ್ಲ ಒಳತಳ್ಳಿ ಅಡಿಯಿಟ್ಟಾಗ’ಸೇರು ಬಲಕ್ಕೆ ವಾಲಿದೆ,ಅದೃಷ್ಟ ಲಕ್ಷ್ಮಿ ಯೇ’ಎಂದದ್ದಕ್ಕಾದ ಹೆಮ್ಮೆ, ಅತ್ತೆ ಬಂದು ‘ಮುಂಜಾನೆ ನಾಕಕ್ಕೆಲ್ಲ ಎದ್ದು ರಂಗೋಲಿ ಆಗಿರಬೇಕು’ ಅಂತ ಮಲಗುವ ಮೊದಲು ಎಚ್ಚರಿಸಿ ಹೋದಾಗ ಜರ್ರನೆ ಇಳಿದಿತ್ತು.
ತಿಂಗಳು ಕಳೆದಿರಲಿಲ್ಲ.
ಎಳೆ ಹುಡುಗಿಗೆ ಹಂಡೆಯಲ್ಲಿ ಅಡುಗೆ ಬೇಯಿಸಲು ಹೇಳಿದಾಗ ಗಂಜಿಯೂ ಅನ್ನವೂ ಒಂದೇ ಆಗಿದ್ದಕ್ಕೆ ಬಡಿದು ಗಂಡ ಗಂಡಸ್ತನ ತೋರಿಸಿದ್ದ ಆ ದಿನವೂ ಹೀಗೆ ಹುಚ್ಚು ಹಿಡಿಸಿಕೊಂಡ ಪುನರ್ವಸು ಮಳೆ.
ನಾಟಿ, ಒಕ್ಕಲಾಟಕ್ಕೆ ಅಡುಗೆ ಮಾಡುತ್ತಿದ್ದ ಆ ಕಣಜದಂತ ಅಡುಗೆಮನೆಯ ಮೂಲೆಯಲ್ಲಿ ಮನಸೋ ಇಚ್ಚೆ ಅಳುವುದಕ್ಕೂ ಸಾಧ್ಯವಾಗದಂತೆ ಅತ್ತೆ ಮಸಿ ಹಿಡಿದ ರಾಶಿ ಪಾತ್ರೆ ತೋರಿಸಿದ್ದರು.
ಸುರಿವಮಳೆಯಲ್ಲಿ ಬೆರೆತು ಹೋದ ಕಣ್ಣ ನೀರು ,ಉಜ್ಜಿದ ಮಸಿಯ ಜೊತೆಗೆ ಹರಿದು ಕೊಚ್ಚೆ ಸೇರುವಾಗಲೇ ಎಳೆಯ ಹೃದಯಕ್ಕೆ ನನ್ನ ಕಣ್ಣೀರು ಇಲ್ಲಿ ಕೊಚ್ಚೆಗೆ ಸಮ ಎನ್ನುವುದ ತಿಳಿಯಿತು.
ಕಾಲದ ಹರಿವಿನಲಿ ಬಾಯಿಯೂ ದೊಣ್ಣೆಯೂ ಪೈಪೋಟಿಯಲೆಂಬಂತೆ ಬದುಕಿನ ಪಾಠ ಭೋಧಿಸಿ ಗಟ್ಟಿಗಿತ್ತಿಯಾದವಳಿಗೆ, ಮೊನ್ನೆ ಮೊನ್ನೆ ಅವನು ಬಯಸಿ ಬಳಸಿ ನೀಡಿದ ಮುತ್ತು ಏನಂದರೆ ಏನೂ ಪುಳಕ ಹುಟ್ಟಿಸದೇ ಹೋದಾಗ ಅಚ್ಚರಿಯೆನಿಸಲೇ ಇಲ್ಲ.ಅತ್ತು ಅತ್ತು ಹಾವಸೆ ಕಟ್ಟಿದ ಕೆನ್ನೆಯ ಹೆಣ್ಣಿಗೆ ಇಟ್ಟ ಮುತ್ತು,ಮುಟ್ಟುವ ಮೊದಲೇ ಜಾರಿ ಮಣ್ಣಾಗುವುದು ಸಹಜವೇ.
ತಂದೇನೇ~~ಹೂವು..’ಎಂದವನ ಕೂಗಿಗೆ ಧಡಬಡಿಸಿ ಓಡುವಾಗ ಕಿಟಿಕಿಯಿಂದ ಎರಚಿದ್ದ ಹನಿಗಳಿಗೆ ಕಾಲು ಜಾರಿ, ಸಾವರಿಸಿ ದೃಡವಾಗಿ ನಿಂತು ನಿಧಾನವಾಗಿ ಹೆಜ್ಜೆಯಿಟ್ಟು ಹೂಬುಟ್ಟಿ ಪೂಜೆ ಕೋಣೆ ತಲುಪಿಸಿದವಳಿಗೆ ಮೊನ್ನೆ ಹಳೆಯ ಗೆಳೆಯ ಹೇಳಿದ ಅದೇ ಮಾತು ಮತ್ತೆಮತ್ತೆ ಮಥಿಸಿ ಎದೆಬುದ್ದಿಗಳ ಕದನಕ್ಕೆ ಮೂರು ದಿನದ ನಿದ್ದೆ ಬಲಿಯಾಗಿದ್ದಕ್ಕಿರಬಹುದೇ ನಾನಲ್ಲಿ ಜಾರಿದ್ದು ಎನಿಸಿದರೂ ಛೆಛೇ.ಇರಲಾರದು,ನುಣ್ಣನೆಯ ನೆಲದ ಮೇಲೆ ಚೆಲ್ಲಿದ ನೀರು, ಎಚ್ಚರ ತಪ್ಪಿದ ಎಂಥವರನ್ನೂ ಜಾರಿಸದೇ ಬಿಡಲಾರದು ಎಂದುಕೊಂಡಾಗ ತುಸು ಹಗುರಾದೆ.
ಹನ್ನೊಂದಕ್ಕೆಲ್ಲಾ ಮನೆಗೆಲಸ ಮುಗಿದು ಮಿಂದು ಕಣ್ಣು ಮುಚ್ಚಿ ಕ್ಷಣ ಧ್ಯಾನಸ್ತಳಾದವಳಿಗೆ ಮತ್ತದೇ ಅವನು ಹೇಳಿದ ಮಾತಿನ ನೆನಪು..
ಹೌದು.ಅವನು ಹೇಳೋದೂ ಸರಿಯಾಗೇ ಇದೆ..ಇನ್ನೆಷ್ಟು ದಿನ ಹೀಗೆ ಜೀತದವಳಂತೆ ಸಹಿಸುವುದು..ಒಂದಲ್ಲ ಒಂದು ಗಟ್ಟಿ ನಿರ್ಧಾರ ಆಗಲೇಬೇಕು…ಎನ್ನುವಾಗಲೇ ಹೊರಗೆ ಸೂರ್ಯ, ಮಳ್ಳಿ ಮೋಡದ ಸೆರಗಿನಿಂದ ಚೂರೇ ಬಿಡಿಸಿಕೊಂಡು ಜಗಕ್ಕೆ ಮುಖ ತೋರಿಸಿ ನಿಥ್ಯ ಮೈಥುನದ ತನ್ನ ಸ್ಥಿತಿಗೆ ತಾನೇ ನಾಚಿ ಮತ್ತೆ ಅದೇ ಮೋಡದ ಮರೆಗೆ.ಆದರೂ ನಿತ್ಯ ಆವರಿಸುತಿದ್ದ ಸೋಮಾರಿ ಹಗಲುಗತ್ತಲೆಗಿಂತ ಇಂದು ಎಷ್ಟೋ ಬೆಳಕು ಹೊರಗೆ.
ಹಾಗಿದ್ದರೆ ಜಗದೆದುರಿನ ಈ ವ್ಯವಸ್ಥೆ ಗೆ ಇತಿಶ್ರೀ ಹಾಡಿಬಿಡಲೇ.?
ಸೋಗಿನ ಬದುಕು ಇನ್ನಾದರೂ ಸಾಕು ಮಾಡಲೆ?
ಹೊರಗೂ ಒಳಗೂ ಒಂಟಿಯಾಗಿಯೇ ಬದುಕುತ್ತಿದ್ದೇನೆ ಅಂತ ಜಗತ್ತಿಗೆ ತೋರಿಸಲೆ.?
ಅಂಗಳದಲ್ಲಿ ಯಾರದ್ದೋ ಜೋರು ಜಬರದಸ್ತು ಕೇಳಿಸಿತು,ತೋಟದ ಆಳುಗಳ ಮೇಲೆ..
ಹೇಸಿಗೆ ಅನಿಸ್ತದೆ ದ್ವನಿಯಲ್ಲಿನ ಡೌಲಿಗೆ..
ತಾನು ಬದುಕಿನ ಕುರಿತು ಇನ್ನೇನಾದರೂ ನಿರ್ಧಾರ ತೆಗೆದುಕ್ಕೊಳ್ಳುವುದಕಿಂತ ಮೊದಲು ಲಾಭ ನಷ್ಟದ ಕುರಿತು ಯೋಚನೆ ಮಾಡಲೇಬೇಕು.
It is nothing but economics ಅಂತ ಎಲ್ಲೋ ಬದುಕಿನ ಬಗ್ಗೆ ಓದಿದ್ದು ನೆನಪಾಯಿತು.
ಐವತ್ತಾದರೂ ಮನೆಯೊಳಗೆ ಬೆತ್ತ ಎತ್ತುತ್ತಲೇ ಗಂಡಸ್ತನ ತೋರುವ ,ತನ್ನ ಪಾಲಿನ ಆಸ್ತಿಯ ಪತ್ರವೆಲ್ಲವನ್ನು ಯಾರೊ ತಲೆ ಸವರಿದ ಅಂತ ಅಡವಿಟ್ಟು ಹಣ ಅವನ ತಿಜೋರಿಗೆ ಸುರಿದು ,ಅವನ ತಾಳಕ್ಕೆ ತಕ್ಕಂತೆ ಕುಣಿಯುತ್ತ ಕರ್ತವ್ಯ ಮರೆತು ಅಡ್ಡಾದಿಡ್ಡಿಯ ಅಡ್ಡೆಯೊಳಗೆ ಬದುಕು ಕಳೆವ ಇವನು…
ಕೇವಲ ಮುನ್ನೂರು ರೂಪಾಯಿ ಕಳೆದದ್ದಕ್ಕೆ ಕಾಲೇಜು ಬಿಡಿಸಿ ,ಬಂದ ವರನಿಗೆ ಕೊಟ್ಟು ಕೈತೊಳೆದು, ಅವಳೇನಾದ್ರೂ ‘ಇನ್ನೂ ನಾಕು ವರ್ಸ ಮನೇಲೇ ಇದ್ದಿದ್ರೆ ಗುಡ್ಸಿ ಗುಂಡಾಂತರ ಮಾಡುಬುಡ್ತಿದ್ಳು ಮನೆಯಾ’ ಅಂತ ಹೆಮ್ಮೆಯಿಂದ ತನ್ನ ಗೆಳೆಯನ ಬಳಿ ಹೇಳಿದ್ದ ಅಪ್ಪ,ತವರಿಗೆ ಹೋದರೆ ಎಲ್ಲಿ ಹಣ,ಆಸ್ತಿಲಿ ಪಾಲು ಕೇಳ್ತಾಳಾ ಅಂತ ಮೊದಲೇ ಉಪಾಯದಲ್ಲಿ ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ‘ ಅನ್ನುತ್ತಲೇ ಸ್ವಯಾರ್ಜಿತದ ಆಸ್ತಿಯನ್ನು ಗಂಡುಮಕ್ಕಳಿಗೇ ಕೊಟ್ಟರೇ ಶ್ರೇಯಸ್ಸು ಎಂದು ಪರೋಕ್ಷವಾಗಿ ಹೇಳುವ ಅಮ್ಮ.
ಹಿಡಿಯಾಗಿದೆ ಮನಸು.
ಹುಟ್ಟಿದಾರಭ್ಯ ,ಹೆಣ್ಣೆಂದರೆ ನನಗೆ ಮುಖದ ಮೇಲಿನ ಹುಣ್ಣಿನಂತೆ ಎಂದಿದ್ದನ್ನೇ ಕೇಳಿ ಬೆಳೆದವಳು . ಬಾಲ್ಯದಿಂದ ಮದುವೆಯವರೆಗೆ ತೋರಿದ ಅಸಡ್ಡೆ.. ‘ಏನ್ ಬಂದ್ರೂ ಅವರಿವರ ಹತ್ರ ಬಾಯಿ ಬಿಡಬಾರದು..ಸಹಿಸ್ಕೊಂಡು ಹೋದರೆ ಮಾತ್ರ ಸಂಸಾರ’ಅನ್ನೋದು ತೀರಾ ಸಹಜವಾದ ಮಾತೇ ಆದರೂ ಮೈ ತುಂಬ ಬಾಸುಂಡೆ ಹೊತ್ತು ತವರಿಗೆ ಹೋದಾಗ ಹೀಗೆ ಸುರಿ ಮಳೆಗಾಲ.ಅಂಬೊಡೆ ಮಾಡಿ ಚಪ್ಪರಿಸುತ್ತಾ ತಿನ್ನು ತಿನ್ನು ಎನ್ನುವಾಗ ನಾನು ಹತ್ತಿಕ್ಕಲಾರದ ಸಂಕಟಕ್ಕೆ ವಾಕರಿಸಿದ್ದೆ.
ಯಾರ ಹಂಗೂ ಬೇಡ ಅಂತ ಪೇಟೆಯಲ್ಲಿ ಬದುಕುಬಹುದಾ ಎಂದರೆ ಅಪ್ಪನ ಜಿಪುಣತನಕ್ಕೆ ಬಲಿಯಾದ ವಿದ್ಯೆ.
ಜಮೀನು ಮನೆ ಲಪಟಾಯಿಸಲು ನಾನು ಕಾಲು ಕೀಳೋದನ್ನೆ ಕಾಯ್ತಿರೋ ಸಂಬಂಧಿಗಳು.
ಮಳೆಯ ರಭಸ ನಿನ್ನೆಗಿಂತ ಇವತ್ತು ಜೋರು…
ತೋಟದಲ್ಲಿ ಮೆಣಸು ಬಳ್ಳಿಗಳು ಹೀಗೆ ಮಳೆ ಹಿಡಿದರೆ ಏನು ಕಥೆಯೋ,ಕಾಯಿ ಕಚ್ಚಿದ ಕಾಫಿ ಉಳಿಯುತ್ತೊ ಹೇಗೋ ಎನ್ನುತ್ತಾ
ಕಿಟಿಕಿ ಬಾಗಿಲು ಮುಚ್ಚಿ ಕೋಣೆಗೆ ಹೋದರೆ
ಮಗಳ ಭಾವಚಿತ್ರದ ಮೇಲೆ ಮಳೆಗಾಲದ ಫಂಗಸ್ ಎದ್ದು ಅವಳ ಅರಳು ಗಣ್ಣು ಮಸುಕುಮಸುಕು.
ಬಟ್ಟೆಯಲ್ಲಿ ಶುಭ್ರಗೊಳಿಸಿ ಅವಳನ್ನೇ ತದೇಕ ನೋಡುವಾಗ ಅವಳ ಬಾಲ್ಯದ ತೊದಲು ನೆನಪಾಯಿತು.ನೀ ಯಾರು ಮಗಳು ಅಂದಕೂಡಲೇ ತೊದಲುತ್ತ ಹೇಳುತ್ತ ಇದ್ದದ್ದು ‘ಅಪ್ಪಾಮ್ಮ..’
ಅಮ್ಮನನ್ನು ಎಷ್ಟು ಹಚ್ಕೊಂಡಿದ್ದಾಳೋ ಅದರ ಮೂರು ಪಟ್ಟು ಅಪ್ಪ ಬೇಕು ಅದಕ್ಕೆ ,ಅಮ್ಮನ ಹತ್ತಿರ ಒಂದು ಮುತ್ತು ಪಡೆದು ಅಪ್ಪನ ಕೋಣೆಯಲ್ಹೋಗಿ ಮಲಗುತ್ತಿದ್ದ ಸೌಗಂಧಿಕೆಯಂತಹ ಹುಡುಗಿ..
ಯಾಕೋ ಮೈ ನಡುಗಿದ ಹಾಗೆ…
ಬೀಸಿದ ತುಂತುರಿಗೋ.?
ತಾನು ತೆಗೆದುಕೊಳ್ಳಬೇಕೆಂದುಕೊಂಡ ನಿರ್ಧಾರಕ್ಕೋ..?
ತಾನು ಏನೋ ನಿರ್ಧರಿಸಿಬಿಟ್ಟರೆ ಮಗಳು ಯಾರ ಬಳಿ ಉಳಿಯುತ್ತಾಳೆ.ಉಚ್ವಾಸಕ್ಕೆ ಅಪ್ಪನಾದರೆ ನಿಶ್ವಾಸಕ್ಕೆ ಅಮ್ಮ ಬೇಕೆನ್ನುವ ಅವಳ ಅರಳುಗಣ್ಣಿನ ಬೆಳಕು ಉಳಿದೀತೆ ನಾನು ಇಲ್ಲಿಂದ ಹೊರಟರೇ
ಅಥವಾ ಅಪ್ಪನಿಂದ ದೂರ ಮಾಡಿದರೆ.?
‘ಎಲ್ಲ್ ಹಾಳಾಗ್ ಹೋದ್ಯೇ..ತಟ್ಟೆ ಹಾಕೋದನ್ನೂ ಹೇಳಬೇಕಾ’ ಅಂತ ಅವನು ಕೂಗಿದಾಗ
ಅಲ್ಲಿಯೇ ಡಬ್ಬಿಯಲಿದ್ದ ಒಂದಿಷ್ಟು ಹತ್ತಿಯನ್ನು ಎರಡೂ ಕಿವಿಗೂ ತುರುಕಿ ಬರ್ತಿದೀನಿ ಎಂದದ್ದು ನನಗೇ ಕ್ಷೀಣವಾಗಿ ಕೇಳಿತು.
ತಿಂಗಳಿಂದಲೂ ಹಿಡಿದಿರುವ ಜಡಿಮಳೆಗೆ ಸಮಸ್ತವೂ ತೇವ ಕೂಡಿದು ಮನೆಯೊಳಗೆ ವಿಪರೀತ ಚಳಿ ಎನಿಸಿ ಮಗಳು ಬಿಟ್ಟು ಹೋದ ಸ್ವೆಟರ್ ತೊಟ್ಟು ಒಳನಡೆದೆ.
ಇನ್ನೆಂದೂ ಬದಲಾಗದ ಎದೆಯೊಂದಿಗೆ.
ಬದಲಾಯಿಸಲಾಗದ್ದನ್ನ ಒಪ್ಪಿಕ್ಕೊಳ್ಳುವ ನಿರ್ಧಾರದೊಂದಿಗೆ.
ಕಂಬನಿಗಳ ಹರಳುಗಟ್ಟಿಸಿ…
ಹೆಚ್ಚಿನ ಬರಹಗಳಿಗಾಗಿ
ಸಿಂಪಲ್ಲಾಗಿ ಬ್ಲಾಕ್ ಚೈನ್ ತಂತ್ರಜ್ಞಾನದ ಬಗ್ಗೆ
ಮಂಗಳನ ಅಂಗಳದಲ್ಲಿ ಪರ್ಸಿವರೆನ್ಸ್!
ಮಾತೃಭಾಷೆ ಮತ್ತು ಶಿಕ್ಷಣ