ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಶ್ವವಂದ್ಯ ಗಣೇಶನಿಗೆದೋ ವಂದನೆ…

ರಾಜೇಶ್ವರಿ ವಿಶ್ವನಾಥ್
ಇತ್ತೀಚಿನ ಬರಹಗಳು: ರಾಜೇಶ್ವರಿ ವಿಶ್ವನಾಥ್ (ಎಲ್ಲವನ್ನು ಓದಿ)

ಭಾರತದ ಎಲ್ಲಾ ಕಡೆ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಗಣೇಶನ ಹಬ್ಬ ವಿಶಿಷ್ಟ. ಗೌರಿ ಹಬ್ಬದ ನಂತರ ಬರುವ ಹಬ್ಬವಿದು.
ಮಕ್ಕಳಿಂದ ಹಿಡಿದು ವಯಸ್ಕರಾದಿಯಾಗಿ ನಾಡಿನ ಜನರಿಗೆಲ್ಲ ಸಂತಸ ತರುವ ಹಬ್ಬವೆಂದರೆ ಗಣಪತಿ ಹಬ್ಬ. ಜನರಿಗೆಲ್ಲ ಗಣಪತಿಯು ಇಷ್ಟೊಂದು ಇಷ್ಟವಾಗಲು ಕಾರಣ ಏನು? ಗಣಪತಿಗೆ ಅಸಹಜ ದೈಹಿಕ ಲಕ್ಷಣಗಳು? ಅವನಿಗೇಕೆ ಆನೆ ತಲೆ?ದಪ್ಪ ಹೊಟ್ಟೆ? ಇತರ ದೇವತೆಗಳಂತೆ ಅವನೇಕಿಲ್ಲ? ಕೆಲವೊಮ್ಮೆ ದ್ವಿಭುಜ? ಕೆಲವೊಮ್ಮೆ ಚತುರ್ಭುಜ, ಒಮ್ಮೆ ಷಡ್ಬುಜ ನಾದರೆ, ಕೆಲವೊಮ್ಮೆ ದ್ವಾದಶ ಭುಜಗಳು, ಸಾಧಾರಣವಾಗಿ ಕೆಂಪು ವರ್ಣವನಾದ ಗಣೇಶನಿಗೆ ಕೆಲವೊಮ್ಮೆ ಚಂದನದ ಬಣ್ಣ, ಮತ್ತೊಮ್ಮೆ ಶ್ವೇತವರ್ಣ, ಅಪರೂಪಕ್ಕೆ ಕರಾಳವಾದ ಕಪ್ಪು ಬಣ್ಣ, ಈ ರೀತಿಯ ಬಗ್ಗೆ ಹೇಳಿದ ಬಣ್ಣಗಳಿಗೂ ಅವನ ನೂರಾರು ರೂಪಗಳಿಗೂ ಅರ್ಥವಿದೆಯೆ? ಪುರಾಣಗಳಲ್ಲಿ ಗಣೇಶನ ಹಲವು ರೂಪಗಳೆಂದರೆ ಅವು ಕೇವಲ ಭ್ರಾಮಕ ಕಲ್ಪನೆಗಳಲ್ಲ. ಅವನ ಪ್ರತಿರೂಪಕ್ಕೂ ಆಧ್ಯಾತ್ಮದ ಹಿನ್ನೆಲೆ ಇದೆ ಎನ್ನುತ್ತಾರೆ. ಗಣಪತಿಯ ಅಸಂಖ್ಯ ರೂಪದ ಎಲ್ಲ ಭಂಗಿಗಳಿಗೂ ಅದರದೇ ಆದ ಲೋಕಿಕ ಮತ್ತು ಆಧ್ಯಾತ್ಮಿಕ ಅರ್ಥಗಳಿವೆ.

ವಿಶಿಷ್ಟವಾದ ಗಣೇಶ ಹಬ್ಬ.
ಶ್ರೀ ಗಣೇಶ ಚತುರ್ಥಿ ಹಬ್ಬ ಸಾಮಾನ್ಯವಾಗಿ ಗೌರಿ ಹಬ್ಬದ ಮರುದಿನವೇ ಬರುತ್ತದೆ. ಒಮ್ಮೊಮ್ಮೆ ಈ ತಾಯಿ ಮಗನ ಹಬ್ಬಗಳು ಒಂದೇ ದಿನ ಬರುವುದು ಉಂಟು. ಭಾರತದ ಎಲ್ಲಾ ಕಡೆ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಗಣೇಶನ ಹಬ್ಬ ವಿಶಿಷ್ಟವಾದದ್ದು.
ಶಿವ ನೀಡಿದ ವರ.

Mystery Behind Lord Ganesha's Elephant Head - Look4ward Store

ಶಿವ-ಪಾರ್ವತಿಯರ ಪುತ್ರನಾಗಿ, ಕಾರ್ತಿಕೇಯನ ತಮ್ಮನಾಗಿ ಈತ ದೇವಾನುದೇವತೆಗಳಲ್ಲೂ ವಿಶಿಷ್ಟ ನಾಗಿದ್ದಾನೆ. ವಿಘ್ನ ವಿನಾಶಕನೂ, ಮಹಿಮಾಪುರುಷನು ಆದ ವಿನಾಯಕನು ಶಿವನ ಗಣಗಳಿಗೆ ಒಡೆಯನಾದ ದರಿಂದ ಈತನಿಗೆ ಗಣಪತಿ, ಗಣೇಶ ಎಂಬ ಹೆಸರುಗಳಿವೆ. ಆನೆಯ ಮುಖ ಇರುವುದರಿಂದ ಗಜಮುಖ ಎಂಬ ಹೆಸರು ಸಹ ಇದೆ. ವಿನಾಯಕ, ಹೇರಂಬ, ಗಣನಾಯಕ, ಸಿದ್ಧಿ ಬುದ್ಧಿ ಪ್ರದಾಯಕ, ಏಕದಂತ, ಲಂಬೋದರ, ವಿಜ್ಞೇಶ್ವರ, ಮೂಷಕವಾಹನ ಮುಂತಾಗಿ ಹಲವು ಹೆಸರಿಂದ ಖ್ಯಾತನಾದ ಗಣಪ ಜನರ ಮನದಲ್ಲಿ ಭಕ್ತಿಯನ್ನು ಸ್ಥಿರಗೊಳಿಸುವನು. ದೇವಮಾನವ ಯಾರೇ ಆಗಿರಲಿ ಮೊದಲ ಪೂಜೆಯನ್ನು ಶಿವ-ಪಾರ್ವತಿ ಯರ ಸುಪುತ್ರನಾದ ಈ ಗಣೇಶನಿಗೆ ಸಲ್ಲಿಸಬೇಕು . ಇದು ಶಿವನು ನೀಡಿದ ವರವಾಗಿದೆ. ಈ ವರದಿಂದಾಗಿ ಮಂಗಳಮೂರ್ತಿಯ ಪೂಜೆ ತುಂಬಾ ಮಹತ್ವದಿಂದ ಕೂಡಿದೆ.ಆದುದರಿಂದ ಯಾವುದೇ ಶುಭ ಕಾರ್ಯ ಮಾಡುವಾಗಲೂ ಮೊದಲ ಪೂಜೆ ಪ್ರಾರ್ಥನೆಗಳನ್ನು ಈತನಿಗೆ ಸಲ್ಲಿಸುತ್ತಾರೆ. ಈತ ವಿದ್ಯಾ ಬುದ್ಧಿ ವಿವೇಕ ಜ್ಞಾನಗಳ ಅಧಿದೇವತೆ. ಮಹಾಭಾರತದ ಲಿಪಿಕಾರ. ಧರ್ಮಶಾಸ್ತ್ರ ಪಾರಂಗತ, ಭಾರತದ ಹಿಂದೂ ಸಂಪ್ರದಾಯದಲ್ಲಿ ಎಲ್ಲಾ ಕಾರ್ಯಗಳಲ್ಲಿ ಪ್ರಾರ್ಥನೆಗೆ ಒಲಿದು ಕಾರ್ಯವನ್ನು ನಿರ್ವಿಘ್ನಗೊಳಿಸುವನು.
ಗಣೇಶನ ರೂಪದ ವ್ಯಶಿಷ್ಟ್ಯ.
ಗಣದೀಶನ ಮೂಲಾಧಾರ ಚಕ್ರದ ಅಧಿಪತಿ ಪರಮಾತ್ಮ ವಿಘ್ನ ಪರಿಹಾರಕ. ಈತನ ಆಕೃತಿ ಬೃಹದಾಕಾರದ ಆನೆಯ ತಲೆ ಸ್ಥೂಲಕ್ಕೂ, ಇಲ್ಲಿಯ ಬುದ್ಧಿ ಸೂಕ್ಷ್ಮಕ್ಕೂ, ಸಿದ್ದಿ ಬುದ್ಧಿಗಳನ್ನು ದೊರಕಿಸುವ ಅವನ ಅನುಗ್ರಹ ಶಕ್ತಿ ಪೂರಕವಾಗಿದೆ. ಇತ ಪ್ರಣವ ಸ್ವರೂಪಿ. ಈತನ ಸೊಂಡಿಲು ಪ್ರಣವ ಆಕಾರದಲ್ಲಿದೆ. ಈಗಿನ ಹೊಟ್ಟೆ ಬ್ರಹ್ಮಾಂಡವನ್ನೆಲ್ಲ ಒಳಗೊಂಡಿದೆ, ಈತ ಸರ್ಪವನ್ನು ಹೊಟ್ಟೆಗೆ ಸುತ್ತಿದ್ದಾನೆ. ಇವನು ಬ್ರಹ್ಮಾಂಡವನ್ನು ಹೊತ್ತಿರುವವನು. ಕೈಗಳಲ್ಲಿರುವ ಆಯುಧಗಳು ಅಡ್ಡಿ ಆತಂಕ ನಿವಾರಣೆ, ದುಷ್ಟ ಶಿಕ್ಷ,ಶಿಷ್ಟರಕ್ಷೆ ಮಾಡುವಂಥವು. ಅಗಲವಾದ ಕಿವಿ ಜ್ಞಾನದ ಪ್ರತೀಕ. ಹೀಗೆ ಒಟ್ಟು ಗಣೇಶ ಬ್ರಹ್ಮಾಂಡದ ಮತ್ತೊಂದು ಸ್ವರೂಪ. ಹೀಗೆ ಕಿರಿಯದರಲ್ಲಿ ಹಿರಿಯದನ್ನು, ಮೂರ್ತಿಯಲ್ಲಿ ವಿಶ್ವ ಮೂರ್ತಿಯನ್ನು ಕಲ್ಪಿಸಿರುವ ಭಾವನೆ ಅದ್ಭುತವಾಗಿದೆ.
ಗಣಪತಿಗೆ ಇಪ್ಪತ್ತೊಂದರ ವಿಶೇಷ.
ಗಣೇಶನಿಗೆ ಎಲ್ಲವೂ 21ರ ವಿಶೇಷ. ಇಲ್ಲಿ ಗರಿಕೆಗೆ ಅಗ್ರಸ್ಥಾನ. ಹಾಗೆ ಪತ್ರ ಪುಷ್ಪವು 21 ರ ಬಗೆ, ಹತ್ತಿ ಎಳೆಯು 21, ಇನ್ನೂ ಅಡಿಗೆಯಲ್ಲೂ 21 ಬಗೆ, ಪಂಚ ಪಕ್ವಾನ್ನಗಳು, ಪಂಚಭಕ್ಷ್ಯಗಳು ಇವುಗಳನ್ನು ನಿವೇದಿಸಬೇಕು.
ಮೋದಕ ಪ್ರಿಯ.
ಇನ್ನು ಗಣೇಶನನ್ನು ತಿಂಡಿಪೋತ ಎಂದು ಕರೆಯುವರು. ಗಣೇಶನಿಗೆ ಪ್ರಿಯವಾದ ಮೋದಕ ಊಟ. ಅವನು ಎಲ್ಲರ ಮನೆಯ ನೆಂಟನು. ಮೋದಕ ರುಚಿಯನ್ನು ಕಂಡ ಅವನು ಯಾರು ಬಡಿಸಿದರು ಬೇಡ ಎನ್ನದ ಜಾಯಮಾನ. ಗಣೇಶನಿಗೆ ಅತ್ಯಂತ ಪ್ರಿಯ ಭಕ್ಷಗಳೆನಿಸಿದ ಪಂಚ ಭಕ್ಷಗಳು,ಪರಮಾನ್ನಗಳು, ಪಂಚಕಜ್ಜಾಯ, ಕರ್ಜಿಕಾಯಿ,ಕರಿಗಡಬು,ಸೂಸಲುಕಡಬು, ವಿಧವಿಧವಾದ ಉಂಡೆಗಳು, ಚಕ್ಕಲಿ ಹಾಗೂ 21 ಮೋದಕಗಳ ನೇವೇದ್ಯ ಆತನಿಗೆ ತುಂಬಾ ಇಷ್ಟ.
‘ ಮೋದಕ ‘ಎಂಬುದರ ಶಬ್ದಾರ್ಥವೇ ಮುದನೀಡುವಂತದ್ದು ಎಂದು. ಇಪ್ಪತ್ತೊಂದು ಎಂಬ ಸಂಖ್ಯೆ ನಮ್ಮ ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಪ್ರಾಣಶಕ್ತಿಯು ಐದು ಕಾರ್ಯಗಳು, ಪಂಚಭೂತಗಳು ಮತ್ತು ಮನಸ್ಸು ಇವುಗಳ ಸಂಕೇತ ಎಂದುಕೊಳ್ಳಬಹುದು.


ಮೋದಕ ಜ್ಞಾನದ ಪ್ರತೀಕ.
‘ಮೋದ’ ಎಂದರೆ ಆನಂದ. ‘ಕ’ ಎಂದರೆ ಚಿಕ್ಕ ಎಂದರ್ಥ.ಮೋದಕ ಎಂದರೆ ಚಿಕ್ಕದಾದರೂ ಆನಂದ ನೀಡುವ ತಿನಿಸು ಎಂದು ಗಣೇಶನ ಹಬ್ಬದಲ್ಲಿ ಪ್ರಥಮ ಸ್ಥಾನ ಪಡೆದಿದೆ.ಗಣೇಶನು ಜ್ಞಾನದ (ವಿದ್ಯೆಯ) ದೇವತೆಯಾಗಿದ್ದಾನೆ.
ಮೋದಕವು ಜ್ಞಾನದ ಪ್ರತೀಕವಾಗಿದೆ. ಮೋದಕವು ಸಿಹಿಯಾಗಿರುತ್ತದೆ.ಅದೇ ರೀತಿ ಜ್ಞಾನದ ಆನಂದವೂ ಸಿಹಿಯಾಗಿರುತ್ತದೆ. ಆದ್ದರಿಂದ ಅದನ್ನು ಜ್ಞಾನ ಮೋದಕವೆಂದು ಕರೆಯುತ್ತಾರೆ. ಅಷ್ಟೇ ಅಲ್ಲದೇ ಗಣೇಶನ ಇನ್ನೊಂದು ಹೆಸರೇ ‘ಮೋದಕ ಪ್ರಿಯ’ ಎಂದು. ಈ ಕಾರಣದಿಂದಾಗಿ ಗಣೇಶನ ಕೈಯಲ್ಲಿ ಮೋದಕ ಇದೆ.
ಮೋದಕ ಆಕಾರವು ತೆಂಗಿನಕಾಯಿಯ ರೀತಿ ಇರುತ್ತದೆ. ತುದಿಯಲ್ಲಿ ಸೊಂಡಿಲನಾ ಕಾರವಾಗಿರುತ್ತದೆ. ಇದು ಹಬ್ಬ ಹರಿ ದಿನಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಮೋದಕವು ಭಕ್ತರ ವಿಘ್ನಗಳನ್ನು ಮತ್ತು ಅವರಿಗಾಗುವ ಕೆಟ್ಟ ಶಕ್ತಿಗಳ ತೊಂದರೆಗಳನ್ನು ತನ್ನಲ್ಲಿ ಸೆಳೆದುಕೊಳ್ಳುತ್ತದೆ. ಗಣಪತಿ ಮೋದಕವನ್ನು ತಿನ್ನುತ್ತಾನೆ, ಅಂದರೆ ವಿಘ್ನಗಳು ಮತ್ತು ಕೆಟ್ಟ ಶಕ್ತಿಗಳನ್ನು ನಾಶಮಾಡುತ್ತಾನೆ.
ಗಣೇಶ ದೇವರ ಸಂದೇಶ.
ಇನ್ನು ಗಣೇಶ ಚೌತಿಯಂದು ಶ್ರೀ ಗಣೇಶ ದೇವರಿಗೆ ಅರ್ಪಿಸುವ ಅವಲಕ್ಕಿ ಪಂಚಕಜ್ಜಾಯವು ಕಷ್ಟನಷ್ಟದ ಕಾವಿನಿಂದ ಬಂದರೂ ಹೊಡೆತ ತಿಂದರೂ (ಅವಲಕ್ಕಿ) ಉದಾತ್ತತೆ ಮೈಗೂಡಿಸಿಕೊಂಡು (ತೆಂಗಿನಕಾಯಿ) ಕರ್ಮದ ಹೊರೆಯನ್ನು ಕಿರಿದಾಗಿಸಿ (ಎಳ್ಳು) ಪ್ರಕೃತಿಗಾಗಿ ಹಂಬಲಿಸುತ್ತಾ (ಕಬ್ಬು) ದೈವೀಗುಣ ಮೈಗೂಡಿಸಿ ಕೊಳ್ಳುತ್ತಾ (ಬೆಲ್ಲ) ತಾಳ್ಮೆಗೆಡದೇ ಮುನ್ನೆಡೆಯುವವರಿಗೆ ತನ್ನ ಕೃಪಾ ಪ್ರಸಾದದ ಸವಿ ಕಟ್ಟಿಟ್ಟದ್ದು ಎಂಬ ಶ್ರೀ ಗಣೇಶ ದೇವರ ಸಂದೇಶವನನ್ನೇ ಬಿಂಬಿಸುತ್ತದೆ.
ಪುರಾಣಗಳಲ್ಲಿ ಗಣೇಶ.
ಗಣಪತಿಯ ಹುಟ್ಟು, ಬುದ್ಧಿಶಕ್ತಿ, ಹೆಚ್ಚುಗಾರಿಕೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ, ಪುರಾಣಗಳನ್ನು ಆಧರಿಸಿ ಕೆಲವಾರು ಮನೋಜ್ಞ ಕಥೆಗಳಿವೆ.
ಗಣಪತಿಯ ಭಾರತದಲ್ಲೆ ಅಲ್ಲದೆ ವಿದೇಶಗಳಲ್ಲಿಯೂ ಸಹ ಪ್ರಭಾವ ಬೀರಿದ್ದಾನೆ. ನೇಪಾಳ, ಭೂತಾನ, ಕಾಂಬೋಡಿಯಾ, ಚೀನಾ, ಜಪಾನ್, ಇಂಡೋನೇಷಿಯಾ, ಮುಂತಾದ ರಾಷ್ಟ್ರಗಳಲ್ಲಿ ಈತನ ವ್ಯಾಪ್ತಿ ಕಂಡುಬಂದಿದೆ. ಅಲ್ಲಿ ದೊರೆತಿರುವ ವಿಗ್ರಹಗಳು ಈ ಅಂಶವು ವ್ಯಕ್ತವಾಗುತ್ತದೆ. ಜೈನ ಧರ್ಮಕ್ಕೆ ಪ್ರವೇಶಿಸಿದ ಗಣಪತಿ ಜಿನೇಂದ್ರ ಎನಿಸಿದ. ಭಾರತೀಯ ಸಂಸ್ಕೃತಿಯ ವ್ಯಾಪಕತೆಗೆ ಇದೊಂದು ಉತ್ತಮ ನಿರ್ದೇಶನವೂ ಕೂಡ ಎಂದು ಹೇಳಬಹುದು.
ರಾಷ್ಟ್ರೀಯ ಸ್ವರೂಪ.
ವರ್ಷಕ್ಕೊಮ್ಮೆ ಬರುವ ಗಣಪತಿ ಹಬ್ಬವನ್ನು ಸಂತೋಷ ಸಡಗರದಿಂದ ಆಚರಿಸುತ್ತಾರೆ. ಹಬ್ಬಕ್ಕೆ ರಾಷ್ಟ್ರೀಯ ಸ್ವರೂಪವನ್ನು ಕೊಟ್ಟವರು ಲೋಕಮಾನ್ಯ ತಿಲಕರು. ಅವರು ಗಣಪತಿಯ ಮಹತ್ವವನ್ನರಿತು ಜನರಲ್ಲಿ ರಾಷ್ಟ್ರೀಯ ಭಾವನೆ ಮೂಡಿಸಲು ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು.
ಗಣೇಶನ ಪೂಜಾ ವಿಧಾನ.
ಗಣೇಶನ ಪೂಜೆ ವಿಧಾನ ವಿಶೇಷವಾದುದಾಗಿದೆ. ಗಣಪತಿಯ ಪೂಜಾವಿಧಾನದಲ್ಲಿ ಧ್ಯಾನ, ಆವಾಹನ, ಆಸನ, ವಾದ್ಯ,ಅರ್ಘ್ಯ, ಆಚೆಮನೆ, ಅಭಿಷೇಕ, ವಸ್ತ್ರ, ಉಪವೀತ, ಆಭರಣ, ಗಂಧ,ಅಕ್ಷತೆ, ಪುಷ್ಪ ಪೂಜೆ, ಧೂಪ,ದೀಪ, ನೇವೇದ್ಯ, ತಾಂಬೂಲ, ನೀಲಾಂಜನ, ಮಂತ್ರ ಪುಷ್ಪ, ಪ್ರದಕ್ಷಿಣೆ, ದುರ್ವೆಯ ಸಮರ್ಪಣೆ, ಅಂದರೆ 21 ಸಂಖ್ಯೆಯಲ್ಲಿ ಗರಿಕೆ ಜೋಡಿಗಳನ್ನು ಸಮರ್ಪಿಸುವುದು. ಗಣಪತಿಗೆ ಪ್ರಿಯವಾದದ್ದು ಗರಿಕೆ. ವ್ರತಾಚರಣೆ ಸಂದರ್ಭದಲ್ಲಿ ಗಣಪತಿಗೆ ಗರಿಕೆಯನ್ನಿಟ್ಟು ಪೂಜಿಸುವ ಸಂಪ್ರದಾಯ ಬೆಳೆದು ಬಂದಿದೆ. ಆದ್ದರಿಂದ ‘ಗಣಾಧಿಪ’ಗರಿಕೆ ಪ್ರಿಯ ಎನ್ನಲಾಗಿದೆ. ನಂತರ ಕಡುಬು, ಇಪ್ಪತ್ತೊಂದು ಮೋದಕ, ಇಪ್ಪತ್ತೊಂದು ನಮಸ್ಕಾರ ಗಣೇಶನಿಗೆ ಇಷ್ಟವಾದದ್ದು. ಬಗೆಬಗೆಯ ಭಕ್ಷ್ಯ ಪಂಚಕಜ್ಜಾಯ ನೈವೇದ್ಯ ಮಾಡುವುದು, ಅನಂತರ ಪ್ರಾರ್ಥನೆ ಇವೇ ಮೊದಲಾದ ಕ್ರಮಗಳನ್ನು ಅನುಸರಿಸಲಾಗುವುದು.
ಗಣೇಶನ ಈ ವ್ರತವನ್ನು ಕೆಲವರು ಒಂದು ದಿನದಲ್ಲಿ ಮುಗಿಸುತ್ತಾರೆ. ಮತ್ತೆ ಕೆಲವರು ಅವರವರ ಅನುಕೂಲಕ್ಕೆ ತಕ್ಕಂತೆ ಐದು ದಿನ,ಹನ್ನೊಂದು ದಿನಗಳಂತೆ ಇಟ್ಟುಕೊಂಡು ಆಚರಿಸುತ್ತಾರೆ. ಕೊನೆಯಲ್ಲಿ ಗೌರಿ-ಗಣೇಶ ವಿಗ್ರಹವನ್ನು ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತದೆ.
ಪರಬ್ರಹ್ಮ ಸ್ವರೂಪಿ.
ಗಣೇಶನ ಪೂಜೆ ಮಾಡುವುದರ ಮೂಲಕ ಅವನ ಹಿರಿತನವನ್ನು ಹಿರಿಯರಿಗೆ ಗಣೇಶ ಕೊಡುವ ಗೌರವವನ್ನು ನೀಡುವ ಬಗ್ಗೆ ಇಂದಿನ ಕಿರಿಯರಿಗೆ ಗಣೇಶ ಮಾದರಿಯಾದರೆ ಗಣೇಶನ ಪೂಜೆ ಮಾಡುವುದರಿಂದ ದೊರೆಯುವ ಪ್ರತಿಫಲ ದೊರೆಯುವುದರಲ್ಲಿ ಅನುಮಾನವಿಲ್ಲ. ಪರಬ್ರಹ್ಮ ಸ್ವರೂಪಿಯೇ ಆದ ಗಣೇಶನ ಪಾದತಲದಲ್ಲಿ ನಮ್ಮನ್ನೇ ಸಂಪೂರ್ಣವಾಗಿ ಸಮರ್ಪಿಸಿ ಕೊಳ್ಳಬೇಕು ಎಂಬುದೇ ಈ ಪೂಜೆಯಿಂದ ನಾವು ಕಲಿಯಬೇಕಾದ ಮಹಾಪಾಠ.
ಈ ಗೌರಿ ಗಣೇಶನ ಹಬ್ಬಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡು ಶುಭ ಸ್ವಾಗತ ಕೋರೋಣ.