ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಜಿ.ಎನ್. ಉಪಾಧ್ಯ
ಇತ್ತೀಚಿನ ಬರಹಗಳು: ಡಾ. ಜಿ.ಎನ್. ಉಪಾಧ್ಯ (ಎಲ್ಲವನ್ನು ಓದಿ)

ವೈದ್ಯರೆಂದರೆ, ಡಾಕ್ಟರ್ ಎಂದರೆ ಹೀಗಿರುತ್ತಾರೆ ಎಂದು ಹೆಸರೆತ್ತಿ ಹೇಳಬಹುದಾದವರು ಪದ್ಮಭೂಷಣ ಡಾ|| ಬಿ.
ಎಂ. ಹೆಗ್ಡೆ. ಅವರ ಜೀವನ ಸಾಧನೆ ನಾಡಿಗೆ ಮಾದರಿ. ಡಾ|| ಬಿ. ಎಂ. ಹೆಗ್ಡೆ ಅವರು ನಾಮಾಂಕಿತ ವೈದ್ಯರಾಗಿ,
ಸಂಶೋಧಕರಾಗಿ, ಲೇಖಕರಾಗಿ, ವಾಗ್ಮಿಯಾಗಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೈ ಎನಿಸಿಕೊಂಡ ಅಪರೂಪದ ಸಾಧಕ.

‘ವೈದ್ಯೋ ನಾರಾಯಣೋ ಹರಿಃ’ ಎಂಬುದು ನಮ್ಮಲ್ಲಿ ಪ್ರಾಚೀನ ಕಾಲದಿಂದಲೂ ಕೇಳಿ ಬಂದ ಮಾತು. ವೈದ್ಯರೆಂದರೆ ಸಾಕ್ಷಾತ್ ಭಗವಂತನ ರೂಪ ಎಂಬ ನಂಬಿಕೆ ನಮ್ಮವರದು. ಈ ನಂಬಿಕೆಯನ್ನು ನಿಜಗೊಳಿಸಿದ ಬೆರಳೆಣಿಕೆಯ ವೈದ್ಯರಲ್ಲಿ
ಡಾ|| ಬಿ. ಎಂ. ಹೆಗ್ಡೆ ಅವರ ಹೆಸರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ನೇರ ನಡೆ-ನುಡಿಗೆ ಹೆಸರಾದ ಅವರದ್ದು
ದೇದೀಪ್ಯಮಾನವಾದ ವ್ಯಕ್ತಿತ್ವ. ಮನುಕುಲದ ಏಳಿಗೆ, ಸಮಾಜದ ಸ್ವಾಸ್ಥ್ಯ ಅವರ ಗುರಿ. “ಸಂಪತ್ತುಗಳು ಎಷ್ಟಿದ್ದರೂ ಮನಃಸಮಾಧಾನವೊಂದಿಲ್ಲದಿದ್ದರೆ ಆ ವ್ಯಕ್ತಿಗೆ ನೆಮ್ಮದಿ ಇರುವುದಿಲ್ಲ. ಈ ಲೋಕದಲ್ಲಿ ಅತ್ಯಂತ ಸಾರವತ್ತಾದ ಸಂಪತ್ತು ಮನಃಸಮಾಧಾನ. ಎಲ್ಲರನ್ನೂ ಪ್ರೀತಿಸಿ; ಯಾರನ್ನೂ ದ್ವೇಷಿಸಬೇಡಿ. ಬದುಕಿನ ಸಹಜ ಲಯ-ಲಹರಿಗಳನ್ನು ಕಳೆದುಕೊಳ್ಳಬೇಡಿ. ಇದೇ ಆರೋಗ್ಯದಗುಟ್ಟು” ಎಂಬುದನ್ನು ತಿಳಿ ಹೇಳುತ್ತಾ ಬಂದ ವೈದ್ಯೋತ್ತಮ ಡಾ|| ಬಿ.ಎಂ. ಹೆಗ್ಡೆ.

ಡಾ|| ಬಿ. ಎಂ. ಹೆಗ್ಡೆ ಅವರು ನಮ್ಮ ದೇಶ ಕಂಡ ಕ್ರಿಯಾಶೀಲ ಪ್ರತಿಭಾವಂತ ವೈದ್ಯರಲ್ಲಿ ಒಬ್ಬರು. ಮಂಗಳೂರಿನ ಕಸ್ತೂರಬಾ ಆಸ್ಪತ್ರೆಯಲ್ಲಿ ಅವರು ಡಾಕ್ಟರ್ ಆಗಿ ಬಹುಕಾಲ ಸೇವೆ ಸಲ್ಲಿಸಿ ಅಪಾರವಾದ ಜನಪ್ರೀತಿಗೆ ಪಾತ್ರರಾದವರು. ಮಣಿಪಾಲ
ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಡೀಮ್ಡ್ ವಿ.ವಿ.)ದ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಲಕ್ನೌ ವಿಶ್ವವಿದ್ಯಾಲಯದಿಂದ ಎಮ್.ಡಿ. ಪದವಿ ಪಡೆದು, ಹಾರ್ವರ್ಡ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ
ನೊಬೆಲ್ ಪ್ರಶಸ್ತಿ ವಿಜೇತ ಬರ್ನಾರ್ಡ್ ಲಾಂಗ್ ಅವರ ಮಾರ್ಗದರ್ಶನದಲ್ಲಿ ಹೃದಯಶಾಸ್ತ್ರದ ಉನ್ನತ ತರಬೇತಿ ಪಡೆದು, ಭಾರತಕ್ಕೆ ಮರಳಿ ಬಂದು ಮಂಗಳೂರಿನಲ್ಲಿ ಶುಶ್ರೂಷೆಗೈದು, ಮನೆಮಾತಾದ ಹಿರಿಮೆ ಡಾ|| ಹೆಗ್ಡೆ ಅವರದು. ವೈದ್ಯಕೀಯ ರಂಗದಲ್ಲಿ ಅವರು ಗೈದ ಪರಿಚಾರಿಕೆ ಬಹುದೊಡ್ಡದು. ಸಮುದಾಯದ ಹಿತಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಹೆಗ್ಡೆಯವರು
ದುಡ್ಡು-ದೊಡ್ಡಸ್ತಿಕೆ ನೋಡದೆ ರೋಗದ ಮೇಲೆ ಕಣ್ಣಿಟ್ಟು ಉಪಚಾರಗೈದ ಧನ್ವಂತರಿ! ಪ್ರಸಿದ್ಧ ವೈದ್ಯರಾಗಿದ್ದುಕೊಂಡು ವೈದ್ಯಕೀಯ ಜಗತ್ತಿನ ಅಪಪ್ರಥೆಗಳನ್ನು, ಭ್ರಮೆಗಳನ್ನು ಮುರಿದು ಹಾಕುತ್ತಾ ಜನಸಮುದಾಯದಲ್ಲಿ ಧೈರ್ಯ ಆತ್ಮವಿಶ್ವಾಸವನ್ನು ತುಂಬಿದ ವಿರಳ ವೈದ್ಯಭೂಷಣ ಅವರು.


ಡಾ|| ಹೆಗ್ಡೆ ಅವರು ನಡೆದ ಹಾದಿ ವಿಶಿಷ್ಟ. ಡಾ|| ಬಿ. ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿ, ಜಗದೀಶಚಂದ್ರ ಬೋಸ್
ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹತ್ತು ಹಲವು ದೇಶ ವಿದೇಶಗಳ ಪ್ರಶಸ್ತಿ
ಪುರಸ್ಕಾರಗಳು ಅವರನ್ನು ಅರಸಿಕೊಂಡು ಬಂದಿರುವುದು ಅವರ ಸಾಧನೆಗೆ ಸಂದ ಗೌರವ. ಮಾನವತೆ, ವಿಜ್ಞಾನ, ತತ್ವಶಾಸ್ತ್ರ, ಈ ಮೂರನ್ನು ಒಳಗೊಂಡ ಅವರ ವಿಚಾರಧಾರೆ ವರ್ತಮಾನದ ತುರ್ತು ಸಹ ಆಗಿದೆ.


“ವೈದ್ಯಭೂಷಣ ಡಾ|| ಬಿ. ಎಂ. ಹೆಗ್ಡೆ” ಇದು ನಮ್ಮ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿ ಕಲಾ ಭಾಗ್ವತ್ ಅವರ ಎಂ.ಎ. ಶೋಧ ಸಂಪ್ರಬಂಧ. ಹನ್ನೆರಡು ಪ್ರಮುಖ ಅಧ್ಯಾಯ ಹಾಗೂ ಉಪ ಅಧ್ಯಾಯಗಳಲ್ಲಿ ಡಾ|| ಬಿ. ಎಂ. ಹೆಗ್ಡೆ ಅವರ ಯಶೋಗಾಥೆಯನ್ನು, ಸಾಹಸ ಸಾಧನೆಯನ್ನು ಹೃದ್ಯವಾಗಿ ಇಲ್ಲಿ ದಾಖಲಿಸಿರುವುದು ಗಮನೀಯ ಅಂಶ. ವೈದ್ಯಕೀಯ ವಿಜ್ಞಾನದ ಫಲವನ್ನು ಸಮಾಜೋದ್ಧಾರಕ್ಕಾಗಿ ಪೂರ್ಣವಾಗಿ ಬಳಸಿಕೊಳ್ಳುವುದು ಹೇಗೆ? ನಮ್ಮ ದೇಸಿ ತಿಳಿವನ್ನು ಆಯುರ್ವೇದವನ್ನು ಎಷ್ಟರಮಟ್ಟಿಗೆ ಅಳವಡಿಸಿಕೊಂಡರೆ ಉತ್ತಮ? ಆರೋಗ್ಯಪೂರ್ಣ ಮನಸ್ಸುಗಳ ನಿರ್ಮಾಣ ಹೇಗೆ? ಹೀಗೆ ವಿಭಿನ್ನ ನೆಲೆಗಳ ಚಿಕಿತ್ಸೆಗಳನ್ನು ಗೈಯುತ್ತಾ ಬಂದ ಡಾ|| ಹೆಗ್ಡೆ ಅವರ ವ್ಯಕ್ತಿತ್ವದ ಹೆಚ್ಚುಗಾರಿಕೆಯನ್ನು ಕಲಾ ಭಾಗವತ್ ಅವರು ಸೊಗಸಾಗಿ ಅನಾವರಣಗೊಳಿಸಿದ್ದಾರೆ.

ಡಾ. ಜಿ.ಎನ್. ಉಪಾಧ್ಯ, ಮುಂಬೈ ವಿಶ್ವವಿದ್ಯಾಲಯ
ಡಾ. ಬಿಎಂ ಹೆಗ್ಡೆ ಅವರ ಜೊತೆ ಲೇಖಕರು ಶ್ರೀಮತಿ ಕಲಾ ಭಾಗ್ವತ್

“ಎಲ್ಲ ಕಾಯಿಲೆಗಳಿಗೂ ಒತ್ತಡ ಹಾಗೂ ಚಿಂತೆಯೇ ಕಾರಣ. ಆರೋಗ್ಯವಾಗಿರುವುದು ಎಂದರೆ ಕಾಯಿಲೆ
ಇಲ್ಲದಿರುವುದು ಎಂದಲ್ಲ. ಲವಲವಿಕೆಯಿಂದ, ಸುವಿಚಾರಗಳಿಂದ ಕಾರ್ಯಪ್ರವೃತ್ತರಾಗಿರುವುದೇ ನಿಜವಾದ ಆರೋಗ್ಯ. ಪರಸ್ಪರ
ದಯೆ, ಕರುಣೆ ಅನುಭೂತಿಗಳಿದ್ದರೆ ಮಾನಸಿಕ ಸಂತೋಷ. ಅದೇ ದೇಹದ ಆರೋಗ್ಯಕೂಡ. ವಿಜ್ಞಾನವು ದೇವರಿದ್ದ ಹಾಗೆ.

ಅವೆರಡರ ನಡುವೆ ಭೇದವಿಲ್ಲ. ಜಗತ್ತನ್ನು ನಡೆಸುವ ಒಂದು ಸೂತ್ರಧಾರಿ ಇರಲೇಬೇಕು. ಸ್ವಯಂ ಪ್ರೇರಿತರಾಗಲು ಸಾಧ್ಯವಿಲ್ಲ. ಕರ್ಮವಾಗಬೇಕಾದರೆ ಕರ್ತೃ ಅಗತ್ಯವಾಗಿ ಬೇಕು. ವೈದ್ಯಕೀಯದಲ್ಲಿಯೂ ಇದು ಅನ್ವಯಿಸುತ್ತದೆ. ಶಸ್ತ್ರಚಿಕಿತ್ಸೆ ಮಾಡುವಾಗ, ಕೌಶಲ್ಯ ವೈದ್ಯರದ್ದು, ಔಷಧಗಳೆಲ್ಲವೂ ತಯಾರಿಸಿ ಸಿದ್ಧಪಡಿಸಿರುವಂತವು, ಯಂತ್ರಗಳು ಭೌತಿಕವಾದವು.
ಇದರಲ್ಲಿ ‘ದೇವರು’ ಎಂಬ ಶಕ್ತಿಯ ದಯೆಯೂ ಇರುತ್ತದೆ. ಇದು ನಾವು ಮಾಡುವ ಎಲ್ಲಾ ಕಾರ್ಯಗಳಿಗೂ ಅನ್ವಯಿಸುತ್ತದೆ. ಈಗಾಗಲೇ ಪೂರ್ವ ಕರ್ಮಗಳ ಕುರಿತು ಅಧ್ಯಯನವಾಗಿದೆ. ಅದಕ್ಕಾಗಿ ಎಲ್ಲದಕ್ಕೂ ಮೂಲದಲ್ಲಿ ಒಂದು ಭಾವ, ಆ ಭಾವದ ಹಿನ್ನೆಲೆಯಲ್ಲಿ ಒಂದು ನಂಬಿಕೆ, ನಂಬಿಕೆಯ ಹಿಂದಿರುವ ಒಂದು ಭದ್ಧತೆ ಇದೆ. ನಂಬಿಕೆ ಮುಖ್ಯ. ‘

‘Faith heals, faith affects mind and mind affects the body.’

.’ ಆರೋಗ್ಯಕ್ಕೆ ಬಹಳ ಸರಳವಾದ ಸೂತ್ರವಿದು. ಸ್ವಾಮಿ
ವಿವೇಕಾನಂದರು ಹೇಳುವಂತೆ ‘Sound Mind Sound Body’ ವೈದ್ಯಕೀಯದಲ್ಲಿ ಇದರ ಸಾರವಿಷ್ಟೇ. ಮನಸ್ಸು ಸರಿಯಾಗಿದ್ದರೆ ಆರೋಗ್ಯ ಸರಿಯಾಗಿರುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಶರೀರವು ಮೊದಲು ಶಬ್ಧ ಮಾಡುತ್ತದೆ. ಅದಕ್ಕೆ ಪೂರಕವಾಗಿ ಮನಸ್ಸು ಗದ್ದಲವಾಗಿ ಅನಾರೋಗ್ಯವಾಗುತ್ತದೆ, ಅನಾಚಾರಗಳಾಗುತ್ತವೆ. ಇದು ಸಲ್ಲ. ವೈದ್ಯನಾದವನಿಗೆ ಇದರ ಪರಿಕಲ್ಪನೆ
ಇರಬೇಕು. ವೈದ್ಯರು ವೈದ್ಯಕೀಯದ ಜೊತೆಗೆ ಸ್ವಲ್ಪಮಟ್ಟಿಗೆ ತತ್ವಶಾಸ್ತ್ರ ತಿಳಿದಿರುವುದರ ಹಾಗೂ ಸಂತ
ಮನೋಭಾವದವರಾಗಿರುವುದರ ಅಗತ್ಯತೆ ಇದೆ. ಅದಕ್ಕಾಗಿಯೇ ‘ದೇವರು’ ಎಂಬ ಪರಿಕಲ್ಪನೆಯಲ್ಲಿ ನಂಬಿಕೆ, ಆರೋಗ್ಯಕ್ಕೂ ಪೂರಕ”. ಹೀಗೆ ಅನೇಕ ಮಹತ್ವದ ಸಂಗತಿಗಳನ್ನು ಡಾ|| ಹೆಗ್ಡೆ ಅವರೊಂದಿಗೆ ನಡೆಸಿರುವ ಸಂದರ್ಶನದಲ್ಲಿ ಹಿಡಿದಿರುವುದರಿಂದ ಈ ಕೃತಿಯ ಮಹತ್ವ ಮತ್ತಷ್ಟು ಹೆಚ್ಚಿದಂತಾಗಿದೆ.


ಡಾ|| ಬಿ. ಎಂ. ಹೆಗ್ಡೆ ಅವರು ಒಳ್ಳೆಯ ವಾಗ್ಮಿ. ಕನ್ನಡ, ತುಳು, ಇಂಗ್ಲಿಷ್, ತಮಿಳು, ಕೊಂಕಣಿ ಹೀಗೆ ಹಲವು
ಭಾಷೆಗಳಲ್ಲಿ ಅವರ ಮಾತು ಪುಂಖಾನುಪುಂಖ. ಅವರು ನಿಷ್ಠುರವಾದಿ. ಹೀಗಾಗಿ ಸತ್ಯವನ್ನು ನುಡಿಯಬಲ್ಲರು. ಹಾಗಾಗಿ ಅಯಸ್ಕಾಂತದಂತೆ ಸೆಳೆಯಬಲ್ಲದು ಅವರ ಮಾತಿನ ಸಾಮಥ್ರ್ಯ. ವೈದ್ಯಜಗತ್ತಿನ ತವಕ-ತಲ್ಲಣಗಳನ್ನು ಅವರು ತಮ್ಮ ಮಾತು ಕೃತಿಗಳಲ್ಲಿ ಅನಾವರಣಗೊಳಿಸುತ್ತಾ ಬಂದ ದಿಟ್ಟ ವೈದ್ಯ. ಅವರದು ದಣಿವರಿಯದ ಚೇತನ; ಇತ್ಯಾತ್ಮಕ ತತ್ವದರ್ಶನ.
ಪಾಶ್ಚಾತ್ಯ ವೈದ್ಯ ಪದ್ಧತಿಯ ಧನಾತ್ಮಕ ಅಂಶವನ್ನು ಎತ್ತಿ ಹಿಡಿಯಬಲ್ಲ ಅವರು ಏಕಕಾಲಕ್ಕೆ ಅಲ್ಲಿನ ಧನದಾಹಿ ಪ್ರವೃತ್ತಿ, ವ್ಯಾಪಾರಿ ಮನೋಭಾವ, ಡೊಂಬರಾಟ, ಮೋಸ, ವಂಚನೆಗಳನ್ನು ಮುಲಾಜಿಲ್ಲದೆ ಖಂಡಿಸುತ್ತ ಬಂದ ವಿವರ ಕೃತಿಯಲ್ಲಿ ಚೆನ್ನಾಗಿ ಚಿತ್ರಣಗೊಂಡಿದೆ.


ಡಾ|| ಬಿ. ಎಂ. ಹೆಗ್ಡೆ ಅವರು ಅತ್ಯುತ್ತಮ ವೈದ್ಯರಷ್ಟೇ ಅಲ್ಲ. ಅವರು ಒಬ್ಬ ಪ್ರಭಾವಶಾಲಿ ಲೇಖಕರು.
ವೈದ್ಯಕೀಯಕ್ಷೇತ್ರ, ಆರೋಗ್ಯ, ಪರಿಸರ, ಜೀವನಶೈಲಿ, ವ್ಯಾಯಾಮದ ಅಗತ್ಯ, ಯೋಗ್ಯ ಶಿಕ್ಷಣ, ಸಂಸ್ಕಾರ ಹೀಗೆ ಅನೇಕ ಸಂಗತಿಗಳ ಕುರಿತು ಅವರು ಬಹುಮೌಲಿಕ ಬರವಣಿಗೆ ಮಾಡಿ ಪ್ರಸಿದ್ಧ ಲೇಖಕರಾಗಿ ಜನಪ್ರಿಯರಾಗಿದ್ದಾರೆ. ‘

‘What doctors
do not get in medical colleges…’

’ ಎಂಬ ಕೃತಿ ಅನೇಕ ದೃಷ್ಟಿಯಿಂದ ಮಹತ್ವದ್ದಾಗಿದೆ. ವೈದ್ಯಕೀಯ ಮಹಾವಿದ್ಯಾಲಯಗಳಿಂದ ಕಲಿತು ಹೊರಬರುವ ವೈದ್ಯರು ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಗಟ್ಟಿದನಿಯಲ್ಲಿ ಹೇಳಿದ ಶ್ರೇಯಸ್ಸು ಹೆಗ್ಡೆಯವರದ್ದು. ಡಾ|| ಹೆಗ್ಡೆ ಅವರ ಪ್ರಮುಖ ಕೃತಿಗಳ ಸಾರ ಸತ್ವವನ್ನು ಇಲ್ಲಿ
ಲೋಕಮುಖಕ್ಕೆ ಪರಿಚಯಿಸಿರುವುದು ಸ್ತುತ್ಯಕಾರ್ಯ.
ಡಾ|| ಹೆಗ್ಡೆ ಅವರದ್ದು ಬಹುಮುಖ ಸಾಧನೆ. ತುಂಬು ಜೀವನಾನುಭವ, ವ್ಯಾಪಕ ಅಧ್ಯಯನ, ಸಂಶೋಧನೆಗಳಿಂದ ಸಮ್ಮಿಳನಗೊಂಡ ಸುಸಂಸ್ಕೃತ ಧೀಮಂತ ಚೇತನ. ಈಗ ಅವರಿಗೆ 82 ರ ಹರೆಯ. ಈ ಇಳಿ ವಯಸ್ಸಿನಲ್ಲೂ ಅವರು ತಮ್ಮನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ. ನಿಜ ಅರ್ಥದಲ್ಲಿ ಅವರು ವೈದ್ಯಭೂಷಣ! ಡಾ|| ಬಿ. ಎಂ. ಹೆಗ್ಡೆಯವರು ಭಾರತದ ಹೆಸರಾಂತ ಅಲೋಪತಿ ವೈದ್ಯ, ಪ್ರಖ್ಯಾತ ಹೃದ್ರೋಗತಜ್ಞ, ವೈದ್ಯ ವಿಜ್ಞಾನಿ ಹಾಗೂ ಶಿಕ್ಷಣ ತಜ್ಞರು. ಆದರೂ ಯಾವುದೇ ಬಗೆಯ ಪೂರ್ವಾಗ್ರಹ ಇಲ್ಲದೆ ವೈದ್ಯಕೀಯ ವಿಸ್ಮಯ ಲೋಕದ ಜೊತೆಗೆ ನಮ್ಮನ್ನು ಕರೆದುಕೊಂಡು ಹೋಗುವ ಪ್ರತಿನಿಧಿ ಹಾಗೂ ವಕ್ತಾರ. ಬಹುದೊಡ್ಡ ಔಷಧ ಮಾಫಿಯಾವನ್ನು ಬಯಲಿಗೆಳೆದ ಅನ್‍ಅಫೀಶಿಯಲ್ ಸಿಐಡಿ! ಒಬ್ಬ
ವೈದ್ಯರು ಸವಿವರವಾಗಿ ಪ್ರಸ್ತುತ ಗಂಡಾಂತರಕಾರಿ ವಿಷಯಗಳನ್ನು ಜನರ ಒಳಿತಿಗಾಗಿ ಹಂಚಿಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಅದು ಹೆಚ್ಚು ಜನರನ್ನು ತಲುಪುತ್ತದೆ ಹಾಗೂ ಪ್ರಾಮಾಣಿಕವಾಗಿ ಇರುತ್ತದೆ. ಅಧಿಕೃತವಾದ ಮಾತಿನ ಮೂಲಕ ಜನಸಮುದಾಯದ ಕಣ್ಣುತೆರೆಸುವ ಇವರನ್ನು ವೈದ್ಯಕೀಯ ಸಂತ ಎನ್ನಬಹುದು.

ಲೋಕಕ್ಕೆ ಮಾದರಿಯಾದ, ನಿಸ್ಪ್ರಹರಾದ
ವೈದ್ಯ ಡಾ|| ಬಿ. ಎಂ. ಹೆಗ್ಡೆ ಅವರು ನಮ್ಮ ಹೆಮ್ಮೆಯ ಕನ್ನಡಿಗ. ಆದರೆ ಅವರ ಸಾಧನೆಯ ವ್ಯಾಪ್ತಿ ದೇಶ-ವಿದೇಶಗಳಲ್ಲಿ ಹರಡಿದೆ. ಹೀಗೆ ಡಾ|| ಹೆಗ್ಡೆಯವರ ವ್ಯಕ್ತಿಮತ್ತೆಯ ಸಮಗ್ರ ದರ್ಶನವನ್ನು ಇಲ್ಲಿ ಮನಂಬುಗುವಂತೆ ಚಿತ್ರಿಸುವಲ್ಲಿ ಕಲಾ
ಭಾಗ್ವತ್ ಅವರು ಯಶಸ್ವಿಯಾಗಿದ್ದಾರೆ. ಈ ಕೃತಿ ಜನಸಾಮಾನ್ಯರಿಗೂ, ಸಾಹಿತ್ಯಾಸಕ್ತರಿಗೂ ತುಂಬಾ ಉಪಯುಕ್ತವಾಗಿದೆ.

ನಾಡಿನ ವೈದ್ಯಕೀಯ ಕ್ಷೇತ್ರದಲ್ಲಿ ಡಾ|| ಹೆಗ್ಡೆ ಅವರದು ದೊಡ್ಡ ಹೆಸರು. ಅವರ ಜೀವನ ಸಾಧನೆಯನ್ನು ಬಿಂಬಿಸುವ ಯಾವುದೇ ಕೃತಿ ಈ ವರೆಗೆ ಬೆಳಕು ಕಂಡಿಲ್ಲ. ಈ ಕೊರತೆಯನ್ನು ಪ್ರಸ್ತುತ ಕೃತಿಯ ಮೂಲಕ ಕಲಾ ಅವರು ತುಂಬಿಕೊಟ್ಟಿರುವುದು ಸಂತಸದ ಸಂಗತಿ. ಇದು ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯದ ಹೊಸ ಬೆಳೆ. ಈ ಕೃತಿಗಾಗಿಿ ಕಲಾ ಭಾಗ್ವತ್ ಅವರಿಗೆ ಹಾರ್ದಿಕ ಅಭಿನಂದನೆಗಳು.