ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶಂಕರ್ ನಾಗ್ ಎಂಬ ಎವರ್ ಗ್ರೀನ್ ಸ್ಫೂರ್ತಿ

ನಾಡು ಕಂಡ ಅತ್ಯಂತ ಪ್ರತಿಭಾಶಾಲಿ, ಕಾಯಕ ಯೋಗಿ, ಕಲಾವಿದ, ಸದಾ ಹೊಸತನ್ನು ಹುಟ್ಟುಹಾಕುವ ಜಾಯಮಾನದ ಮನುಷ್ಯ, ಸರಳ ಜೀವಿ ಶಂಕರ್ ನಾಗ್ ಕೇವಲ ವ್ಯಕ್ತಿಯಲ್ಲ ಒಂದು ಅಮೂರ್ತ ಕಲ್ಪನೆ, ಬತ್ತದ ಸ್ಫೂರ್ತಿ,ಚಿರಂಜೀವ ಸಿದ್ದಾಂತ,ಸಾರ್ವಕಾಲಿಕ ಮಾದರಿ... ಸುತ್ತ ಮುತ್ತ ಬಿಕ್ಕಟ್ಟಿನ ನಡುವೆ ಮತ್ತೆ ಮತ್ತೆ ನೆನಪಾಗುವ ಶಂಕರ್ ಬಗ್ಗೆ ಲೇಖಕ ಯೊಗೇಶ್ ಪಾಟೀಲ ಒಂದು ಸಾಕ್ಷ್ಯ ಚಿತ್ರದಂತೆ ಬರೆದ ಪರಿ ಓದಿಯೇ ಸವಿಯಬೇಕು.. ಇದೋ ಪೂರ್ತಿಯಾಗಿ..ನಿಮ್ಮ ಸ್ಪೂರ್ತಿಗಾಗಿ..

ಶಂಕರನಾಗ್ ಅಲ್ಲಾ ಶಂಕರವೇಗ…
ಒಬ್ಬ ವ್ಯಕ್ತಿ ಸತ್ತಮೇಲೂ ಅತಿಹೆಚ್ಚು ಬದುಕಿದ್ದು, ಜನಪ್ರಿಯವಾಗಿದ್ದೂ, ಬಹಳ ಜನಕ್ಕೆ ಸ್ಪೂರ್ತಿಯಾಗಿರುವಂತದ್ದೂ ಬಹಳ ವಿರಳ.. ಅಂತವರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವಂತವರು ಶಂಕರನಾಗ್.. ಶಂಕರ್ ಎಂದರೆ ಜೀನಿಯಸ್, ಸ್ಪೀಡ್, ಎನರ್ಜಿ, ಶ್ರಮಜೀವಿ, ಬಹುದೊಡ್ಡ ಕನಸುಗಾರ.. ಅವರ ಸಮಕಾಲೀನರೆಲ್ಲರೂ ಹೇಳುತ್ತಾರೆ ಹೀ ವಾಸ್ ಟೂ ಫಾಸ್ಟ್ ಅಂತ.. ಹೌದು ಅವರ ವೇಗ ಅಂತದ್ದು.. ಕೇವಲ 36 ವರ್ಷ ಬದುಕಿದ ಶಂಕರನಾಗ್ ಬದುಕಿನಲ್ಲಿ ಸೋಲು,ಗೆಲುವು ಎಲ್ಲವನ್ನೂ ಕಂಡವರು.. ಸ್ಟೇಟ್ ನ್ಯಾಶನಲ್ ಅವಾರ್ಡ್ ಪಡೆದು ಯಶಸ್ಸಿನ ಉತ್ತುಂಗಕ್ಕೂ ಹೋದವರು.. ಅವರು ಮಾಡಿದ ಕೆಲಸಗಳು, ಕಂಡ ಕನಸುಗಳು ನೂರಾರು.. 12ವರ್ಷದ ತನ್ನ ಸಿನಿ ಪಯಣದಲ್ಲಿ ರಾಕ್ಷಸನಂತೆ ಕೆಲಸ ಮಾಡಿದ ಶಂಕರ್ 85ಕ್ಕೂ ಹೆಚ್ಚು ಸಿನಿಮಾ ಮಾಡಿ, ಅನೇಕ ಸಿನಿಮಾಗಳನ್ನು, ಧಾರಾವಾಹಿ ನಿರ್ದೇಶನ ಮಾಡಿ ರಂಗಭೂಮಿಯನ್ನು ಬಿಡದೆ ಅಲ್ಲೂ ನಟನೆ ನಿರ್ದೇಶನ ಮಾಡಿ ಅಜರಾಮರರಾದವರು.. ಕೇವಲ ಅವರೊಬ್ಬ ಸಿನಿಮಾ ನಟ, ನಿರ್ದೇಶಕ ಆಗಿದ್ರೆ ಅವರನ್ನು ಮರೆಯುತ್ತಿದ್ದೆವೇನೊ ಆದ್ರೆ ಶಂಕರನಾಗ್ ಒಬ್ಬ ಸಾಮಾಜಿಕ ಚಿಂತಕ, ತನಗೆ ಬದುಕು ಕೊಟ್ಟು ಕೀರ್ತಿ, ಹಣ, ಹೆಸರು ತಂದುಕೊಟ್ಟ ಈ ಜನಕ್ಕೆ, ನಾಡಿಗೆ ಏನಾದರೂ ಸಹಾಯ ಮಾಡಬೇಕು ಎಂದು ಹಂಬಲಿಸುತ್ತಿದ್ದ ಜಂಟಲ್‍ಮ್ಯಾನ್.. ಹೀಗಾಗಿಯೇ ಅವರು ಸ್ಪೂರ್ತಿಯಾಗಿ ಪ್ರತಿದಿನ ಹುಟ್ಟುತ್ತಾರೆ, ಸಾಧನೆ ಮಾಡಲು ಪ್ರೇರಕ ಶಕ್ತಿಯಾಗುತ್ತಾರೆ.. ಇಂತಹ ಮಾಸ್ಟರ್ ಪೀಸ್ ಬದುಕಿನ ಬಗ್ಗೆ ಅವರಷ್ಟೇ ವೇಗದಲ್ಲಿ ಒಂದು ರೌಂಡ್ ಹಾಕಿಕೊಂಡು ಬರೋಣ..

ಶಂಕರ್ ನಾಗ್ ಹುಟ್ಟಿದ್ದು ನವೆಂಬರ್ 9, 1954 ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಲ್ಲಾಪುರದಲ್ಲಿ.. ತಂದೆ ಸದಾನಂದ ನಾಗರಕಟ್ಟೆ, ತಾಯಿ ಆನಂದಿ. ಈ ದಂಪತಿಗೆ ಮೂರು ಜನ ಮಕ್ಕಳು. ಅದರಲ್ಲಿ ಶಂಕರನಾಗ್ ಚಿಕ್ಕವರು. ಉಳಿದವರೆಂದರೆ ಅಣ್ಣ ಅನಂತನಾಗ್, ಅಕ್ಕ ಶ್ಯಾಮಲಾ. ಶಂಕರ್‍ರ ಮೊದಲ ಹುಟ್ಟು ಹೆಸರು ಭವಾನಿ ಶಂಕರ್ ಆಮೇಲೆ ಅವಿನಾಶ ಎಂದು ಕೊನೆಗೆ ಶಂಕರ್‍ನಾಗ್ ಆಗಿ ಉಳಿಯಿತು. ಪ್ರಾಥಮಿಕ ಶಿಕ್ಷಣವನ್ನು ಹೊನ್ನಾವರದಲ್ಲಿ
ಮುಗಿಸಿ ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ತೆರೆಳಿದರು.. ಅಲ್ಲಿ ಬಿಕಾಂ ಕಲಿಯುತ್ತಲೇ ಬ್ಯಾಂಕ್‍ನಲ್ಲಿ ಪಾರ್ಟ್‍ಟೈಮ್ ಕೆಲಸಕ್ಕೆ ಸೇರಿದರು. ಸಂಜೆ ಬಿಡುವಿನ ಸಮಯದಲ್ಲಿ ಮರಾಠಿ ನಾಟಕಗಳನ್ನು ನೋಡಿ ಅದರತ್ತ ಆಕರ್ಷಿತರಾದರು.. ನಾಟಕಗಳಲ್ಲಿ ಅಭಿನಯಿಸತೊಡಗಿದರು.. ಬೆಳೆಗ್ಗೆ ಕಾಲೇಜ್, ಮಧ್ಯಾಹ್ನ ಬ್ಯಾಂಕ್‍ನಲ್ಲಿ ಕ್ಲರ್ಕ್ ಕೆಲಸ, ಸಂಜೆ ನಾಟಕ.. ಹೀಗೆ ಬಿಡುವಿಲ್ಲದ ಕೆಲಸದಲ್ಲಿ ತೊಡಗಿದ ಶಂಕರ್‍ನಾಗ್ ಲೈಫ್‍ಲ್ಲಿ ಮುಂದೆ ಆಗಿದ್ದೆಲ್ಲ ಇತಿಹಾಸ..

ಶಂಕರ್ ನಾಗ್ ಮತ್ತು ಅರುಂಧತಿ…

ಶಂಕರ್ ಮತ್ತು ಅರುಂಧತಿಯವರ ಕಾಲೇಜುಗಳು ಬೇರೆ ಬೇರೆ.. ತಮ್ಮ ತಮ್ಮ ಕಾಲೇಜುಗಳಿಂದಾನೆ ಯುನಿವರ್ಸಿಟಿ ಲೆವೆಲ್‍ನಲ್ಲಿ ನಡೆಯುವ ಕಾಲೇಜು ಕಾಂಪೀಟೇಶನ್‍ಗಳಲ್ಲಿ, ನಾಟಕಗಳಲ್ಲಿ ಭಾಗವಹಿಸುತ್ತಿದ್ದರು.. ಅಭಿನಯಕ್ಕೆ ಪ್ರಶಸ್ತಿಗಳನ್ನು ಗಳಿಸುತ್ತಿದ್ದರು.. ಒಮ್ಮೆ ಇಂಡಿಯನ್ ನ್ಯಾಶನಲ್ ಥೀಯೆಟರ್‍ನವರು ಯುನಿವರ್ಸಿಟಿ ಲೆವೆಲ್‍ನಲ್ಲಿ ನಟಿಸಿದ ಬೆಸ್ಟ ನಟನಟಿಯರನ್ನು ಗುರುತಿಸಿ ಅವರಿಗಾಗಿ ಒಂದು ನಾಟಕ ಮಾಡಲು ಯೋಜನೆ ರೂಪಿಸಿದರು.. ಆಗ ಶಂಕರ್, ಅರುಂಧತಿಯವರು ತಮ್ಮ ತಮ್ಮ ಕಾಲೇಜುಗಳಿಂದ ಆಯ್ಕೆಯಾದರು. ಅಲ್ಲೇ ಅವರಿಬ್ಬರ ಮೊದಲ ಭೇಟಿ.. ಅದು ಗುಜರಾತಿ ನಾಟಕವಾಗಿದ್ದು ಆ ಭಾಷೆ ಕಲಿತು ರಿಹರ್ಸ್‍ಲ್ ಮಾಡಲು ಹೆಚ್ಚಿನ ಸಮಯ ಸಿಕ್ಕದ್ದರಿಂದ ಒಬ್ಬರೊನ್ನೊಬ್ಬರು ಅರಿತುಕೊಳ್ಳಲು ಸಮಯ ಸಿಕ್ಕಿತು.. ಅದು ಸ್ನೇಹವಾಗಿ ಪ್ರೀತಿಯಾಗಿ 6ವರ್ಷದ ನಂತರ ಮದುವೆಯೂ ಆಯಿತು.. ಒಬ್ಬರೊನ್ನೊಬ್ಬರು ಗೌರವಿಸುತ್ತಾ, ಜೊತೆಯಾಗಿ ಕೆಲಸ ಮಾಡುತ್ತಾ ಬದುಕಿದ ರೀತಿ ಎಲ್ಲರಿಗೂ ಮಾದರಿ. ಇವರನ್ನೂ ಕೂಡಿಸಿದ್ದು ರಂಗಭೂಮಿ, ಬದುಕು ಕಟ್ಟಿಕೊಟ್ಟಿದ್ದು ರಂಗಭೂಮಿ ಹಾಗಾಗಿ ಕೊನೆಯವರೆಗೂ ಅವರು ರಂಗಭೂಮಿಯನ್ನು ಬಿಡಲಿಲ್ಲ..

ಶಂಕರನಾಗ್ ಮುಂದೆ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಆದ್ರೂ ತಿಂಗಳಿಗೆ 2 ರಿಂದ 3 ಶೋ ಸಮಯ ಹೊಂದಿಸಿಕೊಂಡು ನಾಟಕ ಮಾಡ್ತಿದ್ರಂತೆ. ಅವರಿಗೆ ಒಂದು ವರ್ಲ್ಡ್ ಕ್ಲಾಸ್ ಥಿಯೇಟರ್ ಕಟ್ಟಬೇಕು, ಅದರಲ್ಲಿ ಪ್ರತಿದಿನ ನಾಟಕ ನಡಿಬೇಕು ಅನ್ನೋ ಕನಸಿತ್ತಂತೆ, ಅದಕ್ಕೂ ಮುಂಚೆಯೇ ಅವರು ಹೋದಾಗ ಅವರ ಕನಸನ್ನು ಅರುಂಧತಿನಾಗ್‍ರು ನನಸು ಮಾಡಿದರು. ಆ ಕನಸೇ ರಂಗಶಂಕರ.. ಇದು ಬೆಂಗಳೂರಿನಲ್ಲಿದೆ. ಇಲ್ಲಿ ಪ್ರತಿನಿತ್ಯ ನಾಟಕಗಳು ನಡೆಯುತ್ತವೆ. ಸಮಯಕ್ಕೆ ತುಂಬಾ ಬೆಲೆ ಕೊಡುವ ಇಲ್ಲಿ ಯಾರೇ ಆಗಲಿ ಪ್ರದರ್ಶನ ಸಮಯದ ಒಳಗೆ ಥಿಯೇಟರ್ ಹಾಲ್‍ನಲ್ಲಿ ಇರಬೇಕು.. ನಂತರ ಸಮಯಕ್ಕೆ ಸರಿಯಾಗಿ ಬಾಗಿಲು ಹಾಕಿಕೊಂಡು ಪ್ರದರ್ಶನ ಆರಂಭವಾದರೆ ಯಾರನ್ನು ಬಿಟ್ಟುಕೊಳ್ಳುವುದಿಲ್ಲ.. ಇದು ಅವರು ಹಾಕಿಕೊಂಡಿರುವ ಶಿಸ್ತು.. ಇದುವರೆಗೂ ಇಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುಮಾರು ಮೂರು ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನಗಳು ನಡೆದಿವೆ.. ಇಂತಹ ನಾಟಕಗಳಲ್ಲಿ, ಶಿಸ್ತಿನಲ್ಲಿ ಶಂಕರ್ ಯವಾಗಲೂ ಜೀವಂತವಾಗಿದ್ದಾರೆ..

ಸಿನಿಮಾ ಹಾದಿ…
ಶಂಕರ್‍ರನ್ನು ಸಿನಿಮಾಕ್ಕೆ ಕರೆತಂದವರು ಗಿರೀಶ್ ಕಾರ್ನಾಡ್.. ಒಮ್ಮೆ ಅವರು ಒಂದು ಎಕ್ಸಪೀರಿಮಿಂಟಲ್ ನಾಟಕದಲ್ಲಿನ ಶಂಕರ್‍ರ ಆಭಿನಯ ನೋಡಿ ತಾವು ಮಾಡಬೇಕಿರುವ ಚಿತ್ರಕ್ಕೆ ಸರಿಯಾಗಿ ಸೂಟ್ ಆಗ್ತಾನೆ ಅನ್ಕೊಂಡು “ಏ ಹುಡುಗ ನನ್ನ ಚಿತ್ರದಲ್ಲಿ ಪಾತ್ರ ಮಾಡ್ತಿಯೇನೊ ಅಂತ ಕೇಳಿದ್ರು”, ಅದಕ್ಕೆ ಶಂಕರ್ “ಪಾತ್ರ ಬೇಡ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡ್ತೀನಿ ಅಂದ್ರು”, ‘ಇಲ್ಲ ಪಾತ್ರ ಮಾಡೋದಿದ್ರೆ ಮಾತ್ರ ಬಾ ಅಂದ್ರು’, ಆಗ ಕೆಲವರ ಸಲಹೆ ಕೇಳಿ ಒಪ್ಪಿಕೊಂಡ್ರು ಶಂಕರ್.. ಆ ಚಿತ್ರವೇ ಒಂದಾನೊಂದು ಕಾಲದಲ್ಲಿ.. ಆಂಗ್ರಿ ಎಂಗಮ್ಯಾನ್ ಲುಕ್‍ನಲ್ಲಿ ಕಾಣಿಸಿಕೊಂಡ ಶಂಕರ್ ಗಂಡುಗಲಿ ಪಾತ್ರಧಾರಿಯಾಗಿ ಅದ್ಭುತವಾಗಿ ಅಭಿನಯಿಸಿದರು. ಚಿತ್ರ ಹಿಟ್ ಆಯಿತು.. ತಮ್ಮ ಮೊದಲ ಚಿತ್ರಕ್ಕೆ ನ್ಯಾಶನಲ್ ಅವಾರ್ಡ್ ಪಡೆದರು. ಇದರ ನಂತರ ಅಬ್ಬಯ್ಯನಾಯ್ಡುರವರು ಸೀತಾರಾಮು ಚಿತ್ರಕ್ಕೆ ಆಫರ್ ಕೊಟ್ಟರು.. ಆ ಚಿತ್ರವು ಹಿಟ್ ಆದ ನಂತರ ಶಂಕರ್ ಹಿಂತಿರುಗಿ ನೋಡಲೆ ಇಲ್ಲ.. ಸಾಲು ಸಾಲು ಸಿನಿಮಾಗಳನ್ನು ಮಾಡಿದರು.. ತಮ್ಮ 12ವರ್ಷದ ಸಿನಿ ಕರೀಯರ್‍ನಲ್ಲಿ 85ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದರು.. ತಮ್ಮ ಮನೆ ಬಾಗಿಲಿಗೆ ಬಂದ ಯಾವ ನಿರ್ಮಾಪಕನನ್ನು ಬೇಜಾರು ಮಾಡಿ, ಆಗಲ್ಲ ಎಂದು ಮರಳಿ ಕಳಿಸುತ್ತಿರಲಿಲ್ಲ. ದಿನದಲ್ಲಿ 2 ರಿಂದ 3 ಶೆಡ್ಯೂಲ್ ಶೂಟಿಂಗ್ ಮಾಡಿ ಸಿನಿಮಾ ಮುಗಿಸಿ ಕೊಟ್ಟರು. ಒಂದು ವರ್ಷದಲ್ಲಿ 14 ಸಿನಿಮಾಗಳನ್ನು ಮಾಡಿದ ರೆಕಾರ್ಡ್ ಇದೆ. ಹೀಗೆ ಸಾಲು ಸಾಲು ಸಿನಿಮಾ ಮಾಡಿದ್ದಕ್ಕೆ ಅವರ ಸಿನಿಮಾಗಳು ಸೋತವು.. ಅವಕಾಶ ಕಡಿಮೆ ಆದವು.. ಆಗ ಅವರು ತಲೆ ಕೆಡಿಸಿಕೊಳ್ಳದೇ ನಾಟಕಗಳನ್ನು ಮಾಡಿದರು. ಅವರ ‘ನೋಡಿ ಸ್ವಾಮಿ ನಾವಿರೋದೆ ಹೀಗೆ’ ನಾಟಕ ಸತತ 6ತಿಂಗಳು ಪ್ರದರ್ಶನವಾಯಿತು. ಸಿನಿಮಾಕ್ಕೆ ಬ್ಲಾಕ್ ಟಿಕೇಟ್ ತಗೊಳೊದನ್ನ ನೋಡಿದ್ದೇವೆ. ಆದ್ರೆ ನಾಟಕಕ್ಕೂ ಬ್ಲ್ಯಾಕ್ ಟಿಕೇಟ್ ತಗೊಂಡು ನೋಡುವ ಹಾಗೆ ಮಾಡಿದ್ದರು ಶಂಕರ್.
ಬಿಡುವಿನ ಸಮಯದಲ್ಲಿ ಮೊಬೈಲ್ ಕ್ಯಾಂಟೀನ್ ಮಾಡಿದ್ದರು. ಮತ್ತೆ ಅವಕಾಶಗಳು ಬಂದಾಗ ಸಿನಿಮಾ ಮಾಡಿದರು. ಸಿನಿಮಾ ಹಿಟ್ ಆದವು. ಸೂಪರ್ ಸ್ಟಾರ್ ಆದರು. ಅವರಿಗೆ ಹೆಸರು ತಂದಕೊಟ್ಟ ಚಿತ್ರಗಳೆಂದರೆ ಆಟೋ ರಾಜ, ಗೀತಾ, ಮುನಿಯನ ಮಾದರಿ, ಆರದ ಗಾಯ, ರಕ್ತ ತಿಲಕ, ಸಾಂಗ್ಲಯಾನಾ1,2, ಸಿಬಿಐ ಶಂಕರ್ ಮುಂತಾದವು..

ಶಂಕರ್ ನಿರ್ದೇಶಿಸಿದ ಸಿನಿಮಾಗಳು ಮತ್ತು ಧಾರಾವಾಹಿ
ಶಂಕರ್‍ರವರಿಗೆ ಮೊದಲಿನಿಂದಲೂ ನಿರ್ದೇಶನದಲ್ಲಿ ಬಹಳ ಆಸಕ್ತಿ.. ನಿರ್ದೇಶಕರಾಗಬೇಕೆಂಬುದೆ ಅವರ ಆಸೆಯಾಗಿತ್ತು. ಹಾಗಾಗಿಯೇ ಅವರು ಕಲ್ಟ್ ಸಿನಿಮಾಗಳನ್ನು, ಧಾರಾವಾಹಿಯನ್ನು ಭಾರತೀಯ ಚಿತ್ರರಂಗಕ್ಕೆ ಕೊಟ್ಟಿದ್ದಾರೆ. ಅವರು ನಿದೇಶಿಸಿದ ಸಿನಿಮಾಗಳು ಮಿಂಚಿನ ಓಟ(1980), ಜನ್ಮಜನ್ಮದ ಅನುಭಂದ(1980), ಗೀತಾ(1981), ಲಾಲಚ್( ಮಿಂಚಿನ ಓಟದ ಹಿಂದಿ ರೀಮೇಕ್ 1983), ಹೊಸತೀರ್ಪು(ಇದು ಹಿಂದಿಯ ದುಶ್ಮನ್ ಚಿತ್ರದ ರೀಮೇಕ್, ಅವರು ನಿರ್ದೇಶಿಸಿದ ಒಂದೇ ರೀಮೇಕ್ ಚಿತ್ರ, 1983), ನೋಡಿ ಸ್ವಾಮಿ ನಾವಿರೋದೆ ಹೀಗೆ(1983), ಆಕ್ಸಿಡೆಂಟ್(1985), ಒಂದು ಮುತ್ತಿನ ಕಥೆ(1987).. ಇದರಲ್ಲಿ ಮಿಂಚಿನ ಓಟ, ನೋಡಿ ಸ್ವಾಮಿ ನಾವಿರೋದೆ ಹೀಗೆ ಚಿತ್ರಕ್ಕೆ ಸ್ಟೇಟ್ ಅವಾರ್ಡ್, ಆಕ್ಸಿಡೆಂಟ್ ಚಿತ್ರಕ್ಕೆ ಸ್ಟೇಟ್ ಮತ್ತು ನ್ಯಾಶನಲ್ ಅವಾರ್ಡ್ ಸಿಕ್ಕಿವೆ.. ಇವರ ಅಕ್ಸಿಡೆಂಟ್ ಸಿನಿಮಾ ಒಂದು ಲ್ಯಾಂಡ್ ಮಾರ್ಕ್. ಆಗಿನ ಕಾಲದಲ್ಲೇ ಒಂದು ಕ್ರಾಂತಿಕಾರಿ ಸಿನಿಮಾ ಎಂದು ಹೆಸರುವಾಸಿಯಾಗಿದೆ. ಅವರು ರಾಷ್ಟ್ರದ ತುಂಬಾ ಹೆಸರು ಮಾಡಿ, ಅವರ ಕೀರ್ತಿಯನ್ನು ಹೆಚ್ಚಿಸಿದ್ದು ಅವರ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿ(1987).. ಆರ್,ಕೆ, ನಾರಾಯಣರ ಸಣ್ಣ ಕಥೆಗಳ ಆಧಾರಿತ ಈ ಧಾರಾವಾಹಿಯನ್ನು ಶಂಕರನಾಗ್ ಅದ್ಭುತವಾಗಿ ನಿರ್ದೇಶನ ಮಾಡಿದರು. ಕರ್ನಾಟಕದ ಆಗುಂಬೆಯನ್ನು ಮಾಲ್ಗುಡಿಯಾಗಿ ಮಾಡಿ ಅಲ್ಲೊಂದು ಲೋಕವನ್ನೇ ಸೃಷ್ಟಿಸಿದ್ದರು. ಹಿಂದಿಯಲ್ಲಿ ಬಂದ ಈ ಧಾರಾವಾಹಿ ಎಲ್ಲರ ಮೆಚ್ಚುಗೆಗಳಿಸಿತು. ಶಂಕರ್‍ರ ಕರಿಯರ್ ಗ್ರಾಫ್ ಇನ್ನೂ ಹೆಚ್ಚಾಯಿತು.. ಶಂಕರ್‍ರ ಸಿನಿಮಾಗಳು ಮತ್ತು ಧಾರಾವಾಹಿ ಈಗ ಬರುವ ಹೊಸ ನಿರ್ದೇಶಕರಿಗೆ ಸಿಲೆಬಸ್ ಎಂದರೂ ತಪ್ಪಾಗಲಾರದು.

ಭಾರತ ಚಿತ್ರರಂಗದಲ್ಲೇ ಮೊದಲು..

ಶಂಕರ್‍ ನಾಗ್‍ರವರು ವರನಟ ಡಾ.ರಾಜಕುಮಾರ್‍ ಗೆ ಒಂದು ಮುತ್ತಿನ ಕಥೆ ಚಿತ್ರ ನಿರ್ದೇಶನ ಮಾಡಿದರು. ಅದು ಜಾನ್ ಸ್ಟೆನ್‍ಬೆಕ್‍ನ ‘ದ ಪರ್ಲ್’ ಕಾದಂಬರಿ ಆಧಾರಿತ ಚಿತ್ರ. ಅದಕ್ಕಾಗಿ ಅಂಡರ್ ವಾಟರ್ ಶೂಟಿಂಗ್ ಮಾಡಲು ನಿರ್ಧಸಿದರು. ಬೇರೆಯವರು ರಿಸ್ಕ್ ತೆಗೆದುಕೊಳ್ಳಬೇಡ ಎಂದರು ಕೇಳಲಿಲ್ಲ. ಕೆನಡಾಕೆ ಹೋಗಿ ಕ್ಯಾಮೆರಾ ತಂದು, ಲಂಡನ್ ಹೋಗಿ ಆಕ್ಟೋಪಸ್ ಮಾಡಿಸಿ, ಮಾಲ್ಡೀವ್ಸನಲ್ಲಿ ಜರ್ಮನ್ ಕ್ಯಾಮೆರಾಮೆನ್ ಹಿಡಿದು ಶೂಟ್ ಮಾಡಿದರು. ಇದು ಭಾರತೀಯ ಚಿತ್ರರಂಗದಲ್ಲೇ ಮೊದಲ ಅಂಡರ್ ವಾಟರ್ ಶೂಟಿಂಗ್ ಮಾಡಿದ ಹೆಗ್ಗಳಿಕೆ ಶಂಕರ್‍ರದ್ದು. ಹೀಗೆ ಅಂದುಕೊಂಡದ್ದನ್ನು ಮಾಡದೇ ಬಿಡದ ಛಲಗಾರ ಶಂಕರ್‍ನಾಗ್..

ಸಂಕೇತ ಸ್ಟುಡಿಯೋ..
ಕನ್ನಡಿಗರೆಲ್ಲರೂ ಸಿನಿಮಾ ಚಿತ್ರೀಕರಣ ಮುಗಿಸಿ ಡಬ್ಬಿಂಗ ಮತ್ತು ರೆಕಾರ್ಡಿಂಗ್‍ಗೆ ಚನ್ನೈಗೆ ಹೋಗಬೇಕಿತ್ತು.. ಅಲ್ಲಿನ ಸ್ಟುಡಿಯೋಗಳಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ಸರದಿ ಬಂದಾಗ ಈ ಎಲ್ಲ ಕೆಲಸ ಮಾಡಿಕೊಂಡು ಬರಬೇಕಿತ್ತು.. ಇದನ್ನು ಕಂಡ ಶಂಕರ್ ನಮ್ಮ ಬೆಂಗಳೂರಿನಲ್ಲಿ ನಾವೇಕೆ ಒಂದು ಸ್ಟುಡಿಯೋ ಮಾಡಬಾರದು ಎಂದುಕೊಂಡು ಶುರು ಮಾಡಿದ್ದೇ ಸಂಕೇತ ಸ್ಟುಡಿಯೋ. ಹಣಕಾಸಿನ ತೊಂದರೆ ಇದ್ದರು ಅಮೇರಿಕಾದಿಂದ ಇಕ್ವಿಪಮೆಂಟ್ಸ್ ತರಿಸಿ ಕಷ್ಟಾಪಟ್ಟು ಸ್ಟುಡಿಯೋ ಕಟ್ಟಿದರು. ಆಗ ಕನ್ನಡ ಚಿತ್ರಗಳ ರೆಕಾರ್ಡಿಂಗ್, ಡಬ್ಬಿಂಗ್ ಬೆಂಗಳೂರಿನಲ್ಲೇ ಶುರುವಾದವು. ಸದ್ಯಕ್ಕೆ ಬೆಂಗಳೂರಿನಲ್ಲಿ ಸುಮಾರು 500 ರಿಂದ 1000ದ ತನಕ ಸಣ್ಣಪುಟ್ಟ ಸ್ಟುಡಿಯೋಗಳು ಇರಬಹುದು. ಆದರೆ ಮೊದಲ ಮತ್ತು ಮೂಲ ಸ್ವಾಭಿಮಾನದ ಸ್ಟುಡಿಯೋ ಎಂದರೆ ಅದು ಶಂಕರ್‍ರ ‘ಸಂಕೇತ ಸ್ಟುಡಿಯೋ’. ಎಲ್ಲರ ಕಷ್ಟ ಕಾಲಕ್ಕೆ ಸಹಾಯಕವಾದ ಸಂಕೇತ
ಸ್ಟುಡಿಯೋವನ್ನು ನೆನಪಿಗೋಸ್ಕರವಾದರೂ ನಮ್ಮವರ ಕೈಯಲ್ಲಿ ಉಳಿಸಿಕೊಳ್ಳಲಾಗಲಿಲ್ಲ ಎನ್ನುವುದು ಖೇದಕರ ಸಂಗತಿ.

ಶಂಕರರ ಕನಸುಗಳು…
ಶಂಕರ್ ಬಹುದೊಡ್ಡ ಕನಸುಗಾರ.. ಆಕಾಶಕ್ಕೆ ಏಣಿ ಹಾಕುವಂತಹ ಡ್ರೀಮರ್.. ಸಂಪರ್ಕಸಾಧನಗಳು ಅಷ್ಟೊಂದು ಇಲ್ಲದ, ಮೊಬೈಲ್ ಕಂಪ್ಯೂಟರ್ ಇಲ್ಲದ ಕಾಲಕ್ಕೆ ಮೂಟೆ ಮೂಟೆ ಕನಸು ಕಟ್ಟಿಕೊಂಡವರು ಶಂಕರ್. ಒಂದು ವೇಳೆ ಪ್ರಸ್ತುತ ಕಾಲದಲ್ಲಿ ಇದ್ದಿದ್ದರೆ ಅವರನ್ನು ಹಿಡಿಯುವವರೆ ಇರುತ್ತಿರಲಿಲ್ಲವೇನೋ. ಅಂತಹ ಕನಸುಗಾರನ ಕನಸುಗಳು ಇಂತಿವೆ.
• ಬೆಂಗಳೂರಿಗೆ ಮೆಟ್ರೋ ತರಬೇಕೆಂದು ತಮ್ಮ ಸ್ವಂತ ದುಡ್ಡಲ್ಲಿ ಪ್ಯಾರಿಸ್ ಮತ್ತು ಲಂಡನ್‍ಗೆ ಹೋಗಿ ಅಧ್ಯಯನ ಮಾಡಿಕೊಂಡು ಬಂದು ಬ್ಲೂ ಪ್ರಿಂಟ್ ಹಾಕಿ ಅಂದಿನ ಮುಖ್ಯಮಂತ್ರಿ ರಾಮಕೃಷ್ನ ಹೆಗೆಡೆಯವರಿಗೆ ಕೊಟ್ಟಿದ್ರು ಶಂಕರ್..
• ಪ್ರತಿ 50ಕೀ.ಮೀಗೆ 100ಬೆಡ್‍ನ ಆಸ್ಪತ್ರೆ ಇರಬೇಕು, ಅದಕ್ಕೋಸ್ಕರ ಪ್ರತಿ 50ಕೀ.ಮಿ.ಗೆ ಎರಡು ಎಕರೆ ಜಾಗ ಬೇಕು.. ಅದರ ಬೆಲೆ ಎಷ್ಟಾಗಬಹುದು ತಿಳಿದುಕೊಂಡು ಬನ್ನಿ ಅಂದಿದ್ರಂತೆ ಶಂಕರ್..
• ನಂದಿ ಬೆಟ್ಟಕ್ಕೆ ರೋಪ್‍ವೆ ಹಾಕ್ಬೇಕು ಅನ್ನೋ ಕನಸಿತ್ತು ಶಂಕರ್‍ಗೆ
• ಮೆಡಿಕಲ್ ನೆಟ್‍ವರ್ಕ್ ಅಂದರೆ ಹೆಲಿಕ್ಯಾಪ್ಟರ್ ಮೂಲಕ ಎಮರ್ಜೆನ್ಸಿ ಪೇಶಂಟ್‍ಗಳನ್ನ ಹಾಸ್ಪಿಟಲ್‍ಗೆ ವರ್ಗಾಯಿಸಬೇಕು ಅಂತಹ ಮೆಡಿಕಲ್ ಸರ್ವಿಸ್ ಮಾಡ್ಬೇಕು ಅಂತಿದ್ರು ಶಂಕರ್..
• ಥರ್ಮಲ್ ಪವರ್ ಸ್ಟೇಶನ್‍ನಿಂದ ಬಿಳುವ ಆಶ್‍ನ್ನು ಉಪಯೋಗಿಸಿಕೊಂಡು ಬ್ರಿಕ್ಸ ಫ್ಯಾಕ್ಟರಿ ಮಾಡಬೇಕು ಅಂತಿದ್ರು ಶಂಕರ್..
• 8 ದಿನಗಳಲ್ಲಿ ಮನೆ ಕಟ್ಟುವ ಟೆಕ್ನಾಲಜಿ ಬಗ್ಗೆ ವಿಚಾರ ಮಾಡಿದ್ರು, ಇದರಿಂದ ಬಡವರಿಗೆ, ಪ್ರವಾಹ ಭೂಕಂಪ ಬಂದಾಗ ಮನೆ ಬಿದ್ದು ಹೋದವರಿಗೆ ಬೇಗನೆ ಮನೆ ಕಟ್ಟಿಕೊಡಬಹುದು ಎಂದು ಯೋಚಿಸಿದ್ದರು ಶಂಕರ್..

ಶಂಕರ್ರಿಗಿದ್ದ ರಾಜಕೀಯ ಒಡನಾಟ
ಶಂಕರ್ ಆ ಸಮಯದಲ್ಲಿ ಆಗಿನ ಜನತಾ ಪಕ್ಷ ಮತ್ತು ರಾಮಕೃಷ್ಣ ಹೆಗಡೆಯವರೊಂದಿಗೆ ಗುರುತಿಸಿಕೊಂಡಿದ್ದರು. ಬೆಂಗಳೂರಿನ ಸಿಂಗಸಂಧ್ರದಲ್ಲಿನ ಸರ್ಕಾರಿ ಶಾಲೆಯಲ್ಲಿ ಡೆಸ್ಕ ಮತ್ತು ಕುರ್ಚಿಗಳಿರಲಿಲ್ಲ. ಆ ಶಾಲೆಗೆ ದಾನವಾಗಿ ಡೆಸ್ಕ, ಕುರ್ಚಿ, ಮೂಲಸೌಲಭ್ಯಗಳನ್ನು ಒದಗಿಸಿ ಕೊಟ್ಟಿದ್ದರು ಶಂಕರ್. ಒಮ್ಮೆ ಅರುಂಧತಿನಾಗ್ ‘ನಿಮಗೆಲ್ಲಾ ಈ ರಾಜಕೀಯ ಯಾಕೆ ಬೇಕು’? ಎಂದಾಗ ‘ನೋಡು ನಾನು ಹೀಗೆ ಇದ್ರೆ ಅವತ್ತು ಕೊಟ್ಟೆವಲ್ಲ ಕೇವಲ ಒಂದು ಶಾಲೆಗೆ ಕುರ್ಚಿ, ಡೆಸ್ಕ್ಗಳನ್ನ ಕೊಡಿಸಬಹುದು ಅದೇ ರಾಜಕೀಯದಲ್ಲಿ ಇದ್ದರೆ ಇಡೀ ಕರ್ನಾಟಕಕ್ಕೇ ಕೊಡಿಸಬಹುದು’ ಅಂದಿದ್ರಂತೆ ಶಂಕರ್. ರಾಮಕೃಷ್ಣ ಹೆಗೆಡೆವರು ಎಲೆಕ್ಷನ್ ಕ್ಯಾಂಪೇನ್‍ಗೆ ಅಂತಾ ಶಂಕರ್‍ನಾಗ್‍ಗೆ ಹಣ ಕೊಟ್ಟಿದ್ರಂತೆ. ಶಂಕರ್ ಕ್ಯಾಂಪೇನ್‍ಗೆಲ್ಲ ಖರ್ಚು ಮಾಡಿ ಉಳಿದ ಹಣವನ್ನು ಮರಳಿ ರಾಮಕೃಷ್ಣ ಹೆಗಡೆಯವರಿಗೆ ಕೊಟ್ರಂತೆ. ಅವಾಗ ಹೆಗಡೆವರು ಹೇಳಿದ ಮಾತು “ ನನ್ನ ಜೀವನದಲ್ಲೇ ಎಲೆಕ್ಷನ್ ಕ್ಯಾಂಪೇನ್‍ಗೆ ಅಂತಾ ಹಣ ಕೊಟ್ಟಿದ್ದನ್ನ ಮರಳಿ ಕೊಡ್ತಾ ಇರೋ ಮೊದಲ ವ್ಯಕ್ತಿ ನೀನೆ ಕಣಯ್ಯ, ಎಂಥಾ ಮನುಷ್ಯನಯ್ಯ ನೀನೂ” ಎಂದಿದ್ರಂತೆ. ಅಂತಹ ಪ್ರಾಮಾಣಿಕ ವ್ಯಕ್ತಿ ಶಂಕರನಾಗ್..

ಶಂಕರ್‍ರ ಸರಳ ವ್ಯಕ್ತಿತ್ವ..
ಶಂಕರ್‍ಗೆ ಸ್ಟಾರ್‍ಪಟ್ಟ ಎಂದೂ ತಲೆಗೆ ಹತ್ತಲೇ ಇಲ್ಲ.. ಬಹಳ ಸೀದಾ, ಸಾದಾ, ಸರಳವಾಗಿ ಜೀವನ ನಡೆಸಿದರು. ಕಾರ್ ಇಲ್ಲದಿದ್ದರೂ ಆಟೋ, ಲೂನಾದಲ್ಲೇ ಶೂಟಿಂಗ್ ಸ್ಪಾಟ್‍ಗೆ ಹೋಗಿದ್ದಿದೆ ಮತ್ತು ಕಲಾವಿದರನ್ನು ಡ್ರಾಪ್ ಮಾಡಲು ಹೋಗಿದ್ದಿದೆ. ಮಾರ್ಕೆಟ್ ಪ್ಲೇಸ್, ತುಂಬಾ ಜನಜಂಗುಳಿಯಿದ್ದರು ತಮಗೆ ನ್ಯೂಸ್ ಪೇಪರ್, ಇನ್ನೇನಾದರೂ ಬೇಕೆನಿಸಿದರೆ ಕಾರ್‍ನಿಂದ ಇಳಿದು ಪಟಪಟನೆ ತಾವೇ ಹೋಗಿ ತೆಗೆದುಕೊಂಡು ಬರುತ್ತಿದ್ದರು.
ಶೂಟಿಂಗ್ ಮುಗಿಸಿಕೊಂಡು ಮಧ್ಯ ರಾತ್ರಿ ಮನೆಗೆ ಹೋದರೂ ಯಾರನ್ನು ಎಬ್ಬಿಸುತ್ತಿರಲಿಲ್ಲ. ಹಸಿವಾಗಿದ್ದರೆ ಏನಿದೆಯೋ ಅದನ್ನೇ ಬಿಸಿ ಮಾಡಿಕೊಂಡು ತಿಂದು ಮಲಗುತ್ತಿದ್ದರು. ಬೆಳೆಗ್ಗೆ ಮತ್ತೆ ಬೇಗನೆ ಎದ್ದು ಚಹಾ ಮಾಡಿಕೊಂಡು ಪ್ಲಾಸ್ಕಗೆ ಹಾಕಿಕೊಂಡು ಶೂಟಿಂಗ್‍ಗೆ ಹೋಗಿಬಿಡಿತ್ತಿದ್ದರು. ಬೇರೆ ದೇಶಕ್ಕೆ ಏನಾದ್ರೂ ಹೋಗಬೇಕೆಂದ್ರೆ ಇರಲಿ ಅಂತಾ ಒಂದಿಷ್ಟು ಜೀನ್ಸ್, ಶಟ್ರ್ಸ ಬಿಟ್ಟರೆ ಅವರ ಮನೆಯಲ್ಲಿ ಇದ್ದದ್ದು ಒಂದಿಪ್ಪತ್ತು ಬಿಳಿ ಪೈಜಾಮ ಕುರ್ತಾ ಅಷ್ಟೇ.. ಅವನ್ನೇ ಯವಾಗಲೂ ಹಾಕಿಕೊಳ್ಳುತ್ತಿದ್ದರು. ಭಾನುವಾರ ರಜೆ ಇದ್ದು ಮನೆಯಲ್ಲಿದ್ದು ತಮ್ಮ ಪೈಜಾಮಾ ಕುರ್ತಾದ ಗುಂಡಿ ಏನಾದರೂ ಬಿಚ್ಚಿ ಹೋಗಿದ್ದರೇ, ಹರಿದಿದ್ದರೆ ತಾವೇ ಹೊಲಿದುಕೊಳ್ಳುತ್ತಿದ್ದ ಸರಳ ಸೂಪರ್ ಸ್ಟಾರ್ ಶಂಕರ್‍ ನಾಗ್..

ಒಮ್ಮೆ ಶಂಕರ್ ಶೂಟಿಂಗ್‍ನಲ್ಲಿ ಬಡತನದ ಒಂದು ಪಾತ್ರ ನಿರ್ವಹಿಸಬೇಕಾಗಿತ್ತು, ಅದಕ್ಕಾಗಿ ಹಳೆಯ ಬಟ್ಟೆಗಳು ಬೇಕಾಗಿದ್ದವು. ಶಂಕರ್ ಸ್ಟಾರ್ ನಟರಾಗಿದ್ದರಿಂದ ಕಾಸ್ಟೂಮ್ ಕೊಡುವ ವ್ಯಕ್ತಿ ಹೊಸ ಬಟ್ಟೆಗಳನ್ನೆ ಸ್ವಲ್ಪ ಹೊಲಸಾಗುವಂತೆ ಮಾಡಿ ಹಾಕಿಕೊಳ್ಳಲು ಕೊಟ್ಟರಂತೆ. ಅದನ್ನು ನೋಡಿದ ಶಂಕರ್ ಏನ್ರೀ ಇದು ಎಂತಹ ಪಾತ್ರಕ್ಕೆ ಎಂತಹ ಬಟ್ಟೆ ಕೊಡ್ತಾ ಇದ್ದೀರಿ ಎಂದವರೆ ಶೂಟಿಂಗ್ ನೋಡಲು ಬಂದಿದ್ದ ಜನರಲ್ಲಿ ಹರಿದು ಹೊಲಸಾಗಿದ್ದ ಬಟ್ಟೆ ಹಾಕಿಕೊಂಡವನ ಹುಡುಕಿ ತಮ್ಮ ಬಟ್ಟೆ ಅವನಿಗೆ ಕೊಟ್ಟು, ಅವನ ಬಟ್ಟೆ ತಾವು ಹಾಕಿಕೊಂಡು ಶೂಟಿಂಗ್ ಮಾಡಿದ್ರಂತೆ ಶಂಕರ್. ಈಗಿನ ನಟರು ಕೋಸ್ಟಾರ್ ಹಾಕೊಕೊಂಡ ಬಟ್ಟೆನೇ ಹಾಕೊಕೊಳ್ಳುವುದಿಲ್ಲ ಇನ್ನೂ ಶೂಟಿಂಗ್ ನೋಡಲು ಬಂದಿದ್ದವರದು ಹಾಕಿಕೊಳ್ಳೋದು ದೂರದ ಮಾತು. ಇಂತಹ ಅಪರೂಪದ ವ್ಯಕ್ತಿತ್ವ ಶಂಕರ್‍ನಾಗ್‍ರವರದ್ದು..

ಇಂತಹ ಸ್ಪೂರ್ತಿಯ ಚಿಲುಮೆ ದುರಾದೃಷ್ಟವಶಾತ್ ಸೆಪ್ಟಂಬರ್ 30 1990ರಂದು ಜೋಕುಮಾರಸ್ವಾಮಿ ಶೂಟಿಂಗೆ ಹೋಗುವಾಗ ದಾವಣಗೆರೆ ಬಳಿಯ ಆನಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕ್ಸಿಡೆಂಟ್ ಆಗಿ ತೀರಿಕೊಂಡರು. ಅವರು ಇದ್ದಿದ್ದರೇ ಏನೆನೆಲ್ಲಾ ಸಾದನೆ ಆಗುತ್ತಿದ್ದವೋ ಏನೋ? ಇಂತಹ ಕನಸುಗಾರ ಹೋಗಿದ್ದೂ ಕೇವಲ ಕರ್ನಾಟಕಕಷ್ಟೆ ಲಾಸ್ ಅಲ್ಲಾ.. ಇದು ನ್ಯಾಶನಲ್ ಲಾಸ್.. ಹೀಗೆ ಶಂಕರನಾಗ್ ಬಗ್ಗೆ ಹೇಳುತ್ತಾ ಹೋದರೆ ಅದು ಮುಗಿಯುವುದೇ ಇಲ್ಲಾ.. ಆದರೆ ಅವರು ಇಷ್ಟೆಲ್ಲಾ ಮಾಡಿದ್ದು ಕೇವಲ 36ವರ್ಷದೊಳಗೆ.. “ಸತ್ತಾಗ ಮಲಗೋದು ಇದ್ದಿದ್ದೆ, ಬದುಕಿದ್ದಾಗಲೇ ಎದ್ದು ಏನಾದ್ರೂ ಸಾಧಿಸು” ಅಂತ ಹೇಳ್ತಿದ್ದ ನಮ್ಮ ಆಟೋರಾಜ ಯವಾಗ್ಲೂ ನಮಗೆ ಸ್ಪೂರ್ತಿನೆ.. ನನಗೆ ಏಕ ಕಾಲಕ್ಕೆ ಹಲವು ಕೆಲಸ ಬಂದಾಗ, ಒತ್ತಡ ಅನಿಸಿದಾಗ ಶಂಕರ್ ನೆನಪಾಗ್ತಾರೆ.. ಅದಕ್ಕೆ ನನ್ನ ರೂಮಲ್ಲಿ, ಮೊಬೈಲ್‍ನಲ್ಲಿ ಅವರ ಫೋಟೊ ಸದಾ ಇರುತ್ತೆ.. ನಂದು ಬಿಡಿ ಇವತ್ತಿಗೂ ಸಹಿತ ಎಷ್ಟೋ ಜನರ ವಾಲ್ ಪೇಪರ್, ಡಿಪಿ ಯಲ್ಲಿ ಶಂಕರ್‍ನಾಗ್ ಇದ್ದಾರೆ.. ಇವತ್ತಿಗೂ 90% ಆಟೋ ಸ್ಟ್ಯಾಂಡ್‍ಗಳಿಗೆ ಶಂಕರ್‍ನಾಗ್ ಹೆಸರಿದೆ.. ಇಂದಿಗೂ ಅವರ ಕೆಲಸಗಳನ್ನ ಸ್ಪೂರ್ತಿಯಾಗಿ ತಗೊಂಡು ಸಾಧನೆ ಮಾಡಿದವರಿದ್ದಾರೆ.. ಈಗ ಹೇಳಿ ಶಂಕರ್‍ನಾಗ್ ನಮ್ಮನ್ನು ಬಿಟ್ಟು ಹೋಗಿದ್ದಾರಾ..? ಇಲ್ಲಾ.. ಸರ್ ಎಂದೆಂದಿಗೂ ನೀವು ಅಜರಾಮರ…

ಶಂಕರ್‍ನಾಗ್ ಅವರ ಸಂಕೇತ ಸ್ಟುಡಿಯೋದಲ್ಲಿ ಗೋಡೆಯ ಮೇಲೆ ಹಾಕಿದ್ದ ಸಾಲುಗಳು.. “ ಟು ಫಿನಿಷ್ ಅ ಜೊಬ್, ಯು ಫಸ್ಟ್ ಬಿಗಿನ್ ”………

ಶಂಕರ್‍ ನಾಗ್

ಸತ್ತ ಮೇಲೆ ಮಲಗೋದು ಇದ್ದೇ ಇದೆ.. ಎದ್ದಿದ್ದಾಗ ಏನಾದ್ರೂ ಸಾಧಿಸೋದು ಮುಖ್ಯ ಅಲ್ವೇ..

ಶಂಕರ್‍ನಾಗ್