ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹಳೆಗನ್ನಡ ಸಾಹಿತ್ಯದಲ್ಲಿ ಸಾಮಾಜಿಕ ಸಂಬಂಧಗಳು

ಸುಮಾ ವೀಣಾ

ಮನುಷ್ಯ ‘ಸಂಘಜೀವಿ’ , ‘ಸಾಮಾಜಿಕ ಪ್ರಾಣಿ’ ಎಂದೇ ಕರೆಸಿಕೊಂಡಿರುವುದು. ಮನುಷ್ಯ ಒಗ್ಗಟ್ಟಿನ ಬದುಕಿನಲ್ಲಿ ಕೆಲವು ಸಂಬಂಧಗಳನ್ನು ನಿಭಾಯಿಸಬೇಕಾಗುತ್ತದೆ. ಈ ಸಂಬಂಧಗಳೂ ಸಾಮಾಜಿಕವಾಗಿ ಆ ವ್ಯಕ್ತಿಯಮೇಲೆ ವ್ಯಕ್ತಿತ್ವದ ಮೇಲೆ ಪರಿಣಾಮ, ಪ್ರಭಾವ ಎರಡನ್ನೂ ಬೀರುವಂಥದ್ದಾಗಿರುತ್ತವೆ. ಅಂಥ ವ್ಯಕ್ತಿ ಮೊದಲು ಸಾಮಾಜಿಕನಾಗಿರುತ್ತಾನೆ. ಹಾಗಿದ್ದರೆ ‘ಸಮಾಜ’ ಎಂಬ ಪದವನ್ನು ವಿಶಾಲವಾಗಿ ಆವಲೋಕಿಸಬೇಕು. ಸಮಾಜ ಪದವು ‘ಸಂ’, ಮತ್ತು ‘ಅಜತಿ’ ಎಂಬ ಎರಡು ಪದಗಳ ಸಂಯೋಜನೆಯಿಂದ ಬಂದಿದೆ. ‘ಸಂ’ ಎಂದರೆ ಒಟ್ಟುಗೂಡಿ ಎಂದೂ, ‘ಅಜತಿ’ ಎಂದರ ‘ಉತ್ಕೃಷ್ಟ’ವೆಂತಲೂ ಅರ್ಥ. ಅಂದರೆ ಒಟ್ಟುಗೂಡಿ ಉತ್ಕೃಷ್ಟವಾಗಿ ಮುಂದುವರೆಯುವ ಜನಸಮೂಹವೇ ‘ಸಮಾಜ’ ಎಂದು ತಿಳಿಯಬಹುದು.

ಸಮಾಜವೆಂದರೆ ಸ್ಥೂಲ ಅರ್ಥದಲ್ಲಿ “ಹಲವು ಸಂಸ್ಥೆಗಳ ಒಕ್ಕೂಟ. ಜೊತೆಗೂಡಿ ಇರಬಹುದಾದ ವ್ಯಕ್ತಿಗಳನ್ನು ಒಟ್ಟುಗೂಡಿಸಿ, ಮಾನವರ ಭೌತಿಕ ಮತ್ತು ಭಾವನಾತ್ಮಕ ಜೀವನದ ಬೆಸುಗೆ ಬೆಸೆಯುವುದೇ ‘ಸಮಾಜ’. ಸಮಾಜದ ಚೌಕಟ್ಟಿನಲ್ಲಿ ಮಾತ್ರ ಮಾನವ ತನ್ನ ಬದುಕನ್ನು ವ್ಯವಸ್ಥಿತವಾಗಿ ರೂಪಿಸಿಕೊಳ್ಳಬಲ್ಲ. ಸಮಾಜದ ಹೊರತಾಗಿ ಮನುಷ್ಯನ ಜೀವನವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಆದ್ದರಿಂದ ಮನುಷ್ಯನ ವ್ಯಕ್ತಿತ್ವ ನಿರ್ಮಾಣದಲ್ಲಿ ಸಮಾಜದ ಪಾತ್ರ ಅತ್ಯಂತ ಮಹತ್ವವಾದುದು. ಆದರೆ ಆಧುನಿಕತೆಯ ಆಡಂಬರದಲ್ಲಿ ಸವಿಸಮಾಜದ ರುಚಿಯನ್ನು ಮನುಷ್ಯ ಕಾಣದಾಗಿರುವುದು ವಿಷಾದನೀಯ. ಎಲ್ಲೆಡೆ ಕ್ರೌರ್ಯ, ದ್ವೇಷ, ಅಸೂಯೆಗಳು ಮನೆಮಾಡಿ ಮಾನವ-ಸಮಾಜದ ಅಳಿವಿಗೆ ಕಾರಣವಾಗಿತ್ತಿವೆ.

ಅಂಥ ಸಮಾಜವನ್ನು ಪುನರುಜ್ಜೀವನ ಗೊಳಿಸಲು ಸಾಂಸ್ಕೃತಿಕ ಘಟಕದ ಅಂಗವೇ ಆಗಿರುವ ಸಾಹಿತಿಯು ಪ್ರಯತ್ನ ಪಡಬಹುದು. ಆ ಕಾಲದ ವೈಚಾರಿಕ ಪ್ರಣಾಳಿಕೆಗಳ ಮೂಲಕ ಅವನು ಪ್ರಭಾವಿತನಾಗಿ ಸಮಕಾಲೀನ ವ್ಯವಸ್ಥೆಯನ್ನು ಹೊಗಳುವುದಲ್ಲದೇ, ತೆಗಳುವುದರ ಮೂಲಕವೂ ಸಮಾಜವನ್ನು, ಸಾಮಾಜಿಕರನ್ನು ಸರಿದಾರಿಗೆ ತರಲು ಪ್ರಯತ್ನ ಪಡಬಹುದು. ಇದನ್ನೇ ‘ಸಾಹಿತ್ಯ ಸಮಾಜದ ಗತಿಬಿಂಬ’ ಎನ್ನುವುದು. ‘ಸ’ಹಿತವನ್ನು ಒಳಗೊಂಡಿರುವುದು ಸಾಹಿತ್ಯ ಎಂಬ ಮಾತೂ ಇದೆ ಅಂದರೆ “ಸಾಹಿತ್ಯ ಸಮಾಜದ ಕನ್ನಡಿ” ಎನ್ನುವುದನ್ನು ಒಪ್ಪಲೇಬೇಕು. ಇದನ್ನೇ Poetry is social product ಎಂದು ಉಲ್ಲೇಖಿಸಿರುವುದು. ಈ ಎಲ್ಲಾ ಮಾತುಗಳು ಸಮಾಜವನ್ನು ಅಭಿವ್ಯಕ್ತಗೊಳಿಸಲು ಸಾಹಿತ್ಯ ಸರಿಯಾದ ಮಾರ್ಗ ಎಂಬುದನ್ನು ಸಾಬೀತು ಮಾಡುತ್ತವೆ.

ಅನಾದಿಯಿಂದಲೂ ಸಮಾಜವನ್ನು ವಿಶಿಷ್ಟ ಸಂಗತಿಗಳೊಂದಿಗೆ ತಾತ್ವಿಕ ಚರ್ಚೆಗಳೊಂದಿಗೆ ಸಾಹಿತ್ಯದ ಮೂಲಕ ದರ್ಶಿಸುವ ಪ್ರಯತ್ನವನ್ನು ನಮ್ಮ ಕವಿಗಳು ಮಾಡಿದ್ದಾರೆ .ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸಾಮಾಜಿ ಸಂಬಂಧಗಳು ಎಂಬ ತಲೆ ಬರೆಹವೇ ವಿಶಾಲ ವಸ್ತುಗಳನ್ನು ಹೊಂದಿರುವಂಥದ್ದು. ಒಂದೆರಡು ಉದಾಹರಣೆಗಳೊಂದಿಗೆ ಈ ವಿಷಯ ಮಂಡಿಸುವ ಕಿರು ಪ್ರಯತ್ನವನ್ನು ಈ ಲೇಖನದ ಮೂಲಕ ಮಾಡುತ್ತೇನೆ.

ಕನ್ನಡದ ಮೊದಲ ಗದ್ಯ ಕೃತಿ ‘ವಡ್ಡಾರಾಧನೆ’ಯನ್ನು ತೆಗೆದುಕೊಂಡರೆ ಇಂಥ ಉದಾಹರಣೆಗಳು ನಮಗೆ ಸಿಗುತ್ತವೆ. ‘ವಡ್ಡಾರಧನೆಯ’ಮೊದಲ ಕಥೆ ‘ಸುಕುಮಾರ ಸ್ವಾಮಿಯ ಕಥೆ’ ಯಲ್ಲಿ ಬರುವ ಉಪಕಥೆ ‘ಸುಧಾಮೆಯ ಕಥೆ’. ಇಲ್ಲಿ ಬರುವ ಸುದತ್ತ ಶೆಟ್ಟಿಯ ಮಗಳು ಸುಧಾಮೆಯು ನಿಭಾಯಿಸುವ ಸಾಮಾಜಿ ಸಂಬಂಧಗಳು ವಿಭಿನ್ನ ಆಯಾಮಗಳಲ್ಲಿ ಓದುಗರನ್ನು ವ್ಯಕ್ತಿತ್ವ ವಿಮರ್ಶೆಗೆ ಅಣಿಗೊಳಿಸುತ್ತವೆ. ಸುದಾಮೆ ಗಂಗಾ ನದಿಯಲ್ಲಿ ಸ್ನಾನಕ್ಕೆಂದು ಹೋದಾಗ ಮೊಸಳೆಯೊಂದು ಹಿಡಿದಿರುತ್ತದೆ. ಧನದತ್ತ ಮದುವೆಲ್ಲಿಯ ಮೊದಲ ದಿನದ ಅಲಂಕಾರವನ್ನು ತೋರಿಸಬೇಕೆಂಬ ಒಪ್ಪಂದದ ಮೇರೆಗೆ ಮೊಸಳೆಯಿಂದ ಅವಳನ್ನ ಬಿಡಿಸುತ್ತಾನೆ.. ಕಾಲಕ್ರಮೇಣ ಸುಧಾಮೆಗೆ ಮದುವೆಯಾದನಂತರ ಧನದತ್ತನಿಗೆ ಕೊಟ್ಟ ಮಾತಿನಂತೆ ತನ್ನ ಅಲಂಕಾರವನ್ನು ತೋರಿಸಲು ಆತ ಇದ್ದ ಅಂಗಡಿಗೆ ಹೊಗುತ್ತಾಳೆ. ಹೋಗುವಾಗ ದಾರಿಯಲ್ಲಿ ತಳಾರ ಇಷ್ಟು ಹೊತ್ತಿನಲ್ಲಿ ಈ ರೀತಿ ಅಲಂಕಾರ ಮಾಡಿಕೊಂಡು ಹೊರಟಿರುವೆಯಲ್ಲಾ ನೀನು ಪೊಲ್ಲ ಮಾನಸಿ, ಕೆಟ್ಟ ಹೆಂಗಸು ಎನ್ನುತ್ತಾನೆ, ಕಳ್ಳ ಆಭರಣಗಳನ್ನು ಕೊಡು ಎಂದು ಪೀಡಿಸುತ್ತಾನೆ.ಬ್ರಹ್ಮ ರಾಕ್ಷಸ ಅವಳನ್ನು ತಿನ್ನುವ ಪ್ರಯತ್ನ ಮಾಡುತ್ತಾನೆ. ಮೂರು ಜನರನ್ನು ಹೇಗೋ ಸಮಾಧಾನಿಸಿ ಧನದತ್ತನ ಸೋದರ ಮೈದುನ ಇದ್ದ ಅಂಗಡಿಗೆ ಹೋಗಿ ಅಲಂಕಾರವನ್ನು ತೋರಿಸುತ್ತಾಳೆ. ಧನದತ್ತ ಆಕೆಯ ಸೌಂದರ್ಯವನ್ನು ನಿರ್ಮಲ ಮನಸ್ಸಿನಿಂದಲೇ ಹೊಗಳುತ್ತಾನೆ. ಪುನಃ ಆಕೆಯನ್ನು ಸೌಧರ್ಮಿಕೆಯಿಂದ ಬೀಳ್ಕೊಡುತ್ತಾನೆಯೇ ವಿನಃ ಘಾಸಿಗೊಳಿಸುವುದಿಲ್ಲ. ಇದು ಈ ರೀತಿಯ ಸೌಧರ್ಮಿಕೆ ನಮಗೆ ಬೇಕಾಗಿರುವುದು ದುರಾದೃಷ್ಟವಶಾತ್ ನಾವು ಕಳೆದುಕೊಂಡಿದ್ದೇವೆ.

ಮೈದುನನಿದ್ದ ಸ್ಥಳದಿಂದ ಹಿಂದಿರುಗಿ ಹೋಗುವಾಗ ಇವಳಿಗೋಸ್ಕರ ಕಾದಿದ್ದ ತಳಾರ, ಕಳ್ಳ ಹಾಗು ಬ್ರಹ್ಮ ರಾಕ್ಷಸ ಇಬ್ಬರೂ ಏನೂ ಮಾಡುವುದಿಲ್ಲ . ತಳಾರ ಸುಧಾಮೆ ಮನೆಯಿಂದ ಹೊರ ಹೊರಟಾಗ ಪೊಲ್ಲ ಮಾನಸಿ ಎಂದುಕರೆದಿದ್ದವನು ಅದೇ ಆಕೆ ಹಿಂತಿರುಗಿ ಬಂದಾಗ ಕೊಟ್ಟ ಮಾತಿಗೆ ತಪ್ಪದಂತೆ ವರ್ತಿಸಿದೆ ಎಂದು ಪ್ರಶಂಸೆ ಪಡುತ್ತಾನೆ. ‘ಬೆಳ್ಳಗಿರೋದೆಲ್ಲಾ ಹಾಲಲ್ಲ’ ಎಂದು ತಿಳಿದ ತಳಾರ, ಬ್ರಹ್ಮರಾಕ್ಷಸ,ಕಳ್ಳ ಮೊದಲಾದವರಿಗೆ “ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು” ಎಂಬ ಗಾದೆ ಇಲ್ಲಿ ಅನ್ವಯವಾಗುತ್ತದೆ. ಸಾಮಾಜಿಕ ಸಂಬಂಧ ಹಾಳಾಗುವುದು, ಅಪಕೀರ್ತಿ ಬರುತ್ತದೆ ಎಂದು ಸುಧಾಮೆ ಇಲ್ಲಿ ಆಡಿದ ಮಾತಿಗೆ ತಪ್ಪುವುದಿಲ್ಲ. ಹಾಗೆಯೇ ಧನದತ್ತ ಎಚ್ಚರಿಕೆ ಹೇಳಿ ಬೀಳ್ಕೊಡುವ ಪ್ರಸಂಗ ಸಾಮಾಜಿ ಕ ಸಂಬಂಧಗಳ ಮೌಲ್ಯಗಳನ್ನು ಇಲ್ಲಿ ಉನ್ನತೀಕರಿಸಿದೆ ಎಂದು ಹೇಳಬಹುದು.
ಪಂಪನ ಧಾರ್ಮಿಕ ಕೃತಿ ‘ಆದಿಪುರಾಣ’ದಲ್ಲಿ ಬರುವ “ಭರತ ಬಾಹಬಲಿಯ ವ್ಯಾಯೋಗ” ಎಂಬ ಭಾಗದಲ್ಲಿ ಬರುವ ಪದ್ಯವೊಂದನ್ನು ಇಲ್ಲಿ ಉಲ್ಲೇಖ ಮಾಡಬಹುದು. ಭರತನಿಗೆ ಸಮಸ್ತವನ್ನು ಬಿಟ್ಟು ಕೊಟ್ಟು ಬಾಹುಬಲಿ ತಪಸ್ಸಿಗೆ ಹೊರಡುವ ಸಂದರ್ಭದಲ್ಲಿ ಆಡುವ ಮಾತುಗಳಿವು.

ನೆಲಸುಗೆ ನಿನ್ನ ವಕ್ಷದೊಳೆ ನಿಶ್ಚಳಮೀ ಭಟಖಡ್ಗಮಂಡಲೋ
ತ್ಪಲವನವಿವಿಭ್ರಮಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ ಭೂ
ವಲಯಮನಯ್ಯನಿತ್ತುದುಮನಾಂ ನಿನಗಿತ್ತೆನಿದೇವುದಣ್ಣ ನೀ
ನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗಳ್ತೆ ಮಾಸದೇ

ಅಣ್ಣನಿಗೆ ತಮ್ಮನು ಹೇಳುವ ಮಾತುಗಳು ಲಕ್ಷ್ಮಿಯನ್ನು ಒತ್ತಟ್ಟಿಗೆ ಇರಿಸಿ ಉಳಿದಂತೆ ಗಮನಿಸಿದರೆ ನೀನು ಒಲಿದ ಹೆಣ್ಣನ್ನು ನಾನು ಬಯಸಲಾರೆ ಎನ್ನುತ್ತಾನೆ. ಕಾವ್ಯದಲ್ಲಿ ಧರೆಯೇ ಹೆಣ್ಣಾದರೆ ಲೌಕಿಕದಲ್ಲಿ ಅಣ್ಣ ಬಯಸಿದ ಹೆಣ್ಣು ಎಂದು ತಿಳಿದರೂ ಹೆಣ್ಣಿನ ಬಗ್ಗೆ ಗೌರವ ಭಾವನೆ ಬಾಹುಬಲಿಗೆ ಇತ್ತು ಎಂಬುದು ನಮಗೆ ಗೋಚರವಾಗುತ್ತದೆ. ಹಿರಿಯಣ್ಣ ತಂದೆಗೆ ಸಮಾನ, ಒಬ್ಬರು ಬಯಸಿದ್ದನ್ನು ಬಯಸುವುದು ಶ್ರೇಯಸ್ಕರವಲ್ಲ ಎಂಬ ಸಮಾಜದ ಸೂಕ್ಷ್ಮ ವಿಚಾರಗಳನ್ನು ಕವಿಯಾದವನು ಕಾವ್ಯದ ಯಾವುದೇ ಸಂದರ್ಭದಲ್ಲಿ ಅರುಹಬಲ್ಲ ಎಂಬುದಕ್ಕೆ ಈ ಸಾಲುಗಳು ಸಾಕ್ಷಿಯಾಗುತ್ತವೆ.
ಆದಿಕವಿ ಪಂಪನ “ವಿಕ್ರಮಾರ್ಜುನ ವಿಜಯ”ದ ನವಮಾಶ್ವಾಸದಲ್ಲಿ ಬರುವ ಒಂದು ಪದ್ಯ

ನೆತ್ತಮನಾಡಿ ಬಾನುಮತಿ ಸೋಲ್ತೊಡೆ ಸೋಲಮನೀವುದೆಂದು ಕಾ
ಡುತ್ತಿರೆ ಲಂಬಣಂ ಪರೆಯೆ ಮುತ್ತಿನ ಕೇಡನೆ ನೋಡಿ ನೋಡಿ ಬ
ಳ್ಕುತ್ತಿರೆಯೇವಮಿಲ್ಲದೆವನಾಯ್ವುದೊ ತಪ್ಪದೆ ಪೇಳೀಮೆಂದು ಭೂ
ಪೋತ್ತಮನಂ ಬಿಸುಟ್ಟಿರದೆ ನಿಮ್ಮೊಳೆ ಪೊಕ್ಕೊಡೆ ಬೇಡನಲ್ಲನೇ

ಎಂಥ ಮೌಲ್ಯಯುತವಾದ ಮಾತುಗಳು.ಕನ್ನಡ ಸಾಹಿತ್ಯಕ್ಕೆ ಶ್ರೀಮಂತಿಕೆಯನ್ನು ತಂದು ಕೊಟ್ಟಿರುವ ಮಹಾಕಾವ್ಯ ಪಂಪನಭಾರತದ ದಿಗ್ದರ್ಶಕ ಪದ್ಯಗಳಲ್ಲಿ ಇದೂ ಒಂದು . ಸ್ನೇಹದ ಮಹತ್ವವನ್ನು ಹೇಳುವ ಈ ರೀತಿಯ ಪದ್ಯ ಸಾರ್ವಕಾಲಿಕವಾಗಿದೆ. ಕರ್ಣನ ಮತ್ತು ದುರ್ಯೋಧನರ ಸ್ನೇಹದ ಪರಾಕಾಷ್ಠತೆಯನ್ನು ಹೇಳಿ ಸ್ನೇಹದಲ್ಲಿ ಸಲುಗೆಯಿದ್ದರೂ ಸಾಮಾಜಿಕ ಬಂಧವನ್ನುಧಾಟದೆ ಇರುವ ಪರಿಯನ್ನು ಇದು ಹೇಳುತ್ತದೆ. ಎಂಥ ಸಂಯಮಿ ದುರ್ಯೋಧನ ಪಗಟೆಯಾಟದಲ್ಲಿ ಸೋತಾಗ ಪಣಕ್ಕಿಟ್ಟ ಮುತ್ತಿನ ಸರವನ್ನು ಕೊಡಲಾರೆ ಎಂದಾಗ ಕರ್ಣನ ಸರವನ್ನು ಎಳೆಯುವುದು ಮುತ್ತಿನ ಸರ ಹರಿದು ಹೋಗುವುದು, ಅದೇ ಸಮಯಕ್ಕೆ ದುರ್ಯೋಧನ ಬಂದು ಎಳ್ಳಷ್ಟು ದ್ರೋಹ ಬಗೆಯದೆ ಬಿದ್ದು ಚೆಲ್ಲಾಡಿರುವ ಮುತ್ತುಗಳನ್ನು ಆಯ್ದು ಕೊಡಲೇ ಎಂದು ಕೇಳುವ ಸ್ನೇಹ ಕಾತುರದ ವ್ಯಕ್ತಿ ದುರ್ಯೋಧನನಾಗುತ್ತಾನೆ. ಇಂಥ ಸ್ನೇಹಕ್ಕೆ ನಾನು ದ್ರೋಹ ಮಾಡಲಾರೆ ಎಂಬ ಕರ್ಣನ ನಿಲುವು ಅವನ ವ್ಯಕ್ತಿತ್ವದ ಉನ್ನತಿಯನ್ನು ಸಾರುತ್ತದೆ. ಆ ಕರ್ಣ, ದುರ್ಯೋಧನ, ಭಾನುಮತಿ, ಈ ಮೂವರಿಗೂ ಸಂಬಂಧದ ಕುರಿತು ಎಳ್ಳಷ್ಟು ಗೊಂದಲಿರುವುದಿಲ್ಲ ನಿರ್ಮಲವಾಗಿರುತ್ತಾರೆ. ಆ ಸಾಮಾಜಿಕ ಸಂಬಂಧಗಳು ಸ್ಫಟಿಕ ಶುದ್ಧಿ ಮನೋಭಾವದಿಂದ ಇರಬೇಕು ಎಂಬುದನ್ನು ಪ್ರಸ್ತುತ ಪದ್ಯ ನಿರ್ದೇಶಿಸುತ್ತದೆ ಎಂದರೂ ತಪ್ಪಾಗದು. .
ರನ್ನ ತನ್ನ “ಗದಾ ಯುದ್ಧ” ಕೃತಿಯ ಎರಡನೆ ಭಾಗ ಭೀಮಸೇನನ ಪ್ರತಿಜ್ಞೆ ಎಂಬ ಬಾಗದಲ್ಲಿ
ಬರುವ ಸಾಲುಗಳನ್ನೊಮ್ಮೆ ನೋಡೋಣ.

ಒಡಲೊಡಮೆಯೆಂಬಿವರೆಡುಂ
ಕೆಡಲಿರ್ಪುವು ಕೆಡದ ಕಸವರಂ ಜಸಮದರಿಂ
ಕೆಡಲಿರ್ಪುವು ಕೆಡೆದ ಕಸವರಂ ಜಸಮದರಿಂ
ಕೆಡುವೊಡಲೊಡಮೆಯನೆಂದುಂ
ಕೆಡದೊಡಮೆಗೆ ಮಾರುಗುಡುವುದಿರಿವ ಬೆಡೆಂಗಾ
ಮಣಿ ಕನಕಂ ವಸ್ತು ವಿಭೂ
ಷಣಂಗಳಂ ಕೊಟ್ಟು ಪೆಂಡಿರೊಲ್ವರೆ ಗಂಡರ್
ಗುಣಮನೆ ಮೆಎವುದು ಶಸ್ತ್ರ-
ವ್ರಣಮಂ ನಿನ್ನಂತೆ ಮೆರೆವುದಿರಿವ ಬೆಡೆಂಗಾ

ತನಗಾದ ಅಪಮಾನವನ್ನು ತೀರಿಸಿಕೊಳ್ಳಲೇಬೇಕು ಭೀಮನೇ ಅದಕ್ಕೆಡ ತಕ್ಕುದಾದ ವ್ಯಕ್ತಿಎಂದು ತಿಳಿದು ಆತನನ್ನು ಯುದ್ಧಕ್ಕೆ ಪ್ರೇರೇಪಿಸುವ ದ್ರೌಪದಿಯನ್ನ ನಾವಿಲ್ಲಿ ಕಾಣಬಹುದು.
ಭೀಮ ಪ್ರತಿಜ್ಞೆ ಮಾಡಿದ ನಂತರ ತುಸು ನೆಮ್ಮದಿಯಿಂದಲೇ ವೀರರ ಲಕ್ಷಣವನ್ನು ನವಿರಾಗಿ ವಿವರಿಸುವ ರೀತಿಯನ್ನು ಇಲ್ಲಿ ಗಮನಿಸಬಹುದು. “ ವೀರರಾದವರು ತಮ್ಮ ಹೆಂಡತಿಯರಿಗೆ ಒಡವೆ ವಸ್ತುಗಳನ್ನು ಕೊಟ್ಟು ಒಲಿಸಿಕೊಳ್ಳುವುದು ಸರಿಯಲ್ಲ ಅವರು ವೀರಗುಣವನ್ನು ತೋರಿಸಬೇಕು, ಯುದ್ಧದಲ್ಲಿ ಆದ ಗಾಯಗಳನ್ನು , ಮಚ್ಚೆಗಳನ್ನು ತೋರಿಸಬೇಕು, ಹೆಂಡತಿಯನ್ನು ಮೆಚ್ಚಿಸಬೇಕು” ಎ ಎಂದು ಉಪದೇಶ ಮಾಡುತ್ತಾಳೆ, ದೇಹ ಮತ್ತು ಸಂಪತ್ತು ಎಂದಿದ್ದರೂ ನಾಶವಾಗುತ್ತವೆ. ಆದರೆ ಕೀರ್ತಿಯು ನಾಶವಾಗದೆ ಉಳಿಯುತ್ತದೆ ಎಂದು ಭೀಮನ ಗಮನವನ್ನು ಕೀರ್ತಿಯ ಕಡೆ ತಿರುಗಿಸುತ್ತಾಳೆ. ಲೋಕದ ಗಂಡ ಹೆಂಡತಿಯ ಸಂಬಂಧ ಲೌಖಿಕ ಸಾಮರಸ್ಯ ಮಾತ್ರವಲ್ಲ ಅದು ಸ್ವಾಭಿಮಾನವನ್ನು ಬಿಂಬಿಸಬೇಕು, ಸಮಾಜದಲ್ಲಿ ಆದ ಅವಮಾನಕ್ಕೆ ಪ್ರತಿಯಾಗಿ ಸಮಾಜದ ಎದಿರು ತೋಳ್ಬಲದಿಂದಲೇ ಉತ್ತರವನ್ನು ಗಂಡನಿಂದ ನೀಡಿಸಿ ತಾನೂ ಸುರಕ್ಷಿತ, ತನಗೂ ಬೆನ್ನು ಕಟ್ಟುವ ಪರಾಕ್ರಮಿ ಗಂಡನಿದ್ದಾನೆ ಗಂಡಾಂತರಗಳನ್ನು ಧಾಟಿ ಬರುವನೆಂಬುದನ್ನು ತೋರಿಸಲು ಆಕೆ ಪಡುವ ತಾಕಲಾಟ ಹಾಗು ತಲ್ಲಣಗಳು ಇಲ್ಲಿ ವ್ಯಕ್ತವಾಗಿವೆ.

“ ಅಭಿನವಪಂಪ” ನಾಗಚಂದ್ರನ ರಾಮಚಂದ್ರ ಪುರಾಣದ 14ನೆ ಆಶ್ವಾಸದಲ್ಲಿ ಸಿಗುವ ಉದಾಹರಣೆಗಳನ್ನು ಇಲ್ಲಿ ಗಮನಿಸಬಹದು. ರಾವಣ ಸೀತೆಯನ್ನು ಅಪಹರಣ ಮಾಡಿ ಪ್ರಮದ ವನದಲ್ಲಿ ಇರಿಸಿರುತ್ತಾನೆ. ರಾವಣ ಮೊದಲೇ ಮಹಾನ್ ಪರಾಕ್ರಮಿ ಅಲ್ಲವೇ? ಬಹು ದರ್ಪದಿಂದ ಸೀತೆಯನ್ನು ನೋಡಲು ಬರುವ ಸಂದರ್ಭ ಕಾವ್ಯದಲ್ಲಿ ಚಿತ್ರಿತವಾಗಿದೆ ಹಾಗೆ ಬಹಳ ದರ್ಪದಿಂದ ಬರುವ ರಾವಣನನ್ನು ಕಂಡು ಸೀತೆಗಾಗುವ ಭಾವವನ್ನು
ರಾವಣನ ರೂಪು ಸೀತಾ
ದೇವಿಗೆ ತೃಣಕಲ್ಪಮಾಯ್ತು

ಎಂದು ಕವಿ ಬರೆಯುತ್ತಾನೆ. ಅಂದರೆ ಅತ್ಯಂತ ವರ್ಚಸ್ವಿ ಹೆಣ್ಣು ಮಗಳು ಸೀತೆ ಎಂಬುದನ್ನು ತೋರಿಸುತ್ತಾನೆ.ಹಾಗೆಲ್ಲ ಪ್ರಲೋಭನೆಗೆ ಆಕೆ ಒಳಗಾಗಳು ರಾಮನ ಎದಿರು ಮಿಕ್ಕೆಲ್ಲವೂ ಆಕೆಗೆ ಒಂದು ಹುಲ್ಲು ಕಡ್ಡಿಗೆ ಸಮಾನ ಎಂದು ಬರೆಯುತ್ತಾನೆ. ಧೃಡ ಮನಸ್ಸಿನ ಸೌಮ್ಯ ಹೆಂಡತಿ ಸೀತೆ ಎಂದು ಓದುಗರಿಗೆ ಅರ್ಥ ಮಾಡಿಸುತ್ತಾನೆ.
ರಾವಣ ಮತ್ತೆ ಸುಮ್ಮನೆ ಇರುವುದಿಲ್ಲ
ನಿನ್ನ ನೆಚ್ಚಿನ ರಾಮನ ದೆಸೆಯಂ ಬಿಟ್ಟೆನಗೊಡಂಬಟ್ಟು ಸಾಮ್ರಾಜ್ಯ ಸುಖಮನನುಭವಿಸೆನೆಎಂದು ರಾವನ ಖಂಡ ತುಂಡವಾಗಿ ಹೇಳಿದ ನಂತರ
ಕರುಣಿಸುವೊಡೆನೆಗೆ ದಸಕಂ
ಧರ ಧುರದೊಳ್ ರಘುತನೂಜನಾಯುಃಪ್ರಾಣಂ
ಬರೆಗಂ ಬಾರದಿರೆನುತಂ
ಧರಿತ್ರಿಯೊಳ್ ಮೈಯನೊಕ್ಕು ಮೂರ್ಛೆಗೆ ಸಂದಳ್

ಅಂದರೆ ಸೀತೆ ರಾವಣನನ್ನು ಕುರಿತು ನೀನು ಏನು ಹೇಳಿದರೂ ನನಗೆ ಸಮ್ಮತಿಯಿಲ್ಲ ನಿನಗೊಂದುವೇಳೆ ಕನಿಕರವಿದ್ದರೆ , ಕರುಣೆಯಿದ್ದರೆ ರಾಮನ ಆಯುಷ್ಯದ ವರೆಗೆ ಬಾರದಿರು ಎನ್ನುತ್ತಾ ಇನ್ನೇನು ಕೇಡು ಸಂಭವಿಸುವುದೋ ಎಂಧು ಮೂರ್ಛೆ ಹೋಗಿಬಿಟ್ಟಳು ಸೀತೆ ಎನ್ನುತ್ತಾನೆ ಕವಿ. ಪತಿನಿಷ್ಠೆ, ಪಾತಿವ್ರತತೆಯ ಪಾರಮ್ಯ ಆಕೆಯಲ್ಲಿ ಎಷ್ಟರಮಟ್ಟಿಗೆ ಇತ್ತು ಎಂಬುದನ್ನುಗಮನಿಸಬಹುದು. ಕವಿ ಈ ಮಾತನ್ನು “ಸದ್ಭಾವಮನೊಳಕೊಂಡ ಪುಣ್ಯವತಿಯರ್ ಸತಿಯರ್ ಎಂಬ ಮಾತಿನಲ್ಲಿ ಬರೆಯುತ್ತಾನೆ.
ಹೆಂಡತಿಯಾಗಿ, ಸೋದರ ಸಂಬಂಧಿಯಾಗಿ, ಹೆಣ್ಣೊಬ್ಬಳು ಉನ್ನತೀಕರಿಸಿರುವ ಸಂಬಂಧಗಳನ್ನು ಸಾಮಾಜಿಕ ಹಿನ್ನೆಲೆಯಿಂದ ಹಳೆಗನ್ನಡ ಕಾವ್ಯಗಳಲ್ಲಿ ನೋಡುವ ಕಿರು ಪ್ರಯತ್ನ ಇದಾಗಿತ್ತು. ಇವು ಕೇವಲ ಉದಾಹರಣೆಗಳಷ್ಟೆ. ಸ್ನೇಹ, ಸಹೋದರಿಕೆ, ಮಾತೃತ್ವ,ಸಹಧರ್ಮಿಣಿ, ಸುಶೀಲೆಯಾಗಿ, ಸಹನಾಶೀಲೆಯಾಗಿ ಅದೆಷ್ಟೋ ಮಾದರಿ ಪಾತ್ರಗಳು ನಮ್ಮ ನಡುವಿವೆ. ಸಮಾಜಕ್ಕೆ ಆದರ್ಶವನ್ನು ಬಿಟ್ಟು ಹೋಗಿರುವಂತಹವು.ಎಲ್ಲವನ್ನು ನೋಡಲಾಗಿಲ್ಲ ಬೆರಳೆಣಿಕೆಯ ಪರಿಭಾಷೆಗಳನ್ನು ಮಿತಿಯೊಳಗೆ ಅನುಸಂಧಾನಿಸುವ ಈ ಕಿರುಪ್ರಯತ್ನಷ್ಟೇ ಈ ಬರಹ.


ಗ್ರಂಥ ಋಣ: 1 ಸಮಾಜಶಾಸ್ತ್ರ: ಎಂ. ನಾರಾಯಣ
2 ವಡ್ಡಾರಾಧನೆ: ಡಿ.ಎಲ್. ನರಸಿಂಹಾಚಾರ್
3 ಪಂಪಭಾರತಂ ಗದ್ಯಾನುವಾದ : ಎನ್ ಅನಂತರಂಗಾಚಾರ್
4 ರನ್ನಕವಿ ಗದಾಯುದ್ಧ ಸಂಗ್ರಹಂ: ತೀ.ನಂ. ಶ್ರೀಕಂಠಯ್ಯ

ಲೇಖಕರು;
ಸುಮಾ ಹೆಚ್.ಪಿ(ಸುಮಾ ವೀಣಾ),
ಸಹಪ್ರಾಧ್ಯಾಪಕರು ಕನ್ನಡ ವಿಭಾಗ,
ಬಿ.ಈ. ಜಿ. ಪ್ರಥಮ ದರ್ಜೆ ಕಾಲೇಜು.
ಹಾಸನ.573201.
81470181895,9972052068