ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗೋನವಾರ ಕಿಶನ್ ರಾವ್
ಇತ್ತೀಚಿನ ಬರಹಗಳು: ಗೋನವಾರ ಕಿಶನ್ ರಾವ್ (ಎಲ್ಲವನ್ನು ಓದಿ)

Poetry is the breath and finer spirit of all knowledge.

Wordsworth

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಹೆಸರು ಕೇಳಿಲ್ಲದವರೇ ಇಲ್ಲ ಎನ್ನಬಹುದು. ಅವರು ರಚಿಸಿದ ಕೃತಿಗಳಲ್ಲಿ ಹೇಮಾವತಿ,ಭೂತಯ್ಯನ ಮಗ ಅಯ್ಯು ಸಿನೆಮಾಗಳಾಗಿ,ಬಹಳ ಪ್ರಸಿದ್ದಿ ಹೊಂದಿದವು.ಅವರ ಒಂದು ಕತೆಯಲ್ಲಿ ಒಂದು ಪ್ರಸಂಗ.ಊರಿನಲ್ಲಿ ಪೌರಾಣಿಕ ನಾಟಕ.ಮಹಾಭಾರತದ ಕತೆ.ಊರಿನ ಹುಸೇನಿ ಕೃಷ್ಣನ ಪಾತ್ರಧಾರಿ ಒಳ್ಳೆಯ ಅಭಿನಯ ಊರಿನವರೆಲ್ಲ ತನ್ಮಯರಾಗಿ ನಾಟಕ ನೋಡುತ್ತಿದ್ದಾರೆ.ಕೆಲ ಹಿರಿಯ ಹೆಂಗಸರಂತೂ ಕೃಷ್ಣನಿಗೆ ಕೈ ಮುಗಿಯುತ್ತಿದ್ದಾರೆ. ನಾಟಕ ಮುಗಿಯಿತು.ಜನರಿಂದ ಚಪ್ಪಾಳೆ. ಕೆಲ ಹುಡುಗರು ಮಾತ್ರ ಅರೇ ಅವನೇನು ದೇವರೇ ಅವನು ನಮ್ಮ ಹುಸೇನಿ ಎಂದು ನಗುತ್ತಿದ್ದರು. ಸಾಹಿತ್ಯಿಕವಾಗಿ ಇಲ್ಲಿ ಗಮನಿಸ ಬಹುದಾದ ಸಂಗತಿ ಒಂದಿದೆ.ಅದೇ ಕಾವ್ಯದಲ್ಲಿ ಉತ್ಪತ್ತಿಯಾದ ರಸ ಮತ್ತು ಅದರ ಸ್ವಾದನೆ. ಇಲ್ಲಿ ರಸಸ್ವಾದಿಸುವರು ಯಾರು ? ರಸಹೀನರು ಯಾರು ? ಎಂದು ಹೇಳಲೇಬೇಕಾಗಿಲ್ಲ.
ಮಹಾಭಾರತದಂತಹ ಮಹಾಕಾವ್ಯ ತಿಳಿದುಕೊಂಡು ಅದರ ಆನಂದ ಅನುಭವಿಸುವವರಿಗೆ ಹುಸೇನಿ,ರಂಗಮಂಚ, ಪರದೆ ಬಣ್ಣ ಬೆಳಕುಗಳು ಗೌಣವಾಗುತ್ತವೆ. ಅದೇ ಕಾವ್ಯದ ಆನಂದ ತಿಳಿಯದ ಅರಸಿಕರಿಗೆ,ಬರೀ ಹುಸೇನಿ ಮಾತ್ರ ಕಾಣುತ್ತಾನೆ.ಅವನು ಮುಂದೆ ‘ ಹುಸೇನಿ ಕೃಷ್ಣ ‘ ಎಂದೇ ಅನ್ವರ್ಥನಾಮಿಯಾದ ಎಂದು ಗೋರೂರು ಅವರು ಹೇಳುತ್ತಾರೆ. ಅದು ರಸ ಪ್ರತಿಪಾದನೆ.ಲೇಖಕಕರು ಸರಳ ಭಾಷೆಯಲ್ಲಿ ರಸಾನಂದ ನೀಡುವಲ್ಲಿ ಯಶಶ್ವಿಯಾದರು.

ಭರತಮುನಿ ವಿರಚಿತ,’ನಾಟ್ಯಶಾಸ್ತ್ರ’ ಕೃತಿ ರಸ ಪ್ರತಿಪಾದನೆಗೇ ಮೀಸಲಾಗಿರುವುದು.ಹಾಗೆ ನೋಡಿದರೆ ಇದು ನಾಟಕಕಲೆಗೆ ಮೀಸಲಾಗಿದ್ದರೂ ಕಾವ್ಯಕ್ಕೂ ಅನಗುಣವಾಗಿರುವುದು ಅದರ ವಿಶೇಷತೆ.ಇಡೀ ಕಾವ್ಯ ಮೀಮಾಂಸೆ ರಸಸಿದ್ಧಾಂತ ದ ಸುತ್ತ ತಿರುಗುತ್ತಿರುವುದು ಅದರ ಮತ್ತೊಂದು ವಿಶೇಷ.ಅಲಂಕಾರ,ಧ್ವನಿ, ವಕ್ತೋಕ್ತಿ,ಗುಣ ಮುಂತಾದ ಸಿದ್ಧಾಂತಗಳನ್ನು ನಿರೂಪಿಸಿದ ವಿವಿಧ ಮೀಮಾಂಸಕರು ರಸತತ್ವವನ್ನು ವಿಕಾಸಗೊಳಿಸಿ ಅದನ್ನು ಕಾವ್ಯದ ಸರ್ವಸ್ವವನ್ನಾಗಿಸಿದರು.
ಋಗ್ವೇದ ಸಂಹಿತೆಯಲ್ಲಿ, ಎರಡು ರೀತಿಯಲ್ಲಿ ರಸ ದ ಅರ್ಥವನ್ನು ವಿವರಿಸಲಾಗಿದೆ. ರಸ್ ಎನ್ನುವುದು ರುಚಿನೋಡು ಎನ್ನುವ ಅರ್ಥದಲ್ಲಿ ಇದ್ದರೆ, ಅರ್ಷ್ ಎನ್ನುವ ಧಾತುವಿನಿಂದ,ಹರಿಯುವಿಕೆ ಅರ್ಥದಲ್ಲಿ ಎಂದು ಗುರುತಿಸಲಾಗಿದೆ.ಉಪ್ಪು ಹುಳಿ ಖಾರ, ರುಚಿಗೆ ಉದಾಹರಣೆಗಳಾದರೆ ದ್ರವ ಅಥವಾ ಸಾರ ಹರಿಯುವಿಕೆಯನ್ನು ಪತಿನಿಧಿಸುತ್ತವೆ. ಇವೆಲ್ಲವುಗಳು ನಮ್ಮ ರುಚಿಯನ್ನು ಪ್ರಚೋದಿಸುವಂತಹವುಗಳು. ತೀ.ನಂ.ಶ್ರೀ. ಯವರು ಕಾವ್ಯವು ಸೋಮರಸ ದ ಹಾಗೆ ಎನ್ನುತ್ತಾರೆ.ಒಂದು ಕಾವ್ಯ ಅಥವಾ ಒಂದು ಕವಿತೆಯನ್ನೂ ಓದಿದಾಗ ಸಿಗುವ ಆನಂದದ ನಶೆಯ ಅನುಭೂತಿ ನಿಜ ಎನ್ನಿಸದೆ ಇರಲಾರದು.

ರಸವು ಕಾವ್ಯದಿಂದ ಪಡೆಯುವ ಆನಂದಾನುಭವವಾಗಿದ್ದು , ರಸಸಿದ್ಧಾಂತವು ಜಾಗತಿಕ ಕಾವ್ಯ ಮಿಮಾಂಸೆಗೆ ಭಾರತೀಯ ಕಾವ್ಯ ಮಿಮಾಂಸೆ ನೀಡಿದ ವಿಶಿಷ್ಟವೂ ಮತ್ತು ಮಹತ್ತ್ವಪೂರ್ಣವೂ ಆದ ಕೊಡುಗೆಯಾಗಿದೆ.ರಸ ವಿಶಿಷ್ಟ ಅನುಭೂತಿ ನೀಡುವ ಆನಂದಾನುಭವ ಎಂದು ಸರಳವಾಗಿ ಹೇಳಬಹುದು., ಇದು ನಮ್ಮ ಮನೊವ್ಯಾಪಾರಗಳೊಂದಿಗೆ ನೇರವಾದ ಸಂಬಂಧ ಹೊಂದಿದೆ.

ವಿಭಾವಾನುಭಾವವ್ಯಭಿಚಾರಿಭಾವಸಂಯೋಗಾದ್ರಸನಿಷ್ಪತ್ತಿಃ

ರಸತತ್ವ ಸೂತ್ರ ಇದು
ಇಡೀ ಸೂತ್ರವನ್ನು ಬಹಳ ಆಳವಾಗಿ ‘ನಾಟ್ಯಶಾಸ್ತ್ರ’ ವಿಶ್ಲೇಷಣೆಗೆ ಒಳಪಡಿಸುತ್ತದೆ

ಮನಸ್ಸು ಒಂದು ಸರೋವರವಿದ್ದ ಹಾಗೆ. ಸರೋವರದಲ್ಲಿ ಹೊರಗಿನಿಂದ ಒಂದು ಕಲ್ಲು ಬಿದ್ದರೆ ತರಂಗಗಳೆದ್ದು ಹರಡುತ್ತಾ, ಹೋಗುತ್ತವೆ. ಹಾಗೆಯೆ ಮನಸ್ಸು ಕೂಡ ಹೊರಗಿನ ಪ್ರಚೋದನೆಗಳಿಗೆ ಪ್ರತಿಕ್ರಿಯೆ ತೋರಿಸುತ್ತಾ, ತರಂಗಗಳೇಳುತ್ತಲೇ ಇರುತ್ತವೆ. ಇವುಗಳೇ ಭಾವಗಳು ಇವುಗಳಲ್ಲಿ ಎರಡು ಬಗೆ. (1) ಸ್ಥಾಯಿ ಭಾವಗಳು (2) ಸಂಚಾರಿ (ವ್ಯಭಿಚಾರಿ) ಭಾವಗಳು. ಸ್ಥಾಯಿಯಾಗಿ, ಮನಸ್ಸಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸದಾ ಇರುವಂಥವೇ ಸ್ಥಾಯಿಭಾವಗಳು. ಅವುಗಳೊಂದಿಗೆ ಬಂದು ಹೋಗುವಂಥವೇ ಸಂಚಾರಿ ಭಾವಗಳು. ಲೋಕದ ಈ ಭಾವಗಳು ಕಲೆಯಲ್ಲಿ ತಮ್ಮ ಲೌಕಿಕತೆಯನ್ನು ಕಳೆದುಕೊಂಡು ಆಸ್ವಾದ್ಯವಾಗುತ್ತವೆ. ಲೋಕಾನುಭವದಿಂದ ಭಿನ್ನವಾದ ವಿಶಿಷ್ಟ ಅನುಭವಗಳಾಗುತ್ತವೆ. ಆನಂದ ಕೊಡುವ ಈ ಅನುಭವವೇ `ರಸ’.

ಆಸ್ವಾದಯಂತಿ ಮನಸಾ ತಸ್ಮಾನ್ನಾಟ್ಯ ರಸಾಃ’

ಎಂದು ಭರತ ತನ್ನ ನಾಟ್ಯಶಾಸ್ತ್ರ ಗ್ರಂಥದಲ್ಲಿ ಹೇಳಿದ್ದಾನೆ. ಹೀಗೆ ಆಸ್ವಾದ್ಯವಾಗಿ ರಸವಾಗುವಂತಹ ಸ್ಥಾಯಿಭಾವಗಳು ಭಾರತನ ಪ್ರಕಾರ ಎಂಟು : ರತಿ, ಹಾಸ, ಶೋಕ, ಕ್ರೋಧ, ಉತ್ಸಾಹ, ಭಯ, ಜಿಗುಪ್ಸೆ ಮತ್ತು ವಿಸ್ಮಯ. ರತಿಭಾವದಿಂದ ಶೃಂಗಾರ, ಹಾಸದಿಂದ ಹಾಸ್ಯ, ಶೋಕದಿಂದ ಕರುಣ, ಕ್ರೋಧದಿಂದ ರೌದ್ರ, ಉತ್ಸಾಹದಿಂದ ವೀರ, ಭಯದಿಂದ ಭಯಾನಕ, ಜಿಗುಪ್ಸೆಯಿಂದ ಭೀಭತ್ಸ, ವಿಸ್ಮಯದಿಂದ ಅದ್ಭುತ – ಈ ರಸಗಳು ಪ್ರತೀತವಾಗುತ್ತವೆ.

ಶೃಂಗಾರ ಹಾಸ್ಯ ಕರುಣಾ ರೌದ್ರವೀರ ಭಯಾನಕಾಃ
ಬೀಭತ್ಸಾದ್ಭುತ ಸಂಜ್ಞಾ ಚೇತ್ಯಷ್ಟೌ ನಾಟ್ಯೇರಸಾಃ ಸ್ಮಂತಾಃ

-ನಾಟ್ಯಶಾಸ್ತ್ರ

ಇವುಗಳಲ್ಲಿ ಒಂದೊಂದರ ಬಣ್ಣ, ಆಧಿದೈವ, ವಿಭಾವಾನುಭಾವಗಳು, ಸಂಚಾರಿಭಾವಗಳು, ಅಭಿನಯಕ್ರಮ ಯಾವುದು ಎಂಬುದನ್ನು ಭರತ ಹೀಗೆ ವಿಶದೀಕರಿಸಿದ್ದಾನೆ:

ರಸ ಸ್ಥಾಯಿಭಾವ ದೇವತೆ ವರ್ಣ

1 ಶೃಂಗಾರ – ರತಿ ವಿಷ್ಣು -ಹಸುರು

2 ಹಾಸ್ಯ ಹಾಸ -ಪ್ರಮಥ – ಬಿಳಿ

3 ಕರುಣ ಶೋಕ -ಯಮ- ಬೂದು

4 ರೌದ್ರ ಕ್ರೋಧ – ರುದ್ರ -ಕೆಂಪು

5 ವೀರ,ಉತ್ಸಾಹ -ಇಂದ್ರ- ಲಘುಕಿತ್ತಳೆವರ್ಣ

6 ಭಯಾನಕ ಭಯ ;-ಯಮ/ ಕಾಲ -ಕಪ್ಪು

7 ಬೀಭತ್ಸ ಜಿಗುಪ್ಸೆ- ಶಿವ -ನೀಲಿ

8 ಅದ್ಭುತ ವಿಸ್ಮಯ -ಬ್ರಹ್ಮ- ಹಳದಿ

ಶೃಂಗಾರ : ಇದರಲ್ಲಿ ಎರಡು ವಿಧ. (1) ಸಂಭೋಗ ಶೃಂಗಾರ (2) ವಿಪ್ರಲಂಭ ಶೃಂಗಾರ. ಸಂಭೋಗ ಶೃಂಗಾರದಲ್ಲಿ ಪರಸ್ಪರ ದರ್ಶನ, ಮಿಲನ ಇವು ಸೇರುತ್ತವೆ. ವಿಪ್ರಲಂಭದಲ್ಲಿ ವಿರಹ, ಅಭಿಲಾಷೆ ಸೇರುತ್ತವೆ. ನಾಚಿಕೆ, ಶಂಕೆ, ಅಸೂಯೆ, ಮೋಹ, ಔತ್ಸುಕ್ಯ, ಸ್ಮರಣ, ಚಿಂತೆ ಇತ್ಯಾದಿಗಳು ವ್ಯಭಿಚಾರಿ ಭಾವಗಳು.

ಹಾಸ್ಯ : ಇದರಲ್ಲಿ ಆರು ವಿಧಗಳಿವೆ: (1) ಸ್ಮಿತ (2) ಹಸಿತ (3) ವಿಹಸಿತ (4) ಉಪಹಸಿತ (5) ಅಪಹಸಿತ (6) ಅತಿಹಸಿತ. ಅನೌಚಿತ್ಯವೇ ಹಾಸ್ಯದ ಮೂಲ.

ಕರುಣ : ಕರುಣ ಅತಿ ಸುಕುಮಾರ ರಸ. ಇದರ ಅನುಭವಕಾಲದಲ್ಲಿ ಅಂತರಂಗ ಕರಗುತ್ತದೆ.
ರೌದ್ರ : ಕ್ರೋಧವು ಉದ್ಧತ ಪ್ರಕೃತಿಯುಳ್ಳವರಲ್ಲಿ ಬೇಗ ಉದ್ರೇಕವಾಗುತ್ತದೆ.
ವೀರ : ದಾನವೀರ, ಧರ್ಮವೀರ, ಯುದ್ಧವೀರ ಎಂಬ ಮೂರು ವಿಧಗಳಿವೆ.

ಭಯಾನಕ : ಭಯ ಸಹಜ ಪ್ರವೃತ್ತಿ. ಆದರೆ ಇದು ವೀರರಿಗೆ ತಕ್ಕುದಲ್ಲ. ಸಾಮಾನ್ಯರಿಗೆ ಯಾವುದು ಭಯವುಂಟುಮಾಡುತ್ತದೋ ಅದು ವೀರರಿಗೆ ಕೋಪತರಿಸುತ್ತದೆ. ಬೀಭತ್ಸ : ಜುಗುಪ್ಸೆಯೇ ಈ ರಸದ ಮೂಲ. ಒಂದು ವಸ್ತು ಜುಗುಪ್ಸಿತವೆ ಅಲ್ಲವೆ ಎಂಬುದು ನಿರೂಪಣೆಯ ಕೌಶಲ್ಯದ ಮೇಲೆ ನಿಲ್ಲುತ್ತದೆ.

ಅದ್ಭುತ ವಿಸ್ಮಯ ವನ್ನು ಎಲ್ಲರೂ ಅನುಭವಿಸುತ್ತಾರೆ. ಅದ್ಭುತದಲ್ಲಿ ಸಿಕ್ಕುವ `ಚಮತ್ಕಾರವು ಚಿತ್ತವಿಸ್ತಾರರೂಪವಾದದ್ದು
ಕನ್ನಡದ ಎಲ್ಲ ಮಹಾಕಾವ್ಯಗಳಲ್ಲಿ ಈ ಎಲ್ಲಾ ರಸಗಳು‌ಹಾಸುಹೊಕ್ಕಾಗಿ ಬಂದು ರಸ ಉತ್ಪತ್ತಿಯಾಗಿರುವುದನ್ನು ಕಾಣುತ್ತೇವೆ. ಕುವೆಂಪು ರಸತತ್ವನ್ನು ಆಧರಿಸಿ , ‘ರಸೋ ವೈಸಃ ‘ಎನ್ನುವ ಪುಸ್ತಕ ವನ್ನು ರಚಿಸಿದ್ದಾರೆ.ಬೇಂದ್ರೆ ಯವರಂತೂ ರಸವೇ ಜೀವನ ವಿರಸವೇ ಮರಣ ಎಂದೇ ಸಾರಿದ್ದಾರೆ.ಗೋಪಾಲಕೃಷ್ಣ ಅಡಿಗರ ‘ಬತ್ತಲಾರದ ಗಂಗೆ ‘ ಕವಿತೆಯ ಈ ಸಾಲುಗಳು ಭೀಭತ್ಸಕ್ಕೆ ಒಳ್ಳೆಯ ಉದಾಹರಣೆ ಎನಿಸಿತು:

ಗಂಗಾಳ ತುಂಬ ಗಂಜಿಯನಿಟ್ಟು ಕುಳಿತಿದ್ದಾಳೆ
ಗಂಗಜ್ಜಿ ಅಂಗಾಂಗ ಸುಕ್ಕಿ ಸೊರಗಿ;
ಮುಟ್ಟಲಾರಳು ತೊಟ್ಟು,ಕಣ್ಣಮುಂದೆ ಕಟ್ಟಿದೆ ಅಲ್ಲಿ
ಕುರುಕ್ಷೇತ್ರಗಳ ರುಂಡ ರಕ್ತವೇಣಿ.

ಗೆಳೆಯರಾದ,ಪ್ರಹ್ಲಾದ ಜೋಷಿಯವರ ಒಣಗುತಿದೆ ಪಂಜೆಯ ಈ ಸಾಲುಗಳನ್ನುನೋಡಿ :

ಎಲ್ಕವೂ ಒಣಗಿವೆ ಸಂಸಾರದ ತಾಪದ ಬಿಸಿಯಿಂದ
ನಿಮ್ಮ ಉದಾಸೀನತೆಯ ನಿಟ್ಟುಸಿರ ಕಾವಿಂದ
ಇದು ಎಂಥ ಬರ ಒಣಗಿವೆ ಎಲ್ಲಾ ಮರ !

ಬರದಲ್ಲಿಯೂ ನಿಮ್ಮ ಮನ-ಗೆಲ್ಲಲು ಒಂದು ಉತ್ತಮ ಪ್ರಯತ್ನ ಎನಿಸಿ ಕೊಳ್ಳುವ ಸಾಲುಗಳಲ್ಲಿ ಮೂಡಿರುವ ಕವಿತೆ ; ಇಡೀ ಕವಿತೆಯನ್ನೇ ಮರೆಸಿ ಕರುಣ ರಸ ತುಂಬಲು ಪದಗಳ ಪೈಪೋಟಿ ನಡೆದಂತಿದೆ.
ಲೌಕಿಕ ಭಾವ ಕವಿತೆಯಾಗುವಿಕೆ ಇದೆಯಲ್ಲ ಅದೊಂದು ರಸಯಜ್ಞ.ಅಪೂರ್ವ ಭಾವ ಕಾವ್ಯ ಓದಿದಾಗ ಮಾತು ಬೇಡವಾಗಿ ಮೌನಕ್ಕೆ ಶರಣಾಗುವ ಕ್ರಿಯೆ, ಪ್ರತಿಭೆಯ ಉನ್ನತ ಮಜಲು ಎಂದುಕೊಳ್ಳುವುದುಸರಿಯಾದ ಮಾತು.

ಕಾವ್ಯಂ ಯಶಸೇರ್ಥಕೃತೇ ವ್ಯವಹಾರವಿದೇ ಶಿವೇತ ರಕ್ಷತಯೇ |
ಸದ್ಯಃಪರನಿವೃತಯೆ ಕಾಂತಾಸಮ್ಮಿತತಪಯೋಪದೇಶಯುಜೇ ||

-ಕಾವ್ಯಪ್ರಕಾಶ.
ಮುಮ್ಮಟ
ಯಶಸ್ಸು, ಹಣ,ವ್ಯವಹಾರಗಳು ಇದರಿಂದ ದೊರೆಯುತ್ತವೆ.ಆದರೆ ಅಲ್ಲಿಗೇ ಅದರ ಉದ್ದೇಶ ಮುಗಿಯಲಾರದು.ಶಿವೇತರಕ್ಷತಿ ಅಂದರೆ ಅಮಂಗಳದ ನಾಶ,ಸದ್ಯಃಪರನಿವೃತಯೆ ಅಂದರೆ ಅನುಪಮವಾದ ಆನಂದ ಮತ್ತು ಇನಿಯಳಂತೆ ಮನಸ್ಸನ್ನು ಒಲಿಸಿಕೊಂಡು ಮಾಡುವ ಉಪದೇಶ –
ಈ ರೀತಿಯ ಮೂರು ವಿಧದ ಲಾಭ ಕಾವ್ಯದಿಂದ.

ಅಂಕಣದ ಬರಹಗಳೆಲ್ಲ ಪರಿಪೂರ್ಣ ಅ ಎನ್ನುವ ನಂಬಿಕೆ ನನ್ನದು.ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರ ತಿಳಿಯುವ ಕುತೂಹಲವೂ ನನ್ನದೇ ಹೌದು.

೦-೦-೦

ಸೌಜನ್ಯ:
ಭಾರತೀಯ ಕಾವ್ಯ ಮೀಮಾಂಸೆ –ತೀ.ನಂ.ಶ್ರೀ.
ವಿಶ್ವಕೋಶ – ಮೈಸೂರು ವಿ.ವಿ.

ಅಂಕಣಕಾರರು -ಗೋನವಾರ ಕಿಶನ್ ರಾವ್