- ಅನಾದ - ಫೆಬ್ರುವರಿ 18, 2023
- ಗಾಳಿಗೆ ತೊಟ್ಟಿಲ ಕಟ್ಟಿ - ಆಗಸ್ಟ್ 22, 2021
- ಬಾಬಾಸಾಹೇಬರೆಡೆಗೆ - ಆಗಸ್ಟ್ 22, 2021
ಗಾಳಿಗೆ ತೊಟ್ಟಿಲ ಕಟ್ಟಿ: ಸಾಮಾಜಿಕ-ರಾಜಕೀಯ ಬದಲಾವಣೆ ಬಯಸುವ ಕವಿತೆಗಳು
ಗಾಳಿಗೆ ತೊಟ್ಟಿಲ ಕಟ್ಟಿ
ಲೇ: ದೇವು ಮಾಕೊಂಡ
ಪುಟ: 76, ಬೆಲೆ: 90/-
ಪ್ರಕಾಶನ: ನೆಲೆ ಪ್ರಕಾಶನ, ಸಿಂದಗಿ
ದೇವು ಮಾಕೊಂಡ ಹೊಸ ತಲೆಮಾರಿನ ಪ್ರತಿಭಾನ್ವಿತ ಕವಿ ಮತ್ತು ಲೇಖಕ. ಅವರು ಕಳೆದ ದಶಕದಿಂದ ಬರವಣಿಗೆ ಮತ್ತು ಸಂಘಟನೆ-ಇವರೆಡರಲ್ಲಿಯೂ ಒಂದಾಗಿಯೇ ತೊಡಗಿಕೊಂಡಿರುವರು.
‘ಗಾಳಿಗೆ ತೊಟ್ಟಿಲ ಕಟ್ಟಿ’ ದೇವು ಮಾಕೊಂಡರ ಎರಡನೇ ಕವನಸಂಕಲನ. ಮೂವತ್ತೊಂದು ಕವಿತೆಗಳು ಈ ಸಂಕಲನದಲ್ಲಿವೆ. ಕೋಮುವಾದ, ರಾಜಕೀಯ ಅರಾಜಕತೆ, ವಂಚನೆ, ಭ್ರಷ್ಟಾಚಾರ, ಮೋಸ, ಹುಸಿ ದೇಶಭಕ್ತಿ, ಸಾಮಾಜಿಕ ಅಸಮಾನತೆ, ಮನುಷ್ಯನ ಹೀನ ಬದುಕು, ಜಾಗತೀಕರಣ, ಉದಾರೀಕರಣ, ಖಾಸಗೀಕರಣ, ವ್ಯವಸ್ಥೆಯ ಕ್ರೌರ್ಯ-ಇತ್ಯಾದಿ ದೇವು ಮಾಕೊಂಡರ ಕಾವ್ಯದ ವಸ್ತುಗಳು. ಧ್ವನಿಫೂರ್ಣವಾದ ರೂಪಕ ನಾಮವುನ್ನುಳ್ಳ ಈ ಸಂಕಲನ ತನ್ನ ಗಾಳಿಯ ಸೆಳೆತ ಮತ್ತು ಆಕಾಶದ ಆಕರ್ಷಣೆಯಿಂದಾಗಿ ಓದುಗರ ಗಮನ ಸೆಳೆಯುತ್ತದೆ. ದೇವು ಮಾಕೊಂಡರದು ವಾಸ್ತವದ ಪ್ರಖರತೆಯನ್ನು ಎದುರಿಸುತ್ತಲೇ ಕನಸಿಗಾಗಿ-ಬೆಳಕಿಗಾಗಿ ಮಿಡಿಯುವ ಜೀವ.
ರೂಪಕಗಳಲ್ಲಿ ಕಾವ್ಯ ಕಟ್ಟುವ ಸೃಜನಶೀಲ ಪ್ರತಿಭೆ ದೇವು ಮಾಕೊಂಡ ಅವರಲ್ಲಿದೆ ಎಂಬುದಕ್ಕೆ ಸೂಕ್ತ ನಿದರ್ಶನ ‘ನೀ ಬಿಟ್ಟು ಹೋದ ದಾರಿಗಳ ಮೇಲೆ’ ಕವಿತೆ. ಭಾರತದ ಇಂದಿನ ಸಂದರ್ಭ ಸಂಘರ್ಷಮಯವಾದದ್ದು, ಮನುಷ್ಯ ಸಂಬಂಧಗಳು ಸಿಡಿದು, ಒಡೆದು ದೂರಾಗುತ್ತಿವೆ. ಇದಕ್ಕೆ ನಮ್ಮಲ್ಲಿ ವರ್ಗ, ಧರ್ಮ, ವರ್ಣ, ಜಾತಿ, ಮತ, ಭಾಷೆಗಳೆಲ್ಲವೂ ಕಾರಣವಾಗಿವೆ.
ನೀ ಬಿಟ್ಟು ಹೋದ ದಾರಿಗಳ ಮೇಲೆ
ಪ್ರೀತಿಗೆ ಬರ ಬಂದಿದೆ
ಎರಡು ಕಡಲು ದಾರಿಗಳ ಮೇಲೆ
ಘಟಸರ್ಪ ಬಿದ್ದಿದೆ.
(ನೀ ಬಿಟ್ಟು ಹೋದ ದಾರಿಗಳ ಮೇಲೆ)
ಹೀಗೆ ಈ ಕವಿತೆ ಸಮಕಾಲೀನ ಭಾರತೀಯರ ಸಾಮಾಜಿಕ ಬದುಕಿನ ದುರಂತವನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತಲೇ ಈ ಕವಿಯ ಮುಖ್ಯ ಕಾಳಜಿಗಳನ್ನು ಧ್ವನಿಸುತ್ತದೆ. ಸತ್ಯ, ಶಾಂತಿ ಮತ್ತು ಅಹಿಂಸೆಗಳು ಗಾಂಧೀಜಿಯೊಂದಿಗೆ ಗುಂಡಿಗೆ ಆಹುತಿಯಾಗಿವೆ. ಗಾಂಧೀಜಿಯ ಕನಸಿಗೂ ಇಂದಿನ ವಾಸ್ತವಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಸ್ವಾತಂತ್ರ್ಯಪೂರ್ವದ ಆದರ್ಶ, ಕನಸುಗಳು ತಮ್ಮ ಮೂಲಸ್ವರೂಪವನ್ನೇ ಕಳೆದುಕೊಂಡು, ಅರ್ಥಹೀನವಾಗಿ ಈಗ ವಿಕಾರರೂಪ ಪಡೆದಿವೆ, ಅಸಹ್ಯ ಹುಟ್ಟಿಸುತ್ತಿವೆ.
ನಾವೀಗ ನೋಡುತ್ತಿರುವುದು ಕೋಮುವಾದಿ-ಬಂಡವಾಳಶಾಹಿಗಳ ಭಾರತ. ಇಲ್ಲಿ ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್ ವಿಚಾರಗಳು ಸಿಗುವುದು ಅಪರೂಪ. ಧರ್ಮ ಮತ್ತು ಅಧಿಕಾರದ ಮತ್ತೇರಿದವರಿಗೆ ಎಲ್ಲವೂ ಮೆತ್ತಗೆ ಕಂಡುಬರುತ್ತದೆ. ಇಂದಿನ ರಾಜಕೀಯ ಹೊಸ ಹೊಸ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಿದೆ. ಅದನ್ನು ನಿಯಂತ್ರಿಸುವುದು ಸಾಧ್ಯವೇ? ಎಂಬ ಸಂದೇಹ ದಿನೇ ದಿನೇ ಪ್ರಬಲಗೊಳ್ಳುತ್ತಿದೆ.
ಕೊನೆಗೊಮ್ಮೆ ಈ ನೆಲ ಮನ್ನಿಸದು
ಅಘೋಷಿತ ಚೌಕಿದಾರನಾಗಿರಲಿ
ಮತೀಯ ಪ್ರವರ್ತಕನಾಗಿರಲಿ
ಶಾಸನಕೋರನಾಗಿರಲಿ
ಹಿಸುಕಿ ಸೌಧ ಕಟ್ಟುವವರಾಗಿರಲಿ.
(ದೊರೆಗೊಂದು ಪತ್ರ)
ವರ್ತಮಾನದ ಈ ದೇಶದ ರಾಜಕಾರಣ ಹಾರುವ ಹಕ್ಕಿಗೆ ಹಾದರ ಕಟ್ಟುತ್ತಿದೆ. ಅದು ವಿಷ ಕಾರುವುದನ್ನೇ ಕಲಿಸುತ್ತಿದೆ. ಆದರೆ, ಹಾಲು ಕಾರುವುದನ್ನು ಕಲಿಸುತ್ತಿಲ್ಲ. ಬಡವರ ಹೊಟ್ಟೆಗೆ ಅನ್ನಕೊಡದೆ, ದುಡಿಯುವ ಕೈಗಳಿಗೆ ಉದ್ಯೋಗ ನೀಡದೆ ಬಣ್ಣದ ಭಾಷಣ ಮುಂದುವರೆಯುತ್ತಿದೆ. ಭಯ ಬಿದ್ದ ಭೂಮಿಯ ಬೆವರು ಹರಿದು ತಳಪಾಯವೇ ತಲ್ಲಣಿಸಿ ನಡುಗುತ್ತಿದೆ. ಇಂಥ ಸಂದರ್ಭದಲ್ಲಿ ಕವಿಯಾದವನು ಸಮಾನತೆ, ಮಾನವೀಯತೆ, ಸತ್ಯ, ಶಾಂತಿ, ಪ್ರೀತಿ, ಸ್ನೇಹಗಳನ್ನು ವಿಕೃತಗೊಳ್ಳದೆ ಹಾಗೆ, ಹಾಗೂ ಸಹನೀಯವಾಗುವಂತೆ ನೋಡಿಕೊಳ್ಳುವುದು ಸಾಧ್ಯವಾಗಬಹುದು.
ದೇವು ಮಾಕೊಂಡರಿಗೆ ಕವಿತೆಯಲ್ಲಿ ವ್ಯಂಗ್ಯ-ವಿಡಂಬನೆಗಳನ್ನು ತಂದುಕೊಳ್ಳುವಲ್ಲಿ ಹೆಚ್ಚು ಆಸಕ್ತಿ ಎನ್ನುವುದಕ್ಕೆ ‘ದೇವರು ಸತ್ತಿದ್ದಾನೆ’ ಕವಿತೆ ನಿದರ್ಶನ. ಧಾರ್ಮಿಕ ವಿಡಂಬನೆಯನ್ನು ಕುರಿತ ಕವಿತೆ ಇದಾಗಿದೆ. ಅರ್ಚಕ ದೇವರು-ಧರ್ಮಗಳನ್ನು ಬಲ್ಲವನಂತೆ ನಟಿಸಿ ಮುಗ್ಧ ಭಕ್ತರನ್ನು ಶೋಷಿಸುವ ರೀತಿಯನ್ನು ವಿವರಿಸುತ್ತ, ಶೋಷಕನಾಗಿರುವ ಅರ್ಚಕನ ಮುಖವಾಡವನ್ನು ಈ ಕವಿತೆ ಬಯಲು ಮಾಡುತ್ತದೆ. ಪುರೋಹಿತರು ಮುಗ್ಧ ಭಕ್ತರನ್ನು ಶೋಷಿಸುವುದನ್ನು ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ.
ಅವನು ಹೇಳುತ್ತಲೇ ಇದ್ದ
ಒಳಗೊಳಗೇ ದಿನವೂ ನಗುವ ಅರ್ಚಕ
ಇಂದು ಗಾಭರಿಗೊಂಡಿದ್ದಾನೆ
ದೇವರು ತೀರಿಕೊಂಡದ್ದಕಲ್ಲ
ಕಾಂಚಾಣ ತಟ್ಟೆ ಕಳೆಗುಂದಿದ್ದಕ್ಕೆ.
(ದೇವರು ಸತ್ತಿದ್ದಾನೆ)
ಯಾವ ಪುಟಕ್ಕೆ ಕೈ ಹಾಕಿದರೂ ಇಂಥ ಸಾಲುಗಳನ್ನು ಹೆಕ್ಕಬಹುದು ಈ ಸಂಕಲನದಲ್ಲಿ. ಅಂಥ ಅಪ್ಪಟ ಕಾವ್ಯ ಇಲ್ಲಿದೆ. ಸಹಜ ಗತಿಯ ನಡಿಗೆಯಲ್ಲಿ ಗಕ್ಕನೇ ಬರುವ ಅನಿರೀಕ್ಷಿತ ತಿರುವುಗಳು ನಾಟಕೀಯ ಗುಣವನ್ನು ಅನೇಕ ಕವಿತೆಗಳಿಗೆ ತಂದಿವೆ.
ಹಿಂಸಾತ್ಮಕ ಘಟನೆಗಳಿಂದ ದೇಶದ ಇತಿಹಾಸ ನಿರ್ಮಿಸಲು ಹೊರಟವರನ್ನು ವಿಡಂಬಿಸುವ ‘ನಾಲೆಯಾಗಿ ಹರಿಯುತ್ತಿದೆ ಕಣ್ಣೀರು’ ಕವಿತೆ ಮಾನವೀಯ ತುಡಿತ-ಮಿಡಿತಗಳ ಭಾವವನ್ನು ಮಹತ್ವವನ್ನಾಗಿಸಿಕೊಂಡಿದೆ.
ನಿನ್ನ ಕಾಲ ಚರಿತ್ರಾರ್ಹ ಬಿಡು ದೊರೆಯೇ
ಅಲ್ಲಿ ರಣರಂಗದ ಹೆಣಗಳೂ
ಕಟ್ಟಿಕೊಂಡಿದ್ದವು ರಂಗಸಜ್ಜಿಕೆ
ಕ್ಷಣಕಾಲ ಮರೆತು
ಬಹುಪರಾಕಿನೊಂದಿಗೆ
ಧರ್ಮಚಕ್ರ ನೀ ಹಿಡಿದು ನಿಂತಾಗ.
(ನಾಲೆಯಾಗಿ ಹರಿಯುತ್ತಿದೆ ಕಣ್ಣೀರು)
ಈ ಕವಿತೆ ದೇಶದ ರಾಜಕೀಯ ಜಗತ್ತನ್ನು, ಅದರ ವಿಸ್ತಾರವನ್ನು ಅದರೆಲ್ಲ ತಲ್ಲಣದೊಂದಿಗೆ ಹಿಡಿದಿಡಲು ಪ್ರಯತ್ನಿಸುತ್ತದೆ. ಸುಳ್ಳು, ಮೋಸ, ದ್ವೇಷ, ಅಸೂಯೆ, ವಂಚನೆ, ಹುಸಿ ಭ್ರಮೆ ಮತ್ತು ಭರವಸೆಗಳ ಬೆನ್ನು ಹತ್ತಿದ ಪ್ರಜಾಪ್ರಭುತ್ವ ಅವಸಾನದತ್ತ ಸಾಗುತ್ತಿದೆ. ಕೋಮುವಾದೀ ಶಕ್ತಿಗಳು ಅಟ್ಟಹಾಸಗೈದು ವಿಜೃಂಭಿಸುತ್ತಿವೆ. ಈಗ ಬಹುತೇಕ ಜನರ ಹೃದಯ ರಣರಂಗವಾಗುತ್ತಿದೆ. ಇದನ್ನು ‘ಸರ್ವಜನಾಂಗದ ಶಾಂತಿಯ ತೋಟ’ವನ್ನಾಗಿ ರೂಪಿಸಿಬೇಕಾದುದು ಸಂವೇದನಾಶೀಲರ ಜವಾಬ್ದಾರಿಯಾಗಿದೆ.
‘ಗಾಳಿಗೆ ತೊಟ್ಟಿಲ ಕಟ್ಟಿ’ ಈ ಸಂಕಲನದ ಅತ್ಯುತ್ತಮ ಕವಿತೆಗಳಲ್ಲೊಂದು. ನಾವೇ ರೂಪಿಸಿದ ನಿಯಮಗಳ ಮೂಲಕವೇ ನಮ್ಮನ್ನು ಕಟ್ಟಿಹಾಕುತ್ತ ವಿಜೃಂಭಿಸುತ್ತಿರುವ ನೀಚ ಪಡೆಯೆದುರು ದೇಶದ ಸಾಮಾನ್ಯ ಜನ ನೈತಿಕವಾಗಿ ಅಸಹಾಯಕರು; ಅವರ ಮಟ್ಟಕ್ಕೆ ಇಳಿಯಲಾರದೆ, ಅನುಭವಿಸಲಾರದೆ ಚಡಪಡಿಸುವ ಸ್ಥಿತಿ. ಸಜ್ಜನಿಕೆ ಮತ್ತು ಪ್ರಾಮಾಣಿಕತೆಗಳೆರಡೂ ಇಂದಿನ ರಾಜಕಾರಣದಲ್ಲಿ ಚಲಾವಣೆ ಕಳೆದುಕೊಂಡ ನಾಣ್ಯಗಳೇ ಆಗಿವೆ. ಇಲ್ಲಿ ಬಡವರ ಕಣ್ಣೀರಿಗೆ ಬೆಲೆಯಿಲ್ಲ. ಕಣ್ಣೀರಿನಲ್ಲಿ ಕಾಲದೇಶಗಳು ಮುಳುಗುತ್ತವೆ.
ನೋವಾದರೆ ಕಂಡ ಕಂಡಲ್ಲಿ ಅಳಬೇಡಿ
ಶೋಕಿಸಲು ಈ ತಾಯ್ನೆಲ ನಿಮ್ಮದಾಗಿ ಉಳಿದಿಲ್ಲ
ಕಣ್ಣೀರ ಒರೆಸುವ ಮಳೆಹನಿಗಳು
ಮಾರ್ಗ ಮಧ್ಯದಲ್ಲಿ ದಿಕ್ಕು ಬದಲಿಸಿವೆ
ಛಿದ್ರಗೊಂಡ ನಾರಾರು ಭರವಸೆಗಳು.
(ಗಾಳಿಗೆ ತೊಟ್ಟಿಲ ಕಟ್ಟಿ)
ಕವಿಯ ನಿಜವಾದ ತುಡಿತ, ಶಬ್ದಗಳ ಹಿತ ಮಿತವಾದ ಬಳಕೆ, ಶಬ್ದಗಳ ಆಚೆಗೂ ಮತ್ತೇನನ್ನೋ ಧ್ವನಿಸುವ ತವಕ ಓದುಗರನ್ನು ಸೆರೆ ಹಿಡಿಯುವುದು ಇಂಥ ರಚನೆಗಳೇ. ಕವಿ ಸಾಮಾಜಿಕವಾಗಿ ಎಷ್ಟು ಅಶಾಂತಿಗೀಡಾಗಿದ್ದಾರೆ, ಅಸಹಾಯಕರಾಗಿದ್ದಾರೆ ಎಂಬುದನ್ನು ಈ ಕವಿತೆಯ ಸಾಲುಗಳಲ್ಲಿ ಕಾಣಬಹುದು. ಕವಿತೆಯಲ್ಲಿ ಸಾಮಾಜಿಕತೆ ಅಂತರ್ಗತವಾಗಿದೆ. ಕವಿ ಲೋಕದ ದುಃಖವನ್ನು ಅರ್ಥೈಸಿಕೊಳ್ಳುವುದರೊಂದಿಗೆ ತನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳುವ ಪ್ರಯತ್ನವಿದು.
ಸಂಕಲನದ ‘ನೀ ಬಿಟ್ಟು ಹೋದ ದಾರಿಗಳ ಮೇಲೆ’, ‘ದೊರೆಗೊಂದು ಪತ್ರ’, ‘ಕತ್ತಲೆಯ ಕೂಟ’, ‘ಸೌಹಾರ್ದದ ಕೊನೆಯ ದಿನಗಳು’, ‘ನಿರ್ಮೋಹಿ’, ‘ಚರಿತ್ರೆಯ ಚಿರನಿದ್ರೆ’, ‘ಗಾಳಿಗೆ ತೊಟ್ಟಿಲ ಕಟ್ಟಿ’, ‘ಶವಗಳು ತೊಟ್ಟಿಲು ಕಟ್ಟಿವೆ’-ಮೊದಲಾದ ಕವಿತೆಗಳು ಮುಕ್ತ ಛಂದದಲ್ಲಿಯೇ ಇವೆ. ಆದರೆ ಒಂದು ಬಗೆಯ ಲಯಗಾರಿಕೆ ಇಡೀ ಕವನ ಸಂಕಲನಕ್ಕೆ ಬಂಧದ ಶಿಲ್ಪವನ್ನು ಕೊಟ್ಟಿದೆ. ಕೇವಲ ವಸ್ತುನಿಷ್ಠವೆಂಬಂತೆ ತೋರಿಕೆಗೆ ಅನ್ನಿಸಿದರೂ ಈ ಕವಿತೆಗಳು ಧ್ವನಿಸುವ ವಾಸ್ತವದ ಕುರಿತು ಕವಿಗೆ ಗಾಢವಾದ ವಿಷಾದವಿದೆ. ವಿಷಾದ, ವ್ಯಂಗ್ಯ, ಸಿಟ್ಟು, ಆಕ್ರೋಶ-ಎಲ್ಲ ಬಗೆಯ ಸ್ಥಾಯೀ ಸಂಚಾರಿ ಭಾವಗಳಿಂದ ತುಂಬಿಹೋಗಿರುವ ಕವನ ಸಂಕಲನದ ಹಲವಾರು ಕವಿತೆಗಳಲ್ಲಿ ರಾಜಕಾರಣಿಗಳು ತೀವ್ರ ಲೇವಡಿಗೆ ಒಳಗಾಗಿದ್ದಾರೆ. ವರ್ತಮಾನದ ಬದುಕು ಎಷ್ಟು ಸಲೀಸಲ್ಲವೋ ಇಂದಿನ ಕಾವ್ಯವೂ ಸುಲಭದ್ದಲ್ಲ, ಭವಿಷ್ಯದ ಜಗತ್ತು ದಿನೇ ದಿನೇ ಭೀಭತ್ಸವೇ ಆಗುತ್ತಿರುವಾಗ ನಮ್ಮ ಬರವಣಿಗೆ ಏನನ್ನು ಹೇಳಬೇಕು ಎಂಬುದೇ ದೊಡ್ಡ ಸಂಗತಿ. ಈ ಹಿನ್ನೆಲೆಯಲ್ಲಿ ಎಲ್ಲಾ ಕವಿತೆಗಳು ರೂಪುಗೊಂಡಿವೆ. ಕಾವ್ಯಬಂಧ ಸಡಿಲಾಗಿರುವ ಕೆಲವು ಕವಿತೆಗಳು ಈ ಸಂಕಲನದಲ್ಲಿವೆ. ಅದರ ಕುರಿತು ದೇವು ಮಾಕೊಂಡ ಇನ್ನಷ್ಟು ಗಮನಹರಿಸುವುದು ಅಗತ್ಯ. ಈ ದಿಸೆಯಲ್ಲಿ ನಡೆಯಬೇಕಾದ ದಾರಿಯ ಪರಿಶ್ರಮದ ಕಲ್ಪನೆ ಅವರಿಗಿದೆಯೆಂದು ನನಗೆ ಗೊತ್ತು.
ನನ್ನನ್ನು ಗಾಢವಾಗಿ ತಟ್ಟಿದ್ದು ದೇವು ಬಳಸುವ ಲಯಗಳ ಬೀಸು ಮತ್ತು ಪರಿಣಾಮಕಾರಿಯಾದ ಚಿತ್ರಕ ಶಕ್ತಿ. ವಸ್ತು, ಸಂವೇದನೆ, ಭಾಷೆ-ಮೂರು ನೆಲೆಗಳಲ್ಲಿ ದೇವು ನೆಲಕ್ಕೆ ಹತ್ತಿರವಾಗಲು ಹಂಬಲಿಸುವ ಕವಿ. ಉಪಮೆ, ನಿರೂಪಣಾ ವಿಧಾನ ಮತ್ತು ರೂಪಕಗಳಲ್ಲಿ ಅವರ ಸ್ವಂತಿಕೆಯಿದೆ. ಧ್ವನಿಪೂರ್ಣ ಪ್ರತಿಮೆಗಳೇ ನಿಜವಾದ ಕವಿಯ ಮೂಲ ಬಂಡವಾಳವಾಗಿರುತ್ತವೆ. ಕವಿತೆಯ ಮೊದಲ ಸಾಲಿನಿಂದ ಹಿಡಿದು ಕೊನೆಯ ಸಾಲಿನವರೆಗೆ ನಿರಂತರವಾಗಿ ಮತ್ತು ಸಹಜವಾಗಿ ಬಿಚ್ಚಿಕೊಳ್ಳುವ ಅನುಭವದ ಪರಿ, ದೇವು ಮಾಕೊಂಡ ಸರಿಯಾದ ದಿಕ್ಕಿನಲ್ಲಿ ಬೆಳೆಯಬಲ್ಲರು ಎಂಬುದಕ್ಕೆ ಪುರಾವೆಯಾಗಿದೆ.
-ಸಿ. ಎಸ್. ಭೀಮರಾಯ (ಸಿಎಸ್ಬಿ)
ಅ/ಔ. ಎನ್ .ಎಸ್. ಜಹಗೀರದಾರ್
ಲಕ್ಷ್ಮೀ ನಗರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹತ್ತಿರ,
ಶಹಾಪುರ, ಜಿ|| ಯಾದಗಿರಿ-585223
ಮೊ. ನಂ: 9741523806/9008438993.
ಇ-ಮೇಲ್: csbhimaraya123@gmail.com
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ