- ಗಜಲ್ - ಫೆಬ್ರುವರಿ 27, 2024
- ಗಜಲ್ - ಜನವರಿ 19, 2023
- ಬನ್ನಿ,ಮತ್ತೆ ಬನ್ನಿ-ರೂಮಿ ಕವಿತೆಗಳು - ಸೆಪ್ಟೆಂಬರ್ 17, 2022
ಪ್ರಿಯ ಹೆಗಡೆಯವರೆ, ಓದಿದೆ. ಎಲ್ಲವೂ ಸಹಜವಾಗಿವೆ, ಸೊಗಸಾಗಿವೆ. ಕಿರುಗವನಗಳಲ್ಲಿರುವ ಭಾವಗಳು, ಕಲ್ಪನೆಗಳು ಓದುಗರಲ್ಲಿ ಬೆರಗು ಮೂಡಿಸುತ್ತವೆ. ಮುಕ್ತಾಯಕ್ಕ, ವೈದೇಹಿಯವರ ಕಿರುಗವನಗಳು ನೆನಪಾದವು. ಕಿರುಗವನ ಕೇವಲ ಬೌದ್ಧಿಕ ಚಮತ್ಕಾರವಲ್ಲ ಅನ್ನುವುದಕ್ಕೆ ಇವು ಉದಾಹರಣೆಗಳು. ಅಭಿನಂದನೆಗಳು.👏👏
ಶ್ರೀ ಎಚ್.ಡುಂಡಿರಾಜ್, ಖ್ಯಾತ ಹನಿಗವನ ಸಾಹಿತಿಗಳು… ಡಾ.ಗೋವಿಂದ ಹೆಗಡೆ ಯವರ ಈ ಕೆಳಗಿನ ಹನಿ ಗವಿತೆಗಳ ಬಗ್ಗೆ ಬರೆದ ಟಿಪ್ಪಣಿ.
ಹನಿಗಳು
ನಮ್ಮ ನಮ್ಮ
ಸಂದರ್ಭಗಳಲ್ಲಿ
ಸೆರೆ ನಾವು
ಮನಸಿನಂತೆ
ಮೈಗೂ
ರೆಕ್ಕೆಗಳಿದ್ದಿದ್ದರೆ!
★
ನವಿಲುಗರಿ, ಕೊಳಲು
ಕುಣಿವ ಕೈಕಾಲು,
ಜಗವ ಗೆಲ್ಲುವ ಮುಗುಳುನಗೆ
ಅರಿತವರಾರು ಇವನ ಬಗೆ?!
★
“ಗಿಡವೇ,
ದಿನವೂ ದೋಚುತ್ತೇನೆ, ನಿನ್ನ
ಮತ್ತೆ ಎಂದಿನಂತೆ
ನಸುಕಿನಲ್ಲಿ ಹೂ ನಗೆ
-ಯರಳಿಸುವೆ,ಹೇಗೆ?”
ನಕ್ಕು ಹೇಳಿದೆ ಗಿಡ-
“ನನಗೆ ತಿಳಿಯುವುದು ಇಷ್ಟೇ
ಅರಳಿಸುವುದು ಮತ್ತು
ಮರಳಿಸುವುದು”
★
ತಮ್ಮ ಮೂಗಿನ ನೇರಕ್ಕೇ ನಡೆಯುತ್ತಾರೆ ಎಲ್ಲರೂ
ಮೂಗೇ ಡೊಂಕು ಎಂಬುದನ್ನು ಮರೆಯುತ್ತಾರೆ ಎಲ್ಲರೂ
(ಸುಮಾರು 80 ರಿಂದ 90 ಪ್ರತಿಶತ ಜನರಲ್ಲಿ ಮೂಗು ಡೊಂಕಾಗಿರುತ್ತದೆ.)
★
ಈ ಹೂವು ಬಣ್ಣಗಳ
ತಳೆದು ಅರಳುತ್ತದೆ
ಕಂಪು ಸೂಸುತ್ತದೆ
ಎದೆ ಮಧುವ
ತುಟಿ ಬಟ್ಟಲಿನಲ್ಲಿಟ್ಟು
ಕಾಯುತ್ತದೆ-
ದುಂಬಿ ಚಿಟ್ಟೆ ಜೇನ್ನೊಣಕ್ಕೆ
ಯಾವುದೋ ಕೀಟಕ್ಕೆ
ಸುಳಿವ ಗಾಳಿಗೆ…
ಪರಾಗರೇಣು ಒಂದನ್ನು
ಪಡೆಯಲಿಕ್ಕಾಗಿ.
ಒಂದು ಜೀವ ಫಲಿಸಲು
ಹೇಗೆಲ್ಲ ತಪಿಸಬೇಕು-
ಎಷ್ಟೆಲ್ಲ ‘ಬೇಕು’ಗಳು
ಬೇಕು!
★
ಸರಿದು ಹೋದವರೆಷ್ಟು
ತಮ್ಮೆದೆಯ ಕಾವಳವ
ಸುರಿದು ಹೋದವರೆಷ್ಟು
ಮೌನದಲಿ
ಹಣತೆ ಬೆಳಗಿದ್ದು
ನೀನು ಮಾತ್ರ…
★
ನಿನ್ನ ತುಟಿರಂಗನ್ನು
ಕೊಂಚ ಕೊಡೇ
ಹುಡುಗಿ,
ನನ್ನ
ಕನಸುಗಳ
ಬಣ್ಣ ಮಾಸಿದೆ…
★
ಈ ರೂಪಸಿಯ
ಕಡೆಗಣ್ಣ ನೋಟದ
ಗಾಳಕ್ಕೆ ಸಿಲುಕಿದ
ಮೀನು
-ನಾನು
★
ಇಲ್ಲಿಯೇ ಎಲ್ಲೋ
ಇದ್ದಾನೆ-
ಮೌನದಲ್ಲಿ ನನ್ನ
ಆರಾಧಿಸುವವನು:
ಎಂಬ ಸಂಗತಿಯೇ
ಎಷ್ಟು ಮಧುರ,
ಎಷ್ಟು ಆಹ್ಲಾದಕರ!
★
ಹಾಲುಗಲ್ಲಿನ
ಪ್ರತಿಮೆ ನೀನು
ಮುಟ್ಟುತ್ತಲೇ
ಇರುವ
ಹಸಿವಿನ-
ನಾನು
★
ಆ ಗೆಜ್ಜೆಯಿಂದ
ಉದುರಿದ
ಕಿರುಗಂಟೆಯೊಂದನ್ನು
ಎತ್ತಿ ಕಿಸೆಗಿಟ್ಟೆ
ಈಗದರ
ಕಿಂಕಿಣಿ-
ಎದೆಯ ತುಂಬ
★
ಈ ಚಂದಿರ ನನ್ನೆದೆಯ
ಬೆಳಗಿದ್ದಾನೆ,
ಅಷ್ಟು ಸಾಕು.
ಜೊನ್ನ ಏನೆಲ್ಲವ
ಬೆಳಗಿದೆ-
ನನಗೇಕೆ ಬೇಕು?
★
ಅವಡುಗಚ್ಚಿದ ಕುರುಡು
ನಡಿಗೆಯಷ್ಟೇ ಬದುಕೇ?
ಮತ್ತೆ-
ಈ ಗುಲಾಬಿಗೆ
ಏನು ಹೇಳಲಿ ?
★
ನಿನ್ನ ಕಣ್ಣೋಟದ
ಕವಣೆ ಕಲ್ಲು
ಎದೆಗೊಳವ ಕಲಕಿ
ಪ್ರತಿಸಲ-
ಕವನ!
★
ಹಾವು
ಪೊರೆ ಕಳಚಿಯೂ
ಹಾವೇ.
ಕಂಬಳಿ ಹುಳು
ಪೊರೆ ಕಳಚಿ
ಚಿಟ್ಟೆ!
★
ಅಂಗೈಯಲ್ಲಿ ಕೂತು
ಆಡಿ ಮುದವಿತ್ತ
ಅರಗಿಣಿ
ಸಂದಣಿಯಲ್ಲಿ
ಅಪರಿಚಿತವೆಂಬಂತೆ
ಸರಿದು
ಸವೆದುಹೋಗುವ
ವಿಪರ್ಯಾಸ…
★
ಸೂರ್ಯೋದಯ
ಈಗಲೇ ಆಗಿದ್ದು ?!
ನನಗೆ
ನಡುರಾತ್ರಿಯಲ್ಲೇ
ಕಂಡ
-ನಲ್ಲ !
★
ಹರಡಿದ
ಕಡಲು
ಅದೇನಲ್ಲ ಬಿಡು
ಎದ್ದೆದ್ದು ಬೀಳುವ
ನಿನ್ನ ಕುರುಳು…
★
ಈ ಮಾಗಿ
ಚಳಿ ಮಂಜು
ಬಿರಿವ ಮೈ-
ಬಯಕೆ
ಬಂದುಬಿಡು ಹುಡುಗಿ,
ಬಿಸಿಯಪ್ಪುಗೆಗಳ
ನವೀಕರಿಸಲಿಕ್ಕೆ!
★
ನಿನ್ನ ತೋಳುಗಳಲ್ಲಿ
ಉಕ್ಕುತ್ತಿರುವ ಜೀವಂತಿಕೆಯ
ತುಸು ಎರವಲು ಕೊಡೇ
ಹುಡುಗಿ ,
ನನಗೆ ಬದುಕನ್ನು
ನವೀಕರಿಸಬೇಕಿದೆ !
★
ನಿನ್ನ ಮೈಗಂಧ-
ವನ್ನೇ ಅರಿಯದೇ
ಸಾವಿರ ಸುಗಂಧಗಳ
ಮಾತನಾಡುವ
ಈ ಜಗತ್ತು –
ಎಂಥ ಚೋದ್ಯ !
★
ಕತ್ತಲಲ್ಲಿ ಇರುವುದು
ಕತ್ತಲು ಮಾತ್ರವಲ್ಲ-
ಅದೋ ಮಿಂಚುಹುಳುಗಳು
ಮತ್ತು
ಮಿನುಗುವ ಚುಕ್ಕಿಗಳು !
ಇಲ್ಲಿ ಯಾರೂ ಒಂಟಿಯಲ್ಲ
★ಗೋವಿಂದ ಹೆಗಡೆ
ಹೆಚ್ಚಿನ ಬರಹಗಳಿಗಾಗಿ
ಪತ್ತಂಗಿ ಎಸ್ ಮುರಳಿ ಆಯ್ದ ೧೦ ಚುಟುಕುಗಳು
ಪ್ರೀತಿ
ಬಾ ವರ್ಷಧಾರೆ…