ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದೇವುಡು ಅವರ ಮಹಾದರ್ಶನ

ಆರ್ಯ​

ಕೆಲವೊಮ್ಮೆ ಯಾರಾದರೂ ನಮ್ಮ ಕನ್ನಡದ ಸ್ನೇಹಿತರು ನಾವು ಉಪನಿಷತ್ತುಗಳನ್ನು ಓದಿಲ್ಲ, ಅವು ಸಂಸ್ಕೃತದಲ್ಲಿವೆ, ಅರ್ಥೈಸಿಕೊಳ್ಳಲು ತುಂಬಾ ಜಟಿಲ ಎಂದಾಗ, ನಾನು ಅವರಿಗೆ ಕೇಳುವುದಿಷ್ಟೆ – ನೀವು ಡಿ. ವಿ. ಗುಂಡಪ್ಪನವರ, ಸತ್ಯಕಾಮರ, ಬೇಂದ್ರೆಯವರ, ದೇವುಡು ಅವರ (ಇನ್ನೂ ಕೆಲವರು) ಗ್ರಂಥಗಳನ್ನು ಓದಿಲ್ಲವೇ, ಶರಣರ ವಚನಗಳನ್ನು ಓದಿಲ್ಲವೇ ? ಅವರ ಪ್ರತ್ಯುತ್ತರ ಹೌದು ಎಂದಾದರೆ ಅವರು ಉಪನಿಷತ್ತುಗಳನ್ನು ಓದಿದ್ದಾರೆಂದೆಯೇ ಲೆಕ್ಕ. ಇದಕ್ಕೆ ಪ್ರಮಾಣವಾಗಿ ನಾನು ಅವರೆಲ್ಲರ ಕೃತಿಗಳ ಪ್ರತಿಯೊಂದು ಪುಟದಿಂದ ಕೆಲವಾರು ಕನ್ನಡೀಕರಿಸಿದ ಉಪನಿಷದ್ವಾಕ್ಯಗಳನ್ನು ಉದಾಹರಿಸಬಲ್ಲೆ.

ಸಾಂಪ್ರತ ವಿಷಯ: ದೇವುಡು ಅವರ ‘ಮಹಾದರ್ಶನ’ ಕೃತಿಯ ಕುರಿತು.

ಚಿತ್ರ ಕೃಪೆ: ಲೇಖಕರು

ಗ್ರಂಥದ ಮೊದಲ ಪುಟ ಓದುವಾಗ ತೋರಿದ ನನ್ನ ಆಶ್ಚರ್ಯೋದ್ಘಾರದ ತರಂಗ ಗ್ರಂಥದ ಕೊನೆಯ ಪುಟದವರೆಗೂ ತರಂಗಿಸುತ್ತಿತ್ತು, ಇನ್ನೂ ಸಂಪೂರ್ಣ ನಿಸ್ತರಂಗವಾಗಿಲ್ಲ, ಅಲೆಯ ಆ ಕಲೆ ಮನದಲ್ಲೆಲ್ಲ ಉಲಿಯುತ್ತಲೇ ಇದೆ. ದೇವುಡು ಅವರೇ ಹೇಳುವಂತೆ – ಈ ಗ್ರಂಥ ಕಥೆಯೆಂದವರಿಗೆ ಕಥೆ, ಶಾಸ್ತ್ರವೆಂದವರಿಗೆ ಶಾಸ್ತ್ರ, ವಿದ್ಯೆಯೆಂದವರಿಗೆ ವಿದ್ಯೆ.

ದೇವುಡು ಅವರ ಸಾಹಿತ್ಯದ ಹರಹು ಅಪಾರವಾದುದು, ಮಕ್ಕಳ ಸಾಹಿತ್ಯದಿಂದ ಮೊದಲು ಮಾಡಿ ವೇದಾಂತದರ್ಶನದ ವರೆಗೂ ವ್ಯಾಪಿಸಿದೆ. ಎಲ್ಲೆಡೆ ವ್ಯಾಪಿಸಿದ ಮಾತರಿಷ್ವದ ಪರಿ ಅವರ ಸಾಹಿತ್ಯದ ಸಿರಿ. ದೇವುಡು ಅವರು ಸೃಜಿಸಿದ ಹಲವು ಕೃತಿಗಳಲ್ಲಿ ಮಹತ್ರಯಗಳಾದ ಮಹಾಕ್ಷತ್ರಿಯ, ಮಹಾಬ್ರಾಹ್ಮಣ, ಮಹಾದರ್ಶನಗಳು ಪ್ರಸಿದ್ಧವಾಗಿ ಮನನಯೋಗ್ಯವಾದವುಗಳು.

ಪುಸ್ತಕವೊಂದನ್ನು ಓದಿದಾಗ ಏನೋ ಒಂದು ಹೊಸ ಹೊಳಪು ಪಡೆಯುವಂತಾದರೆ ಅದು ಆ ಕರ್ತೃವಿನ, ಕೃತಿಯ ಪರಮಸಾರ್ಥಕತೆ. ಅಂತಹ ಒಂದು ಭಾವ ಈ ‘ಮಹಾದರ್ಶನ’ ಓದಿನ ಉಪಸಂಹಾರದೊಂದಿಗೆ ಉದಿಸುವ ಅಭಿಜ್ಞಭಾವ. ಈ ಕೃತಿಯ ನಿಜ ಪರಿಚಯ ದುಃಸಾಧ್ಯದ ಕೆಲಸ, ಒಂದು ವೇದ, ಒಂದು ಬ್ರಾಹ್ಮಣ ಹಾಗೂ ಒಂದು ಉಪನಿಷತ್ತನ್ನು ಜಗತ್ತಿಗೆ ಕಾಣ್ಕೆ ಕೊಟ್ಟಿರುವ ಮಹರ್ಷಿಯ ಮಹಜ್ಜೀವನದ ಪರಿಚಯ ಇದರ ಒಳವಿಷಯ. ಗ್ರಂಥದ ವಿಷಯ ಪರಿಚಯ ಮಾಡಹೊರಟರೆ ಅದೇ ಇನ್ನೊಂದು ಚಿಕ್ಕ ಗ್ರಂಥವಾದೀತು.

‘ಮಹಾದರ್ಶನ’ ಓದುವಾಗ ಹಲವು ಉಪನಿಷತ್ತುಗಳನ್ನು ಒಟ್ಟಿಗೆ ಓದಿದ ಅನುಭವವಾಗುತ್ತದೆ. ಸಂಹಿತಾ, ಉಪನಿಷತ್ತುಗಳಲ್ಲಿ ಸೂತ್ರಗಳ ರೂಪದಲ್ಲಿ, ಆಖ್ಯಾಯಿಕೆಗಳ ರೂಪದಲ್ಲಿ ಅಡಕವಾಗಿರುವ ಗಹನವಾದ ವಿಷಯಗಳನ್ನು ಸುಲಲಿತವಾಗಿ, ಸಂಶ್ಲೇಷಿತವಾಗಿ, ಸಂಸಿದ್ಧಿಯಾಗಿ ನಿರೂಪಿಸಿರುವ ದೇವುಡು ಅವರ ಸಾಹಿತ್ಯದ ಸುಕರ್ಮಕ್ಕೆ ತಲೆಬಾಗದವರಿಲ್ಲ ಎನಿಸುತ್ತದೆ.

ಅಂತರ್ಮುಖನಾಗಿರುವ ಸಾಧಕನೊಬ್ಬ ‘ಪ್ರ’ಯತ್ನದಿಂದ ಬಹಿರ್ಮುಖವಾಗಿ ಸಾಹಿತ್ಯ ಕಾರ್ಯದಲ್ಲಿ ತೊಡಗಿಸಿಕೊಂಡು ತನ್ನ ಘನಜೀವನದ ಅನುಭವಗಳನ್ನು ಸರಳ, ಸುಂದರ ಭಾಷೆಯಲ್ಲಿ ದಾಖಲಿಸಿ ಪ್ರಪಂಚಕ್ಕೆ ಉಪಕಾರ ಮಾಡಿರುವ ದೇವುಡು ಅವರಿಗೆ ಕನ್ನಡ ಸಾಹಿತ್ಯ ಲೋಕ ಎಷ್ಟು ಋಣಿಯಾಗಿದ್ದರೂ ಸಾಲದು.

ಒಂದು ವೇದ, ಒಂದು ಬ್ರಾಹ್ಮಣ ಹಾಗೂ ಒಂದು ಉಪನಿಷತ್ತು ಕೊಟ್ಟು, ಇನ್ನೊಂದು ಉಪನಿಷತ್ತಿಗೆ ಕಾರಣನಾದ ಮಹಾಪುರುಷ ಯಾಜ್ಞವಲ್ಕ್ಯರ ಮಹತ್ಸಾಧನೆಯ ನಿರೂಪಣೆ ಈ ‘ಮಹಾದರ್ಶನ’ ಕೃತಿಯ ಸ್ವರೂಪ. ಒಬ್ಬ ಮಹರ್ಷಿಯ ಜೀವನದ ಬಗೆಗೆ ಅಷ್ಟೇನು ವಿವರಗಳು ಲಭ್ಯವಿಲ್ಲದಾಗಲೂ ಶತಪಥ ಬ್ರಾಹ್ಮಣ, ಮಹಾಭಾರತ, ಭಾಗವತಗಳಲ್ಲಿ ಬಂದಿರುವ ಕೆಲವೇ ಕೆಲವು ಯಾಜ್ಞವಲ್ಕ್ಯರ ಕಥೆಗಳನ್ನು ಸಂದರ್ಭೋಚಿತವಾಗಿ ಬಳಸಿಕೊಂಡು ಅದಕ್ಕೆ ಮುನ್ನೂರಕ್ಕೂ ಅಧಿಕ ಪುಟಗಳ ಕೃತಿಯ ರೂಪ ಕೊಡುವುದು ನಿಸ್ಸಂಶಯವಾಗಿಯೂ ಪ್ರಶಂಸನಾರ್ಹ ವಿಷಯ.

ಈ ಕೃತಿಯ ಸೌಂದರ್ಯ ಸ್ವಾರಸ್ಯಗಳನ್ನು ಓದಿಯೇ ಸವಿಯಬೇಕು ಹಾಗೂ ಮಹರ್ಷಿ ಯಾಜ್ಞವಲ್ಕ್ಯ, ದೇವುಡು ಅವರ ಬಗ್ಗೆ ಹೇಳಲು ನಾ ತೀರ ಚಿಕ್ಕವ. ಆದ್ದರಿಂದ ನಾನು ಈ ಪುಸ್ತಕವನ್ನು ಯಾವ ಕಾರಣಕ್ಕಾಗಿ, ಯಾವ ಖ್ಯಾತಿಗಾಗಿ ಓದಬೇಕೆಂದು ಅಷ್ಟೇ ಹೇಳಬಯಸುವೆ.

ಈ ಕೃತಿ ನಮಗೆ ವೇದ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತದೆ, ಅಂದರೆ ಸಾಸಿರ ವರುಷಗಳ ಹಿಂದಿನ ನಮ್ಮ ಭಾರತದ ಸಂಸ್ಕೃತಿಯ ಪರಿಚಯ, ಜನಮಾನಸದ ಜೀವನ ವ್ಯವಸ್ಥೆ, ಗುರುಕುಲಗಳಲ್ಲಾಗುವ ಉದ್ಯೋಗಗಳು, ರಾಜತಾಂತ್ರಿಕ ವಿಷಯಗಳು, ಯೋಗದ ಬಗೆಗಿನ ಗಹನವಾದ ತಾತ್ವಿಕ ವಿಚಾರಗಳು. ಋಷಿಗಳ ಅಸಾಮಾನ್ಯ ವ್ಯಕ್ತಿತ್ವ ಪರಿಚಯಗಳನ್ನು ಮಾಡಿಕೊಡುತ್ತದೆ, ಹಾಗೆಯೇ ದೇವುಡು ಅವರು ಸಮಯೋಚಿತವಾಗಿ ಬಳಸುವ ನಿರೂಪ ರೂಪಕಗಳು ವಾಚಕರನ್ನು ಬೇರೆಯದೇ ಲೋಕಕ್ಕೆ ಎಳೆದೊಯ್ಯುತ್ತವೆ.

ದೇವುಡು ಅವರ ಪದಪಾಂಡಿತ್ಯವಂತೂ ಅಲೌಕಿಕವಾದುದೆಂಬಂತೆ ಭಾಸವಾಗುತ್ತದೆ. ಅವರ ತತ್ತ್ವಚಿಂತನೆ, ಅಧ್ಯಯನ, ವಿಷಯದರ್ಶನ, ಕವಿಹೃದಯಕ್ಕೆ ಹಣೆಮಣಿಸುತ ಒಂದು ಅತ್ಯದ್ಭುತ ಗದ್ಯಕಾವ್ಯವನ್ನು ಕನ್ನಡಿಗರಿಗೆ ಕರುಣಿಸುದುದಕ್ಕಾಗಿ ಕರ್ತೃವಿಗೆ ಕೋಟಿ ಅಭಿವಾದನಗಳು.