- ಅರ್ಧ ವರ್ಷದಲ್ಲಿ ಶಾಲೆಗೆ ಸೇರಿದ ಹುಡುಗ - ಅಕ್ಟೋಬರ್ 30, 2024
- ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು - ಅಕ್ಟೋಬರ್ 22, 2022
- ನೈನವೆ - ಮೇ 26, 2022
ಅಂಕ ೧ : https://nasuku.com/ಜೂಲಿಯಸ್-ಸೀಸರ್-ಅಂಕ-೧/
ಅಂಕ ೨ : https://nasuku.com/ಜೂಲಿಯಸ್-ಸೀಸರ್/
ಅಂಕ 3
ದೃಶ್ಯ 1
ರೋಮ್. ಕ್ಯಾಪಿಟೋಲ್‍ನ ಮುಂದೆ. ಮೇಲೆ ಸಂಸದರ ಸಭೆ. ಜನರ ಗುಂಪು.
ಸೀಸರ್, ಬ್ರೂಟಸ್, ಕೇಸಿಯಸ್, ಕಾಸ್ಕಾ, ಡೆಸಿಯಸ್, ಮೆಟೆಲಸ್, ಟ್ರೆಬೋನಿಯಸ್, ಸಿನ್ನಾ, ಆಂಟನಿ, ಲೆಪಿಡಸ್, ಆರ್ಟಿಮಿಡೋರಸ್,ಪೋಪೀಲಿಯಸ್, ಪುಬ್ಲಿಯಸ್, ಮತ್ತು ಕಾಲಜ್ಞಾನಿಯ ಪ್ರವೇಶ.
ಸೀಸರ್. ಮಾರ್ಚ್ ಹದಿನೈದು ಬಂತು.
ಕಾಲಜ್ಞಾನಿ. ಹೌದು ಸೀಸರ್, ಆದರೆ ಹೋಗಿಲ್ಲ.
ಆರ್ಟಿಮಿಡೋರಸ್. ಭೋ ಪರಾಕ್ ಸೀಸರ್: ಈ ಪಟ್ಟಿ ಓದಿ.
ಡೆಸಿಯಸ್. ಟ್ರೆಬೋನಿಯಸ್ ಬಯಸುತ್ತಾನೆ, ಆತನ ಈ ವಿನೀತ ವಿನಂತಿಪತ್ರದ ಮೇಲೆ ನೀವು ನಿಮ್ಮ ಬಿಡುವಿನ ವೇಳೆಯಲ್ಲಿ
ಇನ್ನೊಮ್ಮೆ ಕಣ್ಣುಹಾಯಿಸಬೇಕೆಂದು.
ಆರ್ಟಿಮಿಡೋರಸ್. ಓ ಸೀಸರ್, ನನ್ನದನ್ನು ಮೊದಲು ಓದಿ:ಯಾಕೆಂದರೆ ನನ್ನೀ ನಿವೇದನೆ ಸೀಸರನನ್ನು ಹೆಚ್ಚು ಹತ್ತಿರದಿಂದ
ತಟ್ಟುತ್ತದೆ. ಇದನ್ನು ಓದಿ ಮಹಾ ಸೀಸರ್.
ಸೀಸರ್. ನಮ್ಮನ್ನು ಯಾವುದು ತಟ್ಟುತ್ತದೋ ಅದಕ್ಕೆ ಕೊನೆಯ ಅವಕಾಶ.
ಆರ್ಟಿಮಿಡೋರಸ್. ತಡಮಾಡಬೇಡಿ ಸೀಸರ್, ಈ ಕೂಡಲೇ ಇದನ್ನು ಓದಿ.
ಸೀಸರ್. ಏನು ಈ ವ್ಯಕ್ತಿಗೆ ಹುಚ್ಚೇ?
ಪುಬ್ಲಿಯಸ್. ಲೋ ಜಾಗ ಬಿಡೋ.
ಕೇಸಿಯಸ್. ರಸ್ತೇಲಿ ನಿನ್ನ ಅಹವಾಲುಗಳನ್ನು ತಂದು ಒತ್ತಾಯಿಸುತ್ತೀಯೇನೋ? ಪುರಭವನಕ್ಕೆ ಬಾ.
[ಸೀಸರ್ ಪುರಭವನದ ಹತ್ತಿರ ಹೋಗುತ್ತಾನೆ, ಉಳಿದವರು ಅನುಸರಿಸುತ್ತ]
ಪೋಪೀಲಿಯಸ್. ನಿಮ್ಮ ಕಾರ್ಯ ಈವತ್ತು ಸುಗಮವಾಗಲಿ.
ಕೇಸಿಯಸ್. ಎಂಥಾ ಕಾರ್ಯ ಪೋಪೀಲಿಯಸ್?
ಪೋಪೀಲಿಯಸ್. ನಿಮಗೆ ಶುಭ ಹಾರೈಸುವೆ.[ಸೀಸರನತ್ತ ತೆರಳುತ್ತಾನೆ]
ಬ್ರೂಟಸ್. ಪೋಪೀಲಿಯಸ್ ಲೆನಾ ಏನಂದ?
ಕೇಸಿಯಸ್. ಈವತ್ತು ನಮ್ಮ ಕಾರ್ಯ ಸುಗಮವಾಗಲಿ ಎಂದು ಹಾರೈಸಿದ. ನನಗನಿಸುತ್ತದೆ ನಮ್ಮ ಉದ್ದೇಶ ಬಯಲಾಗಿದೆ ಎಂದು.
ಬ್ರೂಟಸ್. ನೋಡು, ಅವನು ಸೀಸರನಲ್ಲಿಗೆ ಹೇಗೆ ಸರಿಯುತ್ತಿದ್ದಾನೆ, ಅವನನ್ನು ಗಮನಿಸು.
ಕೇಸಿಯಸ್. ಕಾಸ್ಕಾ, ಥಟ್ಟಂತ ಆಗಬೇಕು, ಯಾಕೆಂದರೆ ಕಂಟಕದ ಭಯವಿದೆ ನನಗೆ. ಬ್ರೂಟಸ್, ಏನು ಮಾಡೋಣ?
ಇದು ಗೊತ್ತಾದರೆ ಕೇಸಿಯಸ್ ಇಲ್ಲಾ ಸೀಸರ್ ಇಬ್ಬರಲ್ಲಿ ಒಬ್ಬ ಹಿಂದಿರುಗುವುದಿಲ್ಲ, ಯಾಕೆಂದರೆ ನಾನು ನನ್ನನ್ನೇ ಕೊಂದುಕೊಳ್ಳುವೆ.
ಬ್ರೂಟಸ್. ಕೇಸಿಯಸ್, ದೃಢವಾಗಿರು.ಪೋಪೀಲಿಯಸ್ ಲೆನಾ ನಮ್ಮ ಉದ್ದೇಶಗಳ ಬಗ್ಗೆ ಮಾತಾಡುತ್ತಿಲ್ಲ,ಯಾಕೆಂದರೆ ಅವನು ನಸುನಗುತ್ತಿದ್ದಾನೆ ಮತ್ತು ಸೀಸರನಲ್ಲಿ ಏನೂ ಬದಲಾವಣೆಯಿಲ್ಲ.
ಕೇಸಿಯಸ್. ಟ್ರೆಬೋನಿಯಸ್‍ಗೆ ಅವನ ಸಮಯ ಗೊತ್ತಿದೆ: ಯಾಕೆಂದರೆ ನೋಡಿದಿರಾ, ಬ್ರೂಟಸ್, ಅವನು ಮಾರ್ಕ್ ಆಂಟನಿಯನ್ನು ದಾರಿಯಿಂದ ತೊಲಗಿಸುತ್ತಿದ್ದಾನೆ.
(ಆಂಟನಿ ಮತ್ತು ಟ್ರೆಬೋನಿಯಸ್ ನಿಷ್ಕ್ರಮಣ)
ಡೆಸಿಯಸ್. ಮೆಟೆಲಸ್ ಸಿಂಬರ್ ಎಲ್ಲಿ? ಅವನು ಹೋಗಿ ಈಗಲೇ ಸೀಸರಿಗೆ ನಿವೇದನೆ ನೀಡಲಿ.
ಬ್ರೂಟಸ್. ಅವನು ಸಿದ್ಧನಿದ್ದಾನೆ, ಹತ್ತಿರ ಹೋಗಿ, ಅವನಿಗೆ ಅನುಮೋದನೆ ನೀಡಿ.
ಸಿನ್ನಾ. ಕಾಸ್ಕಾ, ನೀನೇ ಮೊದಲು ಕೈಯೇತ್ತುವವ.
ಸೀಸರ್. ಎಲ್ಲರೂ ಸಿದ್ಧರೇ? ಈಗ ಸೀಸರ್ ಮತ್ತವನ ಸಂಸತ್ತು ಪರಿಹರಿಸಬೇಕಾದ ವಿಷಯವೇನಾದರೂ ಇದೆಯೇ?
ಮೆಟೆಲಸ್. ಮಹೋನ್ನತ, ಮಹಾ ಬಲಶಾಲಿ, ಮತ್ತು ಮಹಾ ಚೈತನ್ಯಶಾಲಿ ಸೀಸರ್, ಮೆಟೆಲಸ್ ತನ್ನ ಬಡ ಹೃದಯವನ್ನು ಎಸೆದಿರುವನು ನಿಮ್ಮ ಆಸನದ ಮುಂದೆ.
ಸೀಸರ್. ನಾನು ನಿನ್ನನ್ನು ತಡೆಯಬೇಕಾಗಿದೆ ಸಿಂಬರ್: ಈ ಪ್ರಣಾಮಗಳು ಮತ್ತು ಈ ವಿನೀತ ಭಂಗಿಗಳು ಸಾಮಾನ್ಯ ಜನರ ನೆತ್ತರನ್ನು ಬೆಚ್ಚಗಾಗಿಸಬಲ್ಲವು, ಮತ್ತು ಕಾಯಿದೆ ಕಾನೂನುಗಳನ್ನು ಮಕ್ಕಳಾಟಿಕೆ ಮಾಡಬಲ್ಲವು. ಮೂರ್ಖರ ಮನಕರಗಿಸುವ ಸಿಹಿಮಾತುಗಳಿಂದಲೂ, ಬೆನ್ನು ಬಾಗಿದ ವಿನೀತ ವಂದನೆಗಳಿಂದಲೂ, ಕೆಟ್ಟ ಕುನ್ನಿಯ ತರ ಕುಂಯ್ಗುಟ್ಟುವುದರಿಂದಲೂ ತನ್ನ ನಿಜ ಗುಣ ಬಿಟ್ಟು ನೀರಾಗುವಂಥ ಅಸಹಜ ರಕ್ತವನ್ನು ಸೀಸರ್ ಧರಿಸಿದ್ದಾನೆಂದು ತಿಳಿಯುವ ಹುಚ್ಚುತನ ಮಾಡಬೇಡ: ನಿನ್ನ ದರನನ್ನು
ಕಾನೂನು ಗಡೀಪಾರು ಮಾಡಿದೆ. ಆತನಿಗೋಸ್ಕರ ನೀನು ಬಾಗಿದರೆ, ಪ್ರಾರ್ಥಿಸಿದರೆ ಅಥವಾ ನನ್ನ ಕಾಲು ನೆಕ್ಕಿದರೆ
ನಾನು ನಿನ್ನನ್ನು ನಾಯಿಕುನ್ನಿಯಂತೆ ನನ್ನ ದಾರಿಯಿಂದ ತೊಲಗಿಸಬೇಕಾಗುತ್ತದೆ, ತಿಳಿದುಕೋ, ಸೀಸರ್ ತಪ್ಪುಮಾಡುವುದಿಲ್ಲ, ಹಾಗೂ ವಿನಾ ಕಾರಣ ತೃಪ್ತನೂ ಆಗುವುದಿಲ್ಲ.
ಮೆಟೆಲಸ್. ನನ್ನ ಧ್ವನಿಗಿಂತ ಯೋಗ್ಯ ಧ್ವನಿಯಿಲ್ಲವೇ ಮಹಾನ್ ಸೀಸರನ ಕಿವಿಗೆ ಸಿಹಿಯಾಗಿ ಕೇಳಿಸುವುದಕ್ಕೆ, ನನ್ನ ದೇಶಭ್ರಷ್ಟ ಸೋದರನನ್ನು ಮರಳಿ ಕರೆಸುವುದಕ್ಕೆ?
ಬ್ರೂಟಸ್. ನಾನು ನಿಮ್ಮ ಹಸ್ತ ಚುಂಬಿಸುತ್ತೇನೆ, ಆದರೆ ಹೊಗಳುವುದಕ್ಕಲ್ಲ ಸೀಸರ್: ಪುಬ್ಲಿಯಸ್ ಸಿಂಬರನಿಗೆ
ತಕ್ಷಣವೆ ಸ್ವಾತಂತ್ರ್ಯ ಮರಳಿಸುವಂತೆ ಬಯಸಿ.
ಸೀಸರ್. ಏನು, ಬ್ರೂಟಸ್?
ಕೇಸಿಯಸ್. ಕ್ಷಮಿಸಿ ಸೀಸರ್, ಸೀಸರ್ ಕ್ಷಮಿಸಿ: ನಿಮ್ಮ ಪದತಲದಷ್ಟು ಕೆಳಕ್ಕೆ ಕೇಸಿಯಸ್ ಎರಗುತ್ತಾನೆ, ಪುಬ್ಲಿಯಸ್ ಸಿಂಬರನ ಹಕ್ಕು ಮರಳಿಸುವುದಕ್ಕೆ. ಸೀಸರ್. ನಾನು ಚಲಿಸುತ್ತಿದ್ದೆ, ನಿಮ್ಮಂತೆ ನಾನು ಇರುತ್ತಿದ್ದರೆ, ಚಲಿಸುವಂತೆ ನಾನು ಪ್ರಾರ್ಥಿಸಬಲ್ಲೆನಾಗಿದ್ದರೆ, ಪ್ರಾರ್ಥನೆಗಳು ನನ್ನನ್ನು ಚಲಿಸುತ್ತಿದ್ದುವು: ಆದರೆ ನಾನು ಧ್ರುವ ನಕ್ಷತ್ರದಂತೆ ದೃಢನಿದ್ದೇನೆ, ಅದರಂತೆ ಅಚಲ ಮತ್ತು ಅದರಂತೆ ಸ್ಥಾಯೀಗುಣವಿರುವ ಇನ್ನೊಂದು ಎಣೆಯಿಲ್ಲ ಅಂತರಿಕ್ಷದಲ್ಲಿ, ಆಕಾಶ ಅದೆಷ್ಟೋ ಕಿಡಿಗಳಿಂದ ಅಲಂಕೃತವಾಗಿದೆ, ಅವೆಲ್ಲವೂ ಬೆಂಕಿಯೇ, ಹಾಗೂ ಪ್ರತಿಯೊಂದೂ ಜ್ವಲಿಸುತ್ತದೆ; ಆದರೆ ತನ್ನ ಸ್ಥಾನ ಬಿಡದಿರುವುದು ಮಾತ್ರ ಏಕೈಕ ಬೆಂಕಿ. ಹಾಗೆಯೇ ಈ ಭೂಮಿಯಲ್ಲೂ; ಅದು ಮನುಷ್ಯರಿಂದ ತುಂಬಿದೆ, ಆದರೆ ರಕ್ತಮಾಂಸ ಮತ್ತು ಸಂವೇದನೆಯಿಂದ ಕೂಡ; ಆದರೂ ಈ ಕುಲಕೋಟಿಯಲ್ಲಿ ಚಲನೆಗೆ ನಡುಗದೆ, ಆಕ್ರಮಣಕ್ಕೆ ಕದಲದೆ, ತನ್ನ ಸ್ಥಾನ ಕಾಪಾಡುವ ಒಬ್ಬನೇ ಒಬ್ಬನನ್ನು ಮಾತ್ರ ನಾನು ಬಲ್ಲೆ. ಅದು ನಾನೇ, ನಾನದನ್ನು ಈ ವಿಷಯದಲ್ಲೂ ತೋರಿಸಲು ಬಿಡಿ: ಸಿಂಬರ್ ದೇಶಭ್ರಷ್ಟನಾಗಿ ಇರಲೇಬೇಕು ಎನ್ನುವುದರಲ್ಲಿ ದೃಢನಾದಂತೆ, ಈ ರೀತಿ ಅದನ್ನು ಇರಿಸುವುದರಲ್ಲೂ ನಾನು ನಿಶ್ಚಲನಾಗಿ ಇರುವುದನ್ನು.
ಸಿನ್ನಾ. ಓ ಸೀಸರ್.
ಸೀಸರ್. ದೂರ ಸರಿ. ಏನು ಒಲಿಂಪಸ್ ಪರ್ವತವನ್ನು ಎತ್ತುವಿಯಾ?
ಡೆಸಿಯಸ್. ಮಹಾ ಸೀಸರ್.
ಸೀಸರ್. ಪಾದರಕ್ಷೆ ಕಳಚಿ ಡೆಸಿಯಸ್ ಬ್ರೂಟಸ್ ಮಣಿಯುವುದಿಲ್ಲವೇ?
ಕಾಸ್ಕಾ. ನನ್ನ ಕೈಗಳು ಉತ್ತರಿಸುವುದಕ್ಕೆ. [ಅವರು ಸೀಸರನನ್ನು ಇರಿಯುತ್ತಾರೆ]
ಸೀಸರ್. ನೀನು ಕೂಡಾ, ಬ್ರೂಟಸ್? ಹಾಗದ್ದರೆ ಹತ ಸೀಸರ್.
[ಸಾಯುತ್ತಾನೆ]
ಸಿನ್ನಾ. ಬಿಡುಗಡೆ, ಸ್ವಾತಂತ್ರ್ಯ; ಸರ್ವಾಧಿಕಾರ ಸತ್ತಿತು. ಧಾವಿಸಿ ಇಲ್ಲಿಂದ, ಉದ್ಘೋಷಿಸಿ, ಬೀದಿ ಬೀದಿಗಳಲ್ಲಿ ಕೂಗಿ ಹೇಳಿ.
ಕೇಸಿಯಸ್. ಸಾರ್ವಜನಿಕ ವೇದಿಕೆಗೆ ಕಲವರು ಹೋಗಿ, ಬಿಡುಗಡೆ, ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಘೋಷಿಸಿ.
ಬ್ರೂಟಸ್. ಜನರೇ, ಮತ್ತು ಸಂಸದರೇ, ಭಯಪಡಬೇಡಿ: ಓಡಬೇಡಿ, ಅಲುಗಾಡದೆ ನಿಲ್ಲಿ: ಮಹತ್ವಾಕಾಂಕ್ಷೆಯ ಕಾಲ
ಸಂದಾಯಿತವಾಯಿತು.
ಕಾಸ್ಕಾ. ವೇದಿಕೆಗೆ ಹೋಗಿ, ಬ್ರೂಟಸ್.
ಡೆಸಿಯಸ್. ಮತ್ತು ಕೇಸಿಯಸ್ ಕೂಡಾ.
ಬ್ರೂಟಸ್. ಪುಬ್ಲಿಯಸ್ ಎಲ್ಲಿ?
ಸಿನ್ನಾ. ಇಲ್ಲಿದ್ದಾರೆ, ದಂಗೆಯಿಂದ ತೀರ ದಂಗಾಗಿ.
ಪುಬ್ಲಿಯಸ್. ಒಟ್ಟಿಗೇ ನಿಂತುಕೊಳ್ಳೋಣ, ಯಾಕೆಂದರೆ ಸೀಸರನ ಯಾರಾದರೂ ಮಿತ್ರರು ಬಂದುಬಿಟ್ಟರೆ—
ಬ್ರೂಟಸ್. ನಿಲ್ಲುವ ಮಾತು ಬೇಡ. ಪುಬ್ಲಿಯಸ್, ಸಂತೋಷ ತಂದುಕೊಳ್ಳಿ, ನಿಮ್ಮ ಜೀವಕ್ಕೇನೂ ಅಪಾಯ ಬಗೆದಿಲ್ಲ, ಅಥವ ಇನ್ನು ಯಾವನೇ ರೋಮನಿಗೆ.
ಹಾಗೆಂದು ಅವರಿಗೆ ಹೇಳಿ, ಪುಬ್ಲಿಯಸ್.
ಕೇಸಿಯಸ್. ಹೊರಡಿ ಪುಬ್ಲಿಯಸ್, ಇಲ್ಲದಿದ್ದರೆ ನಿಮ್ಮ ಮೇಲೆ ಬಂದೆರಗುವ ಜನ ನಿಮ್ಮ ಇಳಿ ಜೀವಕ್ಕೇನಾದರೂ ಕೇಡು ತರಬಹುದು.
ಬ್ರೂಟಸ್. ಹಾಗೇ ಮಾಡಿ, ಮತ್ತೆ ಈ ಕೃತ್ಯಕ್ಕೆ ಕರ್ತೃಗಳಾದ ನಾವಲ್ಲದೆ ಇನ್ನು ಯಾರೂ ಹೊಣೆಯಾಗುವುದು ಬೇಡ.
(ಪಿತೂರಿಕೋರರ ಹೊರತು ಇನ್ನೆಲ್ಲರ ನಿಷ್ಕ್ರಮಣ)
ಟ್ರೆಬೋನಿಯಸ್ ಪ್ರವೇಶ
ಕಾಸ್ಕಾ. ಆಂಟನಿ ಎಲ್ಲಿ?
ಟ್ರೆಬೋನಿಯಸ್. ಗರಬಡಿದು ತಮ್ಮ ಮನೆಗೆ ಓಡಿದ್ದಾನೆ: ಗಂಡಸರು, ಹೆಂಗಸರು, ಮತ್ತು ಮಕ್ಕಳು ಕಣ್ ಕಣ್ ಬಿಟ್ಟು
ನೋಡುತ್ತಿದ್ದಾರೆ ಮತ್ತು ಓಡುತ್ತಿದ್ದಾರೆ, ಇದೇನು ಪ್ರಳಯವೋ ಎನ್ನುವಂತೆ.
ಬ್ರೂಟಸ್. ದೈವಗಳೇ, ನಿಮ್ಮ ಮನಸ್ಸೇನೆನ್ನುವುದು ಈಗ ನಮಗೆ ಗೊತ್ತಾಗುತ್ತದೆ: ನಾವು ಸಾಯುತ್ತೇವೆ—ಅದು ನಮಗೆ
ಗೊತ್ತು: ಜನ ನಿಂತಿರುವುದು ಸಮಯದ ಮೇಲೆ, ಮತ್ತು ಸರಿಯುವ ದಿನಗಳಲ್ಲಿ.
ಕಾಸ್ಕಾ. ಯಾಕೆ, ಇಪ್ಪತ್ತು ವರ್ಷಗಳ ಬದುಕನ್ನು ಕಡಿದುಕೊಳ್ಳುವ ವ್ಯಕ್ತಿ, ಅಷ್ಟೊಂದು ವರ್ಷಗಳ ಮರಣಭಯವನ್ನೂ ಕಡಿದುಕೊಳ್ಳುತ್ತಾನೆ.
ಬ್ರೂಟಸ್. ಅದನ್ನೊಪ್ಪಿದರೆ ಮರಣವೊಂದು ಲಾಭವೇ ಸರಿ. ಹಾಗಿದ್ದರೆ ನಾವು ಸೀಸರನ ಸ್ನೇಹಿತರು, ಅವನ ಮರಣಭಯದಿಂದ ನಾವು ಕಾಲವನ್ನು ಕುಂಠಿತಗೊಳಿಸಿರುವ ಕಾರಣ. ಬಾಗಿ, ರೋಮನರೆ, ಬಾಗಿ, ಕೈಗಳನ್ನು ಸೀಸರನ ನೆತ್ತರಲ್ಲಿ ಭುಜಮಟ್ಟ ಮೀಯಿಸುವಾ, ಹಾಗೂ ನಮ್ಮ ಕಠಾರಿಗಳಿಗೆ ಹಚ್ಚುವಾ. ಅನಂತರ ನಾವು ನಡೆಯೋಣ ಸಂತೆಮಾಳಕ್ಕೆ ಕೂಡ, ನಮ್ಮ ಕೆಂಪು ಕತ್ತಿಗಳನ್ನು ತಲೆಮೇಲೆ ಬೀಸುತ್ತ, ಶಾಂತಿ, ಸ್ವಾತಂತ್ರ್ಯ, ಬಿಡುಗಡೆ ಎಂದು ಕೂಗೋಣ.
ಕೇಸಿಯಸ್. ಬಾಗಿರಿ ಹಾಗಿದ್ದರೆ, ಬಾಗಿ ತೊಳೆಯಿರಿ. ಮುಂದೆ ಎಷ್ಟೊಂದು ಯುಗಗಳಲ್ಲಿ ಈ ನಮ್ಮ ಉತ್ತುಂಗ ದೃಶ್ಯವನ್ನು ಆಡಲಿದ್ದಾರೆ ಜನ, ಇನ್ನೂ ಜನಿಸಿರದ ರಾಜ್ಯಗಳಲ್ಲಿ, ಇನ್ನೂ ಗೊತ್ತಿರದ ಭಾಷೆಗಳಲ್ಲಿ!
ಬ್ರೂಟಸ್. ಎಷ್ಟು ಸಲ ಆಟದಲ್ಲಿ ಸೀಸರ್ ರಕ್ತ ಸುರಿಸುವನೋ, ಈಗ ಧೂಳಿಗಿಂತ ಕಡೆಯಾಗಿ ಪಾಂಪಿಯ ಬುಡದಲ್ಲಿ ಬಿದ್ದಿರುವನು.
ಕೇಸಿಯಸ್. ಅದೆಷ್ಟು ಸಲವೋ ಅಷ್ಟು ಸಲ, ಅಷ್ಟೂ ಸಲ ನಮ್ಮ ಗುಂಪಿನ ಬಂಧವನ್ನು ಜನ ಕರೆದಾರು ತಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದ ಮನುಷ್ಯರು ಎಂದು.
ಡೆಸಿಯಸ್. ಸರಿ, ಮುಂದೆ ಹೋಗೋಣವೇ?
ಕೇಸಿಯಸ್. ಹೂಂ, ಪ್ರತಿ ಮನುಷ್ಯನೂ. ಬ್ರೂಟಸ್ ಮುಂದಿರುತ್ತಾನೆ, ನಾವವನ ಕಾಲ ಹಿಂದೆಯೇ ಇರುತ್ತೇವೆ, ರೋಮಿನ ಅತ್ಯಂತ ಧೀಮಂತ ಅತ್ಯಂತ ಶ್ರೇಷ್ಠ ಹೃದಯಗಳು.
ಒಬ್ಬ ಸೇವಕನ ಪ್ರವೇಶ
ಬ್ರೂಟಸ್. ಮೆಲ್ಲಗೆ, ಯಾರು ಬರುತ್ತಿದ್ದಾರೆ?ಆಂಟನಿಯ ಕಡೆಯವನು.
ಸೇವಕ. ನನ್ನೊಡೆಯ ಮಾರ್ಕ್ ಆಂಟನಿ ನನಗೀ ರೀತಿ ಮಂಡಿಯೂರು ಅಂದರು, ಈ ರೀತಿ ಕೆಳಗೆ ಬೀಳು ಅಂದರು, ಈ ರೀತಿ ಉದ್ದಂಡ ಎರಗಿ ಈ ರೀತಿ ಹೇಳು ಅಂದರು.
ಬ್ರೂಟಸ್ ಕುಲವಂತ, ಬುದ್ಧಿಮಾನ್, ಧೈರ್ಯಶಾಲಿ, ಮತ್ತು ನಿಷ್ಠಾವಂತ; ಸೀಸರ್ ಬಲವಂತನಿದ್ದ,ಧೀರನಿದ್ದ, ರಾಜಸಮಾನನೂ ಪ್ರೀತಿವಂತನೂ ಇದ್ದ; ನಾನು ಬ್ರೂಟಸ್‍ನನ್ನು ಪ್ರೀತಿಸುತ್ತೇನೆಂದು ಹೇಳು, ಹಾಗೂ ನಾನವನನ್ನು ಗೌರವಿಸುತ್ತೇನೆ ಕೂಡ;
ಸೀಸರನ ನಾನು ಭಯಪಡುತ್ತಿದ್ದೆ, ಗೌರವಿಸುತ್ತಿದ್ದೆ,ಮತ್ತು ಪ್ರೀತಿಸುತ್ತಿದ್ದೆನೆಂದು ಹೇಳು.
ಆಂಟನಿ ಸುರಕ್ಷಿತವಾಗಿ ಬಂದು ಕಾಣಬಹುದು,ಕಂಡು ಸೀಸರ್ ಹೇಗೆ ಸಾಯುವುದಕ್ಕೆ ಅರ್ಹನೆಂದು ಖಚಿತಪಡಿಸಿಕೊಳ್ಳಬಹುದು ಎಂದು ಬ್ರೂಟಸ್ ಭರವಸೆಯಿತ್ತರೆ, ಜೀವಂತ ಬ್ರೂಟಸ್‍ಗಿಂತ ಸತ್ತ ಸೀಸರನನ್ನು ನಾನು ಹೆಚ್ಚು ಪೀತಿಸುವುದಿಲ್ಲ; ಬದಲು ಶ್ರೇಷ್ಠ ಬ್ರೂಟಸ್‍ನ ಗತಿಯನ್ನು ಹಿಂಬಾಲಿಸುವೆ, ಈ ಇನ್ನೂ ಕಾಲಿರಿಸದ ರಾಜ್ಯದ ಗಂಡಾಂತರಗಳ ಉದ್ದಕ್ಕೂ, ತನ್ನೆಲ್ಲಾ ನಿಜ ನಿಷ್ಠೆಯೊಂದಿಗೆ.ನನ್ನೊಡೆಯ ಆಂಟನಿ ಈ ರೀತಿ ಅನ್ನುತ್ತಾರೆ.
ಬ್ರೂಟಸ್. ನಿನ್ನ ಒಡೆಯನೊಬ್ಬ ವಿವೇಕಿ ಮತ್ತು ವೀರ ರೋಮನ್, ನಾನವನನ್ನು ಎಂದೂ ಅದಕ್ಕಿಂತ ಕಡಿಮೆಯಾಗಿ ಭಾವಿಸಿದ್ದಿಲ್ಲ: ಅವನಿಗೆ ಹೇಳು, ಇಲ್ಲಿಗೆ ಅವನು ದಯವಿಟ್ಟು ಬಂದರೆ ಅವನ ಮನಸ್ಸಿಗೆ ಸಮಾಧಾನವಾದೀತು: ಅಲ್ಲದೆ ನಾನು ಮಾತು ಕೊಡುತ್ತೇನೆ, ಯಾರೂ ಮೈಮುಟ್ಟದೆ ಅವನು ಮರಳಬಹುದು.
ಸೇವಕ. ನಾನವರನ್ನು ಕೂಡಲೇ ಕರೆತರುತ್ತೇನೆ.
(ನಿಷ್ಕ್ರಮಣ)
ಬ್ರೂಟಸ್. ನನಗೆ ಗೊತ್ತು, ನನಗವನು ಉತ್ತಮ ಮಿತ್ರನಾಗುತ್ತಾನೆ.
ಕೇಸಿಯಸ್. ಹಾಗಾಗಲಿ ಎಂದು ನಾನು ಆಶಿಸುತ್ತೇನೆ. ಆದರೂ ಅವನ ಕುರಿತಾಗಿ ನನ್ನ ಮನಸ್ಸಿನಲ್ಲೊಂದು ಅನುಮಾನವಿದೆ: ನನ್ನ ಶಂಕೆ ನಮ್ಮ ಉದ್ದೇಶದ ಸುತ್ತ ಸುತ್ತಿರುವುದು.
ಆಂಟನಿ ಪ್ರವೇಶ..
ಬ್ರೂಟಸ್. ಆದರೆ ಆಂಟನಿ ಬರುತ್ತಿದ್ದಾನೆ ಇಲ್ಲಿ. ಸ್ವಾಗತ ಮಾರ್ಕ್ ಆಂಟನಿ.
ಆಂಟನಿ. ಓ ಬಲಶಾಲಿ ಸೀಸರ್! ಇಷ್ಟೊಂದು ಕೆಳಗೆ ಮಲಗಿದಿರಾ? ನಿಮ್ಮೆಲ್ಲ ಗೆಲುವುಗಳು, ಮಹಿಮೆಗಳು, ಜೈತ್ರ ಯಾತ್ರೆಗಳು, ಪ್ರತಾಪಗಳು ಈ ಸಣ್ಣ ಅಳತೆಗೆ ಕುಸಿದುವೆ? ವಿದಾಯ ನಿಮಗೆ.
ನೀವೇನು ಬಯಸುತ್ತೀರೋ ನನಗೆ ತಿಳಿಯದು, ಮಹಾಶಯರೆ, ಇನ್ನು ಯಾರ ನೆತ್ತರು, ಇನ್ನು ಯಾರು ಕೆಟ್ಟವರು: ನಾನೇ ಆದರೆ, ಸೀಸರನ ಮರಣಕ್ಕಿಂತ ಯೋಗ್ಯ ಗಳಿಗೆ ಬೇರೆ ಇಲ್ಲ; ನಿಮ್ಮ ಆ ಖಡ್ಗಗಳ ಅರ್ಧ ಬೆಲೆಗಿಂತ ಬೇರೆ ಸಾಧನ ಬೇಕಾಗಿಲ್ಲ; ಈ ಇಡೀ ಜಗತ್ತಿನ ಅತ್ಯಂತ ಶ್ರೇಷ್ಠ ರಕ್ತದಿಂದ ಶ್ರೀಮಂತವಾಗಿವೆ ಅವು. ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ, ನಿಮಗೆ ನನ್ನ ಮೇಲೆ
ವೈಷಮ್ಯವಿದ್ದರೆ, ಈಗ ನಿಮ್ಮೀ ಕಡುಗೆಂಪು ಕೈಗಳು ಕಮರಿ ಹೊಗೆಯುಗುಳುತ್ತಿದ್ದಾಗಲೇ ನಿಮ್ಮ ಇಷ್ಟ ಪೂರೈಸಿಕೊಳ್ಳಿ, ಒಂದು ಸಾವಿರ ವರ್ಷ ಬದುಕಿದರೂ ಸಾಯಲು ನಾನಿಷ್ಟು ತಕ್ಕವನಾಗಲಾರೆ. ಬೇರೆ ಯಾವುದೇ ಜಾಗ, ಸಾಯುವ ಯಾವುದೇ ವಿಧಾನ,
ನಿಮ್ಮಿಂದ ತುಂಡಾದ ಈ ಯುಗದಾಯ್ಕ ಮತ್ತು ಮಾಲಿಕ ಚೇತನವಾದ ಇಲ್ಲಿ ಈ ಸೀಸರನ ಪಕ್ಕದಷ್ಟು ನನಗೆ ಸಂತೋಷ ಕೊಡಲಾರದು.
ಬ್ರೂಟಸ್. ಓ ಆಂಟನಿ! ನಮ್ಮಿಂದ ನಿನ್ನ ಮರಣ ಭಿಕ್ಷೆಯ ಕೇಳಬೇಡ: ನಾವೀಗ ನಮ್ಮ ಕೈಗಳಿಂದ ಮತ್ತು ನೀನು ನೋಡುವ ನಮ್ಮ ಕೃತ್ಯಗಳಿಂದ ರಕ್ತಪಿಪಾಸುಗಳಾಗಿ ಕ್ರೂರರಾಗಿ ಕಾಣಿಸಿದರೂ ನೀನು ಕಾಣುವುದು ನಮ್ಮ ಕೈಗಳನ್ನು ಮಾತ್ರ, ಹಾಗೂ ನಾವೆಸಗಿದ ಈ ರಕ್ತ ಹರಿಸುವ ಉದ್ಯುಗವನ್ನಷ್ಟೆ: ನಮ್ಮ ಹೃದಯಗಳನ್ನು ನೀನು ಕಾಣುವುದಿಲ್ಲ, ಅವು ದಯಾಮಯ: ಮತ್ತು ರೋಮಿಗಾದ ಸಾರ್ವಜನಿಕ ಅನ್ಯಾಯದ ಕುರಿತಾದ ಮರುಕ—ಬೆಂಕಿ ಬೆಂಕಿಯಿಂದ ನಂದುವಂತೆ, ಮರುಕ ಮರುಕದಿಂದಲೂ—ಈ ಕೃತ್ಯವನ್ನು
ಸೀಸರನ ಮೇಲೆ ಎಸಗಿದೆ. ನಿನ್ನ ಮಟ್ಟಿಗಾದರೆ ನಮ್ಮ ಕತ್ತಿತುದಿಗಳು ಸೀಸವೇ ಸರಿ, ಮಾರ್ಕ್ ಆಂಟನಿ: ಕೋಪಕ್ಕೆ ಬಲಗೊಂಡ ನಮ್ಮ ಬಾಹುಗಳು, ಭ್ರಾತೃ ಭಾರದ ನಮ್ಮ ಹೃದಯಗಳು ನಿನ್ನನ್ನು ಸ್ವೀಕರಿಸಲು ಸಿದ್ಧ, ಎಲ್ಲ ರೀತಿಯ ಪ್ರೀತಿ, ಸದ್ವಿಚಾರ ಮತ್ತು
ಗೌರವಗಳೊಂದಿಗೆ.
ಕೇಸಿಯಸ್. ನಿನ್ನ ಧ್ವನಿ ಇತರ ಯಾವನೇ ಮನುಷ್ಯನಷ್ಟು ಬಲಿಷ್ಠವಾದೀತು ಹೊಸ ವಿಚಾರಗಳನ್ನು ನಿರ್ಣಯಿಸುವುದರಲ್ಲಿ.
ಬ್ರೂಟಸ್. ಸಹನೆಯಿಂದಿರು ಮಾತ್ರ, ಭೀತಿಗೆ ದಿಕ್ಕೆಟ್ಟ ಜನಸ್ತೋಮವನ್ನು ನಾವು ಸಮಾಧಾನಪಡಿಸುವ ವರೆಗೆ, ಆಮೇಲೆ ನಾವು ನಿನಗೆ ಕಾರಣ ಕೊಡುತ್ತೇವೆ,ಸೀಸರನ ಪ್ರೀತಿಸಿದ ನಾನು, ಅವನ ಮೇಲೆರಗಿದಾಗ ಯಾಕೆ ಅದಕ್ಕೆ ಮನಸ್ಸುಮಾಡಿದೆ ಎನ್ನುವುದಕ್ಕೆ.
ಆಂಟನಿ. ನಾನು ನಿಮ್ಮ ವಿವೇಕವನ್ನು ಸಂದೇಹಿಸುವುದಿಲ್ಲ: ಪ್ರತಿಯೊಬ್ಬ ಮನುಷ್ಯನೂ ತನ್ನ ನೆತ್ತರ ಕೈಯನ್ನು ನನಗೆ ನೀಡಲಿ. ಮೊದಲು ಮಾರ್ಕಸ್ ಬ್ರೂಟಸ್, ನಿಮ್ಮ ಕೈಯನ್ನು ಕುಲುಕುವೆ; ಆಮೇಲೆ ಕೈಯುಸ್ ಕೇಸಿಯಸ್, ನಿಮ್ಮದು; ಈಗ ನಿಮ್ಮದು ಮೆಟೆಲಸ್, ನಿಮ್ಮದು ಸಿನ್ನಾ, ಮತ್ತು ನನ್ನ ಪರಾಕ್ರಮಿ ಕಾಸ್ಕಾ ನಿಮ್ಮದೂ; ಕೊನೆಯದಾದರೂ ಪ್ರೀತಿಯಲ್ಲಿ ಕೊನೆಯಿಲ್ಲದ ಉತ್ತಮ ಟ್ರೆಬೋನಿಯಸ್, ನಿಮ್ಮದೂ: ಎಲ್ಲರೂ…
ಮಹನೀಯರೇ: ಅಯ್ಯೋ ನಾನೇನು ಹೇಳಲಿ? ನನ್ನ ಬೆಲೆಯೀಗ ಎಂಥಾ ಜಾರುನೆಲದಲ್ಲಿ ನಿಂತಿದೆಯಂದರೆ..
ಎರಡರಲ್ಲೊಂದು ದುರ್ಮಾರ್ಗವನ್ನು ನನಗೆ ನೀವು ಕಲ್ಪಿಸಬೇಕು, ಒಂದೋ ಒಬ್ಬ ಅಂಜುಬುರುಕನೆಂದು, ಇಲ್ಲವೇ ಒಬ್ಬ ಹೊಗಳುಭಟನೆಂದು.
ಸೀಸರ್, ನಾನು ನಿಮ್ಮನ್ನು ಪ್ರೀತಿಸಿದೆ, ಓಹ್ ಇದು ಸತ್ಯ: ಹಾಗಿದ್ದರೀಗ ನಿಮ್ಮ ಜೀವಾತ್ಮ ನನ್ನನ್ನು ನೋಡಿದರೆ, ಆಂಟನಿ ತನ್ನ ವೈರಿಗಳ ರಕ್ತಕಲುಷಿತ ಬೆರಳುಗಳನ್ನು ಕುಲುಕಿ ರಾಜಿಮಾಡುವುದನ್ನು ಕಂಡು ನಿಮ್ಮ ಸಾವಿಗಿಂತಲು ಹೆಚ್ಚು ಸಾವಾಗಿ ಮರುಗದೇ? ಮಹಾನ್ ಶ್ರೇಷ್ಠ ಸೀಸರ್, ನಿಮ್ಮ ಶವಸಾನ್ನಿಧ್ಯದಲ್ಲಿ ನಿಮ್ಮ ಗಾಯಗಳಷ್ಟೇ ನನಗೆ ಕಣ್ಣುಗಳಿದ್ದು ಅವು ರಕ್ತ ಹರಿಸುವಷ್ಟೇ ತೀವ್ರವಾಗಿ ಕಣ್ಣೀರು ಸುರಿಸುತ್ತಿದ್ದರೆ, ಅದು ನನಗೆ ಹೆಚ್ಚು ಯೋಗ್ಯವಾಗುತ್ತಿತ್ತು, ನಿಮ್ಮ ವಿರೋಧಿಗಳನ್ನು ಮಿತ್ರತ್ವದಲ್ಲಿ ಕೂಡುವುದಕ್ಕಿಂತ. ಕ್ಷಮಿಸಿ ಜೂಲಿಯಸ್, ಇಲ್ಲೊಂದು ಧೀರ ಹರಿಣ ಹರಣಕ್ಕೆ ಒಳಗಾಯಿತು, ಇಲ್ಲಿ ಬಿದ್ದಿರಿ ನೀವು, ಇಲ್ಲಿ ನಿಂತಿರುವರು ನಿಮ್ಮ ವ್ಯಾಧರು, ನಿಮ್ಮ ಒಡಲಲ್ಲಿ ಋಜುಮಾಡಿ, ನಿಮ್ಮ ಮೃತ್ಯುನದಿಯಲ್ಲಿ ಕಡುಕೆಂಪಾಗಿ. ಓ ಜಗವೇ, ಈ ಹರಿಣಕ್ಕೆ ನೀನು ಬನವಾದಿ, ಹಾಗೂ ಓ ಜಗವೇ, ಇದೇ ನಿನ್ನ ಪ್ರಾಣವೂ. ಹೇಗೆ ಜಿಂಕೆಯ ತರ, ಹಲವು ಅರಸುಕುಮಾರರ ಬಾಣಕ್ಕೆ ಗುರಿಯಾಗಿ,ಇಲ್ಲಿ ಮಲಗಿರುವಿರಿ ನೀವು?
ಕೇಸಿಯಸ್. ಮಾರ್ಕ್ ಆಂಟನಿ.
ಆಂಟನಿ. ಕ್ಷಮಿಸಿ ಕೈಯುಸ್ ಕೇಸಿಯಸ್: ಸೀಸರನ ವೈರಿಗಳು ಹೇಳಬಹುದು: ಮಿತ್ರನೊಬ್ಬನಿಗೆ ಇದು ತೋರಲೇಬೇಕಾದ ಅನಿವಾರ್ಯ ಮರ್ಯಾದೆ ಎಂದು.
ಕೇಸಿಯಸ್. ಸೀಸರನನ್ನು ನೀನೀ ರೀತಿ ಹೊಗಳುವುದಕ್ಕೆ ನಾನು ನಿನ್ನನ್ನು ದೂರಲಾರೆ, ಆದರೆ ನಮ್ಮೊಂದಿಗೆ ನೀನು ಯಾವ ಸಂಬಂಧವನ್ನು ಇರಿಸಿಕೊಳ್ಳಬೇಕೆಂದಿರುವಿ?
ನಮ್ಮ ಮಿತ್ರರ ಸಂಖ್ಯೆಗೆ ಸೇರಬಯಸುವಿಯ, ಅಥವ ನಾವು ಮುಂದರಿಯಬೇಕೇ ನಿನ್ನನ್ನು ಅವಲಂಬಿಸದೆಯೇ?
ಆಂಟನಿ. ಅದಕ್ಕೇ ನಾನು ನಿಮ್ಮ ಕೈಗಳನ್ನು ನನ್ನ ಕೈಯಲ್ಲಿ ತೆಗೆದುಕೊಂಡದ್ದು, ಆದರೆ ಸೀಸರನ ಕಾಣುತ್ತಲೇ ನಾನದರಿಂದ
ವಿಚಲಿತನಾದೆ, ಮಿತ್ರನು ನಾನು ನಿಮ್ಮೆಲ್ಲರಿಗೂ, ಮತ್ತು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ, ಈ ಆಸೆಯ ಮೆಲೆ: ಸೀಸರ್ ಯಾಕೆ ಮತ್ತು ಯಾವುದರಲ್ಲಿ ಅಪಾಯಕಾರಿಯಾಗಿದ್ದ ಎನ್ನುವುದಕ್ಕೆ ನೀವು ಕಾರಣ ಕೊಡಬೇಕಾಗುತ್ತದೆ ನನಗೆ.
ಬ್ರೂಟಸ್. ಅಲ್ಲವೆಂದಾದರೆ ಇದೊಂದು ಬರ್ಬರ ದೃಶ್ಯವಾದೀತು: ನಮ್ಮ ಕಾರಣಗಳು ಎಷ್ಟೊಂದು ಸರಿಯಾದ ಕಾಳಜಿಪೂರ್ಣವೆಂದರೆ, ನೀನು ಆಂಟನಿ, ಸೀಸರನ ಮಗನೇ ಆಗಿದ್ದರೂ, ನಿನಗೆ ಸಮಾಧಾನವಾಗಬೇಕು.
ಆಂಟನಿ. ನಾನು ಅಷ್ಟನ್ನೇ ಬಯಸುವುದು, ಮತ್ತು ನನ್ನದು ಇನ್ನೊಂದು ಕೋರಿಕೆಯಿದೆ, ಪೇಟೆ ಚೌಕದಲ್ಲಿ ನಾನಿವನ ದೇಹವನ್ನು ವೇದಿಕೆಯ ಮೇಲಿರಿಸಿ, ಮಿತ್ರನೊಬ್ಬನಿಗೆ ಯೋಗ್ಯವಾಗುವ ತರ, ಶವಸಂಸ್ಕಾರ ರೀತ್ಯಾ ಮಾತಾಡಲು ಬಿಡಬೇಕು.
ಬ್ರೂಟಸ್. ಅದು ನೀನು ಮಾಡುವಿ ಆಂಟನಿ.
ಕೇಸಿಯಸ್. ಬ್ರೂಟಸ್, ಒಂದು ಮಾತು ನಿಮ್ಮಲ್ಲಿ:
[ಬ್ರೂಟಸ್‍ನ ಕಿವಿಯಲ್ಲಿ] ನೀವೇನು ಮಾಡುತ್ತಿದ್ದೀರೆಂದು ನಿಮಗೇ ಗೊತ್ತಿಲ್ಲ; ಶವಸಂಸ್ಕಾರದಲ್ಲಿ ಆಂಟನಿಗೆ ಮಾತಾಡಲು
ಬಿಡಬೇಡಿ. ಈತನ ಮಾತಿಗೆ ಜನ ಎಷ್ಟು ಕರಗಬಹುದೆಂದು ನೀವು ಬಲ್ಲಿರಿ.
ಬ್ರೂಟಸ್. [ಕೇಸಿಯಸ್‍ನ ಕಿವಿಯಲ್ಲಿ] ಕ್ಷಮಿಸು: ವೇದಿಕೆಗೆ ನಾನೇ ಮೊದಲು ಹೋಗುವೆ, ನಮ್ಮ ಸೀಸರನ ಸಾವಿಗೆ ಕಾರಣ ನೀಡುವೆ. ಆಂಟನಿ ಏನು ಮಾತಾಡುವನೋ ಅದು ನಮ್ಮ ಅನುಮತಿ ಮತ್ತು ಸಮ್ಮತಿಯ ಮೇಲೆಯೇ ಎಂದು ಒತ್ತಿ ಹೇಳುವೆ: ಸೀಸರನಿಗೆ ಯುಕ್ತವಾದ ಎಲ್ಲಾ ಸಂಸ್ಕಾರಗಳು ಹಾಗೂ ವಿಧ್ಯಕ್ತ ಆಚರಣೆಗಳು ಒದಗುವಲ್ಲಿ ನಾವು ತೃಪ್ತಿಪಟ್ಟರೆ, ಅದರಿಂದ ನಮಗೆ ತೊಂದರೆಗಿಂತ ಲಾಭವೇ ಹೆಚ್ಚು.
ಕೇಸಿಯಸ್. [ಬ್ರೂಟಸ್‍ನ ಕಿವಿಯಲ್ಲಿ] ಏನಾಗುತ್ತದೋ ಗೊತ್ತಿಲ್ಲ, ನನಗಂತೂ ಇದು ಇಷ್ಟವಿಲ್ಲ.
ಬ್ರೂಟಸ್. ಮಾರ್ಕ್ ಆಂಟನಿ, ಸೀಸರನ ದೇಹವನ್ನು ಎತ್ತಿಕೋ: ಸಂತಾಪ ಭಾಷಣದಲ್ಲಿ ನೀನು ನಮ್ಮನ್ನು ಹಂಗಿಸಬಾರದು, ಆದರೆ ನೀನು ಸೀಸರನ ಕುರಿತು ಯೋಚಿಸಬಹುದಾದ ಎಲ್ಲಾ ಒಳ್ಳೆಯದನ್ನೂ ಮಾತಾಡಬಹುದು, ಮತ್ತು ನಮ್ಮ ಅನುಮತಿ ಮೇರೆಗೆ
ನೀನು ಮಾತಾಡುವುದೆಂದು ಹೇಳು: ಅಲ್ಲದಿದ್ದರೆ ಶವಸಂಸ್ಕಾರದಲ್ಲಿ ನಿನಗೆ ಯಾವ ಪಾತ್ರವೂ ಇರುವುದಿಲ್ಲ. ಮತ್ತು ನಾನು ತೆರಳುವ ವೇದಿಕೆಯಿಂದಲೇ ನೀನೂ ಮಾತಾಡುವಿ, ನನ್ನ ಭಾಷಣ ಮುಗಿದ ಮೇಲೆ.
ಆಂಟನಿ. ಹಾಗೇ ಆಗಲಿ. ನಾನು ಅದಕ್ಕಿಂತ ಹೆಚ್ಚೇನೂ ಬಯಸುವುದಿಲ್ಲ.
ಬ್ರೂಟಸ್. ದೇಹವನ್ನು ಸಿದ್ಧಗೊಳಿಸು ಹಾಗಿದ್ದರೆ, ಮತ್ತು ನನ್ನನ್ನು ಅನುಸರಿಸು.
(ಆಂಟನಿಯನ್ನುಳಿದು ಮತ್ತೆಲ್ಲರ ನಿಷ್ಕ್ರಮಣ)
ಆಂಟನಿ. ಓ ನನ್ನನ್ನು ಕ್ಷಮಿಸು, ರಕ್ತ ಸುರಿಸುವ ಮೃತ್ತಿಕೆಯ ಚೂರೇ, ಈ ಕಸಾಯಿಗಳ ಜತೆ ನಾನು ಸಾಧುವೂ ಮೃದುವೂ ಆಗಿರುವುದಕ್ಕೆ. ಕಾಲದ ಭರತದಲ್ಲಿ ಬದುಕಿದ್ದ ಶ್ರೇಷ್ಠರಲ್ಲಿ ನೀನು ಅತ್ಯಂತ ಶ್ರೇಷ್ಠ. ಈ ದುಬಾರಿ ರಕ್ತ ಹರಿಸಿದ ಕೈಗೆ ಧಿಕ್ಕಾರವಿರಲಿ. ನಿನ್ನ ಗಾಯಗಳ ಮೇಲೆ ನಾನು ಭವಿಷ್ಯ ನುಡಿಯುತ್ತೇನೆ—ಮೂಕ ಬಾಯಿಗಳಂತೆ ಅವು ತಮ್ಮ ತುಟಿಗಳನ್ನು ತೆರೆಯುತ್ತವೆ, ನನ್ನ ನಾಲಿಗೆಯ ಧ್ವನಿ ಮತ್ತು ಮಾತನ್ನು ಕೋರುವುದಕ್ಕೆ— ಮನುಷ್ಯರ ಅಂಗಾಂಗಳ ಮೇಲೊಂದು ಶಾಪ ಬೀಳುತ್ತದೆ;
ಕೌಟಿಂಬಿಕ ಅಶಾಂತಿ ಮತ್ತು ಆಂತರಿಕ ಕಲಹ ಇಟೆಲಿಯ ಎಲ್ಲಾ ಭಾಗಗಳನ್ನು ಬಾಧಿಸೀತು:
ರಕ್ತ ಮತ್ತು ವಿನಾಶ ಎಷ್ಟೊಂದು ಚಾಲ್ತಿಗೆ ಬಂದೀತು, ಭೀಕರ ವಸ್ತುಗಳು ಎಷ್ಟೊಂದು ಸಹಜವೆನಿಸಿಯಾವು, ತಮ್ಮ ಕಂದಮ್ಮಗಳು ಯುದ್ಧದ ಕೈಯಲ್ಲಿ ಹರಿಹಂಚಾದ್ದು ಕಂಡು ತಾಯಂದಿರು ನಸುನಕ್ಕಾರು: ಅನೀತಿ ಕಾರ್ಯಗಳು ಅಭ್ಯಾಸವಾಗಿ ಎಲ್ಲಾ ಕರುಣೆಯ ಕೊರಳು ಕಟ್ಟಿಹಾಕಿರುತ್ತ, ಹಾಗೂ ಸೀಸರನ ಜೀವಾತ್ಮ ಪ್ರತೀಕಾರಕ್ಕಾಗಿ ತಿರುಗುತ್ತ, ಮೃತ್ಯುದೇವತೆ ಅವನ ಪಕ್ಕದಲ್ಲಿ, ಈ ಪರಿಧಿಯೊಳಗೆ,ಸಾಮ್ರಾಟನ ಧ್ವನಿಯಲ್ಲಿ, ಸರ್ವನಾಶವ ಕರೆದೀತು.
ಆಗ ಈ ನೀಚಕಾಯಕ ನೆಲದ ಮೇಲೆ ವಾಸನೆ ಹೊಡೆಯುತ್ತದೆ, ಮನುಷ್ಯ ಕಳೇಬರಗಳು ದಫನಕ್ಕಾಗಿ ಗೋಗರೆಯುತ್ತ.
ಒಕ್ಟೇವಿಯಸ್‍ನ ಸೇವಕನ ಪ್ರವೇಶ…
ನೀನು ಒಕ್ಟೇವಿಯಸ್ ಸೀಸರನ ಚಾಕರಿಯವ ಅಲ್ಲವೇ?
ಸೇವಕ. ಹೌದು, ಮಾರ್ಕ್ ಆಂಟನಿ.
ಆಂಟನಿ. ಸೀಸರ್ ಅವನಿಗೆ ರೋಮಿಗೆ ಮರಳುವುದಕ್ಕೆ ಬರೆದಿದ್ದರು.
ಸೇವಕ. ಪತ್ರಗಳು ಅವರಿಗೆ ಸಿಕ್ಕಿವೆ, ಅವರು ಬರುತ್ತಿದ್ದಾರೆ. ನಿಮಗೆ ಮುಖತಾ ಹೇಳಲು ನನಗೆ ತಿಳಿಸಿದ್ದರು—
ಓ ಸೀಸರ್!
ಆಂಟನಿ. ನಿನ್ನ ಹೃದಯ ದೊಡ್ಡದು: ಬೇರೇ ಹೋಗಿ ಅತ್ತುಕೋ: ನಿನ್ನ ಕಣ್ಣುಗಳಲ್ಲಿ ನಿಂತ ದುಃಖದ ಹನಿಗಳು ಹರಿಯುವುದನ್ನು ಕಂಡು ನನ್ನ ಕಣ್ಣುಗಳು ತುಂಬುತ್ತಿವೆ. ನಿನ್ನ ಒಡೆಯರು ಬರುತ್ತಿರುವರೇ?
ಸೇವಕ. ಈ ರಾತ್ರಿ ಅವರು ರೋಮಿನಿಂದ ಏಳು ಹರದಾರಿ ದೂರ ಇರುತ್ತಾರೆ.
ಆಂಟನಿ. ಅವರಿಗೆ ತ್ವರೆಮಾಡಿ ಬರೆದು, ಏನಾಯಿತೆನ್ನುವುದನ್ನು ತಿಳಿಸು: ಇಲ್ಲಿರುವುದು ದುಃಖತಪ್ತ ರೋಮ್, ಗಂಡಾಂತರದ ರೋಮ್, ಒಕ್ಟೇವಿಯಸ್ ಸೀಸರನ ರಕ್ಷೆಗೆ ತಕ್ಕ ರೋಮ್ ಅಲ್ಲ. ತೆರಳು ಇಲ್ಲಿಂದ, ಹೀಗೆಂದು ತಿಳಿಸು.
ಆದರೆ ತಡೆ ಸ್ವಲ್ಪ, ಈ ಶವವನ್ನು ನಾನು ಪೇಟೆಚೌಕಕ್ಕೆ ಒಯ್ಯುವ ವರೆಗೆ ತೆರಳಬೇಡ: ಅಲ್ಲಿ ನಾನು ನನ್ನ ಭಾಷಣದಲ್ಲಿ ಈ ಕೊಲೆಗಡುಕರ ಕ್ರೂರ ಕಾರ್ಯವನ್ನು ಜನ ಹೇಗೆ ತೆಗೆದುಕೊಳ್ಳುತ್ತಾರೆಂದು ನೋಡುತ್ತೇನೆ, ಅದಕ್ಕೆ ಅನುಗುಣವಾಗಿ ನೀನು ಯುವ ಒಕ್ಟೇವಿಯಸ್‍ಗೆ ಈ ಸ್ಥಿತಿಗತಿಗಳ ಬಗ್ಗೆ ತಿಳಿಸಬೇಕು.
(ಸೀಸರನ ದೇಹ ಎತ್ತಿಕೊಂಡು ನಿಷ್ಕ್ರಮಣ)
ದೃಶ್ಯ 2
ಫೋರಮ್ ಅರ್ಥಾತ್ ಸಾರ್ವಜನಿಕ ಪ್ರಾಂಗಣ. ಬ್ರೂಟಸ್ ಪ್ರವೇಶಿಸಿ ವೇದಿಕೆಗೆ ಹೋಗುತ್ತಾನೆ, ಮತ್ತು ಜನಸಾಮಾನ್ಯರ ಜತೆ ಕೇಸಿಯಸ್ ಪ್ರವೇಶ..
ಜನಸಾಮನ್ಯರು. ನಮಗೆ ಸಮಾಧಾನ ಬೇಕು, ನಮಗೆ ಸಮಾಧಾನ ನೀಡಿ.
ಬ್ರೂಟಸ್. ಹಾಗಿದ್ದರೆ ನನ್ನನ್ನು ಹಿಂಬಾಲಿಸಿ, ಹಾಗೂ ನನಗೆ ಲಕ್ಷ್ಯ ಕೊಡಿ, ಮಿತ್ರರೆ. ಕೇಸಿಯಸ್, ನೀನು ಇನ್ನೊಂದು ಬೀದಿಗೆ
ಹೋಗು, ಈ ಜನರನ್ನು ಎರಡು ಮಾಡು; ನನ್ನ ಮಾತನ್ನು ಕೇಳಬಯಸುವವರು, ಅವರು ಇಲ್ಲಿ ಉಳಿಯಲಿ; ಕೇಸಿಯಸ್‍ನ
ಹಿಂಬಾಲಿಸುವವರು, ಹೋಗಿ, ಸೀಸರನ ಸಾವಿನ ಬಗ್ಗೆ ಸಾರ್ವಜನಿಕ ಕಾರಣಗಳ ನೀಡಲಾಗುವುದು.
ಜನ 1. ನಾನು ಬ್ರೂಟಸ್ ಮಾತಾಡುವುದನ್ನು ಕೇಳುವೆ.
ಜನ 2. ನಾನು ಕೇಸಿಯಸ್‍ನ ಕೇಳುವೆ, ಹಾಗೂ ಇವರ ಕಾರಣಗಳನ್ನು ಹೋಲಿಸಿನೋಡುವೆ, ಅವರನ್ನು ನಾವು ಬೇರೆ ಬೇರೆ ಕೇಳಿದಾಗ.
(ಕೆಲವು ಜನಸಾಮಾನ್ಯರ ಜತೆ ಕೇಸಿಯಸ್ ನಿಷ್ಕ್ರಮಣ)
ಜನ 3. ಶ್ರೇಷ್ಠ ಬ್ರೂಟಸ್ ವೇದಿಕೆ ಮೇಲೆ ಇದ್ದಾರೆ,ಸದ್ದು ಮಾಡದಿರಿ.
ಬ್ರೂಟಸ್. ತಾಳ್ಮೆಯಿಂದಿರಿ ಕೊನೆತನಕ.
ರೋಮನರೆ, ದೇಶವಾಸಿಗಳೆ, ಪ್ರೀತಿವಂತರೆ, ನನ್ನ ಕಾರಣಕ್ಕೋಸ್ಕರ ನನ್ನ ಮಾತನ್ನು ಆಲಿಸಿರಿ, ಹಾಗೂ ನನ್ನ ಮಾತು ಕೇಳುವುದಕ್ಕೆ ಮೌನದಿಂದಿರಿ. ನನ್ನ ಮರ್ಯಾದೆಗೋಸ್ಕರ ನನ್ನಲ್ಲಿ ನಂಬಿಕೆಯಿರಿಸಿ, ಹಾಗೂ ನನ್ನ ಮರ್ಯಾದೆಗೆ ಗೌರವ ನೀಡಿ,
ನೀವು ನಂಬಲಿಕ್ಕಾಗಿ. ನಿಮ್ಮ ವಿವೇಚನೆಯಲ್ಲಿ ನನ್ನನ್ನು ವಿಮರ್ಶಿಸಿರಿ, ಮತ್ತು ಎಚ್ಚರಗೊಳಿಸಿರಿ ನಿಮ್ಮ ವಿವೇಕವನ್ನು, ನೀವು ಚೆನ್ನಾಗಿ ತೀರ್ಮಾನಿಸುವುದಕ್ಕೆಂದು.
ಈ ಸಭೆಯಲಿ ಯಾರಾದರೂ ಇದ್ದರೆ, ಸೀಸರನ ಯಾವನೇ ಮಿತ್ರ, ನಾನವನಿಗೆ ಹೇಳುತ್ತೆನೆ, ಸೀಸರನ ಕುರಿತಾಗಿ ಬ್ರೂಟಸ್‍ನ ಪ್ರೀತಿ ಅವನಿಗಿಂತಲು ಏನೂ ಕಡಿಮೆಯದಾಗಿರಲಿಲ್ಲ. ಹಾಗಿದ್ದರೆ ಯಾಕೆ ಬ್ರೂಟಸ್ ಸೀಸರನ ವಿರುದ್ಧ ಎದ್ದು ನಿಂತ ಎಂದು ಆ ಮಿತ್ರ ಆಗ್ರಹಿಸಿ ಕೇಳಿದರೆ, ನನ್ನ ಉತ್ತರ ಇದು:
ಸೀಸರನನ್ನು ನಾನು ಕಡಿಮೆ ಪ್ರೀತಿಸಿದೆನೆಂದಲ್ಲ, ಆದರೆ ರೋಮನ್ನು ಹೆಚ್ಚು ಪ್ರೀತಿಸಿದೆನೆಂದು. ಸೀಸರ್ ಬದುಕಿ, ಉಳಿದವರೆಲ್ಲಾ ಸಾಯಬಯಸುತ್ತೀರಾ ಅಥವಾ ಸೀಸರ್ ಸತ್ತು ಉಳಿದವರೆಲ್ಲಾ ಸ್ವತಂತ್ರರಾಗಿ ಜೀವಿಸಬಯಸುತ್ತೀರಾ? ಸೀಸರ್ ನನ್ನನ್ನು ಪ್ರೀತಿಸಿದ ಕಾರಣ ನಾನು ಅಳುತ್ತೆನೆ; ಅವನು ಸೌಭಾಗ್ಯವಂತನಾದ್ದಕ್ಕೆ ಸಂತೋಷ ಪಡುತ್ತೇನೆ; ಅವನು ಧೀರನಾದ್ದಕ್ಕೆ ನಾನವನನ್ನು ಗೌರವಿಸುತ್ತೇನೆ: ಆದರೆ ಅವನು ಮಹತ್ವಾಕಾಂಕ್ಷಿಯಾದ್ದಕ್ಕೆ ನಾನವನನ್ನು ಕೊಂದೆ. ಕಂಬನಿಗಳಿವೆ ಅವನ ಪ್ರೀತಿಗೆ:
ಸಂತೋಷವಿದೆ ಅವನ ಸೌಭಾಗ್ಯಕ್ಕೆ: ಗೌರವವಿದೆ ಅವನ ಧೀರತೆಗೆ: ಮತ್ತು ಮೃತ್ಯುವಿದೆ ಅವನ ಮಹತ್ವಾಕಾಂಕ್ಷೆಗೆ.
ಯಾರಿದ್ದಾರೆ ಇಲ್ಲಿ ಜೀತದ ಆಳಾಗುವುದಕ್ಕೆ ತಯಾರಾಗಿ, ಅಷ್ಟೊಂದು ನಿಕೃಷ್ಟವಾಗಿ? ಇದ್ದರೆ ಮಾತಾಡಿ, ಯಾಕೆಂದರೆ ಅಂಥವನಿಗೆ ನಾನು ತಪ್ಪು ಮಾಡಿದ್ದೇನೆ. ಇಲ್ಲಿ ರೋಮನ್ ಆಗದೆ ಇರುವಷ್ಟು ಒರಟರು ಯಾರಿದ್ದಾರೆ, ಇದ್ದರೆ ಮಾತಾಡಿ,
ಯಾಕೆಂದರೆ ಅಂಥವರಿಗೆ ನಾನು ತಪ್ಪು ಮಾಡಿದ್ದೇನೆ: ಉತ್ತರಕ್ಕಾಗಿ ನಾನು ತಡೆದು ನಿಲ್ಲುತ್ತೇನೆ. [ಮೌನ]
ಎಲ್ಲರೂ. ಯಾರೂ ಇಲ್ಲ ಬ್ರೂಟಸ್, ಯಾರೂ ಇಲ್ಲ. ಬ್ರೂಟಸ್. ಹಾಗಿದ್ದರೆ ನಾನು ಯಾರಿಗೂ ತಪ್ಪು ಮಾಡಿಲ್ಲ,
ನಾನು ಸೀಸರನಿಗೆ ಹೆಚ್ಚೇನೂ ಮಾಡಿಲ್ಲ, ನೀವು ಬ್ರೂಟಸಿಗೆ ಮಾಡುವುದಕ್ಕಿಂತ. ಅವನ ಸಾವಿನ ಪ್ರಶ್ನೆ ಸಂಸದಿನ ಮುಂದೆ
ದಾಖಲಿಸಿದೆ. ಅವನ ಮಹಿಮೆಗೇನೂ ಕಡಿಮೆಯಾಗಿಲ್ಲ, ಅದಕ್ಕವನು ಯೋಗ್ಯನಾಗಿದ್ದವನೇ; ಅವನ ತಪ್ಪುಗಳನ್ನು ಶಿಕ್ಷಿಸಿದ್ದೂ ಇಲ್ಲ, ಅದಕ್ಕಾಗಿ ಅವನು ಸಾಯಬೇಕಾಯ್ತು.
ಸೀಸರನ ಶವದೊಂದಿಗೆ ಮಾರ್ಕ್ ಆಂಟನಿಯ ಪ್ರವೇಶ
ಇಲ್ಲಿ ಬರುತ್ತಿದೆ ಅವನ ದೇಹ, ಮಾರ್ಕ್ ಆಂಟನಿಯ ದುಃಖದೊಂದಿಗೆ, ಆಂಟನಿಗಾದರೆ ಅವನ ಸಾವಿನಲ್ಲಿ ಯಾವುದೇ ಕೈಯಿಲ್ಲ, ಆದರೂ ಆ ಸಾವಿನ ಫಲವನ್ನವನು ಅನುಭೋಗಿಸುತ್ತಾನೆ, ಎಂದರೆ ಗಣಕೂಟದಲ್ಲೊಂದು ಪಾಲನ್ನು, ಅದು ನಿಮ್ಮಲ್ಲಿ ಯಾರಿಗೂ ಸಿಗದೆ ಇರಬಹುದು. ಈ ಮಾತುಗಳೊಂದಿಗೆ ನಾನು ನಿರ್ಗಮಿಸುತ್ತೇನೆ, ರೋಮಿನ ಏಳಿಗೆಗಾಗಿ ನಾನು ನನ್ನ ಅತ್ಯುತ್ತಮ ಪ್ರೀತಿಪಾತ್ರನ ಕೊಂದಂತೆ, ನನಗೂ ಅದೇ ಕರವಾಳವಿದೆ, ನನ್ನ ದೇಶ ನನ್ನ ಮರಣವನ್ನು ಅಪೇಕ್ಷಿಸಿದಾಗ.
ಎಲ್ಲರೂ. ಜೀವಿಸಿರು ಬ್ರೂಟಸ್, ಜೀವಿಸಿರು, ಜೀವಿಸಿರು.
ಜನ 1. ಜಯಕಾರದೊಂದಿಗೆ ಅವನನ್ನು ಅವನ ಮನೆಗೆ ಕರೆತನ್ನಿ.
ಜನ 2. ಅವನ ವಂಶಜರ ಜತೆ ಅವನದೂ ಪುತ್ಥಳಿ ನಿಲ್ಲಿಸಿ.
ಜನ 3. ಅವನೇ ಸೀಸರನಾಗಲಿ.
ಜನ 4. ಸೀಸರನ ಉತ್ತಮಾಂಶಗಳು ಬ್ರೂಟಸಿನಲ್ಲಿ ಪಟ್ಟವೇರಬೇಕು.
ಜನ 1. ನಾವವನನ್ನು ಅವನ ಮನೆಗೊಯ್ಯುತ್ತೇವೆ,
ಘೋಷಣೆ, ಜಯಕಾರಗಳೊಂದಿಗೆ.
ಬ್ರೂಟಸ್. ನನ್ನ ದೇಶದ ಜನರೆ,
ಜನ 2. ಸದ್ದು ಮಾಡಬೇಡಿ, ಬ್ರೂಟಸ್ ಮಾತಾಡುತ್ತಿದ್ದಾರೆ.
ಜನ 1. ಸದ್ದು ಮಾಡಬೇಡಿರೋ.
ಬ್ರೂಟಸ್. ಸಜ್ಜನರೆ, ನನ್ನನ್ನು ಒಬ್ಬನೇ ಹೋಗಲು ಬಿಡಿ, ಮತ್ತು ನನಗೋಸ್ಕರ ಇಲ್ಲಿ ಆಂಟನಿಯ ಜತೆ ನಿಲ್ಲಿ. ಸೀಸರನ ಶವಕ್ಕೆ ಗೌರವ ಸಲ್ಲಿಸಿ, ಮತ್ತು ಸೀಸರನ ಗರಿಮೆಗಳ ಕುರಿತಾದ ಆಂಟನಿಯ ಮಾತಿಗೆ ಮನ್ನಣೆ ನೀಡಿ, ಮಾರ್ಕ್ ಆಂಟನಿಗೆ ಹಾಗೆ ಮಾತಾಡುವುದಕ್ಕೆ ಅನುಮತಿ ನೀಡಲಾಗಿದೆ. ನಾನು ನಿಮ್ಮಲ್ಲಿ ಕೋರುವುದೆಂದರೆ, ನಾನೊಬ್ಬನಲ್ಲದೆ ಇನ್ನು ಯಾರೂ ತೆರಳುವುದು ಬೇಡ, ಆಂಟನಿಯ ಮಾತು ಮುಗಿಯುವ ತನಕ. (ನಿಷ್ಕ್ರಮಣ)
ಜನ 1. ನಿಂತಿರೆಲೇ, ಮಾರ್ಕ್ ಆಂಟನಿಯ ಮಾತು ಕೇಳೋಣ.
ಜನ 2. ಅವನು ಸಾರ್ವಜನಿಕ ವೇದಿಕೆಗೆ ಹೋಗಲಿ,
ನಾವು ಅವನನ್ನು ಆಲಿಸುವೆವು: ಆಂಟನಿ ಮಹಾಶಯ, ಮೇಲಕ್ಕೆ ಹೋಗು.
ಆಂಟನಿ. ಬ್ರೂಟಸ್‍ಗೋಸ್ಕರ ನಾನು ನಿಮಗೆ ಆಭಾರಿಯಾಗಿದ್ದೇನೆ.
ಜನ 4. ಬ್ರೂಟಸ್‍ನ ಬಗ್ಗೆ ಆತ ಏನಂತಿದ್ದಾನೆ?
ಜನ 3. ಬ್ರೂಟಸ್‍ಗೋಸ್ಕರ ತಾನು ನಮಗೆಲ್ಲರಿಗೂ ಆಭಾರಿ ಅಂತಿದ್ದಾನೆ.
ಜನ 4. ಇಲ್ಲಿ ಅವನು ಬ್ರೂಟಸ್‍ನ ದೂಷಣೆ ಮಾಡದಿದ್ದರೆ ಕ್ಷೇಮ!
ಜನ 1. ಈ ಸೀಸರ್ ಒಬ್ಬ ಸರ್ವಾಧಿಕಾರಿಯಾಗಿದ್ದನಲೇ.
ಜನ 3. ಖಂಡಿತಾ. ರೋಮ್‍ನಿಂದ ಅವ ತೊಲಗಿದ್ದು ನಮಗೊಂದು ವರದಾನ.
ಜನ 2. ಮಾತಾಡಬೇಡಿ. ಆಂಟನಿ ಏನಂತಾನೆ ಕೇಳೋಣ.
ಆಂಟನಿ. ಸಾಧು ರೋಮನರೆ.
ಎಲ್ಲರೂ. ಸದ್ದು ಮಾಡ್ಬೇಡ್ರೋ, ಇವನ ಮಾತು ಕೇಳೋಣ.
ಆಂಟನಿ. ಗೆಳೆಯರೆ, ರೋಮನರೆ, ದೇಶವಾಸಿಗಳೆ, ನನ್ನ ಮಾತಿಗೆ ಕಿವಿಗೊಡಿ: ನಾನು ಬಂದಿರುವುದು ಸೀಸರನ ಹೂಳುವುದಕ್ಕೆ,
ಹೊಗಳುವುದಕ್ಕಲ್ಲ: ಮನುಷ್ಯರೆಸಗುವ ಕೆಡುಕು ಅವರು ಸತ್ತ ನಂತರವೂ ಬದುಕಿರುತ್ತದೆ, ಒಳಿತು ಸಾಮಾನ್ಯವಾಗಿ ಅವರ ಮೂಳೆಗಳ ಜತೆ ಹೂತುಹೋಗುತ್ತದೆ, ಆದ್ದರಿಂದ ಹಾಗೇ ಆಗಲಿ ಸೀಸರಿಗೂ. ಶ್ರೇಷ್ಠ ಬ್ರೂಟಸ್ ಎಂದರು ನಿಮಗೆ, ಸೀಸರ್ ಮಹತ್ವಾಕಾಂಕ್ಷಿಯಾಗಿದ್ದ ಎಂದು: ಆಗಿದ್ದರೆ ಅದೊಂದು ಘೋರ ಅಪರಾಧ, ಹಾಗೂ ಸೀಸರ್ ಅದಕ್ಕೆ ಘೋರವಾಗಿಯೇ ಉತ್ತರಿಸಿದ್ದಾನೆ ಇಲ್ಲಿ, ಬ್ರೂಟಸಿನ ಅನುಮತಿ ಮೇರೆಗೆ, ಹಾಗೂ ಇನ್ನಿತರರ ಅನುಮತಿ ಮೇರೆಗೆ ಸಹಾ—ಯಾಕೆಂದರೆ ಬ್ರೂಟಸ್ ಒಬ್ಬ ಮರ್ಯಾದಸ್ಥ, ಹಾಗೆಯೇ ಎಲ್ಲರೂ: ಎಲ್ಲರೂ ಮರ್ಯಾದಸ್ಥರೇ—ನಾನು ಸೀಸರನ ಶವಸಂಸ್ಕಾರದಲ್ಲಿ ಮಾತಾಡುವುದಕ್ಕೆ ಬಂದಿದ್ದೇನೆ.
ಸೀಸರ್ ನನ್ನ ಸ್ನೇಹಿತರಾಗಿದ್ದರು, ನಿಷ್ಠಾವಂತರು ಹಾಗೂ ನನ್ನ ಮಟ್ಟಿಗೆ ನ್ಯಾಯವಂತರು; ಆದರೆ ಬ್ರೂಟಸ್ ಅನ್ನುತ್ತಾರೆ
ಸೀಸರ್ ಮಹತ್ವಾಕಾಂಕ್ಷಿಯಂದು ಹಾಗೂ ಬ್ರೂಟಸ್ ಒಬ್ಬ ಮರ್ಯಾದಸ್ಥ ವ್ಯಕ್ತಿ; ಸೀಸರ್ ರೋಮಿಗೆ ಅನೇಕ ಬಂದಿಗಳನ್ನು
ಕರೆತಂದಿದ್ದಾರೆ, ಅವರುಗಳ ಒತ್ತೆ ಹಣ ಸರಕಾರದ ಬೊಕ್ಕಸವನ್ನು ತುಂಬಿದೆ: ಇದು ಸೀಸರನಲ್ಲಿ ಮಹತ್ವಾಕಾಂಕ್ಷೆಯಂದು ತೋರಿತೆ?
ಬಡವರು ಕೂಗಿದಾಗ ಸೀಸರ್ ಅತ್ತಿದ್ದರು: ಮಹತ್ವಾಕಾಂಕ್ಷಿಗಳು ಇದಕ್ಕಿಂತ ಕಠಿಣ, ಆದರೂ ಬ್ರೂಟಸ್ ಹೇಳುತ್ತಾರೆ ಆತ
ಮಹತ್ವಾಕಾಂಕ್ಷಿಯಂದು; ಹಾಗೂ ಬ್ರೂಟಸ್ ಒಬ್ಬ ಮರ್ಯಾದಸ್ಥ ವ್ಯಕ್ತಿ. ನೀವೆಲ್ಲಾ ನೋಡಿದ್ದೀರಿ ಲೂಪರ್ಕಾಲ್ ಉತ್ಸವದಲ್ಲಿ ನಾನು ಸೀಸರಿಗೆ ಮೂರು ಸಲ ರಾಜಮಕುಟ ನೀಡಿದ್ದು, ಮೂರುಸಲವೂ ಅವರದನ್ನು ನಿರಾಕರಿಸಿದ್ದರು.
ಮಹತ್ವಾಕಾಂಕ್ಷೆಯಾಗಿತ್ತೆ ಅದು?
ಆದರೂ ಬ್ರೂಟಸ್ ಹೇಳುತ್ತಾರೆ ಸೀಸರ್ ಮಹತ್ವಾಕಾಂಕ್ಷಿಯಂದು :
ಖಂಡಿತಾ ಬ್ರೂಟಸ್ ಒಬ್ಬ ಮರ್ಯಾದಸ್ಥ ವ್ಯಕ್ತಿ. ನಾನು ಬ್ರೂಟಸ್ ಹೇಳಿದ್ದನ್ನು ವಿರೋಧಿಸುವುದಕ್ಕೆ ಹೇಳುತ್ತಾ ಇಲ್ಲ. ಬದಲು ನಾನಿಲ್ಲಿರುವುದು ನನಗೆ ಗೊತ್ತಿರುವುದನ್ನು ಹೇಳುವುದಕ್ಕೆ, ನೀವೆಲ್ಲರೂ ಸೀಸರ್‍ನನ್ನು ಪ್ರೀತಿಸುತ್ತಿದ್ದಿರಿ ಒಮ್ಮೆ, ಕಾರಣವಿಲ್ಲದೆ ಅಲ್ಲ,
ಯಾವ ಕಾರಣ ತಡೆಯುತ್ತಿದೆ ಹಾಗಿದ್ದರೆ ನಿಮ್ಮನ್ನು ಅವರಿಗೋಸ್ಕರ ಶೋಕಿಸುವುದಕ್ಕೆ? ಓ ನ್ಯಾಯವೇ, ನೀನು ಕ್ರೂರಿ ಹೃದಯಗಳಿಗೆ ಸಾಗಿರುವಿ, ಹಾಗೂ ತಮ್ಮ ತಮ್ಮ ವಿವೇಕ ಕಳೆದುಕೊಂಡಿದ್ದಾರೆ ಜನರು.
ಕ್ಷಮಿಸು ನನ್ನನ್ನು, ನನ್ನ ಹೃದಯ ಸೀಸರನೊಂದಿಗೆ ಅಲ್ಲಿ ಶವಪೆಟ್ಟಿಗೆಯಲ್ಲಿದೆ, ಹಾಗೂ ನಾನು ತಡೆಯುವೆ ಅದು ನನಗೆ ಮರಳುವ ವರೆಗೆ. [ಮೌನ]
ಜನ 1. ನನಗನಿಸ್ತದೆ ಅವನು ಹೇಳೋದರಲ್ಲಿ ಸಾಕಷ್ಟು ತರ್ಕವಿದೆ ಅಂತ.
ಜನ 2. ನಿಜವಾಗಿ ನೋಡಿದರೆ ಸೀಸರಿಗೆ ತುಂಬಾ ಅನ್ಯಾಯವಾಗಿದೆ.
ಜನ 3. ಅವನ ಮೀರೋರು ಇದ್ದಾರಾ? ನನಗನಿಸುತ್ತೆ ಅವನ ಜಾಗದಲ್ಲಿ ಅವನಿಗಿಂತ್ಲು ನೀಚನೊಬ್ಬ ಬಂದಾನು.
ಜನ 4. ಅವನ ಮಾತು ಕೇಳಿದಿಯಾ? ಸೀಸರ್ ಕಿರೀಟ ತೆಗೊಳ್ಳೋದಕ್ಕೇ ಒಪ್ಪಲಿಲ್ಲ ಅಂತ. ಆದ್ದರಿಂದ ಅವನು ಮಹತ್ವಾಕಾಂಕ್ಷಿಯಾಗಿರ್ಲಿಲ್ಲ ಅನ್ನೋದು ನಿಶ್ಚಯ.
ಜನ 1. ಅದು ಗೊತ್ತಾದರೆ ಕೆಲವರದನ್ನು ಮನಸಾರೆ ಒಪ್ಪಬಹುದು.
ಜನ 2. ಪಾಪ, ಅವನ ಕಣ್ಣುಗಳು ಅತ್ತು ಕೆಂಪಾಗಿವೆ ಕಂಡದ ಹಾಗೆ.
ಜನ 3. ರೋಮಿನಲ್ಲಿ ಆಂಟನಿಗಿಂತ ಶ್ರೇಷ್ಠ ಇನ್ನೊಬ್ಬ ಜನ ಇಲ್ಲ.
ಜನ 4. ಈಗ ನೋಡು, ಅವನು ಮತ್ತೆ ಮಾತಾಡಲು ಸುರುಮಾಡುತ್ತಾನೆ.
ಆಂಟನಿ. ನಿನ್ನೆಯಷ್ಟೇ ಸೀಸರನ ಮಾತು ಜಗತ್ತಿನೆದುರು ನಿಲ್ಲುತ್ತಿತ್ತು: ಈಗ ಅವನಿಲ್ಲಿ ಮಲಗಿದ್ದಾನೆ, ಮತ್ತು ಅವನಿಗೆ ಗೌರವ ತೋರಲು ಜನರೇ ಇಲ್ಲ. ಓ ಪ್ರಭುಗಳೇ!
ನಿಮ್ಮ ಹೃದಯ ಮನಸ್ಸುಗಳನ್ನು ಕಲಕಿ, ದಂಗೆ ಮತ್ತು ಆಕ್ರೋಶಕ್ಕೆ ಎಬ್ಬಿಸುವಂಥ ಮನುಷ್ಯ ನಾನಾಗಿದ್ದರೆ, ಬ್ರೂಟಸಿಗೆ ನಾನು ಅನ್ಯಾಯ ಮಾಡಿದಂತಾಗುತ್ತದೆ, ಮತ್ತು ಕೇಸಿಯಸಿಗೆ ಕೂಡ ಅನ್ಯಾಯ ಮಾಡಿದಂತೆ:
ಅವರು, ನಿಮಗೆಲ್ಲಾ ಗೊತ್ತು, ಮರ್ಯಾದಸ್ಥ ಜನರು, ನಾನವರಿಗೆ ಅನ್ಯಾಯ ಮಾಡಲಾರೆ: ಸತ್ತವರಿಗೆ ಅನ್ಯಾಯ ಮಾಡಿಯೇನು, ಹಾಗೂ ನನಗೆ ಮತ್ತು ನಿಮಗೆ ಅನ್ಯಾಯ ಮಾಡಿಯೇನು, ಅಂಥ ಮರ್ಯಾದಸ್ಥರಿಗೆ ಅನ್ಯಾಯ ಮಾಡುವುದಕ್ಕಿಂತ. ಆದರೆ ಇಲ್ಲೊಂದು ಕಡತವಿದೆ, ಅದಕ್ಕೆ ಸೀಸರನ ಮುದ್ರೆಯೊತ್ತಿದೆ, ನನಗಿದು ಸೀಸರರ ಕವಾಟದಲ್ಲಿ ದೊರಕಿತು, ಇದು ಅವರ ವೀಲ್ನಾಮೆ:
ಪ್ರಜಾಜನರು ಕೇಳಿದರೆ ಸಾಕು ಈ ಹೇಳಿಕೆಯನ್ನು, ಆದರೆ ಕ್ಷಮಿಸಬೇಕು, ನಾನಿದನ್ನು ಓದಿಹೇಳಲು ಬಯಸುವುದಿಲ್ಲ,
ಕೇಳಿದರೆ ಜನ ಬಂದು ಸತ್ತ ಸೀಸರನ ಗಾಯಗಳನ್ನು ಚುಂಬಿಸುತ್ತಾರೆ; ಹೌದು, ನೆನಪಿಗೋಸ್ಕರ ಅವರ ಕೂದಲೆಳೆಗಾಗಿ ಯಾಚಿಸುತ್ತಾರೆ. ಹಾಗೂ ತಾವು ಸಾಯುವ ಕಾಲದಲ್ಲಿ ತಮ್ಮ ಉಯಿಲಲ್ಲಿ ಅದನ್ನು ಹೆಸರಿಸುತ್ತಾರೆ, ತಮ್ಮ ಮಕ್ಕಳಿಗೊಂದು ಅಮೂಲ್ಯ ಬಳುವಳಿಯಾಗಿ.
ಜನ 4. ವೀಲ್ನಾಮೆಯನ್ನು ನಾವು ಕೇಳಬೇಕು, ಅದನ್ನು ಓದು ಮಾರ್ಕ್ ಆಂಟನಿ.
ಎಲ್ಲರೂ. ವೀಲ್ನಾಮೆ, ವೀಲ್ನಾಮೆ, ನಾವು ಸೀಸರನ ವೀಲ್ನಾಮೆಯನ್ನು ಕೇಳ್ಬೇಕು.
ಆಂಟನಿ. ತಾಳ್ಮೆಯಿರಲಿ, ಸಾಧು ಮಿತ್ರರೆ, ನಾನದನ್ನು ಓದಕೂಡದು. ಸೀಸರ್ ನಿಮ್ಮನ್ನು ಅದೆಷ್ಟು ಪ್ರೀತಿಸಿದನೆಂದು ನೀವು ತಿಳಿಯುವುದು ತರವಲ್ಲ: ನೀವೇನು ಮರವಲ್ಲ, ಕಲ್ಲಲ್ಲ, ಕೇವಲ ಮನುಷ್ಯರು. ಮತ್ತು ಮನುಷ್ಯರಾಗಿರುತ್ತ, ಸೀಸರರ ವೀಲ್ನಾಮೆ ಕೇಳುವುದೆಂದರೆ, ಅದು ನಿಮ್ಮನ್ನು ಸುಟ್ಟೀತು, ಅದು ನಿಮಗೆ ಹುಚ್ಚು ಹಿಡಿಸೀತು: ನೀವವರ ವಾರಸುದಾರರೆಂದು ನಿಮಗೆ ತಿಳಿಯದಿರುವುದೆ ಒಳ್ಳೆಯದು, ಯಾಕೆಂದರೆ ತಿಳಿದರೆ ಅದರ ಪರಿಣಾಮ ಏನಾದೀತು?
ಜನ 4. ವೀಲ್ನಾಮೆ ಓದು, ನಾವದನ್ನು ಕೇಳ್ತೇವೆ
ಆಂಟನಿ: ನೀನು ವೀಲ್ನಾಮೆ ಓದ್ಲೆ ಬೇಕು, ಸೀಸರನ ವೀಲ್ನಾಮೆ.
ಆಂಟನಿ. ನೀವು ತಾಳ್ಮೆಯಿಂದಿರುವಿರಾ? ಸ್ವಲ್ಪ ಹೊತ್ತು? ಅದರ ಬಗ್ಗೆ ನಾನು ನಿಮಗೆ ಮುಂದಾಗಿ ಹೇಳಿಬಿಟ್ಟೆ: ನಾನು ಮರ್ಯಾದಸ್ಥ ಮನುಷ್ಯರಿಗೆ ಅನ್ಯಾಯ ಮಾಡುತ್ತಿದ್ದೇನೆ ಅಂತ ನನಗೆ ಭಯವಾಗುತ್ತಿದೆ. ಅವರ ಖಡ್ಗಗಳು ಸೀಸರನನ್ನು ತಿವಿದುವೊ: ನನಗೆ ನಿಜಕ್ಕೂ ಭಯವಾಗುತ್ತಿದೆ.
ಜನ 4. ಅವರು ದ್ರೋಹಿಗಳು, ಮರ್ಯಾದಸ್ಥರೇ? ಎಲ್ಲರೂ. ವೀಲ್ನಾಮೆ, ದಾಖಲೆ ಪತ್ರ.
ಜನ 2. ಅವರು ದುಷ್ಟರು, ಕೊಲೆಗಡುಕರು:ವೀಲ್ನಾಮೆ, ವೀಲ್ನಾಮೆ ಓದಿ.
ಆಂಟನಿ. ಹಾಗಿದ್ದರೆ ವೀಲ್ನಾಮೆ ಓದುವುದಕ್ಕೆ ನೀವು ನನ್ನನ್ನು ಒತ್ತಾಯಿಸುತ್ತಿದ್ದೀರಿ ಎಂದಾಯಿತು. ಹಾಗಿದ್ದರೆ ಸೀಸರರ ಶವದ ಸುತ್ತಲೂ ವರ್ತುಲಾಕಾರದಲ್ಲಿ ನಿಲ್ಲಿ, ವೀಲು ಮಾಡಿದವನನ್ನು ನಾನು ತೋರಿಸುತ್ತೇನೆ ನಿಮಗೆ:
ನಾನು ಕೆಳಗಿಳಿಯಲೇ? ಇಳಿದು ಬರಲು ನೀವು ನನಗೆ ಸಮ್ಮತಿ ನೀಡುವಿರಾ?
ಎಲ್ಲರೂ. ಕೆಳಕ್ಕಿಳೀರಿ.
ಜನ 2. ಇಳೀರಿ.
ಜನ 3. ನಿಮಗೆ ನಮ್ಮ ಸಮ್ಮತಿಯಿದೆ.
ಜನ 4. ವರ್ತುಲದ ಸುತ್ತಾ ನಿಲ್ಲಿ.
ಜನ 1. ಚಟ್ಟದಿಂದ ದೂರ ನಿಲ್ಲಿ, ಶವದಿಂದ ದೂರ ನಿಲ್ಲಿ.
ಜನ 2. ಆಂಟನಿಗೆ ಜಾಗ ಬಿಡಿ, ಸರ್ವಶ್ರೇಷ್ಠ ಆಂಟನಿಗೆ.
ಆಂಟನಿ. ನನ್ನ ಮೇಲೆ ಮುಗಿಬೀಳಬೇಡಿ, ದೂರ ನಿಲ್ಲಿ. ಎಲ್ಲರೂ. ಹಿಂದೆ ನಿಲ್ಲಿ: ಜಾಗ ಬಿಡಿ, ಹಿಂದೆ ಸರೀರಿ.
ಆಂಟನಿ. ನಿಮ್ಮಲ್ಲಿ ಕಣ್ಣೀರಿದ್ದರೆ, ಸುರಿಸುವುದಕ್ಕೆ ಸಿದ್ಧರಾಗಿ. ನೀವೆಲ್ಲರೂ ಬಲ್ಲಿರಿ ಈ ಶಲ್ಯವನ್ನು, ಸೀಸರ್ ಇದನ್ನು ಮೊತ್ತಮೊದಲು ಧರಿಸಿದ್ದು ನನಗೆ ನೆನಪಿದೆ, ಅದೊಂದು ಬೇಸಿಗೆಯ ಸಂಜೆ ಅವರ ಡೇರೆಯಲ್ಲಿ, ಆದಿನ ಅವರು ನೆರ್ವಿಗಳನ್ನು ಯುದ್ಧದಲ್ಲಿ
ಪರಾಭವಗೊಳಿಸಿದ್ದರು. ನೋಡಿ, ಈ ಜಾಗದಲ್ಲಿ ಕೇಸಿಯಸ್‍ನ ಕರವಾಳ ಹಾಯಿತು: ಮತ್ಸರಿ ಕಾಸ್ಕಾ ಎಂಥಾ ಘಾಯ ಮಾಡಿದ ನೋಡಿ: ಈ ಜಾಗವಾಗಿ, ಪ್ರೀತಿಪಾತ್ರ ಬ್ರೂಟಸ್ ತಿವಿದ, ಹಾಗೂ ಆತ ತನ್ನ ಪಾಪಿಷ್ಠ ಖಡ್ಗವ ಹಿಂದಕ್ಕೆ ಎಳೆದುಕೊಳ್ಳುತ್ತಲೇ ಸೀಸರನ ರಕ್ತ ಹೇಗೆ ಅದನ್ನು ಹಿಂಬಾಲಿಸಿತು ನೋಡಿ, ರಾಜಿ ಮಾಡಿಕೊಳ್ಳುವುದಕ್ಕೆಂದು ಬಾಗಿಲಿನಿಂದ ಹಿಂಬಾಲಿಸಿದ ಹಾಗೆ,
ಬ್ರೂಟಸ್ ಅದೆಷ್ಟು ನಿಷ್ಕರುಣೆಯಿಂದ ಬಡಿಯಲಿ, ಬಡಿಯದಿರಲಿ. ಯಾಕೆಂದರೆ, ಬ್ರೂಟಸ್ ನಿಮಗೆ ಗೊತ್ತು,
ಸೀಸರರ ಸಾಕ್ಷಾತ್ ದೇವದೂತನೆ ಆಗಿದ್ದ. ಓ ದೈವಗಳೇ, ನೀವು ತೀರ್ಮನಿಸಿರಿ, ಸೀಸರ್ ಅದೆಷ್ಟು ಕಕ್ಕುಲತೆಯಿಂದ
ಪ್ರೀತಿಸಿದ್ದರು ಅವನನ್ನು: ಇದು ಎಲ್ಲದರಲ್ಲಿ ಅತಿ ಕರುಣಾಜನಕ ತಿವಿತ. ಯಾಕೆಂದರೆ ಸೀಸರ್ ಅವನು ತಿವಿಯುವುದನ್ನು ಕಂಡಾಗ, ಕೃತಘ್ನತೆ, ದ್ರೋಹಿಗಳ ಆಯುಧಗಳಿಗಿಂತಲೂ ಬಲಿಷ್ಠವಾದ್ದು, ಅಂಥ ಕೃತಘ್ನತೆ ಸೀಸರರನ್ನು ಸಂಪೂರ್ಣ ನೆಲಕಚ್ಚಿಸಿತು.
ಆಮೇಲೆ ಅವರ ಮಹಾನ್ ಹೃದಯ ಒಡೆಯಿತು, ಹಾಗೂ ತನ್ನ ಅಂಗವಸ್ತ್ರದಲ್ಲಿ ಮುಖಮುಚ್ಚಿ, ಪಾಂಪಿಯ ಪ್ರತಿಮೆಯ
ಬುಡದಲ್ಲೆ, ಆ ಹೃದಯದಿಂದ ಇಡೀ ವೇಳೆ ರಕ್ತ ಸ್ರವಿಸಿ, ಮಹಾಸೀಸರ್ ಕೆಳಬಿದ್ದರು. ಆಗ ನಾನೂ, ನೀವೂ, ನಾವೆಲ್ಲರೂ
ಕೆಳಬಿದ್ದೆವು, ನಮ್ಮ ಮೇಲೆ ರಕ್ತರಂಜಿತ ಷಡ್ಯಂತ್ರ ಗೆಲುವು ಸಾಧಿಸಿದ ವೇಳೆ ಅದು. ಓ ಈಗ ನೀವು ಅಳುತ್ತಿದ್ದೀರಿ,
ಕರುಣೆಯ ಕಣವನ್ನು ನೀವು ಅನುಭವಿಸುತ್ತಿರುವುದು ನನಗೆ ಕಾಣಿಸುತ್ತಿದೆ: ಇವು ದಯಾಪೂರ್ಣ ಹನಿಗಳು. ದಯಾವಂತ
ಜೀವಗಳೇ, ಅದೇನು ಅಳುವಿರೋ, ನಮ್ಮ ಸೀಸರನ ಉಡುಗೆ ಗಾಯಗೊಂಡದ್ದನ್ನು ನೋಡಿದಾಗ? ಇಲ್ಲಿ ನೋಡಿ,
ಇಲ್ಲಿ ಅವರು ಖುದ್ದಾಗಿ ಇದ್ದಾರೆ, ವಂಚಕರಿಂದ ಹತಕ್ಷತರಾಗಿ.
ಜನ 1. ಓ ದಾರುಣ ದೃಶ್ಯವೇ!
ಜನ 2. ಓ ಶ್ರೇಷ್ಠ ಸೀಸರ್!
ಜನ 3. ಓ ದುರು ದಿನವೇ!
ಜನ 4. ಎಲಾ ವಂಚಕರೇ, ದುಷ್ಟರೇ!
ಜನ 1. ಎಂಥಾ ರಕ್ತಮಯ ದೃಶ್ಯ!
ಜನ 2. ನಾವು ಪ್ರತೀಕಾರ ತೀರಿಸದೆ ಬಿಡೆವು. ಪ್ರತೀಕಾರ, ಹಿಂತಿರುಗಿ, ಹುಡುಕಿ, ಉರಿಸಿ, ಬೆಂಕಿಯಿಡಿ, ಕೊಲ್ಲಿರಿ, ಕೊಚ್ಚಿರಿ, ಒಬ್ಬನೇ ಒಬ್ಬ ವಂಚಕ ಸಹಾ ಉಳೀಬಾರದು.
ಆಂಟನಿ. ತಡೆಯಿರಿ, ಪ್ರಜೆಗಳೇ.
ಜನ 1. ಗಲಾಟೆ ಮಾಡ್ಬೇಡಿ, ಆಂಟನಿ ಮಹಾಶಯ ಹೇಳೋದನ್ನು ಕೇಳ್ರಿ.
ಜನ 2. ಅವನು ಹೇಳೋದನ್ನ ನಾವು ಕೇಳುವೆವು, ಅವನನ್ನು ನಾವು ಹಿಂಬಾಲಿಸುವೆವು, ಅವನ ಜತೆ ನಾವು ಸಾಯಲು ತಯಾರು.
ಆಂಟನಿ. ಸನ್ಮಿತ್ರರೆ, ಜಾಣ ಮಿತ್ರರೆ, ಅಂಥ ಕ್ಷಿಪ್ರ ಬಂಡಾಯದ ಭರಕ್ಕೆ ನಾನು ನಿಮ್ಮನ್ನು ಬಡಿದೆಬ್ಬಿಸುವುದು ಬೇಡ: ಈ ಕೃತ್ಯವನ್ನು ಯಾರು ಎಸಗಿದ್ದಾರೋ ಅವರು ಮರ್ಯಾದಸ್ಥರು. ಇದನ್ನವರು ಎಸಗುವಂತೆ ಮಾಡುವುದಕ್ಕೆ ಅವರಿಗೇನು ಖಾಸಗಿ ದುಃಖಗಳೀದ್ದುವೋ ನನಗೆ ತಿಳಿಯದು ದೇವರೇ: ಅವರು ವಿವೇಕಿಗಳು ಮತ್ತು ಮರ್ಯಾದಸ್ಥರು, ಮತ್ತು ಸಕಾರಣ ನಿಮಗೆ ಉತ್ತರ ಕೊಡುತ್ತಾರೆ ಎನ್ನುವುದರಲ್ಲಿ ನನಗೆ ಸಂದೇಹವಿಲ್ಲ. ಮಿತ್ರರೆ, ನಾನು ಬಂದುದು ನಿಮ್ಮ ಹೃದಯ ಕದಿಯುವುದಕ್ಕಲ್ಲ, ನಾನೊಬ್ಬ ಮಾತುಗಾರನೂ ಅಲ್ಲ, ಬ್ರೂಟಸ್‍ನಂತೆ: ಆದರೆ, ನಿಮಗೆಲ್ಲರಿಗೂ ನನ್ನನ್ನು ಗೊತ್ತಿದೆ, ನಾನು ನನ್ನ ಗೆಳೆಯನನ್ನು ಪ್ರೀತಿಸುವ ಒಬ್ಬ ಸರಳ ನೇರಮಾತಿನ ವ್ಯಕ್ತಿ; ಹಾಗೂ ಇದು ನನಗವರ ಕುರಿತು ಮಾತನಾಡುವುದಕ್ಕೆ ಸಾರ್ವಜನಿಕ ಸಮ್ಮತಿ ನೀಡಿದ ಆ
ಜನಕ್ಕೂ ಗೊತ್ತಿದೆ: ಯಾಕೆಂದರೆ ಜನರ ರಕ್ತ ಕದಡುವುದಕ್ಕೆ ನನಗೆ ಅನುಮತಿಯಿಲ್ಲ, ಪದವಿಲ್ಲ, ಬೆಲೆಯಿಲ್ಲ, ಕಾರ್ಯವಿಲ್ಲ,
ಮಾತಿಲ್ಲ, ಮಾತಿನ ಶಕ್ತಿಯೂ ಇಲ್ಲ.
ನಾನು ನೇರ ಮಾತಾಡುವೆ: ನಿಮಗೆ ಗೊತ್ತಿರುವುದನ್ನೇ ನಿಮಗೆ ಹೇಳುವೆ, ಪ್ರಿಯ ಸೀಸರನ ಗಾಯಗಳನ್ನು ನಿಮಗೆ ತೋರಿಸುವೆ, ಬಡಪಾಯಿ ಮೂಕ ಬಾಯಿಗಳು, ನಾನವುಗಳಿಗೆ ನನ್ನ ಪರವಾಗಿ ಮಾತಾಡಲು ಹಚ್ಚುವೆ:
ಆದರೆ ನಾನು ಬ್ರೂಟಸ್ ಆಗಿ, ಬ್ರೂಟಸ್ ಆಂಟನಿ- ಯಾಗಿರುತ್ತಿದ್ದರೆ, ಒಬ್ಬ ಆಂಟನಿಯಿರುತ್ತಿದ್ದ ನಿಮ್ಮ ಭಾವನೆಗಳನ್ನು ಕೆರಳಿಸುವುದಕ್ಕೆ, ಹಾಗೂ ಸೀಸರನ ಒಂದೊಂದು ಗಾಯಕ್ಕೂ ಒಂದೊಂದು ನಾಲಿಗೆ ನೀಡಿ ರೋಮಿನ ಕಲ್ಲುಗಳನ್ನು ದಂಗೆಗೆ ಬಡಿದೆಬ್ಬಿಸುವಂಥ ವ್ಯಕ್ತಿ.
ಎಲ್ಲರೂ. ನಾವು ದಂಗೆಯೇಳುತ್ತೇವೆ.
ಜನ 1. ನಾವು ಬ್ರೂಟಸ್‍ನ ಮನೆಗೆ ಬೆಂಕಿ ಹಚ್ಚುತ್ತೇವೆ.
ಜನ 3. ಹೊರಡಿ ಹಾಗಿದ್ರೆ, ಪಿತೂರಿಕೋರರ ಪತ್ತೆ ಹಚ್ಚೋಣ.
ಆಂಟನಿ. ಆದರೆ ನನ್ನ ಮಾತು ಕೇಳಿ, ಪ್ರಜಾಜನರೇ, ನಾನು ಹೇಳುವುದನ್ನು ಕೇಳಿ. ಎಲ್ಲರೂ. ಶಾಂತಿ, ಓಹೋ, ಆಂಟನಿ ಹೇಳೋದನ್ನ ಕೇಳ್ರೋ, ಉತ್ತಮರಲ್ಲಿ ಉತ್ತಮ ಆಂಟನಿ.
ಆಂಟನಿ. ಯಾಕೆ, ಗೆಳೆಯರೇ, ನೀವು ಏನು ಮಾಡುವುದಕ್ಕೆ ಹೊರಟಿದ್ದೀರೋ ನನಗೆ ಗೊತ್ತಿಲ್ಲ: ನಿಮ್ಮ ಪ್ರೀತಿ ಗಳಿಸುವುದಕ್ಕೆ
ಸೀಸರ್ ಮಾಡಿದ್ದಾದರೂ ಏನು? ದೇವರೆ, ನಿಮಗೆ ತಿಳಿಯದು, ನಾನೇ ಹೇಳಬೇಕು ಹಾಗಿದ್ದರೆ: ನಾನಂದ ವೀಲ್ನಾಮೆಯನ್ನು
ನೀವು ಮರೆತಿದ್ದೀರಿ.
ಎಲ್ಲರೂ. ಖಂಡಿತವಾಗಿ, ನಿಂತು ವೀಲ್ನಾಮೆ ಕೇಳೋಣ.
ಆಂಟನಿ. ಇಲ್ಲಿದೆ ವೀಲುನಾಮೆ, ಸೀಸರಿನ ಮೊಹರಿನ ಕೆಳಗೆ. ಪ್ರತಿಯೊಬ್ಬ ರೋಮನಿಗೂ ಅವರು ನೀಡುತ್ತಾರೆ, ಒಬ್ಬೊಬ್ಬನಿಗೂ
ಪ್ರತ್ಯೇಕ, ಎಪ್ಪತ್ತೈದು ಪವನು.
ಜನ 2. ಅತಿ ಶ್ರೇಷ್ಠ ಸೀಸರ್, ನಾವವನ ಕೊಲೆಗೆ ಪ್ರತೀಕಾರ ಬೀಡುವೆವು.
ಜನ 3. ಓ ರಾಜ ಸೀಸರ್!
ಆಂಟನಿ. ತಾಳ್ಮೆಯಿಂದ ನನ್ನ ಮಾತು ಕೇಳಿರಿ.
ಎಲ್ಲರೂ. ಶಾಂತಿ ಓಹೋ.
ಆಂಟನಿ. ಮಾತ್ರವಲ್ಲದೆ ತಮ್ಮೆಲ್ಲಾ ಪಥಗಳನ್ನೂ, ಖಾಸಗಿ ಉದ್ಯಾನಗಳನ್ನೂ, ಟೈಬರಿನ ಈಚೆ ಹೊಸದಾಗಿ ಗಿಡ ನೆಟ್ಟ ತೋಟಗಳನ್ನೂ, ನಿಮಗೆ ಬಿಟ್ಟಿದ್ದಾರೆ, ನಿಮಗೂ ನಿಮ್ಮ ಪೀಳಿಗೆಗೂ ಆಚಂದ್ರಾರ್ಕವಾಗಿ: ನಡೆದಾಡಿ ಸುಖಿಸುವುದಕ್ಕೆ , ಸಾರ್ವಜನಿಕ ತಾಣಗಳಾಗಿ. ಇದಾಗಿದ್ದರು ಸೀಸರ್! ಇಂಥ ಇನ್ನೊಬ್ಬ ಬರುವುದು ಯಾವಾಗ?
ಜನ 1. ಎಂದಿಗೂ ಇಲ್ಲ: ಬನ್ನಿ ಹೋಗೋಣ, ಹೋಗೋಣ, ನಾವವನ ಶವವನ್ನು ಪವಿತ್ರ ಸ್ಥಳದಲ್ಲಿ ದಹಿಸುತ್ತೇವೆ,
ಅದೇ ಬೆಂಕಿಯಲ್ಲಿ ವಂಚಕರ ಮನೆಗಳನ್ನೂ ಸುಡುತ್ತೇವೆ.
ದೇಹವನ್ನು ಎತ್ತಿಕೊಳ್ಳೀರಿ.
ಜನ 2. ಹೋಗಿ ಬೆಂಕಿ ತಗೊಂಡ್ಬನ್ನಿ.
ಜನ 3. ಹಲಗೆಗಳನ್ನು ಮುರೀರಿ.
ಜನ 4. ಮುರೀರಿ ಪರದೆಗಳನ್ನು, ಕಿಟಿಕಿಗಳನ್ನು, ಏನನ್ನಾದ್ರೂ.
(ಸೀಸರನ ದೇಹದೊಂದಿಗೆ ಜನಸಾಮಾನ್ಯರ ನಿಷ್ಕ್ರಮಣ)
ಆಂಟನಿ. ಈಗ ಇದು ಕೆಲಸ ಮಾಡಲಿ: ತರಲೆಯೇ, ನೀನೀಗ ಅಡಿಯಿಟ್ಟಿರುವಿ, ಬೇಕಾದ ದಾರಿ ತೆಗೆದುಕೋ. ಏನಯ್ಯಾ ಈಗ?
ಒಕ್ಟೇವಿಯಸ್‍ನ ಸೇವಕನ ಪ್ರವೇಶ
ಸೇವಕ. ಸ್ವಾಮಿ, ಒಕ್ಟೇವಿಯಸ್ ರೋಮಿಗೆ ಬಂದಿದ್ದಾರೆ.
ಆಂಟನಿ. ಎಲ್ಲಿದ್ದಾರೆ?
ಸೇವಕ. ಅವರು ಮತ್ತು ಲೆಪಿಡಸ್ ಸೀಸರನ ಮನೆಯಲ್ಲಿದ್ದಾರೆ.
ಆಂಟನಿ. ನಾನೂ ನೇರ ಅಲ್ಲಿಗೇ ಹೋಗಬೇಕು, ಅವರನ್ನು ನೋಡುವುದಕ್ಕೆ: ಕೇಳಿಬಂದಂತೆ ಬಂದಿದ್ದಾರೆ. ಅದೃಷ್ಟದೇವತೆ ಚೆನ್ನಾಗಿರುವಂತಿದೆ, ಹಾಗೂ ಇಂಥ ಮನಸ್ಥಿತಿಯಲ್ಲಿ ನನಗೆ ಬೇಕಾದ್ದು ಕೊಡಬಹುದು.
ಸೇವಕ. ಅವರು ಹೇಳೋದು ಕೇಳಿದೆ, ಬ್ರೂಟಸ್ ಮತ್ತು ಕೇಸಿಯಸ್‍ನ್ನ ರೋಮಿನ ಹೆಬ್ಬಾಗಿಲಿನಿಂದ ಹೊರಕ್ಕೆ ಹಾಕಿದ್ದಾರೆ
ಜನ, ಹುಚ್ಚರನ್ನು ಹೊರ ಹಾಕುವ ಹಾಗೆ.
ಆಂಟನಿ. ನಾನು ಜನರನ್ನು ಹೇಗೆ ಎಬ್ಬಿಸಿದೆ ಅಂಥವರ ನೋಟ ಅವರಿಗೆ ಸಿಕ್ಕಿರಲು ಸಾಕು. ನನ್ನನ್ನು ಒಕ್ಟೇವಿಯಸ್‍ನಲ್ಲಿಗೆ
ಕರಕೊಂಡುಹೋಗು.
(ನಿಷ್ಕ್ರಮಣ)
ದೃಶ್ಯ 3
ಬೀದಿ. ಕವಿ ಸಿನ್ನಾ ಪ್ರವೇಶ, ಅವನ ನಂತರ ಜನಸಾಮಾನ್ಯರು
ಕವಿ ಸಿನ್ನಾ. ನನಗೆ ರಾತ್ರಿ ಒಂದು ಕನಸು ಬಿತ್ತು, ನಾನು ಸೀಸರನ ಜತೆ ಔತಣದೂಟ ಮಾಡಿದೆ ಎಂದು, ಹಾಗೂ ನನ್ನ ದುರ್ದೈವ, ವಸ್ತುಗಳು ನನ್ನ ಕಲ್ಪನೆಯನ್ನು ಕೆರಳಿಸುತ್ತವೆ. ನನಗೆ ಬಾಗಿಲು ದಾಟಿ ಅಲೆದಾಡುವ ಮನಸ್ಸಿಲ್ಲ, ಆದರೂ ಅದೇನೋ ನನ್ನನ್ನು ಮುಂದಕ್ಕೆ ಒಯ್ಯುತ್ತಿದೆ.
ಜನ 1. ನಿನ್ನ ಹೆಸರೇನೋ?
ಜನ 2. ಎಲ್ಲಿಗೆ ಹೋಗ್ತ ಇದ್ದೀ?
ಜನ 3. ಎಲ್ಲಿ ವಾಸವಾಗಿದ್ದೀ?
ಜನ 4. ವಿವಾಹಿತನೋ ಅಲ್ಲ ಬ್ರಹ್ಮಚಾರಿಯೋ?
ಜನ 3. ಪ್ರತಿಯೊಬ್ಬನಿಗೂ ನೇರವಾಗಿ ಉತ್ತರಿಸು.
ಜನ 1. ಮತ್ತು ಚಿಕ್ಕದಾಗಿ.
ಜನ 4. ಮತ್ತು ವಿವೇಕಪೂರ್ಣವಾಗಿ.
ಜನ 3. ಮತ್ತು ನಿಜ ಹೇಳಿದರೆ ನಿನಗೇ ಒಳ್ಳೇದು.
ಕವಿ ಸಿನ್ನಾ. ನನ್ನ ಹೆಸರೇನು? ಎಲ್ಲಿಗೆ ಹೋಗುತ್ತಿರುವೆ? ಎಲ್ಲಿ ವಾಸವಾಗಿರುವೆ? ನಾನು ವಿವಾಹಿತನೋ ಬ್ರಹ್ಮಚಾರಿಯೋ?
ಮತ್ತು ಪ್ರತಿಯೊಬ್ಬನಿಗೂ ಉತ್ತರಿಸುವುದು ನೇರವಾಗಿ ಮತ್ತು ಚಿಕ್ಕದಾಗಿ, ವಿವೇಕಪೂರ್ಣವಾಗಿ ಮತ್ತು ನಿಜವಾಗಿ: ವಿವೇಕಪೂರ್ಣವಾಗಿ ಹೇಳುತ್ತೇನೆ: ನಾನೊಬ್ಬ ಬ್ರಹ್ಮಚಾರಿ.
ಜನ 2. ಅದರರ್ಥ ಮದುವೆಯಾದವರು..
ಮೂರ್ಖರು ಅಂತ: ಅದಕ್ಕೊಂದು ಹೊಡೆತ ತಾಳಿಕೊಳ್ಳುವಿ ನನ್ನ ಪರವಾಗಿ ಅಂತ ನನ್ನ ಭಯ; ನೇರವಾಗಿ ಮುಂದರಿಸು.
ಕವಿ ಸಿನ್ನಾ. ನೇರವಾಗಿ ನಾನು ಸೀಸರನ ಶವಸಂಸ್ಕಾರಕ್ಕೆ ಹೋಗುತ್ತಿರುವೆ.
ಜನ 1. ಮಿತ್ರನಾಗಿಯೋ ಶತ್ರುವಾಗಿಯೋ?
ಕವಿ ಸಿನ್ನಾ. ಮಿತ್ರನಾಗಿ.
ಜನ 2. ಈ ಉತ್ತರ ನೇರವಾಗಿದೆ.
ಜನ 4. ನಿನ್ನ ವಾಸದ ಕುರಿತು, ಚಿಕ್ಕದಾಗಿ.
ಕವಿ ಸಿನ್ನಾ. ಚಿಕ್ಕದಾಗಿ, ನಾನು ಪುರಭವನದ ಪಕ್ಕದಲ್ಲಿ ವಾಸಮಾಡುತ್ತಿದ್ದೇನೆ.
ಜನ 4. ನಿನ್ನ ಹೆಸರೇನಯ್ಯಾ, ನಿಜವಾಗಿ?
ಕವಿ ಸಿನ್ನಾ. ನಿಜವಾಗಿ, ನನ್ನ ಹೆಸರು ಸಿನ್ನಾ.
ಜನ 1. ಸೀಳಿರಿ ಅವನನ್ನು ಚೂರು ಚೂರಾಗಿ,
ಅವನೊಬ್ಬ ಪಿತೂರಿಕೋರ.
ಕವಿ ಸಿನ್ನಾ. ನಾನು ಕವಿ ಸಿನ್ನಾ, ನಾನು ಕವಿ ಸಿನ್ನಾ.
ಜನ 4. ಸೀಳಿರಿ ಅವನನ್ನು ಅವನ ಕೆಟ್ಟ ಕವಿತೆಗಳಿಗೋಸ್ಕರ, ಸಿಗಿಯಿರಿ ಅವನನ್ನು ಅವನ ಕೆಟ್ಟ ಕವಿತೆಗಳಿಗೋಸ್ಕರ.
ಕವಿ ಸಿನ್ನಾ. ನಾನು ಪಿತೂರಿಕೋರ ಸಿನ್ನಾ ಅಲ್ಲ.
ಜನ 4. ಅದೇನೂ ಪರವಾಯಿಲ್ಲ, ಅವನ ಹೆಸರು ಸಿನ್ನಾ, ಅವನ ಹೆಸರನ್ನು ಮಾತ್ರ ಅವನೆದೆಯಿಂದ ಕಿತ್ತು ತೆಗೆದು,
ಅವನನ್ನು ನಡೆಯಲು ಬಿಡಿ.
ಜನ 4. ಸೀಳಿರಿ, ಸೀಳಿರಿ; ಎಲ್ಲಿ ಬೆಂಕಿ, ಹೋಯಿ,ಮುದ್ರೆ ಹಾಕುವುದಕ್ಕೆ ಬೆಂಕಿ;
ಬ್ರೂಟಸ್‍ನಲ್ಲಿಗೆ, ಕೇಸಿಯಸ್‍ನಲ್ಲಿಗೆ, ಎಲ್ಲರನ್ನೂ ಸುಟ್ಟುಬಿಡಿ. ಕೆಲವರು ಡೆಸಿಯಸ್‍ನ ಮನೆಗೆ, ಕೆಲವರು ಕಾಸ್ಕಾನ ಮನೆಗೆ; ಕೆಲವರು ಲಿಗೇರಿಯಸ್‍ನಲ್ಲಿಗೆ:
ಹೂಂ, ಹೊರಡಿ ಮತ್ತೆ.
(ಎಲ್ಲರೂ ನಿಷ್ಕ್ರಮಣ)
ಚಿತ್ರ ಕೃಪೆ –The Assassination of Julius Caesar by William Holmes Sullivan, c. 1888, Royal Shakespeare Theatre ವಿಕಿಪೀಡಿಯ
ಹೆಚ್ಚಿನ ಬರಹಗಳಿಗಾಗಿ
ನೈನವೆ
ಜೂಲಿಯಸ್ ಸೀಸರ್ ಅಂಕ -೫
ಜೂಲಿಯಸ್ ಸೀಸರ್ ಅಂಕ ೪