- ಐತಿಹಾಸಿಕ ಸಂಭವಗಳ ದಾಖಲೆ ‘ಪ್ರಳಯದ ನೆರಳು’ - ಏಪ್ರಿಲ್ 23, 2022
- ಕತ್ತಲಲ್ಲಿ ಪರಿಮಳ ಬೀರುವ ಮಲ್ಲಿಗೆ ಹೂ - ಏಪ್ರಿಲ್ 13, 2021
- ‘ ದುಡಿಮೆಯ ಆಧ್ಯಾತ್ಮಿಕತೆಯನ್ನು ಸಾರುವ ರೇಖಾ ಬನ್ನಾಡಿಯವರ ‘ಕಡಲು ಕಾಯಕ’ - ಮಾರ್ಚ್ 21, 2021
ಕೊರೋನಾ ಕಾಲದ ಕರಾಳ ಅನುಭವಗಳ ಕುರಿತು ವಿವಿಧ ಲೇಖಕರು ಬರೆದಿರುವ ಕಥೆಗಳು, ಲಲಿತ ಪ್ರಬಂಧಗಳು, ಅನುವಾದಗಳು ಮತ್ತು ಕಾದಂಬರಿ ತುಣುಕುಗಳ ಒಂದು ಬೃಹತ್ ಸಂಗ್ರಹವಾಗಿದೆ ಕನ್ನಡದ ಹಿರಿಯ ಲೇಖಕಿ ಡಾ .ಕಮಲಾ ಹೆಮ್ಮಿಗೆಯವರ ಸಂಪಾದಕತ್ವದಲ್ಲಿ ಇತ್ತೀಚೆಗೆ ಪ್ರಕಟವಾದ ಗ್ರಂಥ “ಪ್ರಳಯದ ನೆರಳು’.ಒಂದು ಐತಿಹಾಸಿಕ ಕಾಲಘಟ್ಟದಲ್ಲಿ ಇಡೀ ಜಗತ್ತನ್ನೇ ಗಡಗಡನೆ ನಡುಗಿಸಿ ವಿನಾಶದ ಅಂಚಿಗೆ ಒಯ್ದ ಕೊರೋನಾ ಎಂಬ ಮಾರಕ ರೋಗವು ಹುಟ್ಟಿಸಿದ ಭಯಾನಕ ವಾತಾವರಣಕ್ಕೆ ಈ ಗ್ರಂಥವು ಸಾಕ್ಷಿಯಾಗಿ ನಿಲ್ಲುತ್ತದೆ. ಕಡು ಕಹಿ ವಾಸ್ತವದ ಗಾಢ ಸ್ಪರ್ಶವಿರುವ ಈ ಬರಹಗಳನ್ನು ಸಂಪಾದಿಸಿ 750 ಪುಟಗಳ ಗ್ರಂಥವನ್ನು ಹೊರತಂದು ಕಮಲಾ ಹೆಮ್ಮಿಗೆ ಮತ್ತು ಪ್ರಕಟಿಸಿದ ಬೆಂಗಳೂರಿನ ನಿವೇದಿತಾ ಪ್ರಕಾಶನದವರು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಮುಂದಿನ ತಲೆಮಾರಿನವರಿಗೆ ಇಂದು ನಾವು ಅನುಭವಿಸಿದ ಕಡುಕಷ್ಟದ ದಿನಗಳ ಯಥಾವತ್ತಾದ ಪರಿಚಯ ಮಾಡಿಕೊಡಬೇಕೆಂದ ಉದ್ದೇಶದಿಂದ ಅವರು ನಿರ್ವಹಿಸಿದ ಈ ಜವಾಬ್ದಾರಿ ಅತ್ಯಂತ ಶ್ಲಾಘನೀಯ.
ಇಲ್ಲಿನ ಬರಹಗಳನ್ನು ಸಂಪಾದಕಿ ಅವುಗಳ ಪ್ರಕಾರಗಳಿಗನುಗುಣವಾಗಿ ಏಳು ಭಾಗಗಳಾಗಿ ವಿಂಗಡಿಸಿದ್ದಾರೆ. ಪ್ರತಿಯೊಂದು ಭಾಗಕ್ಕೂ ಸರಿಹೊಂದುವ ಉಪಶೀರ್ಷಿಕೆಗಳನ್ನೂ ಕೊಟ್ಟಿದ್ದಾರೆ. “ಭವದ ಬಂಧನ” ಎಂಬ ಅತ್ಯಂತ ದೊಡ್ಡ ವಿಭಾಗದಲ್ಲಿ ನಾಡಿನ ವಿವಿಧ ಕಥೆಗಾರರು ಬರೆದ 46 ಸಣ್ಣ ಕಥೆಗಳಿವೆ. ಇಲ್ಲಿ ಪ್ರಸಿದ್ಧರಾದ ಹಿರಿಯ ಕಥೆಗಾರರೊಂದಿಗೆ ಕಿರಿಯ ಲೇಖಕರಿಗೂ ಅವಕಾಶ ನೀಡಲಾಗಿದೆ. ಹಳ್ಳಿ- ನಗರ, ದೊಡ್ಡವರು- ಮಕ್ಕಳು, ಶ್ರೀಮಂತ-ಬಡವರೆಂಬ ಭೇದವಿಲ್ಲದೆ ಕೊರೋನಾ ರಾಕ್ಷಸನು ಸೃಷ್ಟಿಸಿದ ಪ್ರಳಯ ಸದೃಶ ಚಂಡಮಾರುತದ ಹಾವಳಿಗೆ ತತ್ತರಿಸಿದ ಜನರ ಭಯ, ತಲ್ಲಣ, ಆತಂಕ, ಹತಾಶ ಸ್ಥಿತಿ, ಮಾತ್ರವಲ್ಲದೆ ಜನರ ಓಡಾಟವಿಲ್ಲದೆ ಹಬ್ಬಿದ ಶ್ಮಶಾನ ಮೌನದೆಡೆಯಲ್ಲಿ ಅಸಹಾಯಕತೆಯಿಂದ ವಿಲವಿಲ ಒದ್ದಾಡಿದ ಪ್ರಕೃತಿ-ಪ್ರಾಣಿ-ಪಶು-ಪಕ್ಷಿಗಳ ಮೂಕ ರೋದನ -ಎಲ್ಲಾ ಹೃದಯ ವಿದ್ರಾವಕ ನೋಟಗಳು ಈ ಕಥೆಗಳುದ್ದಕ್ಕೂ ಪ್ರವಹಿಸಿವೆ. ನಿಷ್ಕರುಣ ಸಾವಿನ ಅಟ್ಟಹಾಸ ಒಂದೆಡೆಯಾದರೆ ಆ ಸಂದರ್ಭವನ್ನು ಹೊಂಚಿ ಹಣ ಮಾಡುವ ಧಂಧೆಗಿಳಿದು ಬಡವರ ಬದುಕನ್ನು ನರಕ ಸದೃಶವಾಗಿಸಿದ ವಿಕೃತ ಮನಸ್ಸಿನ ಮನುಷ್ಯರ ಕ್ರೌರ್ಯ ಇನ್ನೊಂದೆಡೆ. ದಿನಕ್ಕೊಂದು ಹೇಳಿಕೆ ನೀಡುವ ರಾಜಕೀಯ ನಾಯಕರ ಬೇಜವಾಬ್ದಾರಿತನ, ಸಮಾಜ ಸೇವೆಯ ಸೋಗಿನಲ್ಲಿ ತಮ್ಮ ಪ್ರತಿಷ್ಠೆಯನ್ನು ಮೆರೆಸಿದ ಉಳ್ಳವರ ಸೋಗಲಾಡಿತನ, ಮಾಧ್ಯಮಗಳ ನಡುವಿನ ಮೇಲಾಟ ಮತ್ತು ಅನಗತ್ಯ ಕಿರಿಚಾಟ- ಈ ಎಲ್ಲಕ್ಕೂ ಒಂದಿಲ್ಲೊಂದು ರೀತಿಯಲ್ಲಿ ಈ ಕಥೆಗಳು ಕನ್ನಡಿ ಹಿಡಿಯುತ್ತವೆ.
ಭಾಗ 2ರಲ್ಲಿ ಮೂರು ಲಲಿತ ಕಥೆಗಳು, ಭಾಗ 3ರಲ್ಲಿ ಕೊರೋನಾದಿಂದಾಗಿ ಜಗತ್ತಿನ ಜೀವಜಾಲವನ್ನು ಕವಿದ ಕಾರ್ಗತ್ತಲೆಯನ್ನು ಸೂಚಿಸುವ ಎಂಟು ಲೇಖನಗಳ ಗುಚ್ಛ “ತಮಂಧ ಘನ”, ಭಾಗ 4ರಲ್ಲಿ ಇತರ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಂಡ ನಾಲ್ಕು ಕಥೆಗಳು, ಭಾಗ 5ರಲ್ಲಿ ಎಂಟು ಅನುಭವ ವೃತ್ತಾಂತಗಳು, ಭಾಗ 6ರಲ್ಲಿ ಮೂರು ಮಿನಿಕಥೆಗಳು ಮತ್ತು ಭಾಗ 7ರಲ್ಲಿ ಕೊರೋನಾ ಕಾಲದ ಕುರಿತು ಆಗಲೇ ಬಂದಿರುವ ಎರಡು ಮಹತ್ವದ ಕಾದಂಬರಿಗಳ ಆಯ್ದ ತುಣುಕುಗಳಿವೆ.
74 ಮಂದಿ ಲೇಖಕರುಗಳಿಂದ ಬಂದ ಈ ಬರಹಗಳು ಪ್ರತಿಯೊಬ್ಬ ಲೇಖಕರ ಸ್ಥೂಲ ಪರಿಚಯದೊಂದಿಗೆ ಪ್ರಕಟವಾಗಿರುವುದು ಪ್ರಶಂಸನೀಯ ವಿಚಾರ. ಯಾಕೆಂದರೆ ಬರಹಗಳೊಂದಿಗೆ ಪರಿಚಯವನ್ನೂ ಸಂಗ್ರಹಿಸುವುದ ಸುಲಭದ ವಿಚಾರವಲ್ಲ. ಹೀಗೆ ವಿವಿಧ ಲೇಖಕರ ಬರಹಗಳಿರುವ ಅನೇಕ ಸಂಪಾದಿತ ಕೃತಿಗಳಲ್ಲಿ ಲೇಖಕರುಗಳ ಪರಿಚಯವಿರುವುದಿಲ್ಲ. ಅಪಾರ ಶ್ರಮ ಹಾಗೂ ತಾಳ್ಮೆಗಳನ್ನು ನಿರೀಕ್ಷಿಸುವ ಕೆಲಸವಿದು. ಹಿರಿಯ ಸಾಹಿತಿಗಳಾದ ಡಾ.ಸತೀಶ ಕುಲಕರ್ಣಿಯವರು ಎಲ್ಲ ಲೇಖನಗಳನ್ನೂ ಆಮೂಲಾಗ್ರವಾಗಿ ಓದಿ ಸೂಕ್ಷ್ಮಾಂಶಗಳನ್ನು ಗ್ರಹಿಸಿಕೊಂಡು ಒಂದು ಹೃದಯಸ್ಪರ್ಶಿ ಮುನ್ನುಡಿಯನ್ನು ಬರೆದಿದ್ದಾರೆ.
ಸಂಪಾದಕಿಯ ಮಾತುಗಳಲ್ಲೂ ಇಂಥ ಒಂದು ಅಮೂಲ್ಯ ಗ್ರಂಥವನ್ನು ಸಿದ್ಧಪಡಿಸುವಲ್ಲಿ ಅವರ ಸದುದ್ದೇಶ ಮತ್ತು ಅದಕ್ಕಾಗಿ ಅವರು ಪಟ್ಟ ಪರಿಶ್ರಮದ ಸೂಚನೆ ಸಿಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಕೃತಿಗೊಂದು ಅರ್ಥಪೂರ್ಣ ಶೀರ್ಷಿಕೆಯನ್ನು ಅವರು ಕೊಟ್ಟದ್ದು ಮೆಚ್ಚತಕ್ಕ ಅಂಶ. ನೆರಳು ಅನ್ನುವ ಪದ ಧನಾತ್ಮಕ ಅರ್ಥವನ್ನೂ ಕೊಡಬಹುದು, ಋಣಾತ್ಮಕ ಅರ್ಥವನ್ನೂ ಸೂಚಿಸಬಹುದು. ಆದರೆ ಇಲ್ಲಿ ಅದಕ್ಕಿರುವ ವಿಶೇಷಣ ಪ್ರಳಯ ಆಗಿರುವುದರಿಂದ ಅದು ಭಯಾನಕತೆಯನ್ನಷ್ಟೇ ಸೂಚಿಸುವ ಪದವಾಗುತ್ತದೆ. ಒಂದು ಕಾಲಘಟ್ಟವನ್ನು ಅದರ ಎಲ್ಲ ಸಂಕೀರ್ಣ ಗುಣಗಳೊಂದಿಗೆ ಸಮರ್ಥವಾಗಿ ಹಿಡಿದಿಟ್ಟ ಈ ಕೃತಿ ಸಾರ್ವಕಾಲಿಕ ಮಹತ್ವದ್ದಾಗಿ ಉಳಿಯುವುದರಲ್ಲಿ ಸಂದೇಹವಿಲ್ಲ.
ಕೃತಿಯ ಶೀರ್ಷಿಕೆ.: ಪ್ರಳಯದ ನೆರಳು
ಸಂಪಾದಕರು : ಡಾ.ಕಮಲ ಹೆಮ್ಮಿಗೆ
ಪ್ರಕಾಶಕರು : ನಿವೇದಿತಾ ಪ್ರಕಾಶನ ಬೆಂಗಳೂರು
ಪುಟಗಳು : ೭೮೪
ಬೆಲೆ : ರೂ.೭೫೦
ಡಾ.ಪಾರ್ವತಿ ಜಿ.ಐತಾಳ್
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ