ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹೂವು ತುಂಬಿದ ಸೆರಗು..

ಸದಾಶಿವ್ ಸೊರಟೂರು
ಇತ್ತೀಚಿನ ಬರಹಗಳು: ಸದಾಶಿವ್ ಸೊರಟೂರು (ಎಲ್ಲವನ್ನು ಓದಿ)

ಅತ್ತ ಇತ್ತ ನೋಡಿ ಮೈ ಸಣ್ಣಗೆ
ಮಾಡಿಕೊಳ್ಳಬೇಡಿ
ನೀವು ನೋಡಿದಂತೆ ಜಗತ್ತಿಲ್ಲ
ಅದರೊಳಗಿಂದು ನಿಮಗೆ
ಕಾಣುವುದಿಲ್ಲ..

ನೇರವಾಗಿ ಬನ್ನಿ, ನಾನಿನ್ನು
ಬೆತ್ತಲಾಗಿಲ್ಲ ನಿರಾಶೆ ಬೇಡ
ಲಾಡಿ ಎಳೆಯುವ ಅವಕಾಶ
ನಿಮಗೇ ಇದೆ.. ನಿಮ್ಮ ಗಂಟೆಯ ಲೆಕ್ಕದಲ್ಲಿ
ಇದು ಸೇರುವುದಿಲ್ಲ
ಹೆಚ್ಚುವರಿ ಹಣವೂ ಕೇಳುವುದಿಲ್ಲ..

ನನ್ನ ಹೆಸರು ಬಾಲ್ಯ ಊರು ಇತ್ಯಾದಿ
ಕೇಳಬೇಡಿ ನನ್ನ ಎದೆಯ ಮಿದುವಿನಷ್ಟು
ಚೆಂದವಿಲ್ಲ; ನೀವು ಕಂಗೆಡವು ಅಗತ್ಯವಿಲ್ಲ
ನನ್ನ ದೇಹದ ಮಾಂಸವಿನ್ನೂ
ಹಳಸಿಲ್ಲ..

ಅದೆಷ್ಟು ದೇಹಗಳನು ದಾಟಿದ್ದೇನೆ
ಅವರ ಹಿಂಸೆಯನು ತೊಟ್ಟಿದ್ದೇನೆ
ಅವರವರ ಪತಿವ್ರತೆಯರು
ಕದ್ದು ಮಲಗಿದ್ದನ್ನು ಕೇಳಿಸಿಕೊಂಡಿದ್ದೇನೆ..
ಮನಸ್ಸು ಯಾರನೊ ಕರೆದುಕೊಂಡು
ಸುಖಿಸುವುದನು ತಿಳಿದಿದ್ದೀನಿ
ಪತಿವ್ರತೆಯಾಗುವುದು ಸುಲಭ;
ಸೂಳೆಯಾಗುವುದಲ್ಲ!

ಈ ಮೈ ಸುಕ್ಕಾಗಲು ಇನ್ನೆಷ್ಟು
ದೇಹಗಳನು ದಾಟಬೇಕೊ
ದೇವರು ನನ್ನ ಹೆಸರಿಗೆ ಬರೆದ ದೇಹಗಳು
ಬೇಗ ಮುಗಿದು ಹೋಗಲಿ
ನಾನೊಂದು ನೆಮ್ಮದಿಯ ನಿದ್ದೆ ಮಾಡಬೇಕು
ನಿಮ್ಮ ಜಗತ್ತಿನಲ್ಲಿರುವ ಆ ಸಭ್ಯ ದೇವರಿಗೆ
ಈ ಅಹವಾಲನ್ನು ಸಲ್ಲಿಸಿಬಿಡಿ
ಅದಕ್ಕೆ ಬೇಕಾದರೆ ಇನ್ನಷ್ಟು ಹೊತ್ತು
ನನ್ನೊಂದಿಗೆ ಹಂದಾಡಿಬಿಡಿ..

ನೋಟುಗಳನು ನನ್ನ ಕೈಗಿಡಬೇಡಿ
ತಲೆಹಿಡುಕನಿರಬಹುದು ಹೊರಗೆ
ಅವನ ಕೈಲಿಟ್ಟು ಹೋಗಿ
ನನ್ನ ಈ ಕೈಗಳಿಗೆ ಗಾಂಧೀ ನಗುವು
ಶೋಭಿಸುವುದಿಲ್ಲ
ಎಲ್ಲಾದರೂ ಗಾಂಧಿ ಸಿಕ್ಕರೆ ದಯವಿಟ್ಟು ನೋಟಿನಲಿ
ನಗುವುದನ್ನು ನಿಲ್ಲಿಸೆಂದು ಹೇಳಿ..

ಬಿಚ್ಚಿದ ಸೀರೆ ಇಲ್ಲೆ ಕೆಳಗೆ ಬಿದ್ದಿರಬಹುದು
ಹೋಗುವಾಗ ಅದರ ಸೆರಗನ್ನು
ತುಳಿಯಬೇಡಿ ಅಲ್ಲಿ ಹೂವುಗಳಿವೆ
ಮೊಗ್ಗುಗಳೂ ಇವೆ
ನನ್ನದೂ‌ ಇದೆ ಒಂದು ಹೂ ತುಂಬಿದ ಸೆರಗು
ನೋಡಿಕೊಂಡು ಕಾಲಿಡಿ..

ಸೆರಗಿನ ಅಂಚಿನಲಿ ಒಂದು ಪುಟ್ಟ ಗಂಟಿದೆ
ಅದನ್ನು ಎಡವಿ ಬೀಳಬೇಡಿ
ಖಂಡಿತ ಅದನ್ನು ಬಿಚ್ಚಿ ನೋಡಬೇಡಿ
ನನ್ನ ನಗುವಿನ ಈ ಮುಖದ ಹಿಂದಿನ
ಸತ್ಯವನು ಖಂಡಿತ ನೀವು ತಿಳಿಯಬೇಡಿ…