- ಕವಿಗಳು ಕಂಡ ಸಂಭ್ರಮದ ಯುಗಾದಿ. - ಏಪ್ರಿಲ್ 9, 2024
- ವಿಜಯದಶಮಿ ರೈತರ “ಬನ್ನಿ ಹಬ್ಬ” - ಅಕ್ಟೋಬರ್ 24, 2023
- ಮುನ್ನಡೆಯುವ ಹಕ್ಕು ಮಹಿಳೆಯರಿಗೂ ಇದೆ - ಮಾರ್ಚ್ 8, 2023
ಬನ್ನಿ ಬಂಗಾರ,ಬಾಳು ಸಿಂಗಾರ ವಿಜಯದಶಮಿ ಕನ್ನಡ ಜನಪದರ ಸಂಭ್ರಮದ ಹಬ್ಬ. ಭಾರತದ ತುಂಬೆಲ್ಲ ಈ ಹಬ್ಬವನ್ನು ಬೇರೆ ಬೇರೆ ಹೆಸರಿನಿಂದ ಬೇರೆಬೇರೆಯಾಗಿ ಆಚರಿಸಿದರೆ ಕನ್ನಡಿಗರು ಬನ್ನಿ ಹಬ್ಬವಾಗಿ ಇದನ್ನು ಆಚರಿಸುತ್ತಾರೆ,ತ್ರೇತಾಯುಗದಲ್ಲಿ ಶ್ರೀರಾಮನು ರಾವಣನನ್ನು ಸಂಹರಿಸಿದ ನಂತರ ಅಯೋಧ್ಯೆಗೆ ಬಂದ ದಶಮಿಯ ಶುಭದಂದು ವಿಜಯೋತ್ಸವವನ್ನು ಆಚರಿಸಲಾಗಿತ್ತು. ಆ ದಶಮಿ ತಿಥಿಯನ್ನೇ ವಿಜಯದಶಮಿ ಯಾಗಿ ಮಾರ್ಪಾಡಾಯಿತೆಂದು ತಿಳಿದುಬರುತ್ತದೆ. ಇಂಥಹ ಶ್ರೇಷ್ಠವಾದ ವಿಜಯದಶಮಿ ದಿನದಂದು ಯಾವ ಕೆಲಸವನ್ನು ಪ್ರಾರಂಭಿಸಿದರು ಅದು ನಿರ್ವಿಘ್ನವಾಗಿ ನಡೆದು, ಆ ಕೆಲಸದಲ್ಲಿ ಜಯ ಖಂಡಿತ ದೊರೆಯುವುದೆಂದು ಪ್ರಾಚೀನ ಕಾಲದ ನಂಬಿಕೆ. ಅದರಲ್ಲೂ ಸೂರ್ಯಾಸ್ತ ಸಮಯದ ನಂತರ 48 ನಿಮಿಷಗಳ ಸುಮಹೂರ್ತದಲ್ಲಿ ಯಾವ ಕೆಲಸವನ್ನು ಪ್ರಾರಂಭಿಸಿದರೂ ಆರೋಗ್ಯ,ಯಶಸ್ಸು ನಿಶ್ಚಿತವಾಗಿಯೂ ದೊರೆಯುತ್ತದೆ ಎಂಬ ಜನಪದರ ನಂಬಿಕೆ.ಅಂದು ಜನಪದರು ಮೊದಲ ಪೂಜೆ ತಮ್ಮ ಭೂಮಿಪೂಜೆ. ಅಶ್ವಿನಿ ಶುದ್ಧ ನವಮಿಯ ದಿನ ಆಚರಿಸುವ ಈ ಪೂಜೆ ವಿಶಿಷ್ಟವಾದುದು. ಈ ದಿನ ರೈತರು ಬೆಳಗ್ಗೆ ಎದ್ದು ಭೂಮಿತಾಯಿಯನ್ನು ಸ್ಮರಿಸುತ್ತಾರೆ. ಬೆಳೆಸು ತುಂಬಿದ ಭೂಮಿಯು ಕಾಡನ್ನು ಬಿಟ್ಟು ಕೆಲವೇ ದಿನಗಳಲ್ಲಿ ನಾಡನ್ನು ಸೇರುವುದೆಂದು ಸೂಚಿಸುವ ಶುಭದಿನ ವಿದು.
“ಊರ ಸೀಮೆಯ ದಾಟಿ ಕಾಡ ಗಡಿಯನ್ನು ಸೇರಿ! ಕಾಡ ಸಂಪತ್ತು ತರ ಬನ್ನಿ! ಬೆಳೆದ ಬೆಳಸಿಗೆ ಬನ್ನಿ !ಭೂಮಿ ತಾಯಿಗೆ ಬನ್ನಿ! ನಾಡ ಸಂಪತ್ತು ಬೆಂಬನ್ನಿ“!
ನಮ್ಮ ಜನಪದರು ಮನಕರಗುವಂತೆ ಈ ಹಾಡುಗಳನ್ನು ಹೇಳುತ್ತಾರೆ. ಒಂದೊಂದು ಸಾಲು ಪುಟವಿಟ್ಟ ಚಿನ್ನದಂತೆ ಮನಸ್ಸಿಗೆ ಮುದ ಕೊಡುತ್ತದೆ. ನಾಡ ಜನರ ಒಡಲು ತುಂಬುವ ಭೂತಾಯಿ ಮಡಿಲು ತುಂಬಿ ಬರಲು,ಈ ಹಬ್ಬದಲ್ಲಿ ಒಳ್ಳೆಯ ಮುಹೂರ್ತದಲ್ಲಿ ಸಸಿ ಬಳೆಯುತ್ತಾರೆ. ಇದೊಂದು ಮಣ್ಣು ಪೂಜೆ, ಖಂಡೆಯಪೂಜೆ ಎಂದು ರೈತರು ಹೇಳುತ್ತಾರೆ. ನಂತರ ರೈತರು ತಮ್ಮ ಒಕ್ಕಲತನದ ಸಾಮಗ್ರಿಗಳನ್ನೆಲ್ಲ ತಿಕ್ಕಿ ತೊಳೆದು,ಭಕ್ತಿಯಿಂದ ಪೂಜೆ ಮಾಡಿ ಹೊಲದಲ್ಲಿನ ತುಂಬಿದ ಬೆಳೆಯನ್ನು ತಂದು ಪೂಜೆಗೆ ಇಟ್ಟು ಕೈಮುಗಿದರೆ, ವ್ಯಾಪಾರಿಗಳು ಈ ದಿನ ತಮ್ಮ ತೂಕ ತಕ್ಕಡಿಗಳನ್ನು ಪೂಜಿಸುತ್ತಾರೆ. ಹಿಂದೆ ರಾಜ ಮಹಾರಾಜರು ತಮ್ಮ ಯುದ್ಧ ಸಾಮಗ್ರಿಗಳನ್ನು ಈ ದಿನ ಪೂಜೆ ಮಾಡುತ್ತಿದ್ದರು. ಬನ್ನಿ ಹಬ್ಬದ ದಿನವನ್ನು ಜಯ ಕೈಗೊಳ್ಳಲು ಸಜ್ಜು ಮಾಡುವ ಮೊದಲ ದಿನವೆಂದು ಕರೆದು ಯುದ್ಧ ಸಾಮಗ್ರಿಗಳಿಗೆ ಪೂಜೆ ಮಾಡಿ ಸೈನ್ಯದೊಡನೆ ಊರ ಮಂದಿಯ ಬನ್ನಿ ದಿಬ್ಬಕ್ಕೆ ಸೇರುತ್ತಿದ್ದರು.ಜನಪದರು ತಮ್ಮ ಪೂಜೆ-ಪುನಸ್ಕಾರಗಳಿಲ್ಲಿ ಪಾಂಡವರಿಗೆ ಅಗ್ರಸ್ಥಾನ ನೀಡಿದ್ದಾರೆ. ಬನ್ನಿ ಹಬ್ಬದ ದಿನವೇ ಪಾಂಡವರ ಅಜ್ಞಾತವಾಸ ಆರಂಭವಾದದ್ದು. ಅವರು ಅಜ್ಞಾತವಾಸಕ್ಕೆ ಹೋಗುವಾಗ ತಮ್ಮ ಆಯುಧಗಳನ್ನು ಬನ್ನಿಯ ಮರದ ಪೊಟರೆಯಲ್ಲಿಟ್ಟು ನಾವು ಬರುವವರೆಗೂ ಅವುಗಳನ್ನು ಕಾಯಬೇಕೆಂದು ಆ ಮರಕ್ಕೆ ಹೇಳಿ ಹೊರಟುಹೋದರೆಂದು ಕಥೆಯಿದೆ. ರೈತರು ಪಾಂಡವರನ್ನು ಸುಗ್ಗಿಯ ಕಣದ ದಂಡೆಯ ಮೇಲೆ, ಹೊಟ್ಟಿನ ಕುಟ್ಟರಿಯ ಎಡಭಾಗದಲ್ಲಿ ಇಟ್ಟು ಪೂಜೆ ಮಾಡಿ, ರಾಶಿ ಬುತ್ತಿಯ ಊಟವನ್ನು ಎಡೆ ಮಾಡುವರು. ಈ ರೀತಿ ಮನಕರಗುವಂತೆ ಹಾಡನ್ನು ಹೇಳಿದ್ದಾರೆ.
“ಬನ್ನಿಯ ಎಲೆಯಾಗ ಎಡೆಮಾಡಿ ! ಪಾಂಡವರು !ಉಂಡು ಹೋಗ್ಯಾರೋ ವನವಸೊ“!!
ಬನ್ನಿ ಎಲೆ ಚಿನ್ನ=ಬನ್ನಿ ಮರದ ಎಲೆಯನ್ನು ಚಿನ್ನವೆಂದು ರೈತರು ಭಾವಿಸಿದ್ದರು. ಬನ್ನಿ ಮರ ಒಂದು ಪವಿತ್ರ ದಸರಾ ಹಬ್ಬದಲ್ಲಿ ಈಮರಕ್ಕೆ ವಿಶೇಷ ಪೂಜೆ,ವಿಜಯ ದಶಮಿಯ ದಿನ ಬನ್ನಿ ಮರವನ್ನು ಪೂಜಿಸಿ ಅದರ ಎಲೆಯನ್ನು ಚಿನ್ನ ವೆಂದು ಹಂಚುವ ಪದ್ಧತಿ ಇದೆ. ಈ ದಿನ ಬನ್ನಿಮರಕ್ಕೆ ನೈವೇದ್ಯ ಮಾಡಿ ಹೆಣ್ಣುಮಕ್ಕಳು ಅರಿಶಿನ ಕುಂಕುಮ ಹಚ್ಚಿ ಪೂಜೆ ಮಾಡುವರು.
“ದೇವ ದೇವರ ಬನ್ನಿ ದೈವ ದೈವದ ಬನ್ನಿ ನಾವು ಮೂಡಿವೂದು ನಮ್ಮ ಬನ್ನಿ”
ಎಂದು ಹೇಳಿ ಬನ್ನಿ ಮುಡಿಯುವುದೇ ಒಂದು ಸಂಭ್ರಮ.ಈ ದಿನ ದೇವರಿಗೆ, ತಂದೆ-ತಾಯಿಯರಿಗೆ, ಅಕ್ಕತಂಗಿಯರಿಗೆ, ಅಣ್ಣ-ತಮ್ಮಂದಿರಿಗೆ, ಗೆಳೆಯ-ಗೆಳತಿಯರಿಗೆ, ಬನ್ನಿ ಕೊಡುವುದು ಎಲ್ಲಿಲ್ಲದ ಸಂಭ್ರಮ. ಜಗಳಾಡಿ ಮಾತುಬಿಟ್ಟು ಎನಿಸಿಕೊಂಡವರು ಈ ದಿನ ಬನ್ನಿ ವಿನಿಮಯ ಮಾಡಿಕೊಂಡು ಒಂದಾಗುವ ಸಂಭ್ರಮ.
“ಹಡೆದ ತಾಯಿಗೆ ಬನ್ನಿ, ಹಡೆದ ತಂದೆಗೆ ಬನ್ನಿ, ಪಡೆದ ಗಂಡನಿಗೆ ಬನ್ನಿ“,
ಮಕ್ಕಳು ಬನ್ನಿ ಕೊಡುವ ಮೂಲಕ, ಗಂಡನಿಗೆ ಹೆಂಡತಿ ಬನ್ನಿ ಕೊಡುವ ಮೂಲಕ ಕೃತಜ್ಞತೆ ಸಲ್ಲಿಸುವ ವಿಧಾನವಿದೆ.ಇಲ್ಲಿ ಸ್ನೇಹವನ್ನು ,ಪ್ರೀತಿಯನ್ನು ನವೀಕರಿಸಿ ಗಟ್ಟಿಗೊಳಿಸುತ್ತದೆ.ಈ ಸಂದರ್ಭದಲ್ಲಿ ಸುಂದರವಾದ ಗೀತೆಯೊಂದಿಗೆ ಕುಣಿದು ಕುಪ್ಪಳಿಸುತ್ತಾರೆ. “ನಾವು ಕುಡಿಯೋಣ ಬನ್ನಿ ,ಹ್ಯಾಂಗ ಮರಿಯೋಣ ಬನ್ನಿ ಜೀವ ಒಂದಾಗಿ ಇರಬನ್ನಿ ಇಂದು ಮುಡಿಯುವ ಬನ್ನಿ ಮುಂದಮಗೆ ಹೊನ್ನಾಗಿಕುಂದಣದಾರೂತಿ ಬೆಳಗುದಕ.
“ಈ ಬದುಕಿನ ಜಂಜಾಟದಲ್ಲಿ ನೋವು-ನಲಿವು, ವಿರಸ, ಎಲ್ಲ ಮರೆತು ಒಂದಾಗುವ, “ಬನ್ನಿ” ಬಂಗಾರವಾಗಿ ಹೃದಯದಲ್ಲಿ ಬೇರೂರುತ್ತ ಪ್ರೀತಿ, ನಲುಮೆಗಳ ಬಾಂಧವ್ಯ ಎಂದೆಂದಿಗೂ ಸ್ಥಿರವಾಗಿರಲಿ ಎಂದು ಈದಿನ ಬದುಕಿಗೆ ಹೊಸ ಅರ್ಥವನ್ನು ಕೊಡುತ್ತದೆ.
ಹೆಚ್ಚಿನ ಬರಹಗಳಿಗಾಗಿ
ಕವಿಗಳು ಕಂಡ ಸಂಭ್ರಮದ ಯುಗಾದಿ.
ದೀಪವೆಂದರೆ……
ಅಟ್ಲ ತದಿಯ