ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎಲ್ಲ ಬಲ್ಲವರಿಲ್ಲ

ದೀಪಕ್ ಜಿ.ಕೆ.
ಇತ್ತೀಚಿನ ಬರಹಗಳು: ದೀಪಕ್ ಜಿ.ಕೆ. (ಎಲ್ಲವನ್ನು ಓದಿ)

“ಎಲ್ಲ ಬಲ್ಲವರಿಲ್ಲ… ಬಲ್ಲವರು ಯಾರಿಲ್ಲ… ಸುಮ್ಮನಿರಬಲ್ಲವರು ಇಲ್ಲವೆ ಇಲ್ಲ…… ಏನು ಮಾಡಲೀ…ನಾನೂ ಏನು ಹೇಳಲೀ….”  

ತ್ರಿಮೂರ್ತಿ’  ಚಿತ್ರದ ಹಾಡು ಗುನುಗುನಿಸುತ್ತಲೇ ನಾನು ಬರೆಯಬೇಕೆಂದುಕೊಂಡ ವಿಷಯದ ಬಗ್ಗೆ ಯೋಚಿಸತೊಡಗಿದೆ.

ಅಕ್ಕ-ಪಕ್ಕ , ಸುತ್ತ-ಮುತ್ತ, ಎತ್ತ ತಿರುಗಿದರೂ ಈಗ ಬರೀ ಮೇಧಾವಿಗಳೆ ತುಂಬಿದ್ದಾರೆ. ಕಾಲು ನೋವಿಗೆ, ಕೀಲು ನೋವಿಗೆ ಇವರ ಬಳಿ ಸಿದ್ದ ಸಲಹೆಗಳಿವೆ; ನಾಯಿಯನ್ನು ಸಾಕುವುದರಿಂದ ಹಿಡಿದು ವೃದ್ಧರನ್ನು ಸಾಗಿಹಾಕುವವರೆಗೂ ಅನೇಕ ಮಾರ್ಗೋಪಾಯಗಳಿವೆ; ಮು.ಮಂ. ಯಿಂದ ಪ್ರ.ಮಂ. ಯವರೆಗೂ ಸಲಹೆ, ಮಾರ್ಗದರ್ಶನ ನೀಡುವಷ್ಟು ಜ್ಞಾನ, ಅನುಭವ ಮತ್ತು ವಿಷಯ ಸಂಗ್ರಹಣೆ ಇವರಲ್ಲಿ ಇದೆ.

ವಸ್ತುಸ್ಥಿತಿ ಹೀಗಿರುವಾಗ ನಾನು ಬರೆದು ಮೇಲಿನ ಪಟ್ಟಿಗೆ ಸೇರ್ಪಡೆಯಾಗಲೆ ಅಥವಾ ಗೀಚಿ, ಗೀಚಿ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡುತ್ತಿರುವೆನೆಂಬ ಮಿಥ್ಯಾನಂದದಲ್ಲಿರುವವರ ಪಟ್ಟಿಗೆ ಸೇರಲೆ ಎಂಬ ಜಿಜ್ಞಾಸೆಯಲ್ಲಿಯೆ ನನಗನಿಸಿದ ಇತ್ತೀಚಿನ ಸಮಾಜದ ಬೆಳವಣಿಗೆಗಳ ಬಗ್ಗೆ ನನ್ನ ಅನಿಸಿಕೆ ಹಂಚಿಕೊಳ್ಳುತ್ತೇನೆ. Just random thoughts.

ನಾನೊಂದು ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ವಾಸಿಸುತ್ತಿದ್ದೇನೆ. ನಗರ ಪಾಲಿಕೆಯವರು ಸರತಿಯಂತೆ ಕಸ ತೆಗೆದು ಕೊಳ್ಳಲು ಬರುತ್ತಿದ್ದಾರೆ. ಆದರೂ ರಸ್ತೆಗಳಲ್ಲಿ ಮನೆಯಿಂದ ತಂದು ಎಸೆದ ಕಸದ ರಾಶಿಯಿದೆ. ಒಂದೊಂದು ರಸ್ತೆಯಲ್ಲೂ ಇರುವ ನಾಲ್ಕೈದು ನಾಯಿಗಳು ಕಸವನ್ನೆಲ್ಲ ಎಳೆದು ರಸ್ತೆಯಲ್ಲಿ ಬಣ್ಣದೋಕುಳಿ ಆಡಿವೆ. ಕಸವನ್ನು ಎಸೆಯುವವರಂತೆಯೆ, ಈ ನಾಯಿಗಳನ್ನು ಸಾಕುವವರೂ ಕೂಡ ’ಎಲ್ಲಿಂದಲೊ ಬಂದವರು’.

ಏಷ್ಯ ಖಂಡದಲ್ಲಿಯೆ ಅತಿ ನಿಧಾನವಾಗಿ ಚಲಿಸುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಪ್ರಥಮ ಸ್ಥಾನ ಪಡೆದಿದೆ.  ಪ್ರತಿ ೧೦ ಕಿ.ಮೀ. ಚಲನೆಗೆ ಸರಾಸರಿ ೨೮ ನಿಮಿಶ ೧೦ ಸೆ. ಬೇಕಂತೆ. ಅಭಿನಂದನೆಗಳು. ನಗರ ಹೇಗೆ ಅಡ್ಡಾದಿಡ್ಡಿಯಾಗಿ ಬೆಳೆದಿದೆಯೋ, ವಾಹನಗಳೂ ಕೂಡ ಹಾಗೆಯೆ ಓಡುತ್ತವೆ.  ನಮ್ಮೂರು- ರಸ್ತೆಗಳು, ಪಾದಚಾರಿ ಮಾರ್ಗಗಳು, ಸಿಗ್ನಲ್‍ಗಳು, ಕಾಮಗಾರಿಗಳು, ಅಧಿಕಾರಿಗಳ ಬುದ್ಧಿವಂತಿಕೆ, ತಾನು ಮಾತ್ರ ಬೇಗ ಗುರಿ ಮುಟ್ಟುವ ಜನರ ತವಕ ( ಮೋಕ್ಷವಲ್ಲ) – ಎಲ್ಲದರ ’ಅಪೂರ್ವ ಸಂಗಮ’.

ಭವ್ಯ ಪರಂಪರೆಯ ಬಗ್ಗೆ ಹೆಮ್ಮೆ ಪಡುವವರ ಪಡೆಯ ನಡುವೆ ನಮ್ಮದು ’ಕನ್ನಡ- ದೇಶ, ಭಾಷೆ, ಜಾತಿ, ಶಿಲ್ಪ, ಜನ, ತೆರಿಗೆ’ ಎಂದೆಲ್ಲಾ ಕನವರಿಸುತ್ತಾ ಕಡೆಗೆ ನನ್ನ ಜಾತಿ, ಪಂಥ, ಮತ ಮಾತ್ರ ದೊಡ್ಡದು ಎಂದುಕೊಳ್ಳುತ್ತಾ ಅವುಗಳಿಂದಾಗುವ ಲಾಭಕ್ಕೆ ಕಾಯುವವರ ಸೇನೆಗಳೂ ಮತ್ತವರನ್ನು ಸಾಕುತ್ತಿರುವ ಸಮಯ ಸಾಧಕರು ಕೂಡ ಕಾಯುತ್ತಿದ್ದಾರೆ ’ಅಮೃತ ಘಳಿಗೆ’ಗೆ.

ಇಲ್ಲಿ ಕೆಲಸಗಾರರ ಕೊರತೆಯಿದೆ. ಎಲ್ಲಾ ದಿಕ್ಕುಗಳಿಂದ, ಗಡಿಗಳಾಚೆಯಿಂದ ಜನಪ್ರವಾಹ ಬಂದರೂ, ಹೊಟೆಲ್‍ಗಳು, ವ್ಯಾಪಾರಸ್ಥರು, ಕಾರ್ಖಾನೆಗಳು, ಸಾಫ್ಟ್ವೇರ್ ಉದ್ಯಮಗಳು, ಸಾರಿಗೆ ಸಂಸ್ಥೆಗಳು, ವಿಮಾನಗಳು ಇತ್ಯಾದಿ ಜಾಗಗಳಲ್ಲಿ ’ಸರಿ ಸಿಬ್ಬಂದಿಗಳ’ ಕೊರತೆ ಕಾಡುತ್ತಿದೆ. ಅಪರೂಪವಾಗಿದ್ದ ಅಪಘಾತಗಳು, ಅವಘಡಗಳು ಹೆಚ್ಚುವುದಕ್ಕೆ ಜನಸಂಖ್ಯೆ ಕಾರಣವೊ ಅಥವಾ ’ ಚಲ್ತಾ ಹೈ/ It’s not my problem’ ಎಂಬ ಧೋರಣೆ ಕಾರಣವೋ ಎಂಬುದು ಇನ್ನೂ ’ನಿಗೂಢ ರಹಸ್ಯ’.

ರಜನೀಕಾಂತನಿಗೆ ವಯಸ್ಸಾಯ್ತು; ಅವನು ಸಿನಿಮಾ ಮಾಡದು ನಿಲ್ಲಿಸಿದರೆ ಒಳ್ಲೆಯದು ಎಂಬ ಅಭಿಪ್ರಾಯವನ್ನು ಯಾರೊ ಫೇಸ್‍ಬುಕ್‍ನಲ್ಲಿ ವ್ಯಕ್ತ ಪಡಿಸಿದರು. ಅತಿ ಮುದುಕರು ರಾಜಕಾರಣದಲ್ಲಿದ್ದು ಸಮಾಜದ ಆಗು ಹೋಗುಗಳನ್ನು ನಿಯಂತ್ರಿಸುತ್ತ ನೇರವಾಗಿ ನಮ್ಮೆಲ್ಲರ ಜೀವನದ ಸುಖ ದುಃಖಗಳಿಗೆ ಕಾರಣರಾಗುತ್ತಿದ್ದಾರೆ. ಇಂಥವರನ್ನು ಸಹಿಸಿಕೊಳ್ಳುವ ನಾವು, ಕೇವಲ ಮನರಂಜನಾ ಕ್ಷೇತ್ರದಲ್ಲಿದ್ದು, ಜನರ ಅನಂದಕ್ಕೆ ಕಾರಣವಾಗುತ್ತಿರುವವರ ಬಗ್ಗೆಯೂ ಒಂದು ಅಭಿಪ್ರಾಯ ವ್ಯಕ್ತಪಡಿಸುವಷ್ತರವರೆಗೆ ನಮ್ಮ ಮಾನಸಿಕ ಬಡತನ, ಆದ್ಯತೆಗಳ ಬಗ್ಗೆ ಅಪ್ರಭುದ್ಧತೆ ಕಾಡುತ್ತಿದೆಯೆಂದರೆ, ಇದು ’ಕಲಿಯುಗ’ವೆ!

ಇಲ್ಲಿರುವವರು, ಎಲ್ಲೊ ಉಗ್ರಗಾಮಿ ಸತ್ತರೆ ಇಲ್ಲಿ ಮೌನಾಚರಣೆ ಮಾಡುತ್ತ, ಮಾನಸಿಕ ಆನಂದ ಮತ್ತು ದೈಹಿಕ ಸಾಮರ್ಥ್ಯ ನೀಡುತ್ತಿದ್ದ ಸಂಗೀತ, ಸಾಹಿತ್ಯ, ನೃತ್ಯ, ಚಿತ್ರಕಲೆ, ಕ್ರೀಡೆ ಇತ್ಯಾದಿ ಕ್ಷೇತ್ರಗಳಲ್ಲೂ ಜಾತಿಯತೆ, ಪಂಥೀಯ ಭಾವನೆಗಳು, ಮೀಟೂಗಳು, ನನ್ನ ದೇಹ- ನನ್ನ ಸ್ವಾತಂತ್ರ್ಯದಂತಹ ಪರಕೀಯ ಕಿರಿಕಿರಿಗಳನ್ನು ಮೈ-ಮನಕ್ಕೆ ಆವರಿಸಿಕೊಂಡು ಪ್ರತಿಭಟನೆಗಳ ’ಸುಳಿ’ಯಲ್ಲಿ ಸಿಕ್ಕಿಹಾಕಿಕೊಂಡಿರುವರು..

ಸತ್ಯ, ಸಮಯನಿಷ್ಠೆ, ಸರಿ-ತಪ್ಪುಗಳ ವಿವೇಚನೆ ಕಳೆದುಕೊಂಡು ’ನಾನು ಸರಿ; ನನ್ನದೇ ಸರಿ, ನನ್ನದೇ ಹಕ್ಕು, ಸೌಲಭ್ಯಗಳು ನನಗಾಗಿ’ ಇತ್ಯಾದಿ ಸ್ವಕೇಂದ್ರಿತ ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಂಡಿರುವ ಜನಸಾಮಾನ್ಯರ ’ಪ್ರಜಾಶಕ್ತಿ’ ಅತಿಶಯ.

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಿ ಬಿದ್ದು. ಅನಿಸಿದ್ದನ್ನೆಲ್ಲಾ ಕಕ್ಕುತ್ತಾ, ರೀಲ್ಸ್, ಸೆಲ್ಫಿ ಮಾಯಾಜಾಲದೊಳಗೆ ಹೋಗಿ, ಹೊರ ಬರಲಾಗದೆ ಚಡಪಡಿಸುತ್ತ, ಕೇವಲ ಲೈಕುಗಳ ಸಂಖ್ಯೆಯಿಂದ ತಾನೂ ಒಬ್ಬ ’ ಸಾಧಕ’ನೆಂಬ ಬೃಹತ್ ಭ್ರಮೆಯಲ್ಲಿರುವವರ ’ಬದುಕು ಬಂಗಾರವಾಯ್ತು’.

ಅದು ಬೇಡ, ಇದು ಬೇಕು; ನೀನು ಸರಿಯಿಲ್ಲ, ನಿಮ್ಮಪದ್ಧತಿ ತಪ್ಪು; ಹೀಗೆಲ್ಲಾ ಹೀಗೆಳೆಯುತ್ತಾ, ನಿಮ್ಮನ್ನು ಕಾಲೆಳೆಯುವ ಬುದ್ಧಿಜೀವಿಗಳನ್ನು ತಿರಸ್ಕರಿಸಿ, ನಿಮ್ಮ ಸಂಸ್ಕಾರ, ಸಂಸ್ಕೃತಿಗಳನ್ನು ಧೈರ್ಯದಿಂದ ಪ್ರದರ್ಶಿಸಿ, ನಿಮ್ಮ ನಿಮ್ಮ ಜೀವನವನ್ನು ಮತ್ತೊಬ್ಬರಿಗೆ ತೊಂದರೆಯಾಗದಂತೆ ಕಟ್ಟಿಕೊಂಡು, ’ತೃಪ್ತ’ ಭಾವದಿಂದ ಹಬ್ಬ ಹರಿದಿನಗಳನ್ನು ವಿಜೃಂಭಣೆಯಿಂದಾಚರಿಸಿ.

ನಿಮ್ಮೆಲ್ಲರಿಗೆ ’ ಮರೆಯದ ದೀಪಾವಳಿ’ ಆಗಲಿ ಎಂಬ ಹಾರೈಕೆಯೊಡನೆ……

ಎಲ್ಲ ಬಲ್ಲವರಿಲ್ಲಬಲ್ಲವರು ಯಾರಿಲ್ಲಸುಮ್ಮನಿರಬಲ್ಲವರು ಇಲ್ಲವೆ ಇಲ್ಲ……