- ಒಕಾಪಿಗಳ ಲೋಕದಲ್ಲಿ - ಅಕ್ಟೋಬರ್ 27, 2024
- ಮಹಾಸಾಗರವಾದಳು - ಸೆಪ್ಟೆಂಬರ್ 13, 2024
- ಅಂಟಿಗೆ ಪಿಂಟಿಗೆ: - ನವೆಂಬರ್ 16, 2020
ವಿನಾಶದಂಚಿನಲ್ಲಿರುವ ʻಒಕಾಪಿʼಗಳೆಂಬ ಜಿರಾಫೆ ಕುಲದ ಭೂಗ್ರಹದ ಆಕರ್ಷಕ ಜೀವಿಗಳೆಂಬ ನಡೆದಾಡುವ ವಿಸ್ಮಯ:
ನಮ್ಮ ಭೂಮಿಯಲ್ಲಿರುವ ಜೀವ ಪ್ರಪಂಚದ ಅಸಂಖ್ಯ ಜೀವಜಂತುಗಳಲ್ಲಿ ಅದೆಷ್ಟೋ ಜೀವಸಂಕುಲಗಳ ಬಗೆಗಿನ ಪರಿಚಯ ಇನ್ನೂ ಸರಿಯಾಗಿ ಮಾನವನಿಗೆ ಆಗಿಲ್ಲ. ಎಷ್ಟೋ ವೈವೀದ್ಯಮಯ ಜೀವ ಸಂಕುಲಗಳು ಮಾನವನ ಕಡುಸ್ವಾರ್ಥದ ಕಾರಣ ನಾಮವಶೇಷಗೊಂಡಿವೆ. ಜೀವಕೋಟಿಯ ಅಸ್ಥಿತ್ವವನ್ನು ಹುಡುಕುವ ಪ್ರಯತ್ನ ವನ್ಯಜೀವಿ ಮತ್ತು ಪರಿಸರ ಪ್ರಿಯರಿಂದ ಇವತ್ತಿಗೂ ನಡೆಯುತ್ತಲೇ ಇದೆ. ಜೀವಸಂಕುಲಗಳ ಉಳಿವಿನ ಕುರಿತಾಗಿ ಅಪಾರ ಕಾಳಜಿ ಇಟ್ಟುಕೊಂಡು ಕೆಲಸ ಮಾಡುತ್ತಿರುವ ಐಯುಸಿಎನ್ ಜಾಗತಿಕ ಸಂಸ್ಥೆ ಕೆಲವು ಜೀವಪ್ರಭೇಧಗಳನ್ನು ಅಳಿವಿನಂಚಿನಲ್ಲಿರುವ ಜೀವಿಗಳೆಂದು ಪಟ್ಟಿ ಮಾಡಿ ವಿಶೇಷ ನಿಗಾದಡಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಹಾಗೆ ಐಯುಸಿಎನ್ ಪಟ್ಟಿ ಮಾಡಿರುವ ವಿನಾಶದಂಚಿನಲ್ಲಿರುವ ಅತ್ಯಂತ ಸುಂದರ ಜೀವಸೃಷ್ಟಿ ಒಕಾಪಿ ಎನ್ನುವ ಜಿರಾಫೆಗಳ ಕುಟುಂಬಕ್ಕೆ ಸೇರಿರುವ ಅಪೂರ್ವ ಪ್ರಾಣಿಗಳು.
ಅಸಲಿಗೆ ಇಂತದ್ದೊಂದು ಜೀವಸಂಕುಲ ಅಸ್ಥಿತ್ವದಲ್ಲಿದೆ ಎಂದು ಮಾನವ ಪ್ರಪಂಚಕ್ಕೆ ಅಥವಾ ವಿಜ್ಞಾನ ಜೀವಪ್ರಪಂಚಕ್ಕೆ 1900ರ ವರೆಗೂ ತಿಳಿದಿರಲೇ ಇಲ್ಲ. ಒಕಾಪಿಗಳ ಕುರಿತಾಗಿ ಮೊತ್ತ ಮೊದಲ ಬಾರಿಗೆ ಜೀವ ವಿಜ್ಞಾನ ಜಗತ್ತಿಗೆ ಅಧಿಕೃತವಾಗಿ ತಿಳಿಸಿದವನು ಬ್ರಿಟಿಷ್ ಪರಿಶೋಧಕ ಸರ್ ಹ್ಯಾರಿ ಹ್ಯಾಮಿಲ್ಟನ್ ಜಾನ್ಸ್ಟನ್ 1991ರಲ್ಲಿ. ಒಕಾಪಿಯ ವಿಶಿಷ್ಟವಾದ ತಲೆಬುರುಡೆ ಮತ್ತು ಚರ್ಮವನ್ನು ತೋರಿಸಿ ಇದು ಜಿರಾಫೆ ಕುಟುಂಬಕ್ಕೆ ಸೇರಿರುವ ಜೀವಿ ಇರಬಹುದು ಎಂದು ಅಂದಾಜಿಸಿದವನು ಹ್ಯಾಮಿಲ್ಟನ್ ಜಾನ್ಸ್ಟನ್. ಅದಕ್ಕೂ ಮೊದಲು ಒಕಾಪಿಗಳ ಬಗ್ಗೆ ಇನ್ನೂ ಕೆಲವರು ಸಂಶೋಧನೆ ಅನ್ವೇಷಣೆ ನಡೆಸಿದ್ದರು. ಬ್ರಿಟಿಷ್ ಅಮೇರಿಕನ್ ಪರಿಶೋಧಕ ಸರ್ ಹೆನ್ರಿ ಮಾರ್ಟನ್ ಸ್ಟಾನ್ಲಿ 1890ರಲ್ಲಿ ಒಕಾಪಿಯ ಕುರಿತಾಗಿ ಮೊದಲು ವರದಿ ಮಾಡಿದ್ದನು. ಇದಕ್ಕೂ ಮೊದಲು, ರಷ್ಯಾದ ಪರಿಶೋಧಕ ವಿಲ್ಹೆಲ್ಮ್ ಜಂಕರ್ 1870ರ ದಶಕದ ಕೊನೆಯಲ್ಲಿ ಅಥವಾ 1880ರ ದಶಕದಲ್ಲಿ ಒಕಾಪಿ ಎಂಬ ಅತಿ ಹಿಂಜರಿಕೆಯ ಜೀವಿಯ ಕುರುಹು ನೀಡಿದ್ದ. ಆದರೆ ಅವರು ಈ ಪ್ರಾಣಿಯನ್ನು ಜೀಬ್ರಾ (ಹೇಸರಗತ್ತೆ) ತರಹದ, ಜಿಂಕೆ ಅಥವಾ ಹುಲ್ಲೆ ಕುಲಕ್ಕೆ ಸೇರಿದ ಜೀವಿಗಳಾಗಿರಬಹುದು ಎಂದು ತಪ್ಪಾಗಿ ಅರ್ಥೈಸಿದ್ದರು.
ಆಫ್ರಿಕದ ಉಷ್ಣವಲಯದ ಕಾಡುಗಳಲ್ಲಿ ಜೀವಿಸುವ ಜಿರಾಫೆಗಳ ಜಾತಿಗೆ ಸೇರಿದ ಒಕಾಪಿ, ಕಾಂಗೋವಿನ ಸೆಮ್ಲಿಕಿ ಅರಣ್ಯದಲ್ಲಿ ಮುಖ್ಯವಾಗಿ ಕಂಡುಬರುತ್ತದೆ. ವೈಲ್ಡ್ ಒಕಾಪಿಗಳು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಮಧ್ಯಭಾಗ, ಉತ್ತರ ಮತ್ತು ಪೂರ್ವ ಪ್ರದೇಶಗಳಲ್ಲಿ ಮಾತ್ರ ಅಸ್ತಿತ್ವದಲ್ಲಿದೆ ಎನ್ನಲಾಗುತ್ತದೆ. ಹಿಂದೊಮ್ಮೆ ಇವು ಉಗಾಂಡಾದಲ್ಲಿಯೂ ಇದ್ದವಂತೆ, ಆದರೆ ಕಾಲಾನುಕ್ರಮದಲ್ಲಿ ವಿವಿಧ ಕಾರಣಗಳಿಂದ ಉಗಾಂಡದಲ್ಲಿ ಒಕಾಪಿಗಳು ನಿರ್ನಾಮವಾಗಿವೆ. ಒಕಾಪಿಗಳು ಸಮುದ್ರ ಮಟ್ಟದಿಂದ ಸುಮಾರು 5,000 ಅಡಿ ಎತ್ತರದ ದಟ್ಟ ಮೇಲಾವರಣದ ಕಾಡುಗಳಿಗೆ ಸೀಮಿತವಾಗಿವೆ.
ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಪ್ರಕಾರ ಇವು ಹೆಚ್ಚಾಗಿ ದಟ್ಟಾರಣ್ಯ, ಗೊಂಡಾರಣ್ಯಗಳಲ್ಲಿ ಮಾತ್ರ ಬದುಕುತ್ತವೆ. ಒಕಾಪಿಯ ಜಾನ್ಸ್ಟೋನಿ ಎನ್ನುವುದು ಇದರ ವೈಜ್ಞಾನಿಕ ಹೆಸರು. ದೊಡ್ಡ ಗಾತ್ರದ ಇದರ ಕುತ್ತಿಗೆ ಜಿರಾಫೆಯಷ್ಟು ಉದ್ದವಿರದಿದ್ದರೂ ಜಿಂಕೆ ಅಥವಾ ಹೇಸರಗತ್ತೆಗಿಂತ ಉದ್ದವಿರುತ್ತದೆ. ಒಕಾಪಿಯ ಮೈಮೇಲಿನ ಆಕರ್ಷಕ ಚರ್ಮದ ಮೇಲೆ ದೊಡ್ಡದಾಗಿ ಎದ್ದು ಕಾಣುವ ಪಟ್ಟೆ ಪಟ್ಟೆ ಗೆರೆಗಳಿವೆ. ಗಾಢ ನೇರಳ, ಕಂದು ಮತ್ತು ಕೆಂಪು ಬಣ್ಣದ ಒಕಾಪಿಗಳ ತೊಗಲು ವೆಲ್ವೆಟ್ ಬಟ್ಟೆಯಷ್ಟೆ ಮೃದು. ಗಾತ್ರದಲ್ಲಿ ಜಿರಾಫೆಗಿಂತ ಸಣ್ಣದಿರುವ ಒಕಾಪಿಗಳು ಜಿರಾಫೆಗಳಂತೆಯೇ ಕೂದಲು ಮತ್ತು ಚರ್ಮ ಮುಚ್ಚಿರುವ ಸಣ್ಣ ಕೊಂಬುಗಳನ್ನು ಹೊಂದಿರುತ್ತವೆ. ಜಿರಾಫೆಗಳಂತೆ ಇವುಗಳಿಗೂ ಉದ್ದವಾದ ನಾಲಗೆ, ಸೀಳು ಗೊರಸು ಇರುತ್ತದೆ. ಜಿರಾಫೆಯಂತೆಯೇ ಕೊಂಚ ನೀಳವಾದ ಕುತ್ತಿಗೆ, ತೆಳುವಾದ ಚಿಪ್ಪಿನಂಥ ದೊಡ್ಡ ಕಿವಿಗಳು, ಚಾಕೋಲೇಟ್ ಅಥವಾ ನೀಲಿಗೆಂಪು ಮೈಬಣ್ಣ, ಹಿಂಭಾಗದಲ್ಲಿ ಬಿಳಿಗೀರುಗಳು, ಮುಖ ಕಾಲುಗಳ ಮೇಲೆ ಬಿಳಿ ಪಟ್ಟೆಗಳು ಇವುಗಳ ಮುಖ್ಯ ಗುಣಲಕ್ಷಣ. ಹೆಣ್ಣು ಒಕಾಪಿಗಳಿಗೆ ಕೊಂಬಿರುವುದಿಲ್ಲ; ಆದರೆ ಗಂಡಿಗಿಂತ ಹೆಣ್ಣಿನ ಗಾತ್ರ ದೊಡ್ಡದು. ಸದ್ದೇ ಮಾಡದೇ ಬದುಕುವುದು ಒಕಾಪಿಗಳ ಅತಿ ಮುಖ್ಯ ಲಕ್ಷಣ. ಸಾಧಾರಣವಾಗಿ ಒಕಾಪಿಗಳು ಒಂಟಿಯಾಗಿಯೋ, ಜೋಡಿಯಾಗಿಯೋ ತಿರುಗುತ್ತವೆ. ತೀರಾ ಪುಕ್ಕಲು ಮತ್ತು ಸಾಧುಸ್ವಭಾವದ ಈ ಪ್ರಾಣಿಗಳ ಸಂಚಾರ ಸದಾ ರಾತ್ರಿಯಲ್ಲಿ ಮಾತ್ರ. ಇವು ಏಕಾಂತವನ್ನು ಪ್ರೀತಿಸುವ ಜೀವಿಗಳು. ಕಾಂಗೋ ಕಾಡಿನ ದುರ್ಗಮವೂ, ದುರ್ಭೇದ್ಯವೂ ಆದ ಪ್ರದೇಶಗಳಲ್ಲಿ ಇವು ವಾಸಮಾಡುತ್ತವೆ. ಹೆಣ್ಣು ಒಕಾಪಿ ಪ್ರತಿ 40 ದಿವಸಗಳಿಗೊಮ್ಮೆ ಬೆದೆಗೆ ಬರುತ್ತದೆ. 425 ದಿನಗಳ ಗರ್ಭವಾಸದ ಅನಂತರ ಮರಿ ಹುಟ್ಟುತ್ತದೆ. ತಾಯಿ ಅದನ್ನು 3-4 ತಿಂಗಳ ತನಕ ಹಾಲೂಣಿಸಿ ಸಾಕುತ್ತದೆ.
ಗುಜ್ಜಾರಿ ಬುಡಕಟ್ಟು ಸಮುದಾಯಕ್ಕೂ ಒಕಾಪಿಗಳಿಗೂ ಅದ್ಯಾವ ಸಂಬಂಧ?
ಆಫ್ರಿಕಾದ ಇಟೂರಿ ಕಾಡಿನ ಬುಡಕಟ್ಟು ನಿವಾಸಿಗಳಾದ ಗುಜ್ಜಾರಿಗಳಿಗೆ ಮಾತ್ರ ಒಕಾಪಿಗಳ ಬದುಕಿನ ಒಂದಷ್ಟು ಮಾಹಿತಿ ಇದೆ. ಇವತ್ತಿಗೂ ದಟ್ಟಕಾಡಿನ ನಡುವೆ ಅಕ್ಷರಶಃ ಅಡಗಿ ನಿಲ್ಲುವ ಒಕಾಪಿಗಳ ಜಾಡುಗಳನ್ನು ಪತ್ತೆಹಚ್ಚುವುದರಲ್ಲಿ ಈ ಗುಜ್ಜಾರಿಗಳೇ ಅತ್ಯಂತ ಪರಿಣಿತರು. ಆಫ್ರಿಕಾದ ಕೆಲವು ಬುಡಕಟ್ಟು ಸಮುದಾಯಗಳು ಬೇಟೆಗಾಗಿ ಒಕಾಪಿಯನ್ನು ಕೊಂದು ನಾಶಮಾಡಿದರೆ ಇನ್ನೂ ಕೆಲವು ಬುಡಕಟ್ಟು ಜನರು ಇವುಗಳ ಮಾಂಸವನ್ನು ತಿನ್ನುವುದಿಲ್ಲ, ಒಕಶಾಪಿಗಳು ಎಲ್ಲಾ ತರಹದ ಸಸ್ಯಗಳನ್ನು ತಿಂದು ಅರಗಿಸಿಕೊಳ್ಳಬಲ್ಲದು; ಹೀಗಾಗಿ ಒಕಾಪಿ ಮಾಂಸ ವಿಷ ಎನ್ನುವ ನಂಬಿಕೆ ಕೆಲವು ಬುಡಕಟ್ಟು ಜನರಲ್ಲಿದೆ. ಕಾಡಿನ ಅಂಚಿನಲ್ಲಿ ನೆಲೆಸಿರುವ ಗುಜ್ಜಾರಿಗಳು ಕೆಲವು ಬಾಂಟು ಕುಲದವರೂ ಇವುಗಳ ನೆಲೆಯನ್ನು ಪತ್ತೆಹಚ್ಚಿ, ಬೇಟೆಯಾಡಿ, ಇವುಗಳ ಮಾಂಸ ತುಂಬ ರುಚಿ ಎಂದು ಕಂಡುಕೊಂಡಿದ್ದರು. ಬಹು ಹಿಂದೆಯೇ ಬೆಲ್ಜಿಯಂ ಸರ್ಕಾರ ಈ ಅಪುರ್ವ ಪ್ರಾಣಿ ನಾಶವಾಗದಂತೆ ಕಾಪಾಡುವುದಕ್ಕಾಗಿ ಕಠಿಣ ಕಾನೂನುಗಳನ್ನು ಮಾಡಿತ್ತು. ಇಟೂರಿ ಕಾಡಿನ ಮಧ್ಯದಲ್ಲಿ ಎಪುಲು ಎಂಬೆಡೆಯಲ್ಲಿರುವ ಒಕಾಪಿ ಕ್ಷೇತ್ರದಲ್ಲಿ ಅರಣ್ಯ ಇಲಾಖೆಯವರು ಇವುಗಳ ವಿಷಯದಲ್ಲಿ ವಿಸ್ತಾರವಾದ ಸಂಶೋಧನೆ ನಡೆಸುತ್ತಿದ್ದಾರೆ.
ಒಕಾಪಿಗಳು ಸಸ್ಯಾಹಾರಿಗಳು, ಎಲೆಗಳು, ಮೊಗ್ಗುಗಳು ಮತ್ತು ಮರಗಳ ಹಣ್ಣುಗಳು ಮತ್ತು ಜರೀಗಿಡಗಳು, ಹುಲ್ಲುಗಳು ಮತ್ತು ಶಿಲೀಂಧ್ರಗಳನ್ನು ತಿನ್ನುತ್ತವೆ. ಜೊತೆಗೆ ವಿವಿಧ ಕಾಡುಹಣ್ಣುಗಳು, ಹೂಮೊಗ್ಗುಗಳು, ಎಳೆಯ ರೆಂಬೆ-ಕೊಂಬೆಗಳನ್ನೂ ತಿನ್ನುತ್ತವೆ. ಇವು ಪ್ರತಿದಿನ 40 ರಿಂದ 65 ಪೌಂಡ್ (ಅಂದರೆ 18 ರಿಂದ 29 ಕೆಜಿ) ಆಹಾರವನ್ನು ತಿನ್ನುತ್ತವೆ. ವಿಚಿತ್ರವೆಂದರೆ ಇವು ಜೇಡಿಮಣ್ಣು, ಸುಟ್ಟಮರ ಮತ್ತು ಬಾವಲಿಯ ಹಿಕ್ಕೆಗಳನ್ನೂ ತಿನ್ನುತ್ತವೆ. ಒಕಾಪಿಗಳಿಗೂ ಜಿರಾಫೆಯಂತೆ ನಾಲ್ಕು ಹೊಟ್ಟೆಗಳಿವೆ. ಒಕಾಪಿಗಳೂ ಕೂಡಾ ಜಿರಾಫೆಯಂತೆಯೇ, ಸಣ್ಣ ಮತ್ತು ಮಧ್ಯಮ ಗಾತ್ರದ ಮರದ ಎಲೆಗಳನ್ನು ಚಿವುಟಿ ಕೀಳಲು ಅನುವಾಗುವಂತೆ ತನ್ನ ತುಂಬ ಉದ್ದವಾದ ತಿರುಚು ನಾಲಗೆಯನ್ನು ಉಪಯೋಗಿಸುತ್ತವೆ. ಒಕಾಪಿಗಳ ನಾಲಿಗೆ ಸುಮಾರು 30 ಸೆಂಟಿಮೀಟರ್ ನಷ್ಟು ಉದ್ದವಿರುತ್ತದೆ. ಜಿರಾಫೆಗಳಂತೆ, ಒಕಾಪಿಯ ನಾಲಿಗೆಯು ಕಪ್ಪು ಅಥವಾ ಗಾಢ ನೀಲಿ ಬಣ್ಣ. ಒಕಾಪಿಗಳು ತಮ್ಮ ಕಣ್ಣುರೆಪ್ಪೆಗಳನ್ನು ತೊಳೆಯಲು, ತಮ್ಮ ಕಿವಿಗಳನ್ನು ಸ್ವಚ್ಛಗೊಳಿಸಲು ಮತ್ತು ಕುತ್ತಿಗೆಯಿಂದ ಕೀಟಗಳನ್ನು ಹೊರಹಾಕಲು ಕೂಡಾ ತಮ್ಮ ನೀಳವಾದ ನಾಲಿಗೆಯನ್ನು ಬಳಸುತ್ತವೆ.
ಹಗಲಿನಲ್ಲಿ ಒಕಾಪಿಗಳು ಕಾಡಿನ ನಟ್ಟನಡುವಿನ ನೀರಿನ ಗಹ್ವರಗಳಲ್ಲಿ ಅಡಗಿಕೊಂಡಿರುತ್ತವೆ. ಇವುಗಳ ಇನ್ನುಂದು ಲಕ್ಷಣವೆಂದರೇ, ಆಹಾರ ಮೇಯುವಾಗ ಶತ್ರುಗಳು ಹಠಾತ್ತನೆ ಮೇಲೆರಗದಂತೆ, ಶತ್ರುಗಳ ಸದ್ದಿನ ಸುಳಿವು ಸಿಗುವ ದೊಡ್ಡ ಒಂಟಿಮರಗಳನ್ನು ಆಶ್ರಯಿಸಿ ನಿಲ್ಲುತ್ತವೆ. ಇವುಗಳಿಗೆ ಜಿರಾಫೆಯಷ್ಟು ತೀಕ್ಷ್ಣ ದೃಷ್ಟಿಯಿಲ್ಲ; ಆದರೆ ಶಬ್ದಗ್ರಹಣಶಕ್ತಿ ಸಾಕಷ್ಟು ಚುರುಕಾಗಿದೆ; ತನ್ನ ಶ್ರವಣಬಲದಿಂದ ವೈರಿಗಳ ದಾಳಿಯಿಂದ ಪಾರಾಗುವ ಚಾಕಚಕ್ಯತೆ ಒಕಾಪಿಗಳಿಗಿದೆ.. ಒಕಾಪಿಗಳ ರಕ್ಷಣೆಗೆ ಈ ಶ್ರವಣ ಶಕ್ತಿಯೇ ಅತ್ಯಂತ ಮುಖ್ಯ ಸಾಧನ. ಚಿರತೆ, ಹೈನಾ, ಹುಲಿ ಮುಂತಾದ ಪರಭಕ್ಷಕ ಜೀವಿಗಳಿಂದ ತಪ್ಪಿಸಿಕೊಳ್ಳಲು ಇವುಗಳ ಕಿವಿ ಸದಾ ಜಾಗೃತವಾಗಿರುತ್ತದೆ. ಸಾಮಾನ್ಯವಾಗಿ ಮರದ ಎಲೆಗಳು, ಬಳ್ಳಿಗಳನ್ನು ತಿನ್ನುವ ಒಕಾಪಿಗಳು ಹುಲ್ಲುಗಳನ್ನು ಮುಟ್ಟುವುದಿಲ್ಲ. ಹೀಗಾಗಿಯೇ ಆಫ್ರಿಕಾದ ಸಹರಾದಂತಹ ಸವನ್ನಾ ಹುಲ್ಲುಗಾವಲುಗಳಲ್ಲಿ ಒಕಾಪಿಗಳನ್ನು ಕಾಣಲು ಸಾಧ್ಯವಿಲ್ಲ.
ಭೂಮಿಯ ಮೇಲೆ ಎಷ್ಟಿದ್ದಾರೆ ಗೊತ್ತಾ ಒಕಾಪಿ ಸಮುದಾಯದ ಬಂಧುಗಳು?
ಇವತ್ತಿಗೂ ಜಗತ್ತಿನಾದ್ಯಂತ ಇರುವ ಪ್ರಾಣಿ ಸಂಗ್ರಹಾಲಯದಲ್ಲಿರುವ ಒಕಾಪಿಗಳ ಸಂಖ್ಯೆ 100 ದಾಟುವುದಿಲ್ಲ. ದಟ್ಟವಾದ ಮಳೆಕಾಡುಗಳಲ್ಲಿ ಮರೆಯಾಗಿ ಬದುಕಲು ಇಚ್ಛಿಸುವ ಒಕಾಪಿಗಳು ಮನುಷ್ಯರಿಂದ ದೂರ ಅಂತರ ಕಾಯ್ದುಕೊಂಡು ಬದುಕುತ್ತವೆ. ಇವು ಅದೆಷ್ಟು ನಾಚಿಕೆಯ ಜೀವಿಗಳು ಎಂದರೆ, ಇವುಗಳು ವಾಸಿಸುವ ಕಾಡಿನಲ್ಲಿ ಒಕಾಪಿಗಳನ್ನು ಕಾಣಲು ಸಾಧ್ಯವೇ ಇಲ್ಲ. 2008 ರವರೆಗೆ ಒಕಾಪಿಯ ಯಾವುದೇ ಒಂದು ನಿರ್ದಿಷ್ಟವಾದ ಚಿತ್ರಗಳನ್ನೂ ಕೂಡಾ ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಮೊದಲ ವೈಲ್ಡ್ ಒಕಾಪಿ ಫೋಟೋವನ್ನು ಲಂಡನ್ನ ಝೂಲಾಜಿಕಲ್ ಸೊಸೈಟಿಯ ಕ್ಯಾಮರಾ ಟ್ರ್ಯಾಪ್ ಮೂಲಕ ಸ್ವಾಭಾವಿಕ ಕಾಡಿನಲ್ಲಿ ಒಕಾಪಿಯ ಚಿತ್ರವನ್ನು ಸೆರೆಹಿಡಿಯಿತು. ಈಗೀಗ ಪ್ರಪಂಚದ ಅನೇಕ ಪ್ರಾಣಿಸಂಗ್ರಹಾಲಯಗಳಲ್ಲಿ ಇವನ್ನು ಯಶಸ್ವಿಯಾಗಿ ಸಾಕಲಾಗುತ್ತಿದೆ. ಅಲ್ಲಿ ಇವು ಮರಿಗಳನ್ನೂ ಹಾಕುತ್ತಿವೆ.
ಅಷ್ಟೇನು ಪ್ರಸಿದ್ಧವಲ್ಲದ ಈ ಒಕಾಪಿಗಳ ಬಗೆಗಿನ ಮಾಹಿತಿ ಇಂದಿಗೂ ಅಪೂರ್ಣವೇ. ಒಕಾಪಿಗಳು ದಟ್ಟಕಾಡುಗಳಲ್ಲಿ ಮಳೆಕಾಡುಗಳಲ್ಲಿ ಮರೆಯಾಗಿ ಬದುಕುವ ಕಾರಣದಿಂದ ಇವುಗಳ ಒಂದು ಮಟ್ಟಿನ ಸಂಖ್ಯಾಗಣತಿಯೂ ಸಾಧ್ಯವಾಗುವುದಿಲ್ಲ. ಕೆಲವು ಮೂಲಗಳ ಪ್ರಕಾರ ಭೂಮಿಯಲ್ಲಿರುವ ಒಟ್ಟು ಒಕಾಪಿಯ ಸಂಖ್ಯೆ 10ರಿಂದ 30 ಸಾವಿರ. ಇನ್ನೂ ಕೆಲವು ಸಂಸ್ಥೆಗಳ ಪ್ರಕಾರ ಬದುಕಿರುವ ಒಕಾಪಿಗಳ ಸಂಖ್ಯೆ ಕೇವಲ 5000 ಮಾತ್ರ. ಕಳೆದ 25 ವರ್ಷಗಳಲ್ಲಿ ಈ ಒಕಾಪಿಗಳ ಸಂಖ್ಯೆ ಅತ್ಯಂತ ಆತಂಕಕಾರಿಯಾಗಿ ಇಳಿಮುಖವಾಗುತ್ತಿದೆ. ಶೇ.50ರಷ್ಟು ಒಕಾಪಿಗಳು ಈಗಾಗಲೇ ನಾಶವಾಗಿವೆ ಎಂದು ಆತಂಕ ವ್ಯಕ್ತಪಡಿಸುತ್ತದೆ ಐಯುಸಿಎನ್.
ಒಕಾಪಿಗಳ ಸಹಜ ಆವಾಸಸ್ಥಾನದ ಅಡಚಣೆಯ ಕಾರಣ ಅತ್ಯಂತ ಸೂಕ್ಷ್ಮ ಜೀವಿಗಳಾದ ಓಕಾಪಿಗಳು ವಿನಾಶದ ಅಂಚಿಗೆ ಸರಿಯುತ್ತಿದೆ. ಮಾನವ ವಸಾಹತುಗಳ ವಿಸ್ತರಣೆ ಮತ್ತು ಗಣಿಗಾರಿಕೆಯ ಕಾರಣದಿಂದಲೂ ಒಕಾಪಿಗಳ ಜೀವಿಪರಿಸರ ವ್ಯಾಪಕವಾಗಿ ಕುಂಠಿತವಾಗುತ್ತಿದೆ. ಬೇಟೆಗಾರಿಕೆಯಿಂದಲೂ ಒಕಾಪಿಗಳ ಜೀವಪ್ರಭೇಧ ಅತೀವ ಅಪಾಯ ಎದುರಿಸುತ್ತಿದೆ. ಒಕಾಪಿಯನ್ನು 1933ರಿಂದ ಅಧಿಕೃತವಾಗಿ ರಕ್ಷಿಸಲು ಕಾನೂನು ಕಟ್ಟಳೆಗಳನ್ನು ಭಿಗಿಮಾಡಲಾಗುತ್ತಿದೆಯಾದರೂ ಕಾನೂನುಬಾಹಿರವಾಗಿ ಒಕಾಪಿ ಬೇಟೆ ನಿರಂತರವಾಗಿ ನಡೆಯುತ್ತಿದೆ.
ಗೊರಸಿನಲ್ಲಿ ಅವಿಸಿಕೊಂಡ ಪರಿಮಳವೇ ನೆಲೆಯನ್ನು ಗುರುತಿಸುವ ಮಾನದಂಡ:
ನಮ್ಮ ಕಸ್ತೂರಿ ಮೃಗಗಳಂತೆಯೇ ಒಕಾಪಿಗಳು ತಮ್ಮ ಗೊರಸುಗಳಲ್ಲಿ ಪರಿಮಳ ಗ್ರಂಥಿಗಳನ್ನು ಹೊಂದಿರುತ್ತವೆ: ಒಕಾಪಿಗಳು ತಮ್ಮ ಪ್ರದೇಶವನ್ನು ಗುರುತಿಸಲು ಈ ಗ್ರಂಥಿಗಳನ್ನು ಬಳಸುತ್ತವೆ. ಇನ್ನೊಂದು ಆಸಕ್ತಿಕರ ವಿಷಯವೆಂದರೇ, ಒಕಾಪಿಗಳು ವಿಭಿನ್ನ ರೀತಿಯಲ್ಲಿ ಸಂವಹನ ನಡೆಸುತ್ತವೆ: ಸಾಮಾನ್ಯವಾಗಿ ಶಾಂತವಾದ ಕೆಮ್ಮಿನ ಶಬ್ದದೊಂದಿಗೆ ಸಂವಹನ ನಡೆಸುವ ಒಕಾಪಿಗಳು, ತೊಂದರೆಗೊಳಗಾದಾಗ ಜೋರಾಗಿ ಗೊರಕೆ ಹೊಡೆಯುವ ಶಬ್ಧ ಹೊರಡಿಸಿ ಎಚ್ಚರಿಕೆ ರವಾನಿಸುತ್ತವೆ. ಒಕಾಪಿ ತಾಯಂದಿರು ತಮ್ಮ ಕರುಗಳೊಂದಿಗೆ ಅತ್ಯಂತ ಸಣ್ಣ ಧ್ವನಿಯಲ್ಲಿ ಸಂವಹನ ನಡೆಸುತ್ತವೆ. ಶತ್ರುಗಳಿಗೆ ತಮ್ಮ ಸುಳಿವು ಸಿಗದಿರಲೆಂದು ಇವುಗಳ ಸಂಭಾಷಣೆ ಅತ್ಯಂತ ಮಂದಗತಿಯಲ್ಲಿರುತ್ತದೆ; ಮತ್ತದು ಉಳಿದ ಜೀವಿಗಳಿಗೆ ಅದರಲ್ಲೂ ಮರಿಗಳಿಗೂ ಸುಲಭವಾಗಿ ಅರ್ಥವಾಗುತ್ತದೆ. ಗಂಡು ಒಕಾಪಿಗಳು ತಮ್ಮ ಪ್ರತಿಸ್ಪರ್ಧಿಯೊಂದಿಗೆ ಕುತ್ತಿಗೆ ಬೆಸೆದುಕೊಂಡು ಕುಸ್ತಿಯಾಡುತ್ತವೆ.
ನೀವು ಒಕಾಪಿಯ ತಲೆಯನ್ನು ಹತ್ತಿರದಿಂದ ನೋಡಿದರೆ, ನೀವು ಇನ್ನೊಂದು ಹೋಲಿಕೆಯನ್ನು ಗಮನಿಸಬಹುದು. ಜಿರಾಫೆಗಳಲ್ಲದ ಜಿರಾಫೆ ಕುಟುಂಬದ ಏಕೈಕ ಉಳಿದಿರುವ ಸದಸ್ಯ ಜೀವಿ ಈ ಒಕಾಪಿಸ್. ಇವು ಒಕಾಪಿಯಾ ಕುಲದ ಒಂಟಿ ಜಾತಿಗಳಾಗಿವೆ, ಇದು ಜಿರಾಫಿಡೆ ಕುಟುಂಬದಲ್ಲಿ ಎರಡು ಕವಲಾಗಿ ಅಸ್ತಿತ್ವದಲ್ಲಿರುವ ಜಿರಾಫಾ ಜಾತಿಗೆ ಸೇರುತ್ತವೆ. ಒಕಾಪಿಗಳು ಜಿರಾಫೆಗಳಷ್ಟು ಎತ್ತರವಾಗಿರುವುದಿಲ್ಲ. ಇವುಗಳು ವಾಸಿಸುವ ಮಳೆಕಾಡಿನಲ್ಲಿ ಮರಗಳ ಎಲೆಗಳನ್ನು ಸೆಳೆದು ತಿನ್ನಲು ಜಿರಾಫೆಯಷ್ಟು ನೀಳ ಕುತ್ತಿಗೆಯೂ ಬೇಕಿಲ್ಲವಲ್ಲ. ಆದರೆ ಗುಂಡು ಒಕಾಪಿಗಳ ಕೊಂಬಿನಿಂದ ಹಿಡಿದು ಇವುಗಳ ಉದ್ದನೆಯ ನಾಲಿಗೆಗಳವರೆಗೆ ಜಿರಾಫೆಯ ಗುಣಲಕ್ಷಣಗಳು ಒಕಾಪಿಗಳ ದೇಹದ ಅನೇಕ ಕಡೆಗಿವೆ. ಜಿರಾಫೆಗಳು ಮತ್ತು ಒಕಾಪಿಗಳ ಕೊನೆಯ ಸಾಮಾನ್ಯ ಪೂರ್ವಜರು ಸುಮಾರು 11.5 ಮಿಲಿಯನ್ ವರ್ಷಗಳ ಹಿಂದೆ ವಾಸಿಸುತ್ತಿದ್ದವೆಂದು ಕೆಲವು ಸಂಶೋಧನೆ ಸೂಚಿಸುತ್ತದೆ.
ಒಕಾಪಿ ಸಂರಕ್ಷಣೆಯ ಕಾನೂನು ಕಠಿಣವಾದ ನಂತರವೂ ಒಕಾಪಿ ಬೇಟೆಗಳು ಅವ್ಯಾಹತವಾಗಿ ನಡೆಯುತ್ತಿರುವುದು ಆಗಾಗ ವರದಿಯಾಗುತ್ತಲೇ ಇವೆ. 2012 ರಲ್ಲಿ ಒಕಾಪಿ ವನ್ಯಜೀವಿ ಮೀಸಲು ಪ್ರದೇಶದ ಮೇಲೆ ಬೇಟೆಗಾರರು ದಾಳಿಮಾಡಿ ಇಬ್ಬರು ರೇಂಜರ್ಗಳು ಸೇರಿದಂತೆ ಏಳು ಜನರನ್ನು ಕ್ರೂರವಾಗಿ ಕೊಂದಿದ್ದು ವರದಿಯಾಗಿತ್ತು. ಐಯುಸಿಎನ್ ಸಂಸ್ಥೆಯ Save Our Species ವಿಶೇಷ ಅನುದಾನದಿಂದ ಒಕಾಪಿ ಸಂರಕ್ಷಣೆಯನ್ನು ಅತ್ಯಂತ ಗಂಭೀರವಾಗಿ ನಡೆಸಲಾಗುತ್ತಿದೆ. 2022ರಲ್ಲಿ ಮೈಕೊ ರಾಷ್ಟ್ರೀಯ ಉದ್ಯಾನವನದ ಪಶ್ಚಿಮ ಭಾಗದ ಪಕ್ಕದಲ್ಲಿರುವ ಕನ್ಯಾಮಾ, ಬಿಟುಲೆ ಮತ್ತು ಒಮೇಟ್ ಎಂಬ ಮೂರು ಸಮುದಾಯ ಅರಣ್ಯಗಳಲ್ಲಿ ಒಕಾಪಿ ಸಂರಕ್ಷಣೆ ಮತ್ತು ಸಂಶೋಧನಾ ಕ್ರಮಗಳನ್ನು ಜಾರಿಮಾಡಲಾಗಿದೆ. ಅರಣ್ಯ ಇಲಾಖೆಯ ಗಸ್ತು ತಂಡಗಳು, ಮೈಕೊದ ದಕ್ಷಿಣ ವಲಯದ ಪಾರ್ಕ್ ಸಿಬ್ಬಂದಿಗಳು ಒಕಾಪಿಗಳ ಆವಾಸ ತಾಣವನ್ನು ಕಾಯುತ್ತಿದ್ದಾರೆ. ಟ್ರ್ಯಾಪ್ ಕ್ಯಾಮರಾ ಅಳವಡಿಸಿ ಈವರೆಗೆ ಒಕಾಪಿಗಳ ಸುಮಾರು 333 ಕುರುಹುಗಳನ್ನು ಪತ್ತೆಹಚ್ಚಲಾಗಿದೆ ಅವುಗಳಲ್ಲಿ ಹೆಚ್ಚಿನವು ಕನ್ಯಾಮಾ ಮತ್ತು ಮೈಕೊದಲ್ಲಿ ಕಂಡುಬಂದಿವೆ.
-ವಿಶ್ವಾಸ್ ಭಾರದ್ವಾಜ್ (ವಿ.ಭಾ)
ಹೆಚ್ಚಿನ ಬರಹಗಳಿಗಾಗಿ
ಹೊನ್ನಾವರದಲ್ಲೀಗ ಮೆಲುನಗುವ ಶ್ರೀ ಚನ್ನಕೇಶವಾ
ಅರ್ಧ ವರ್ಷದಲ್ಲಿ ಶಾಲೆಗೆ ಸೇರಿದ ಹುಡುಗ
ಕೆ. ಸತ್ಯನಾರಾಯಣರ ನಾಲ್ಕು ಸಣ್ಣ ಕಥೆಗಳು