- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
ಏನು ಹೊಸತು ಏನು ಹೊಸತು?
ಬಾನು ಹೊಸತೆ , ಬುವಿಯು ಹೊಸತೆ?
ಮೂಡಣದಲಿ ಮೂಡುವ ರವಿ ಹೊಸಬನೆ?
ಹೊಸತೇ ಚಂದಿರ, ಬೆಳೆದಿಂಗಳು ಹೊಸತೆ?
ಎರಡು ಮುಳ್ಳುಗಳು ಏಕವಾದಾಗ
ಉನ್ಮತ್ತನಾಗಿ ಕುಣಿದು ಕುಪ್ಪಳಿಸಿ
ಎಚ್ಚರ ತಪ್ಪಿ ಬಿದ್ದು ಮತ್ತೆ ಎದ್ದಾಗ
ಕಂಡಿತೇ ಕಂಗಳಿಗೆ ಏನಾದರೂ ಹೊಸತು
ಕ್ಷಣಗಳು ಸರಿದು ದಿನ- ರಾತ್ರಿಗಳಾಗಿ
ಉರುಳಿ ಹೋದವು
ಮರಳಿ ಬಾರದಂತೆ!
ಅಂದು ಇಂದಾಗಿ ಇಂದು ನಾಳೆಯಾಗಿ
ಹರಿಯುತಿರುವ ದಿನಗಳಿಗೊಂದು
ಕಟ್ಟಿ ಅಣೆಕಟ್ಟೆ
ಹರಿದು ಹನ್ನೆರಡುಮಾಸಗಳ
ಪುಟಗಳನು ಕ್ಯಾಲೆಂಡಿರನಲಿ
ಬಂದಿತೆಂದಿ ಹೊಸ ವರುಷ
ತಂದಿತೆಂದಿ ಹರುಷ
ಕೇಳಿಯಲಿ ಕಳೆಯಿತು ರಾತ್ರಿ
ಮರುದಿನ ಎಲ್ಲವೂ ನವೀನ ಖಾತ್ರಿ
ಪವಡಿಸಿದೆ ಅಮಲಿನಲಿ
ಅರ್ಧ ಎಚ್ಚರ ಅರ್ಧ ಮಂಪರಿನಲಿ
ಬಡಬಡಿಸಿದೆ ಏನೇನೋ
ಎದ್ದು ಕಣ್ಣುಜ್ಜಿ ನೋಡಿದರೆ ಏನಿದೆ
ದಿನಗಳಂತೆ ಉರುಳಿದ ಖಾಲಿ ಬಾಟಲಿಗಳ ಕುಪ್ಪೆ
ಬಾಲಕನೊಬ್ಬ ಹೆಕ್ಕಿ ತೆಗೆಯುತಿಹನು
ತಿಪ್ಪೆಯಿಂದ ಉನ್ಮಾದ ರಹಿತ
ಶೀಶೆಗಳನು
ಅವನಿಗೆ ಈ ದಿನ ಹೊಸತು
ರಾಶಿಯನು ಮಾರಿ
ಈ ದಿನ ನಿರಾಯಾಸವಾಗಿ ನೂಕುವ
ಕನಸು ಕಾಣುತಿಹ
ಅಷ್ಟರಲ್ಲೇ ಒಂದು ಒಡೆದು
ಗಾಜಿನ ಚೂರು ನೆಟ್ಟು
ಹರಿದ ನೆತ್ತರಲಿ ಮೂಡಿತ್ತು ಕೆಂಪು
ತನ್ನ ಬಣ್ಣವನು ಹಂಚಿಕೊಂಡಿದ್ದ
ನೇಸರನು ಕಳೆಗುಂದಿದ್ದ
ಅಂಗಲಾಚಿದ್ದ ಎಲ್ಲರಲಿ
ಅಣ್ಣಾ ತೆರೆಯಿರಿ ಕಣ್ಣಾ
ನೀಡಿರಿ ಒಲವಿನ ಬಣ್ಣ
ಸೋತು ಆಗೀನಿ ಸುಣ್ಣ
ಬೆಳಕು ಬೀರಿದಷ್ಟು ಕೊಳಕು ಕಂಡು
ಅಳಕುತಿರುವೆ ಮೂಡಲು
ಕಳೆಯುವೆ ನಾನು ಹೊರಗೆ
ಆವರಿಸಿದ ಕತ್ತಲೆಯ
ಎಂತು ಹೊಗಲಿ ನಿಮ್ಮ ಒಳಗೆ
ಅಂತರಂಗವು ಬೆಳಗೆ ನಿಜದ ತಮ ಕರಗುವುದು
ಕೊರಗು ಎಲ್ಲರದಾಲಿಸಿ
ಮರುಗಿ ಪರರ ನೋವುಗಳಿಗೆ
ದ್ವೇಷದ ದಳ್ಳುರಿಯನಾರಿಸಿ
ಒಲವಿನ ರವಿಯ ಮೂಡಿಸು
ನಿನ್ನ ಹೃದಯದಾಗಸದಲಿ
ನಿತ್ಯ ನಿತ್ಯ ನೂತನವಾಗಲಿ ಪ್ರತಿ ಕ್ಷಣ
ಒಂದೇ ಬಾಲ್ಯ ಒಂದೇ ಹರೆಯ
ಬಾಳಿನಲಿ ಚಿಗುರದು ಕಾಯ
ಆದರೆ ದಯೆ ಕೊನರಿ ಮನದಲಿ
ಸವರಿಸು ಗಾಯಗಳ ಮೇಲೆ
ಮಾಯಲಿ
ಚಿಮ್ಮಲಿ ಪ್ರೇಮದ ರಂಗು ಎತ್ತರಕೆ
ಬೆಳಕು ನೀಡುವ ಮಿತ್ರನಿಗೆ
ಕೊಡೋಣ ಅವನಿಂದ ಕಸಿದ ಬಣ್ಣ
ಆಗ ಮೂಡುವ ರವಿ ಹೊಸ ದಿರಿಸಿನಿಂದ
ಕಿರಣಗಳಲಿ ನವಚೇತನ
ಸುರಿಸುವ
ಬೆಳಕಿನ ಮಳೆ
ಇಳೆಯ ಹರಣಗಳೆಲ್ಲ
ನವೀಕರಣಗೊಂಡು
ಅರಳುವವು ಮತ್ತೆ
ಮತ್ತಿಲ್ಲದೆಯೂ ಎಲ್ಲವೂ ಕಾಣುವುದು ಹೊಸತು
ಅಲ್ಲಿಯತನಕ ಏನು ಹೊಸೆದರು
ಅದು ಅಲ್ಲ ಹೊಸತು.
ವರ್ಷ ೨೦೨೦ ಮುಗಿದಿದೆ. ಅಷ್ಟೇ ಅಲ್ಲ, ಇನ್ನು ಕೆಲವೇ ದಿನಗಳಲ್ಲಿ, ಈ ಶತಮಾನದ ಎರಡನೆಯ ದಶಕವೂ ಭೂತದ ಗರ್ಭದಲ್ಲಿ ಸೇರುತ್ತದೆ. ಈ ವಿಚಾರ ಮನದಲ್ಲಿ ಸುಳಿದಾಗ, ಯಾದೃಚ್ಛಿಕವಾಗಿ (random ಆಗಿ) ಮೇಲಿನ ಸಾಲುಗಳು ಮನದಲ್ಲಿ ಬಂದವು. ಬಂದಂತೆ ದಾಖಲಿಸುತ್ತ ಹೋದೆ. ಕವಿತೆಯೋ ಅಲ್ಲವೋ ಗೊತ್ತಿಲ್ಲ; ಆದರೆ ಅವು ನನ್ನ ಮನದಾಳದ ಮಾತಗಳು ;ಒಂದು ರೀತಿಯಲ್ಲಿ ನನ್ನ ಜೊತೆ ನನ್ನದೇ ಆಂತರಿಕ ಸಂವಾದ.
ಈ ಸಾಲುಗಳನ್ನು ಓದಿದಾಗ, ಒಂದು ರೀತಿಯ ಆಕ್ಷೇಪಣೆ ನಿಮ್ಮ ಮನದಲ್ಲಿ ಉದ್ಭವಿಸಬಹುದು.
”ಏನು, ಇವನು ನೀತಿ ಪಾಠ ಹೇಳುತ್ತಿದ್ದಾನೆ, ಇವನು ಹಿಂದೆಂದೂ ಮಿತ್ರ,ಕಳತ್ರರ ಜೊತೆ ಸೇರಿಕೊಂಡು ಹೊಸ ವರ್ಷದ ಆಗಮನವನ್ನು ತಿಂದು ತೇಗಿ ಆಚರಿಸಿಲ್ಲವೆ? ಈಗ ಮೂಗು ಮುರಿಯುತ್ತಿದ್ದಾನೆ” ಎಂಬ ಭಾವನೆ ನಿಮ್ಮಲ್ಲಿ ಬಂದರೆ ಅದು ಸಾಧುವಾದದ್ದೇ. ವರ್ಷದ ಎಲ್ಲ ದಿನಗಳು ಉರುಳಿ, ಕೊನೆಯ ದಿನ ಜಾರಿ ಹೋಗುವ ದಿನದಂದು ನಾವೂ ಸಂಭ್ರಮದಲ್ಲಿ ಜಾರಿ, ರಾತ್ರಿ ೧೨ ಗಂಟೆಗೆ ದಿನ ಬದಲಾದಾಗ ಹುಚ್ಚು ಹೊಳೆಯಲ್ಲಿ ನಾವೆಷ್ಟೋ ಜನ ಹರಿದು ಹೋಗಿದ್ದೇವೆ. ನವ ವರ್ಷದ ಆಗಮನಕ್ಕೆ ಸಾಕ್ಷಿಯಾದದ್ದಕ್ಕೆ ಕೃತಾರ್ಥ ಭಾವವನ್ನು ಅನುಭವಿಸಿದ್ದು ಸತ್ಯವೇ. ಅದಕ್ಕೆ ನಾನೂ ಹೊರತಲ್ಲ ಎಂದು ಘಂಟಾಘೋಷವಾಗಿ ಹೇಳುತ್ತೇನೆ.
ಆದರೆ, ಈ ವರ್ಷ ಎಲ್ಲ ವರ್ಷಗಳಂತಲ್ಲ ಎಂದು ನಾನೇನೂ ಪ್ರತ್ಯೇಕಿಸಿ ತಿಳಿಸಬೇಕಾದ ಅವಶ್ಯಕತೆ ಇಲ್ಲ ಎಂದು ನನ್ನ ನಂಬಿಕೆ. ಭೀಷಣ ಮಹಾಮಾರಿ “ ಸ್ಪಾನಿಷ್ ಫ್ಲೂ” , ಸುಮಾರು ೧೦೦ ವರ್ಷಗಳ ಹಿಂದೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು. ೫೦೦ ಮಿಲಿಯ ಜನರು( ಸುಮಾರು ಆಗಿನ ವಿಶ್ವದ ಜನ ಸಂಖ್ಯೆಯ ೧/೩ ಅಂಶ ಜನರು) ಈ ಮಹಾಮಾರಿಯಿಂದ ಬಳಲಿದ್ದಲ್ಲದೆ, ಕನಿಷ್ಟ ಪಕ್ಷ ೩೯೦೦೦೦ ಜನರು ಬಲಿಯಾಗಿದ್ದರು. ಸ್ಪಾನಿಷ್ ಫ್ಲೂ ಗೆ ತುತ್ತಾಗಿ ಮರಣ ಹೊಂದಿದವರ ಸಂಖ್ಯೆ, ಎರಡು ಮಹಾಯುದ್ಧಗಳನ್ನು ಸೇರಿ ಹತರಾದವರಿಗಿಂತ ಹೆಚ್ಚಿತ್ತು ಎಂಬುದು ಬಹಳ ವಿಷಾದಕರವಾದ ವಿಷಯ. ನೂರು ವರ್ಷಗಳಾದ ಮೇಲೆ, ಮಾರಕವಾದ ಕೊರೋನಾ ತನ್ನ ಭೈರವ ನೃತ್ಯದಿಂದ ಇಡೀ ಜಗತ್ತಿನ ಜನರನ್ನು ಅಲ್ಲಾಡಿಸಿದೆ.
ವಿಜ್ಞಾನದ ಪ್ರಗತಿಯ ಫಲವಾಗಿ, ಈ ಮಹಾಮಾರಿಯನ್ನು ಹದ್ದು ಬಸ್ತಿನಲ್ಲಿ ಇಟ್ಟು, ಆದಷ್ಟು ಜನರನ್ನು ವಾಸಿ ಮಾಡಿ ಉಳಿಸುವ ಯತ್ನದಲ್ಲಿ, ನಮ್ಮ ವೈದ್ಯರು ಹಾಗೂ ವೈದ್ಯಕೀಯ ಬೃಂದದವರು ದಿನ- ರಾತ್ರಿ ಹೆಣಗಾಡಿ, ಸ್ವಲ್ಪ ಮಟ್ಟಿಗೆ ಸಫಲತೆಯನ್ನು ಸಾಧಿಸಿದ್ದರೂ( ಸ್ಪಾನಿಷ್ ಫ್ಲೂ ಗೆ ಹೋಲಿಸಿ ನೋಡಿದಾಗ), ಕೊರೋನಾ ಮಹಾಮಾರಿಯಿಂದ ವಿಶ್ವದ ಬಹಳಷ್ಟು ಜನರು ಬಳಲಿ ಬೆಂಡಾದದ್ದಲ್ಲದೇ, ಈ ಕೊರೋನಾ ಮಹಾಮಾರಿ ಜಗತ್ತಿನ ಎಷ್ಟೋ ಜನರನ್ನು ಆಹುತಿ ತೆಗೆದುಕೊಂಡ ಸಂಗತಿ ಎಲ್ಲರಿಗೂ ಗೊತ್ತಿದ್ದದ್ದೇ.
ನಾನು ಅಂಕಿ-ಸಂಖ್ಯೆಗಳನ್ನು ಇಲ್ಲಿ ಉಲ್ಲೇಖಿಸಲು ಬಯಸುವದಿಲ್ಲಾ. ಕೋವಿಡ್ ಮಹಾಮಾರಿ ಸಮಸ್ತ ವಿಶ್ವವನ್ನೇ ಭಯಗ್ರಸ್ತ ಮಾಡಿತ್ತು. ಈ ಮಹಾಮಾರಿ ಇಳಿಮುಖವಾಗುತ್ತಿರುವ ಬೆನ್ನಲ್ಲೇ, ಇದರ ಹೊಸ ಅವತರಣಿಕೆ ಬ್ರಿಟನ್ ನಲ್ಲಿ ಕಾಣಿಸಿಕೊಂಡು, ಅದರ ಸೋಂಕು ಜಗತ್ತಿನ ಇತರ ಭಾಗಗಳಿಗೂ ಹರಡುವ ಭಯ ಹುಟ್ಟಿಕೊಂಡದ್ದು ಬಹಳ ಚಿಂತಾಜನಕ. ಈ ನೇಪಥ್ಯದಲ್ಲಿ, ಗುಂಪು ಗುಂಪುಗಳಾಗಿ ಸೇರಿ, ಜನಜಂಗುಳಿಯಾಗಿ ಹೊಸ ವರ್ಷದ ಸಂಭ್ರಮವನ್ನು ಆಚರಿಸಿ, ಮಹಾಮಾರಿ ಸಾಂಕ್ರಾಮಿಕವಾಗಿ ಹರಡುವಂತೆ ಮಾಡುವದು ಸಲ್ಲ ಎಂದು ವೈದ್ಯರು, ವಿಜ್ಞಾನಿಗಳು ನಮಗೆ ಪದೇ ಪದೇ , ಮುನ್ನೆಚ್ಚರಿಕೆ ವಹಿಸಲು ಸಲಹೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ಕಳಕಳಿಯ ಮನವಿಯನ್ನು ಮಾಡಿಕೊಳ್ಳುತ್ತಿರುವದು ವಿಶೇಷ. ಆದರೂ, ಅದನ್ನು ಕಡೆಗಣಿಸಿ, ನಮ್ಮಲ್ಲಿ ಎಷ್ಟೋ ಜನರು ಗುಂಪಾಗಿ ನೆರೆದು, ಹೊಸ ವರ್ಷದ ನೆಪದಲ್ಲಿ ಭಾರಿ ಮೋಜಿನ ಪಾರ್ಟಿಗಳನ್ನು ಮತ್ತು ವಿನೋದಾವಳಿಗಳನ್ನು ಮಾಡಿಕೊಳ್ಳುತ್ತಿರುವದು ಬಹಳ ವಿಷಾದಕರ. ಇದನ್ನು ಅರಿತು ನಮ್ಮ ಹಾರಾಟಗಳನ್ನು, ಸಂಭ್ರಮದ ಆರ್ಭಟಗಳನ್ನು ಕಮ್ಮಿ ಮಾಡಿ ಅದನ್ನು ಮಂದ್ರ ಸ್ಥಾಯಿಯಲ್ಲಿ ಇಡುವದು ಎಲ್ಲರಿಗೂ ಒಳಿತು.
ಮಕ್ಕಳ ಸ್ವೇಚ್ಛೆಯನ್ನು ಕಸಿದುಕೊಂಡು, ಅವರನ್ನು ಶಾಲಾ ದಿನಗಳಿಂದ ವಂಚಿತ ಮಾಡಿದ ಕೋರೋನಾ, ಒಬ್ಬರಿಗೊಬ್ಬರು ಆತ್ಮೀಯವಾಗಿ ಬೆರೆತು ಮಾತನಾಡದಂತೆ ಮಾಡಿದ ಕೊರೋನಾ, ತನ್ನ ಕರಾಳ ಛಾಯೆಯಿಂದ ಅಸಂಖ್ಯಾತ ಜನರನ್ನು ಪೀಡಿಸಿದ ಕೊರೋನಾ; ಎಷ್ಟೋ ಜನರನ್ನು ನುಂಗಿ ನೀರು ಕುಡಿದ ಕೊರೋನಾ, ಅದರಿಂದ ಮುಕ್ತಿ ಪಡೆಯುವ ಸಮಯ, ಸಿಲ್ವೆರ್ ಲೈನಿಂಗ್ ವ್ಯಾಕ್ಸೀನ್ ರೂಪದಲ್ಲಿ ಗೋಚರಿಸುತ್ತಿದೆ. ಜಗತ್ತಿನಾದ್ಯಂತ ವಿಜ್ಞಾನಿಗಳು ಅಹರ್ನಿಷಿ ತಪಸ್ಸುಗೈದು ಇದಕ್ಕೆ ಆದಷ್ಟು ಬೇಗನೆ ಪರಿಹಾರ ಕಂಡು ಹಿಡಿಯಲು ಹೆಣಗಾಡಿದ್ದಾರೆ. ಅವರಿಗೆ ನಾವು ಎಷ್ಟು ನಮನಗಳನ್ನು ಸಲ್ಲಿಸಿದರೂ ಸಾಲದು.
ಹೊಸ ವರ್ಷದಲ್ಲಿ ಹೊಸತು ಎಂಬ ಅಂಶ ಏನಾದರೂ ಇದ್ದರೆ, ಅದು ಮಾನವ ಸಮಾಜಕ್ಕೆ ಇತ್ತ ವಿಜ್ಞಾನಿಗಳ ಈ ಅಪರೂಪದ ಕೊಡುಗೆ. ನಾವು ಸಂಭ್ರಮಿಸುವದೇ ಆದರೆ, ವಿಜ್ಞಾನಿಗಳ ಸಾಧನೆಗಾಗಿ ಆನಂದಿಸೋಣ.
ಒಂದೊಂದು ದಿನ ಒಂದೊಂದು ಯುಗದಂತೆ ಕಳೆದ ದಿನಗಳಲ್ಲಿ, ನಮ್ಮ ದೈನಂದಿನ ಚಕ್ರವನ್ನು ಸುಗಮವಾಗಿ ಚಲಿಸುವ ಹೊಣೆ ಹೊತ್ತು, ಎಲ್ಲವನ್ನೂ ಹೊತ್ತು ಹೊತ್ತಿಗೆ ಸರಿಯಾಗಿ, ಸಕಾಲಕ್ಕೆ ಒದಗಿಸಿದ ಮಹನೀಯರನ್ನು ಸ್ಮರಿಸುವದು ಉಚಿತವಷ್ಟೇ ಅಲ್ಲ, ಅದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಆಗಿದೆ.
ಈ ಸಂವತ್ಸರ ಮುಗಿಯುವ ಮುನ್ನ , ಈ ಸಂಕಷ್ಟ ಕಾಲದಲ್ಲೂ ಶ್ರಮಿಸಿದ ಜನರಿಗೆ ಕೈ ಮುಗಿದು ನಮ್ಮ ನಮನಗಳನ್ನು ಅರ್ಪಿಸುವದೇ, ಹಳೆಯ ವರ್ಷಕ್ಕೆ ವಿದಾಯ ಹೇಳಿ, ಹೊಸ ಸಂವತ್ಸರದ ಆಗಮನದ ಸಂಭ್ರಮವನ್ನು ಆಚರಿಸುವದೇ ಬಹಳ ಸೂಕ್ತವೆನಿಸುತ್ತದೆ. ಈ ಮೊದಲಿನ ಅಂಕಣದಲ್ಲಿ ನಾನು ಇದರ ಕುರಿತಾಗಿ ಉಲ್ಲೇಖಿಸಿರಬಹುದು ; ಅದರೂ ಅದನ್ನು ಮಗುದೊಮ್ಮೆ ವ್ಯಕ್ತ ಪಡಿಸಿ, ಅವರ ಪ್ರತಿ ನಮ್ಮ ಆಭಾರ ಸಲ್ಲಿಸೋಣ,
‘ಎಟ್ ದ ಕಾಸ್ಟ ಆಫ್ ರಿಪಿಟೇಶನ್’ ಅನಿಸಿದರೂ ಅಡ್ಡಿಯಿಲ್ಲ.
ಹಗಲೆನ್ನದೆ,ರಾತ್ರಿಯನ್ನದೆ, ಮನೆ ಮಠ ಬಿಟ್ಟು ರೋಗಗ್ರಸ್ತರ ಶುಷ್ರೂಷೆಗೈದ , ವೈದ್ಯ ವೃಂದಕ್ಕೆ, ನಿಃಸ್ವಾರ್ಥ ಸೇವೆ ಗೈದ ನರ್ಸಗಳಿಗೆ, ಆರೋಗ್ಯ ಕರ್ಮಿಗಳಿಗೆ, ಮನೆ ಮನೆಗಳ ಕಸವನ್ನು ಎತ್ತಿ ಬೀದಿಗಳನ್ನು ಸ್ವಚ್ಛವಿರಿಸಿದ ಸಫಾಯಿ ಕಾರ್ಮಿಕರಿಗೆ, ಅವಿರತವಾಗಿ ಔಷಧಿಗಳನ್ನು ಒದಗಿಸಿದ ವ್ಯಾಪಾರಿಗಳಿಗೆ, ಪರಿಸ್ಥಿತಿಯನ್ನು ನಿಯಂತ್ರಿಸಿ ಜನರಿಗೆ ನೆರವಾದ ಪೋಲೀಸು ಬಾಂಧವರಿಗೆ, ದೇಶದ ಆರ್ಥಿಕ ಚಕ್ರ ಮುಗ್ಗರಿಸಿ ಬೀಳದಂತೆ ಶ್ರಮಿಸಿದ ಬ್ಯಾಂಕ್ ಸಿಬ್ಬಂದಿ ಹಾಗೂ ಇತರ ಆರ್ಥಿಕ ಕರ್ಮಚಾರಿಗಳಿಗೆ, ನಿತ್ಯದ ದಾಸ್ತಾನು ಹಾಗೂ ತರಕಾರಿ- ಹಣ್ಣುಗಳನ್ನು ಸರಬರಾಜು ಮಾಡಿದ ವ್ಯಾಪಾರಿಗಳಿಗೆ, ಅತ್ಯವಸರವಾದ ಕುಡಿಯುವ ನೀರನ್ನು ಹಾಗೂ ವಿದ್ಯುತ್ಛಕ್ತಿಯನ್ನು ನಿರಂತರವಾಗಿ, ನಿರಾತಂಕವಾಗಿ ಒದಗಿಸಿದ ಸಿಬ್ಬಂದಿಯವರಿಗೆ, ಟೆಲಿಕಮ್ಯುನಿಕೇಶನ್ಸ್ ವಿಭಾಗದ ಕಾರ್ಮಿಕರಿಗೆ, ಹೀಗೆ ಪಟ್ಟಿ ದೊಡ್ಡದಾಗುತ್ತ ಹೋಗುತ್ತದೆ. ಇಷ್ಟಾದರೂ, ಕೆಲವರನ್ನು ಹೆಸರಿಸುವದರಲ್ಲಿ ನಾನು ಎಡವಿರಬಹುದು; ಕ್ಷಮೆ ಇರಲಿ. ಆದರೆ, ಈ ಮಹನೀಯರಿಗೆಲ್ಲ ನಮ್ಮ ಕೃತಜ್ಞತೆ ಸಲ್ಲಸದೆ, ಮುಂದೆ ಸಾಗುವದು ಸಾಧ್ಯವಿಲ್ಲ; ಅವರಿಗೆ ನಮ್ಮ ನಮನಗಳನ್ನು ಸಲ್ಲಿಸದೆ ಹೊಸ ವರ್ಷದ ಹೊಸ್ತಿಲು ದಾಟಲು ಆಗುವದಿಲ್ಲ. ಮೇಲೆ ಉಲ್ಲೇಖಿಸಿದ ಮಹನೀಯರುಗಳಿಗೆ ನಮ್ಮ ಕೋಟಿ ನಮನ.
ಇನ್ನು ಭಾವನಾ ಲಹರಿಯಲ್ಲಿ ಬರೆದ ಪ್ರಾರಂಭದ ಸಾಲುಗಳು ಹೊಮ್ಮಿದ್ದು ಕ್ರಿಸಮಸ್ ನ ಪರ್ವ ದಿನದಂದು. ಒಲವಿನ ಸಾಕಾರ ಮೂರ್ತಿಯಾದ ಯೇಸು ಕ್ರಿಸ್ತ ಪ್ರಭುಗಳಿಗೆ ನನ್ನ ಅಂಕಣ ಅರ್ಪಿತ. ತಮ್ಮನ್ನು ಶಿಲುಬೆಗೆ ಏರಿಸಿದವರ ಬಗ್ಗೆ ದ್ವೇಷವಾಗಲಿ, ಕಹಿ ಭಾವನೆಯಾಗಲಿ ಲವಲೇಶವು ಯೇಸು ಪ್ರಭುಗಳಿಗೆ ಇರಲಿಲ್ಲ. “ ಅವರು ಎಸಗುತ್ತಿರುವ ಕೃತ್ಯದ ಬಗ್ಗೆ ಅವರು ಅರಿಯರು” ಎಂದು ಔದಾರ್ಯದಿಂದ, ಹೃದಯ ವೈಶಾಲ್ಯವನ್ನು ತೋರಿ, ತಮಗೆ ಹಿಂಸೆ ಇತ್ತವರನ್ನೇ ಕ್ಷಮಿಸುವ ದೊಡ್ಡ ಗುಣದಿಂದ ಅವರು ಎತ್ತರಕ್ಕೆ ಏರಿದರು. ಅದೆಂಥ ಉದಾತ್ತ ಚಿಂತನೆ. ನಾವು ಅವರಿಂದ ಪ್ರೇರಿತರಾಗಿ ಅಸೂಯೆ- ದ್ವೇಷಗಳನ್ನು ಮೆಟ್ಟಿ ನಿಲ್ಲಬೇಕು. ಅರಿವುಹೀನರಾದ ಯೇಸು ದ್ವೇಷಿಗಳು ಎಸಗಿದ ಕೃತ್ಯಕ್ಕೆ, ಅವರಿಗೆ ಅದರ ಪರಿವೆ ಇಲ್ಲದಿರುವದೇ ಕಾರಣ. ಅದಕ್ಕಾಗಿ ನಮ್ಮಲ್ಲಿ ಸರಿ-ತಪ್ಪುಗಳ ಅರಿವು ಮೂಡಿ ಸೌಹಾರ್ದ ಮತ್ತು ಸಹಿಷ್ಣುತೆಯಿಂದ ಬಾಳಬೇಕಾದ ತುರ್ತು ಎಂದಿಗಿಂತ ಇಂದು ಹೆಚ್ಚಾಗಿದೆ.
ಹೊಸ ವರ್ಷಕ್ಕೆ, ಹೊಸ ದಶಕಕ್ಕೆ ಪದಾರ್ಪಣ ಮಾಡುತ್ತಿದ್ದಂತೆ, ನಾವೆಲ್ಲರೂ ನಮ್ಮಲ್ಲಿ ಒಲವಿನ ಬಣ್ಣವನ್ನು ತುಂಬಿಕೊಂಡು ನವೀಕರಣಗೊಳ್ಳೋಣ. ಹೊಸ ಸಂವತ್ಸರಕ್ಕೆ ಸ್ವಾಗತ ಬಯಸುತ್ತ
ಆಗಸದಲಿ ತೂರಿ ಬಿಡೋಣ ಒಲವಿನ ರಂಗನ್ನು
ರಂಗನ್ನು ಎರವಲು ಪಡೆದ ರವಿ,
ಹೊಸ ಕಿರಣವ ಕಳಿಸಲಿ ಧರೆಗೆ ; ಕಳೆದು ರೋಗದ ಭೀತಿ,
ಇಳೆಗೆ ಬರಲಿ ಹೊಸ ಕಳೆ.
ಹಳೆಯ ಕಹಿ ಅನುಭವಗಳು
ಅಳಿದು ಹೋಗಿ ಸೇರಲಿ
ಭೂತದಾಳದಲ್ಲಿ.
ಕೊರೋನಾ- ಕೋವಿಡ್ – ೧೯ ರ ಲಸಿಕೆ ಎಲ್ಲರಿಗೂ ಲಭ್ಯವಾಗಿ, ಮಹಾಮಾರಿಯ ನಿವಾರಣೆ ಆಗಲಿ ಎಂದು ಹಾರೈಸೋಣ. ಹೊಸ ವರ್ಷ ರೋಗ ಮುಕ್ತವಾಗಲಿ. ಆದರೆ, ಈ ನಿಟ್ಟಿನಲ್ಲಿ ನಮ್ಮೆಲ್ಲರ ಗುರುತರವಾದ ಜವಾಬ್ದಾರಿ ಇದೆ. ಇಂತಹ ಬೃಹತ್ ಬ್ರಹ್ಮಾಂಡದಲ್ಲಿ, ವಾಸಿಸಲು ನಮಗೆ ಮತ್ತು ನಮ್ಮ ಮುಂಬರುವ ಪೀಳಿಗೆಗಳಿಗೆ ಇರುವುದು ಒಂದೇ ಪೃಥ್ವಿ. ಅದಕ್ಕೆಂದೇ, ನಾವೆಲ್ಲರೂ ಈ ವಸುಂಧರೆಯನ್ನು ಒಲವಿನಿಂದ , ಅತಿ ಪ್ರೇಮದಿಂದ ನೋಡೋಣ. ಹೊಸ ವರ್ಷದಲ್ಲಿ ಇದರ ಸಂರಕ್ಷಣೆ ನಮ್ಮ ದೀಕ್ಷೆ ಆಗಬೇಕು.
ಭೂಮಿ ತಾಯಿಯನ್ನು ನೋಡುವ ನಮ್ಮ ದೃಷ್ಟಿ ಹೊಸತಾಗಬೇಕು. ನಮ್ಮ ಕಾಣ್ಕೆ ಹೊಸತಾಗಬೇಕು. ಆಗಲೇ ನಿಜವಾದ ಹೊಸ ವರುಷ ಬಂದು ನಮ್ಮೆಲ್ಲರಿಗೆ ಮುದ- ಹರ್ಷಗಳು ತರುತ್ತದೆ.
ಹೊಸತು ವರ್ತಮಾನಕೆ ಹಾಡಲಿ ನಾಂದಿ ಹೊಸ ದಶಮಾನ.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳೊಂದಿಗೆ,
ವಂದನೆಗಳು
*******
ಹೆಚ್ಚಿನ ಬರಹಗಳಿಗಾಗಿ
ಒಲವೆ ನಮ್ಮ ಬದುಕು – ೩೩
ಒಲವೆ ನಮ್ಮ ಬದುಕು-೩೨
ಒಲವೇ ನಮ್ಮ ಬದುಕು – ೩೧