ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶಿವ ಶಿವ ಎಂದರೆ ಭಯವಿಲ್ಲ

ರಾಜೇಶ್ವರಿ ವಿಶ್ವನಾಥ್
ಇತ್ತೀಚಿನ ಬರಹಗಳು: ರಾಜೇಶ್ವರಿ ವಿಶ್ವನಾಥ್ (ಎಲ್ಲವನ್ನು ಓದಿ)

ಶಿವರಾತ್ರಿ ಅಥವಾ ಮಹಾಶಿವರಾತ್ರಿ ದಿನ ಅತಿ ಪವಿತ್ರವಾದ ದಿನ. ಮಾಘಮಾಸದ ಬಹಳ ಚತುರ್ದಶಿ ದಿನ ಮಹಾಶಿವ, ಈಶ್ವರ, ಶಂಕರ, ರುದ್ರ, ಪರಮೇಶ್ವರ, ನೀಲಕಂಠ, ಸದಾಶಿವ, ಶ್ರೀಕಂಠೇಶ್ವರ ಮುಂತಾದ ನಾನಾ ಹೆಸರುಗಳಿಂದ ದೇವ ದೇವನನ್ನು ಶ್ರದ್ಧಾ ಭಕ್ತಿ ಯಿಂದ ಆರಾಧಿಸುವ ಹಬ್ಬವೇ ಶಿವರಾತ್ರಿ.

ಈ ದಿನ ಶಿವನು ತಾಂಡವ ನೃತ್ಯ ಮಾಡಿದ ದಿನ ಅಂತೆಯೇ ಸಮುದ್ರಮಂಥನ ಸಂದರ್ಭದಲ್ಲಿ ಹಾಲಾಹಲ ವಿಷವನ್ನು ಕುಡಿದು ಈ ಲೋಕವನ್ನೇ ಉದ್ಧರಿಸಿದ ದಿನ.ಶಿವನು ಜನಿಸಿದ ದಿನ.

“ಶಿವ” ಶಬ್ದವು ಸುಂದರವೂ ಮುಕ್ತಿ ಪ್ರದವೂ ಆಗಿದೆ.ಶಿವನಿಂದಲೇ ಮುಕ್ತಿ ಪ್ರಾಪ್ತಿ. ಶಿವ ಎಂಬುದಕ್ಕೆ ವಿಶೇಷ ಅರ್ಥವಿದೆ.”ಶಿ” ಎಂದರೆ ಪಾಪನಾಶಕ ಎಂದು, ಮಂಗಳಕರ ಎಂದು,”ವ” ಎಂದರೆ ನೀಡುವವನು ಎಂದರ್ಥ.

ಶಿವನ ಅನ್ವರ್ಥಕ ನಾಮಗಳು

ಶಿವನು ಸಕಲ ದೇವತೆಗಳಿಗೆ ಉಪಾಸ್ಯ ದೇವನಾಗಿರುವುದರಿಂದ ಅವನಿಗೆ ಮಹಾದೇವನೆಂದೂ,ಭಕ್ತರ ಮೇಲೆ ಕರುಣೆ ತೋರಿ ಕಲ್ಯಾಣವನ್ನುಂಟು ಮಾಡುವುದರಿಂದ ಶಂಕರನೆಂದೂ,ಹಾಲಾಹಲ ವಿಷಪ್ರಾಸನ ಮಾಡಿದ್ದರಿಂದ ನೀಲಕಂಠ ಅರ್ಥತ್ ವಿಷಕಂಠ ನೆಂದೂ, ಮನ್ಮಥ ನಿಗ್ರಹ ದಿಂದ ಕಾಮಾರಿ ಎಂದೂ, ಶಾಂತಿ ಪ್ರದಾತನಾದ್ದರಿಂದ ಶಿವನೆಂದೂ, ಮೃತ್ಯುವನ್ನು ನಿಗ್ರಹಿಸಿರುವುದರಿಂದ ಮೃತ್ಯುಂಜಯ ನೆಂದೂ, ಅವನಿಗೆ ಸಾಹಸ್ರಾಧಿಕ ಅನ್ವರ್ಥಕ ನಾಮಗಳಿರುವುವು.
ಶಿವನ ಸ್ವರೂಪ

ಶಿವನ ಧಾರಣೆಗಳು ವಿಶೇಷ ಸಂಕೇತಗಳ ಪ್ರತೀಕವಾಗಿದೆ. ಶಿವನ ತ್ರಿಶೂಲವು ಸೃಷ್ಟಿ, ಸ್ಥಿತಿ ಮತ್ತು ಲಯಗಳ ಸಂಕೇತ. ಡಮರು ಶಬ್ದ ಬ್ರಹ್ಮ ದುಷ್ಟರಿಗೆ ಭಯಕಾರಕ. ಗಂಗೆ ಅಮೃತತ್ವ, ಗಜಚರ್ಮ ಗರ್ವ ನಿಗ್ರಹದ ಪ್ರತೀಕ. ವ್ಯಾಘ್ರಾಂಬರ ವಿಷಯ ವಾಸನೆ ದಮನ,ಬಸ್ಮ ಪರಿಶುದ್ಧತೆಯ ಪ್ರತೀಕ, ತ್ರಿನೇತ್ರ-ಜ್ಞಾನದ ಪ್ರತೀಕ,ಚಂದ್ರ-ಸಂತೋಷ ಹಾಗೂ ಶಾಂತಿಯ ಸಂಕೇತ,ಸರ್ಪ ಜೀವಿಗಳು ದೇವರಲ್ಲಿಯ ಆಶ್ರಯ ಸಂಕೇತ. ರುಂಡಮಾಲೆ ದುಷ್ಟನಿಗ್ರಹ ಸಂಕೇತ. ಬಿಲ್ವ ತಾಪತ್ರಯ ನಾಶದ ಪ್ರತೀಕ, ರುದ್ರಾಕ್ಷಿ ಸ್ವತಃ ಸಾಕ್ಷಾತ್ ಶಿವನ ದೃಷ್ಟಿ ಸ್ವರೂಪವಾಗಿರುವುದು.ಶಿವಲಿಂಗ ಬ್ರಹ್ಮಾಂಡದ ಪ್ರತೀಕ

ಶಿವನ ಲಯಕಾರಕ,ಅವನು ಸ್ಥಿರ ಸ್ವರೂಪ ಭರತ ಖಂಡದಲ್ಲಿ ಶಿವ ದೇವಾಲಯಗಳು ಅಷ್ಟೊಂದಿದ್ದರೂ ಶಿವನ ವಿಗ್ರಹ ರೂಪದಲ್ಲಿ ಎಲ್ಲಿಯೂ ಪೂಜೆ ಕೈಗೊಳ್ಳುವುದಿಲ್ಲ.ಅವನಿಗೆ ಲಿಂಗರೂಪದಲ್ಲಿ ಮಾತ್ರ ಪೂಜೆ.ಈ ಲಿಂಗವು ಗಹನವಾದ ಅರ್ಥವನ್ನು ತಿಳಿಸುತ್ತದೆ.ಮಹಾಶಿವನ ಪೂಜೆ ರೂಪಕ್ಕೆ ಆಗಬೇಕೆಂದು ಭೃಗು ಮಹರ್ಷಿಯ ನಿಯಮವಿದೆ. ಆಗ ಲಯಕರಾಕನಾದ ಶಿವನು ಲಿಂಗರೂಪದಲ್ಲಿ ಉದ್ಭವಿಸಿದನು. ಲಿಂಗ ರೂಪದ ಶಿವನನ್ನು “ಶಿವಲಿಂಗ”ಎಂದು ಕರೆಯುತ್ತಾರೆ. ಗೋಲಾಕಾರದಲ್ಲಿರುವ ಶಿವಲಿಂಗ ಬ್ರಹ್ಮಾಂಡದ ಪ್ರತೀಕ. ತನ್ನೊಳಗೆ ಅಡಕವಾಗಿರುವ ಪರಮಾತ್ಮನನ್ನು ಅರ್ಥಾತ್ ಈಶ್ವರನನ್ನು ಧ್ಯಾನಿ ಸಲು ಲಿಂಗ ಸಹಕಾರಿ.ಹೊರನೋಟದಕ್ಕೆ ಲಿಂಗ ಶಿಲಾಕಾರದಲ್ಲಿದ್ದರು ಇದು ಶಿವನ ಪ್ರತೀಕ.ಅಖಂಡ ಲೋಕದ ಪ್ರತೀಕ. ಲಿಂಗದಲ್ಲಿ ಪರಮೇಶ್ವರ, ಲಿಂಗದ ಕೆಳಗಿರುವ ಪಾಣಿಪೀಠವೇ ಪಾರ್ವತಿದೇವಿ. ಸೃಷ್ಟಿ ಸಂಕೇತವಾದ ಆದಿ ದಂಪತಿಗಳ ಪವಿತ್ರವಾದ ರೂಪವಿದು.

ಅಭಿಷೇಕ ಪ್ರಿಯ ಶಿವ

ಶಿವನ ಇನ್ನೊಂದು ಹೆಸರು ರುದ್ರ.ಸಕಲ ಸಂಕಟಗಳನ್ನು ನಾಶಮಾಡುವುದರಿಂದ ಶಿವನಿಗೆ ರುದ್ರ ಎಂಬ ಹೆಸರು ಬಂದಿರುವುದು. ರುದ್ರ ಹೂ, ರುದ್ರಜಪ, ರುದ್ರಾಭಿಷೇಕ, ರುದ್ರಪೂಜೆ,ರುದ್ರಕಯಾರ್ಚನೆ, ಮುಂತಾದ ರುದ್ರ ರಾಧನೆಗಳಲ್ಲಾ ನಮಕ ಮತ್ತು ಚಮಕ ಮಂತ್ರ ಗಳಿಂದ ಶಿವನಿಗೆ ಅಭಿಷೇಕ ಮಾಡಬೇಕು. ಶಿವನಿಗೆ ಕೇವಲ ಒಂದು ತಂಬಿಗೆ ನೀರಿನಿಂದ ” ಓಂ ನಮಃ ಶಿವಾಯ” ಎಂದು ಜಪಿಸುತ್ತಾ ಭಕ್ತಿಯಿಂದ ಅಭಿಷೇಕ ಮಾಡಬೇಕು. ಇತನ ಪೂಜೆಗೆ ಚಿನ್ನ,ಬೆಳ್ಳಿ ಮಂಟಪ, ಹೂವು ತೋರಣ ಇದು ಯಾವುದು ಬೇಕಿಲ್ಲ. ಭಕ್ತಿಯಿಂದ ನೀರಿನಿಂದ ಅಭಿಷೇಕ ಮಾಡಿದರೆ ವರವನ್ನು ನೀಡುವನು. ಶಿವನಿಗೆ ಮುಖ್ಯವಾಗಿ ಬೇಕಾಗಿರುವುದು “ಭಕ್ತಿ”. ಜಗತ್ತನ್ನು ಸಕಲ ವಿಪತ್ತುಗಳಿಂದ ಪಾಪದಿಂದ ಪಾರುಮಾಡಿ ದುಷ್ಟನಿಗ್ರಹ ಶಿಷ್ಟ ಪಾಲಕ ನಾಗುತ್ತಾನೆ.
ಶಿವನ ತೀರ್ಥ ಸ್ವೀಕಾರ

ಶಿವನು ಹಾಲಾಹಲ ವಿಷವನ್ನು ಕುಡಿದ ಪರಿಣಾಮವಾಗಿ ದೇಹವು ಸುಡುವಂತಹ ಉರಿಯನ್ನು ಕಡಿಮೆ ಮಾಡಬೇಕಾದರೆ ನೀರನ್ನು ಪ್ರೋಕ್ಷಿಸುವಂತಿರಬೇಕು. ಹಾಗೆ ಶಿವನಿಗೆ ಕೋಪ ಜಾಸ್ತಿ. ಆ ಕೋಪವನ್ನು ಶಮನ ಮಾಡಬೇಕಾದರೆ ಯಾವಾಗಲೂ ನೆತ್ತಿಯ ಮೇಲೆ ನೀರು ಬೀಳುತ್ತಿರಬೇಕು.ಆಗ ಮಾತ್ರ ಉರಿ,ಕೋಪ ಕಡಿಮೆ ಯಾಗಲು ಸಾಧ್ಯ. ಅದಕ್ಕಾಗಿ ಶಿವಲಿಂಗದ ಮೇಲೆ ಸದಾ ನೀರು ಬೀಳುವಂತೆ ಮಾಡುತ್ತಾರೆ. ಆ ನೀರು ಉತ್ತರ ದಿಕ್ಕಿನಿಂದ ಹೂರೆಗೆ ಬಂದಾಗ ನಾವು ತೀರ್ಥವೆಂದು ಸ್ವೀಕರಿಸಿದರೆ ನಮ್ಮಲ್ಲಿರುವ ಕಾಮ, ಕ್ರೋಧ, ಮತ್ಸರಾದಿ ಅರಿಷಡ್ವರ್ಗಗಳು ನಾಶವಾಗಲಿ ಎಂದರ್ಥ. ಹಾಗೆ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯ ಉಂಟಾಗುವುದು. ಅಲ್ಲದೆ ಲಿಂಗದ ಮೇಲೆ ಯಾವಾಗಲೂ ನೀರು ಬೀಳುತ್ತಿರುವುದರಿಂದ ಅದರ ಹೊಳಪು ಹೆಚ್ಚಿ ಪ್ರಕಾಶಮಾನವಾಗುವುದು.
ಶಿವನಿಗೆ ಬಿಲ್ವಪತ್ರೆ ಪ್ರಿಯ

ಶಿವ ಎಂದರೆ ಮಂಗಳ ಸ್ವರೂಪಿ, ಜ್ಞಾನ ಸ್ವರೂಪಿ, ಶಾಂತಂ, ಶಿವಂ, ಅದ್ವೈತಂ ಎಂಬುದು ಶ್ರುತಿ ವಚನ. ಶಿವರಾತ್ರಿ ದಿನ ಎಲ್ಲಾ ಶಿವ ಮಂದಿರಗಳಲ್ಲೂ ಅರ್ಚನೆ,ಅಭಿಷೇಕಗಳಿಂದ ಕೂಡಿದ ವಿಶೇಷ ಪೂಜೆ ನಡೆಯುತ್ತದೆ. ಭಕ್ತವತ್ಸಲನಾದ ಶಿವನಿಗೆ ಬಿಲ್ವಪತ್ರೆ ಪ್ರಿಯವಾದದು. ವಿಷ್ಣುವಿಗೆ ತುಳಿಸಿ, ಗಣಪತಿಗೆ ಗರಿಕೆ, ಬಿಲ್ವ ಶಿವನಿಗೆ ಪ್ರೀತಿಕರವಾದರೂ ಪ್ರತಿ ದೇವತೆಗಳಿಗೂ ಬಿಲ್ವ ಪ್ರಿಯರೇ ಆಗಿರುವುದು ವಿಶೇಷವಾಗಿದೆ. ಶಿವರಾತ್ರಿದಿನ ಬಿಲ್ವಪತ್ರೆ ಬಹುಮುಖ್ಯವಾದು. ಆದುದರಿಂದ ಈ ದಿನ ಎಲ್ಲರೂ ಆತನ ಲಿಂಗಕ್ಕೆ ಬಿಲ್ವ ಪತ್ರೆಗಳಿಂದ ಪೂಜಿಸಿ ದರೆ, ಶಿವನು ಪ್ರಸನ್ನನಾಗುತ್ತಾನೆ. ಹಾಗಾಗಿ ಧರ್ಮ, ಅರ್ಥ,ಕಾಮ ,ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳು ಸಿದ್ಧಿಸುತ್ತವೆ.
ದಿವ್ಯ ಶಕ್ತಿ
ಶಿವನಿಗೆ ಒಟ್ಟು 108 ಬಿಲ್ವಪತ್ರೆಗಳನ್ನು ನಾಮಮಂತ್ರ ಸಹಿತ ಅರ್ಪಿಸಬೇಕು. “ಓಂ ನಮಃ ಶಿವಾಯ”!ಇದು ಶಿವ ಪಂಚಾಕ್ಷರಿ ಮಂತ್ರ.ನಮಃ ಶಿವಾಯ ಎಂಬ ಐದಕ್ಷರದಲ್ಲಿ ದಿವ್ಯಶಕ್ತಿ ಅಡಗಿದ್ದು, ಎಲ್ಲರ ದುಃಖಗಳನ್ನು ನಿವಾರಣೆ ಮಾಡುವ ಮಹಾ ಮಂತ್ರವಿದು. ಈ ಮಂತ್ರದಲ್ಲಿ ದಿವ್ಯಚೇತನ ಶಕ್ತಿ ಅಡಗಿದೆ.ಈ ಮಂತ್ರದ ಜೊತೆ ಒಂದೊಂದು ಬಿಲ್ವಪತ್ರೆ ಶಿವಲಿಂಗಕ್ಕೆ ಅರ್ಪಿಸಿದರೆ ಸರ್ವ ಪಾಪಗಳು ನಾಶವಾಗಿ ಸಕಲ ಕಾರ್ಯಗಳಲ್ಲಿಯೂ ಯಶಸ್ಸು, ಕೀರ್ತಿ, ಜಯ ಲಭಿಸುತ್ತದೆ.
ಶಿವನ ಸ್ವರೂಪ ಬಿಲ್ವ
“ಬಿಲ್ವಾಷ್ಟಕಂ ಇದಂ ಪುಣ್ಯಾಯ: ಪಠೇಚ್ಯವ ಸನ್ನಿಧೌ ಶಿವಲೋಕ ಮವಾಪ್ನೋತಿ ಏಕ ಬಿಲ್ವಂ ಶಿವಾರ್ಪಣಂ…”ಈ ಸ್ತೋತ್ರವು ಶಿವಭಕ್ತರಿಗೆ ಫಲದಾಯಕ ವಾಗಿದೆ. ಒಂದು ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದರೆ ಬ್ರಹ್ಮ ಹತ್ಯಾ ದೋಷ ಮೊದಲು ಗೊಂಡು ಹಲವು ಜನ್ಮಗಳ ಪಾಪಗಳು ನಾಶವಾಗುತ್ತದೆ. ತ್ರಿ ದಳಗಳಿಂದ ಬಿಲ್ವಪತ್ರೆಯು ತ್ರಿಗುಣ ರಹಿತವಾದ ಶಿವನಿಗೆ ಅರ್ಪಣೆಯಾದರೆ ಶಿವನು ತನ್ನ ಪೂಜೆ ಸಂಪೂರ್ಣವಾತೆಂಬ ತೃಪ್ತಿಯಿಂದ ಭಕ್ತರ ಎಲ್ಲಾ ಕೋರಿಕೆಗಳನ್ನು ಪರಿಹರಿಸುವನು. ಹಾಗೆಯೇ ಲಿಂಗದ ಸ್ಪರ್ಶ ಮಾಡಿದ ಬಿಲ್ವಪತ್ರೆಯನ್ನು ಶಿರದಲ್ಲಿ ದರಿಸಿದರೆ ಎಂತಹ ಕ್ರೂರಿಯೂ ಸಹ ತನ್ನ ಸಕಲ ಪಾಪಗಳಿಂದ ಮುಕ್ತನಾಗಿ ಸದ್ಗತಿ ಹೊಂದುತಾನೆ. ಈ ಬಿಲ್ವವು ಪರಶಿವನ ಸ್ವರೂಪವೇ ಆಗಿರುತ್ತದೆ.
ಶ್ರೀಫಲ

ಬಿಲ್ವ ವೃಕ್ಷ ವಿಲ್ಲದೇ ಶಿವ ಕ್ಷೇತ್ರವೇ ಇಲ್ಲ ಜಗತ್ತಿನ ಎಲ್ಲಾ ಶಿವ ಕ್ಷೇತ್ರಗಳು ಬಿಲ್ವದ ಮೂಲದಲ್ಲೇ ಸ್ಥಾಪನೆಯಾಗಿದೆ.ಬಿಲ್ವ ವೃಕ್ಷದ ಮೂಲವು(ಬೇರು) ಮಹಾದೇವನ ವಾಸಸ್ಥಾನವಾಗಿದೆ. ಬಿಲ್ವ ವೃಕ್ಷದ ಕಾಂಡ ಶಕ್ತಿಯ ಪ್ರತೀಕ. ಕೊಂಬೆಗಳು ವೇದಜ್ಞಾನವನ್ನು ಪ್ರತಿನಿಧಿಸುತ್ತದೆ. ಬೇರುಗಳನ್ನು ರುದ್ರನಿಗೆ ಸಮೀಕರಿಸಲಾಗಿದೆ. ಬಿಲ್ವದ ಒಂದು ಪತ್ರೆಯಲ್ಲಿ ಮೂರು ದಳಗಳಿದ್ದು, ತ್ರಿಮೂರ್ತಿಗಳನ್ನೂ, ಸತ್ವ- ರಜ -ತಮೋ ಗುಣಗಳನ್ನು, ಸೃಷ್ಟಿ- ಸ್ಥಿತಿ- ಲಯಗಳನ್ನು ಪ್ರತಿನಿಧಿಸುತ್ತದೆ. ಇದರ ಆಕಾರವು ತ್ರಿಶೂಲದ ಮೊನೆ ಯಂತಿದ್ದು, ಶಕ್ತ್ಯಾಯುಧವನ್ನು ಸಂಕೇತ ಮಾಡುತ್ತದೆ. ಬಿಲ್ವವೃಕ್ಷದ ಪುಷ್ಪ ಶ್ವೇತವರ್ಣ ಹಾಗೂ ಸುಗಂಧ ಯುಕ್ತವಾಗಿರುತ್ತದೆ. ಅಲ್ಲದೆ ಮನಸ್ಸಿಗೆ ಪ್ರಿಯವೆನಿಸುವ ಸುಗಂಧ ಹೊಂದಿರುತ್ತದೆ. ಬಿಲ್ವದ ಕಾಯಿಗೆ ಶ್ರೀಫಲ ಎನ್ನುತ್ತಾರೆ. ಬಿಲ್ವಕ್ಕೆ ಶ್ರೀವೃಕ್ಷ ಎಂದು ಹೆಸರು ಇದೆ.
ಓಂ ನಮಃ ಶಿವಾಯ
ಶಿವನ ಪೂಜೆಯಲ್ಲಿ ಶಿವ ನಾಮಸ್ಮರಣೆ ಬಲು ಮುಖ್ಯ. “ನಮಂ ಶಿವಾಯ” ಎಂಬುದು ಪಂಚಾಕ್ಷರ ಮಂತ್ರ. ವೇದೋಪನಿಷತ್ತುಗಳ ಸಾರವಾದ ಇದರ ಪಠಣದಿಂದ ಸಕಲ ಇಷ್ಟಾರ್ಥಗಳು ನೆರವೇರಿ ಮನಸ್ಸಿಗೆ ಶಾಂತಿ ಲಭಿಸಿ ಮೋಕ್ಷ ಪ್ರಾಪ್ತಿಯಾಗುತ್ತದೆ. ಈ ಪಂಚಾಕ್ಷರ ಮಂತ್ರದ ಹಿಂದೆ ” ಓಂ” ಎಂಬ ಪ್ರಣಮ ಕೂಡಿಸಿದರೆ ಓಂ ನಮಃ ಶಿವಾಯ ಎಂಬ ಷಡಾಕ್ಷರ ಮಂತ್ರವಾಗುತ್ತದೆ.ಈ ಎರಡು ಮಂತ್ರಗಳಲ್ಲೂ ಪರಶಿವನೆ ಇರುವನೆಂಬ ನಂಬಿಕೆ ಶಿವ ಭಕ್ತರಲ್ಲಿದೆ.
ಈ ಶಿವ ನಾಮಸ್ಮರಣೆಯಿಂದ ಜೀವನ ಪಾವನವಾಗುತ್ತದೆ. ಶಿವನಾಮವು ಕಿವಿಗೆ ಭೂಷಣ ವಾಗಿದೆ.ಇದಕ್ಕೆ ಸಮನಾದ ನಾಮವು ಮೂರು ಲೋಕದಲ್ಲೂ ಇಲ್ಲ.”ಕೋಟಿ ಜನ್ಮರ್ಜಿತ್ಯೆಂ ಪುಣ್ಯಿಂ ಶಿವೇ ಭಕ್ತಿಂ ಪ್ರಜಾಯತೇ”. ಎಂಬಂತೆ ಕೋಟಿ ಜನ್ಮಗಳಿಂದ ಗಳಿಸಲ್ಪಟ್ಟ ಪುಣ್ಯಗಳಿಂದ ಶಿವನಲ್ಲಿ ಭಕ್ತಿವುಂಟಾಗುತ್ತದೆ.

ಮಹಾಶಿವರಾತ್ರಿ ಹಬ್ಬದ ಶುಭ ದಿನದಂದು ಸಾಮಾನ್ಯವಾಗಿ ಎಲ್ಲಾ ಸಾಂಸಾರಿಕ ವ್ಯವಹಾರಿಕ ವಿಷಯಗಳನ್ನು ಆದಷ್ಟು ಕಡಿಮೆ ಮಾಡಿ ಪ್ರಾಂತಕಾಲ ಸ್ನಾನ ಮಾಡಿ ಮಾನಸಿಕ ಶುದ್ಧಿಯಿಂದ ಶಿವಲಿಂಗಕ್ಕೆ ಅಭಿಷೇಕ, ಶಿವ ಪೂಜೆ,ಅರ್ಚನೆ, ಶಿವ ಸ್ತೋತ್ರಮಾಡಿ,ಓಂ ನಮಃ ಶಿವಾಯ ಪಂಚಾಕ್ಷರಿ ಜಪ ಮಾಡಬೇಕು.

ಅಂದು ದಿನವಿಡೀ ಉಪವಾಸವಿರಬೇಕು. ಉಪವಾಸವು ವೈರಾಗ್ಯ, ಆರೋಗ್ಯ, ತ್ಯಾಗದ ಸಂಕೇತವಾದ್ದರಿಂದ ಅದಕ್ಕೆ ಉಪಾಸನೆಯಲ್ಲಿ ಹೆಚ್ಚಿನ ಪ್ರಾಶಸ್ತ್ಯವಿದೆ. ಮಹಾಶಿವರಾತ್ರಿಗೆ ಉಪವಾಸದ ಹಬ್ಬ ಎಂದೇ ಹೆಸರಿದೆ. ರಾತ್ರಿಪೂರ್ತಿ ಶಿವ ಧ್ಯಾನ,ಭಜನೆ, ಶಿವನಾಮಸ್ಮರಣೆ ಮಾಡುತ್ತ ರಾತ್ರಿ ಜಾಗರಣೆ ಮಾಡಬೇಕು.

ರಾತ್ರಿ ಶಿವಪೂಜೆಯ ನಂತರ ಫಲಹಾರ ತೆಗೆದುಕೊಳ್ಳಬೇಕು ಮಾರನೆ ದಿನ ಶಿವ ಪಾರಾಯಣ ಮಾಡಿ ಪೂಜಿಸಿ ಆಹಾರವನ್ನು ತೆಗೆದುಕೊಳ್ಳಬೇಕು.

ಸಕಲ ಪ್ರಪಂಚಗಳು ಲಿಂಗ ಸ್ವರೂಪದವುಗಳೇ ಆಗಿರುವುವು. ಸಕಲವೂ ಲಿಂಗದಲ್ಲಿಯೇ ಅಡಕವಾಗಿರುವುದು. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳ ಪ್ರಾಪ್ತಿಗಾಗಿ ಪರಮಾತ್ಮನನ್ನು ಶ್ರದ್ಧಾಭಕ್ತಿಯಿಂದ ಪೂಜಿಸೋಣ.