ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಯಾವ ಮಾಯೆ ಕರೆಯಿತು ನಿನ್ನನು…

ಟಿ ಎಸ್ ಶ್ರವಣ ಕುಮಾರಿ
ಇತ್ತೀಚಿನ ಬರಹಗಳು: ಟಿ ಎಸ್ ಶ್ರವಣ ಕುಮಾರಿ (ಎಲ್ಲವನ್ನು ಓದಿ)

“ಯಾರ‍್ನ ಕೇಳಿ ಇದನ್ ಕರ್ಕೊಂಡು ಬಂದೆ?‌ ನಾವ್ಯಾಕಿದನ್ನ ನೋಡ್ಕೋಬೇಕು? ಹುಟ್ಸಿದ್‌ ಅಪ್ಪಂಗಿಲ್ಲದ್‌ ಜವಾಬ್ದಾರಿ ನಮಗ್ಯಾಕೆ? ಮೊದ್ಲು, ಅದೆಲ್ಲಿತ್ತೋ ಅಲ್ಲಿಗೇ ವಾಪಸ್ಸು ಬಿಟ್ಬಾ”

ಈ ಕಥೆಯಲ್ಲಿ ಬರುವ ಒಂದು ಸಂಭಾಷಣೆ.


ನಿನ್ನೆ ಸಂಜೆಯಿಂದಲೂ ರಾಮಲಕ್ಷ್ಮಿಯ ಮನಸ್ಸು ಪ್ರಕ್ಷುಬ್ದವಾಗಿತ್ತು. ಇಡೀ ರಾತ್ರಿ ಕಣ್ಣಿಗೆ ಕಣ್ಣು ಹತ್ತಿರಲಿಲ್ಲ. ನಿನ್ನೆಯದೇನು ಹೊಸ ವಿಷಯವಲ್ಲ. ಆಗಿಂದಾಗ್ಗೆ ನಡೆಯುತ್ತಿರುವ ಕದನವೇ, ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿತ್ತಷ್ಟೇ. ಹೀಗೆ ಮಹೇಶ ಬಂದು ಜಗಳವಾಡಿದಾಗೆಲ್ಲಾ ರಾಮಲಕ್ಷ್ಮಿಗೆ ಏನೇ ಆದರೂ ಕೊಡಲೇಬಾರದು ಎನ್ನಿಸಿಬಿಡುತ್ತದೆ. ನಿನ್ನೆ ಕಾನೂನಿನ ವಿಷಯ ಬೇರೆ ಎತ್ತಿದ್ದ. ಮಕ್ಕಳು ಇನ್ಯಾತಕ್ಕೆ ಹತ್ತಿರ ಬರದಿದ್ದರೂ ಆಸ್ತಿಯ ವಿಷಯದಲ್ಲಿ ಮಾತ್ರಾ ಹಕ್ಕನ್ನು ಸ್ಥಾಪಿಸಲು ಬಂದುಬಿಡುತ್ತಾರಲ್ಲ ಅನ್ನಿಸಿ ತೀರಾ ನೋವಾಗಿತ್ತು.
 
ಬೆಳಗ್ಗೆ ಏಳಾದರೂ ಏಳುವ ಮನಸ್ಸಿಲ್ಲದಿದ್ದರೂ, ಎದ್ದು, ಮಂಜನಿಗೆ ಹಾಲನ್ನು ಕೊಟ್ಟು, ನಂತರ ಪಾಯಿಖಾನೆಗೆ ಕರೆದುಕೊಂಡು ಹೋಗಿ ಕೂರಿಸದಿದ್ದರೆ ಅವನು ಇದ್ದಲ್ಲಿಯೇ ಮಾಡಿಬಿಡುತ್ತಾನೆ. ʻಆ ರಂಪ ತೆಗೆಯೋವ್ರು ಯಾರು?ʼ ಎನ್ನಿಸಿ ಗಡಬಡಿಸಿ ಎದ್ದು ಬಾಗಿಲು ತೆಗೆದು, ಗೇಟಿನ ಚೀಲದಲ್ಲಿ ಹಾಕಿದ್ದ ಹಾಲನ್ನು ತೆಗೆದುಕೊಂಡು ಬಂದು ಒಲೆಯ ಮೇಲಿಟ್ಟು ಮುಖತೊಳೆದು ಬಂದಳು. ಉಕ್ಕುತ್ತಿದ್ದ ಹಾಲನ್ನು ಕೆಳಗಿಳಿಸಿ ಒಂದು ಲೋಟ ಹಾಲನ್ನು ಆರಲು ನೀರಲ್ಲಿಟ್ಟು ಮಂಜನನ್ನು ಎಬ್ಬಿಸಲು ಹೋದಳು. ಅದೇನು ಸುಲಭದ ಕೆಲಸವೇ. ಮೊದಲಾದರೆ ಸೀದಾ ಎತ್ತಿಕೊಂಡು ಬಚ್ಚಲು ಮನೆಗೆ ಕರೆದುಕೊಂಡು ಹೋಗಿ ಮೂತ್ರ ಮಾಡಿಸಿ, ಮುಖತೊಳೆಸಿಕೊಂಡು ಬರುತ್ತಿದ್ದಳು. ಈಗವನಿಗೂ ಹನ್ನೆರಡು ವರ್ಷವಾಯಿತಲ್ಲವೇ, ಬುದ್ಧಿ ಬೆಳೆಯದಿದ್ದರೂ ಮೈಯಂತೂ ಸಾಕಷ್ಟು ಬಂದಿದೆ. ತನಗೆ ವಯಸ್ಸಾಗುತ್ತಾ ಬಂದ ಹಾಗೆ ಕೈಕಾಲು ಸೋಲುತ್ತಿದೆ. ಎತ್ತಿಕೊಳ್ಳುವುದಿರಲಿ, ಅವನೇನಾದರೂ ಸಿಟ್ಟಿನಲ್ಲಿ ದೂಡಿದರೆ ಆಯತಪ್ಪಿ ಬೀಳುವ ಹಾಗಾಗುತ್ತದೆ. ದಿನದಂತೆ ಶುರುಮಾಡಿದಳು ಅವನನ್ನು ಹಿಡಿದು ಅಲ್ಲಾಡಿಸುತ್ತಾ ಸುಪ್ರಭಾತವನ್ನು. ʻಏಳೋ ಮಂಜ, ಎದ್ದೇಳಪ್ಪ ಜಾಣ, ನೋಡು ಬೆಳ್ಗಾಗಿ ಹೋಗಿದೆ, ಸೂರ್ಯಮಾಮಿಗೆ ಕೋಪಬರತ್ತೆ, ಮುಖ ತೊಳಿಸ್ತೀನಿ, ಹಾಲು ಮಾಡಿಟ್ಟಿದೀನಿ…ʼ ಅವನಿಗೆಷ್ಟು ತಿಳಿಯಿತೋ ಗೊತ್ತಿಲ್ಲ, ಅಂತೂ ಏನೋ ಅರ್ಥವಾಗದ ಮಾತಾಡುತ್ತಾ ಎದ್ದ. ರಾಮಲಕ್ಷ್ಮಿ ನಡೆಸಿಕೊಂಡು ಹೋಗಿ ಮುಖತೊಳೆಸಿ, ಇಷ್ಟಿಷ್ಟೇ ಹಾಲನ್ನು ಸಣ್ಣಲೋಟಕ್ಕೆ ಸುರುವಿ ಕೊಟ್ಟಳು. ನಂತರ ದಿನದ ಕತೆ ಎಂದಿನಂತೇ ಶುರುವಾಯಿತು… ಈ ಸಂಜೆ ಏನು ಕಾದಿದೆಯೋ…


ಹೀಗೆ ಶುರುವಾಗಿ ಹತ್ತು ವರ್ಷವಾಯಿತೇನೋ. ಮಗಳು ಮಂಗಳಾ ನದಿಯಲ್ಲಿ ಹಾರಿಕೊಂಡು ಪ್ರಾಣ ಕಳೆದುಕೊಂಡಾಗ ರಾಮಲಕ್ಷ್ಮಿಗೆ ದೊಡ್ಡ ಆಘಾತವಾಗಿತ್ತು. ಮಗು ಹೀಗೆ ಹುಟ್ಟಲಿ ಎಂದು ಯಾರಾದರೂ ಹರಸಿಕೊಂಡಿರುತ್ತಾರೆಯೇ? ಆ ತಕ್ಷಣ ಏನೂ ಗೊತ್ತಾಗಲಿಲ್ಲ. ಮುದ್ದಾಗಿ ಮೂರೂವರೆ ಕೇಜಿ ತೂಗುತ್ತಾ ಬೆಣ್ಣೆಮುದ್ದೆಯಂತಿದ್ದ ಗಂಡುಮಗು. ಅದೃಷ್ಟಕ್ಕೆ ಕೊನೆಯೇ ಇಲ್ಲ ಎಂದು ಮನೆದೇವರು ಮಂಜುನಾಥನ ಹೆಸರಿಟ್ಟು ಎಲ್ಲರೂ ಸಂತಸಪಟ್ಟಿದ್ದೇ ತಪ್ಪಾಯ್ತು. ಮೂರು ತಿಂಗಳಾದರೂ ನಗಲಿಲ್ಲ, ಆರು ತಿಂಗಳಾದರೂ ಅಡ್ಡಬೀಳಲಿಲ್ಲ, ವರ್ಷವಾದರೂ ಆ ಊ ಎನ್ನದೆ ಮಲಗಿದಲ್ಲೇ ಮಲಗಿದ್ದಾಗ ದೊಡ್ಡಾಸ್ಪತ್ರೆಯಲ್ಲಿ ತೋರಿಸಿದಾಗಲೇ ತಿಳಿದಿದ್ದು ಇದೊಂದು ಬುದ್ಧಿಮಾಂದ್ಯ ಮಗುವೆಂದು. ಅಂದಿನಿಂದಲೇ ಶುರುವಾಗಿದ್ದು ಮಂಗಳನಿಗೆ ಶನಿಕಾಟ. ಗಂಡ, ಅತ್ತೆ ಇಬ್ಬರಿಂದಲೂ ಹೀಯಾಳಿಕೆ, ಚುಚ್ಚುಮಾತು, ಬೈಗಳ, ಮನೆ ನರಕವಾಯಿತು. ಸುದ್ದಿ ತಿಳಿದು ನೋಡಲು ಹೋದ ರಾಮಲಕ್ಷ್ಮಿಯೊಂದಿಗೆ ದೊಡ್ಡ ಜಗಳ ʻನಿಮ್ಮಗಳು ಇಂಥಾ ಮಗುವನ್ನು ಹೆತ್ತಿದಾಳಲ್ಲಾ! ನಮ್ಮ ಕುಟುಂಬ್ದಲ್ಲೇ ಯಾರಿಗೂ ಇಂಥಾ ಮಗುವಾಗಿಲ್ಲʼ ಎಂದು ಹೀನಾಮಾನಾ ಅಂದು ಆಡಿ ಒಟ್ಟಿನಲ್ಲಿ ಇನ್ನೊಂದು ಸಲ ಅವರ ಮನೆಯ ಮೆಟ್ಟಿಲು ಹತ್ತಬಾರದು ಅನ್ನಿಸುವ ಹಾಗೆ ಮಾಡಿದರು. ಹಿಂದಿರುಗುವಾಗ “ಏನೋ, ಸ್ವಲ್ಪ ದಿನ ಆದ್ಮೇಲೆ ಸರಿಹೋಗ್ಬೋದೆ, ಸಹನೆಯಿಂದಿರು. ಹೆತ್ತ ಮಗೂನ ಬೀದಿಗೆ ಬಿಸಾಕಕ್ಕಾಗತ್ತಾ. ಯಾರಿಗೆ ಬೇಡದಿದ್ರೂ, ತಾಯಿಯಾದವ್ಳಿಗೆ ಮಗು ಭಾರವಲ್ಲ. ಸಮಾಧಾನ ತಂದ್ಕೋ. ಏನಾದ್ರೂ ಬೇಕಾದ್ರೆ ಫೋನ್‌ ಮಾಡು” ಎಂದು ಮಗಳಿಗೆ ಹೇಳಿಬಂದಿದ್ದಳು.
 
ಫೋನೇನೋ ಬಂತು, ಆದರೆ ಮಂಗಳಾ ಕಾಲುಜಾರಿ ನದಿಯಲ್ಲಿ ಬಿದ್ದು ಸತ್ತಳೆಂಬ ಸುದ್ದಿಯನ್ನು ಹೇಳುವುದಕ್ಕಾಗಿ. ನೋಡಲು ಹೋದ ರಾಮಲಕ್ಷ್ಮಿ “ಅವ್ಳು ಸಾಯ್ಲಿಲ್ಲ, ನೀವು ಸಾಯ್ಸಿದ್ರಿ. ಅಯ್ಯೋ ಮಗ್ಳೇ, ಸಾಯೋ ಬದ್ಲು ನಮ್ಮನೆಗೆ ಬರ‍್ಬಾರ‍್ದಾಗಿತ್ತಾ” ಎಂದು ಎದೆಬಡಿದುಕೊಂಡು ಅತ್ತಿದ್ದಳು. “ಈಗ್ತಾನೇ ಏನು, ಅಚ್ಚೆಯ ಮೊಮ್ಮಗನ್ನ ನಿಮ್ಮನೆಗೇ ಕರ‍್ಕೊಂಡೋಗಿ” ಎಂದಿದ್ದರು ಅಳಿಯ, ಅವನಮ್ಮ. ಜೊತೆಗೆ ಬಂದಿದ್ದ ಮಹೇಶ “ಅದ್ಹೇಗಾಗತ್ತೆ? ನಿಮ್ಮನೆಗೆ ಸೇರಿದ್ಮಗು, ನೀವು ನೋಡ್ಕೊಳಿ, ಮದ್ವೆ ಮಾಡ್ಕೊಟ್ಮೇಲೆ ಎಲ್ಲಾ ಜವಾಬ್ದಾರೀನೂ ನಿಮ್ದೇ. ನಮ್ಮಕ್ಳ ಜವಾಬ್ದಾರಿ ನಮಗ್ಸಾಕು. ನಿಮ್ಕರ‍್ಮ ನಮ್ತಲೆಗ್ಯಾಕೆ ಕಟ್ತೀರಿ?” ಎಂದು ಜಗಳವಾಡಿ ಅಮ್ಮನನ್ನು ಕರೆದುಕೊಂಡು ವಾಪಸ್ಸು ಬಂದಿದ್ದ. ಆರೇ ತಿಂಗಳಲ್ಲಿ ಯಾರಿಂದಲೋ ಸುದ್ದಿ ಬಂತು ʻಮಗುವನ್ನು ಭಿಕ್ಷುಕನಿಗೆ ಕೊಟ್ಟು, ಅವನು ಅದನ್ನೆತ್ತಿಕೊಂಡು ಮಾರ್ಕೆಟ್ನಲ್ಲಿ ಭಿಕ್ಷೆ ಬೇಡ್ತಿದಾನೆʼ ಎಂದು. ಹೊಟ್ಟೆಯುರಿದುಹೋಯಿತು ರಾಮಲಕ್ಷ್ಮಿಗೆ. ಸೀದಾ ಹೋಗಿ ಕೇಳಿದರೆ “ನಮ್ಮನೆ ಮಗು ತಾನೆ, ನಾವೇನ್ಬೇಕಾದ್ರೂ ಮಾಡ್ಕೋತೀವಿ, ಕೇಳಕ್ಕೆ ನೀವ್ಯಾರು? ಮಗಂಗೆ ಇನ್ನೊಂದು ಮದ್ವೆ ಮಾಡಿದೀವಿ, ಅವ್ಳಿಗ್ಯಾವ ಕರ್ಮ ಇಂಥಾ ಮಗೂನ ನೋಡ್ಕೊಳಕ್ಕೆ. ನಮ್ಗೂ, ನಿಮ್ಗೂ ಇನ್ಯಾವ ಸಂಬಂಧ್ವೂ ಇಲ್ಲ” ಎಂದವರೇ ಮುಖಕ್ಕೇ ಬಾಗಿಲು ಬಡಿದಿದ್ದರು ಇನ್ನು ಈ ವಿಷ್ಯಕ್ಕೆ ನೀವು ಬರಬೇಕಾದ್ದಿಲ್ಲ ಎನ್ನುವಂತೆ. ಅಲ್ಲಿಂದ ಸೀದಾ ಮಗುವನ್ನು ಹುಡುಕಿಕೊಂಡು ಮಾರ್ಕೆಟ್ಟಿಗೆ ಹೋದವಳು ಅಂತೂ ಮೊಮ್ಮಗನನ್ನು ಹುಡುಕಿದಳು. ವಾಪಸ್ಸು ಕೊಡಲು ಆ ಭಿಕ್ಷುಕ ಒಪ್ಪದಿದ್ದಾಗ ಅವನ ಕೈಗೆ ನೂರು ರೂಪಾಯಿ ಹಾಕಿ, ಮಗುವನ್ನು ಎತ್ತಿಕೊಂಡು ಬಂದಿದ್ದಳು.
 
ಅಲ್ಲಿಂದೇನೋ ಕರೆದುಕೊಂಡು ಬಂದಿದ್ದಳು, ಮನೆಯಲ್ಲಿ ಶುರುವಾಗಿತ್ತು ರಣರಂಗ. ಮಹೇಶ “ಯಾರ‍್ನ ಕೇಳಿ ಇದನ್ ಕರ್ಕೊಂಡು ಬಂದೆ?‌ ನಾವ್ಯಾಕಿದನ್ನ ನೋಡ್ಕೋಬೇಕು? ಹುಟ್ಸಿದ್‌ ಅಪ್ಪಂಗಿಲ್ಲದ್‌ ಜವಾಬ್ದಾರಿ ನಮಗ್ಯಾಕೆ? ಮೊದ್ಲು, ಅದೆಲ್ಲಿತ್ತೋ ಅಲ್ಲಿಗೇ ವಾಪಸ್ಸು ಬಿಟ್ಬಾ” ಎಂದು ಕೂಗಾಡಿದ್ದ. “ಇಲ್ಲ, ಇದು ನನ್ನ ಮೊಮ್ಮಗು. ನಾನಿರೋತಂಕ ನಂಜೊತೆಗೇ ಇರತ್ತೆ. ನಾನು ಕಾಪಾಡ್ಕೋತೀನಿ” ಎಂದು ಮಗುವನ್ನು ಅವುಚಿಕೊಂಡು ಕುಳಿತುಬಿಟ್ಟಳು. ಸೊಸೆ ನಿರ್ಮಲಾ “ಅತ್ತೆ, ಇದುವರ‍್ಗೂ ನಿಮ್ಮಾತಿಗೆ ಎದುರಾಡಿಲ್ಲ. ಆದ್ರೀಗ ಖಡಾಖಂಡಿತ್ವಾಗಿ ಈ ಮಗು ಮನೇಲಿರಕ್ಕೆ ನಾನೊಪ್ಪಲ್ಲ. ಈ ಬುದ್ಧಿಯಿಲ್ಲದ್‌ಮಗು ಜೊತೆ ನಮ್ಮ ಮಕ್ಳು ಬೆಳೆಯಕ್ಕಾಗತ್ತಾ. ಒಂದಾ ನಾವಿಲ್ಲಿರ‍್ಬೇಕು, ಇಲ್ಲಾ ಆ ಮಗು. ನೀವೇ ತೀರ್ಮಾನ ಮಾಡ್ಕೊಳ್ಳಿ” ಎಂದು ಹಟಕ್ಕೆ ನಿಂತಳು. “ಇದೇ ಮಾತಾದ್ರೆ ಇದ್ ‌ನನ್ಗಂಡ ಕಟ್ಸಿರೋ ಮನೆ. ಇಲ್ಲಿ ಮಗುವನ್ನಿಟ್ಕೊಂಡಿರ‍್ತೀನಿ. ನೀವು ಬೇಕಾದ್ರೆ ಹೋಗ್ಬೋದು” ರಾಮಲಕ್ಷ್ಮಿಯೂ ನಿಶ್ಚಯವಾಗೇ ಹೇಳಿದಳು. ಅಷ್ಟೇ, ನಾಲ್ಕು ದಿನ ನಿರ್ಮಲಾನ ಅಪ್ಪನ ಮನೆಯಲ್ಲಿದ್ದು ಬಂದು ಮತ್ತೊಮ್ಮೆ ಕೇಳಿದರು. ಇವಳದ್ದು ಅದೇ ನಿಲುವು. ಬೇರೆ ಮನೆ ಮಾಡಿಕೊಂಡು ಹೊರಟೇ ಹೋದರು.
 
ಆಗ ಅರವತ್ತು ವರ್ಷವಾಗಿತ್ತೇನೋ. ಮೈಯಲ್ಲಿನ್ನೂ ಒಂದಿಷ್ಟು ಕಸುವಿತ್ತು, ಮಗುವೂ ಚಿಕ್ಕದಿತ್ತು. ಈಗ ಎಪ್ಪತ್ತಕ್ಕೆ ಬಂದಿದೆ. ಶಕ್ತಿ ಅಳಿದಿದೆ. ಯಾರನ್ನಾದರೂ ಸಹಾಯಕ್ಕೆ ಇಟ್ಟುಕೊಳ್ಳುವಷ್ಟು ಹಣಕಾಸಿಲ್ಲ. ಗಂಡನ ಹೆಸರಲ್ಲಿ ಬರುವ ಪಿಂಚಣಿಯಿಂದ ಜೀವನ ಸಾಗಬೇಕು. ಮಂಜನಿಗೆ ಹನ್ನೆರಡು ವರ್ಷವಾದರೂ, ಇನ್ನೂ ಎರಡ್ಮೂರು ವರ್ಷದ ಮಕ್ಕಳ ಬುದ್ಧಿಯಷ್ಟೇ. ಸಮಯ ಸಮಯಕ್ಕೆ ನೋಡಿಕೊಂಡು ಕರೆದುಕೊಂಡು ಹೋಗದಿದ್ದರೆ ಕುಳಿತಲ್ಲೇ, ನಿಂತಲ್ಲೇ ಕಕ್ಕ, ಉಚ್ಚೆಯನ್ನೂ ಮಾಡಿಬಿಡುತ್ತಾನೆ. ತೊದಲು ತೊದಲಾಗಿ ಏನೇನೋ ಮಾತಾಡುತ್ತಾನೆ. ರಾಮಲಕ್ಷ್ಮಿಗೆ ಬಿಟ್ಟರೆ ಇನ್ಯಾರಿಗೂ ಅವನು ಹೇಳಿದ್ದು ಅರ್ಥವಾಗುವುದಿಲ್ಲ.  ಡಾಕ್ಟರು ಹೇಳಿಕೊಟ್ಟ ವ್ಯಾಯಾಮವನ್ನೆಲ್ಲಾ ಚಾಚೂತಪ್ಪದೆ ಮಾಡಿಸಿ‌ ಮಾಡಿಸಿ ಅವನನ್ನು ನಾಲ್ಕು ಹೆಜ್ಜೆ ನಡೆಯುವಂತೆ ಮಾಡಲು ಹರಸಾಹಸ ಪಡಬೇಕಾಯಿತು. ದಿನವೂ ಬೆಳಗ್ಗೆ ಅದೇ ಹೊತ್ತಿಗೆ ಪಾಯಿಖಾನೆಗೆ ಹೋಗುವ ರೂಢಿಯನ್ನು ಮಾಡಿಸಿದ್ದಾಳೆ. ಮೂತ್ರವಾದರೂ ಅಷ್ಟೇ ನಿಗಾ ಇಟ್ಟಿರಲೇಬೇಕು. ತಿನ್ನಲು, ಕುಡಿಯಲು ಏನು ಕೊಡುವಾಗಲೂ ನೋಡಿಕೊಂಡೇ ಕೊಡಬೇಕು. ಅವನೋ, ಇದ್ದಕ್ಕಿದ್ದಹಾಗೇ ಒಮ್ಮೊಮ್ಮೆ ಕೆರಳುತ್ತಾನೆ, ಸಿಕ್ಕಿದ್ದನ್ನು ಎತ್ತಿ ಎಸೆಯುತ್ತಿರುತ್ತಾನೆ. ಒಂದೆರಡು ಬಾರಿ ರಾಮಲಕ್ಷ್ಮಿಗೆ ಪೆಟ್ಟೂ ಬಿದ್ದದ್ದಿದೆ. ಅದೇಕೆ ಹಾಗಾಡುತ್ತಾನೋ ಯಾರಿಗೆ ಗೊತ್ತು?! ಏನಾದರೂ ಒಟ್ಟಿನಲ್ಲಿ ಇದೊಂದು ದೇವರ ಸೇವೆಯೇನೋ ಎಂಬಂತೆ ಮಂಜನನ್ನು ನೋಡಿಕೊಳ್ಳುತ್ತಿದ್ದಾಳೆ. ಒಂದೊಂದು ಸಲ ʻತಾನೇನಾದರೂ ಸತ್ತರೆ ಮುಂದವನ ಗತಿಯೇನುʼ ಎನ್ನುವ ಯೋಚನೆ ಬರುತ್ತದೆ. ಆಗೇನೂ ತೋಚದೆ, ʻನಾನಿರೋದಿಲ್ಲವಲ್ಲ ನೋಡಕ್ಕೆ, ಆಗೇನೇ ಆದರೂ ನಂಗೆ ತಿಳಿಯಲ್ವಲ್ಲ, ಇರೋತಂಕ ಅಷ್ಟೇ ಎಲ್ಲಾ ನಂದುʼ ಎಂದುಕೊಂಡು ಯೋಚನೆ ಮಾಡುವುದನ್ನೇ ಈಗೀಗ ಬಿಟ್ಟುಬಿಟ್ಟಿದ್ದಾಳೆ.
 
ಕಷ್ಟವೋ, ಸುಖವೋ, ಅವಳೇನೋ ತನ್ನ ಕರ್ತವ್ಯ ಮಾಡಿಕೊಂಡು ಹೋಗುತ್ತಿದ್ದಾಳೆ. ಆದರೆ ಮಹೇಶನ ಕಿರಿಕಿರಿ ತಪ್ಪುವುದಿಲ್ಲವೇ! ಆಗೀಗ ಬಂದು ಜಗಳಕ್ಕೆ ನಿಲ್ಲುತ್ತಾನೆ. ಸ್ವಂತಮನೆಯಿದ್ದೂ ಬಾಡಿಗೆ ಕೊಡುವ ಕರ್ಮ ತನಗೇಕೆ, ತನಗಿಂತಲೂ ಆ ಬುದ್ಧಿಗೆಟ್ಟ ಮಗುವೇ ಅಮ್ಮನಿಗೆ ಹೆಚ್ಚಾಯಿತೇ ಎನ್ನುವ ಕೋಪ ಅವನಿಗೆ. “ಮೊದ್ಲು ಅವ್ನನ್ನ ಮನೆಯಿಂದ ಆಚೆಗ್ಹಾಕು” ಎನ್ನುವ ವರಾತ ಅವನದ್ದು. “ಅದ್ಹೇಗೆ ಹೊರಗ್ಹಾಕಕ್ಕಾಗತ್ತೆ? ಅದು ಜೀವವಲ್ವೇ? ನನ್ಮಗಳ ಮಗನಲ್ವೇ?” ಎನ್ನುವುದು ಇವಳ ತರ್ಕ. ಈಗಾರು ತಿಂಗಳ ಕೆಳಗೆ ಗಂಡಹೆಂಡಿರಿಬ್ಬರೂ ಬಂದಿದ್ದಾಗ ನಿರ್ಮಲಾ ಕೋಪದಿಂದ “ಇಂಥ ಮಗು ಇದ್ರೆಷ್ಟು, ಸತ್ರೆಷ್ಟು. ಏನುಪಯೋಗ ಇದ್ರಿಂದ! ನೋಡ್ಕೊಳೋದನ್ನ ತಪ್ಪಿಸ್ಕೊಂಡು ಇದ್ರಮ್ಮನೇ ಸತ್ಲಂತೆ. ಇದ್ಸತ್ರೆ ಅಳೋವ್ರ್ಯಾರಿದಾರೀಗ?” ಎಂದಾಗ ರಾಮಲಕ್ಷ್ಮಿಗೆ ಎದೆಗೇ ಗುದ್ದಿದಂತಾಗಿ “ಏನ್ಮಾತೂಂತ ಆಡ್ತೀಯ ನಿರ್ಮಲಾ. ಅವನ್ಸತ್ರೆ ಅಳಕ್ಕೆ ನಾನಿದೀನಿ. ಅವ್ನೇನಾದ್ರೂ ನಿನ್ತೊಡೆ ಮೇಲೆ ಕೂತಿದಾನಾ? ನಿಂಗೇನ್ಕಷ್ವಾಗಿರೋದು? ನಿನ್‌ಪಾಡಿಗೆ ನೀನಿದೀಯಲ್ಲ. ಬ್ರಹ್ಮ ಅದರಾಯಸ್ಸು ಎಷ್ಟು ಬರ‍್ದಿರ‍್ತಾನೋ ಅಷ್ಟುಕಾಲ ಅದ್‌ಬದ್ಕಿರತ್ತೆ” ಎನ್ನುತ್ತಾ ಕಣ್ಣಲ್ಲಿ ನೀರು ಹಾಕಿಕೊಂಡಳು.
 
ನಿನ್ನೆಯೂ ಇದೇ ಜಗಳ ನಡೆಯುತ್ತಿರುವಾಗಲೇ ವಿಷಯ ಇನ್ನೊಂದು ಸ್ವಲ್ಪ ಮುಂದೆ ಹೋಗಿತ್ತು. ಮಹೇಶ, ನಿರ್ಮಲಾ ಹೊಸ ಯೋಜನೆಯನ್ನು ಹಾಕಿಕೊಂಡು ಬಂದಿದ್ದರು. “ಇದು ಅರವತ್ತು ನಲವತ್ತರ ಸೈಟು. ಅಪ್ಪ ಹೋದ್ಮೇಲೆ ನಂಗೂ ಈ ಜಾಗದ್ಮೇಲೆ ಹಕ್ಕಿದೆ, ಯಾರಾದ್ರೂ ಬಿಲ್ಡರಿಗೆ ಕೊಟ್ಟರೆ ಮೂರಂತಸ್ತಲ್ಲಿ ಆರು ಮನೆಕಟ್ಟಿ ಮೂರು ಮನೆ ನಮ್ಗೆ ಕೊಡ್ತಾನೆ. ಒಂದ್ಮನೆ ಮಾರಿ ಒಂದಷ್ಟು ದುಡ್ಡು ಕೈಯಲ್ಲಿಟ್ಕೋಬೋದು, ಸಣ್ಣ ಪುಟ್ಟ ಸಾಲ ತೀರಿಸ್ಕೊಂಡು, ಇನ್ನೊಂದ್ಮನೆ ಬಾಡ್ಗೆಗೆ ಕೊಟ್ರೆ ತಿಂಗ್ಳಿಗಿಷ್ಟು ಆದಾಯಾನಾದ್ರೂ ಆಗತ್ತೆ. ಒಂದ್ಮನ್ಲಿ ನಾವೆಲ್ರೂ ಇದ್ಗೋಬೋದು. ಕೆಳ್ಗಡೆ ಕಾರ್‌ಪಾರ್ಕಿಂಗ್‌ ಜಾಗ. ಮನೆ ಹಳೇದಾಗಿ ಯಾವಾಗ್ಬೇಕಾದ್ರೂ ಬಿದ್ದೋಗ್ಬೋದು ಅನ್ನೋಹಾಗಿದೆ. ಹಾಗ್ಬಿದ್ರೆ ಕಟ್ಸೋ ಯೋಗ್ತೆ ನಮ್ಗಿಲ್ಲ. ಈಗ ಯಾರೋ ಒಬ್ಬ ತೊಗೊಳೊಕ್ಕೆ ಬಂದಿರೋವಾಗ ಕೊಡೋದು ಜಾಣ್ತನ. ನೀನಿದಕ್ಕೆ ಒಪ್ಲೇಬೇಕು” ಎಂದು ಗಂಡ ಹೆಂಡತಿ ಪಟ್ಟುಹಿಡಿದು ಕೂತರು. “ಹಾಗಾದ್ರೆ ಮಂಜ ನಿಂಜೊತೆ ಇರಕ್ಕೆ ನಿಮ್ಗೆ ಒಪ್ಗೇನಾ?” ರಾಮಲಕ್ಷ್ಮಿ ಕೇಳಿದರೆ ಅದಕ್ಕೆ ಮಾತ್ರಾ ಇಬ್ಬರೂ ಒಪ್ಪವಲ್ಲರು. “ಹೇಗಿದ್ರೂ ಮನೆಮಾರಿದ್ದು ಒಂದಷ್ಟು ದುಡ್ಬರತ್ತಲ್ವಾ, ಯಾವ್ದಾದ್ರೂ ಅನಾಥಾಶ್ರಮಕ್ಕೆ ಕರ‍್ಕೊಂಡ್ಹೋಗಿ, ಒಂದೆರ‍್ಡು ಲಕ್ಷ ಬಿಸಾಕಿ, ಯಾರೋ ದೂರದ ನೆಂಟ್ರಮಗು ಅಂತ ಬಿಟ್ಬಂದ್ರಾಯ್ತು” ಎಂದ ನಿರ್ಲಕ್ಷ್ಯದಿಂದ.  “ಅಬ್ಬಬ್ಬಬ್ಬಾ ಎಂಥಾ ಚೆನ್ನಾಗಿ ಮಾತಾಡ್ತಿ ನೀನು. ಇನ್ನೂ ಎಲ್ಲೋ ಇರೋ ದುಡ್ಡು ಕೈಗೆ ಬಂದ್ಹಾಗೆ, ನೀನದ್ರಲ್ಲಿ ಒಂದೆರಡ್ಲಕ್ಷ ಬಿಸಾಕ್‌ಬರೋಹಾಗೆ. ಅದೆಷ್ಟು ಅಲಕ್ಷ್ಯ ನಿಂಗೆ ದುಡ್ಡಿನ್ಮೇಲೆ. ಈ ಸೈಟ್‌ ತೊಗೋಬೇಕಾರೆ ದುಡ್ಡು ಸಾಲ್ದೆ ಬಂದು ಕಡೆಗೆ ಅರಿಶಿನದ್ಕೊಂಬು ಕಟ್ಕೊಂಡು ಮಾಂಗಲ್ಯದ್ಸರ ಮಾರಿ ದುಡ್ಡು ಹೊಂದ್ಸಿರೋದು. ನೀನೇನ್‌ಕಷ್ಟ ಪಟ್ಟಿದೀಯ ಇದ್ಕೋಸ್ಕರ? ಈಗ್‌ಮಾರಕ್ಕೆ ನಿಂತಿದೀಯಲ್ಲ! ಒಂತಿಳ್ಕೋ ನಾನಿರೋತಂಕ ಮಂಜ ನಂಜೊತೇನೇ ಇರೋದು. ಮಗ್ಳಮಗ, ಮೊಮ್ಮಗ. ಅವ್ನಿಗೆ ಇದ್ರಲ್ಲಿ ಹಕ್ಕಿಲ್ವಾ? ನಾನ್‌ ಬದ್ಕಿರೋತಂಕ ಈ ಜಾಗ ಮಾರಕ್ಬಿಡಲ್ಲ” ಖಡಾಖಂಡಿತವಾಗಿ ಹೇಳಿದಳು.
 
ಈಗ ನಿರ್ಮಲಾ ಬಾಯಿಬಿಟ್ಟಳು “ಅಲ್ಲಾತ್ತೆ, ಇವ್ರೊಬ್ರು ದುಡೀತಿರೋದು‌, ತಿನ್ನೋರು ನಾಕ್ಜನ. ತಲೆಗಿದ್ರೆ ಕಾಲ್ಗಿಲ್ಲ, ಕಾಲ್ಗಿದ್ರೆ ತಲೆಗಿಲ್ಲ. ಮಕ್ಳ ಡೊನೇಶನ್‌, ಟ್ಯೂಶನ್ನು, ಸ್ಕೂಲ್ಫೀಸು ಹೊಂದ್ಸಕ್ಕಾಗ್ದೆ ಸಾಲಮಾಡಿ ಮಾಡಿ ಕುತ್ಗೇಗ್ಬಂದಿದೆ. ಆಫೀಸಲ್ಲಿ ಸಿಗೋಬರೋ ಸಾಲಾ ಎಲ್ಲಾ ತೊಗೊಂಡಾಗಿದೆ. ಇದ್ರಮೇಲೆ ಮನೆಬಾಡ್ಗೆ ಬೇರೆ ಕಟ್ಬೇಕು. ನಮ್ಗ್ಯಾವ ಹಣೆಪಾಡಿದು ನಮ್ದೇ ಮನೆಯಿಟ್ಕೊಂಡು. ಇದೇ ಯೋಚ್ನೆ ಮಾಡಿ, ಮಾಡಿ ಇಬ್ರಿಗೂ ಬಿಪಿ ಶುರ‍್ವಾಗಿದೆ. ಇವ್ರಿಗೂ ನಲವತ್ತೈದಾಯ್ತು. ಇನ್ನಾದ್ರೂ ನಾವ್‌ ನೆಮ್ಮದಿಯಾಗಿರೋದು ನಿಮ್ಗೆಬೇಕಿಲ್ವಾ. ಬದ್ಕಿರೋ ಮಗಂಗಿಂತ, ಸತ್ತೋಗಿರೋ ಮಗ್ಳೇ, ಅವ್ಳ ಹುಚ್ಚುಮಗ್ನೇ ಹೆಚ್ಚಾ ನಿಮ್ಗೆ. ನಾನಿರೋತಂಕ ಮಾರಕ್ಬಿಡಲ್ಲ ಅಂತೀರಲ್ಲ, ನಿಮ್ಗೂ ಎಪ್ಪತ್ತಾಯ್ತು. ಇನ್ನೂ ಗಟ್ಟಿಮುಟ್ಟಾಗೇ ಇದೀರಿ. ಇನ್ನೂ ಎಷ್ಟು ಕಾಲವಿರ‍್ತೀರೋ.  ಇನ್‌ಹತ್ವರ್ಷವೋ, ಇಪ್ಪತ್ವರ್ಷವೋ ಅಥ್ವಾ ಶತಾಯುಷಿಯಾದ್ಮೇಲೇ ಸಾಯ್ತೀರೇನೋ. ನೀವು ಸಾಯೋದನ್ನ ಕಾಯ್ತಾ ಎಷ್ಟುಕಾಲ ಕೂತಿರ‍್ಬೇಕು ನಾವು? ಅಷ್ಟ್ರತಂಕ ನಾವು ಬದ್ಕಿರ‍್ಬೇಕಲ್ಲ.  ಇದಕ್ಕೊಪ್ಕೊಳ್ದಿದ್ರೆ ಲಾಯರ್‌ ನೋಟೀಸ್ಕೊಟ್ಟು ಪಾಲ್ ‌ಕೇಳ್ತೀವಿ” ಎಂದವಳೇ ರೋಷದಿಂದ ಕಾಲನ್ನು ಧಪ್ಪನೆ ನೆಲಕ್ಕೆ ಬಡಿದು “ನಡೀರಿ ಹೋಗೋಣ, ಇನ್ನೂ ಏನ್ನೋಡ್ತಾ ನಿಂತಿದೀರಾ” ಎಂದು ಮುಖ ದುಮ್ಮಿಸಿಕೊಂಡು ಹೊರಹೋದಳು. “ಅಮ್ಮಾ, ನಾಳೆ ಸಾಯಂಕಾಲ ಬರ‍್ತೀವಿ. ನೀನು ಒಪ್ಕೋಬೇಕಷ್ಟೇ” ಎಂದ ಮಹೇಶನೂ ಹಿಂದೆಯೇ ಹೊರಟ… ʻಅಂದ್ರೆ ನಾವಿಬ್ರೂ ಸತ್ರೆ ಸಮಸ್ಯೆ ಬಗೆಹರಿಯತ್ತೇಂತ ಇವ್ರಿಬ್ರೂ ಕಾಯ್ತಾ ಕೂತಿದಾರಾ, ಒಬ್ರು ಬದುಕ್ಬೇಕಾ, ಎಷ್ಟು ಕಾಲ ಬದುಕ್ಬೇಕೂಂತ ಇನ್ನೊಬ್ರು ನಿರ್ಣಯಿಸಕ್ಕಾಗತ್ತಾ. ಇವ್ರಿಗೋಸ್ಕರ ನಾವಿಬ್ರೂ ಸಾಯಕ್ಕಾಗತ್ತಾʼ ಅನ್ನಿಸಿ ನೆಲಕ್ಕೆ ಕುಸಿದಳು.


ಮರುದಿನ ಒತ್ತಾಸೆಗಾಗಿ ನಿರ್ಮಲನ ತಂದೆಯನ್ನೂ ಕರೆದುಕೊಂಡು ಬಂದರು…  ಮಹೇಶನ ಮಾವನೂ ಫೂಟ್‌ಲಾಯರಿ, ಬೇಕಾದಷ್ಟು ʻಲಾ-ಪಾಯಿಂಟುʼಗಳನ್ನು ಎತ್ತಿದ. ಸ್ವಂತ ಮಗನ ಮೇಲೆ ಇಷ್ಟು ಹಟ ಸಾಧಿಸಬಾರದು ಎಂದು ಮಗಳು ಅಳಿಯನ ಪರ ವಕಾಲತ್ತು ವಹಿಸಿದ. ಸಾಕಷ್ಟು ವಾಗ್ವಾದವಾದ ಮೇಲೆ ರಾಮಲಕ್ಷ್ಮಿಗೂ ʻಮಗ-ಸೊಸೆ ಹೇಳುವುದರಲ್ಲೂ ಒಂದು ಸತ್ಯವಿದೆ. ಅವರು ಕಾಯ್ತಿದಾರೇ ಅಂದಾಕ್ಷಣ ನಾವಿಬ್ರೂ ಸಾಯಕ್ಕಾಗಲ್ಲ, ಹಾಗಂತ ಅವ್ರ ಸಮಯಕ್ಕಿಲ್ಲದ್ಹಾಗೆ ಎಂದೋ ಇಡೀ ಆಸ್ತಿ ಅವ್ರಿಗೇ ಸಿಕ್ರೂ ಏನ್‌ಪ್ರಯೋಜನ. ಏನೋ ಅಷ್ಟು ಕಷ್ಟ ಇದೆ ಅಂತಿದಾರಲ್ಲ, ಹೀಗಾದ್ರೂ ಅವ್ನ ಕಷ್ಟ ಕಮ್ಮಿಯಾದ್ರೆ ಆಗ್ಲಿʼ ಅನ್ನಿಸಿ, “ನಾನು ಮಂಜನ್‌ ಬಿಡಲ್ಲ, ಅವನ್ಕಟ್ಕೊಂಡು ಮೇಲಿರಕ್ಕಾಗಲ್ಲ. ಕೆಳ್ಗಡೆ ನಾವಿಬ್ರಿರೋಕೆ ಒಂದ್ರೂಮಿನ ಪುಟ್ಟಮನೆಯನ್ನಾದ್ರೂ ಕಟ್ಟಿಕೊಡೋದಾದ್ರೆ ನಾನು ಒಪ್ಗೆಕೊಡ್ತೀನಿ. ಬರೋ ಬಾಡ್ಗೇಲಿ ಅರ್ಧಬಾಡ್ಗೆ ನಂಕೈಗೆ ಕೊಡ್ಬೇಕು. ಮಾರಿದ್ದುಡ್ನಲ್ಲಿ ಅರ್ಧದುಡ್ಡು ನಂಗ್ಬರ‍್ಬೇಕು. ಇದಕ್ಕೊಪ್ಕೊಳೋದಾದ್ರೆ ಸರಿ” ಎಂದು ತನ್ನ ಕಂಡೀಶನ್‌ ಇಟ್ಟಳು. ಮೂವರು ಮುಖ ಮುಖ ನೋಡಿಕೊಂಡರು. ಹೊರಗಡೆ ಹೋಗಿ ಮಾತಾಡಿಕೊಂಡು ಬಂದು ಸರಿಯೆಂದರು. “ಬಿಲ್ಡರ‍್ನ ಕರ‍್ಕೊಂಡ್ಬಾ. ನಾನ್‌ಕೇಳ್ತೀನಿ. ಎಲ್ರೂ ಒಪ್ಕೊಂಡು ಬರ‍್ಕೊಟ್ರೆ ಸರಿ, ಇಲ್ದಿದ್ರಿಲ್ಲ” ಎಂದು ಖಂಡತುಂಡವಾಗಿ ಹೇಳಿದಳು.
 
ಬಿಲ್ಡರೂ ಬಂದ. ʻಓಹೋ ಪುಟ್ಮನೆ ಕಟ್ಕೊಡ್ತೀನಿʼ ಅಂತ ಒಪ್ಕೊಂಡ. ಮಹೇಶನೂ ಹೇಳಿದ್ದನ್ನು ಬರೆದೂ ಕೊಟ್ಟ. ಅದಕ್ಕೆ ಬಿಲ್ಡರೂ, ಬೀಗರೂ ಸಾಕ್ಷಿಯಾಗಿ ರುಜುವನ್ನೂ ಹಾಕಿದರು. ಮನೆ ಕಟ್ಟಿಮುಗಿಯುವವರೆಗೆ ಹಿಂದಿನ ಬೀದಿಯಲ್ಲಿ ಒಂದು ಬಾಡಿಗೆ ಮನೆಯನ್ನು ಮಾಡಿಕೊಟ್ಟ. ಸಾಮಾನೆಲ್ಲಾ ಸಾಗಿಸಿ ಆಯಿತು. ಕಟ್ಟಡ ಒಡೆಯುವುದಕ್ಕೆ ಮುಂಚೆ ಇನ್ನೇನಾದ್ರೂ ಬಿಟ್ಟಿದ್ರೆ ನೋಡ್ಕೊಂಡ್ಬಿಡು ಎಂದು ಮಹೇಶ ರಾಮಲಕ್ಷ್ಮಿಯನ್ನು ಕರೆದುಕೊಂಡು ಬಂದ. ಏನೂ ಇಲ್ಲದಿದ್ದರೂ ಕಡೆಯಬಾರಿ ಬಾಳಿ ಬದುಕಿದ ಮನೆಯನ್ನು ನೋಡಿಕೊಂಡು ಬರೋಣವೆಂದು ರಾಮಲಕ್ಷ್ಮಿ ಮಂಜನನ್ನೂ ಕರೆದುಕೊಂಡು ಮನೆಯೊಳಗೆಲ್ಲಾ ಓಡಾಡಿದಳು. ಒಂದೊಂದು ಜಾಗಕ್ಕೂ ಒಂದೊಂದು ಕತೆಯಿತ್ತು. ಅಳು ತಡೆಯದಾಗಿ ಹೊರಬಂದು ಕಾಂಪೌಂಡಿಗೊರಗಿ ನಿಂತು ಸೆರಗನ್ನು ಕಣ್ಣಿಗೆ ಹಚ್ಚಿದಳು. “ಇನ್ನು ಶುರು ಹಚ್ಕೊಳ್ರಿ” ಬಿಲ್ಡರು ಕೆಲಸಗಾರರಿಗೆ ಆಜ್ಞೆಯಿತ್ತ. ಧಭಾಧಭಾ ಏಟುಗಳು ಬೀಳತೊಡಗಿದವು. ಹಳೆಯ ಹೆಂಚಿನಮನೆ, ಮಣ್ಣಿನ ಗೋಡೆ ಧಡಧಡ ಬೀಳಲು ಶುರುವಾಗುತ್ತಿದ್ದಂತೆ ರಾಮಲಕ್ಷ್ಮಿಗೆ ಪಕ್ಕದಲ್ಲಿ ಮಂಜನಿಲ್ಲದಿರುವುದು ಗಮನಕ್ಕೆ ಬಂದು “ಅಯ್ಯೋ… ಮಂಜಾ… ಒಳಗೇ ಇದಾನೇನೋ…” ಎಂದು ಕೂಗುತ್ತಾ ಕುಸಿಯುತ್ತಿರುವ ಮನೆಯೊಳಗೆ ಓಡಿದಳು. ಎಲ್ಲರೂ ನೋಡುನೋಡುತ್ತಿರುವಂತೆಯೇ ಅಡ್ಡತೊಲೆಯೊಂದಿಗೆ ಮಾಡು ಒಮ್ಮೆಲೇ ಕುಸಿಯಿತು… ಸುತ್ತಲೂ ಮನೆಯಿದ್ದಷ್ಟೆತ್ತರಕ್ಕೂ ಧೂಳೆದ್ದಿತ್ತು…