ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅನವ್ಸಮೆಂಟು

ದೇವರಾಜ್ ನಾಯಕ
ಇತ್ತೀಚಿನ ಬರಹಗಳು: ದೇವರಾಜ್ ನಾಯಕ (ಎಲ್ಲವನ್ನು ಓದಿ)

ಮದುವೆಯಾಗಬೇಕಿಲ್ಲ,
ಜೋಡಿ ಮಾಡಿಕೊಡಲಾಗುವುದು
ರಾಜಧಾನಿಗೆ ಹೊರಟ ಹಳ್ಳಿಯ
ಹಕ್ಕಿ ಹುಡುಕುತ್ತಿದ್ದ ಅನವ್ಸಮೆಂಟು!!!

ಅವ್ವ ಕಟ್ಟಿಕೊಟ್ಟ ಹುರಿಯಕ್ಕಿ ಉಂಡೆ,
ಅಲ್ಯುಮಿನ್ ಡಬ್ಬದಲ್ಲಿ ಭದ್ರವಾಗಿದೆ,
ಸುಟ್ಟ ಒಣಮೀನು!
ಅಪ್ಪ ವರ್ಷವಿಡೀ ಗೇದರೂ,
ಕೂಡಿಟ್ಟ ನಾಕಾಣೆಗೆ, ಇನ್ನೂ ಹತ್ತು ರೂ ಕಡಿಮೆ
ಧಣಿಗಳ ಮುಂದೆ ದರಿದ್ರನಂತೆ
ನಿಂತು ತಂದ ಸಾಲವೂ ತಿಜೋರಿಯಲ್ಲಿ
ಭದ್ರ.

ಕೊಟ್ಟು ಕೆಟ್ಟ ಬಲಿಗಿಂತ ಒಂದೆಜ್ಜೆ
ಮುಂದಿಟ್ಟಿದ್ದರೂ,
ಅಪ್ಪ ಅವ್ವ ತಾರಸಿಯನ್ನಾಗಲೇ
ಗುಡಿಸಲಿಗೆ ಹೊದಿಸಾಗಿದೆ , ಕನಸಲ್ಲಿ!!!

ಹಂಬಲಿಸುತ್ತಿದ್ದ ಅನವ್ಸಮೆಂಟ್ಗೆ
ಮೊಬೈಲ್ ಎಂಬ ಪೆಪ್ಪರ್ಮೆಂಟು.
ಜಾಲಾಡುತ್ತಾಳೆ ಡೇಟಿಂಗ್ ಗೆ,
ಬಣ್ಣಗಳ ಬದುಕ ಬಾಗಿಲ ತಟ್ಟಲು
ಒಂಟಿಕಾಲಲ್ಲಿ.

ರಾಶಿಯಲ್ಲಿ ಮಿಂದೆದ್ದು,ಕೊನೆಗೂ
ಸುಸ್ತಾಗಿ ಅಡಂ ತಡಂ ಹಾಕುತ್ತಾಳೆ ಆಯ್ಕೆಗೆ.
ಅತಿರೇಕಕ್ಕೆ, ಗೋಡೆಯಿಲ್ಲದ ಜಗ ಮರೆತು
ನಗ್ನವಾಗಿ ಬಿಡುತ್ತಾಳೆ.

ಹಳದಿಯ ಹಂಗಿಲ್ಲದೆ,
ಕಂಕಣದ ಕೆಂಪಿಲ್ಲದೆ,
ಸಪ್ತಪದಿಯ ಸೊತ್ತಿಲ್ಲದೆ,
ಅನವ್ಸಮೆಂಟನಲ್ಲಿ ಡಿಸ್ಕೌಂಟ್ಗೆ
ಸೇಲಾಗಿಬಿಡುತ್ತಾಳೆ..