- ಕೆ ಟಿ ಗಟ್ಟಿಯವರ ನೆನಪಿನಲ್ಲಿ - ಫೆಬ್ರುವರಿ 28, 2024
- ದೂರ ಸಮೀಪಗಳ ನಡುವೆ… - ಜನವರಿ 26, 2024
- “The Nested Love” : ಆಂಗ್ಲ ಭಾಷೆಯ ಹತ್ತು ಕಥೆಗಳ ಸಂಕಲನ - ಫೆಬ್ರುವರಿ 10, 2021
ಸಮಾಜದ ತೀರ ಕೆಳಸ್ತರದ ಒಂದು ಗಂಡು ಹೆಣ್ಣು ಸಂಬಂಧದ ಎಳೆಯನ್ನು ತೀರ ಬೇರೆಯೇ ನಿಟ್ಟಿನಿಂದ ಗಮನಿಸುವ, ಅದನ್ನೇ ನಿರೂಪಣೆಯ ತಂತ್ರವನ್ನಾಗಿಸಿಕೊಂಡ ಕತೆ, The Poisoned Man’s Wife (ವಿಷವುಂಡವನ ಪತ್ನಿ);
ಬಾಲ್ಯದ ಗೆಳೆತನ-ಹಗೆತನ, ಬೆಳೆದ ಮನಸ್ಸಲ್ಲಿ ತರುವ ತಾಕಲಾಟವನ್ನು ಶಿಕ್ಷಕಿ-ವಿದ್ಯಾರ್ಥಿ ಸಂಬಂಧದ ನಿಟ್ಟಿನಿಂದ ಕಾಣುವ The Love They Built (ಪ್ರೀತಿಯ ಮನೆ);
ಬದುಕಿನ ಕಠಿಣ ಸಂದರ್ಭದಲ್ಲಿ ಎಲ್ಲಿಂದಲೋ ಬಂದೊದಗುವ ಸಹಾಯಹಸ್ತದ ಕತೆ Who was that Saviour?(ಯಾರವನು ಆಪದ್ಭಾಂಧವ?);
ಸರಿಸುಮಾರು ಅದೇ ರೀತಿ ನಿಷ್ಕಾಮ ಸೇವೆಯ ಸಹಾಯ ಹಸ್ತ ಚಾಚುವ ಕತೆಯನ್ನೇ ಹೇಳುವ My Mysterious Girl, (ಅದೃಶ್ಯ ದೇವತೆ);
ಸಾರ್ಥಕ ಪ್ರೇಮಕತೆಯೊಂದು ಹೀಗೂ ಮೂಡಿ ಬರಬಹುದು ಅನಿಸುವಂತಿರುವ I Don’t Want to Lose You (ನೀನಿಲ್ಲದೆ ಜೀವ ನಿಲ್ಲದೆ);
ಸ್ನೇಹ ತರುವ ಅದೃಷ್ಟವೆಂದೋ, ಬದುಕು ಎಂದೋ ಹೇಳಬಹುದಾದ, ನಿಷ್ಕಾರಣ ಪ್ರೀತಿಯ ಒಂದು ಪ್ರತಿಮೆಯ ಜೊತೆಗೇ ಕಟ್ಟಿಕೊಡುವ The Nested Love (ಸ್ನೇಹದ ಹಕ್ಕಿಗೂಡು);
ಸಂಭಾವನೆ ಸುಬ್ಬಿ ಎಂದೇ ಹೆಸರಾದ ಒಂದು ಅಪರೂಪದ, ಮಾತೃಹೃದಯದ ಸೆಳೆತ ಹುಟ್ಟಿಸುವ ಪಾತ್ರದ ಸುತ್ತ ಇರುವ Sambhavane Subbi ( ಸಂ-ಭಾವನಾ ಸುಬ್ಬಿ);
ಸಾವಿನೆದುರಿಗೇ ನಿಂತು, ಮುಂದಿನ ಕ್ಷಣ ಈ ಬದುಕಿಗೆ ವಿದಾಯ ಅನಿವಾರ್ಯ ಎಂಬುದು ಮನಸ್ಸಿಗಿಳಿದ , ಕೊನೆ ನಿಶ್ಚಿತವಾದ ಕ್ಷಣದಲ್ಲಿ ನಮ್ಮ ವೈರಾಗ್ಯ, ನಿರಾಸಕ್ತಿ, ನಿರುತ್ಸಾಹ, ಕ್ರಿಯಾಹೀನ ಜಡತ್ವ ನಮ್ಮನ್ನೇ ಪ್ರಶ್ನಿಸುವ ಒಂದು ಸಂಕ್ಲಿಷ್ಟ ಘಟ್ಟದ ವಸ್ತುವನ್ನು ಕತೆಯಾಗಿಸಿರುವ The Play of Faith (ವಿಶ್ವಾಸದ ಉಸಿರು);
ಸಹಮತವಿಲ್ಲದಿದ್ದರೂ ಸಹಯಾನ ಅಸಂಭವವೇನಲ್ಲ ಎನ್ನುವುದನ್ನು ನವಿರಾಗಿ ಹೇಳುವ Walking on Your Path (ನಿನ್ನ ಹಾದಿಯ ನೆರಳಾಗಿ);
ಹಿಂಸೆ, ಕ್ರೌರ್ಯಕ್ಕೆ ತುತ್ತಾದ ಸ್ತ್ರೀಯ ವಿಮುಕ್ತಿಯ ಕತೆ, ಚಂಡಿಕಾ
ಹೀಗೆ ಒಟ್ಟು ಹತ್ತು ಮನರಂಜಕ, ಚಿಂತನೆಗೆ ಹಚ್ಚಬಲ್ಲ, ನೇರ ಆದರೆ ಚೇತೋಹಾರಿ, ಆಪ್ತ ನಿರೂಪಣೆಯ ಕತೆಗಳ ಸಂಕಲನ The Nested Love. ಇಲ್ಲಿನ ವಿಶೇಷವೆಂದರೆ ಈ ಯಾವತ್ತೂ ಪಾತ್ರಗಳು ಯಾವುದೇ ಭಾರವಿಲ್ಲದ, ಕಥಾನಕದ ಜಾಡಿಗೆ ಅನುಗುಣವಾಗಿ ನಡೆಯುವ ಪಾತ್ರಗಳಾಗಿರುವುದು. ಅವುಗಳಲ್ಲಿ ಅನಗತ್ಯ ಸಂಕೀರ್ಣತೆಯಿಲ್ಲ. ಕಥಾನಕದ ನಿರೂಪಣೆ ಕೂಡ ಅನಗತ್ಯ ವಿವರಗಳಿಗೆ ಹೋಗದೆ ನೇರವಾಗಿ ಹೇಳಬೇಕಾದುದನ್ನು ಹೇಳಿ ಮುಗಿಸುತ್ತವೆ. ಹಾಗೆಂದ ಮಾತ್ರಕ್ಕೆ ಇಲ್ಲಿ ತರ್ಕವಿಲ್ಲ ಎಂದಲ್ಲ. ತರ್ಕ, ವಾದ, ಜಿಜ್ಞಾಸೆ ಇದೆ; ಅದು ಕತೆಯ ಚಲನೆಗೆ ಅನುಗುಣವಾಗಿದೆ. ಹೆಚ್ಚಿನ ಕತೆಗಳು ಉತ್ತಮ ಪುರುಷ ನಿರೂಪಣೆಯಲ್ಲಿಯೇ ಇದ್ದು ಆ ಧ್ವನಿಯ ಪ್ರಾಮಾಣಿಕತೆಯನ್ನೂ ಕತೆ “ಹೇಳುವ” ವಿಧಾನದ ಮಿತಿಗಳನ್ನೂ ಹೊಂದಿವೆ.
ಒಂದು ಬಗೆಯ ದೇಶೀ ಸ್ಪರ್ಶ, ಪ್ರೀತಿ, ಕರುಣೆ, ಸಹಾಯ, ಸಹಕಾರದ ಮನೋಧರ್ಮವನ್ನು ಎತ್ತಿ ಹಿಡಿಯುವ, ಸೀಮಿತ ಚೌಕಟ್ಟಿನ ಈ ಕತೆಗಳು ಒಂದು ಬಗೆಯ ರಿಲ್ಯಾಕ್ಸಿಂಗ್ ಅನುಭವದೊಂದಿಗೆ ಮುಗಿಯುತ್ತವೆ. ಕನ್ನಡದ ಮ್ಯಾಗಝೀನ್ ಕತೆಗಳ ಭಾರವೂ ಇಲ್ಲದ, ಸರಳತೆಯೇ ಆಕರ್ಷಣೆಯೂ ಆಗಿರುವ ಈ ಕತೆಗಳ ಮಾದರಿಯ ಕತೆಗಳಿಗೆ ಅಪಾರ ಸಾಧ್ಯತೆಗಳಿದ್ದು ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟಿಸುತ್ತದೆ.
**********
ಕೃತಿಯ ಲೇಖಕಿ ಪರಿಚಯ:
ಕವಿತಾ ಹೆಗಡೆ ಅವರು “The Nested Love” ಪುಸ್ತಕದ ಲೇಖಕಿ.
ಉತ್ತರ ಕನ್ನಡದ ಕುಮಟಾ ತಾಲೂಕಿನ ಕತಗಾಲದಲ್ಲಿ ಜನನ ಹಾಗೂ ಎಸ್ ಎಸ್ ಎಲ್ ಸಿ ಪ್ರಥಮ ಸ್ಥಾನ.
ಕುಮಟಾದ ಡಾ|| ಎ ವಿ ಬಾಳಿಗಾ ಕಾಲೇಜಲ್ಲಿ ಬಿ ಎ ವ್ಯಾಸಂಗ ಮಾಡಿದ್ದಾರೆ.
ಮೈಸೂರಲ್ಲಿ ಫ್ಯಾಶನ್ ತಂತ್ರಜ್ಞಾನದಲ್ಲಿ ಡಿಪ್ಲೋಮಾ ಮಾಡಿದ್ದಾರೆ.
ಎಂ ಎ ಮತ್ತು ಬಿ ಎಡ್ ವ್ಯಾಸಂಗವನ್ನು ಹುಬ್ಬಳ್ಳಿಯಲ್ಲಿ ಮಾಡಿದ್ದಾರೆ.
೧೭ ವರ್ಷಗಳಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದು ಪ್ರಸ್ತುತ ಹುಬ್ಬಳ್ಳಿಯ ಮಂಜುನಾಥ ನಗರದ ಕೆ ಎಲ್ ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ.
ಕನ್ನಡ ಹಾಗೂ ಆಂಗ್ಲ ಎರಡೂ ಭಾಷೆಗಳಲ್ಲಿ ಸಾಹಿತ್ಯ ರಚನೆ.
ಪತಿ ಶ್ರೀ ಎಸ್ ಕೆ ಹೆಗಡೆ ಉಚ್ಚ ನ್ಯಾಯಾಲಯದ ನ್ಯಾಯವಾದಿ.
ಮಗಳು ಸಾನಿಕಾ ಹೆಗಡೆ ಕಾಲೇಜು ವಿದ್ಯಾರ್ಥಿನಿ ಮತ್ತು ಕವಯತ್ರಿ. “Abandoned Friend” ಎಂಬ ಆಂಗ್ಲ ಕವನ ಸಂಕಲನದ ಲೇಖಕಿ.
******
ದೆಹಲಿಯ Blue Rose Publication ಪ್ರಕಟಿಸಿರುವ ಫಿಕ್ಷನ್ ವಿಭಾಗಕ್ಕೆ ಸೇರುವ ಈ ಪುಸ್ತಕ ಅಮೆಜಾನ್, ಬ್ಲೂ ರೋಸ್ ಪಬ್ಲಿಕೇಶನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಲಭ್ಯ.
ಗೂಗಲ್ ಪ್ಲೇ ಸ್ಟೋರ್ ನಲ್ಲಿ e-book ಅನ್ನು ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು.
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ