- ಕ್ಯಾಮೆರಾ ಮನ್.. - ಡಿಸಂಬರ್ 31, 2021
- ಯುದ್ಧ ಗೆದ್ದ ನಂತರ - ಜುಲೈ 20, 2021
- ಪುಸ್ತಕ ದಿನ ಮತ್ತು ಚೆಕ್ ರೋಲ್ ಸಾಹಿತ್ಯ - ಏಪ್ರಿಲ್ 23, 2021
ಮಧ್ಯಮ ವರ್ಗದ ಆ ಕುಟುಂಬಕ್ಕೆ ಅಚಾನಕ್ಕು ಎರಗಿದ ಆರೋಗ್ಯ ಸಮಸ್ಯೆಯಿಂದ ಗಂಡನ ಎರಡೂ ಕಣ್ಣು ದೃಷ್ಟಿ ಕಳೆದುಕೊಂಡಾಗ ಆಕೆಗಿನ್ನೂ ಮೂವ್ವತ್ತೈದು ವರ್ಷ.ಅರಳಿಗೆ ತೆರೆದುಕೊಳ್ಳಬೇಕಾದ ಹೊತ್ತು. ವಿಧಿ ಹೆಗಲಿಗೇರಿಸಿದ ಜವಾಬ್ದಾರಿಯನ್ನು ಹಳಿಯದೆ ಅಳುಕದೇ ಆ ಹುಡುಗಿ ವಹಿಸಿಕೊಂಡಳು.ಹದಿನೈದು ಎಕರೆ ಜಮೀನನ್ನು ಸಮರ್ಥವಾಗಿ ನಿಭಾಯಿಸ್ತಿದ್ದಾಳೆ.
ಬಯಲುಸೇಮೆಯ ಬಡಕುಟುಂಬದಿಂದ ಕಾಫಿನಾಡಿನ ವಿಶಾಲ ತೋಟಕ್ಕೆ ಮದುವೆಯಾಗಿ ಬಂದ ಹುಡುಗಿ ಎರಡೇ ವಾರದಲ್ಲಿ ಗಂಡನ ಹೊಣೆಗೇಡಿ ಸ್ವಭಾವ ತಿಳಿದು ದಿಗ್ಮೂಡಳಾದರೂ ಕಂಗೆಡಲಿಲ್ಲ.ಮೊದಲಿಗೆ ಮನೆಯಲ್ಲಿದ್ದ ವೆಹಿಕಲ್ ಗಳನ್ನು ಚಲಾಯಿಸುವುದನ್ನು ಕಲಿತಳು.ಜೀಪು, ಟ್ರ್ಯಾಕ್ಟರ್,ಸಿಂಪಡಣೆ ಯಂತ್ರಗಳ ಚಲಾವಣೆ ಹಾಗು ಸಣ್ಣಪುಟ್ಟ ರಿಪೇರಿ ಕಲಿತ ಹುಡುಗಿ ವರ್ಷ ತುಂಬುವುದರೊಳಗೆ ಕಾಫಿತೋಟದ ಒಳಹೊರಗುಗಳನ್ನು ಅರಿತಳು.ಈಗ ಇಬ್ಬರು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಿ ನೆಮ್ಮದಿಯಾಗಿದ್ದಾರೆ. ಪತಿ ಈಗಲೂ ಹಾಗೇ ಇದ್ದರಾದರೂ ಮನೆಯ ಒಳಗಿನ ಹಾಗು ಕಣದ ಕೆಲಸಗಳನ್ನು ಸಣ್ಣದಾಗಿಯಾದರೂ ನಿಭಾಯಿಸಲೇಬೇಕೆಂಬ ಹೆಂಡತಿಯ ಪ್ರೀತಿಯ ತಾಕೀತು ಅವರನ್ನೂ ಮನುಷ್ಯನನ್ನಾಗಿಸುತ್ತಿದೆ.
ಇವರ ಮನೆಯ ಅಂಗಳ ಹಿತ್ತಿಲು ಬೇಲಿ,ಸೂರು,ಮಾಡು,ಗೋಡೆ ಎಲ್ಲವೂ ಆದಾಯದ ಮತ್ತೊಂದು ಮೂಲಗಳೇ.
ಕಾಫಿ ,ಕಾಳುಮೆಣಸು ,ಅಡಿಕೆ ಮೂಲ ಕೃಷಿಯಾದರೆ ಹೈನುಗಾರಿಕೆ, ತರಕಾರಿ, ಎರೆಹುಳು ಗೊಬ್ಬರ ಮತ್ತು ಎರೆಹುಳುವಿನ ಮಾರಾಟ, ಹೈಬ್ರೀಡ್ ನಾಯಿಗಳ ಸಾಕಾಣೆ,ಬಾತುಕೋಳಿ ,ಮೊಲ,ಲವ್ ಬರ್ಡ್ಸ್ ಗಳ ಸಾಕಾಣೆ,ಬೇಲಿಯಲ್ಲಿ ಬಳ್ಳಿ ತರಕಾರಿಗಳ ಬೆಳೆ,ಜಾಗವಿರುವ ಕಡೆಯೆಲ್ಲ ಅವಕ್ಯಾಡೋ,ಸ್ಟಾರ್ಫ್ರೂಟ್ ಮರಗಳು,ವ್ಯರ್ಥ ಜಾಗದಲ್ಲಿ ಸೀಮೆಹುಲ್ಲು,ಸೂರಿನ ನೆರಳಿನಲ್ಲಿ ಆಂತೂರಿಯಂ..
ಹೀಗೆ ಗುರುತಿಸ್ತಾ ಹೋದರೆ ಆ ಮನೆಯ ಹೆಣ್ಣಿನ ಸೃಜನಶೀಲ ಕೃಷಿ ಬದುಕು ಅನಾವರಣಗೊಂಡು ಅಚ್ಚರಿ ಎನಿಸುತ್ತದೆ.
ಇಷ್ಟು ಮಾತ್ರವಲ್ಲದೇ ಮಣ್ಣು, ಮಣ್ಣಿನ ಆರೋಗ್ಯ, ಜಲಮೂಲದ ರಕ್ಷಣೆ, ಮಳೆನೀರು ಮರುಪೂರಣ ,ತಳಿ ಸಂರಕ್ಷಣೆ, ಜೀವಂತ ಬೇಲಿ,ಕಸದಿಂದ ರಸ,ಪರಂಪರೆಯ ಸಂಪ್ರದಾಯಗಳ ಪರಿಪಾಲನೆ ಎನ್ನುವಂಥ ಮನಸ್ಥಿತಿಯೇ ದಿನಚರಿಯಾಗಿರುವ ಆ ಮಹಿಳೆ ಸಿರಿವಂತ ಕುಟುಂಬದಿಂದ ಅಂತದ್ದೇ ಕುಟುಂಬಕ್ಕೆ ಸೇರಿದವರು.
ಕೃಷಿಯಲ್ಲಿ ಮಹಿಳೆ ಎಂದಾಕ್ಷಣ ಕವಿತಾ ಮಿಶ್ರರೇ ನೆನಪಾಗಬೇಕಿಲ್ಲ.
ನಮ್ಮ ಸುತ್ತಲಿನ ಶೇಕಡ ತೊಂಬತ್ತು ಕೃಷಿ ಮಹಿಳೆಯರು ಮತ್ತೊಬ್ಬ ಮಹಿಳೆಗೆ ಯಾವುದಾದರೊಂದು ಬಗೆಯಲ್ಲಿ ಮಾದರಿಯೇ.
![](https://nasuku.com/wp-content/uploads/2021/03/Rice1.jpg)
![](https://nasuku.com/wp-content/uploads/2021/03/Rice1.jpg)
ಹೇಗೆ ಹೆಚ್ಚು ತಾಂತ್ರಿಕ ಕೌಶಲ್ಯ ಬಯಸುವ ಬಹುತೇಕ ಎಲ್ಲ ರಂಗದಲ್ಲೂ ಹೆಣ್ಣು ತನ್ನ ಛಾಪು ಮೂಡಿಸಿದ್ದಾಳೋ ಹಾಗೆ ಕೃಷಿಯಲ್ಲೂ ಮಹಿಳಾ ಅಸ್ಮಿತೆ ಗಮನಾರ್ಹ.
ಕೃಷಿಯೇ ಮೂಲವಾಗಿರುವ ಒಂದು ಪುಟ್ಟ ಹಳ್ಳಿಯಲ್ಲಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಮಹಿಳೆಯರು ನಡೆಸುವ ಪೈಪೋಟಿ ನಿಜಕ್ಕೂ ಅಚ್ಚರಿ.
ಮಹಿಳೆಯರ ಇಂತಹ ಆರೋಗ್ಯಕರವಾದ ಅಸೂಯೆಯೇ ಆ ಹಳ್ಳಿಯ ಅಭಿವೃದ್ಧಿಯ ಮೊದಲ ಮೆಟ್ಟಿಲು.
ಕೃಷಿಯಮಾಡಿ ಉಣ್ಣದೇ ಹಸಿವು ಹರಿವ ಪರಿ ಇನ್ನೆಂತೋ ಎನ್ನುವ ಸಾಲಿಗೆ ಹೆಣ್ಣಿನ ಸಹಕಾರ ಸಹಭಾಗಿತ್ವವಿಲ್ಲದೇ ಕೃಷಿಯನ್ನು ನಿಭಾಯಿಸುವುದೆಂತೋ ಎನ್ನುವ ಸಾಲೂ ಸದಾ ಪ್ರಸ್ತುತವೇ.
ಇತರೇ ವೃತ್ತಿಗಳಂತೆ ಕೃಷಿಯಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ ಕೃಷಿ ಎಂದೂ ಒಂದು ವೃತ್ತಿ ಎನಿಸಿದ್ದೇ ಇಲ್ಲ. ಅವರಿಗೆ ದುಡಿಯುತ್ತಿದ್ದೇವೆ ಎನ್ನುವ ಭಾವವೂ ಇರುವುದಿಲ್ಲ.ಬಹುತೇಕ ಮಹಿಳೆಯರಿಗೆ ಊಟ ಉಸಿರಾಟದಷ್ಟೇ ಅದೂ ಸಹಜ ದಿನಚರಿ.
ಪ್ರತಿ ಮನೆಯಲ್ಲೂ ಕೃಷಿಯಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆ ಭಿನ್ನ.
ಮೂಲ ಕಸುಬಲ್ಲೇ ತೊಡಗಿಸಿಕೊಂಡವರು ಕೆಲವರಾದರೆ ಕುಟುಂಬದ ಆದಾಯಕ್ಕೆ ಪೂರಕವಾಗುವಂತ ಉಪಕಸುಬಗಳನ್ನು ಕೆಲವರು ತಮ್ಮದಾಗಿಸಿಕೊಳ್ಳುತ್ತಾರೆ.ಶೇಕಡಾ ಎಂಬತ್ತು ಕೃಷಿ ಮಹಿಳೆಯರ ಸ್ವಾಭಿಮಾನದ ಬದುಕಿಗೆ ಹೈನುಗಾರಿಕೆ ಕಾರಣವಾಗಿದೆ.ದಿನಚರಿಯ ಜೊತೆಗೆ ಒಂದೆರಡು ಹಸುಗಳನ್ನು ಜಮೀನಿನ ಬದುವಿಗೆ ಕಟ್ಟಿಕೊಂಡರೆ ಒಂದಿಷ್ಟು ನಿಶ್ಚಿತ ಆದಾಯ ಅವರದು.
ಮಹಿಳೆ ತನ್ನ ವೈಯಕ್ತಿಕ ಆದಾಯಕ್ಕಾಗಿ ಬದಲಿ ಮಾರ್ಗವನ್ನು ಅನ್ವೇಷಿಸಿದಾಗ ಬಹುತೇಕ ಕೃಷಿಯ ಉಪಕಸುಬುಗಳು ಹುಟ್ಟಿಕೊಂಡಿದ್ದಿರಬಹುದು. ಹೈನುಗಾರಿಕೆಯಲ್ಲದೆ ಕುರಿ ಕೋಳಿ ಹಂದಿ ಸಾಕಾಣೆಗಳು ಸ್ವಾಭಿಮಾನಿ ಮಹಿಳೆಯರ ಹಿತ ಕಾಪಾಡಿವೆ.ಸಾಕಷ್ಟು ಗುಡಿಕೈಗಾರಿಕೆಗಳೂ ಕೂಡ ಮಹಿಳೆಯರಿಂದಲೇ ನಿಭಾಯಿಸಲ್ಪಡುತ್ತಿದ್ದು ಕೃಷಿಗೆ ಪೂರಕವಾಗಿವೆ.ಇತ್ತೀಚಿನ ದಿನಗಳಲ್ಲಿ ಪುಷ್ಪೋದ್ಯಮ ಹೆಣ್ಣುಮಕ್ಕಳನ್ನು ಹೆಚ್ಚು ಆಕರ್ಷಿಸುತ್ತಿದೆ.
ಒಂದು ಆಧ್ಯಯನದ ಪ್ರಕಾರ ಒಂದು ನಿಗದಿತ ಜಮೀನಿನಲ್ಲಿ ಪುರುಷ ಇಪ್ಪತ್ತು ಗಂಟೆ,ಯಂತ್ರಗಳು ಮುವ್ವತ್ತು ಗಂಟೆ ದುಡಿದರೆ ಮಹಿಳೆಯರು ಐವತ್ತು ಗಂಟೆ ದುಡಿಯುತ್ತಾರಂತೆ.
![](https://nasuku.com/wp-content/uploads/2021/03/SOISEP32AD6BXCBGUGC7D4KMXY.jpg)
![](https://nasuku.com/wp-content/uploads/2021/03/SOISEP32AD6BXCBGUGC7D4KMXY.jpg)
ಪುರಾತನ ಕಾಲದಿಂದಲೂ ಕೃಷಿಯಲ್ಲಿ ಲಿಂಗ ಸಮಾನತೆಯಿದೆ.
ಸಮಾನತೆ ಮಾತ್ರವಲ್ಲ.ಹೆಣ್ಣಿಗೆ ಇನ್ನೂ ಹೆಚ್ಚೇ ಕೆಲಸಗಳನ್ನು ಕೊಡುವುದರಲ್ಲೂ ನಮ್ಮ ಗ್ರಾಮೀಣ ವ್ಯವಸ್ಥೆ ಹಿಂದೇಟು ಹಾಕಿಲ್ಲ.
ಕೆಲಸಕ್ಕೆ ಮಾತ್ರ ಹಿರಿತನವನ್ನು /ಹೆಚ್ಚುಗಾರಿಕೆಯನ್ನು ಹೆಣ್ಣಿಗೆ ಹೊರಿಸುವ ಕೃಷಿ ವ್ಯವಸ್ಥೆ ಅವಳಿಗೆ ಕೊಡಬೇಕಾದ ಕೂಲಿಯಲ್ಲಾಗಲೀ, ಬಂದ ಆದಾಯದ ಪಾಲಿನಲ್ಲಾಗಲಿ ಎಂದೂ ಸಮವಾಗಿ ಬಯಸುವುದನ್ನು ,ಕೊಡುವುದನ್ನು ಒಪ್ಪುವುದಿಲ್ಲ.
ಕೃಷಿ ಕುಟುಂಬದ ಮಹಿಳೆಯೊಬ್ಬಳು ತನಗೆ ಬೇಕಾದ ,ಆದರೆ ಕುಟುಂಬದ ದೃಷ್ಟಿಯಲ್ಲಿ ಅಷ್ಟೇನೂ ಘನವಲ್ಲದ ಏನಾದರೊಂದನ್ನು ಯಾವ ತಕರಾರಿಲ್ಲದೆ ಖರೀದಿಸಬಹುದೇ?
- ತನ್ನ ಮೂಲಭೂತ ಅವಶ್ಯಕತೆಗಳಾದ ಸ್ಯಾನಿಟರಿ ಪ್ಯಾಡ್ಸ್,ತುಸು ಉತ್ತಮ ದರ್ಜೆಯ ಒಳ ಉಡುಪುಗಳು,ಎಂದೋ ಜಾಹಿರಾತಿನಲ್ಲಿ ನೋಡಿದ್ದ ಸೀರೆ,ತನ್ನಿಷ್ಟದ ಪುಸ್ತಕ, ತನ್ನ ಸೃಜನಶೀಲ ಕಸುಬಿಗೆ ಬೇಕಾದ ಕಚ್ಚಾ ವಸ್ತುಗಳು ಇತ್ಯಾದಿಗಳನ್ನು ಕೊಳ್ಳಲು ಪತಿಯಾಗಲಿ,ಅತ್ತೆಮಾವಂದಿರಾಗಲಿ ಸಲೀಸಾಗಿ ಬಿಡುತ್ತಾರೆಯೇ?
- ತನ್ನ ಹವ್ಯಾಸಗಳಿಗೆ ಬೇಕಾಗುವ ಹಣದ ವ್ಯವಸ್ಥೆಯನ್ನು ಕುಟುಂಬದವರು ಸಿಡುಕಿಲ್ಲದೆ ಮಾಡುತ್ತಾರೆಯೇ?
- ದಿನನಿತ್ಯವೂ ಅವಳ ಕೆಲಸಗಳಿಗೆ ಸಂಬಳ ಪಡೆದಿದ್ದರೆ ಅವಳಿಗೆ ಅವಳ ಸ್ವಂತದ ಹಣ ಎನ್ನುವುದು ಇರುತ್ತಿತ್ತಲ್ಲವೇ?
ಇದು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಮಾತು.
![](https://nasuku.com/wp-content/uploads/2021/03/6-25.jpg)
![](https://nasuku.com/wp-content/uploads/2021/03/6-25.jpg)
ಶೇಕಡಾ ಎಂಬತ್ತೈದು ಕೃಷಿ ಮಹಿಳೆಯರಿಗೆ ಮೇಲಿನ ಯಾವ ಅಗತ್ಯಗಳಿಗೂ ಸುಲಭದಲ್ಲಿ ಹಣ ಸಿಗುವುದಿಲ್ಲ. ಅವರ ವಾರದ ದುಡಿಮೆ ಬಹುತೇಕ ನಗರದ ತಿಂಗಳ ದುಡಿಮೆಗೆ ಸಮಾನಾಗಿದ್ದರೂ ಆರ್ಥಿಕ ಸ್ವಾತಂತ್ರ್ಯ ಅವರ ಪಾಲಿಗೆ ಕನ್ನಡಿಯ ಗಂಟು.
ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಹೆಣ್ಣುಮಗಳನ್ನು “ಏನು ಮಾಡ್ತೀರಾ” ಎಂದರೆ ಬಹಳ ಮುಜುಗರದಿಂದ ಏನಿಲ್ಲಾ ಎನ್ನುತ್ತಾರೆ.
ಬಹುಶಃ ನಮ್ಮ ಪಿತೃ ಸಂಸ್ಕ್ರತಿ ಭೋದಿಸಿದ ಕೆಲವು ವಿಷಯಗಳನ್ನು ನಾವೆಂದೂ ಬದಲಿಸಿಕೊಳ್ಳುವುದೇ ಇಲ್ಲ.
‘ನಾನು ನಮ್ಮದೇ ಜಮೀನಿನಲ್ಲಿ ಕೃಷಿ ಕಸುಬು ಮಾಡುತ್ತೇನೆ’
ಎಂದು ಯಾವ ಹೆಣ್ಣು ಹೆಮ್ಮೆಯಿಂದ ಹೇಳವುದಿಲ್ಲ.
ಇದರಲ್ಲಿ ಒಂದೆರಡು ಅಪವಾದಗಳೂ ಇರಬಹುದು.ಆದರೆ ಅದು ಗಣನೆಗೆ ಬಾರದಷ್ಟೂ ಸಣ್ಣ ಸಂಖ್ಯೆಯಲ್ಲಿದೆ.
ಕೃಷಿ ಕಸುಬನ್ನು ಮಾಡುವ ಸಣ್ಣ ಮತ್ತು ಮಧ್ಯಮ ವರ್ಗದ ಮಹಿಳೆಗೆ ಆತ್ಮವಿಶ್ವಾಸ ಕಡಿಮೆ ಇರುವುದಕ್ಕೆ
ಕಾರಣ ಅದರಿಂದ ಅವಳಿಗೆ ತಿಂಗಳ ಸಂಬಳ ದೊರೆಯುವುದಿಲ್ಲ.
![](https://nasuku.com/wp-content/uploads/2021/03/862303-77086-jgggjdurau-1513854753-1024x538.jpg)
![](https://nasuku.com/wp-content/uploads/2021/03/862303-77086-jgggjdurau-1513854753-1024x538.jpg)
ಮಧ್ಯಮ ವರ್ಗದ ಕೃಷಿಕುಟುಂಬಗಳಂತೂ ಮಹಿಳೆಯರಿಗೆ ವಿರಾಮದ ಅವಶ್ಯಕತೆಗಳನ್ನು ಎಂದೂ ಪರಿಗಣಿಸುವುದಿಲ್ಲ.
ಮಹಿಳೆಯನ್ನು ಕೆಲಸಕ್ಕೆ ಮಾತ್ರ ಪರಿಗಣಿಸಿ ಆದಾಯದ ಪಾಲುದಾರಿಕೆಯಲ್ಲಿ ಕೈ ಬಿಡುವುದು ಇಂದಿಗೂ ಇದ್ದಿದ್ದೆ.
ಹಕ್ಕಿನ ಹಣ ಎನ್ನುವುದು ಆಕೆಯ ಪಾಲಿಗೆ ಇಲ್ಲವೇ ಇಲ್ಲ. ಸ್ವಾಭಿಮಾನ ತ್ಯಜಿಸಿ ಇಂದಿಗೂ ಅವಳು ಹಣಕ್ಕಾಗಿ ಕೈಚಾಚುವುದು ನೋವಿನ ಸಂಗತಿ.
ಹಾಗಾಗಿಯೇ ಬಹುತೇಕರು ಕೃಷಿಕರಿಗೆ ಹೆಣ್ಣುಕೊಡುವುದಕ್ಕೆ ಒಪ್ಪುವುದಿಲ್ಲ.ಮಹಿಳೆಯ ಕೆಲಸಕ್ಕೆ ತಕ್ಕ ಮಾನ್ಯತೆ ಇಲ್ಲಿ ದೊರಕುವುದು ಕಷ್ಟ.
ಬದುಕಿಡೀ ಕುಟುಂಬದ ಏಳಿಗೆಗೆ ದುಡಿದ ಮಹಿಳೆಯರ ಹಕ್ಕಾದ ಪ್ರೀತಿ ಗೌರವ ಅನುಕೂಲತೆಗಳು ಕೇವಲ ಬಾಯುಪಚಾರವಾಗಿಯೇ ಉಳಿದಿವೆ.
ಕುಟುಂಬದವರ ,ಪತಿಯ ಹೊಲಸು ಒರಟು ಮಾತುಗಳಿಗೆ ಕಿವಿಯಾಗಬೇಕಾದ ಅನಿವಾರ್ಯತೆ ಕೂಡ ಇಲ್ಲಿರುತ್ತದೆ.ಇದಕ್ಕೆ ಮುಖ್ಯವಾಗಿ ಬಲಿಯಾಗುತ್ತಿರುವುದು ಸಣ್ಣ ಮತ್ತು ಮಧ್ಯಮ ವರ್ಗದ ಕುಟುಂಬಗಳು. ಇಲ್ಲಿ ಆ ಹೆಣ್ಣಿಗೆ ತನ್ನ ಕೃಷಿ ಕೆಲಸದ ಹೊರತು ಬೇರೆ ಯಾವ ವಿದ್ಯೆಯೂ ಗೊತ್ತಿರುವುದಿಲ್ಲ.ಕಲಿಯುವ ಚಾಕಚಾಕ್ಯತೆಯೂ ಕಡಿಮೆಯಿರುತ್ತದೆ.
ಬೇರೇನೂ ದಾರಿ ತೋರದೆ ಹಗಲು ರಾತ್ರಿ ಗಾಣದೆತ್ತಿನಂತೆ ದುಡಿಯುತ್ತಾ, ದುಡಿದದ್ದಕ್ಕೆ ಕನಿಷ್ಠ ಮೂಲಭೂತ ಗೌರವವೂ ಪ್ರೀತಿಯೂ ಸಿಗದೆ ಮಾನಸಿಕವಾಗಿಯೂ ದೈಹಿಕವಾಗಿಯೂ ಕುಗ್ಗಿ ಹೋಗುತ್ತಾಳೆ.
ಕೃಷಿ ಮಹಿಳೆಯರಿಗೆ ವೈಯಕ್ತಿಕ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದ ತರಬೇತಿ ಕಾರ್ಯಕ್ರಮಗಳ ಹೊರತಾಗಿಯೂ ಕೃಷಿ ಕುಟುಂಬಗಳ ಮನಸ್ಥಿತಿ ಬದಲಾಗದೇ ಪರಿಸ್ಥಿತಿ ಸುಧಾರಿಸುವುದಿಲ್ಲ.
ಇದೆಲ್ಲದರ ಹೊರತಾಗಿಯೂ
ಕೊರೊನಾ ಕಾಲದಲ್ಲಿ ಊರಿಗೆ ಬಂದ ಹೆಣ್ಣು ಮಕ್ಕಳಲ್ಲಿ ಕೆಲವರು ವರ್ಕ್ ಫ್ರಮ್ ಹೋಮ್ ನಿಭಾಯಿಸುತ್ತಲೇ ರಜೆಯಲ್ಲಿ ಕಳೆ ಕೊಚ್ಚುವ ಯಂತ್ರವನ್ನು ಹೆಗಲಿಗೆ ಏರಿಸಿಕೊಂಡು ಜಮೀನಿಗೆ ಸಾಗುತ್ತಿದ್ದ ದೃಶ್ಯ ಆಪ್ಯಾಯಮಾನವೆನಿಸುತ್ತಿತ್ತು.
ಇಂತಹ ಬದಲಾವಣೆಗಳಿಂದಾದರೂ ನಮ್ಮ ಕೃಷಿ ಮಹಿಳೆಯರನ್ನು ಅವರದ್ದೇ ಕುಟುಂಬ ಗೌರವದಿಂದ ನೋಡಬಹುದೆ?
ಅವಳ ಹಕ್ಕಿನ ಅಗತ್ಯಗಳಿಗೆ ಇನ್ನಾದರೂ ಗೌರವ ಕೊಡಬಹುದೆ?
![](https://nasuku.com/wp-content/uploads/2021/03/imag2.jpg)
![](https://nasuku.com/wp-content/uploads/2021/03/imag2.jpg)
ಕೃಷಿಮಹಿಳೆಯಾಗಿಯೇ ಬದುಕು ರೂಪಿಸಿಕೊಂಡು ನಂತರದ ದಿನಗಳಲ್ಲಿ ಅಕ್ಷರಗಳೆಡೆಗೆ ಆಸಕ್ತಿ ಬೆಳೆಸಿಕೊಂಡ ನನ್ನ ಮಿತಿಯ ಲೋಕದರ್ಶನದ ನಂತರವೂ ಕಂಡಿದ್ದೆಂದರೆ ಕೃಷಿಮಹಿಳೆಗೆ ಸಿಕ್ಕಬೇಕಿರುವ ಗೌರವ ಹೊರಗಿನಿಂದ ಸಿಗುವಂಥದ್ದಲ್ಲ.
ಅವಳ ಕೆಲಸಗಳಿಗೆ ಸ್ವಂತದವರ ಪ್ರೀತಿ ಪುರಸ್ಕಾರ ಬೇಕಿರುತ್ತದೆ.ಮಾತ್ರವಲ್ಲ ಅವಳ ಹಕ್ಕನ್ನು ಗೌರವಿಸುವುದನ್ನು ಕುಟುಂಬದ ಸದಸ್ಯರು ರೂಢಿಸಿಕೊಳ್ಳಬೇಕಿದೆ.
ಬದಲಾವಣೆಯೊಂದೇ ಶಾಶ್ವತ ಎನ್ನುವ ಮಾತಿನಲ್ಲಿ ನಂಬಿಕೆಯಿಟ್ಟು ಕಾದು ನೋಡುವ ಕಾಲ ಸದ್ಯಕ್ಕಿದೆ.
ಸೀದು ಹೋಗುವವರೆಗೂ ಕಾಯದಂತೆ ನೋಡಿಕೊಳ್ಳಬಹುದೆಂದು ನಿರೀಕ್ಷೆಯಲ್ಲಿ ಮಹಿಳಾದಿನದ ಶುಭಾಶಯಗಳು .
ಹೆಚ್ಚಿನ ಬರಹಗಳಿಗಾಗಿ
ಬೇಂದ್ರೆಯವರ ನಾಕುತಂತಿಯ ಮರು ಓದು
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..