ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೆ.ಟಿ.ಗಟ್ಟಿಯವರ ಕತೆಗಳು

ಡಾ. ಬಿ.ಜನಾರ್ದನ ಭಟ್
ಇತ್ತೀಚಿನ ಬರಹಗಳು: ಡಾ. ಬಿ.ಜನಾರ್ದನ ಭಟ್ (ಎಲ್ಲವನ್ನು ಓದಿ)

ಕೆ.ಟಿ.ಗಟ್ಟಿಯವರು ಕಾದಂಬರಿಯ ಹಾಗೆ ಸಣ್ಣ ಕತೆಗಳನ್ನೂ ಕೂಡ ಗಂಭೀರವಾದ ಅಭಿವ್ಯಕ್ತಿ ಮಾಧ್ಯಮವೆಂದು ಪರಿಗಣಿಸಿ ನಿರಂತರವಾಗಿ ಕತೆಗಳನ್ನು ಬರೆದುಕೊಂಡು ಬಂದಿದ್ದಾರೆ. ಅವರ ಕತೆಗಳು ಐದು ಸಂಕಲನಗಳಲ್ಲಿ ಅಡಕವಾಗಿವೆ. ಅವುಗಳೆಂದರೆ, ‘ಮನುಷ್ಯನ ವಾಸನೆ’ (೧೯೮೬, ಗೀತಾ ಬುಕ್‌ಹೌಸ್, ಮೈಸೂರು), ‘ನೀಲಿ ಗುಲಾಬಿ’ (೧೯೯೫, ನಿಸರ್ಗ ಪ್ರಕಾಶನ, ಉಜಿರೆ) ಮತ್ತು ‘ಭೂಗತ’ (೨೦೦೧, ವಸಂತ ಪ್ರಕಾಶನ, ಬೆಂಗಳೂರು), ‘ವಿಶ್ವ ಸುಂದರಿ’ (೨೦೦೬, ಸುಮುಖ ಪ್ರಕಾಶನ, ಬೆಂಗಳೂರು) ಮತ್ತು ಪ್ರೀತಿಯೆಂಬ ಮಾಯೆ ಮತ್ತು ಇತರ ಕತೆಗಳು’ (೨೦೧೧).

ಕೆ.ಟಿ.ಗಟ್ಟಿಯವರ ಕಥಾ ಸಂಕಲನದ ವಸ್ತುಗಳಲ್ಲಿ ಒಂದು ನಿಯಮಿತವಾದ ಬೆಳವಣಿಗೆಯನ್ನು
ಕಾಣಬಹುದು. ಅದೇ ವೇಳೆಗೆ ಅವರು ತಮ್ಮ ಕತೆಗಳ ಮೂಲಕ ‘ಬದುಕಿನ ಅರ್ಥವೇನು’ ಅನ್ನುವ ಅಸ್ತಿತ್ವವಾದೀ ಸಮಸ್ಯೆಯ ವಿವಿಧ ಮಗ್ಗುಲುಗಳನ್ನು ಪರಿಶೀಲಿಸುತ್ತ ಬಂದಿರುವುದನ್ನು ಕಾಣಬಹುದು. ಗಟ್ಟಿಯವರು ಮೊದಲ ಮೂರು ಸಂಕಲನಗಳಲ್ಲಿ ವ್ಯಕ್ತಿ ಮತ್ತು ಸಮಾಜ ಈ ಎರಡೂ ನೆಲೆಗಳಲ್ಲಿ ಬದುಕಿನ ಬಗ್ಗೆ ಚಿಂತನೆ ನಡೆಸಿ, ಸಮಾಜದ ಚಿಂತನ ರಾಹಿತ್ಯ ಮತ್ತು ಬದುಕಿನ ಅರ್ಥರಾಹಿತ್ಯಗಳನ್ನು ಅರಿಯುವ ಆನಂದವನ್ನು ನಾಲ್ಕನೆಯ ಸಂಕಲನದಲ್ಲಿ ತೋರಿಸಿಕೊಟ್ಟಿದ್ದಾರೆ. ಕೆಲವು ಕತೆಗಳನ್ನು ಗಮನಿಸುವ ಮೂಲಕ ಕೆ.ಟಿ.ಗಟ್ಟಿಯವರ ಕತೆಗಳ ವೈಶಿಷ್ಟ್ಯವನ್ನೂ, ಅವರು ಯಾಕೆ ಕನ್ನಡದ ಒಬ್ಬ ಮುಖ್ಯ ಕತೆಗಾರರೆನ್ನುವುದನ್ನೂ ತಿಳಿದುಕೊಳ್ಳಬಹುದು.

ಮನುಷ್ಯನ ವಾಸನೆ : ಯೌವನದ ಭಾವ ತೀವ್ರತೆ
ಕೆ. ಟಿ. ಗಟ್ಟಿಯವರ ಮೊದಲನೆಯ ಸಂಕಲನ ‘ಮನುಷ್ಯನ ವಾಸನೆ’ ೧೯೮೬ರಲ್ಲಿ ಪ್ರಕಟವಾದರೂ
ಅದರಲ್ಲಿರುವ ಕತೆಗಳು ಮೊದಲೇ ಪ್ರಕಟವಾಗಿದ್ದವು. ಅಂದರೆ ಸುಮಾರಾಗಿ ನವ್ಯ ಸಾಹಿತ್ಯದ ಸಂದರ್ಭದಲ್ಲಿ ಪ್ರಕಟವಾದ ಕತೆಗಳು. ಕನ್ನಡದಲ್ಲಿ ನವ್ಯ ಘಟ್ಟದಲ್ಲಿ ಬಂದ ಕತೆಗಳು ನವ್ಯ ಕಾವ್ಯದಂತೆ ಅರ್ಥ ಮಾಡಿಕೊಳ್ಳಲು ಕಠಿಣವಾಗಿರದೆ, ಪಾತ್ರಗಳ ಮನೋಲೋಕದ ಅನುಭವ ಸೂಕ್ಷ್ಮಗಳನ್ನು ಬಗೆಯಲು, ಸಮಾಜದ ಸಂವೇದನಾರಾಹಿತ್ಯದೆದುರು ಸೂಕ್ಷ್ಮ ಮನಸ್ಸಿನ ಪಾತ್ರಗಳ ತೊಳಲಾಟವನ್ನು ಚಿತ್ರಿಸಿದುದನ್ನು ಸುಮಾರಾಗಿ ಗಮನಿಸಬಹುದು. ಆದುದರಿಂದ ನವ್ಯ ಸಂವೇದನೆಯು ಕನ್ನಡ ಕಥಾಸಾಹಿತ್ಯಕ್ಕೆ ಒಳ್ಳೆಯದನ್ನೇ ಮಾಡಿತು. ಕೆ.ಟಿ. ಗಟ್ಟಿಯವರು ಕೂಡ ನವ್ಯದ ಉತ್ತಮಾಂಶವನ್ನು ಸ್ವೀಕರಿಸಿ, ತಮ್ಮ ವಿಶಿಷ್ಟವಾದ ಸಾಮಾಜಿಕ ಪ್ರಜ್ಞೆಯನ್ನು ಅಸ್ತಿತ್ವವಾದೀ ಪ್ರಶ್ನೆಯ ಜತೆ ಮೇಳೈಸಿ ಕತೆಗಳನ್ನು ಬರೆಯಲಾರಂಭಿಸಿದರು.

ಅವರ ಕತೆಗಳಲ್ಲಿ ಉದ್ದಕ್ಕೂ ಕಾಣಿಸಿಕೊಳ್ಳುವ ಸಾಮಾಜಿಕ ಪ್ರಜ್ಞೆ ಯಾವುದೆಂದರೆ ಹಣದಿಂದ ಈ ದೇಶದಲ್ಲಿ ಯಾವುದನ್ನೂ ಪಡೆಯಲು ಸಾಧ್ಯವಿದೆ ಅನ್ನುವುದು. ಅವರು ತಮ್ಮ ಕತೆಗಳಲ್ಲಿ ಎತ್ತುವ ಅಸ್ತಿತ್ವವಾದೀ ಪ್ರಶ್ನೆ ‘ಬದುಕಿನ ಅರ್ಥವೇನು ?’ ಎನ್ನುವುದು. (ಸುಖ ಅಂದರೇನು, ಬದುಕಿಗೆ ಅರ್ಥವಿದೆಯೆ? – ಇಂತಹ ಪ್ರಶ್ನೆಗಳು ಈ ಮೂಲಭೂತ ಪ್ರಶ್ನೆಗೆ ಸಂಬಂಧಿಸಿ ಹುಟ್ಟುತ್ತವೆ).ಹಣವೇ ನಮ್ಮ ಸಾಮಾಜಿಕ ತಾರತಮ್ಯಗಳಿಗೆ ಕಾರಣ ಅನ್ನುವುದನ್ನು ಕೆ. ಟಿ. ಗಟ್ಟಿಯವರ ಕತೆಗಳು ಮೊದಲಿನಿಂದ ಇದುವರೆಗೂ ಸ್ಪಷ್ಟಪಡಿಸುತ್ತಾ ಬಂದಿವೆ.

ಉದಾಹರಣೆಗೆ ಅವರ ಎರಡನೆಯ ಸಂಕಲನ ‘ನೀಲಿ ಗುಲಾಬಿ’ಯಿಂದ ಒಂದು ವಾಕ್ಯವನ್ನು ಎತ್ತಿ ತೋರಿಸಬಹುದು : “ಎಲ್ಲಾ ವ್ಯತ್ಯಾಸಗಳನ್ನೂ ಸೃಷ್ಟಿಸಿದ್ದು ಹಣ ಅನಿಸಿತು. ಹಣದ ಮೇಲೆ ಸಿಟ್ಟು ಬಂತು. ಹಣದಿಂದಾದುದನ್ನೆಲ್ಲ ಕಳಚಿ ಕೊಡವಿ ಕಾಡಿಗೆ ಓಡಿ ಹೋಗಬೇಕೆನಿಸಿತು. ಆದರೆ ಸಾಧ್ಯವೆ ? ಉಹುಂ ಇಲ್ಲ.” (ಕತೆ – ‘ಕತೆ ಒಂದು ಹೂವು’). ಅದೇ ಸಂಕಲನದ ‘ರಸಗುಲ್ಲಾ’ ಕತೆಯಲ್ಲಿ ನಿರೂಪಕ ಒಂದು ಪಾರ್ಸೆಲನ್ನು ಕೊಡಲು ಶ್ರೀಮಂತ ಯುವತಿ ಮನೋಹರಿಯ ಮನೆಗೆ ಹೋಗುತ್ತಾನೆ. ಅವಳ ಸೌಂದರ್ಯವನ್ನು ಕಂಡು ಅವನು ಯೋಚಿಸುವುದು ಹೀಗೆ : “ಈ ರೂಪ ಬರಲು, ಈ ಲಾವಣ್ಯ ಬರಲು ಅವಳ ಅಪ್ಪ ಸಂಪಾದಿಸಿದ ಸಂಪತ್ತು ಎಷ್ಟಿರಬಹುದು ಎಂಬ ಯೋಚನೆ ಬಂದು ……..ನಾನಿಲ್ಲಿಗೆ ಬರಬಾರದಿತ್ತು, ನಾನಿದನ್ನು ಕಾಣಬಾರದಿತ್ತು, ಇಂಥ ಲೋಕವೊಂದಿದೆ ಎಂದು ನನಗೆ ತಿಳಿಯಬಾರದಿತ್ತು ಎಂದೆಲ್ಲ ಚಿಂತಿಸಿದೆ.”

ಕೆ. ಟಿ. ಗಟ್ಟಿಯವರ ಕತೆಗಳ ಸಂಘರ್ಷವಿರುವುದು ಹಣದ ಪಾರಮ್ಯವನ್ನು ಒಪ್ಪಲು ಕಷ್ಟವಾಗುವ
ಸಂವೇದನಾಶೀಲತೆಯಲ್ಲಿ. ಒಂದು ಕಡೆ ಬರುತ್ತದೆ : “ಆದರೆ ಮನಸ್ಸೆಂಬುದು ಇದ್ಯಾವುದಕ್ಕೂ (ನಾವು ಮಾಡುವ ವಿಂಗಡಣೆಗೆ) ಸಿಗದುದು. ಅದರ ಗುಣ ಧರ್ಮಗಳು, ಬಣ್ಣ, ಆಕರ್ಷಣ ಶಕ್ತಿ ನಿಗೂಢ” (‘ನೀಲಿ ಗುಲಾಬಿ’ – ಪುಟ ೯೯). ಕೆ.ಟಿ. ಗಟ್ಟಿಯವರ ಕತೆಗಳಲ್ಲಿ ಸನ್ನಿವೇಶಗಳನ್ನು ಗಮನಿಸುವ ಸಂವೇದನಾಶೀಲ ಮನಸ್ಸೊಂದು ಕೆಲಸ ಮಾಡುತ್ತಾ ಇರುತ್ತದೆ. ಅದು ಒಂದು ಪ್ರತ್ಯೇಕ ಪಾತ್ರವಾಗಿರಬಹುದು, ಅಥವಾ ನಿರೂಪಕನ ಯೋಚನೆಯಲ್ಲಿಯೇ ಕಾಣಿಸಿಕೊಳ್ಳುವ ಚಿಂತನಶೀಲ ವಿಶ್ಲೇಷಣೆಯ ರೂಪದಲ್ಲಿರಬಹುದು.
ಗಟ್ಟಿಯವರ ಕತೆಗಳಲ್ಲಿ ಬೆಳವಣಿಗೆ ಅನ್ನುವುದು ವ್ಯಕ್ತಿಗಳ ಮುಖೇನ ಸಮಾಜವನ್ನು ಅರಿತುಕೊಂಡು
ಓದುಗರ ಅನುಭವಕ್ಕೆ ಅದನ್ನು ತಂದುಕೊಡುವ ದರ್ಶನದಲ್ಲಿದೆ. ಹಾಗೆಯೇ ಅವರ ಕತೆಗಳ ನಿರೂಪಣೆಯ ಭಾಷೆ, ಆರಿಸಿಕೊಳ್ಳುವ ವಸ್ತುಗಳು, ಪ್ರತಿನಿಧಿ ಪಾತ್ರಗಳ ವಯಸ್ಸು ಇವುಗಳು ಕಾಲ ಕಾಲಕ್ಕೆ ಬದಲಾಗಿವೆ.
ಉದಾಹರಣೆಗೆ, ‘ಮನುಷ್ಯನ ವಾಸನೆ’ ಸಂಕಲನದ ಪ್ರತಿನಿಧಿ ಪಾತ್ರಗಳು ಯುವಕ ಯುವತಿಯರಾದರೆ, ‘ನೀಲಿ ಗುಲಾಬಿ’ಯ ಪಾತ್ರಗಳು ನಡು ವಯಸ್ಸಿನ ವಿವಾಹಿತರು; ‘ಭೂಗತ’ದ ಪಾತ್ರಗಳು ಇಳಿವಯಸ್ಸಿನವರು. ಗಟ್ಟಿಯವರ ಇತ್ತೀಚಿನ ಕಥಾಸಂಕಲನ ‘ವಿಶ್ವ ಸುಂದರಿ’ ಒಟ್ಟು ಸಮಾಜದ ಬದುಕನ್ನು ಪರಿಶೀಲಿಸಲು ಪಾತ್ರಗಳನ್ನು ಬಳಸಿಕೊಳ್ಳುವುದರಿಂದ ಅದರಲ್ಲಿ ಈ ಬಗೆಯ ಬೆಳವಣಿಗೆಯಿಲ್ಲ; ದರ್ಶನದ ಕೋನ ಬದಲಾವಣೆ ಇದೆ.
ಮನುಷ್ಯನ ವಾಸನೆ’ ಸಂಕಲನದಲ್ಲಿ ೨೦ ಕತೆಗಳಿವೆ. ಅವು – ‘ಮೌಲ್ಯಗಳು’, ‘ಸವೆತ’, ‘ಬೆತ್ತ’, ‘ಕೈ’,
‘ಚೊಲಿಂಪೆ’, ‘ಕಾರಣ’, ‘ಆದಾನ’, ‘ಅಜೇಯ’, ‘ಹೆಸರಿಲ್ಲದವರು’, ‘ಒಂದಾಣೆ’, ‘ಸ್ವಸ್ಥ’, ‘ತರಗೆಲೆ ಮತ್ತು ನೀರು’, ‘ಸೆಳೆತ’, ‘ತೀರ್ಪು’, ‘ದೇವರು ಇದ್ದಾನೆ’, ‘ಒಂದೇ ಒಂದು ಪ್ರಶ್ನೆ’, ‘ಒಬ್ಬಳು ಪುಟ್ಟ ಹುಡುಗಿಯ ಸಾವು’, ‘ಭೂತದ ಮನೆ’, ‘ಜೋಯಿ ಕುಟ್ಟಿಯ ಹೆಂಡತಿ’, ಮತ್ತು ‘ಮನುಷ್ಯನ ವಾಸನೆ’.
ಈ ಕತೆಗಳ ಮುಖ್ಯ ಪಾತ್ರಗಳೆಂದರೆ ಬಿ.ಎಸ್ಸಿ. ಮುಗಿಸಿ ಉದ್ಯೋಗದ ಹುಡುಕಾಟದಲ್ಲಿರುವ ಯುವಕ
(ಮೌಲ್ಯಗಳು), ಬಿ.ಎ. ಮುಗಿಸಿ ಮದುವೆಯಾಗಿ ಆಫೀಸೊಂದರಲ್ಲಿ ಕೆಲಸಕ್ಕೆ ಸೇರಿರುವ ಯುವತಿ (ಸವೆತ),
ಅಪ್ಪನ ಬಗೆಗಿನ ಮಾನಸಿಕ ಭಯದಿಂದಾಗಿ ಯಾವ ಹೆಣ್ಣಿನ ಜತೆಗೂ ಸಹಜ ಸಂಬಂಧ ಬೆಳೆಸಿಕೊಳ್ಳಲಾಗದ ಉದ್ಯೋಗಸ್ಥ ಯುವಕ (ಬೆತ್ತ), ಗೆಳೆಯನನ್ನು ಭೇಟಿಯಾಗಲು ಬಂದ ಯುವಕ (ಕೈ), ತನ್ನ ತಂದೆಯ ಜೊತೆಗೆ ಹಳ್ಳಿಯ ಹಳೆಯ ಮನೆಯೊಂದರಲ್ಲಿ ನೆಲೆಸಲು ಬರುವ ವಿವಾಹಿತ ಯುವಕ (ಚೊಲಿಂಪೆ), ಎಂ.ಎಸ್ಸಿ. ಮುಗಿಸಿ ಕೆಲಸಕ್ಕೆ ಸೇರಲು ಹೋಗುವ ಯುವಕ (ಕಾರಣ), ಸಂಸಾರದ ಜವಾಬ್ದಾರಿ ಹೊತ್ತುಕೊಳ್ಳಬೇಕಾಗಿ ಬಂದಾಗ ಪ್ರಿಯತಮೆ ದೂರಾಗಿಬಿಟ್ಟಿರುವ ಯುವಕ (ಆದಾನ), ಇಪ್ಪತ್ತೆರಡರ ವಿವಾಹಿತೆ ಯುವತಿ (ಹೆಸರಿಲ್ಲದವರು), ಇಪ್ಪತ್ತೇಳರ ಹರೆಯದ ಅಧ್ಯಾಪಕ (ಒಂದಾಣೆ) ಎಂ.ಎ.ಯಲ್ಲಿ ರ್ಯಾಂಕ್ ಪಡೆದು ಪಿಎಚ್.ಡಿ. ಮಾಡುತ್ತಿದ್ದ ಯುವಕ (ಸ್ವಸ್ಥ), ಉದ್ಯೋಗಸ್ಥ ಯುವಕ (ದೇವರು ಇದ್ದಾನೆ) ಮತ್ತು ಲೈಬ್ರೇರಿಯನ್ ಯುವಕ ಜೋಯಿ ಕುಟ್ಟಿ (ಜೋಯಿ ಕುಟ್ಟಿಯ ಹೆಂಡತಿ) – ಇವರು.
ಈ ಸಂಕಲನದ ಕೊನೆಗೆ ಇರುವ ‘ತರಗೆಲೆ ಮತ್ತು ನೀರು’, ‘ಸೆಳೆತ’, ‘ತೀರ್ಪು’, ‘ಒಂದೇ ಒಂದು ಪ್ರಶ್ನೆ’,
ಒಬ್ಬಳು ಪುಟ್ಟ ಹುಡುಗಿಯ ಸಾವು’, ‘ಭೂತದ ಮನೆ’, ಮತ್ತು ‘ಮನುಷ್ಯನ ವಾಸನೆ’ ಎಂಬ ಕತೆಗಳು
ಗಟ್ಟಿಯವರಲ್ಲಿ ಕಾಣುವ ವಸ್ತು ಮತ್ತು ನಿರ್ವಹಣೆಯ ಬದಲಾವಣೆಯ ಬಗ್ಗೆ ಮುನ್ಸೂಚನೆ ನೀಡಿವೆ.
ಉದಾಹರಣೆಗೆ ‘ಭೂತದ ಮನೆ’ ಕತೆಯು ತನ್ನ ದರ್ಶನದಲ್ಲಿ ‘ವಿಶ್ವ ಸುಂದರಿ’ ಸಂಕಲನದ ಕತೆಗಳಂತಿದೆ. ಅದು ವ್ಯಕ್ತಿಯ ಮನೋಲೋಕದ ದರ್ಶನವಲ್ಲ, ಸಮಾಜದ ಮನೋಲೋಕದ ದರ್ಶನದ ಕತೆಯಾಗಿದೆ. ‘ಸೆಳೆತ’,‘ತರಗೆಲೆ ಮತ್ತು ನೀರು’ ಕೂಡ ಇಂತಹುದೇ ಕತೆಗಳು. ‘ತೀರ್ಪು’, ‘ಒಬ್ಬಳು ಪುಟ್ಟ ಹುಡುಗಿಯ ಸಾವು’, ‘ಭೂಗತ’ ಸಂಕಲನಕ್ಕೆ ಹತ್ತಿರವಾಗಿದ್ದರೆ ‘ಒಂದೇ ಒಂದು ಪ್ರಶ್ನೆ’ ‘ನೀಲಿ ಗುಲಾಬಿ’ಗೆ ಹತ್ತಿರವಾಗಿದೆ.
‘ಮನುಷ್ಯನ ವಾಸನೆ’ ಸಂಕಲನದ ಬಹುತೇಕ ಕತೆಗಳ ನಾಯಕರು ಪ್ರಜ್ಞಾವಂತ, ಸಂವೇದನಾಶೀಲ
ಯುವಕ, ಯುವತಿಯರು. ಸಮಾಜ ಅವರ ಸಂವೇದನೆಗೆ ಸ್ಪಂದಿಸುವ ಸಮಾನ ಮನಸ್ಕರಿಂದ ಕೂಡಿಲ್ಲ.
ಸಮಾಜದಲ್ಲಿ ಶ್ರೀಮಂತಿಕೆಗೆ, ಆಡಂಬರಕ್ಕೆ, ಅಧಿಕಾರಕ್ಕೆ ಬೆಲೆಯೇ ಹೊರತು ಮಾನವೀಯ ಸಂಬಂಧಗಳಿಗಲ್ಲ.
ಈ ಅರಿವಿನಿಂದ ಇಲ್ಲಿನ ನಾಯಕ ನಾಯಕಿಯರಿಗೆ ಅನಾಥಪ್ರಜ್ಞೆ (ನವ್ಯದ ಈ ಪರಿಭಾಷೆಯನ್ನು
ಬಳಸಬಹುದಾದರೆ), ನಿರಾಶೆ, ಬದುಕಿನ ಬಗ್ಗೆ ತಿರಸ್ಕಾರ ಉಂಟಾಗುತ್ತದೆ. ಕೆಲವು ವಿವರಗಳನ್ನು
ನೋಡಬಹುದು : ‘ಮೌಲ್ಯಗಳು’ ಕತೆಯ ನಾಯಕ ಬಿ.ಎಸ್ಸಿ. ಮುಗಿಸಿ ಮನೆಯ ಜವಾಬ್ದಾರಿ ಹೆಗಲಿಗೆ
ಬಿದ್ದಕಾರಣ ಉದ್ಯೋಗವನ್ನರಸುತ್ತಿರುವವನು. ಅವನ ಸಹಪಾಠಿ ಎಂ.ಎಲ್.ಎ.ಯ ಮಗ ಶ್ರೀಧರ ಮಜಾ
ಮಾಡಿಕೊಂಡು, ಸಹಪಾಠಿ ಜೆಸ್ಸಿಕಾಳ ಜತೆ ಲೈಂಗಿಕ ಸುಖ ಪಡೆದು ಓದದೆ ಇದ್ದರೂ ಫಸ್ಟ್ ಕ್ಲಾಸ್
ಪಾಸಾಗುತ್ತಾನೆ. ತನ್ನ ತಂದೆಯ ಪ್ರಭಾವದಿಂದಾಗಿ ದೊಡ್ಡ ಕಂಪೆನಿಯೊಂದರಲ್ಲಿ ಅಸಿಸ್ಟೆಂಟ್
ಮ್ಯಾನೇಜರಾಗುತ್ತಾನೆ. ನಾಯಕ ಬೆಂಗಳೂರಿಗೆ ತನ್ನ ಮಾವನ ಮನೆಗೆ ಹೋಗಿ ಕೆಲಸ ಕೊಡಿಸಲು
ಕೇಳಿಕೊಳ್ಳುತ್ತಾನೆ. ಅವರು ಮುಂದೆ ಪ್ರಯತ್ನಿಸುತ್ತೇನೆಂದು ನಾಯಕನನ್ನು ಮರಳಿ ಊರಿಗೆ ಕಳಿಸುತ್ತಾರೆ.
ಮಾವನ ಮಗಳು ರೇಖಾ ನಾಯಕನ ಹೃದಯ ಕದಿಯುತ್ತಾಳೆ. ಆಮೇಲೆ ಜೆಸ್ಸಿಕ ನಾಯಕನಿಂದ ಅವನ
ಮಾವನ ವಿಳಾಸ ತೆಗೆದುಕೊಂಡು ಬೆಂಗಳೂರಿಗೆ ಹೋಗಿ ಅವರ ಸಹಾಯದಿಂದಲೇ ಕೆಲಸ ಪಡೆಯುತ್ತಾಳೆ.
ಮಾವ ಅವಳಿಗೆ ತನ್ನ ಮನೆಯಲ್ಲೇ ಕೋಣೆ ಕೊಟ್ಟು ಅವಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಾ ಇರುತ್ತಾರೆ. ಶ್ರೀಧರನ ಕಂಪೆನಿಯಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸಕ್ಕೆ ಸೇರುವ ರೇಖಾ ನಾಯಕನನ್ನು ದೂರ ಮಾಡುತ್ತಾಳೆ.ಶ್ರೀಧರನ ಜತೆಗೆ ಓಡಾಡಲು ಪ್ರಾರಂಭಿಸುತ್ತಾಳೆ. ಶ್ರೀಧರನೂ ಗೆಳೆಯನಿಗೆ ಸಹಾಯ ಮಾಡದೆ ತನಗೆ ಸುಖ ನೀಡಬಹುದಾದ ಹೆಣ್ಣುಗಳಿಗೆ ಕೆಲಸ ಕೊಡಿಸುತ್ತಾನೆ. ನಾಯಕನಿಗೆ ಈ ಬಗೆಯ ವಿಕೃತ ಬದುಕಿನ ಮೌಲ್ಯರಾಹಿತ್ಯ ಆಘಾತ ಹುಟ್ಟಿಸುತ್ತದೆ.
ಬೆತ್ತ’ ಕತೆಯ ನಾಯಕನ ತಂದೆಗೆ ಪಾರ್ಶ್ವವಾಯು ಬಡಿದ ನಂತರ ಮನೆಯ ದೇವರಿಗೆ ಪೂಜೆ
ಮಾಡುವ ಜವಾಬ್ದಾರಿ ಅವನ ಮೇಲೆ ಬೀಳುತ್ತದೆ. ಅವನು ಹದಿನೈದರ ಹುಡುಗನಾಗಿದ್ದಾಗ ಪಕ್ಕದ ಮನೆಯ ಹುಡುಗಿಯನ್ನು ಅಪ್ಪಿಕೊಂಡಿದ್ದ. ಅದಕ್ಕೆ ಅಪ್ಪ ಬೆತ್ತದಿಂದ ಬಾರಿಸಿದ್ದರು. ಬಹುಶಃ ಈ ಮಾನಸಿಕ ಆಘಾತದಿಂದ ನಾಯಕನಿಗೆ ಹೆಂಗಸರ ಜತೆಗೆ ಸಂಬಂಧ ಬೆಳೆಸಲು ಸಾಧ್ಯವಾಗುವುದಿಲ್ಲ. ಅವನ ಹಲವು ಸೋಲುಗಳು ಮತ್ತು ‘ಬೆತ್ತ’ ಎಂಬ ಶೀರ್ಷಿಕೆಯಿಂದ ಈ ತೀರ್ಮಾನಕ್ಕೆ ಬರಬಹುದಲ್ಲದೆ ಕತೆಗಾರರು ನೇರವಾಗಿ ಏನನ್ನೂ ಹೇಳುವುದಿಲ್ಲ. ಅದೇ ವೇಳೆಗೆ ಅವನ ಅಪ್ಪನಿಗೆ ಪದ್ದಕ್ಕ ಎಂಬ ಹೆಂಗಸಿನ ಜತೆಗೆ ವಿವಾಹೇತರ ಸಂಬಂಧವಿತ್ತು.
ಹಾಗೆಯೇ ಶ್ರೀನಿವಾಸ ಮಾವ ಎಂಬ ಕಾಯಿಲೆಯ ಮುದುಕನಿಗೂ ಹೆಂಡತಿಯಲ್ಲದೇ ಕೆಳಜಾತಿಯ ಲಚ್ಚಿ ಎಂಬವಳೊಡನೆ ಸಂಬಂಧವಿತ್ತು ಅಂತ ನಿರೂಪಕನಿಗೆ ತಿಳಿಯುತ್ತದೆ. ಕತೆಯಲ್ಲಿ ನವ್ಯದ ಒಂದು ಲಕ್ಷಣವಾದ ಸಂಕೇತದ ಬಳಕೆಯಿದೆ. ಅದೇನೆಂದರೆ ಪೇರಳೆ ಹಣ್ಣು ತಿನ್ನಲು ಬರುವ ಬಾವಲಿಯೊಂದು ವಿದ್ಯುತ್ ವಯರಿಗೆ ಸಿಕ್ಕಿ ಸತ್ತಿರುವುದು. ಅದೊಂದು ಸತ್ತ ಮಾತ್ರಕ್ಕೆ ಬೇರೆ ಬಾವಲಿಗಳು ಪೇರಳೆ ತಿನ್ನುವುದನ್ನು ನಿಲ್ಲಿಸುವುದಿಲ್ಲ ಎನ್ನುವ ಮಾತೂ ಕತೆಯಲ್ಲಿ ಬರುತ್ತದೆ. ಪೇರಳೆಯು ಸ್ತ್ರೀಗೆ ಅಥವಾ ಸ್ತ್ರೀಯ ಸುಖಕ್ಕೆ ಸಂಕೇತವಾದರೆ, ಬಾವಲಿಗಳು ಅನೈತಿಕವಾಗಿ ಅದನ್ನು ಪಡೆಯುವ ಬಲಶಾಲಿಗಳಿಗೆ (ಅದನ್ನು ಪ್ರೀತಿಯಿಂದಲ್ಲ, ಚಾಣಾಕ್ಷತನದಿಂದ ಪಡೆಯುವ ಯಜಮಾನರುಗಳಿಗೆ) ಸಂಕೇತವಾಗಿದೆ. ಕತೆಯ ಕೊನೆಯಲ್ಲಿ ಲೈಂಗಿಕ ಸುಖಕ್ಕೆ ಅರ್ಹನಾದರೂ ಅದನ್ನು ಪಡೆಯಲಾಗದ ಯುವಕ ಮೊರೆಯಿಡುತ್ತಾನೆ : “ಸರ್ವಶಕ್ತನಾದ ಪಿತನೆ, ನಿನ್ನ ಶಕ್ತಿಯು ನನ್ನಲ್ಲಿ ಆವಿರ್ಭವಿಸುವಂತೆ ಮಾಡು….”
‘ಚೊಲಿಂಪೆ’ ಎಂಬ ಕತೆಯೂ ಹೀಗೆ ಸರ್ವಶಕ್ತ ಪಿತನ ಲೈಂಗಿಕ ಸಾಧನೆಗಳನ್ನು ಸಂಕೇತದ ಮೂಲಕವೂ
(ನಾಯಕ ತಂದೆಯ ಜತೆ ಅವರ ಊರಿಗೆ ಬಂದು ಹಳೆಯ ಮನೆಯೊಂದರಲ್ಲಿ ವಾಸಿಸಲು ಬಂದಾಗ ಅಲ್ಲಿ
ಸಿಗುವ ಹಾವಿನ ಪರೆ), ಸೂಚನೆಯ ಮೂಲಕವೂ (ತಂದೆಯ ಪ್ರೇಯಸಿಯ ಮಗಳೊಬ್ಬಳು ವಿಧವೆಯಾಗಿ
ಪಕ್ಕದಲ್ಲೇ ವಾಸಿಸುತ್ತಿರುವುದು) ಹೇಳುತ್ತದೆ. ನಾಯಕನ ಬಳಿ ಒಳ್ಳೆಯ ಕೆಲಸವಾಗಲಿ, ಹಣವಾಗಲಿ
ಇಲ್ಲದಿರುವುದರಿಂದ ಅವನ ಹೆಂಡತಿ ಅವನ ಜತೆ ಹಳ್ಳಿಯಲ್ಲಿ ಇರಲೊಪ್ಪದೆ ಮೈಸೂರಿನ ತವರು ಮನೆಗೆ ಹೋಗಿ ಬಿಟ್ಟಿರುತ್ತಾಳೆ. ಆದರೆ ಈ ಕತೆಯಲ್ಲಿ ನಾಯಕ ಆ ವಿಧವೆ ಹೆಣ್ಣಿನ ಜತೆಗೆ ಸಂಬಂಧ ಬೆಳೆಸಲು ದೃಢನಿಶ್ಚಯ ಮಾಡಿದೊಡನೆ ಅವನ ಪತ್ನಿಯೂ ಮರಳುತ್ತಾಳೆ. ಈ ಕತೆಯಲ್ಲಿ ನಾಯಕ ತನ್ನ ದೌರ್ಬಲ್ಯವನ್ನು ಮೀರುತ್ತಾನೆ.

ಈ ಸಂಕಲನದ ಮುಖ್ಯ ಕತೆಗಳಲ್ಲಿ ಲೈಂಗಿಕತೆಯೇ ಮನುಷ್ಯನ ವಾಸನೆಯ ಪ್ರತಿನಿಧಿಯಾಗಿದೆ ಹಾಗೂ
ಪ್ರಾಪಂಚಿಕ ಯಶಸ್ಸಿಗೆ ಸಂಕೇತವಾಗಿದೆ. ಸಂಕಲನದ ಶೀರ್ಷಿಕೆಯ ಕತೆ ‘ಮನುಷ್ಯನ ವಾಸನೆ’ ಯ ನಾಯಕ ಅಪ್ಪಣ್ಣ ಪುಡಿಗಳ್ಳನಾಗಿದ್ದು ಸಂನ್ಯಾಸಿಯಾದವ. ಅವನು ಅಪ್ಪು ಸ್ವಾಮಿಯಾಗಿ ನೂರಾರು ಭಕ್ತರನ್ನು ಸಂಪಾದಿಸುತ್ತಾನೆ. ಅವನ ಹೆಂಡತಿ ಮಕ್ಕಳಿಗೆ ಆಶ್ರಮದೊಳಗೆ ಪ್ರವೇಶವಿರಲಿಲ್ಲ. ಅವಳು ತನ್ನ ಸಂಬಂಧಿಕರೊಬ್ಬರ ಬಡ ಹುಡುಗಿಯನ್ನು ಗಂಡನ ಚಾಕರಿಗೆ ನೇಮಿಸುತ್ತಾಳೆ. ಅಪ್ಪು ಸ್ವಾಮಿ ಆ ಹುಡುಗಿಯ ಜತೆ ಸಂಸಾರಿಯಂತೆ ಇರತೊಡಗುತ್ತಾನೆ. ಸ್ವಾಮಿಗಳು ಭ್ರಷ್ಟರಾಗಬಾರದೆಂದು ಊರವರು ಆ ಹುಡುಗಿಯನ್ನು ದೂರ ಕಳಿಸುತ್ತಾರೆ. ಇದರ ನಂತರ ಕಾಯಿಲೆಯಾಗಿ ಮಲಗಿದ ಗಂಡನನ್ನು ಹೆಂಡತಿ ಉಪಚರಿಸಿ ಉಳಿಸಿಕೊಂಡ ಮೇಲೆ ಅಪ್ಪು ಸ್ವಾಮಿಯ ಬೇಡಿಕೆ, ಹೆಂಡತಿ ಆಶ್ರಮಕ್ಕೆ ಬರಬಾರದು; ದೂರ ಕಳಿಸಿದ ಹುಡುಗಿಯನ್ನು ಹುಡುಕಿಸಿ ತರಬೇಕು; ಅವಳಿಲ್ಲದಿದ್ದರೆ ಅವಳ ಅಕ್ಕನ ಮಗಳೂ ಆದೀತು – ಅನ್ನುವುದು.

ಮನುಷ್ಯನ ವಾಸನೆ’ ಸಂಕಲನದಲ್ಲಿ ಸಹಜ ಭಾವನೆಗಳು, ಸಹ ಸ್ಪಂದನಗಳು ಬೇರೆಯವರ ಅಥವಾ
ಒಟ್ಟು ಸಮಾಜದ ಭಾವರಾಹಿತ್ಯದಿಂದಾಗಿ ಹಾರಿಹೋಗುವುದನ್ನು ಚಿತ್ರಿಸಲಾಗಿದೆ. ‘ಒಂದಾಣೆ’ ಕತೆಯ ನಾಯಕ ಹೇಳುತ್ತಾನೆ : “ಅಂದು ನಾನು ಹದಿನೆಂಟರ ಹರೆಯದ ತರುಣನಾಗಿದ್ದೆ. ನನ್ನ ಭಾವನೆಗಳೆಲ್ಲಾ ಎಲ್ಲಿ ಹಾರಿಹೋದವೋ ತಿಳಿಯದು.” “ಎಂಥ ಹೆಡ್ಡ ನಾನು! ನಾನು ವಸಂತಿಯನ್ನು ಎಂಥ ಪವಿತ್ರವಾದ ಕಣ್ಣುಗಳಿಂದ ನೋಡಿದೆ! ಎಂಥ ವಾತ್ಸಲ್ಯ ಭಾವನೆಯಿಂದ ನೋಡಿದೆ…..! ನಾನವಳನ್ನು ಕಾಮುಕನಂತೆ ನೋಡಬೇಕಾಗಿತ್ತು.”
‘ಕೈ’ ಕತೆಯಂತಹ ಅಸಂಗತ ಕತೆಯೂ ಸಂಕಲನದಲ್ಲಿದೆ. ಗಟ್ಟಿಯವರು ಬದುಕಿನ ಅರ್ಥರಾಹಿತ್ಯವನ್ನು
ಹಾಗೂ ಸಮಾಜದ ಸಂವೇದನಾ ರಾಹಿತ್ಯವನ್ನು ಪರಿಶೀಲಿಸಲು ಕೂಡ ಈ ಸಂಕಲನದಲ್ಲಿ ಪ್ರಾರಂಭಿಸಿದ್ದಾರೆ.

ನೀಲಿ ಗುಲಾಬಿ : ಪ್ರೌಢ ತಲ್ಲಣಗಳು
‘ನೀಲಿ ಗುಲಾಬಿ’ ಸಂಕಲನದಲ್ಲಿರುವ ಕತೆಗಳೆಂದರೆ : ‘ನೀಲಿ ಗುಲಾಬಿ’, ‘ತಾತ್ಕಾಲಿಕ’, ‘ದೇವರು
ದಯಾಮಯ’, ‘ಯಾರದೂ ಅಲ್ಲದ ಕತೆ’, ‘ಸವೆದ ದಾರಿ’, ‘ಪ್ರೀತಿ’, ‘ರಸಗುಲ್ಲಾ’, ‘ಕತೆ ಒಂದು ಹೂವು’, ‘ಪೃಥ್ವಿ’, ‘ಮಳೆ’ ಮತ್ತು ‘ರಂಗಿನಾಟ’. ಈ ಕತೆಗಳ ನಾಯಕರು ವಿವಾಹಿತರು ಮತ್ತು ವಿವಾಹೇತರ ಸಂಬಂಧದ ಬಗ್ಗೆ ಎಲ್ಲೋ ಒಂದು ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿರುವವರು; ಅಥವಾ ತಮ್ಮ ವೈವಾಹಿಕ ಜೀವನದ ಬಗ್ಗೆ ಅಸಮಾಧಾನ ಹೊಂದಿರುವವರು. ವರ್ಗ ತಾರತಮ್ಯವನ್ನು ಹೇಳುವ, ಶ್ರೀಮಂತ ವರ್ಗದ ಹೆಂಗಸರು ಸಾಮಾನ್ಯ ಮನುಷ್ಯರಿಗಿಂತ ತಾವು ಮೇಲ್ಮಟ್ಟದವರು ಅಂತ ಭಾವಿಸಿಕೊಳ್ಳುವ ಕತೆಗಳೂ ಇವೆ.
ನೀಲಿ ಗುಲಾಬಿ’ ಕತೆಯಲ್ಲಿ ನಾಯಕ ಪೇಪರ್ ಹಾಕುತ್ತಾ ಕಲಿತು ಉಪನ್ಯಾಸಕನಾದವ. ನೀಲಿ ಗುಲಾಬಿ
ಹೂಗಳ ಬಗ್ಗೆ ವ್ಯಾಮೋಹವುಳ್ಳ ಒಂದು ಮನೆಯ ಒಡತಿಗೆ ಸಂಸಾರದಲ್ಲಿ ಸುಖವಿಲ್ಲವೇನೋ ಅನ್ನುವ ಭಾವನೆ ಓದುಗರಿಗೆ ಉಂಟಾಗುತ್ತದೆ. ಆಕೆ ಪೇಪರ್ ಹಾಕುವ ಯುವಕನ ಸಾಧನೆಯ ಬಗ್ಗೆ ಮೆಚ್ಚುಗೆ ಇಟ್ಟುಕೊಂಡಿದ್ದರೂ ಒಂದು ಗಿಡದ ಕಟಿಂಗ್ ಕೊಡಲು ನಿರಾಕರಿಸುತ್ತಾಳೆ. “ನಾನು ಪೇಪರ್ ಹುಡುಗನೆಂದು ಮರೆತದ್ದು ನನ್ನ ತಪ್ಪು” ಎಂದು ನಾಯಕ ಅಂದುಕೊಳ್ಳುತ್ತಾನೆ.
ತಾತ್ಕಾಲಿಕ’ ಕತೆಯಲ್ಲಿ ನಾಯಕ ಉಪನ್ಯಾಸಕ ಹಾಗೂ ಕತೆಗಾರ. ಕತೆಗಳಲ್ಲಿ ತನ್ನ ಮನಸ್ಸಿನ
ಭಾವನೆಗಳನ್ನು ಹೇಳಿಕೊಂಡ ಕಾರಣ, ಹಾಗೂ ಚೇರ್‌ಮನ್‌ರ ಮಗಳು ಅವನ ವಿದ್ಯಾರ್ಥಿನಿಯಾಗಿದ್ದು ಅವನ ಪ್ರಭಾವದಿಂದ ಕತೆಯನ್ನೂ ಬರೆದು ಭಾವನೆಗಳನ್ನು ತೋಡಿಕೊಳ್ಳಲು ಪ್ರಯತ್ನಿಸಿದ ಕಾರಣ ತನ್ನ ತಾತ್ಕಾಲಿಕ ಕೆಲಸವನ್ನು ಕಳೆದುಕೊಳ್ಳುತ್ತಾನೆ.
ಮೇಲಿನೆರಡು ಕತೆಗಳು ಮೊದಲಿನ ಸಂಕಲನದ ಸಾಲಿಗೆ ಸೇರುವಂಥವು. ‘ನೀಲಿ ಗುಲಾಬಿ’ ಯಲ್ಲಿ
ಮುಂದಿನ ಬೆಳವಣಿಗೆಯ ಬೀಜವೂ ಇರುವುದನ್ನು ಗಮನಿಸಬಹುದು.
‘ದೇವರು ದಯಾಮಯ’ ಕತೆಯ ಮುಖ್ಯ ಪಾತ್ರ ಮನಮೋಹನ ಶೆಟ್ಟಿ ಎಂಬ ಕಾಫಿ ಪ್ಲಾಂಟರ್
ಬೆಂಗಳೂರಿಗೆ ಬಂದು ಸುವರ್ಣಲೇಖ ಎಂಬ ನಟಿಯ ಜತೆ ಲೈಂಗಿಕ ಸಂಬಂಧ ಬೆಳೆಸುತ್ತಾರೆ. ಅವಳಿಗೆ ಒಂದು ರಾತ್ರಿಗೆ ಐದು ಸಾವಿರ ಕೊಡುವ ಶೆಟ್ಟರು ಕೆಲಸದವರಿಗೆ ಸಂಬಳ ಏರಿಸುವುದಿಲ್ಲ. ಅಲ್ಲದೆ ವೈದ್ಯರ ಸಲಹೆಯನ್ನು ಧಿಕ್ಕರಿಸಿ ನಟಿಯ ಜತೆ ಸೇರಿ ಹೃದಯಾಘಾತ ತಂದುಕೊಳ್ಳುತ್ತಾರೆ. ನಿರೂಪಕ ಈ ಬಗ್ಗೆ ಹೀಗೆ ಯೋಚಿಸುತ್ತಾನೆ :
“ಸುಖವೆಂಬುದು ಇಷ್ಟು ದುಬಾರಿಯಾದ ವಸ್ತುವೆ! ದೇವರೇ, ಸುಖವೆಂಬುದು ಏನು? ಅಥವಾ ಹಣವೆಂಬ
ಪಿಶಾಚಿ ಮನುಷ್ಯನನ್ನು ಸುಖವೆಂಬ ದುಃಖದ ಕೂಪಕ್ಕೆ ತಳ್ಳುತ್ತದೆಯೇ?”
ಈ ಪ್ರಶ್ನೆಗೆ ಸಂಬಂಧಿಸಿದಂತೆ ಇರುವ ಮುಂದಿನ ಕತೆ ‘ಯಾರದೂ ಅಲ್ಲದ ಕತೆ’ ಯಲ್ಲಿ ಕಾಲೇಜು
ಹುಡುಗಿಯರು ಆ ಊರಿನ ಕಡಲ ತೀರದಲ್ಲಿ ಹೆಣವಾಗಿ ಸಿಗುವ ಕತೆಯಿದೆ. ಎಲ್ಲ ಪ್ರಕರಣಗಳೂ ಕೊನೆಗೆ
ತಣ್ಣಗಾಗುತ್ತವೆ. “ಶ್ರೀಮಂತ ಹುಡುಗರು ಬಡ ಹುಡುಗಿಯರನ್ನು ಕೊಂದಾಗ ಹೀಗೇ ಆಗುವುದು….. ಇಬ್ಬರು ಪೋಲಿಸು ಅಧಿಕಾರಿಗಳು ನಾಲ್ಕೆöಟು ಲಕ್ಷ ಜೇಬಿಗೆ ಇಳಿಸಿ ಕೇಸು ಕೋರ್ಟು ಸೇರುವ ಮೊದಲೇ ವರ್ಗ ಪಡೆದುಕೊಂಡು ಬೇರೆ ಊರಿಗೆ ಹೋದರು. ಬೇರೆ ಕೆಲವರು ಅರ್ಧ ಮನೆಗಳನ್ನು ಪೂರ್ತಿ ಮಾಡಿಕೊಂಡರು….”
ಇತ್ಯಾದಿ ಮಾತುಗಳಲ್ಲಿ ಕತೆಗಾರರ ಟೀಕೆ, ಅಸಮಾಧಾನ ಸುಪ್ತವಾಗಿರುವುದು ಕಾಣುತ್ತದೆ. (‘ವಿಶ್ವ ಸುಂದರಿ’ ಸಂಕಲನದ ಘಟ್ಟದಲ್ಲಿ ಸಮಾಜದ ವಿಚಾರಶೂನ್ಯ ಧನಧಾಹ, ಮೂಢನಂಬಿಕೆ, ಶೋಷಣೆಗಳೆದುರು ಒಂದು ವಿಚಿತ್ರ ತಿರಸ್ಕಾರದ ಆನಂದವನ್ನು ಕಾಣಬಹುದು.)

ಸವೆದ ದಾರಿ’ ಕತೆಯಲ್ಲಿ ವಿವಾಹಿತೆ ಹೆಂಗಸೊಬ್ಬರು ಕತೆಗಾರನ ಬಳಿಗೆ ಬಂದು ತಮ್ಮ ಗಂಡ ತಮಗೆ
ಹೊಡೆಯುತ್ತಾರೆ ಅನ್ನುವ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ‘ಪ್ರೀತಿ’ ಕತೆಯಲ್ಲಿ ಅನಂತ ಮೇಷ್ಟ್ರು ಮತ್ತು ಕವಿತಾ ಟೀಚರು ಪ್ರೀತಿಸುತ್ತಾರೆ. ಏನೋ ಎಡವಟ್ಟಾಗಿ ಟೀಚರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮೇಷ್ಟ್ರುವರ್ಗವಾಗಿ ಹೋಗುತ್ತಾರೆ. ‘ಪ್ರೀತಿಯೆಂದರೆ ನಿಜವಾಗಿ ಏನು?’ ಎಂಬ ಪ್ರಶ್ನೆ ಇಲ್ಲಿಯೂ (ಮುಗ್ಧ ಹುಡುಗನೊಬ್ಬನ ಚಿಂತನೆಯ ಮೂಲಕ) ಪರಿಶೀಲಿಸಲ್ಪಟ್ಟಿದೆ.
ರಸಗುಲ್ಲಾ’ ಕತೆಯಲ್ಲಿ ಶ್ರೀಮಂತ ಹೆಣ್ಣು ನೆರೆಮನೆಯುಳ್ಳ ಕೋರಿಕೆಯ ಮೇರೆಗೆ ಬೆಂಗಳೂರಿನ ಅವಳ
ತಂಗಿಗೆ ಪಾರ್ಸೆಲ್ ಒಯ್ದು ಕೊಡುವ ಕಾಲೇಜು ಉಪನ್ಯಾಸಕ ನಿರೂಪಕನಿಗೆ ಆ ಶ್ರೀಮಂತ ಹೆಣ್ಣು ತನ್ನ ಬಗ್ಗೆ ಎಂತಹ ನಿಕೃಷ್ಟ ಭಾವನೆಯನ್ನು ಅಡಗಿಸಿಟ್ಟುಕೊಂಡಿದ್ದಳು ಎನ್ನುವುದು ತಿಳಿಯುತ್ತದೆ.
ಕತೆ ಒಂದು ಹೂವು’ ಕತೆಯಲ್ಲಿ ನಾಯಕಿ ವಿವಾಹಿತೆ, ಆದರೆ ಗಂಡನ ಗೆಳೆಯನ ಜತೆಗೆ ಲೈಂಗಿಕವಲ್ಲದ
ಸ್ನೇಹ ಅವಳಿಗೆ ಇಷ್ಟವಾಗುತ್ತದೆ. ‘ಮಳೆ’ ಕತೆಯಲ್ಲಿ ನಾಯಕ – ನಾಯಕಿ ಇಬ್ಬರೂ ವಿವಾಹಿತರು; ತಮ್ಮ ಬಾಳ ಸಂಗಾತಿಗಳನ್ನು ಮರೆತು ಸ್ವಲ್ಪ ಹೊತ್ತು ಪ್ರೇಮಿಗಳಂತೆ ಕಾಲ ಕಳೆಯುತ್ತಾರೆ.
‘ಪೃಥ್ವಿ’ ಕತೆಯಲ್ಲಿ ದೀಪಕ್ ಎಂಬವ ತನ್ನ ಹೆಂಡತಿಗೆ ಬೇರೊಬ್ಬನಿಂದ ಮಗುವಾಯಿತೆಂದು ಭಾವಿಸಿ
ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆ ಶ್ರೀಮಂತ ಯುವತಿ (ಅವನ ಹೆಂಡತಿಗೆ) ಕಪ್ಪು ಬಣ್ಣದ ಕ್ರೀಡಾ ಪಟುವೊಬ್ಬನ ಬಗ್ಗೆ ವ್ಯಾಮೋಹ ಇದ್ದುದರಿಂದ ಆ ರೀತಿ ಕಪ್ಪು ಮಗು ಹುಟ್ಟಿರಬಹುದೆಂಬ ಸೂಚನೆ ಕತೆಯಲ್ಲಿದೆ. ಅವಳು ಹೇಳುತ್ತಾಳೆ : “ದೀಪಕ್ ನನ್ನ ಗಂಡನಾಗಿದ್ದ ನಿಜ. ನಾನು ಅವನ ಹೆಂಡತಿಯಾಗಿದ್ದುದೂ ಹೌದು. ಆದರೆ ನಾನು ಪೃಥ್ವಿಯನ್ನು ಬಿಟ್ಟು ಒಂದು ಕ್ಷಣವೂ ಇರಲಿಲ್ಲ. ಇನ್ನೂ ಇರಲಾರೆ.” ಗಟ್ಟಿಯವರ ಮೊದಲನೆಯ ಸಂಕಲನದ ‘ಒಂದೇ ಒಂದು ಪ್ರಶ್ನೆ’ ಕತೆಯೂ ‘ಪೃಥ್ವಿ’ ಕತೆಯಂತೆ ವೈವಾಹಿಕ ಜೀವನದಲ್ಲಿ ಸುಖ ಕಾಣಲಾಗದ ವಿವಾಹಿತೆಯ ಕುರಿತಾಗಿದೆ. ಆ ನಾಯಕಿ ಹೇಳುತ್ತಾಳೆ : “ನಾನು ಪ್ರತಿದಿನವನ್ನು, ಕೆಲವೊಮ್ಮೆ ಪ್ರತಿಕ್ಷಣವನ್ನು ಕಳೆದುದು ಉಮಾಶಂಕರ ಹೃದಯದಲ್ಲಿದ್ದುಕೊಂಡೇ. ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಎಂದು ನನಗೆ ತಿಳಿಯದು…. ಈಗಲೂ, ಈ ಕ್ಷಣವೂ, ಮೂರು ಮಕ್ಕಳ ತಾಯಿಯಾಗಿರುವ, ಮೂವತ್ತೆಂಟರ ಹರೆಯದ ನಾನು, ಇಂಥ ಅಂತಸ್ತು, ಪ್ರತಿಷ್ಠೆಯ ಸ್ಥಾನದಲ್ಲಿರುವ ನಾನು, ಉಮಾಶಂಕರ ಒಬ್ಬ ಬಡ ಭಿಕ್ಷುಕನಾಗಿ ನನ್ನ ಬಾಗಿಲಿಗೆ ಬಂದರೆ ನಾನು ಅವರೊಡನೆ ನಡೆದು ಹೋಗಿ ಬಿಡಲು ಸಿದ್ಧಳಿದ್ದೇನೆ.”

ನೀಲಿ ಗುಲಾಬಿ’ ಸಂಕಲನದ ಕೊನೆಯ ಕತೆ ‘ರಂಗಿನಾಟ’ ನಿವೃತ್ತ ಅಕೌಂಟೆಂಟ್ ಮೋಹನರಾಯನ
ಕತೆ. ಇದರ ಮೂಲಕ ಗಟ್ಟಿಯವರು ತಮ್ಮ ಮುಂದಿನ ಸಂಕಲನದಲ್ಲಿ ವೃದ್ಧ ಪಾತ್ರಗಳ ಅನುಭವದ ಮೂಲಕ ಬದುಕನ್ನು ಪರಿಶೀಲಿಸುವ ಸೂಚನೆಯನ್ನು ನೀಡಿದ್ದಾರೆ.
ಭೂಗತ : ಕೊನೆಯಲ್ಲಿ ಮರುಭೇಟಿ ಗಟ್ಟಿಯವರ ‘ಭೂಗತ’ ಸಂಕಲನದಲ್ಲಿರುವ ಕತೆಗಳೆಂದರೆ, ‘ಕತೆಯಿಂದ ಬಂದವನು’, ‘ಬಂಡೆ’, ‘ಪ್ರವಾಹ’, ‘ಸಮಕೋಣದ ಮೂಲೆ’, ‘ಯೇತಿ’, ‘ನೀಲಿ ನೊಣಗಳು’, ‘ರೋಗಿ’, ‘ಪ್ರಾರ್ಥನೆ ಕೇಳಲಿಲ್ಲವೇ?’, ‘ಕೂರ್ಮಾವತಾರ’, ‘ಕತ್ತಲೆಯ ನಂತರ’, ‘ಹೆರಿಗೆ’, ‘ಲೋಹ ಚುಂಬಕ ಚಿಕಿತ್ಸೆ’ ಮತ್ತು ‘ಭೂಗತ’. ಈ ಕತೆಗಳಲ್ಲಿ ‘ಕತೆಯಿಂದ ಬಂದವನು’ ಕತೆಯಲ್ಲಿ ಮೂವರು ಮಗಳಂದಿರ ಅಪ್ಪ ಪ್ರೊಫೆಸರ್ ರಾಜಾರಾಮರಾಯರು ಬದುಕಿನ ವಾಸ್ತವಗಳನ್ನು ಯುವಕನಾದ ರಾಜನಿಗೆ ಉಪದೇಶಿಸುತ್ತಾರೆ. ‘ಬಂಡೆ’ ಕತೆಯ ಪ್ರೊಫೆಸರ್ ನಿರಂಜನದಾಸ್ ಮತ್ತವರ ಪತ್ನಿ ಎಪ್ಪತ್ತು ವರ್ಷ ದಾಟಿದವರು. ತಮ್ಮ ಬದುಕಿಗೆ ಅರ್ಥವಿಲ್ಲ; ಇನ್ನು ಸಾಯುವುದೇ ಒಳ್ಳೆಯದು ಎಂದು ಪ್ರೊಫೆಸರ್ ಹೆಂಡತಿಯೊಡನೆ ಆಗಾಗ ಚರ್ಚಿಸುತ್ತಾರೆ. ಒಂದು ದಿನ ಅವರ ಹೆಂಡತಿ ತಣ್ಣಗೆ ಸತ್ತು ಹೋಗಿರುತ್ತಾರೆ.
ಪ್ರವಾಹ’ ಕತೆಯ ನಾಯಕ ಶಿವಸ್ವಾಮಿ ಅಚಲ ಎನ್ನುವಾಕೆಯನ್ನು ಪ್ರೀತಿಸಿರುತ್ತಾನೆ. ನಲುವತ್ತು
ವರ್ಷಗಳ ನಂತರ ಅವಳನ್ನೊಮ್ಮೆ ಕಾಣಬೇಕೆಂಬುದು ಹೋಗುತ್ತಾನೆ. ಅವಳು ಏನೂ ಬಯಸದೆಯೇ
ಮೊಮ್ಮಕ್ಕಳನ್ನು ಕೂಡ ಪಡೆಯುತ್ತಾಳೆ. ನಾಯಕ ತನ್ನ ಹೃದಯದೊಳಗೆ ಯುವ ಪ್ರೇಮಿಯನ್ನು
ಚಿರಸ್ಥಾಯಿಗೊಳಿಸಿಕೊಂಡು ಬ್ರಹ್ಮಚಾರಿಯಾಗಿಯೇ ಇದ್ದು ಸತ್ತು ಹೋಗುತ್ತಾನೆ. ಯಾವುದು ನಿಜವಾದ ಬದುಕು ಎಂಬ ಪ್ರಶ್ನೆಗೆ ಉತ್ತರವನ್ನು ಯೋಚಿಸುವ ಕೆಲಸವನ್ನು ಕತೆ ಓದುಗರಿಗೆ ಬಿಟ್ಟು ಬಿಡುತ್ತದೆ.
‘ಹೆರಿಗೆ’ ಕತೆಯ ನಾಯಕಿ ಚಂದ್ರಾ ಗಂಡ ಬಿಟ್ಟಮೇಲೆ ವೇಶ್ಯೆಯಾದ ನಡು ವಯಸ್ಸಿನ ಮಹಿಳೆ.
ಸಮಾಜದ ಶೋಷಣೆಗೆ ಅವಳೇ ಒಂದು ರೂಪಕದಂತಿದಾಳೆ. ‘ಲೋಹ ಚುಂಬಕ ಚಿಕಿತ್ಸೆ’ ಯಲ್ಲಿ ಸಮಾಜದ ಭ್ರಷ್ಟತೆ ಇನ್ನೊಂದು ರೀತಿಯಲ್ಲಿ ಚಿತ್ರಿತವಾಗಿದೆ. ಸರಕಾರಿ ಅಧಿಕಾರಿ ಗುರುದತ್ತರಾವ್ ಶುದ್ಧ ಹಸ್ತ, ವ್ಯವಸ್ಥೆ ಮತ್ತು ಸಂಸಾರ ತಾಪತ್ರಯದಿಂದ ಅವನಿಗೆ ರಕ್ತದೊತ್ತಡ ಏರಿ ಅದರ ಚಿಕಿತ್ಸೆಯಾದ ಲೋಹ ಚುಂಬಕ ಚಿಕಿತ್ಸೆಗಾಗಿ ಖರ್ಚಾಗುವ ಒಂದು ಲಕ್ಷ ಹಣ – ಅವನನ್ನು ಭ್ರಷ್ಟನನ್ನಾಗಿ ಬದಲಾಯಿಸುತ್ತವೆ.
ಈ ಸಂಕಲನದಲ್ಲಿಯೂ ಅಸಂಗತ ತಂತ್ರದ ಮೂಲಕ ಬದುಕಿನ ಅರ್ಥರಾಹಿತ್ಯವನ್ನು
ಗಮನಿಸುವ ‘ಯೇತಿ’ ಎಂಬ ಕತೆಯಿದೆ. ‘ನೀಲಿ ನೊಣಗಳು’ ಕತೆಯಲ್ಲಿ ಭ್ರಷ್ಟ, ಕ್ರೂರ ಅಧಿಕಾರಿಯೊಬ್ಬನ
ಮನೆಯಲ್ಲಿ ಲಕ್ಷ್ಮಿ ಎಂಬ ಕೆಲಸದ ಹುಡುಗಿಯನ್ನು ಅವಳು ಮೊದಲ ಬಾರಿ ಮುಟ್ಟಾದ ದಿನವೇ ಮನೆಯಾಕೆ ದೂಡಿಹಾಕಿ ಅವಳ ಸಾವಿಗೆ ಕಾರಣಳಾಗುತ್ತಾಳೆ. ಅವಳ ದೇಹವನ್ನು ಕಡಲ ಕಿನಾರೆಯಲ್ಲಿ ನಿವಾರಿಸಿ ಬಂದ ನಂತರ ಅಲ್ಲಿಂದೆದ್ದು ಬರತೊಡಗಿದ ಅಸಂಖ್ಯಾತ ನೀಲಿ ನೊಣಗಳಿಂದ ಆ ಊರವರ ಬದುಕು ಅಸಹನೀಯವಾಗುತ್ತದೆ. ಇದು ಕೂಡ ಸಮಾಜದ ರೋಗಗ್ರಸ್ಥ ಸ್ಥಿತಿಯನ್ನು ಚಿತ್ರಿಸುವ ಕತೆ. ‘ರೋಗಿ’ ಕತೆ ಅಸಂಗತ ತಂತ್ರವೊಂದನ್ನು ಬಳಸಿಕೊಂಡು ಸಮಾಜದ ಮುಖವೊಂದನ್ನು ಪರಿಚಯಿಸುತ್ತದೆ.
ಭೂಗತ’ ಸಂಕಲನದ ವೈಶಿಷ್ಟ್ಯವೇನೆಂದರೆ ಕತೆಗಾರರು ತಮ್ಮ ಮೊದಲಿನ ಸಂಕಲನದ ಕತೆಗಳ
ಮಾದರಿಗೂ ಮರುಭೇಟಿ ನೀಡಿರುವುದು. ಉದಾಹರಣೆಗೆ, ‘ಕತ್ತಲೆಯ ನಂತರ’ ಕತೆಯ ನಾಯಕ
ಪುರುಷತ್ತೋಮ ಅವಿವಾಹಿತ. ಸುಖ ಅಂದರೆ ಏನು ಎಂದು ಅರಿಯಲು ತನ್ನ ಜೀವಮಾನದ
ಉಳಿತಾಯವನ್ನೆಲ್ಲ ಎರಡು ದಿನ ಪಂಚತಾರಾ ಹೋಟೆಲೊಂದರಲ್ಲಿ ಉಳಿದು, ಪಂಚತಾರಾ ವೇಶ್ಯೆಯ ಸಂಸರ್ಗ ಮಾಡಿ ಕಳೆದು ಮತ್ತೆ ಬೀದಿಗೆ ಬರುತ್ತಾನೆ. ಇದು ಗಟ್ಟಿಯವರ ಮೊದಲನೆಯ ಸಂಕಲನದ ಮಾದರಿಯೇ ಆದರೂ ನಾಯಕನ ಮನೋಭಾವದಲ್ಲಿ ಗಣನೀಯವಾದ ಬದಲಾವಣೆ ಆಗಿದೆ. ಅವನು ವರ್ಗ ತಾರತಮ್ಯ ಮತ್ತು ಹಣದಿಂದ ಒದಗುವ ಸುಖದ ನ್ಯಾಯಾನ್ಯಾಯಗಳ ಬಗೆಗೆ ತಲೆಕೆಡಿಸಿಕೊಂಡಿಲ್ಲ. ಅದನ್ನೊಮ್ಮೆ ಪಡೆದು ತಿರಸ್ಕರಿಸಿ ಮನಸ್ಸಿನೊಳಗಿನ ಹಳಹಳಿಕೆಯನ್ನು ತೊಳೆದು ಶುದ್ಧಮಾಡಿಕೊಳ್ಳುವ ಕ್ರಿಯೆಯಾಗಿ ನಾಯಕನ ವರ್ತನೆಯನ್ನು ಕಾಣಬಹುದು.

ಗಟ್ಟಿಯವರು ಮೊದಲ ಸಂಕಲನಗಳಲ್ಲಿ ಬದುಕನ್ನು ಪರಿಶೀಲಿಸಿದ ನಂತರ ನಾಲ್ಕನೆಯ ಸಂಕಲನದಲ್ಲಿ
ಕಾಣಿಸುವ ಬಿಡುಗಡೆಯ ದಾರಿಗಳಲ್ಲಿ ಇದೂ ಕೂಡ ಒಂದು. ಇನ್ನಷ್ಟು ಸ್ಪಷ್ಟವಾಗಿ ಕಾಣುವ ಒಂದು ವಸ್ತುವಿನ ಬೆಳವಣಿಗೆಯೆಂದರೆ ‘ಮನುಷ್ಯನ ವಾಸನೆ’ ಸಂಕಲನದ ‘ಒಂದಾಣೆ’ ಕತೆಯ ಸಮಸ್ಯೆಗೆ ಪರಿಹಾರವನ್ನು ‘ವಿಶ್ವ ಸುಂದರಿ’ ಸಂಕಲನದ ‘ಕೃಷ್ಣ ಭಟ್’ ಕತೆಯಲ್ಲಿ ತೋರಿಸಿರುವುದು. ‘ಒಂದಾಣೆ’ ಕತೆಯ ಸೂಕ್ಷ್ಮ ಸ್ಪಂದಿಯಾದ ನಾಯಕನಿಗೆ ಮೇಲುವರ್ಗದ ಯುವತಿ ಅವಮಾನ ಮಾಡುತ್ತಾಳೆ. ‘ಕೃಷ್ಣ ಭಟ್’ ಕತೆಯ ನಾಯಕ ಹರಿಜನ ತರುಣ ಬ್ರಾಹ್ಮಣರಂತೆ ವರ್ತಿಸಿ, ಕೃಷ್ಣ ಭಟ್ ಎಂದು ಹೆಸರಿಟ್ಟುಕೊಂಡು ಬ್ರಾಹ್ಮಣ ಕನ್ಯೆಯೊಬ್ಬಳನ್ನು ಶಾಸ್ತ್ರೋಕ್ತವಾಗಿ ವಿವಾಹವಾಗುತ್ತಾನೆ. ತಾನು ಹೀಗೆ ಮಾಡಿ ತೋರಿಸುತ್ತೇನೆಂದು ಪಂಥ ಕಟ್ಟಿಯೇ ಅವನು ಮದುವೆಯಾದುದು.

ಭೂಗತ’ ಸಂಕಲನದಲ್ಲಿ ಇನ್ನೂ ಕೆಲವು ವಂಚಕರ, ಶೋಷಕರ ಕತೆಗಳಿವೆ. ‘ಪ್ರಾರ್ಥನೆ
ಕೇಳಿಸುವುದಿಲ್ಲವೆ?’ ಕತೆಯಲ್ಲಿ ಮೂವರು ಸಮಾಜ ಕಂಟಕರನ್ನು ಸಮ್ಮಾನಿಸಿ ಮೆರವಣಿಗೆ ಮಾಡಿಸುವ
ಊರವರಿಗೆ ದೇವರೇ ಶಿಕ್ಷೆ ಕೊಟ್ಟನೆಂಬಂತೆ ಮಹಾ ಪ್ರವಾಹ ಬಂದು ಎಲ್ಲರನ್ನೂ ಕೊಚ್ಚಿಕೊಂಡು ಹೋಗುವ ಕಾಲ ಸನ್ನಿಹಿತವಾಗುತ್ತದೆ. ‘ಭೂಗತ’ ಕತೆಯಲ್ಲಿ ಬುದ್ಧಿ ಜೀವಿಯೊಬ್ಬ ಬಹಳ ಆಕರ್ಷಕವಾಗಿ ಮಾತಾಡುತ್ತ ತನಗೆ ಆಶ್ರಯ ನೀಡಿದವರ ಮನೆಯಿಂದಲೇ ಅಪೂರ್ವವಾದ ವಿಗ್ರಹವೊಂದನ್ನು ಕದ್ದುಕೊಂಡು ಹೋಗುತ್ತಾನೆ.

ಕೂರ್ಮಾವತಾರ’ ಕತೆಯು ತನ್ನ ಲಘುತ್ವದಲ್ಲಿ (ಹಾಸ್ಯ ದರ್ಶನ) ‘ವಿಶ್ವ ಸುಂದರಿ’ ಯ ಕತೆಗಳ ಸಾಲಿಗೆ
ಸೇರುವಂಥದ್ದು. ಗೋವಿಂದಯ್ಯ ಎಂಬವನ ಏಳು ಬೀಳುಗಳ ಕತೆಯಿದು. ಅವನು ಭಿಕ್ಷೆ ಬೇಡುವ ಹಂತಕ್ಕೆ ಬಂದಿದ್ದಾಗ ಭಿಕ್ಷುಕಿಯೊಬ್ಬಳ ಅಂಗವಿಕಲ ಮಗನನ್ನು ಕಂಡು ಅವನನ್ನಿಟ್ಟುಕೊಂಡು ಹಣ ಸಂಪಾದಿಸುವ ಮಾರ್ಗ ಹುಡುಕುತ್ತಾನೆ. ಆಮೆಯ ಆಕಾರದ ಆ ಹುಡುಗನನ್ನು ಕೂರ್ಮ ನಾರಾಯಣನೆಂದು ಹಾಳು ಗುಡಿಯೊಂದರಲ್ಲಿ ಪ್ರತಿಷ್ಠಾಪಿಸಿ ದೇವರ ಅವತಾರವೆಂದು ಪ್ರಚಾರ ಮಾಡುತ್ತಾನೆ. ಅದೊಂದು ಯಾತ್ರಾ ಸ್ಥಳವೇ ಆಗುತ್ತದೆ. ಅವನು ಹೋಟೆಲೊಂದನ್ನು ಕೂಡ ಇಟ್ಟುಕೊಂಡು ಸಾಕಷ್ಟು ಶ್ರೀಮಂತನೂ ಆಗುತ್ತಾನೆ. ಈ ಕತೆಯಲ್ಲಿ ಕಾಣುವ ಸಮಾಜದ ವಿಡಂಬನೆಯು ‘ವಿಶ್ವ ಸುಂದರಿ’ ಸಂಕಲನದಲ್ಲಿ ಹೊಸ ಆಯಾಮವನ್ನು ಪಡೆದಿರುವುದನ್ನು ಕಾಣಬಹುದು.
‘ಮನುಷ್ಯನ ವಾಸನೆ’ ಸಂಕಲನದ ‘ತರಗೆಲೆ ಮತ್ತು ನೀರು ‘ ಕತೆಯಲ್ಲಿ ತೀರಾ ತಿರಸ್ಕಾರಕ್ಕೆ ಒಳಗಾಗಿ
ತರಗೆಲೆ ಎಂದು ಕರೆಯಿಸಿಕೊಳ್ಳುತ್ತಿದ್ದ ಹೆಂಗಸೊಬ್ಬಳ ಮಗ ದುಬೈಗೆ ಹೋಗಿ ಹಣ ಮಾಡಿಕೊಂಡು ಬಂದು ದೊಡ್ಡ ಬಂಗಲೆ ಕಟ್ಟಿಸಿದ ಮೇಲೆ ಜಾನಕಿಯಾಗಿ ಗೌರವಾನ್ವಿತಳಾಗುತ್ತಾಳೆ.

ಈ ರೀತಿ ಮೊದಲಿನ ಮೂರು ಸಂಕಲನಗಳಲ್ಲಿ ಗಟ್ಟಿಯವರು ಸಮಾಜದ ನಾಡಿ ಹಿಡಿದು ಪರೀಕ್ಷಿಸಿದ್ದಾರೆ.
ನಾಲ್ಕನೆಯ ಸಂಕಲನ ‘ವಿಶ್ವ ಸುಂದರಿ’ಯಲ್ಲಿ ಸಮಾಜದ ರೋಗವನ್ನು ತೋರಿಸಿಕೊಟ್ಟು ಇದನ್ನು
ನೋಡಿಕೊಳ್ಳುವ ರೀತಿಯನ್ನು ತೋರಿಸಿಕೊಟ್ಟಿದ್ದಾರೆ; ಹಸನ್ಮುಖದಿಂದ ಇದನ್ನು ಗುಣಪಡಿಸಬೇಕೇ ಹೊರತು ಸಿಟ್ಟು ಮಾಡಿಕೊಂಡಲ್ಲ ಎನ್ನುವುದನ್ನು ಸೂಚಿಸಿದ್ದಾರೆ.
ವಿಶ್ವ ಸುಂದರಿ : ಹಾಸ್ಯ ದರ್ಶನ ‘ವಿಶ್ವ ಸುಂದರಿ’ ಸಂಕಲನದಲ್ಲಿ ‘ದಯವಿಟ್ಟು ಕ್ಷಮಿಸಿ’, ‘ಪದ್ಮನಾಭ ಹೊಳ್ಳರ ಜನ್ಮ ಕುಂಡಲಿ’, ‘ನನ್ನ ಸಾವಿಗೆ ನಾನೇ ಹೊಣೆ’, ‘ಮುಖದೊಳಗಿನ ಮುಖ’, ‘ಒಂದು ಬುಟ್ಟಿ ಸೇಬು’, ‘ಮರವೇರಿದ ಸುಂದರಿ’,‘ಅನಿಕೇತನ’, ‘ಕೃಷ್ಣ ಭಟ್’, ‘ಕರಡಿ ಗಣಪತಿಯ ಮಹಿಮೆ’, ‘ಸುಂದ್ರಾಪುರದ ಸೂಳೆಯರು’, ‘ವಾಲ್ಮೀಕಿ ನಾರಾಯಣ’, ‘ಅನಾಮಧೇಯ’, ‘ಸ್ಥಿರ ಸೂರ್ಯ’, ‘ಸೋಲೆಂಬ ಗೆಲುವು’, ‘ವಿಶ್ವ ಸುಂದರಿ’ ಮತ್ತು ‘ಕುಸುಮ ಬಾಣ.’

ಈ ಸಂಕಲನದ ಕತೆಗಳ ಮೂಲಕ ಕೆ. ಟಿ. ಗಟ್ಟಿಯವರು ನಮ್ಮ ಸಮಾಜದ ಬಗ್ಗೆ ನೀಡಿರುವ
ಒಳನೋಟಗಳು ಅನನ್ಯವಾಗಿವೆ. ‘ಪದ್ಮನಾಭ ಹೊಳ್ಳರ ಜನ್ಮ ಕುಂಡಲಿ’, ‘ಕರಡಿ ಗಣಪತಿಯ ಮಹಿಮೆ’, ‘ನನ್ನ ಸಾವಿಗೆ ನಾನೇ ಹೊಣೆ’, ‘ಸ್ಥಿರ ಸೂರ್ಯ’, ‘ಅನಾಮಧೇಯ’ ಮುಂತಾದ ಕತೆಗಳು ನಮ್ಮ ಸಮಾಜದ ಒಳವ್ಯವಸ್ಥೆಯ ಬಗ್ಗೆ ಅರಿವನ್ನು ನೀಡಿ, ಅರಿವಿನ ಆನಂದವನ್ನು ಓದುಗರಿಗೆ ನೀಡುತ್ತವೆ. ಈ ಒಳವ್ಯವಸ್ಥೆಯನ್ನು ‘ಸಾಮಾಜಿಕ ರಾಜಕೀಯ’ (Social Politics ) ಎಂದು ಕರೆಯಬಹುದು. ಈ ರಾಜಕೀಯದಲ್ಲಿ ಕೆಲವರು ಸಮಾಜದ ಆಗುಹೋಗುಗಳನ್ನು ನಿಯಂತ್ರಿಸುತ್ತಾರೆ. ಇಂತಹ ಸಮಾಜವನ್ನು ನಿಯಂತ್ರಿಸುವ ಶಕ್ತಿ ಯಾರಿಗೆ ಯಾವ ಕಾರಣದಿಂದ ಒದಗುತ್ತದೆಂದು ಹೇಳುವಂತಿಲ್ಲ. ಉದಾಹರಣೆಗೆ ವಿಶ್ವ ಸುಂದರಿಗೆ ಅದು ಕೇವಲ ಸೌಂದರ್ಯದಿಂದ ಒದಗಬಹುದು. ಕೆಲವರಿಗೆ ಮಕ್ಕಳು ಅಮೆರಿಕದಲ್ಲಿರುವುದರಿಂದ ಒದಗಬಹುದು. ಇನ್ನು ಕೆಲವರು ಹೊಸ ದೇವರನ್ನೇ ಸೃಷ್ಟಿಸಿ (‘ಭೂಗತ’ ಸಂಕಲನದಲ್ಲಿ ಒಬ್ಬ ಕೂರ್ಮ ನಾರಾಯಣ ದೇವರನ್ನು ಸೃಷ್ಟಿಸಿದರೆ ಈ ಸಂಕಲನದಲ್ಲೊಬ್ಬ ಪ್ರೊಫೆಸರ್ ಕರಡಿ ಗಣಪತಿಯನ್ನು ಸೃಷ್ಟಿಸುತ್ತಾನೆ) ಜನರನ್ನು ತಮಗೆ ಬೇಕಾದಂತೆ ಕುಣಿಸುತ್ತಾರೆ. ಈ ಒಳವ್ಯವಸ್ಥೆ ಎಷ್ಟು ಅಸಂಗತವಾಗಿದೆಯೆಂದರೆ ಅದನ್ನು ಸರಿಯಾಗಿ ಗುರುತಿಸಿ ಸ್ಪಷ್ಟವಾಗಿ ತೋರಿಸಿಕೊಟ್ಟರೆ ಜನರಿಗೆ ನಗು ಬರುತ್ತದೆ. ತಾವೆಲ್ಲರೂ ಈ ವ್ಯವಸ್ಥೆಯ ಭಾಗವಾಗಿದ್ದು, ಅದನ್ನು
ಪೋಷಿಸುವವರಾಗಿದ್ದೂ ಜನ ವಿಸ್ಮಿತರಾಗುತ್ತಾರೆ. ಈ ವಿದ್ಯಮಾನಕ್ಕೆ ಒಂದು ರೂಪಕವಾಗಿ, ಈ ಸಂಕಲನದ ಮಹತ್ವದ ಕತೆಯಾದ ‘ನನ್ನ ಸಾವಿಗೆ ನಾನೇ ಹೊಣೆ’ ಕತೆಯನ್ನು ಗಮನಿಸಬಹುದು.
ಫಿಸಿಕ್ಸ್ನಲ್ಲಿ ಪಿಎಚ್.ಡಿ. ಮಾಡಿದ ಪರಮೇಶ್ವರನಿಗೆ ಈ ದೇಶದಲ್ಲಿ ಕೆಲಸ ಸಿಗುವುದಿಲ್ಲ. “ನನ್ನ ಸಾವಿಗೆ
ಭಾರತ ಸರಕಾರವೇ ಹೊಣೆ” ಎಂಬ ಚೀಟಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಾನೆ. ಮನಸ್ಸು ಬದಲಾಯಿಸಿ ಊರಿಗೆ ಬಂದು ದಿನಸಿ ಅಂಗಡಿ ಇಡುತ್ತಾನೆ. ಅದು ನಷ್ಟದಲ್ಲಿದ್ದಾಗ ಜಾತ್ರೆಯಲ್ಲಿ ಬೋಂಡ ತಯಾರಿಸಿ ಮಾರುತ್ತಾನೆ. ಬೋಂಡ ಜನಪ್ರಿಯವಾಗುತ್ತದೆ. ಅವನ ಗೆಳೆಯನೊಬ್ಬ ಅವನನ್ನು ಕೊಲ್ಲಿ ರಾಷ್ಟ್ರಕ್ಕೆ ವಿಜ್ಞಾನ ಶಿಕ್ಷಕನಾಗಿ ಕರೆದೊಯ್ಯುತ್ತಾನೆ. ಅಲ್ಲಿ ಯಜಮಾನನ ಸಣ್ಣ ಪ್ರಾಯದ ಹೆಂಡತಿ ಇವನನ್ನು ಪ್ರೀತಿಸಲಾರಂಭಿಸಿದಾಗ ನಿರಾಕರಿಸಿದ ಕಾರಣ ಕೆಲಸ ಕಳೆದುಕೊಂಡು ಊರಿಗೆ ಬರುತ್ತಾನೆ. ಊರಿನಲ್ಲಿ ಸರ್ಕ್ಯುಲೇಟಿಂಗ್ ಲೈಬ್ರೆರಿ ಇಡುತ್ತಾನೆ. ಕೊನೆಯಲ್ಲಿ ಯುವಕ ಮಂಡಲದವರಿಗಾಗಿ ಅವರ ಒತ್ತಾಯಕ್ಕೆ ನಾಟಕ ಬರೆದು ತಾನೇ ಅದರಲ್ಲಿ ಪಾತ್ರ ವಹಿಸುತ್ತಾನೆ. ಆ ನಾಟಕ ಹೀಗಿದೆ :
“ನಾಟಕದ ರಿಹರ್ಸಲ್ ಆರಂಭವಾದಾಗ, ಇದರ ತಲೆ ಬುಡ ನಮಗೆ ಸಿಗುತ್ತಿಲ್ಲ. ಇದು ಹಾಸ್ಯವೋ
ದುಃಖವೋ ಎಂದು ನಮಗರ್ಥವಾಗುತ್ತಿಲ್ಲ. ‘ನೀವಿಲ್ಲದೆ ಇದನ್ನು ಆಡಲು ಸಾದ್ಯವಿಲ್ಲ’ ಎಂದರು ಕಲಾ ಸಂಘದ ತರುಣರು ಮತ್ತು ತರುಣಿಯರು. ‘ದುಃಖ ಮತ್ತು ಹಾಸ್ಯ ಬೇರೆ ಬೇರೆಯಲ್ಲ, ಅವೆರಡು ಒಂದೆ’ ಎಂದು ಪರಮೇಶ್ವರನೆಂದಾಗ ಈತನ ತಲೆ ಕೆಟ್ಟಿದೆ ಎಂದೆನಿಸಿತವರಿಗೆ. …………… ‘ಆದ್ರೆ, ಸಾರ್, ಈ ಪಾತ್ರವನ್ನು ಮಾಡೋರು ನಮ್ಮಲ್ಲಿ ಯಾರೂ ಇಲ್ಲ. ನಮ್ಮಲ್ಲಿ ಎಲ್ರೂ ಮಾತನ್ನ ಕಂಠಪಾಠ ಮಾಡಿ ಒಪ್ಸೋರು ಮಾತ್ರ. ಆದ್ದರಿಂದ ಈ ನಾಟಕವನ್ನು ಆಡ್ಬೇಕಾದ್ರೆ ಮುಖ್ಯ ಪಾತ್ರವನ್ನು ನೀವೇ ಮಾಡ್ಬೇಕು ಸಾರ್’ ಎಂದು ಹಟ ಹಿಡಿದರು.

“ರಿಹರ್ಸಲಿನಿಂದ ರಿಹರ್ಸಲಿಗೆ ಬದಲಾಗುವ ನಾಟಕವನ್ನು ಕಂಡು ಇದೆಂಥಾ ನಾಟಕ. ಪ್ರದರ್ಶನದ ದಿನ
ಯಾವ ರೂಪ ತಾಳುವುದೊ ಎಂದು ಚಿಂತಿಸಿದರು ಕಲಾ ಸಂಘದ ತರುಣಿಯರು. ‘ಯಶಸ್ಸು ಅಪಯಶಸ್ಸಿನ ಬಗ್ಗೆ ಯಾವತ್ತೂ ಯೋಚಿಸಬೇಡಿ. ನಾವು ಮಾಡಬೇಕಾದ್ದು ಮಾಡಬೇಕಾದ್ದನ್ನು ಮಾಡುವುದು ಮಾತ್ರ. ಮಾಡುವುದಷ್ಟೇ ನಮ್ಮ ಧರ್ಮ. ಯಶಸ್ಸಿನ ಚಿಂತೆ ಲೋಕದ್ದು. ಲೋಕದ ಚಿಂತೆಯನ್ನು ಲೋಕಕ್ಕೆ ಬಿಡಿ. ನಮ್ಮ ಯಶಸ್ಸೆಂಬುದು ನಾವು ಮಾಡಬೇಕೆಂದಿರುವುದನ್ನು ಮಾಡಿ ಮುಗಿಸುವುದರಲ್ಲಿ ಮಾತ್ರ’ ಎಂದ ಪರಮೇಶ್ವರ.

“ಒಂದು ಭಾರೀ ಗಾತ್ರದ ತಕ್ಕಡಿಯ ಒಂದು ತಟ್ಟೆಯಲ್ಲಿ ಪರಮೇಶ್ವರ ಕುಳಿತಿದ್ದಾನೆ. ಇನ್ನೊಂದು ತಟ್ಟೆ
ಖಾಲಿಯಾಗಿದ್ದರೂ ತಟ್ಟೆಗಳು ಸಮತೋಲನ ಸ್ಥಿತಿಯಲ್ಲಿರುವ ಅದ್ಭುತವನ್ನು ಕಂಡು ಜನರು
ಆಶ್ಚರ್ಯಪಡುತ್ತಿರುವಾಗ, ಪರಮೇಶ್ವರ ತಟ್ಟೆಯಿಂದ ಜಿಗಿದು ಈ ಕಡೆ ಬಂದ. ಆ ಮೇಲೆ ಒಂದೂವರೆ ಗಂಟೆ ಜನರಿಗೆ ಅವಿರತ ಎಂಬಂತೆ ನಗುವ ಮತ್ತು ಅಳುವ ಒಂದೇ ಕೆಲಸವಾಯಿತು.”
“ಕೊನೆಗೆ ‘ನನ್ನ ಸಾವಿಗೆ ನಾನೇ ಹೊಣೆ’ ಎಂದು ದೊಡ್ಡ ಅಕ್ಷರಗಳಲ್ಲಿ ಬರೆದು ಒಂದು ಮರದ ಕಾಂಡದ
ಮೇಲಿರಿಸಿ, ಒಂದು ಮೊಳೆಯನ್ನು ಅದರ ಮೇಲಿಟ್ಟು ಕಲ್ಲಿನಿಂದ ಬಡಿದ. ಕಲ್ಲಿನ ಹೊಡೆತ ಬೆರಳಿನ ಮೇಲೆ ಬಿದ್ದು ಅಯ್ಯೊ ಎಂದು ಚೀರಿದ. ಕೈಬೆರಳನ್ನು ಚೀಪಿ ಚೇತರಿಸಿಕೊಂಡಾಗ ಮರಕ್ಕೆ ಆದ ಗಾಯ ಗಮನಕ್ಕೆ ಬಂದು ತನ್ನ ಗಾಯವನ್ನು ಮರೆತು ಮರದ ಗಾಯವನ್ನು ಸವರಿದ. ಮರವನ್ನು ಚುಂಬಿಸಿದ. ಮರದ ಮೇಲೆ ಬೇಡ ಎಂದು ನಿರ್ಧರಿಸಿ, ಕಾಗದವನ್ನು ನೆಲದ ಮೇಲೆ ಇರಿಸಿ, ಅದರ ಮೇಲೆ ಒಂದು ಕಲ್ಲಿರಿಸಿದ. ಬಂಡೆಯನ್ನೇರಿ ಕ್ಷಣ ಕಾಲನಿಂತು ಕೆಳಗೆ ಧುಮುಕಿದ. ಒಂದು ದೀರ್ಘವಾದ ಚೀರಾಟ.”
ಒಂದು ನಿಮಿಷದ ನಂತರ ಪ್ರಪಾತದಿಂದ ಮೇಲಕ್ಕೆ ನಿಧಾನವಾಗಿ ಪ್ರೇತ ಎದ್ದು ಬಂತು. ಬೇರೆಯೇ
ಧ್ವನಿಯಲ್ಲಿ ಮಾತಾಡಿತು. ‘ನನ್ನ ಸಾವಿಗೆ ನಾನು ಕಾರಣ ಅಲ್ಲ ಎಂಬ ಸತ್ಯವನ್ನು ತಿಳಿಸುವುದಕ್ಕೋಸ್ಕರ ನಾನು ವಾಪಾಸು ಬರಬೇಕಾಯಿತು’ ಎಂದು ಮಾತು ಆರಂಭಿಸಿತು. ಪ್ರೇತದ ಒಂದೊಂದು ಮಾತಿಗೂ ಜನ ಬಿದ್ದು ಬಿದ್ದು ನಕ್ಕರು. ಕಣ್ಣೀರು ಹರಿಸುತ್ತಾ ನಕ್ಕರು. ‘ಇಲ್ಲ, ಇನ್ನು ನಗಲು ಸಾಧ್ಯವಿಲ್ಲ’ ಎಂದು ಹೇಳುತ್ತಾ ನಕ್ಕರು. ಒಂದು ಕ್ಷಣ ಸ್ತಬ್ಧತೆ. ಮತ್ತೆ ನಗು. ಮತ್ತೆ ಸ್ತಬ್ಧತೆ. ಮತ್ತೆ ನಗು. ಪ್ರೇತದ ದೃಷ್ಟಿಗೆ, ಜನರು ನಗುವಾಗ ಬಿಸಿ ಬೋಂಡಗಳಂತೆಯೂ ಅಳುವಾಗ ತಣ್ಣಗಿನ ಬೋಂಡಗಳಂತೆಯೂ ಕಾಣಿಸಿದರು. ಪರಮೇಶ್ವರ ಒಮ್ಮೆ ಬಿಸಿ ಮಾಡಿದ. ಒಮ್ಮೆ ತಣ್ಣಗೆ ಮಾಡಿದ. ಬೋಂಡದ ಚರ್ಮ ಬೇಡವೆಂದಾದರೆ ಅದನ್ನು ಕಿತ್ತೆಸೆದು ಒಳಗಿನ ತಿರುಳನ್ನು ಹೇಗೆ ಸವಿಸವಿದು ತಿನ್ನುವುದೆಂದು ತೋರಿಸಿಕೊಟ್ಟ. ಮನುಷ್ಯ ಹೇಗೆ ಬೋಂಡವಾಗುತ್ತಾನೆ, ಬೋಂಡ ಹೇಗೆ ಮನುಷ್ಯ ಆಗ್ತದೆ, ಮನುಷ್ಯನ ಕರ್ಮ ಹೇಗೆ ಬೋಂಡದ ಮರ್ಮವಾಗಿ ಬದಲಾಗುತ್ತದೆ, ಅವನ ಅಹಂಕಾರ ಹೇಗೆ ಹೊರಗಿನ ಚರ್ಮವಾಗಿ ಬೆಳೆಯುತ್ತದೆ ಎಂದು ವಿಶದೀಕರಿಸಿದ. ಅವನ ವಿಶದೀಕರಣವನ್ನು ಕೇಳಿ ಜನ ಮತ್ತಷ್ಟು ನಕ್ಕರು. ಮತ್ತಷ್ಟು ಕಣ್ಣೀರು ಸುರಿಸಿದರು.

“ಭಾರೀ ಗಾತ್ರದ ತಕ್ಕಡಿ ಮರದ ಮೇಲಿಂದ ತೂಗಾಡುತ್ತಲೇ ಇತ್ತು. ಐಂದ್ರಜಾಲಿಕನ ಪೋಷಾಕಿನಲ್ಲಿರುವ
ಮೌನಿ – ಸೂತ್ರಧಾರ ತಕ್ಕಡಿಯ ಒಂದು ತಟ್ಟೆಯಲ್ಲಿ ಒಂದು ದೊಡ್ಡ ಬಲೂನನ್ನಿರಿಸಿದ. ಪ್ರೇತ ಹೋಗಿ
ಇನ್ನೊಂದು ತಟ್ಟೆಯಲ್ಲಿ ಕುಳಿತಿತು. ಎರಡು ತಟ್ಟೆಗಳೂ ಒಂದೇ ಮಟ್ಟದಲ್ಲಿ ನಿಂತ ಅದ್ಭುತವನ್ನು ಕಂಡು ಜನ ಬೆರಗಾದರು. ಮರುಕ್ಷಣ ಬಲೂನು ಡಬ್ಬೆಂದು ಒಡೆಯಿತು. ಕತ್ತಲೆ, ಬೆಳಕು ಬರುವಾಗ ಖಾಲಿ ತಟ್ಟೆ ಅತ್ಯಂತ ಕೆಳಗಿದೆ. ಪ್ರೇತ ಕುಳಿತ ತಟ್ಟೆ ಅತ್ಯಂತ ಮೇಲಿದೆ. ಪ್ರೇತದ ಭೂತಕಾಲವನ್ನು ಪೂರ್ತಿ ಮರೆತು ಜನರು ಬೆರಗಾಗಿ ನೋಡಿದರು. ಪ್ರೇತ ಕುಳಿತಲ್ಲಿಂದಲೇ ಕೂಗಿ ಹೇಳಿತು ‘ಇದು ಅಂತ್ಯವಲ್ಲ, ಇದು ಆರಂಭ. ನಾಳೆ ಮತ್ತೆ ಇಲ್ಲಿ ಇದು ಇದೇ ರೀತಿ ಆರಂಭವಾಗುತ್ತದೆ.’ ಪ್ರೇತ ಕುಳಿತ ತಟ್ಟೆ ನಿಧಾನವಾಗಿ ಕೆಳಗೆ ಬಂತು. ಖಾಲಿ ತಟ್ಟೆಗೆ ಸಮಾನ ಮಟ್ಟದಲ್ಲಿ ನಿಂತಿತು. ಜನ ಹೋ ಎಂದು ನಕ್ಕು ಎದ್ದು ನಿಂತರು. ರಂಗದ ಮೇಲೆ ಬೆಳಕಾರಿತು.”

ಕೆ.ಟಿ. ಗಟ್ಟಿಯವರ ಈ ಸಂಕಲನದ ಮುಖ್ಯ ಕತೆಗಳ ದರ್ಶನವೂ ಇದೇ. ಅವುಗಳು ಉಂಟು ಮಾಡುವ
ಪರಿಣಾಮವೂ ಇಂಥದ್ದೇ.
ಕೆ. ಟಿ. ಗಟ್ಟಿಯವರು ಕತೆಗಾರರಾಗಿ ಮಾಡಿರುವ ಸಾಧನೆ ಕೂಡ ಬಹಳ ಮುಖ್ಯವಾದುದು. ಲ್ಯಾಟಿನ್
ಅಮೆರಿಕದ ಕತೆಗಾರರು ತಮ್ಮ ದೇಶಗಳಲ್ಲಿರುವ ದಾರಿದ್ರ್ಯ ರಾಜಕೀಯ ಅಸ್ಥಿರತೆ ಮುಂತಾದವುಗಳ ವಿರುದ್ಧ ಮನುಷ್ಯನ ಘನತೆಯನ್ನು ಎತ್ತಿ ಹಿಡಿಯಲು ಮ್ಯಾಜಿಕ್ ರಿಯಲಿಸಂ ಮಾದರಿಯಲ್ಲಿ ಕತೆಗಳನ್ನು ಬರೆದರು.
ಗಟ್ಟಿಯವರು ನಮ್ಮ ವಿಶಿಷ್ಟವಾದ ಸಾಮಾಜಿಕ, ರಾಜಕೀಯ, ಜನರ ಭೋಳೆತನ – ಧೂರ್ತತೆ, ಹಣದ
ಆರಾಧನೆ, ದೇವರ ಬಗ್ಗೆ ವಿಚಾರ ಶೂನ್ಯ ಶರಣು – ಇವುಗಳನ್ನೆಲ್ಲ ಓದುಗರ ಅರಿವಿಗೆ ತಂದುಕೊಡಲು ಹಾಸ್ಯ ದರ್ಶನದ ಕತೆಗಳನ್ನು ನೀಡಿದ್ದಾರೆ. ಇವುಗಳು ಜಗತ್ತಿನ ಶ್ರೇಷ್ಠ ಸಣ್ಣ ಕತೆಗಳ ಸಾಲಿನಲ್ಲಿ ನಿಲ್ಲುವಂಥವುಗಳು.

ಈ ಕತೆಯಲ್ಲಿ ನಮ್ಮ ದೇಶದ ವ್ಯವಸ್ಥೆ / ಸರಕಾರಗಳಿಗೆ ಸಂಕೇತವಾಗಿ ವಿಶ್ವವಿದ್ಯಾಲಯವಿದ್ದರೆ, ಸಮಾಜದ ಪ್ರತಿನಿಧಿಯಾಗಿ ಗುಡಿ, ಪೂಜಾರಿ, ಭಕ್ತರು, ಕಟ್ಟಡದ ಕೆಲಸಗಾರರು ಇವರೆಲ್ಲ ಇದ್ದಾರೆ. ಇಲ್ಲಿ ವಂಚಕರನ್ನು ನಿಯಂತ್ರಿಸುವ ಯಾವುದೇ ಪರಮೋಚ್ಛ ಅಧಿಕಾರವಿಲ್ಲ. ಆಗು ಹೋಗುಗಳ ಮೇಲೆ ಯಾರಿಗೂ ನಿಯಂತ್ರಣವಿಲ್ಲ. ಹಾಗೂ ಯಾವುದೇ ಫಲಪ್ರದವಾದ ಕೆಲಸ ಇಲ್ಲಿ ನಡೆಯುವುದಿಲ್ಲ. ನಡೆಯುವ ಕೆಲಸಗಳಿಗೆ ಕೂಡ ನಿಜವಾಗಿ ನೋಡಿದರೆ ಯಾವುದೇ ಅರ್ಥವಿರುವುದಿಲ್ಲ. ಉದಾಹರಣೆಗೆ ಮಕ್ಕಳಿಲ್ಲದ ನುಂಗಲಿ ಕಟ್ಟಿಸುವ ಮನೆಗೆ ಹತ್ತು ಬೆಡ್‌ರೂಮುಗಳಿರುತ್ತವೆ. ಆಕ್ಸ್ಫರ್ಡಿನಲ್ಲಿ ಪ್ಲಾಸ್ಮಾ ಫಿಸಿಕ್ಸ್ನಲ್ಲಿ ಡಾಕ್ಟರೇಟ್ ಮಾಡಿದ ಮನ್ಸುಖಲಾಲ್ ಎಂಬವ ಬರೆದ ‘ವಾಸ್ತು ದ್ವಾರ’ ಪುಸ್ತಕಗಳು ಕೋಟಿಗಟ್ಟಲೆ ಮಾರಾಟವಾಗಿವೆ. ನುಂಗಲಿಯ ಶಿಷ್ಯರಿಬ್ಬರ ವರ್ಣನೆ ಹೀಗಿದೆ : “ಒಂದು ಕಡೆ ಅತ್ತಿಗೆರೆ ಅಂಗಾರ ಛಲಬಿಡದ ತ್ರಿವಿಕ್ರಮನಂತೆ ಭೌತಶಾಸ್ತ್ರದ ಹೆಣವನ್ನು ಮತ್ತೆ ಮತ್ತೆ ಹೆಗಲ ಮೇಲೆ ಹೇರಿಕೊಳ್ಳುತ್ತಿದ್ದರೆ, ಇನ್ನೊಂದು ಕಡೆ ಆಕಾಶಗೌಡ ಭೌತಶಾಸ್ತ್ರದ ಶವದೊಳಗೆ ಸೇರಿಕೊಂಡ ಬೇತಾಳದಂತೆ ವರ್ತಿಸುತ್ತಿದ್ದನು.”
ನಮ್ಮ ದೇಶದ, ನಮ್ಮ ಸಮಾಜದ ಪ್ರಸ್ತುತ ಅವಸ್ಥೆಯನ್ನು ಇಂತಹ ಹಾಸ್ಯ ದರ್ಶನವನ್ನು ನೀಡಿರುವುದು
ಕೆ.ಟಿ.ಗಟ್ಟಿಯವರ ‘ವಿಶ್ವ ಸುಂದರಿ’ ಸಂಕಲನದ ಕತೆಗಳ ಸಾಧನೆಯಾಗಿದೆ. ಈ ಸಂಕಲನದಲ್ಲಿ ಮೇಲೆ
ಉಲ್ಲೇಖಿಸಿದ ಕತೆಗಳಲ್ಲದೆ ‘ವಾಲ್ಮೀಕಿ ನಾರಾಯಣ’, ‘ಅನಾಮಧೇಯ’, ‘ಪದ್ಮನಾಭ ಹೊಳ್ಳರ ಜನ್ಮ ಕುಂಡಲಿ’ ಮುಂತಾದ ಉತ್ತಮ ಕತೆಗಳಿದ್ದು ಅವು ನಮ್ಮ ಸಮಾಜದ ಒಳವ್ಯವಸ್ಥೆಗಳನ್ನು ಬೇರೆ ಬೇರೆ ರೀತಿಗಳಲ್ಲಿ ಓದುಗರ ಅರಿವಿಗೆ ತಂದುಕೊಡುತ್ತವೆ.

ಕೆ.ಟಿ.ಗಟ್ಟಿಯವರ ಬರಹಗಳ ವೈಶಿಷ್ಟ್ಯದ ಪ್ರಖರ ವೈಚಾರಿಕತೆ, ವಿಷಯದ ಆಳ ದರ್ಶನ ಮಾಡಿಸುವ
ತರ್ಕ, ಹಾಸ್ಯ ಪ್ರಜ್ಞೆ ಇಂತಹ ಗುಣಗಳು ಅವರ ಕತೆಗಳ ಆಕರ್ಷಣೆಗೆ ತಮ್ಮ ಪಾಲನ್ನು ನೀಡಿವೆ. ಗಟ್ಟಿಯವರು ಕಾದಂಬರಿಕಾರರಾಗಿಯೇ ಹೆಚ್ಚು ಜನಪ್ರಿಯರಾಗಿರುವುದರಿಂದ ಅವರು ಕನ್ನಡದ ಒಬ್ಬರು ಬಹುಮುಖ್ಯ ಕತೆಗಾರರು ಅನ್ನುವ ಅಂಶ ಫಕ್ಕನೆ ಗೋಚರವಾಗದಿರುವ ಸಾಧ್ಯತೆಯಿದೆ. ಶೈಕ್ಷಣಿಕ ವಿಚಾರಗಳು, ವೈಚಾರಿಕ ಲೇಖನಗಳು, ನಾಟಕಗಳು – ಹೀಗೆ ಇನ್ನೂ ಹಲವು ಕ್ಷೇತ್ರಗಳಿಗೆ ತಮ್ಮ ಕೊಡುಗೆ ನೀಡಿರುವ ಗಟ್ಟಿಯವರ ಆಯಾ ಪ್ರಕಾರದ ಕೃತಿಗಳನ್ನು ಒಟ್ಟಾಗಿ ಅಧ್ಯಯನ ಮಾಡಿದಾಗ ಅವರ ಕೊಡುಗೆಯ ಸ್ವರೂಪ ಸ್ಪಷ್ಟವಾಗುತ್ತದೆ.


ಡಾ. ಬಿ. ಜನಾರ್ದನ ಭಟ್