- ಸಾಧಕರು ಸಾಮ್ರಾಜ್ಯ ಕಟ್ಟಬಾರದು- ವೈಲ್ಡ್ ವೈಲ್ಡ್ ಕಂಟ್ರಿ - ನವೆಂಬರ್ 5, 2022
- ವ್ಹಾ ರಿಷಭ್ ವ್ಹಾ – ಕಾಂತಾರಕೆ ವ್ಹಾ ವ್ಹಾ - ಅಕ್ಟೋಬರ್ 8, 2022
- ಚೇರ್ಮನ್ ಅವರ ಕುರಿತ ಪುಸ್ತಕ ಮತ್ತು ನಾನು - ಆಗಸ್ಟ್ 22, 2022
ನಾಡಿನ ಮಹತ್ವದ ಸಾಹಿತಿ ಗೀತಾ ನಾಗಭೂಷಣ ಅವರು ಅನೇಕ ಹೊಸ ಪ್ರಯೋಗಗಳ ಆದ್ಯರು.
ಹೈದ್ರಾಬಾದ್ ಕರ್ನಾಟಕದ ಬರಹಗಾರರು ಕನ್ನಡ ಕಥಾ ಲೋಕಕ್ಕೆ ಅಪರೂಪದ ಕಾಣಿಕೆ ನೀಡಿದ್ದಾರೆ.
ಶಾಂತರಸರು,ಕುಂವೀ,ಅಮರೇಶ ನುಗಡೋಣಿ ಹೀಗೆ ಮೂರು ತಲೆಮಾರಿನ ನೂರಾರು ಕತೆಗಾರರನ್ನು ಹೆಸರಿಸಬಹುದು.
ಕತಾ ಹಂದರ,ಜೀವನಾನುಭವ,ದಿಟ್ಟತನದ ಪಾತ್ರಗಳು ಮತ್ತು ಸಮರ್ಥ ಭಾಷಾ ಬಳಕೆಗೆ ಗೀತಾ ನಾಗಭೂಷಣ ಅಗ್ರಗಣ್ಯರು.
ನೋವು,ಅಪಮಾನ,ಹಿಂಸೆ ಮತ್ತು ಹೆಣ್ಣಿನ ಶೋಷಣೆಯನ್ನು ಅವರ ಪಾತ್ರಗಳು ಹೈದ್ರಾಬಾದ್ ಕರ್ನಾಟಕದ ನಿಜಾಮ ಪ್ರದೇಶದ ಅಸಹಾಯಕ ಹೆಣ್ಣು ಮಕ್ಕಳಂತೆ ಸುಮ್ಮನೆ ಸಹಿಸುವುದಿಲ್ಲ.
ಇವರು ಸೃಷ್ಟಿಸಿದ ಮಹಿಳೆಯರು ತಮ್ಮ ಪಾಡಿಗೆ ತಾವು ‘ಬದುಕು’ ಹಸನ ಮಾಡಿಕೊಳ್ಳಲು ಯಶಸ್ವಿಯಾಗುತ್ತಾರೆ.
ಗಂಡಿನ ಅತಿರೇಕದ ಕಾಮುಕತೆ, ವಿಕಾರಗಳ ಒತ್ತಡಗಳನ್ನು ಸಾತ್ವಿಕವಾಗಿ ಅಲ್ಲ, ಕೊಂಚ ಒರಟಾಗಿ ಪ್ರತಿಭಟಿಸುತ್ತಾರೆ. ಅದೇ ಅವರ ವಿಶೇಷತೆ.
ಮಹಿಳಾ ಕಾದಂಬರಿಕಾರರು ತುಂಬಾ ಮೃದುವಾದ ಭಾಷೆ ಬಳಸಿ ಪುರುಷರ ದಬ್ಬಾಳಿಕೆಯನ್ನು ಪ್ರತಿಭಟನೆ ಮಾಡುತ್ತಿದ್ದರು.
ಆದರೆ ಗೀತಾ ಅವರು ಲಂಕೇಶ್ ಪತ್ರಿಕೆ ಮೂಲಕ ಮೊಟ್ಟ ಮೊದಲ ಬಾರಿಗೆ ತೀವ್ರ ಮತ್ತು ತೀಕ್ಷ್ಣವಾದ ಭಾಷಾ ಪ್ರಯೋಗ ಮಾಡಿ ಇಡೀ ನಾಡು ಹುಬ್ಬೇರಿಸುವಂತೆ ಮಾಡಿ,ಇತರ ಮಹಿಳಾ ಬರಹಗಾರರ ಧೈರ್ಯ ಹೆಚ್ಚಿಸಿದರು.
ಕೇವಲ ಪುರುಷರು ಮಾತ್ರ ಇಂತಹ ಭಾಷೆ ಬಳಸಲು ಸಾಧ್ಯ ಎಂದು ಭಾವಿಸಿದವರ ನಂಬಿಕೆ ಹುಸಿ ಗೊಳಿಸಿದರು.
ಮುಕ್ತ ದೇಸಿ ಭಾಷೆಯ ಮೂಲಕ ಅವರ ಸ್ತ್ರೀ ಪಾತ್ರಗಳು ನಾಡಿನ ಶಿಷ್ಟ ವಿಮರ್ಶಕರನ್ನು ಬೆಚ್ಚಿ ಬೀಳಿಸಿದವು.
ಗೀತಕ್ಕ ಅವರ ಧೈರ್ಯ ಮತ್ತು ಎದೆಗಾರಿಕೆ ಇಡೀ ಮಹಿಳಾ ಸಮುದಾಯದ ಆತ್ಮವಿಶ್ವಾಸ ಹೆಚ್ಚಿಸಿ ತನ್ನದೇ ಆದ ಗ್ರಾಮ ಸಂಸ್ಕೃತಿಯ ದೇಸಿ ಮಾರ್ಗ ಸೃಷ್ಟಿ ಮಾಡಿತು.
ಅದಕ್ಕಾಗಿ ಕನ್ನಡದ ಎಲ್ಲಾ ಮಹಿಳೆಯರು ಅವರಿಗೆ ಗೌರವ ಸಲ್ಲಿಸಬೇಕು.
ಅವರ ಕಾದಂಬರಿ “ಬದುಕು” ಹೈದ್ರಾಬಾದ್ ಕರ್ನಾಟಕ ಮಹಿಳೆಯರ ಬದುಕಿನ ತಲ್ಲಣ ಮತ್ತು ತವಕಗಳ ಪ್ರತಿಬಿಂಬ.
ನಾಡಿನ ಇತರ ಪ್ರಮುಖ ಪ್ರದೇಶಗಳ ಮಹಿಳೆಯರ ಸ್ಥಿತಿಗತಿಗಳಿಗಿಂತ ಹೈದ್ರಾಬಾದ್ ಕರ್ನಾಟಕ ಮಹಿಳೆಯರ ಪರಿಸ್ಥಿತಿ ತುಂಬಾ ಚಿಂತಾಜನಕ.
ಪುರುಷ ಪ್ರಧಾನ ವ್ಯವಸ್ಥೆಯ ಜೊತೆಗೆ ಮಹಿಳೆಯನ್ನು ಕೇವಲ ಭೋಗದ ವಸ್ತು ಮತ್ತು ಮಕ್ಕಳನ್ನು ಹೆರುವ ಯಂತ್ರ ಎಂದು ಭಾವಿಸುವುದರೊಂದಿಗೆ ಕೀಳಾಗಿ ಕಾಣಲಾಗುತ್ತದೆ.
‘ಇದನ್ನು ಅನುಭವಿಸಿದವರು ಮಾತ್ರ ನಿರೂಪಿಸಬಹುದು’ ಎಂಬುದನ್ನು ಗೀತಕ್ಕ ಗ್ರಹಿಸಿದರು.
ಇತರ ಮಹಿಳಾ ಬರಹಗಾರರಿಗೆ ಅದು ಗೊತ್ತಿತ್ತಾದರೂ ಹೊರ ಹಾಕುವ ಮತ್ತು ಬರೆಯುವ ತಾಕತ್ತು ಇರಲಿಲ್ಲ.
ಆ ತಾಕತ್ತನ್ನು ಇಲ್ಲಿನ ಸಾಹಿತ್ಯ ಲೋಕ ಒದಗಿಸಿಕೊಟ್ಟಿರಲಿಲ್ಲ ಎಂದು ಹಲುಬದೇ ತಮ್ಮ ಧ್ವನಿಯನ್ನು ತಾವೇ ಗಟ್ಟಿ ಮಾಡಿಕೊಂಡರು.
ಮಹಿಳೆ ಆರ್ಥಿಕವಾಗಿ, ಸಾಮಾಜಿಕ,ಮಾನಸಿಕವಾಗಿ ಮತ್ತು ಲೈಂಗಿಕವಾಗಿ ಮುಕ್ತವಾಗಲೆಂದು ಬಯಸಿ, ತಮ್ಮ ಎಲ್ಲ ಗಟ್ಟಿಗಿತ್ತಿ ಪಾತ್ರಗಳ ಮೂಲಕ ಜೀವ ತುಂಬಿದರು.
ಅಳು ಮುಂಜಿ ಹೆಣ್ಣುಗಳ ಗೋಳಾಟದ ಕಣ್ಣೀರ ಧಾರೆಯ ಅಗ್ಗದ ಜನಪ್ರಿಯತೆಯಿಂದ ಬದಲಾವಣೆ ಅಸಾಧ್ಯ ಎಂದು ಅವರಿಗೆ ಗೊತ್ತಿತ್ತು. ಅವರ ಪಾತ್ರಗಳು ಕಲ್ಯಾಣ ಶರಣರ ಕಾಲದ ಮಹಿಳಾ ಸ್ವಾತಂತ್ರ್ಯ ಮರು ಸ್ಥಾಪನೆ ಮಾಡಿದವು.
ಕೆಳಸ್ಥರದ,ದಮನಿತರ ಸಂಕಷ್ಟಗಳನ್ನು ಅನುಭವಿಸಿ ಅರ್ಥ ಮಾಡಿಕೊಂಡಿದ್ದರು.
ಶಿಕ್ಷಣ ಮತ್ತು ಉದ್ಯೋಗದ ಮೂಲಕ ಸಮಸ್ಯೆಗಳನ್ನು ಹೊಡೆದೋಡಿಸುವ ಜನಪರ ಜಾಗೃತಿಯನ್ನು ಪ್ರಾಧ್ಯಾಪಕರಾಗಿ, ಬರಹಗಾರರಾಗಿ ನಿರೂಪಿಸಿ,
ಸಾಂಸ್ಕೃತಿಕ ಲೋಕದ ಎಲ್ಲ ಅಧಿಕಾರ ಮತ್ತು ಗೌರವಗಳನ್ನು ಕೇವಲ ಪ್ರತಿಭೆಯಿಂದ ಪಡೆದುಕೊಂಡರು.
ಅನೇಕ ಪುರಸ್ಕಾರ ಮತ್ತು ಗೌರವಗಳ ಜೊತೆಗೆ ಗದುಗಿನಲ್ಲಿ ಜರುಗಿದ 76 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಹೆಮ್ಮೆ.
ಕೊನೆ ಮಾತು- ಅಂದು ಜರುಗಿದ ಸಾಹಿತ್ಯ ಸಮ್ಮೇಳನದ ಮೇಲುಸ್ತುವಾರಿಯನ್ನು ಯಾವುದೇ ಸ್ಥಾನದ ಬಲವಿಲ್ಲದೆ ಆಯೋಜಿಸಿದವರಲ್ಲಿ ನಾನೂ ಒಬ್ಬ.
ಸಮ್ಮೇಳನ ಮುಗಿಯುವ ಒಂದು ದಿನ ಮೊದಲು ಹೈದ್ರಾಬಾದ್ ಕರ್ನಾಟಕದ ಜನಪ್ರಿಯ ಲೇಖಕಿಯೊಬ್ಬರು ಗೀತಕ್ಕ ಅವರ ವೈದ್ಯಕೀಯ ಚಿಕಿತ್ಸೆಗಾಗಿ ನೆರವಿನ ಅಗತ್ಯವಿದೆ ಎಂಬ ವಿಷಯವನ್ನು ನನ್ನ ಮುಂದೆ ಪ್ರಸ್ತಾಪ ಮಾಡಿದರು.
ಹಾರ,ತುರಾಯಿ,ಶಾಲು,ನಂಮಾನ ಸಾಹಿತಿಗಳ ಪಾಲಿನ ನಿರುಪಯುಕ್ತ ವಸ್ತುಗಳು ಎಂದು ಅರಿತಿದ್ದ ನಾನು ಆಗ ಆತ್ಮೀಯರಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರು,ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಮನವೊಲಿಸಲು ಯಶಸ್ವಿಯಾದೆ.
ವಿಷಯವನ್ನು ಕೊನೆತನಕ ಎಲ್ಲೂ ಬಾಯಿ ಬಿಡದೆ ”ಹನ್ನೊಂದು ಲಕ್ಷದ,ಹನ್ನೊಂದು ಸಾವಿರದ ಹನ್ನೊಂದು ರೂಪಾಯಿಗಳ” ಬಹುದೊಡ್ಡ ಮೊತ್ತದ ಗೌರವ ನೀಡಲು ನಿರ್ಧರಿಸಿದ್ದು ಸಾಹಿತ್ಯ ಲೋಕದಲ್ಲಿ ಐತಿಹಾಸಿಕ ದಾಖಲೆ. (ಅದಕ್ಕೆ ನಾನು ಕಾರಣನಾದರೂ ಈತನಕ ನನ್ನ ಒಡಲೊಳು ಅಡಗಿದ್ದ ಸತ್ಯವನ್ನು ಈಗ ಯಾಕೋ ಹಂಚಿಕೊಳ್ಳಬೇಕೆನಿಸಿತು.)
‘ಅದು ಗೀತಾ ನಾಗಭೂಷಣರ ಬದುಕಿನ ಹೋರಾಟಕ್ಕೆ ಸಂದ ಗೌರವವೂ ಹೌದು’
ಹೆಚ್ಚಿನ ಬರಹಗಳಿಗಾಗಿ
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ
ಕರ್ಪೂರಿ ಠಾಕೂರ್
ಕನ್ನಡ ನಾಟ್ಯ ರಂಗ