ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗಟ್ಟಿಯವರಿಗೆ ನುಡಿ ನಮನ

ಸುಬ್ರಾಯ ಚೊಕ್ಕಾಡಿ
ಇತ್ತೀಚಿನ ಬರಹಗಳು: ಸುಬ್ರಾಯ ಚೊಕ್ಕಾಡಿ (ಎಲ್ಲವನ್ನು ಓದಿ)

ನವೋದಯ ಹಾಗೂ ನವ್ಯದ ನಡುವಿನ ಕೊಂಡಿಯ ಹಾಗಿದ್ದ ಹಿರಿಯ ಗಟ್ಟಿ ಲೇಖಕ ಕೂಡ್ಲು ತಿಮ್ಮಪ್ಪ ಗಟ್ಟಿಯವರು ನಿರ್ಗಮಿಸಿದ್ದಾರೆ.ಜನಪ್ರಿಯತೆಯ ರೀತಿಯನ್ನು ಬಿಟ್ಟುಕೊಡದೆ ಆ ಫಾರ್ಮ್ ನಲ್ಲೇ ದಟ್ಟ ವೈಚಾರಿಕತೆಯನ್ನು ಸಂಯೋಗಗೊಳಿಸಿ ಬರೆದ ಅವರ ಕಥೆ,ಕಾದಂಬರಿ ಹಾಗೂ ವೈಚಾರಿಕ ಬರೆಹಗಳು ಕರ್ನಾಟಕದ ಎರಡು ತಲೆಮಾರಿನ ಓದುಗರನ್ನು ಆಕರ್ಷಿಸಿದ್ದು ಈಗ ಇತಿಹಾಸ.

ಕೆಲವು ವರ್ಷಗಳ ಹಿಂದಿನ ಮಾತು. ಉಜಿರೆ ಕಾಲೇಜಲ್ಲಿ ಒಂದು ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ.ವೈದೇಹಿಯವರೂ ಬಂದಿದ್ದರು.ಕಾರ್ಯಕ್ರಮ ಮುಗಿದ ಮೇಲೆ ವೈದೇಹಿಯವರು ಮಡಿಕೇರಿಗೆ ಹೋಗುವವರಿದ್ದರು.”ಬನ್ನಿ,ಒಟ್ಟಿಗೆ ಹೋಗೋಣ.ನಿಮ್ಮನ್ನು ಸುಳ್ಯದಲ್ಲಿ ಬಿಟ್ಟರಾಯ್ತಲ್ಲಾ”ಅಂತ ಹೇಳಿದರು.ಹಾಗೆ ಹೊರಟವರು ಮೊದಲು ಗಟ್ಟಿಯವರ “ವನ ಸಿರಿ”ಗೆ ಹೋದೆವು.ಅವರಿಗೂ ನಮಗೂ ಈ ಭೇಟಿ ಅನಿರೀಕ್ಷಿತವಾಗಿತ್ತು.ಅನಿರೀಕ್ಷಿತವೆನ್ನುವುದು ಹಠಾತ್ತಾಗಿ ಸಿಗುವ ಅಪಾರ ಖುಶಿಯಾಗಿರುತ್ತದೆ.ತುಂಬಾ ಸಂತೋಷದಿಂದ ಗಟ್ಟಿ ನಮ್ಮನ್ನು ಸ್ವಾಗತಿಸಿದರು.ಸಹಜವಾಗಿ ಕಡಿಮೆ ಮಾತಿನ ಗಟ್ಟಿ ಆದಿನ ಸ್ವಲ್ಪ ಹೆಚ್ಚೇ ಮಾತನಾಡಿದರು. ಸಾಹಿತ್ಯ,ಸಾಮಾಜಿಕ ಸಂಗತಿಗಳು,ಭಾಷೆ..ಹೀಗೆ ಅನೇಕ ವಿಷಯಗಳ ನಮ್ಮ ಮಾತುಕತೆ ನಡೆದಿತ್ತು.

ಆಮೇಲಿನ ನಮ್ಮ ಭೇಟಿ ನಡೆದದ್ದು ಸವಣೂರಿನಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ.ಅವರು ಸರ್ವಾಧ್ಯಕ್ಷರಾಗಿದ್ದರು.ಅಲ್ಲಿ ಸಮ್ಮೇಳನ ಸಂದರ್ಭಕ್ಕಾಗಿಯೇ ಬರೆದ ನನ್ನ ಹಾಡುಗಳನ್ನು ಹಾಡಿದ್ದರು.ಗಟ್ಟಿಯವರು ಒಂದು ಹಾಡಿನ ಬಗ್ಗೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇನ್ನೊಂದು ರೋಚಕ ಸಂಗತಿಯೆಂದರೆ,ಮೈಸೂರು ವಿಶ್ವವಿದ್ಯಾಲಯದ ಒಂದು ಪ್ರಾಜೆಕ್ಟಿಗಾಗಿ ನಾನು ಗಟ್ಟಿಯವರ “ಅಬ್ರಾಹ್ಮಣ”ಕಾದಂಬರಿಯ ಬಗ್ಗೆ ಬರೆಯಬೇಕಾಗಿತ್ತು.ನನ್ನಲ್ಲಿ ಆ ಪುಸ್ತಕ ಇರಲಿಲ್ಲ.ಅದು ಎಲ್ಲಿ ಸಿಗ್ತದೆಂದೂ ಗೊತ್ತಿರಲಿಲ್ಲ.ನಾನು ನೇರವಾಗಿ ಅವರಿಗೇ ಫೋನ್ ಮಾಡಿ ಪುಸ್ತಕದ ಬಗ್ಗೆ ಕೇಳಿದೆ.ಆಗವರು “ನಾನು ಯಾರಿಗೂ ನನ್ನ ಪುಸ್ತಕವನ್ನು ಕೊಡುವ ಪರಿಪಾಠವನ್ನು ಇಟ್ಟುಕೊಂಡಿಲ್ಲ” ಅಂತ ಹೇಳಿದರು. “ಸರಿ,ಪುಸ್ತಕ ಎಲ್ಲಿ ಸಿಗಬಹುದು ಅಂತ ತಿಳಿಸಿ ದಯವಿಟ್ಟು”ಅಂತ ಹೇಳಿದೆ.ಅವರು ಏನೂ ಹೇಳದೆ ಫೋನಿಟ್ಟರು. ಹತ್ತು ನಿಮಿಷ ಕಳಿಯುವಷ್ಟರಲ್ಲಿ ಅವರೇ ಫೋನ್ ಮಾಡಿ, ಪುಸ್ತಕ ಕಳಿಸಿದ್ದೇನೆ”ಅಂತ ಹೇಳಿದರು! ನಾನು ಸಂಕೋಚದಿಂದಲೇ “ಅದರ ಬೆಲೆಯೆಷ್ಟು ಅಂತ ತಿಳಿಸಿದರೆ ಎಂ.ಓ.ಮಾಡ್ತೇನೆ “ಅಂದೆ. ಅದಕ್ಕವರು ಲೇಖಕನೊಬ್ಬ ಇನ್ನೊಬ್ಬ ಲೇಖಕನಿಗೆ ಪುಸ್ತಕ ಕೊಟ್ಟರೆ ,ನಡುವೆ ಹಣದ ವ್ಯವಹಾರವಿಲ್ಲ”ಅಂತ ಹೇಳಿ ಫೋನಿಟ್ಟರು!ಇದು ಕೆ.ಟಿ.ಗಟ್ಟಿ!

ಗಟ್ಟಿ ನಿರ್ಭಿಡೆಯ ಬರೆಹಗಾರ.ಸಾಮಾಜಿಕ ಕಳಕಳಿ ಅವರ ಎಲ್ಲ ಬರೆಹಗಳ ಹಿಂದಿದೆ.ಜಾತಿ ವ್ಯವಸ್ಥೆ,ಮಠ ಮಾನ್ಯಗಳು,,ಡೋಂಗಿ ರಾಜಕೀಯ, ಶೋಷಣೆ,ಕೆಳವರ್ಗದ ಜನರ ಸಂಕಷ್ಟಗಳು..ಇತ್ಯಾದಿಗಳ ವಿರುದ್ಧ ಅವರು ಸದಾ ತಮ್ಮ ಬರೆಹಗಳ ಮೂಲಕ ಧ್ವನಿಯೆತ್ತಿದ್ದಾರೆ .ಅವರ “ಗ್ಲಾನಿ”ಹಾಗೂ “ಅಬ್ರಾಹ್ಮಣ “ಕಾದಂಬರಿಗಳ ಬಗ್ಗೆ ನಾನು ಬರೆದಿದ್ದೇನೆ.

ಆಧುನಿಕ ಸಾಹಿತ್ಯಕ್ಷೇತ್ರದಲ್ಲಿನ ಅನಪೇಕ್ಷಿತ ನೂಕು ನುಗ್ಗಲಿನಿಂದಾಗಿ,ಎಂದೂ ಮುಂಚೂಣಿಯಲ್ಲಿ ಇರಲು ಬಯಸದ ಗಟ್ಟಿಯವರು ಸ್ವಲ್ಪ ಹಿಂದೆ ಬಿದ್ದರೇನೋ ಅಂತ ನನಗನಿಸುತ್ತದೆ.ಅವರ ಕೃತಿಗಳ ಬಗ್ಗೆ ಗಂಭೀರವಾದ ವಿಮರ್ಶೆ ನಡೆದೇ ಇಲ್ಲ ಅಂತ ನನಗನ್ನಿಸುತ್ತದೆ.

ಅತ್ಯುತ್ತಮ ಕಾದಂಬರಿಕಾರರೂ,ಭಾಷಾ ಶಾಸ್ತ್ರಜ್ಞರೂ ಆಗಿದ್ದ ಮಿತಭಾಷಿ ಗಟ್ಟಿಯವರು ನನ್ನ ಹಾಗೂ ನನ್ನಂಥ ಅನೇಕ ಓದುಗರ ನೆನಪಿನ ಕೋಶಗಳಲ್ಲಿ ಶಾಶ್ವತವಾಗಿ ಉಳಿದಿರುವುದಂತೂ ಖಚಿತ!

ಕವಿ ಜೆಸ್ಲಾ ಮಿಲಾತ್ಸ್ ನ ಕವಿತೆಯೊಂದರ ಆರಂಭ ಹೀಗೆ ಆಗ್ತದೆ:

ಮನುಷ್ಯನೊಬ್ಬನ ಸಾವು ಬಲಿಷ್ಠ

ರಾಷ್ಟ್ರವೊಂದರ ಪತನದಂತೆ…

ರಾಷ್ಟ್ರವೊಂದರ ಪತನವಾಗ್ತದೋ ಇಲ್ವೋ ತಿಳಿಯದು.ಆದರೆ ಗಟ್ಟಿಯವರ ನಿರ್ಗಮನದಿಂದ ಸಾಹಿತ್ಯಕ್ಷೇತ್ರದ ಒಂದು ಮುಖ್ಯ ಕೊಂಡಿ ಕಳಚಿದ್ದಂತೂ ನಿಜ.ಅಷ್ಟರ ಮಟ್ಟಿಗೆ ಕನ್ನಡ ಸಾಹಿತ್ಯ ಕ್ಷೇತ್ರವು ಬಡವಾಗಿದೆ!

ಅಗಲಿದ ಗೆಳೆಯ ಗಟ್ಟಿಯವರಿಗೆ ನನ್ನ ಭಾವಪೂರ್ಣ ನಮನಗಳು.

                    –ಸುಬ್ರಾಯ ಚೊಕ್ಕಾಡಿ.