- ಮಗುಚಿತೊಂದು ಮೀನು ಬುಟ್ಟಿ - ಜುಲೈ 8, 2024
- ಅಟ್ಲಾಸ್ ಪತಂಗ - ಅಕ್ಟೋಬರ್ 29, 2023
- ಅಲೆಯ ಮೇಲೊಂದು ಲಹರಿ - ಆಗಸ್ಟ್ 13, 2022
ಓ ಅಮಾ… ಮೀನು ಬೇಕನೆ..? ಬಳಚು ಕೊಡ್ಲೆ ..? ‘ ಎಂದು ತಲೆಯ ಮೇಲೆ ಮೀನಿನ ಬುಟ್ಟಿಯನ್ನು ಹೊತ್ತ ಹೆಂಗಸರು ಮನೆಮನೆಗೂ ಹೋಗಿ, ತಾವು ಹಿಡಿದಿರುವ ಮೀನು ಮತ್ತು ಚಿಪ್ಪುಗಳ ವ್ಯಾಪಾರ ನಡೆಸಿ ದೈನಂದಿನ ಬದುಕು ನಡೆಸುತ್ತಿರುವ ದೃಶ್ಯಗಳು, ಕರ್ನಾಟಕದ ಪಶ್ಚಿಮ ಕರಾವಳಿ ಜಿಲ್ಲೆಗಳಾಗಿರುವ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸರ್ವೇಸಾಮಾನ್ಯ.
ಕರಾವಳಿ ಪ್ರದೇಶದ ಜನರ ಜೀವನಶೈಲಿಯೇ ಬಲು ನೆಮ್ಮದಿದಾಯಕವೆಂದು ನನಗನ್ನಿಸುತ್ತದೆ. ಕಾಲ ಯಾವುದೇ ಇರಲಿ, ‘ತಾವಾಯಿತು, ತಾವು ತಿನ್ನುವ ಬಂಗುಡೆ ಮೀನಾಯಿತು’ ಎಂದುಕೊಂಡು ಸಂಸಾರ ನಡೆಸುವವರು. ಇಂತಹ ಪಶ್ಚಿಮ ಕರಾವಳಿಯ ಭಾಗವಾದ ಕುಮಟಾ ನಗರದ, ಚಿಕ್ಕ ಗ್ರಾಮವೊಂದರಲ್ಲಿ ನೆಲೆಸಿರುವ ಶಾಕಾಹಾರಿ ಕುಟುಂಬ ನಮ್ಮದು. ಆದ್ದರಿಂದ ನಾವು ಮೀನನ್ನು ಒಂದು ನಿರುಪದ್ರವಿ ಜೀವಿಯಾಗಿ ನೋಡಿದ್ದೇವೆಯೇ ಹೊರತೂ ಅದು ಆಹಾರವಾಗಿ ನಮ್ಮ ಕಣ್ಣಿ ಗೆ ಎಂದೂ ಗೋಚರವಾಗಿಲ್ಲ . ಕುಮಟಾಕ್ಕೆ ನಗರವೆಂದು ಯಾರು ನಾಮಕರಣ ಮಾಡಿದರೋ ತಿಳಿಯದು. ಏಕೆಂದರೆ, ಒಂದು ನಗರಕ್ಕೆ ಇರುವ ಯಾವ ಲಕ್ಷಣಗಳೂ ನನಗಂತೂ ಇಲ್ಲಿಯವರೆಗೂ ಕಂಡುಬಂದಿಲ್ಲ .ಅದೇನೇ ಇದ್ದರೂ, ಇರದೇ ಇದ್ದರೂ ಇಲ್ಲಿಯ ಸತ್ಪ್ರಜೆಗಳ ಬಾಯಲ್ಲಿ ನಗರದ ಹೆಸರು ‘ಕುಮಟೆ’ಯೆಂದೂ ಹಾಗೂ ಒಕ್ಕಲಿಗರ ಬಾಯಲ್ಲಿ ‘ಕುಮಟಿ’ಯೆಂದೂ, ಪ್ರಖ್ಯಾತಿ ಪಡೆದುಕೊಂಡಿದೆ. ಇಂತಿಪ್ಪ ಕರಾವಳಿಯಲ್ಲಿ ಬೇಸಿಗೆ ಎಷ್ಟು ಕಠೋರವೋ, ಮಳೆಗಾಲವೂ ಅಷ್ಟೇ ರುದ್ರವೂ ಹೌದು, ರಮಣೀಯವೂ ಹೌದು.
ಜುಲೈ ತಿಂಗಳ ಮಧ್ಯದ ದಿನಗಳವು. ‘ ಧೊಪ್… ಧೊಪ್…’ ಎಂದು ಶುರುವಾಗಿ ಬರುಬರುತ್ತ ‘ ಧೋ…’ ಎಂದು ಬದಲಾಗಿ, ದಿನವಿಡೀ ಸುರಿಯುವ ಮಳೆಗಾಲದ ದಿನಗಳು. ಬೇಸಿಗೆಯ ಉರಿ, ತಾಪಗಳಿಲ್ಲದೆ ನೆಮ್ಮದಿ ಎನಿಸುವ ದಿನಗಳು. ಒಂದೇ ಸಮನೆ ಸುರಿಯುವ ಇಂತಹ ಮಳೆಯಯನ್ನು , ಕಣ್ಮುಚ್ಚಿ ಆಲಿಸುತ್ತ ಕೂತರೆ, ಯಾವುದೇ ತೆರನಾದ ಚಿತ್ತಚಾಂಚಲ್ಯವಿದ್ದರೂ, ಎಲ್ಲವೂ ಶಾಂತವಾಗಿ ಪ್ರಕೃತಿಯ ಲಯದೊಂದಿಗೆ ದೇಹವೂ ಹೊಂದಿಕೊಂಡು, ನವಚೇತನವನ್ನು ಪಡೆಯಲಾರಂಭಿಸುತ್ತದೆ.
ಸುತ್ತಲೂ ಮುಗಿಲೆತ್ತರಕ್ಕೆ ಬೆಳೆದು ನಿಂತ ಮರಗಳು. ಸೂರ್ಯನ ಕಿರಣಗಳನ್ನೂ ಒಳಗೆ ಬಿಡೆವು ಎಂಬ ಹಠ ತೊಟ್ಟಂತೆ ಒಂದು ಮರದ ತಲೆಯಿಂದ ಇನ್ನೊಂದು ಮರದ ತಲೆಗೆ ದಟ್ಟವಾಗಿ ಹಬ್ಬಿಕೊಂಡಿರುವ ಬಳ್ಳಿಗಳು, ಇಡೀ ಕಾಡನ್ನೆಲ್ಲ ಕತ್ತಲು ನುಂಗಿಬಿಟ್ಟಿದೆಯೇನೋ ಎಂಬ ಭ್ರಮೆ ಮೂಡಿಸುತ್ತಿವೆ. ಸಾಮಾನ್ಯವಾಗಿ ಕತ್ತಲಾವರಿಸಿದ ಬಳಿಕ, ಬೆಳಕು ಹರಿಯುವವರೆಗೂ ‘ಜಿೀsssರ್…’ ಎನ್ನುತ್ತಲೇ ಇರುವ ಜಿೀರುಂಡೆಗಳು, ಮರಜಿರಲೆಗಳು ಇಂತಹ ದಿನಗಳಲ್ಲಿ ಹಗಲು ಯಾವುದು ರಾತ್ರಿ ಯಾವುದು ಒಂದೂ ತಿಳಿಯದೆ ದಿನವಿಡೀ ತಮ್ಮ ಗಾನಸುಧೆ ಹರಿಸುವುದರಲ್ಲಿ ತಲ್ಲೀನವಾಗಿರುತ್ತವೆ. ದೃಷ್ಟಿ ಹರಿದಷ್ಟೂ ದೂರದವರೆಗೆ ಕಾಣಸಿಗುವ ಹಸಿರು ಸಿರಿಯನ್ನು ಆಸ್ವಾದಿಸುತ್ತ ಮೈಮರೆತರೆ, ನಿಮಗೆ ಗೊತ್ತಿಲ್ಲದಂತೆಯೇ ರಕ್ತಪಿಪಾಸು ಇಂಬಳಗಳು ನಿಮ್ಮ ದೇಹವನ್ನು ಆಕ್ರಮಿಸಿರುತ್ತವೆ.
ಎಂತಸ ಕಾಡಾದರೂ ಸರಿ ಅಲ್ಲಿ ಜನರ ಓಡಾಟವಿದೆಯೆಂದರೆ, ಕಾಲುದಾರಿಯೊಂದು ತಾನಾಗಿಯೇ ನಿರ್ಮಾಣವಾಗಿರುತ್ತದೆ. ಮಳೆಗಾಲದ ಕೆಂಪು ನೀರಿನಿಂದ ಕಾಲುಗಳನ್ನು ತೊಯ್ಯಿಸಿಕೊಂಡು, ಆ ಕಾಲುದಾರಿಯ ಜಾಡನ್ನು ಹಿಡಿದು, ಇಂಬಳಗಳಿಂದ ಸಾಧ್ಯವಾದಷ್ಟೂ ತಪ್ಪಿಸಿಕೊಂಡು, ಕೈಯಲ್ಲಿ ಛತ್ರಿಯೊಂದಿದ್ದರೂ ಗಾಳಿಯ ಜೊತೆ ಸುರಿಯುವ ಮಳೆಯಿಂದ ಮೈಯೆಲ್ಲಾ ನೆನೆಸಿಕೊಂಡು, ಎರಡು ಮೈಲಿ ನಡೆದರೆ ಸಿಗುವ ಊರೇ ‘ ಮುಡತಕೊಂಬ ‘.
******
ನಮ್ಮ ಸಂಸಾರದಲ್ಲಿ ನಾವು ಮೂರು ಜನ ಮಕ್ಕಳು. ಹಿರಿಯವಳಾಗಿಚೇತು ಬೊಡ್ಡೆಯೆಂದೇ ನೆಂಟರಿಷ್ಟರ ನಡುವೆ ಪ್ರಸಿದ್ಧಿ ಪಡೆದ ಚೇತನ (ಚಿಕ್ಕವಳಿದ್ದಾಗ ನೋಡಲು ಮೊಸರು ಗಡಿಗೆಯಂತೆ ಇದ್ದಳಂತೆ, ಹಾಗಾಗಿ ಬೊಡ್ಡೆ ಎಂಬ ಹೆಸರು), ಮಧ್ಯಮಳಾಗಿ ಅರ್ಚನ ಹಾಗೂ ಕಿರಿಯವನಾಗಿ ನಾನು. ನಾನು ಡಿಗ್ರಿ ಓದುತ್ತಿರುವಾಗಲೇ ನನ್ನ ಇಬ್ಬರು ಅಕ್ಕಂದಿರಿಗೂ ಮದುವೆಯಾಗಿ ಆಗಲೇ ಮಾವನೆನಿಸಿಕೊಂಡಿದ್ದೆ. ನನ್ನ ಎರಡನೇ ವರ್ಷದ ಡಿಗ್ರಿ ಪರೀಕ್ಷೆಗಳನ್ನು ಮುಗಿಸಿ, ರಜೆಯ ಮಜ ಸವಿಯೋಣವೆಂದರೆ, ಈ ಎಡವಟ್ಟು ಮಳೆ ನನ್ನೆಲ್ಲ ತಯಾರಿಗಳಿಗೆ ತಣ್ಣೀರೆರಚಿತ್ತು.
” ಶೀ… ಎಂಥ ಮಳೆಯೆನಾ ಇದು ಮಾರಾಯ… ನಾಲ್ಕ್ ದಿನ ಆತು ಚಡ್ಡಿ ಒಣಗುಲೆ ಹಾಕಿ… ಇನ್ನೂ ಹಿಂಡಕಾದ್ರೆ ಹೆಂಗಿತ್ತ ಹಂಗೆ ಇದ್ದು ಸಾಯ್ಲಿ …” ಎಂದು ಎಡೆಬಿಡದೆ ಸುರಿಯುತ್ತಿದ್ದ ಮಳೆಯತ್ತ ದೃಷ್ಟಿ ನೆಟ್ಟಿಸಿ ನಾನು ಗೊಣಗಿಕೊಂಡಿದ್ದನ್ನು, ಅಲ್ಲಿಯೇ ಕುಳಿತು ತಮ್ಮ ಆಫೀಸು ಕೆಲಸದಲ್ಲಿ ಮಗ್ನವಾಗಿದ್ದ ನನ್ನ ಅಪ್ಪಯ್ಯನವರ ಸೂಕ್ಷ್ಮಮತಿ ಗ್ರಹಿಸಿತು.
“ಎಂತಾ ಆತಾ ಇದ್ದಕ್ಕಿದ್ದಲ್ಲೆಯಾ ನಿಂಗೆ ? ಒಬ್ಬೊಬ್ನೇ ಹಲ್ಬ್ಕತ್ತಿದ್ದೆ…”
ಅಲ್ದಾ ಅಪ್ಪಯ್ಯ… ಅಕ್ಕನ ಮನೆಗೆ ಹೋಗ್ಬರ್ಲಾ? ಮನೇಲೆ ಕುಂತು ತಲೆ ಚಿಟ್ ಹಿಡಿದೊತ..” ಎಂದು ಕೇಳಿ, ಉತ್ತರಕ್ಕಾಗಿ ಕಾದು ಕುಳಿತೆ.
ನಿರೀಕ್ಷಿಸಿದಂತೆಯೇ, “ಥೋ… ಈ ಮಳೇಲಿ ಹೆಂಗ್ ಹೋಗ್ತ್ಯ? ಅಲ್ಲಿಗೆ ಹೋಪು ಬ್ರಿಜ್ಜು ಮುಳುಗಿ ಹೊಯ್ದೆನ, ಇಂಬಳ ಬೇರೆ, ಕರೆಂಟ್ ಹೋಗಿ ಎಷ್ಟ್ ದಿನ ಆತಾ ಏನ, ಫೋನು ಒಂದ್ಸಲ ಹಾಳಾತಲ ಅಂದ್ರೆ ಅದು ರಿಪೇರಿ ಅಪ್ಪುದು ಮಳೆಗಾಲದ ನಂತ್ರನೆಯ… ಬೇಡ ನೀ ಹೋಪುದು ಈಗ.. “, ಎಂದು ಒಂದೇ ಉಸಿರಿನಲ್ಲಿ ಅಲ್ಲಿಯ (ಅ)ವ್ಯವಸ್ಥೆಯನ್ನು ಬಿಚ್ಚಿಟ್ಟರು.
ಯಾವುದೇ ಕೆಲಸಕ್ಕಾದರೂ ಇವರು ಮೊದಲು ಬೇಡವೆಂದು ಹೇಳುವುದನ್ನು ಕೇಳಿ ಅಭ್ಯಾಸವಾಗಿದ್ದ ನನಗೆ, ಇವರ ತಿರಸ್ಕಾರವೂ ಕೂಡ ಒಪ್ಪಿಗೆ ನೀಡಿದಂತೆಯೇ ಇತ್ತು . ಇಂಬಳವಾದರೂ ಸರಿ ಸಿಂಬಳವಾದರೂ ಸರಿ, ಮರುದಿನವೇ ಹೊರಡಲೇಬೇಕೆಂದು ನಿರ್ಧರಿಸಿದೆ.
ನನ್ನ ಎರಡನೇ ಅಕ್ಕನ ಮನೆ ತುಂಬಾ ದೂರವೇನಲ್ಲ. ಕುಮಟೆಯಿಂದ ಅಜಮಾಸು ನಲವತ್ತು ಕಿಲೋಮೀಟರ್ ಇರಬಹುದು ಅಷ್ಟೇ.ಶಿರಸಿ ಕಡೆಗೆ ಹೊರಡುವ ಬಸ್ ಹಿಡಿದು, ರಾಗಿಹೊಸಳ್ಳಿ ಎಂಬಲ್ಲಿ ಇಳಿದು, ಅಲ್ಲಿಂದ ಒಂದೆರಡು ಮೈಲಿ ಕಾಡುದಾರಿಯನ್ನು ಸವೆಸಿದರೆ ಸಿಗುವ ಮುಡುತಕೊಂಬದ ಹೆಗಡೆರ ಮನೆಯೇ ಹೌದು. ಈ ಗ್ರಾಮದಲ್ಲಿ ನನ್ನ ಅಂದಾಜಿನ ಪ್ರಕಾರ ಸುಮಾರು ಹತ್ತರಿಂದ ಹದಿನೈದು ಮನೆಗಳಿರಬಹುದು. ಅದರಲ್ಲೆ ಒಂದು ಹೆಗಡೆರ ಮನೆಯಾದರೆ, ಉಳಿದವು ಮನೆಯ ಕೆಲಸಕ್ಕೆ ಬರುವ ಆಳನವರದು, ಒಕ್ಕಲಿಗರದು ಹಾಗೂ ನಗರದ ತಂಟೆ ತಕರಾರುಗಳೇ ಬೇಡವೆಂದು ಇಲ್ಲಿ ಬಂದು ತೋಟ ಗದ್ದೆಗಳನ್ನು ಬೆಳೆಸಿ ನೋಡಿಕೊಂಡಿರುವವರದು.
ಮರುದಿನ ಬೆಳಿಗ್ಗೆಯೇ ಶಿರಸಿಯ ಬಸ್ ಹತ್ತಿ ಹೊರಟ ನನಗೆ ಪ್ರಯಾಣವೇನು ಅಷ್ಟೊಂದು ಸುಖಕರವಾಗಿರಲಿಲ್ಲ. ಹಿಂದಿನ ರಾತ್ರಿಯಿಂದಲೇ ಬೆಂಬಿಡದೆ ಸುರಿಯುತ್ತಿದ್ದ ಮಳೆ ಎಲ್ಲ ಪ್ರಾಣಿಗಳಿಗೂ ರೇಜಿಗೆ ಹುಟ್ಟಿಸಿರಬಹುದು. ಬಸ್ ಸ್ಟ್ಯಾಂಡಿನ ಅವ್ಯವಸ್ಥೆಯನ್ನು ನೆನೆಸಿಕೊಂಡರೆ, ಬಸ್ ಹತ್ತುವ ಹುಚ್ಚು ಬಿಟ್ಟುಹೋಗುತ್ತದೆ. ಅದನ್ನು ಇಲ್ಲಿ ಪ್ರಸ್ತಾಪಿಸದೆ ಇರುವುದೇ ನಿಮಗೂ ನನಗೂ ಕ್ಷೇಮ.
ಬಸ್ ಸ್ಟ್ಯಾಂಡ್ ತಲುಪುವ ವೇಳೆಗಾಗಲೇ ಬಸ್ಸೊಂದು ಹೊರಡಲು ಅಣಿಯಾಗಿ ನಿಂತಿತ್ತು. ನಾರಾಯಣನಂತಿದ್ದ ಕಂಡಕ್ಟರ್ ತನ್ನ ಕೀರಲು ಧ್ವನಿಯಲ್ಲಿ “ಶಿರ್ಸಿ-ಹುಬ್ಳಿ..ಶಿರ್ಸಿ-ಹುಬ್ಳಿ..” ಎಂದು ಅರಚುತ್ತಿದ್ದ. ತಕ್ಷಣವೇ ಸಿಕ್ಕ ಬಸ್ಸನ್ನು ನೋಡಿ ಕೊಂಚ ಸಮಾಧಾನವಾಯಿತಾದರೂ, ಮಳೆಯ ನಡುವೆಯೇ , ಗಡಿಬಿಡಿಯಲ್ಲಿ ರಸ್ತೆಯ ಗುಂಡಿಗಳನ್ನೆಲ್ಲ ಎಗರಿ, ಬಸ್ ಹಿಡಿಯುವಾಗ, ಸೊಂಟದ ಕೆಳಗಿನ ಭಾಗವೆಲ್ಲಾ ಪೂರ್ತಿಯಾಗಿ ನೀರಿನ ಪಾಲಾಗಿದ್ದವು. ಬಸ್ ಎಷ್ಟು ಕಿಕ್ಕಿರಿದು ತುಂಬಿತ್ತೆಂದರೆ, ನನಗೆ ಸೀಟು ದೊರಕಿದ್ದು ಪುಣ್ಯವೆಂದೇ ಭಾವಿಸಿದ್ದೆ. ಆದರೆ ಯಾವಾಗ ಕೆಲವೇ ಕ್ಷಣಗಳಲ್ಲಿ ತಲೆಯ ಮೇಲೆಯೇ ‘ಟಪ್ ಟಪ್ ಟಪ್…’ ಎಂದು ನೀರು ಸೋರಲಾರಂಭಿಸಿತೋ, ಬಹುಶಃ ಇದೇ ಕಾರಣಕ್ಕೆ ಇದೊಂದು ಸೀಟು ಆಕ್ರಮಣಕ್ಕೊಳಗಾಗದೇ ಉಳಿದಿತ್ತೆಂದು ದೃಢವಾಯಿತು. ಇದರ ಸಹವಾಸವೇ ಬೇಡವೆಂದುಕೊಂಡು ಇಳಿದು ಬಿಡೋಣವೆಂದರೆ, ಕಂಡಕ್ಟರ್ ಅದಾಗಲೇ, ಮೆಟ್ಟಿಲ ಬಳಿ ನಿಂತಿದ್ದವರನ್ನೆಲ್ಲ ಒಳಕ್ಕೆ ನೂಕಿ ಬಾಗಿಲನ್ನು ಜಡಿದು ಭದ್ರಪಡಿಸಿಯಾಗಿತ್ತು. ಬಸ್ಸು ಕೂಡ ‘ಗುಯ್ಯೋ…’ ಎಂದು ಅರಚುತ್ತಾ ಮುಂದೆ ನಡೆದಿತ್ತು.
*****
ನಾನು ರಾಗಿಹೊಸಳ್ಳಿಗೆ ಹೋಗುತ್ತಿದ್ದುದು ಮೊದಲ ಬಾರಿಯೇನಲ್ಲ, ಆದರೆ ಬಸ್ ಹಿಡಿದು ಹೊರಟಿದ್ದುದು ಇದೇ ಮೊದಲು. ಹಾಗಾಗಿ ಯಾವಾಗ ನನ್ನ ಎಡಗಡೆ ಶಾನಭಾಗ್ ಹೋಟೆಲು ಕಾಣಿಸುತ್ತದೆಯೋ ಅದೇ ರಾಗಿಹೊಸಳ್ಳಿಯೆಂದೂ ಹಾಗೂ ಅಲ್ಲಿಯೇ ಇಳಿಯಬೇಕಾದುದು ಎಂದು ಆಗಾಗ ನೆನಪು ಮಾಡಿಕೊಳ್ಳುತ್ತಿದ್ದೆ. ಜನ ಜಂಗುಳಿಯನ್ನು ಸೀಳಿಕೊಂಡು “ಟಿಕೆಟ್ ಟಿಕೆಟ್…” ಎನ್ನುತ್ತಾ ಬಂದ ಕಂಡಕ್ಟರನಿಗೆ, “ಹೊಯ್, ರಾಗಿಹೊಸಳ್ಳಿಗೆ ಒಂದು ಟಿಕೆಟ್ ಕೊಡಿ ನೋಡ್ವ…” ಎಂದೆ.
ರಾಗಿಹೊಸಳ್ಳಿಯ ಹೆಸರು ಕೇಳಿದೊಡನೆ ಇರುಸು ಮುರುಸಾದಂತಾಗಿ, “ಥೋ ನಿಮ್ಮ… ರಾಗಿಹೊಸಳ್ಳಿಲಿ ಬಸ್ಸಿಗೆ ಸ್ಟಾಪ್ ಇಲ್ಲ ಮಾರ್ರೆ.. ಎಂತಕ್ ಹತ್ತುಕೋದ್ರಿ… ಅಷ್ಟು ಗುತ್ತಾಗುದಿಲ್ವ ನಿಮಗೆ…” ಎಂದು ನಾನೇನೋ ಮಾಡಬಾರದ್ದನ್ನು ಮಾಡಿದ್ದೇನೆ ಎನ್ನುವಂತೆ ಮಾತಾಡಿದ.
ಬಸ್ ಹತ್ತಿದಾಗಿನಿಂದ ತಲೆಯೇ ಮೇಲೆಯೇ ಬೀಳುತ್ತಿದ್ದ ನೀರಿನಿಂದಾಗಿ, ಜೊತೆಗೆ ಆತನ ಕೀರಲು ಧ್ವನಿಯನ್ನು ಕೇಳಿ ರೋಸಿಹೋಗಿದ್ದ ನನಗೆ ಒಮ್ಮೆಲೇ ಪಿತ್ತ ನೆತ್ತಿಗೇರಿದಂತಾಯಿತು. ” ಸ್ಟಾಪ್ ಇಲ್ಲ ಅಂದ್ರೆ ಬೋರ್ಡ್ ಮೇಲೆ ಬರೀರಿ, ಇಲ್ಲ ಅಂದ್ರೆ ಹತ್ಬೇಕಾದ್ರೆ ಹೇಳಿ ಸಾಯ್ರಿ ಎಂತಾ ಆಗ್ತದೆ… ಅರ್ಧ ದಾರಿಗೆ ಬಂದು ಟಿಕೆಟ್ ತಗೊಳು ಟೈಮಿಗೆ ಅಲ್ಲ ಹೇಳುದು.. ಯಾರ್ರೀ ನಿಮ್ಮನ್ನು ಕಂಡಕ್ಟರ್ ಮಾಡಿದ್ದು..” ಎಂದೆ. ಹೀಗೆಯೇ ಬಿಟ್ಟರೆ ಪರಿಸ್ಥಿತಿ ಜಗಳಕ್ಕೆ ನಾಂದಿ ಹಾಡಬಹುದು ಎಂದು ಊಹಿಸಿದ ಅರೆಕುಡುಕನೋರ್ವ, “ಇಲ್ಲ ಇಲ್ಲ ಇಲ್ಲ…ಜಾಸ್ತಿ ಮಾತಿಲ್ಲ…ಕಾಂಡಾಕ್ಟರ್ರೇ, ತಮ್ಮ ಸರಿ ಅವ್ನೆ ಒಂದು ಸ್ಟಾಪ್ ಕೊಡುದೇಯಾ…” ಎಂದು ತೊದಲುತ್ತಲೇ ಮೂಗು ತೂರಿಸಿದ್ದ.
ಕುಡುಕ ಮಧ್ಯಸ್ಥಿಕೆ ವಹಿಸಲು ಬಂದಿದ್ದನ್ನು ನೋಡಿ ಉಳಿದ ಜನರಿಗೆ ಏನನ್ನಿಸಿತೋ ಏನೋ, ನಾಲ್ಕೈದು ಜನರು “ಇವಂದೊಂದು ಸಾವು ಮಾರಾಯ.. ಏಯ್ ಬೋಷ್ಟಿಮಗನೇ… ಅವ್ರಿಬ್ರದ್ದು ಅವ್ರು ನೋಡ್ಕಳ್ತ್ರು, ನೀ ಎಂತಕ್ಕೆ ಮಧ್ಯದಲ್ಲಿ ಬಾಯಿ ಹಾಕಿ ಸಾಯ್ತ್ಯ ಏಯ್.. ” ಎಂದು ಮನಸೋ ಇಚ್ಛೆ ಉಗಿದು ತಮ್ಮ ಸಿಟ್ಟನ್ನು ಹೊರಹಾಕಿದ್ದರು. ಆ ಕುಡುಕ ಹೇಳಿದ್ದು ಕಂಡಕ್ಟರನಿಗೆ ನಿಜವೆನಿಸಿತೋ ಏನೋ, ಒಂದರೆ ಕ್ಷಣ ಯೋಚಿಸಿ, “ಸರಿ ಬಿಡಿ..ಒಂದು ಕೆಲಸ ಮಾಡಿ.. ಶಿರ್ಸಿಯ ತನಕದ ಟಿಕೆಟ್ ತೆಗೆದುಕೊಂಡರೆ ನಿಮಗೆ ರಾಗಿಹೊಸಳ್ಳಿಯಲ್ಲಿ ಒಂದು ಸ್ಟಾಪ್ ಕೊಡಿಸುತ್ತೇನೆ ಆಯ್ತಾ?” ಎಂದ.
ಹೋದರೆ ಹೋಗಲಿ ಮುಂದಿನ ಸ್ಟಾಪಿನಲ್ಲಿ ಇಳಿದು ಮತ್ತೆ ಮಳೆಯಲ್ಲಿ ನೆನೆಯುತ್ತ ಇನ್ನೊಂದು ಬಸ್ಸಿಗೆ ಕಾಯುತ್ತ ಕೂರುವ ಬದಲು, ಈತ ಹೇಳಿದಂತೆ ಮಾಡುವುದೇ ಸರಿ ಎಂದೆನಿಸಿ ಆತನ ಮಾತಿಗೆ ಒಪ್ಪಿ ಟಿಕೆಟ್ ಖರೀದಿಸಿ ಕುಳಿತೆ. ಮಳೆಯ ಕಾರಣದಿಂದ ಬಸ್ಸಿನ ಕಿಟಕಿಗಳನ್ನು ಮುಚ್ಚಿಯೇ ಕೂರಬೇಕಾಗಿತ್ತು.ಕಿಟಕಿಗಳು ಗಾಜಿನವಾದುದರಿಂದ ನೀರಿನ ಹೊಡೆತದಿಂದ ಮಂಜು ಮುಸುಕಿದಂತಾಗಿ ಹೊರಗಿನ ಯಾವ ದೃಶ್ಯಗಳೂ ಕಣ್ಣಿಗೆ ಬೀಳುತ್ತಿರಲಿಲ್ಲ. ಒಳಗೆ ಕುಳಿತ, ನಿಂತ ಕೆಲವು ಆಸಾಮಿಗಳು ಮಾತ್ರ ಬಾಯಲ್ಲಿ ಕವಳ, ಗುಟಖಾಗಳನ್ನು ಅಗಿಯುತ್ತ ಆಗಾಗ ಕಿಟಕಿಯಿಂದಾಚೆ ಅವನ್ನು ‘ಪುಚುಕ್’ ಎಂದು ಉಗಿಯಲು ಹೋಗಿ ತಮ್ಮ ಮುಖ, ಗಡ್ಡ ಹಾಗೂ ಅಂಗಿಯ ಮೇಲೆಲ್ಲಾ ಕೆಂಪು ಎಂಜಲನ್ನು ಬೀಳಿಸಿಕೊಂಡು, ಟೊವಲ್ಲಿನಿಂದ ಒರೆಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವೊಮ್ಮೆ ಹೀಗೆ ಉಗಿಯಲು ಹೋಗಿ ಅವರ ಹಿಂದಿನ ಸೀಟಿನಲ್ಲಿ ಕುಳಿತಿರುವವರ ಮುಖದ ಮೇಲೂ ಅಭಿಷೇಕವಾಗಿ ಅವರವರ ನಡುವೆಯೇ ಜಗಳ ಶುರುವಾಗಿ ಆ ಮಗ ಈ ಮಗ ಎಂದು ಒಬ್ಬರಿಗೊಬ್ಬರು ಬೈದುಕೊಳ್ಳುತ್ತಿದ್ದರು.
ಗಾಜಿನ ಕಿಟಕಿಯ ಮೇಲೆಲ್ಲ ಮಂಜು ಮುಸುಕಿದಂತಾಗಿದ್ದ ಕಾರಣ, ನನಗೆ ಶಾನಭಾಗ್ ಹೋಟೆಲನ್ನು ಪತ್ತೆ ಹಚ್ಚುವುದಾದರೂ ಹೇಗೆ ಎಂಬ ಯೋಚನೆ ಕೊರೆಯುತ್ತಲಿತ್ತು. ಸುತ್ತಲೂ ಒಮ್ಮೆ ಕಣ್ಣಾಡಿಸಿ ನನ್ನ ಹಿಂದೆ ಕುಳಿತಿದ್ದ ಎಲೆ ವ್ಯಾಪಾರಿಯೊಬ್ಬರ ಹತ್ತಿರ “ಹೋಯ್.. ರಾಗಿಹೊಸಳ್ಳಿ ಬಂದ್ರೆ ಸ್ವಲ್ಪ ಹೇಳಿ ಆಯ್ತಾ…” ಎಂದು ವಿನಂತಿಸಿಕೊಂಡೆ. ಇನ್ನೇನು ಬಂದೇಬಿಟ್ಟಿತು ಎನ್ನುವಾಗ ಬಾಯಿಬಿಟ್ಟು ಏನೂ ಹೇಳದೇ ನನ್ನ ಭುಜವನ್ನೊಮ್ಮೆ ತಟ್ಟಿ, ತಮ್ಮ ತುಟಿಗಳ ಎರಡು ಬದಿಯಿಂದಲೂ ಎಲೆ, ಅಡಿಕೆ, ತಂಬಾಕು ಮಿಶ್ರಿತ ಜೊಲ್ಲನ್ನು ಸುರಿಸುತ್ತ, ಮಂದಹಾಸವನ್ನೊಮ್ಮೆ ಬೀರಿದರು. ಅಷ್ಟರಿಂದಲೇ ನನಗೂ ಇಳಿಯುವ ಕ್ಷಣ ಹತ್ತಿರವಾಯಿತೆಂದು ಅರ್ಥವಾಗಿತ್ತು.
ಕೊನೆಗೂ ತಲುಪಿದೆನಲ್ಲ ಎಂದು ಇಳಿಯಲು ಬಾಗಿಲ ಬಳಿ ಬಂದರೆ, ಈ ಕಂಡಕ್ಟರ್ ಮಹಾಶಯ ಗಾಢ ನಿದ್ರೆಗೆ ಜಾರಿ ಬಿಟ್ಟಿದ್ದ. ಈತನನ್ನು ಎಬ್ಬಿಸಿ ಪ್ರಯೋಜನವಿಲ್ಲ ಎಂದೆನಿಸಿ ನಾನೇ “ಹೊಲ್ಡೆsss……ನ್” ಎಂದು ಡ್ರೈವರನಿಗೆ ಕೇಳಿಸುವಂತೆ ಕಿರುಚಬೇಕಾಯಿತು. ಅನಿರೀಕ್ಷಿತವಾಗಿ ನೀಡಬೇಕಾಗಿ ಬಂದ ಸ್ಟಾಪಿನಿಂದಾಗಿ ಕಕ್ಕಾಬಿಕ್ಕಿಯಾದ ಡ್ರೈವರ್ ಒಮ್ಮೆಲೇ ಬ್ರೇಕು ಒತ್ತಬೇಕಾಯಿತು. ಕೀsssssರ್ ಎನ್ನುತ್ತಾ ಬಸ್ಸು ನಿಂತ ತಕ್ಷಣವೇ ಹಿಂದೆ ತಿರುಗಿದ ಡ್ರೈವರ್ “ಯೇ ಬೋಳಿಮಗ್ನೇ… ಕಂಡ ಕಂಡಲ್ಲೆಲ್ಲ ಸ್ಟಾಪ್ ಕೇಳೋರ್ನ ಹತ್ತಿಸ್ಕೊಬೇಡ ಅಂತ ಎಷ್ಟ್ ಸಲ ಹೇಳುದೋ ಮಾರಾಯ ನಿಂಗೆ.. ಕಿಮಿಗೆ ಎಂತಾ ಚಿಮ್ನೆಣ್ಣೆ ಬಿಟ್ಕಂಡಿದ್ಯ? ಏನ್ ಸಾಯ್ತ್ಯ ಬೇವರ್ಸಿ…” ಎಂದು ಕಂಡಕ್ಟರನಿಗೆ ಬಾಯ್ತುಂಬ ಉಗಿದು ತನ್ನ ಸಿಟ್ಟು ತೀರಿಸಿಕೊಂಡ.
******
ಬಸ್ಸು ಹೊರಟಿತು. ನಾನೂ ಮನೆಯ ಕಡೆ ಹೊರಡುವ ಕಾಡು ದಾರಿ ಹಿಡಿದು ಹೊರಟೆ. ಅಂದುಕೊಂಡಿದ್ದಂತೆಯೇ ದಾಟಬೇಕಾಗಿದ್ದ ಹೊಳೆಯು, ಬ್ರಿಜ್ಜನ್ನು ಕಬಳಿಸಲಾರಂಭಿಸಿತ್ತು. ಮಳೆಯೂ ಸಹ ಕೊಂಚ ಸಮಯ ಬಿಡುವು ತೆಗೆದುಕೊಂಡಿದ್ದರಿಂದ, ಎರಡು ಮೈಲಿಯ ಹಾದಿ ಸವೆಯಲು ನನಗೂ ಅನುಕೂಲವಾಗಿತ್ತು. ಎಷ್ಟು ನಡೆದರೂ ಮನೆಗಳು ಕಾಣಸಿಗದಂತಾಗಿದ್ದರಿಂದ, ದಾರಿ ತಪ್ಪಿದೆನೇ? ಎಂಬ ದಟ್ಟವಾದ ಅನುಮಾನ ನನ್ನನ್ನು ಕಾಡಲಾರಂಭಿಸಿತು. ಅದೇ ಸಮಯಕ್ಕೆ ಸರಿಯಾಗಿ ಮಟ್ಟಿಯಲ್ಲೆಲ್ಲೋ ಸರ್ ಸರ್ ಸರ್ ಎಂಬ ಶಬ್ದ ಕೇಳಿಸಿ ಅರೆಕ್ಷಣ ಪಸೆ ಆರಿದಂತಾಯಿತು. ಆದರೆ ಮರುಕ್ಷಣವೇ ಆ ಮಟ್ಟಿಯನ್ನು ಭೇದಿಸಿಕೊಂಡು ಬಂದ ಗಂಡಾಳೊಬ್ಬ ಕಣ್ಣಿ ಗೆ ಬಿದ್ದ. ಒಂದು ಕೈಯಿಂದ ತಲೆಯ ಮೇಲೆ ಹೊತ್ತಿದ್ದ ಸೊಪ್ಪಿನ ಹೊರೆಯನ್ನು,ಇನ್ನೊಂದು ಕೈಯಿಂದ ಬೆನ್ನನ್ನು ತುರಿಸಿಕೊಳ್ಳುತ್ತ ಮುಂದೆ ನಡೆಯುತ್ತಿದ್ದ ಆತನನ್ನು ಹಿಂದಿನಿಂದ ನಾನು ತಡೆದು ನಿಲ್ಲಿಸಿ “ಹೋ.. ಇಲ್ಲಿ ಹೆಗಡೆರ ಮನೆ ಎಲ್ಲಾಗ್ತದ್ಯೋ…” ಎಂದು ಕೇಳಿದೆ.
ಅದಕ್ಕವನು ತನ್ನೆಲ್ಲಾ ಕೆಂಪಾದ ಹಲ್ಲನ್ನು ಕಿಸಿದು ತೋರಿಸುತ್ತ, “ಅದೇ… ಅದಲ್ರ ಅಲ್ಲಿ ಮೇಲೆ ಮಾಡು ಕಾಣ್ತಿದಲ್ರ ಅದೇಯಾ… ಹಿಂಗೇ ಹೋಗಿ, ಮುಂದೆ ದಣಪೆ ಸಿಗ್ತಿದು… ದಣಪೆ ದಾಟಿ ಮೇಲೆ ಹತ್ರೆ ಅದೇ ಮನೆನೆವಾ…” ಎಂದು ಹೇಳಿ ಆತನ ಮನೆಯಡೆಗೆ ತಿರುಗುವ ಕಾಲುದಾರಿಯನ್ನು ಹಿಡಿದು ಹೊರಟ.
ದಣಪೆ ದಾಟಿ ಒಳಕ್ಕೆ ಬಂದ ನನ್ನನ್ನು ನೋಡಿದ ಮಾವನವರು “ಅರೇ ಹಾ… ಬಂದ್ಯನೋ… ಇಷ್ಟೊತ್ತಾದ್ರೂ ಬರಗಿದದ್ದು ನೋಡಿ ಎಲ್ಲಿ ಬಳಕಂಡೇ ಹೋದ್ಯೇನ ಅಂದ್ಕಂಡ್ನಲ… ಆಗ್ಲಿ… ಬಾ.. ಕಡೆಗೇ, ಮತ್ತೆಲ ಆರಾಮಲೀ..” ಎಂದು ತಮಾಷೆಯಾಗಿ ಕಾಲೆಳೆಯುತ್ತಾ ಬರಮಾಡಿಕೊಂಡರು.
ಅವರಿಗೂ ಮುಂಚೆಯೇ ದಣಪೆಯ ಸದ್ದಿನಿಂದಲೇ ಯಾರೋ ಆಗಂತುಕರು ಬಂದರೆನಿಸಿ ತಾನು ಕೂತ ಸ್ಥಳದಿಂದ ಚಂಗನೆ ಜಿಗಿದು, ಎದುರಿಗೆ ಬಂದು ನಿಂತು ತನ್ನೆಲ್ಲಾ ಭೀಕರ ಹಲ್ಲನ್ನು ಪ್ರದರ್ಶಿಸುತ್ತ ‘ಗುರ್ರ್..ಗುರ್ರ್…’ ಎನ್ನುತ್ತಾ ಸ್ವಾಗತಿಸಿದ್ದು, ನಮ್ಮ ಕಥಾನಾಯಕ ‘ಟೀಪು’.
******
ಟೀಪು ನನಗೆ ಹಿಡಿಸಿದ್ದರ ಹಿಂದೆ ಒಂದು ಕಾರಣವಿದೆ. ಹಿಂದೆ ಎಂದಿಗೂ ನಿಮ್ಮ ಹಾಗು ಟೀಪುವಿನ ಭೇಟಿಯೇ ಆಗಿರಲಿಲ್ಲ ಎಂದಿಟ್ಟುಕೊಳ್ಳಿ ನೀವೇನಾದರೂ ಆತನ ಮನೆಯವರ ಸಂಬಂಧಿಕರಾಗಿದ್ದಲ್ಲಿ, ನಿಮ್ಮನ್ನು ನೋಡಿದಾಕ್ಷಣ ಒಂದು ಸಲ ಗುರ್ರ್ ಎಂದರೂ, ಮರುಕ್ಷಣವೇ ಇವರೂ ನಮ್ಮವರೇ ಎಂದು ಊಹಿಸಿ, ನಿಮ್ಮ ಸುತ್ತಲೂ ಒಂದು ಪ್ರದಕ್ಷಿಣೆ ಹಾಕಿ, ಬಾಲವನ್ನು ಅತ್ತಿಂದಿತ್ತ ಪೆಂಡುಲಮ್ನಂತೆ ಅಲ್ಲಾಡಿಸುತ್ತ, ನಿಮ್ಮತ್ತ ಗೆಳೆತನದ ಹಸ್ತವನ್ನು ಚಾಚಿ, ಹಿಂದೆ ಮುಂದೆ ಸುಳಿದಾಡುತ್ತಲೇ ಇರುತ್ತಾನೆ.
ಈ ಊರಿನಲ್ಲೆಲ್ಲಾ ಹುಡುಕಿದರೂ ಸಿಗುವುದು ಎಂಟರಿಂದ ಹತ್ತು ನಾಯಿಗಳಿರಬಹುದು. ಅವುಗಳಿಗೆ ಹೋಲಿಸಿದರೆ ಟೀಪು ಕೊಂಚ ಮಟ್ಟಿಗೆ ಚಾಣಾಕ್ಷನೇ ಅನಿಸುತ್ತದೆ. ಉಳಿದ ನಾಯಿಗಳು ಆಗಾಗ ಒಂದಕ್ಕೊಂದು ಕೈ ಕೈ ಮಿಲಾಯಿಸಿಕೊಳ್ಳುತ್ತಿದ್ದರೆ, ಈ ಟೀಪು ಅವೆಲ್ಲದರ ಜೊತೆ ದೋಸ್ತಿ ಸಂಪಾದಿಸಿ ಒಂದು ಗರ್ಲ್ ಫ್ರೆಂಡನ್ನು ಇಟ್ಟುಕೊಂಡಿದ್ದ. ಯಾವ ನಾಯಿಯ ದ್ವೇಷವೂ ಕಟ್ಟಿಕೊಂಡಿರದಿದ್ದ ಇವನಿಗೆ, ಇವನನ್ನು ಹುಡುಕಿಕೊಂಡು ಬಂದ ಗೆಳೆಯರ ಜೊತೆ ಸೇರಿ ಮನೆಯ ಎದುರಿಗೆ ಸಗಣಿಯಿಂದ ಸಾರಿಸಿ ಒಪ್ಪವಾಗಿಟ್ಟಿದ್ದಅಂಗಳವನ್ನೆಲ್ಲ ಕೆದರಿ, ಸಗಣಿಭರಿತ ಮಣ್ಣು ಮುಕ್ಕುವುದೆಂದರೆ ಅದೇನೋ ಖುಷಿ.
ಮನೆಯವರು ನೀಡುತ್ತಿದ್ದ ಸೂಚನೆಗಳನ್ನು ಶಿರಸಾವಹಿಸಿ ಪಾಲಿಸುವುದು ಟೀಪುವಿಗೆ ಕರಗತವಾಗಿತ್ತು. ಯಾವ ಮಟ್ಟಿಗೆ ಸೂಚನೆಗಳನ್ನು ಪಾಲಿಸುತ್ತಿದ್ದನೆಂದರೆ, ಅವನ ಊಟದ ತಟ್ಟೆಯನ್ನು ತಲೆಯ ಮೇಲಿರಿಸಿ ‘ನಾವು ಬರುವವರೆಗೂ ಅದನ್ನು ಬೀಳಿಸಬೇಡ’ ಎಂದು ಹೇಳಿ ಹೋಗಿದ್ದರೆ, ಅದೆಷ್ಟೇ ತಡವಾದರೂ ಸರಿ, ಘಂಟೆಗಳಾದರೂ ಸರಿ, ಅದನ್ನು ತಲೆಯ ಮೇಲೆಯೇ ಹೊತ್ತು ಕೂತಿರುತ್ತಿದ್ದ. ಹ್ಯಾಂಡ್ ಶೇಕ್ ಮಾಡುವುದೊಂದೇ ಅಲ್ಲದೇ, ಆಗಾಗ ತನ್ನದೇ ಸಂಗೀತ ಕಛೇರಿಯನ್ನೂ ಏರ್ಪಡಿಸುತ್ತಿದ್ದ. ಮಾವನವರೇ ಆಗಲಿ ಅಥವಾ ಮನೆಯ ಯಾವುದೇ ಸದಸ್ಯರೇ ಆಗಲಿ ಆತನ ಎದುರು ನಿಂತು ‘ ಢಂಗ ಢಗ.. ಢಗರೇ ಢಗ ‘ ಎಂಬ ಶಬ್ದಗಳನ್ನು ಹೇಳಿದರೆ ಸಾಕು, ಒಮ್ಮೆಲೇ ಎದ್ದು ನಿಂತು ಆಕಾಶದತ್ತ ಮುಖ ಮಾಡಿ ನಿಮಿಷಗಳವರೆಗೆ “ಆವೂsss…” ಎನ್ನುತ್ತಾ ಎದ್ದೋಡಿ-ಬಿದ್ದೋಡಿ ರಾಗದೊಂದಿಗೆ ತನ್ನ ಪ್ರತಿಭಾ ಪ್ರದರ್ಶನವೇರ್ಪಡಿಸುತ್ತಿದ್ದ. ರಾತ್ರಿಯ ವೇಳೆಗಳಲ್ಲಿ ಕಾಡಿನ ಪ್ರದೇಶಗಳಲ್ಲಿ, ನರಿ ಹಾಗೂ ಹುಲಿ ಗುರ್ಕಗಳ ದಾಳಿಯ ಸಂಭವವಿರುತ್ತದೆ. ಆದ್ದರಿಂದ ಟೀಪು ಪ್ರತಿದಿನವೂ ಮನೆಯ ಒಳಗೇ ಆತನಿಗೆಂದೇ ಮೀಸಲಾಗಿರಿಸಿದ್ದ ಜಗುಲಿಯ ಮೂಲೆಯಂದರಲ್ಲಿ ತನ್ನ ಗೋಣಿಚೀಲದ ಮೇಲೆ ಮುರುಟಿಕೊಂಡು, ವಿಚಿತ್ರವಾದ ಗೊರಕೆಯ ಸದ್ದನ್ನು ಮಾಡುತ್ತ ಲೋಕದ ಪರಿವೆಯೇ ಇಲ್ಲವೆಂಬಂತೆ ನಿದ್ರಿಸುತ್ತಿದ್ದ. ಮರುದಿನ ಸಂಜೆಯ ವೇಳೆಯಲ್ಲಿ ನಡೆದ ಒಂದು ವಿನೋದಕಾರಿ ಘಟನೆಯಿಂದಲೇ ನನಗೆ ಈ ಟೀಪುವಿನ ಚಾಣಾಕ್ಷತೆಯ ಪರಿಚಯವಾಯಿತು.
ಮಳೆಗೂ ನಾಲ್ಕೈದು ದಿನಗಳಿಂದ ಅವಿರತವಾಗಿ ಸುರಿದು ಬೇಜಾರು ಹತ್ತಿತ್ತು ಎನಿಸುತ್ತದೆ. ಮರುದಿನ ತನ್ನ ಕೆಲಸದಿಂದ ವಿರಾಮ ಪಡೆದುಕೊಂಡಿತ್ತು. ಮುಂಜಾವಿನ ಚದುರಿದ ಮೋಡಗಳ ಮರೆಯಿಂದಲೇ ಸೂರ್ಯ ಮೆಲ್ಲಗೆ ಕಣ್ತೆರೆಯುತ್ತಲಿದ್ದ. ಇಂತಹ ದಿನಕ್ಕಾಗಿಯೇ ಕಾದುಕೊಂಡಿದ್ದ ಜನರು, ಬೆಳಿಗ್ಗೆಯಿಂದಲೇ ಮಳೆಗಾಲದ ಎಲ್ಲ ಕೆಲಸವನ್ನೂ ಇಂದೇ ಮಾಡಿ ಮುಗಿಸಿಬಿಡಬೇಕೆಂಬ ತರಾತುರಿಯಲ್ಲಿ ಓಡಾಡಿಕೊಂಡಿದ್ದರು. ಬಹು ದಿನಗಳ ನಂತರ ದೊರಕಿದ ಸೂರ್ಯನ ದರ್ಶನ ಎಲ್ಲ ಜೀವಿಗಳಲ್ಲಿಯೂ ಒಂದು ತೆರನಾದ ಚೈತನ್ಯವನ್ನು ತುಂಬಿತ್ತು. ಬೆಳಕು ಸರಿದ ನಂತರ ಮಾವನ ಗೆಳೆಯರಲ್ಲಿ ಒಬ್ಬರಾದ ಚಂದ್ರು, ಅವರ ಕೆಲಸಕ್ಕಾಗಿ ಒಂದು ಆಳಿನ ಅವಶ್ಯಕತೆ ಇದ್ದುದರಿಂದ, ಇವರ ಆಳಾದ ಗಿಂಡಿಯನ್ನು ಪಟ್ಟಣಕ್ಕೆ ಕರೆದೊಯ್ಯಲು ಮನೆಗೆ ಬಂದಿದ್ದರು. ಪೂರ್ತಿ ಒಂದು ದಿನದ ಸಂಬಳ ಸಿಗುತ್ತದೆಯಾದ್ದರಿಂದ ಗಿಂಡಿಯೂ ಅವರೊಡನೆ ಹೊರಡಲು ಉತ್ಸುಕನಾಗಿದ್ದ.
ನನಗೆ ಹೇಗೆಂದರೂ ಕಡಿದು ಕಟ್ಟೆಹಾಕುವ ಕೆಲಸವಿರಲಿಲ್ಲವಾದ್ದರಿಂದ, ಹೊಳೆ, ಗದ್ದೆ, ತೋಟ, ಬೆಟ್ಟ, ಗುಡ್ಡಗಳು ಎಂದುಕೊಂಡೇ ಸಂಜೆಯವರೆಗಿನ ಕಾಲಯಾಪನೆಯಾಗಿತ್ತು. ಸಂಜೆ ಸುಮಾರು ಏಳು ಗಂಟೆಯ ಸಮಯವಿದ್ದಿರಬಹುದು, ಚಂದ್ರುರವರು ಗಿಂಡಿಯೊಡನೆ ಮನೆಗೆ ವಾಪಸ್ಸಾಗಿದ್ದರು. ಕುಶಲೋಪರಿಯ ಮಾತುಗಳೊಂದಿಗೆ, ಖಡಕ್ ಚಾಯ್, ತಮಾಷೆ, ಚಟಾಕಿಗಳು ಸೇರಿ ಉಲ್ಲಾಸದಾಯಕ ವಾತಾವರಣವೊಂದು ನಿರ್ಮಾಣವಾಗಿತ್ತು.
ಈ ಮಧ್ಯೆ ಆ ದಿನದ ತನ್ನ ಹಡಬೆ ತಿರುಗಾಟವನ್ನು ಮುಗಿಸಿಕೊಂಡು ಬಂದ ಟೀಪು, ತನ್ನ ಕಾಲುಗಳನ್ನೊಮ್ಮೆ ನೀಡಿ, ಮೈಮುರಿದು, ಆಕಳಿಸಿ ಬಲು ಸುಸ್ತಾಗಿ ಬಂದಿರುವವನಂತೆ ಕುಳಿತ. ಒಂದೆರಡು ನಿಮಿಷಗಳೊಳಗೆ ಛಂಗನೆ ಎದ್ದು ನಿಂತವನೇ, ಜಗುಲಿಯ ಬಾಗಿಲ ಬಳಿ ಕುಳಿತಿದ್ದ ಗಿಂಡಿಯ ಬಳಿ ಬಂದು, ಧರಿಸಿದ್ದ ಅಂಗಿ ಚಡ್ಡಿಗಳನ್ನೊಮ್ಮೆ ಮೂಸಿ ದಣಪೆಯ ಬಳಿ ಓಡಿದ. ಏನೋ ಹುಡುಕುವವನಂತೆ ಗಿಂಡಿಯ ಬಳಿ ಬಂದ ಟೀಪುವನ್ನೇ ಗಮನಿಸುತ್ತಿದ್ದ ನಾವುಗಳು, ಆತ ಹೊರಗೆ ಓಡಿದ್ದನ್ನು ನೋಡಿ ಬಹುಶಃ ಉಚ್ಚೆ ಹುಯ್ಯಲು ಎದ್ದಿರಬೇಕೆಂದು ಅಂದುಕೊಂಡೆವು.
ಆದರೆ ನಂತರದ ಹತ್ತು ನಿಮಿಷಗಳ ಅವಧಿಯಲ್ಲಿ, ಟೀಪು ಗಿಂಡಿಯನ್ನು ಮೂಸುತ್ತ ದಣಪೆಯ ಬಳಿ ಓಡುವುದನ್ನು ಮೂರ್ನಾಲ್ಕು ಬಾರಿ ಮಾಡಿದ್ದ. ಕೊನೆಯ ಬಾರಿ ಎಂಬಂತೆ ಗಿಂಡಿಯ ಸರ್ವಸ್ವವನ್ನು ಮೂಸಲು ಬಂದಾಗ, ಸಿಟ್ಟಿಗೇರಿದ ಗಿಂಡಿ “ಹೋಗ ಆಚಿಗೆ.. ಹೊಪ್ಪಗೆಟ್ಟ ಕುನ್ನಿಯೇ.. ಆಗಿಂದ ಬರುದು ಮೂಸುದು ಮಾಡ್ತವ್ನೆ… ಇನ್ನೊಂದ್ಸಲ ಹತ್ರ ಬಂದ್ರೆ ಕಿಮಿಚೊಟ್ಟೆ ತಿರ್ಪ್ತೆ ನೋಡು…” ಎಂದು ಟೀಪುವಿನತ್ತ ಕೈಯೆತ್ತಿ ಗದರಿದ.
ತನ್ನತ್ತ ಅಚಾನಕ್ಕಾಗಿ ತೂರಿ ಬಂದ ಬೈಗುಳದಿಂದ, ಒಂದು ಕ್ಷಣ ಕಕ್ಕಾಬಿಕ್ಕಿಯಾದವನಂತೆ ಕಂಡರೂ, ಒಂದೆರಡು ಹೆಜ್ಜೆ ಹಿಂದೆ ಹೋಗಿ ಟೀಪು ಮತ್ತೆ ದಣಪೆಯ ಬಳಿ ಧಾವಿಸಿದ. ಮತ್ತೆ ಈ ಬಾರಿ ಬರುವಾಗ ತನ್ನ ಬಾಯಲ್ಲಿ ಎರಡು ಸಾರಾಯಿ ಪ್ಯಾಕೆಟ್ಟನ್ನು ಕಚ್ಚಿಕೊಂಡು ಬಂದಿದ್ದ. ಒಳಗೆ ಬಂದವನೇ ಗಿಂಡಿಯ ಮುಂದೆ ಅದನ್ನಿರಿಸಿ, ಇವು ನಿನಗೇ ಸಂಬಂಧಿಸಿದ್ದು ಎನ್ನುವವನಂತೆ, ಗಿಂಡಿಯ ಮುಖವನ್ನೊಮ್ಮೆ ನೋಡಿ “ಬೌ… ಬೌ…” ಎಂದು ಬೊಗಳಿದ. ನಡೆದುದೆಲ್ಲವನ್ನೂ ಗಮನಿಸುತ್ತಿದ್ದ ಮಾವನವರು ಟೀಪುವನ್ನು ನೋಡುತ್ತಾ, “ಯೇ ಮಳ್ಸತ್ತವ್ನೇ… ಇದೆಲ್ಲಿಂದ ಹೊತ್ಕಂಡು ಬಂದ್ಯೋ…” ಎಂದು ಟೀಪುವನ್ನೇ ಕೇಳಿದರು.
ಟೀಪು ಮಾಡಿದ ಕೆಲಸದಿಂದ ಪೆಚ್ಚಾಗಿದ್ದ ಗಿಂಡಿಯು,ಇದ್ದಕ್ಕಿದ್ದಂತೆಯೇ “ಒಡೆಯಾ ತಪ್ಪಾಯ್ತ್ರೋ… ನನು ಬಿಟ್ಬಿಡ್ರೋ… ಇದು ನಂದೇಯಾ… ಬರ್ತಾ ಕುಡಿದೇ ರಾಶಿ ದಿನಾಯ್ತು ಅಂದೇಳಿ.. ಮೂರು ಸಾರಾಯಿ ಕೊಟ್ಟೆ ತಗಂಡಿದ್ನ್ರೋ ಒಡೆಯ.. ಒಂದು ಕಿಸೆ ಕನ್ನಾಗಿತ್ತು ಹೇಳಿ ಮೂರೂ ಕೊಟ್ಟೆನ ಒಂದೇ ಕಿಸೀಲ್ ತುರ್ಕ್ದೆ… ದಾರೀಲೆ ಒಂದು ಪ್ಯಾಕೆಟ್ ಒಡ್ದು ಚಡ್ಡಿ ಎಲ್ಲ ಆಯ್ತ್ರೋ.. ಉಳಿದ ಎರಡು ಕೊಟ್ಟೆ ಮನೆ ಒಳ್ಗೆ ತರುದು ಬ್ಯಾಡ ಹೇಳಿ ದಣಪೆ ಹತ್ರ ಹುಗ್ಸಿ ಇಟ್ಟಿದ್ನ.. ಈ ಕುನ್ನಿ ವಾಸ್ನೆ ಹಿಡಿದು ಕಚ್ಕಂಡ್ ಬಂತ್ರೋ… ಮತ್ತೆ ಮಾಡುದಿಲ್ರಾ ಒಡೆಯ ಬಿಟ್ಬಿಡ್ರೋ… ” ಎಂದು ಒಂದೇ ಸಮನೆ ಕುಕ್ಕುರುಗಾಲಿನಲ್ಲಿ ಕೂತು ಅಳತೊಡಗಿದ.
ಗಿಂಡಿಯ ಅವ್ಯವಸ್ಥೆಯನ್ನು ನೋಡಿ ಒತ್ತರಿಸಿಕೊಂಡು ಬರುತ್ತಿದ್ದ ನಗುವನ್ನು ಬಲವಂತವಾಗಿ ತಡೆಹಿಡಿದ ಮಾವನವರು, “ಅಲ್ವೋ ಮಾರಾಯ… ಈಗ ಇದು ನಾಯಿ ಎಂಜಲು… ಮತ್ತೆ ಕುಡಿಯೋ ಆಸೆ ಉಂಟಾ ನಿಂಗೆ?” ಎಂದು ಕೇಳಿದ್ದಕ್ಕೆ, “ಇಲ್ರೋ ಒಡೆಯ.. ಇದ್ನ ಇಲ್ಲೇ ಹೊಳೇಲಿ ಬಿಸಾಕಿ ಹೋಗ್ತೆ.. ನಾಳೆ ನನ್ನ ಹೆಂಡ್ತಿಗೆ ಮಾತ್ರ ಹೇಳ್ಬೇಡ್ರೋ…” ಎಂದು ಕೈಮುಗಿದು ಕೇಳಿಕೊಂಡ. ಆತನ ಪರಿಸ್ಥಿತಿಯನ್ನು ನೋಡಿ “ಆಯ್ತು ಹೇಳುದಿಲ್ಲ..” ಎಂದು ಅಭಯ ನೀಡಿದ ಮೇಲೆ, ಗಿಂಡಿ ಸ್ವಲ್ಪ ನಿಟ್ಟುಸಿರು ಬಿಟ್ಟು ಜಗಲಿಯ ಗೋಡೆಗೆ ಒರಗಿ ಕುಳಿತ.
ಮುಂದಿನ ಅಧಾಗಂಟೆಯಲ್ಲಿ “ನಾ ಇನ್ನು ಬರ್ತೆ…” ಎಂದು ಹೇಳಿ ಗಿಂಡಿಯೂ ಅಲ್ಲಿಂದೆದ್ದು ಹೊರಟು ತನ್ನ ಮನೆಯ ಕಡೆಗೆ ಸಾಗುವ ಕಗ್ಗತ್ತಲ ದಾರಿಯಲ್ಲಿ ಅದೃಶ್ಯನಾದ. ಇತ್ತ ಟೀಪುವೂ ತನ್ನ ದಿನ ಮುಗಿಯಿತು ಎನ್ನುವವನಂತೆ ಅವನ ಹಾಸಿಗೆಯಲ್ಲಿ, ಮುಂದಿನ ಎರಡು ಕಾಲುಗಳ ಮೇಲೆ ಮುಖವನ್ನಿರಿಸಿ, ಊಟಕ್ಕಾಗಿ ಕಾದು ಕುಳಿತ.
******
ಇಂದಿಗೂ ಬಿಡುವಿನ ವೇಳೆಯಲ್ಲಿ, ಹಳೆಯ ಘಟನೆಗಳ ಕುರಿತು ಹರಟುತ್ತ, ನೆನಪುಗಳನ್ನು ಕೆದಕುತ್ತಾ ಕುಳಿತರೆ ಗಿಂಡಿ-ಟೀಪುವಿನ ನೆನಪು ಕೂಡ ಮರುಕಳಿಸಿ ಮುಖದಲ್ಲೊಂದು ಮಂದಹಾಸವನ್ನು ಮೂಡಿಸುತ್ತದೆ. ಇನ್ನೊಮ್ಮೆ ಹೋಗಿ ಟೀಪುವನ್ನು ಮಾತನಾಡಿಸಿ ಅಂತಹುದೇ ಕ್ಷಣಗಳನ್ನು ಆಸ್ವಾದಿಸೋಣವೆಂದರೆ, ಈಗ ಅಲ್ಲಿ ಟೀಪುವೂ ಇಲ್ಲ, ಗಿಂಡಿಯೂ ಇಲ್ಲ…!
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..